Tag: ಸದಾನಂದ ಗೌಡ

  • ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲ್ಲ: ಸೂಲಿಬೆಲೆ ಪರ ನಿಂತ ಪೇಜಾವರ ಶ್ರೀಗಳು

    ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲ್ಲ: ಸೂಲಿಬೆಲೆ ಪರ ನಿಂತ ಪೇಜಾವರ ಶ್ರೀಗಳು

    ಬಾಗಲಕೋಟೆ: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ್ರೋಹಿ ಎಂಬ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಸೂಲಿಬೆಲೆ ಪರವಾಗಿ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೂಲಿಬೆಲೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಸೇರಿಸಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಸದಾನಂದಗೌಡರು ಕೂಡ ಕೇಂದ್ರ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾನಂದಗೌಡರು ವೈಯಕ್ತಿಕವಾಗಿ ಹೆಸರು ಹೇಳಿ ಹಾಗೆ ಮಾತಾಡಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಸೂಲಿಬೆಲೆಯವರ ಪರ ನಿಂತರು. ಇದನ್ನೂ ಓದಿ:ಟ್ವಿಟ್ಟರ್‌ನಲ್ಲಿ ಸೂಲಿಬೆಲೆಗೆ ಬ್ಲಾಕ್ ಭಾಗ್ಯ ಕಲ್ಪಿಸಿದ ಸದಾನಂದಗೌಡ

    ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಇನ್ನೂ ಪರಿಹಾರದ ಹಣ ಬಾರದಿರುವುದಕ್ಕೆ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದು, ದೇಶದಲ್ಲಿನ ಆರ್ಥಿಕ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಪತ್ರ ಬರೆಯುವುದಾಗಿ ಶ್ರೀಗಳು ಹೇಳಿದ್ದಾರೆ. ಹಣ ಬಿಡುಗಡೆ ಆಗದಿರುವುದು ನಮಗೂ ಕೂಡ ಆತಂಕವಾಗಿದೆ. ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿದಿಲ್ಲ. ಕರ್ನಾಟಕದಲ್ಲಿ ಮಾತ್ರ ಅಲ್ಲ ಮಹಾರಾಷ್ಟ್ರ, ಗುಜರಾತ್, ಬಿಹಾರ ರಾಜ್ಯಗಳಿಗೂ ಪರಿಹಾರ ಕೊಟ್ಟಿಲ್ಲ. ಬಿಹಾರದಲ್ಲಿ ಕೇವಲ ವೀಕ್ಷಣೆ ಮಾಡಿದ್ದಾರೆ. ಎಲ್ಲಿಯೂ ಹಣ ಬಿಡುಗಡೆಯ ಘೋಷಣೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ದೇಶದಲ್ಲಿ ಆರ್ಥಿಕ ಕೊರತೆ ಇರಬಹುದು ಆದ್ದರಿಂದ ಬಿಡುಗಡೆ ಮಾಡಿಲ್ಲ ಎಂದನಿಸುತ್ತೆ. ಪ್ರಧಾನಿ ಮೋದಿಯವರಿಗೆ ನಾನು ಒಂದು ಪತ್ರ ಸಿದ್ಧ ಮಾಡಿ ಬರೆದಿದ್ದೇನೆ. ಜನತೆ ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ, ದೇಶದ ಬಗ್ಗೆ ಉತ್ತಮ ಕಾರ್ಯ ಮಾಡುತ್ತಿದ್ದೀರಿ, ಒಳ್ಳೆಯ ಆಡಳಿತ ನಡೆಸುತ್ತಿದ್ದೀರಿ, ಹಾಗೆಯೇ ಪರಿಹಾರ ಕೂಡ ನೀಡಬೇಕೆಂದು ಪತ್ರ ಬರೆಯಲಿದ್ದೇನೆ ಎಂದರು. ಇದನ್ನೂ ಓದಿ:ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

    ಹಾಗೆಯೇ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮುಂದೆ ನೆರೆ ಪರಿಹಾರದ ಕುರಿತು ಮಾತನಾಡದೇ ಇರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಸದರು ಬಹಿರಂಗವಾಗಿ ಕೇಳಿಲ್ಲ ಆದರೆ ಅವರು ಪ್ರಧಾನಿ ಬಳಿ ಈ ಬಗ್ಗೆ ಪ್ರಸ್ತಾಪಿಸಿರಬಹುದು. ಅದು ಮಾಧ್ಯಮದಲ್ಲಿ ಪ್ರಸಾರವಾಗಿಲ್ಲವಷ್ಟೆ. ಕೇಳದೇ ಇರೋದಕ್ಕೆ ಸಾಧ್ಯವಿಲ್ಲ. ಕೇಳಳಿಲ್ಲ ಎಂದು ಸಂಸದರ ಮೇಲೆ ಆರೋಪ ಮಾಡಲ್ಲ. ದೇಶದಲ್ಲಿ ಅರ್ಥಿಕ ಸಂಕಷ್ಟ ಇದೆ, ಅದಕ್ಕೆ ಪರಿಹಾರ ಕೊಟ್ಟಿಲ್ಲ ಅನಿಸುತ್ತಿದೆ. ಆದರೆ ಯಾಕೆ ಕೊಟ್ಟಿಲ್ಲ ಅನ್ನೋವುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ನಾನು ಬರೆದ ಪತ್ರದಲ್ಲಿ ನನ್ನ ಭಾವನೆಯನ್ನು ತಿಳಿಸಿದ್ದೇನೆ. ಆದಷ್ಟು ಬೇಗ ರಾಜ್ಯಕ್ಕೆ ಮೋದಿ ಅವರು ಪರಿಹಾರ ನೀಡುತ್ತಾರೆಂಬ ಭರವಸೆ ಇದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು.

  • ಜನ ಪ್ರಶ್ನೆ ಮಾಡುತ್ತಿದ್ದಾರೆ, ಪರಿಹಾರ ನೀಡಿ – ಅಮಿತ್ ಶಾ ಬಳಿ ಡಿವಿಎಸ್, ಜೋಷಿ ಮನವಿ

    ಜನ ಪ್ರಶ್ನೆ ಮಾಡುತ್ತಿದ್ದಾರೆ, ಪರಿಹಾರ ನೀಡಿ – ಅಮಿತ್ ಶಾ ಬಳಿ ಡಿವಿಎಸ್, ಜೋಷಿ ಮನವಿ

    ನವದೆಹಲಿ: ಕೇಂದ್ರ ಕ್ಯಾಬಿನೆಟ್ ಸಭೆ ನಡೆಯುವ ಮುನ್ನ ಇಂದು ಸಂಜೆ ಕರ್ನಾಟಕದ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸದಾನಂದ ಗೌಡ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

    ನೆರೆ ಪರಿಹಾರ ವಿಳಂಬಕ್ಕಾಗಿ ಜನರು ಪ್ರಶ್ನೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿವೆ. ಆದಷ್ಟು ಬೇಗ ಪರಿಹಾರ ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸೂಲಿಬೆಲೆ, ಡಿವಿಎಸ್ ಟ್ವೀಟ್ ವಾರ್ ರಿಪೋರ್ಟ್ ಪಡೆದ ಅಮಿತ್ ಶಾ

    ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬಳಿಕ ನಡೆಯುತ್ತಿರುವ ಕ್ಯಾಬಿನೆಟ್ ಸಭೆ ಇದಾಗಿದ್ದು ನೆರೆ ವಿಚಾರದಲ್ಲಿ ರಾಜ್ಯಗಳಿಗೆ ನೀಡಬೇಕಾದ ಅನುದಾನ, ಆರ್ಥಿಕ ಕುಸಿತ, ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ  ಚರ್ಚೆ ನಡೆಯಲಿದೆ.  ಇದನ್ನೂ ಓದಿ: ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ – ಸೂಲಿಬೆಲೆಗೆ ಸಿಂಹ ಟಾಂಗ್

    ಕರ್ನಾಟಕದ ಬಿಜೆಪಿ ನಾಯಕರನ್ನು ಜನ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇಂದು ಕಂದಾಯ ಇಲಾಖೆ ಕಾರ್ಯದರ್ಶಿ ಟಿ.ಕೆ ಅನೀಲ್ ಕುಮಾರ್ ನೇತೃತ್ವದ ನಿಯೋಗ ದೆಹಲಿಗೆ ಆಗಮಿಸಿ ಗೃಹ ಇಲಾಖೆಗೆ ಹಾನಿಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ.

  • ಸದಾನಂದ ಗೌಡ್ರ ವಿರುದ್ಧ ಸೂಲಿಬೆಲೆ ಆಕ್ರೋಶ

    ಸದಾನಂದ ಗೌಡ್ರ ವಿರುದ್ಧ ಸೂಲಿಬೆಲೆ ಆಕ್ರೋಶ

    ಬೆಂಗಳೂರು: ಇತ್ತೀಚೆಗಷ್ಟೇ ಮೋದಿ ಸೇರಿದಂತೆ ಬಿಜೆಪಿ ಸಂಸದರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಇದೀಗ ಅವರು ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರವಾಹ ಪರಿಹಾರದ ಬಗ್ಗೆ ಇಲ್ಲಸಲ್ಲದ ಕಥೆ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವವರ ಬಗ್ಗೆ ಕನಿಕರವಿದೆ ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಇವರು ಈಗ ಬಂದರು ಎಂದು ರಿಟ್ವೀಟ್ ಮಾಡುವ ಮೂಲಕ ಗೌಡರಿಗೆ ಸೂಲಿಬೆಲೆ ಟಾಂಗ್ ಕೊಟ್ಟಿದ್ದಾರೆ.

    ಗೌಡರ ಟ್ವೀಟ್‍ನಲ್ಲೇನಿದೆ..?
    ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ, ಮಧ್ಯಂತರ ಪರಿಹಾರ ಮತ್ತು ದೀರ್ಘ ಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಲಾಗಿದೆ.

    ಸೂಲಿಬೆಲೆ ಟ್ವೀಟ್..?
    ಲಾಲ್! ಇವರು ಈಗ ಬಂದರು.. ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾಷ್ಟ್ರ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ ಎಂದು ಡಿವಿ ಸದಾನಂದ ಗೌಡರನ್ನು ಪ್ರಶ್ನಿಸಿದ್ದಾರೆ.

    ಇತ್ತೀಚೆಗಷ್ಟೇ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿರುವ ಸೂಲಿಬೆಲೆ, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಬೇಸರ ವ್ಯಕ್ತಪಡಿಸಿದ್ದರು.

    ಸೆ.30 ರಂದು ಈ ಸಂಬಂಧ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿರುವ ಅವರು, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಬೇಸರ ವ್ಯಕ್ತಪಡಿಸಿದ್ದರು.

    ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ. ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ ಅವರದ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾರ್ಯ ಅವಧಿ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ ಎಂದಿದ್ದಾರೆ.

    ಅನಂತ್‍ಕುಮಾರ್ ಇದ್ದಾಗ ಕೇಂದ್ರದ ಇತರೆ ಮಂತ್ರಿಗಳೊಂದಿಗೆ ಅವರು ಬೆಳೆಸಿಕೊಂಡಿದ್ದ ಸಂಬಂಧ ಅವರ ಮಾತಿಗೆ ಗೌರವ ತಂದುಕೊಡುವಂತಿತ್ತು. ಅವರಷ್ಟೇ ಬಾರಿ ಸಂಸದರಾಗಿದ್ದರೂ ಅಂಥದ್ದೊಂದು ಬಾಂಧವ್ಯವನ್ನೇ ಬೆಳೆಸಿಕೊಳ್ಳದ ಅನೇಕರನ್ನು ಕಂಡಾಗ ಸಂಕಟವೆನಿಸುತ್ತದೆ. ಕರ್ನಾಟಕದಿಂದಲೇ ಮಂತ್ರಿಗಳಾದವರು ಎಷ್ಟೋ ಜನರಿದ್ದಾರೆ. ಆದರೆ ಪ್ರತ್ಯಕ್ಷ ಕೇಂದ್ರದಲ್ಲಿ ಪ್ರಭಾವ ಬೀರುವ ವಿಚಾರ ಬಂದಾಗ ಕೆಲಸಕ್ಕೆ ಬಾರದವರಾಗಿ ಬಿಡುತ್ತಾರಲ್ಲಾ ಎಂಬುದೇ ನೋವಿನ ಸಂಗತಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

    ನಮ್ಮ ಸಂಸದರು ತಮಿಳುನಾಡಿನಿಂದ, ಕೇರಳದ ಸಂಸದರಿಂದ ಕಲಿಯುವುದು ಸಾಕಷ್ಟಿದೆ. ಅವರು ಹಠಕ್ಕೆ ಬಿದ್ದಾದರೂ ಕೊನೆಗೆ ರಾಜಿನಾಮೆ ಕೊಟ್ಟಾದರೂ ತಮ್ಮ ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಕೇಂದ್ರದ ಸಹಕಾರವನ್ನು ತರುತ್ತಾರೆ. ನಾಡಿನ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಬಲಿಕೊಡಲು ಅವರೆಂದಿಗೂ ಸಿದ್ಧರಾಗುವುದಿಲ್ಲ. ಮೋದಿಯವರ ಪ್ರತಿಯೊಂದು ನಡೆಯಲ್ಲಿಯೂ ಭವಿಷ್ಯದ ದೃಷ್ಟಿಕೋನ ಇದ್ದೇ ಇರುತ್ತದೆ ಎಂಬುದನ್ನು ನಂಬಿಕೊಂಡಿರುವ ಅನೇಕರಿಗೆ ಈ ನಿರ್ಲಕ್ಷ್ಯದ ಹಿಂದಿನ ದೃಷ್ಟಿ ಖಂಡಿತ ಅರಿವಾಗುತ್ತಿಲ್ಲ. ಗೊತ್ತಿದ್ದವರು ತಿಳಿಸಿಕೊಡಬೇಕು. ಒಂದೋ ಕರ್ನಾಟಕದ ಜನತೆಗೆ, ಇಲ್ಲವೇ ಸ್ವತಃ ಮೋದಿಗೆ ಎಂದು ನೇರವಾಗಿ ಬರೆದು ಚಾಟಿ ಬೀಸಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ನರೇಂದ್ರ ಮೋದಿ ಅವರ ಪರವಾಗಿ ರಾಜ್ಯವಾಪಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಹತ್ತಿರ ಬಂದಾಗ ಸಮಸ್ಯೆ ಇದೆ ಎಂದು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುವುದಲ್ಲ. ಮತವನ್ನು ಚಲಾಯಿಸಿ ಮೌನವಾಗಿ ಕುಳಿತುಕೊಳ್ಳುವುದಲ್ಲ. ಆರಂಭದಿಂದಲೇ ಸಮಸ್ಯೆಯ ಬಗ್ಗೆ ಒತ್ತಡ ಹೇರಿ ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದರು.

  • ನೆರೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಬೇಕಿದ್ದ ಸಚಿವ ಜೋಶಿ ಗೈರು

    ನೆರೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಬೇಕಿದ್ದ ಸಚಿವ ಜೋಶಿ ಗೈರು

    ನವದೆಹಲಿ: ರಾಜ್ಯದಲ್ಲಾಗಿರುವ ಪ್ರವಾಹದಿಂದಾಗಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರೀ ಕುತೂಹಲ ಮೂಡಿಸಿತ್ತು. ಆದರೆ, ಈ ಕುರಿತು ಮಾತನಾಡಬೇಕಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರೇ ಸಂಪುಟ ಸಭೆಗೆ ಗೈರಾಗಿದ್ದರು.

    ಸಭೆಯಲ್ಲಿ ರಾಜ್ಯದಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಭಾಗವಹಿಸಿದ್ದು, ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಸಬೇಕಿದ್ದ ಸಚಿವರು ಪರಿಸ್ಥಿತಿಯನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ರೀತಿಯ ನಿರ್ಣಯವನ್ನು ಕೈಗೊಂಡಿಲ್ಲ. ವಾಸ್ತವ ಅರ್ಥ ಮಾಡಿಸದ ಹಿನ್ನೆಲೆ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

    ಫನಿ ಚಂಡಮಾರುತದ ವೇಳೆ ಚೆನ್ನೈ ಮತ್ತು ಒಡಿಶಾದಲ್ಲಿ ಪ್ರವಾಹ ಸಂಭವಿಸಿದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮಿಕ್ಷೆ ನಡೆಸಿದ್ದರು. ಸಮೀಕ್ಷೆ ಬಳಿಕ ಅಧಿಕಾರಗಳಸಭೆ ನಡೆಸಿ ಒಡಿಶಾ ಮತ್ತು ಚೆನ್ನೈಗೆ ಸಾವಿರ ಕೋಟಿ ರೂ. ತುರ್ತಾಗಿ ಬಿಡುಗಡೆ ಮಾಡಿದ್ದರು. ಈ ಬಾರಿ ರಾಜ್ಯದ ನಾಯಕರು ಒತ್ತಡ ಹಾಕದ ಕಾರಣ ಪ್ರಧಾನಿ ನರೇಂದ್ರ ಮೋದಿ ಇನ್ನೂ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಅಮಿತ್ ಶಾ ಕಳುಹಿಸಿ ಸುಮ್ಮನಾಗಿದ್ದಾರೆ. ಕೇಂದ್ರ ಸಚಿವರು ಈ ಕುರಿತು ಗಮನ ಸೆಳೆಯಬೇಕಿತ್ತು ಎಂದು ವಿರೋಧ ಪಕ್ಷಗಳು ಕಿಡಿ ಕಾರಿವೆ.

  • ಬಿಜೆಪಿ ಸರ್ಕಾರ ಸ್ಥಾಪನೆಯಿಂದ ರಾಜ್ಯದ ಶಾಪ ವಿಮೋಚನೆಯಾಗಿದೆ : ಡಿವಿಎಸ್

    ಬಿಜೆಪಿ ಸರ್ಕಾರ ಸ್ಥಾಪನೆಯಿಂದ ರಾಜ್ಯದ ಶಾಪ ವಿಮೋಚನೆಯಾಗಿದೆ : ಡಿವಿಎಸ್

    ಬೆಂಗಳೂರು: ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದರಿಂದ ರಾಜ್ಯದ ಶಾಪ ವಿಮೋಚನೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

    ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಯಿಂದ ಆಗಮಿಸಿದ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಹಲವು ದಿನಗಳ ಹಿಂದೆಯೇ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಈಗ ಆಗುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದರಿಂದ ರಾಜ್ಯದ ಶಾಪ ವಿಮೋಚನೆಯಾಗಿದೆ ಎಂದು ತಿಳಿಸಿದರು.

    ಮೈತ್ರಿ ಸರ್ಕಾರದ ಆಂತರಿಕ ಜಗಳದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿರುವುದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ತಂದಿದೆ. ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಕ್ಕೆ ಎಲ್ಲರೂ ಬರಬೇಕು. ಆದರೆ, ಯಾವ ಮುಖವಿಟ್ಟುಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬರುತ್ತಾರೆ. 14 ತಿಂಗಳ ಕಾಲ ರಾಜ್ಯದಲ್ಲಿ ದುರಾಡಳಿತ ನಡೆಸಿದ್ದಾರೆ ಎಂದು ಮೈತ್ರಿ ಸರ್ಕಾರ ಹಾಗೂ ನಾಯಕರ ವಿರುದ್ಧ ಹರಿಹಾಯ್ದರು

  • ಔಷಧಿ ಮಳಿಗೆಯಲ್ಲಿ ಬೋರ್ಡ್ ರಾಜಕೀಯ- ಫೋಟೋ ಇಲ್ಲವೆಂದು ಕಿತ್ತಾಟ

    ಔಷಧಿ ಮಳಿಗೆಯಲ್ಲಿ ಬೋರ್ಡ್ ರಾಜಕೀಯ- ಫೋಟೋ ಇಲ್ಲವೆಂದು ಕಿತ್ತಾಟ

    ಬೆಂಗಳೂರು: ನಗರದಲ್ಲಿ ಬೋರ್ಡ್ ರಾಜಕಾರಣಕ್ಕೆ ಅಂತ್ಯ ಸಿಕ್ಕಿಲ್ಲ. ಬಡವರ ಔಷಧಿ ಮಳಿಗೆಯಲ್ಲಿ ನನ್ನ ಫೋಟೋ ಇಲ್ಲ ಎಂದು ಕಿತ್ತಾಟ ಶುರುವಾಗಿದೆ. ರಾಜಕಾರಣಿಗಳ ಜಗಳ ಜನ ವಿರೋಧಕ್ಕೆ ಗುರಿಯಾಗಿದೆ.

    ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೋರ್ಡ್, ಫೋಟೋ ರಾಜಕೀಯ ಜೋರಾಗಿದೆ. ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಶಾಸಕ ಮುನಿರಾಜು ಫೋಟೋ ಇದೆ. ನನ್ನ ಫೋಟೋ ಇಲ್ಲ ಎಂದು ಸ್ಥಳೀಯ ಶಾಸಕರೊಬ್ಬರು ಬೋರ್ಡನ್ನೇ ಕಿತ್ತು ಹಾಕಿಸಿದ್ರಂತೆ.

    ದಾಸರಹಳ್ಳಿ ಪ್ರಧಾನ ಮಂತ್ರಿ ಜನೌಷಧಿ ಮಳಿಗೆಯಲ್ಲಿ ತಮ್ಮ ಫೋಟೋ, ಹೆಸರು ಹಾಕಿಸಿಲ್ಲ ಎಂದು ಬಿಬಿಎಂಪಿ ಪ್ರಹರಿ ವಾಹನ ಬಳಸಿ ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಬೋರ್ಡ್ ಕಿತ್ತು ಹಾಕಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವ ಸದಾನಂದ ಗೌಡ ಈ ಔಷಧಾಲಯ ಉದ್ಘಾಟಿಸಿದ್ದು, ಈ ವೇಳೆ ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದಿಲ್ಲ. ಜೊತೆಗೆ ಮಾಜಿ ಶಾಸಕರ ಫೋಟೋ ಹಾಕಿರೋದಕ್ಕೆ ಹೀಗೆ 10 ಸಾವಿರ ಬೆಲೆ ಬಾಳುವ ಎರಡು ಬೋರ್ಡ್ ಕಿತ್ತು ಹಾಕಿಸಿದ್ದಾರೆ ಎಂದು ವ್ಯಾಪಾರಿ ಶಿವಪ್ರಸಾದ್ ಆರೋಪಿಸಿದ್ದಾರೆ.

    ಬೋರ್ಡ್, ಫ್ಲೆಕ್ಸ್ ನಿಷೇಧವಿದೆ ಪಾಲಿಕೆ ಮೇಲಾಧಿಕಾರಿ ಹೇಳಿದ್ರು ರಿಮೂವ್ ಮಾಡ್ತಾ ಇದ್ದೇವೆ ಎಂದು ಪ್ರಹರಿ ಸಿಬ್ಬಂದಿ ಹೇಳ್ತಾರೆ.

    ಬಡವರ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲು ಅನುಮತಿ ಇದೆ. ಆದರೆ ಉಳಿದ ರಾಜಕಾರಣಿಗಳು ನಮ್ಮ ಫೋಟೋ ಇಲ್ಲ ಎಂದು ಚಿಂತೆ ಮಾಡಿಯೇ ಘಟನೆ ನಡೆದಿದ್ದರೆ ಇದು ವಿಪರ್ಯಾಸವೇ ಸರಿ.

  • ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ನವದೆಹಲಿ: ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರಿಗೆ ಮೋದಿ 2 ಸರ್ಕಾರದಲ್ಲಿ ಗೃಹ ಇಲಾಖೆ ಸಿಕ್ಕಿದೆ. ಈ ಹಿಂದೆ ಗೃಹ ಇಲಾಖೆ ನಿರ್ವಹಿಸಿದ್ದ ರಾಜನಾಥ್ ಸಿಂಗ್ ಅವರಿಗೆ ಈ ಬಾರಿ ರಕ್ಷಣಾ ಇಲಾಖೆಯನ್ನು ಮೋದಿ ನೀಡಿದ್ದಾರೆ.

    ರಫೇಲ್ ವಿವಾವದವನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆ ಸಿಕ್ಕಿದೆ. ಕಳೆದ ಬಾರಿ ನಿರ್ವಹಿಸಿದ್ದ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆಯನ್ನೇ ಮೋದಿ ಮತ್ತೊಮ್ಮೆ ನಿತಿನ್ ಗಡ್ಕರಿ ಅವರಿಗೆ ನೀಡಿದ್ದಾರೆ. ಧರ್ಮೆಂದ್ರ ಪ್ರಧಾನ್ ಪೆಟ್ರೋಲಿಯಂ, ಪಿಯೂಶ್ ಗೋಯಲ್ ರೈಲ್ವೇ, ಜೈ ಶಂಕರ್ ಅವರಿಗೆ ವಿದೇಶಾಂಗ ಇಲಾಖೆ ಸಿಕ್ಕಿದೆ.

    ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹ ಖಾತೆಯನ್ನು ನೋಡಿಕೊಳ್ಳುತ್ತಿದ್ದರು. ಈಗ ಮತ್ತೊಮ್ಮೆ ಅಮಿತ್ ಶಾ ಮೋದಿ ಕ್ಯಾಬಿನೆಟ್‍ನಲ್ಲಿ ಗೃಹ ಖಾತೆಯನ್ನು ನಿರ್ವಹಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ – ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಹಂಚಿಕೆಯಾಗದ ಎಲ್ಲ ಖಾತೆಗಳು.

    ಸಂಪುಟ ದರ್ಜೆ ಸಚಿವರು:
    ರಾಜನಾಥ್ ಸಿಂಗ್ – ರಕ್ಷಣೆ
    ಅಮಿತ್ ಶಾ – ಗೃಹ, ಸಣ್ಣ ಮತ್ತು ಮಧ್ಯಮ ಉದ್ಯಮ
    ನಿತಿನ್ ಗಡ್ಕರಿ – ಸಾರಿಗೆ ಮತ್ತು ರಾಷ್ಟ್ರಿಯ ಹೆದ್ದಾರಿ
    ಸದಾನಂದ ಗೌಡ – ರಾಸಾಯನಿಕ ಮತ್ತು ರಸಗೊಬ್ಬರ
    ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೋರೆಟ್ ವ್ಯವಹಾರ
    ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ಸಾರ್ವಜನಿಕ ವಿತರಣೆ

    ನರೇಂದ್ರ ಸಿಂಗ್ ತೋಮರ್ – ಕೃಷಿ, ಗ್ರಾಮೀಣ ಅಭಿವೃದ್ಧಿ, ರೈತ ಕಲ್ಯಾಣ, ಪಂಚಾಯತ್ ರಾಜ್
    ರವಿಶಂಕರ್ ಪ್ರಸಾದ್ – ಕಾನೂನು ಮತ್ತು ನ್ಯಾಯ, ಸಂವಹನ ಮತ್ತು ಮಾಹಿತಿ, ತಂತ್ರಜ್ಞಾನ
    ಹರ್ಸಿಮ್ರತ್ ಕೌರ್ – ಆಹಾರ ಸಂಸ್ಕರಣಾ ಕೈಗಾರಿಕೆ
    ತಾವರ್ ಚಂದ್ ಗೆಹ್ಲೋಟ್ – ಸಾಮಾಜಿಕ ಕಲ್ಯಾಣ ಮತ್ತು ಸಬಲೀಕರಣ
    ಎಸ್.ಜೈಶಂಕರ್ – ವಿದೇಶಾಂಗ ಇಲಾಖೆ
    ರಮೇಶ್ ಪೋಖ್ರಿಯಾಲ್ – ಮಾನವ ಸಂಪನ್ಮೂಲ
    ಅರ್ಜುನ್ ಮುಂಡಾ – ಬುಡಕಟ್ಟು ಅಭಿವೃದ್ಧಿ

    ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    ಡಾ.ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ
    ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಮತ್ತು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ
    ಪಿಯುಷ್ ಗೋಯಲ್ – ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ
    ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಉಕ್ಕು

    ಮುಕ್ತಾರ್ ಅಬ್ಬಾಸ್ ನಖ್ವಿ – ಅಲ್ಪ ಸಂಖ್ಯಾತ ಕಲ್ಯಾಣ
    ಪ್ರಹ್ಲಾದ್ ಜೋಷಿ – ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ
    ಮಹೇಂದ್ರನಾಥ್ ಪಾಂಡೆ – ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಅರವಿಂದ್ ಸಾವಂತ್ – ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ಗಿರಿರಾಜ್ ಸಿಂಗ್ – ಪಶು ಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮೀನುಗಾರಿಕೆ
    ಗಜೇಂದ್ರ ಸಿಂಗ್ ಶೇಖಾವತ್‌ – ಜಲ ಶಕ್ತಿ

    ರಾಜ್ಯ ಖಾತೆ ಸಚಿವರು:
    ಫಗನ್ ಸಿಂಗ್ ಕುಲಸ್ತೆ – ಉಕ್ಕು
    ಅಶ್ವಿನಿ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    ಬಿಕನೇರ್ ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ವಿ.ಕೆ.ಸಿಂಗ್ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
    ಕೃಷ್ಣಪಾಲ್ ಗುರ್ಜರ್ – ಸಾಮಾಜಿಕ ನ್ಯಾಯ ಸಬಲೀಕರಣ
    ರಾವ್ ಸಾಹೇಬ್ ದಾನವೆ ರಾವ್ – ಗ್ರಾಹಕ ವ್ಯವಹಾರ ಮತ್ತು ಆಹಾರ ಮತ್ತು ಸಾರ್ವಜನಿಕರ ವಿತರಣೆ
    ಕಿಶಾನ್ ರೆಡ್ಡಿ- ಗೃಹ ಇಲಾಖೆ

    ಪುರುಷೋತ್ತಮ ರುಪಾಲಾ – ಕೃಷಿ ಮತ್ತು ರೈತರ ಕಲ್ಯಾಣ
    ರಾಮದಾಸ್ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಮೀಣ ಅಭಿವೃದ್ಧಿ
    ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ

    ಸಂಜೀವ್ ಬಲಿಯಾನ್ – ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ
    ಸಂಜಯ್ ಧೋತ್ರೆ – ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂವಹನ, ಮಾಹಿತಿ ತಂತ್ರಜ್ಞಾನ
    ಅನುರಾಗ್ ಠಾಕೂರ್ – ಹಣಕಾಸು ಮತ್ತು ಕಾರ್ಪೋರೆಟ್ ವ್ಯವಹಾರ
    ಸುರೇಶ್ ಅಂಗಡಿ – ರೈಲ್ವೇ ಖಾತೆ
    ನಿತ್ಯಾನಂದ್ ರಾಯ್ – ಗೃಹ ವ್ಯವಹಾರ ಖಾತೆ

    ರತನ್ ಲಾಲ್ ಕಟಾರಿಯಾ – ಜಲ ಶಕ್ತಿ, ಸಾಮಾಜಿಕ ನ್ಯಾಯ, ಸಬಲೀಕರಣ,
    ವಿ.ಮುರಳೀಧರನ್ – ವಿದೇಶಾಂಗ ಮತ್ತು ಸಂಸದೀಯ ವ್ಯವಹಾರ,
    ರೇಣುಕಾ ಸಿಂಗ್ – ಬುಡಕಟ್ಟು ವ್ಯವಹಾರ,
    ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ವ್ಯವಹಾರ

    ರಾಮೇಶ್ವರ್ ತೇಲಿ – ಆಹಾರ ಸಂಸ್ಕರಣ ಉದ್ಯಮ
    ಸಾರಂಗಿ – ಸಣ್ಣ ಮತ್ತು ಮಧ್ಯಮ ಉದ್ಯಮ, ಪಶು ಸಂಗೋಪನೆ, ಮೀನುಗಾರಿಕೆ,
    ಕೈಲಾಶ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
    ದೆಬೊಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

    ಸ್ವತಂತ್ರ ಖಾತೆ ಸಚಿವರು:
    ಸಂತೋಷ್ ಕುಮಾರ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ
    ಇಂದ್ರಜಿತ್ ಸಿಂಗ್ – ಸಾಂಖ್ಯಿಕ ಅಭಿವೃದ್ಧಿ ಮತ್ತು ಅನುಷ್ಠಾನ ಖಾತೆ
    ಶ್ರೀಪಾದ್ ಎಸ್ ನಾಯಕ್- ಆಯುಶ್, ರಕ್ಷಣಾ
    ಜಿತೇಂದ್ರ ಸಿಂಗ್- ಈಶಾನ್ಯ ಅಭಿವೃದ್ಧಿ ಮತ್ತು ಬಾಹ್ಯಾಕಾಶ, ಪರಮಾಣು ಶಕ್ತಿ

    ಕಿರಣ್ ರಿಜಿಜು- ಕ್ರೀಡಾ ಮತ್ತು ಯುವ ಸಬಲೀಕರಣ – ಅಲ್ಪ ಸಂಖ್ಯಾತ
    ಪ್ರಹ್ಲಾದ್ ಸಿಂಗ್ ಪಟೇಲ್ – ಸಂಸ್ಕ್ರತಿ ಮತ್ತು ಪ್ರವಾಸ್ಯೋದಮ
    ರಾಜ್‍ಕುಮಾರ್ ಸಿಂಗ್ – ಇಂಧನ, ನವೀಕರಿಸಬಹುದಾದ ಶಕ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಹರ್ದೀಪ್ ಸಿಂಗ್ ಪುರಿ – ವಸತಿ ಮತ್ತು ನಗರಾಭಿವೃದ್ಧಿ, ನಾಗರೀಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ
    ಮನಸುಖ್ ಮಾಂಡವ್ಯ – ಹಡಗು, ರಾಸಾಯನಿಕ ಮತ್ತು ರಸಗೊಬ್ಬರ

  • ಡಿವಿಎಸ್‍ಗೆ ಆಶೀರ್ವಾದ ಮಾಡಿ ಷರತ್ತು ವಿಧಿಸಿದ ಬಿಎಸ್‍ವೈ

    ಡಿವಿಎಸ್‍ಗೆ ಆಶೀರ್ವಾದ ಮಾಡಿ ಷರತ್ತು ವಿಧಿಸಿದ ಬಿಎಸ್‍ವೈ

    ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗುತ್ತಿರುವ ಹಿನ್ನೆಲೆಯಲ್ಲಿ ಡಿವಿ ಸದಾನಂದ ಗೌಡರಿಗೆ ಬಿಎಸ್ ಯಡಿಯೂರಪ್ಪ ಷರತ್ತು ವಿಧಿಸಿ ಆಶೀರ್ವಾದಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಸದರಾದ ಸದಾನಂದ ಗೌಡ ಅವರಿಗೆ ಕರೆ ಮಾಡಿ ಸಂಜೆ 5 ಗಂಟೆಗೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸದಾನಂದಗೌಡರು ಆರ್ಶೀವಾದ ಪಡೆದರು.

    2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿರುವುದು ಖಚಿತವಾಗುತ್ತಿದಂತೆ ಸದಾನಂದ ಗೌಡರು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಬಿಎಸ್‍ವೈರನ್ನ ಭೇಟಿ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇತ್ತ ಬಿಎಸ್‍ವೈ, ಸದಾನಂದಗೌಡರಿಗೆ ಸಿಹಿ ತಿನಿಸಿ ಶುಭಕೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ವೈ, ಸದಾನಂದಗೌಡರೇ ನಿಮಗೆ ಸಿಹಿ ತಿನಿಸುವ ಮೊದಲು ಒಂದು ಷರತ್ತು ಇದೆ. ನೀವು ದೆಹಲಿಯಲ್ಲಿ ದಿವಂಗತ ಅನಂತಕುಮಾರ್ ಅವರ ಸ್ಥಾನವನ್ನು ತುಂಬಬೇಕು. ಅನಂತಕುಮಾರ್ ಅವರ ರೀತಿಯಲ್ಲೇ ಕೆಲಸ ಮಾಡಬೇಕು. ರಾಜ್ಯದ ಜನರಿಗೆ ದೆಹಲಿಯಲ್ಲಿ ಸ್ಪಂದಿಸಬೇಕು ಎಂದು ಷರತ್ತುಗಳನ್ನು ವಿಧಿಸಿದರು. ಬಿಎಸ್‍ವೈರ ಷರತ್ತುಗಳಿಗೆ ಒಪ್ಪಿಕೊಂಡ ಸದಾನಂದ ಗೌಡರು ಬಳಿಕ ಸಿಹಿ ತಿನ್ನಿಸಿದರು.

  • ಬೆಂಗಳೂರು ಉತ್ತರದಿಂದ ಮಾಜಿ ಶಿಷ್ಯನನ್ನು ಅಖಾಡಕ್ಕೆ ಇಳಿಸಲು ಎಚ್‍ಡಿಡಿ ಪ್ಲಾನ್!

    ಬೆಂಗಳೂರು ಉತ್ತರದಿಂದ ಮಾಜಿ ಶಿಷ್ಯನನ್ನು ಅಖಾಡಕ್ಕೆ ಇಳಿಸಲು ಎಚ್‍ಡಿಡಿ ಪ್ಲಾನ್!

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಎಲ್ ಶಂಕರ್ ಅವರನ್ನು ಕಣಕ್ಕೆ ಇಳಿಸಲು ಮುಂದಾಗಿದ್ದಾರೆ.

    ಹೌದು. ದೋಸ್ತಿ ಪಕ್ಷಗಳ ಸೀಟು ಹಂಚಿಕೆ ಪ್ರಕಾರ ಬೆಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಪಾಲಾಗಿದೆ.  ಈ ಕ್ಷೇತ್ರದಲ್ಲಿ  ಜೆಡಿಎಸ್ ಪ್ರಬಲ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಮಾಜಿ ಶಿಷ್ಯ, ಬಿಎಲ್ ಶಂಕರ್ ಅವರನ್ನು ಕಣಕ್ಕೆ ಇಳಿಸಲು ದೇವೇಗೌಡರು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಕಣಕ್ಕೆ ನಿಲ್ಲುವುದು ಅಧಿಕೃತವಾದ ಹಿನ್ನೆಲೆಯಲ್ಲಿ ದೇವೇಗೌಡರು ಬೆಂಗಳೂರು ಉತ್ತರ, ತುಮಕೂರು ಈ ಕ್ಷೇತ್ರಗಳ ಪೈಕಿ ಎಲ್ಲಿ ನಿಲ್ಲಲ್ಲಿದ್ದಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ  ತುಮಕೂರು ಕ್ಷೇತ್ರದಲ್ಲಿ ನಿಲ್ಲುವುದು ಅಧಿಕೃತವಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರದಿಂದ ಬಿಎಲ್ ಶಂಕರ್ ಅವರನ್ನು ನಿಲ್ಲಿಸುವ ಪ್ರಸ್ತಾಪವನ್ನು ಎಚ್‍ಡಿಡಿ ಮುಂದಿಟ್ಟಿದ್ದಾರೆ.

    ‘ಕೋಟಾ ನಮ್ಮದು ಕ್ಯಾಂಡಿಡೇಟ್’ ನಿಮ್ಮದು ಸೂತ್ರದ ಅಡಿ ದೇವೇಗೌಡರು ಈ ವಿಚಾರವನ್ನು ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿದ್ದಾರೆ. ಈ ಸಂಬಂಧ ಬಿ.ಎಲ್.ಶಂಕರ್ ಅವರ ಜೊತೆಗೂ ದೇವೇಗೌಡರು ಚರ್ಚೆ ನಡೆಸಿದ್ದಾರೆ. ಕೈ ಮತ್ತು ತೆನೆ ನಾಯಕರು ಚರ್ಚೆ ನಡೆಸಿದ ಬಳಿಕ ತನ್ನ ನಿರ್ಧಾರ ಪ್ರಕಟಿಸಲು ಶಂಕರ್ ಅವರು ಕಾಲಾವಕಾಶ ಕೇಳಿದ್ದಾರೆ ಎನ್ನುವ ವಿಚಾರ ಈಗ ತಿಳಿದುಬಂದಿದೆ.

    ಜೆಡಿಎಸ್ ಸ್ಪರ್ಧಿಸಲ್ಲ ಯಾಕೆ?
    ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಸದಾನಂದ ಗೌಡ ಅವರು ಈ ಬಾರಿಯೂ ಈ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವುದು ಬಹುತೇಕ ಅಂತಿಮವಾಗಿದೆ. ಕಳೆದ ಚುನಾವಣೆಯಲ್ಲಿ ಡಿವಿಎಸ್ 2.29 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಡಿವಿಎಸ್ 7,18,326 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ 4,88,562 ಮತಗಳನ್ನು ಪಡೆದಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಬ್ದುಲ್ ನಜೀಂ ಕೇವಲ 92,681 ಮತಗಳನ್ನು ಪಡೆದಿದ್ದರು. 1996ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ನಾರಾಯಣ ಸ್ವಾಮಿ ಗೆಲುವು ಪಡೆದಿದಿದ್ದರು. ನಂತರ ನಡೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಾಫರ್ ಷರೀಫ್ ಆಯ್ಕೆ ಆಗಿದ್ದರು. 2004, 2009, 2014ರವರೆಗೆ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿತ್ತು.

  • ದೆಹಲಿಯಲ್ಲಿಂದು ಲಿಂಗಾಯತ ಸಮಾವೇಶ- ಸಚಿವ ಸದಾನಂದ ಗೌಡರಿಂದ್ಲೇ ಉದ್ಘಾಟನೆ

    ದೆಹಲಿಯಲ್ಲಿಂದು ಲಿಂಗಾಯತ ಸಮಾವೇಶ- ಸಚಿವ ಸದಾನಂದ ಗೌಡರಿಂದ್ಲೇ ಉದ್ಘಾಟನೆ

    ನವದೆಹಲಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬಂಡಾಯ ಎದ್ದಿದ್ದಾರಾ..? ಅಥಾವಾ ಸದಾನಂದಗೌಡರು ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿದ್ದರಾ..?. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಇಂತದೊಂದು ಪ್ರಶ್ನೆಗೆ ಕಾರಣವಾಗಿದೆ.

    ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ದೆಹಲಿಯಲ್ಲಿ ಲಿಂಗಾಯತ ಧರ್ಮ ಸಭಾ ರೂಪಿಸಿರುವ ಮೂರು ದಿನಗಳ ಸಮಾವೇಶವನ್ನ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಲಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ದೂರವಿದ್ದ ಬಿಜೆಪಿ ನಾಯಕರ ನಡುವೆ ಡಿವಿಎಸ್ ಭಾಗಿ ಕುತೂಹಲ ಮೂಡಿಸಿದೆ.

    ಪ್ರತ್ಯೇಕ ಲಿಂಗಾಯತ ಹೋರಾಟದಿಂದ ದೂರ ಇರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಆದ್ರೆ ಇಂದು ಈ ಹೋರಾಟಕ್ಕೆ ಚಾಲನೆ ನೀಡುವ ಮೂಲಕ ಸದಾನಂದಗೌಡರು ಹೈಕಮಾಂಡ್ ಆಜ್ಞೆಯನ್ನೇ ಮೀರಿದಂತೆ ಕಾಣುತ್ತಿದೆ. ವಿಧಾನಸಭೆ ಚುನಾವಣೆ ಮುನ್ನ ಈ ಹೋರಾಟದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಿದ್ದ ಬೆನ್ನಲ್ಲೇ ಸದಾನಂದಗೌಡರ ಲಿಂಗಾಯತ ಪ್ರತ್ಯೇಕ ಹೋರಾಟ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಕಮಲ ವಿರೋಧಿ ಮಹಾಸಭೆ:
    ರಾಜ್ಯ ಮೈತ್ರಿ ಸರ್ಕಾರ ರಚನೆ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದ ವಿರೋಧ ಪಕ್ಷಗಳ ಒಕ್ಕೂಟ್ಟ ಈಗ ಮತ್ತೊಮ್ಮೆ ಬಲ ಪ್ರದರ್ಶನಕ್ಕೆ ಸಿದ್ದವಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಬಾಕಿ ಈರುವಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಮ್ಮೆ ವಿಪಕ್ಷಗಳ ಶಕ್ತಿ ಪ್ರದರ್ಶನವಾಗಲಿದೆ.

    ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎನ್‍ಸಿಪಿ ನಾಯಕ ಶರತ್ ಪವಾರ್ ಸೇರಿದಂತೆ ಎಡಪಕ್ಷಗಳ ನಾಯಕರು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ. ಈ ಸಭೆಯ ನೇತೃತ್ವವನ್ನ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೊತ್ತಿದ್ದು, ಇತರೆ ಪ್ರಾದೇಶಿಕ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಸಂಸತ್ ಅಧಿವೇಶನಕ್ಕೆ ಒಂದು ದಿನವಷ್ಟೇ ಬಾಕಿ ಇದ್ದು ರಾಜಧಾನಿಯಲ್ಲಿ ಮತ್ತೊಮ್ಮೆ ಮಹಾಘಟಬಂದನ್ ಶಕ್ತಿ ಪ್ರದರ್ಶನ ಮಾಡಲು ವಿರೋಧ ಪಕ್ಷಗಳು ಪ್ಲಾನ್ ಮಾಡಿಕೊಂಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv