– ಕೈ ಮಿತ್ರರಿಗೆ ಕೇಂದ್ರ ಸಚಿವ ವಿನಂತಿ
ಮಡಿಕೇರಿ: ರಾಜ್ಯದಲ್ಲಿರುವ ಬುಡಕಟ್ಟು ಇಲಾಖೆ ವ್ಯಾಪ್ತಿಯ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ (ಇಎಂಆರ್‍ಎಸ್) ಕೇಂದ್ರ ಸರ್ಕಾರವು ಬರೋಬ್ಬರಿ 15 ಕೋಟಿ ಅನುದಾನ ಮಂಜೂರು ಮಾಡಿದೆ.
ಡಿಸೆಂಬರ್ 31ರಂದು ಅನುದಾನ ಮಂಜೂರಾತಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಕೇಂದ್ರ ಸರ್ಕಾರದ ಬುಡಕಟ್ಟು ಇಲಾಖೆಯು ನಮ್ಮ ಬೆಳಗಾವಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ರೂ.15 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಸಮುದಾಯದ ಮಕ್ಕಳ ಏಳ್ಗೆಯತ್ತ ಮತ್ತೊಂದು ಪುಟ್ಟ ಹೆಜ್ಜೆ. ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕೊಡಗು ಶಾಲೆಗಳಿಗೆ ತಲಾ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಬಾಳಗೋಡು ಶಾಲೆಗೂ 5 ಕೋಟಿ ಲಭಿಸಿದೆ. ಅಲ್ಲದೇ ಸದಾನಂದಗೌಡ ಅವರು ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜಾರಿ ಮಾಡಿರುವ ಅನುದಾಗಳ ಬಗ್ಗೆ ತಿಳಿಸಿದ್ದಾರೆ.
‘ಮನ್ರೆಗಾ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ ಕೇಂದ್ರವು ಕರ್ನಾಟಕಕ್ಕೆ ಒಟ್ಟು 3995.43 ಕೋಟಿ ರೂ. ಹಾಗೂ ಈ ಹಿಂದಿನ ಬಾಕಿ 500 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಿದೆ. ಜಿ.ಎಸ್.ಟಿ.ಗೆ ಸಂಬಂಧಪಟ್ಟಂತೆ ಪ್ರಸಕ್ತ ಸಾಲಿನ ಇದುವರೆಗಿನ ಅವಧಿಯಲ್ಲಿ 12,483.73 ಕೋಟಿ ರೂ.ಗಳು ರಾಜ್ಯದ ಪಾಲು. ಇದು ನಿರಂತರ ಪ್ರಕ್ರಿಯೆಯಾಗಿದೆ.
ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರವು 2019-20ರ ಸಾಲಿನಲ್ಲಿ ಈವರೆಗೆ ಕರ್ನಾಟಕ ರಾಜ್ಯಕ್ಕೆ 898.5 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಉತ್ತಮ ಸಮನ್ವಯ ಹೊಂದಿದೆ. ಶೈಕ್ಷಣಿಕ ಕ್ಷೇತ್ರದ ಅಮೂಲಾಗೃ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು 2019-20ರ ಆರ್ಥಿಕ ವರ್ಷದಲ್ಲಿ ಇಲ್ಲಿಯ ತನಕ ವಿವಿಧ ಯೋಜನೆಗಳಡಿಯಲ್ಲಿ ಕರ್ನಾಟಕಕ್ಕೆ 41,889.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅನುದಾನ ಬಿಡುಗಡೆಗೆ ಪ್ರತಿಷ್ಠಾಪಿತ ಮಾರ್ಗಸೂಚಿಗಳಿವೆ. ಯಾವ ರಾಜ್ಯಗಳಿಗೂ ತಾರತಮ್ಯ ಎಸಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟೀಕೆ ಮಾಡುವ ಮುನ್ನ ಅಂಕಿ-ಅಂಶ, ಸಂತ್ಯಾಂಶ ಏನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜನರಲ್ಲಿ ತಪ್ಪುಗ್ರಹಿಕೆ ಉಂಟುಮಾಡಲು ಪ್ರಯತ್ನಸಬೇಡಿ ಎಂದು ಕಾಂಗ್ರೆಸ್ ಮಿತ್ರರಿಗೆ ವಿನಂತಿ ಮಾಡಿಕೊಂಡಿದ್ದಾರೆ.