Tag: ಸತ್ಸಂಗ

  • Hathras Tragedy: ಇಬ್ಬರು ಮಹಿಳೆಯರು ಸೇರಿ ಸತ್ಸಂಗ ಸಂಘಟನಾ ಸಮಿತಿಯ 6 ಮಂದಿ ಅರೆಸ್ಟ್‌

    Hathras Tragedy: ಇಬ್ಬರು ಮಹಿಳೆಯರು ಸೇರಿ ಸತ್ಸಂಗ ಸಂಘಟನಾ ಸಮಿತಿಯ 6 ಮಂದಿ ಅರೆಸ್ಟ್‌

    ಲಕ್ನೋ: ಹತ್ರಾಸ್‌ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿ 121 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು (UP Police) ಗುರುವಾರ ತಿಳಿಸಿದ್ದಾರೆ.

    ಸತ್ಸಂಗ ಕಾರ್ಯಕ್ರಮ ಸಂಘಟನಾ ಸಮಿತಿಯ 6 ಮಂದಿ ಸದಸ್ಯರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ (ಜು.2) ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ (Bhole Baba aka Narayan Saakar Hari) ಪ್ರವಚನ ಕಾರ್ಯಕ್ರಮದ ನಂತರ ಕಾಲ್ತುಳಿತ ಸಂಭವಿಸಿ 121 ಮಂದಿ ಸಾವನ್ನಪ್ಪಿದ್ದರು. 31 ಮಂದಿ ಗಾಯಗೊಂಡಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಂಘಟನಾ ಸಮಿತಿಯ ಸದಸ್ಯರಾಗಿದ್ದು, ಸೇವಾದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಅಲಿಗಢ್ ಇನ್ಸ್‌ಪೆಕ್ಟರ್ ಜನರಲ್ ಶಲಭ್ ಮಾಥುರ್ ಹೇಳಿದ್ದಾರೆ. ಇದನ್ನೂ ಓದಿ: ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್‌ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ

    ಪ್ರಮುಖ ಆರೋಪಿ ಸುಳಿವು ಕೊಟ್ಟರೆ 1 ಲಕ್ಷ ರೂ. ಬಹುಮಾನ:
    ಎಫ್‌ಐಆರ್‌ನಲ್ಲಿ ಮುಖ್ಯ ಸೇವಾದಾರ ದೇವಪ್ರಕಾಶ್ ಮಧುಕರ್‌ನನ್ನ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈತ ನಾಪತ್ತೆಯಾಗಿದ್ದು, ಮಧುಕರ್‌ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಅಲ್ಲದೇ ಕೋರ್ಟ್‌ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಿದೆ ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ: ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್‌! – ಇಂದು ಸಂಜೆ ಮುಂಬೈನಲ್ಲಿ ರೋಡ್‌ ಶೋ

    ಕಾಲ್ತುಳಿತ ಸಂಭವಿಸಿದ್ದು ಹೇಗೆ?
    ಸತ್ಸಂಗ (Satsang) ಕಾರ್ಯಕ್ರಮ ಮುಗಿದ ಬಳಿಕ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಕಾರು ಹತ್ತಿದ್ದಾರೆ. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಧೂಳನ್ನು ಸಂಗ್ರಹಿಸಲು ಅನುಯಾಯಿಗಳು ಮುಗಿಬಿದ್ದಿದ್ದಾರೆ. ಭಾರೀ ಸಂಖ್ಯೆಯಲ್ಲಿದ್ದ ಅನುಯಾಯಿಗಳು ಧೂಳು ಸಂಗ್ರಹಿಸಲು ಓಡಿದ ಪರಿಣಾಮ ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು, ನೋವಿನ ಸಂಖ್ಯೆ ಹೆಚ್ಚಾಗಿದೆ.

    ಸಿಎಂ ಯೋಗಿ ಆದಿತ್ಯನಾಥ್‌ ಅವರ ಸೂಚನೆ ನಂತರ ಪ್ರಕರಣಕ್ಕೆ ಸಂಬಂಧಿಸಿದ 6 ಮಂದಿಯನ್ನ ಬಂಧಿಸಲಾಗಿದೆ. ಅಗತ್ಯವಿದ್ದರೆ, ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಬಹುದು. ಸದ್ಯಕ್ಕೆ ಅವರ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: MUDA Site Allotment Scam | ನನಗೆ 62 ಕೋಟಿ ಕೊಡಬೇಕು: ಸಿಎಂ

  • 2.5 ಲಕ್ಷ ಮಂದಿ ಭಾಗಿ, ದೇವಮಾನವನ ಕಾರಿನ ಚಕ್ರದ ಧೂಳನ್ನು ಸಂಗ್ರಹಿಸಲು ಮುಗಿಬಿದ್ದ ಅನುಯಾಯಿಗಳು!

    2.5 ಲಕ್ಷ ಮಂದಿ ಭಾಗಿ, ದೇವಮಾನವನ ಕಾರಿನ ಚಕ್ರದ ಧೂಳನ್ನು ಸಂಗ್ರಹಿಸಲು ಮುಗಿಬಿದ್ದ ಅನುಯಾಯಿಗಳು!

    ಲಕ್ನೋ: 80 ಸಾವಿರ ಮಂದಿಗೆ ಅನುಮತಿ ಪಡೆದು 2.5 ಲಕ್ಷ ಜನರನ್ನು ಸಂಘಟಕರು ಸೇರಿಸಿದ ಪರಿಣಾಮ ಉತ್ತರ ಪ್ರದೇಶದ (Uttar Pradesh) ಹತ್ರಾಸ್‌ ಸತ್ಸಂಗ (Hathras Satsang) ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿದ್ದಾರೆ.

    ಹೌದು. ಈ ಪ್ರಕರಣ ಸಂಬಂಧ ಎಫ್‌ಐಆರ್‌ (FIR) ದಾಖಲಾಗಿದೆ. ಸಂಘಟಕರು 80 ಸಾವಿರ ಮಂದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಮನವಿ ಮಾಡಿದ್ದರು. ಆದರೆ ಕಾರ್ಯಕ್ರಮಕ್ಕೆ 2.5 ಲಕ್ಷ ಮಂದಿ ಭಾಗವಹಿಸಿದ್ದರು ಎಂದು ಎಂಬ ಅಂಶ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

    ಕಾಲ್ತುಳಿತ ಸಂಭವಿಸಿದ್ದು ಹೇಗೆ?
    ಸತ್ಸಂಗ (Satsang) ಕಾರ್ಯಕ್ರಮ ಮುಗಿದ ಬಳಿಕ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ (Bhole Baba aka Narayan Saakar Hari) ಕಾರು ಹತ್ತಿದ್ದಾರೆ. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಧೂಳನ್ನು ಸಂಗ್ರಹಿಸಲು ಅನುಯಾಯಿಗಳು ಮುಗಿಬಿದ್ದಿದ್ದಾರೆ. ಭಾರೀ ಸಂಖ್ಯೆಯಲ್ಲಿದ್ದ ಅನುಯಾಯಿಗಳು ಧೂಳು ಸಂಗ್ರಹಿಸಲು ಓಡಿದ ಪರಿಣಾಮ ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು, ನೋವಿನ ಸಂಖ್ಯೆ ಹೆಚ್ಚಾಗಿದೆ. ಇದನ್ನೂ ಓದಿ: ಭಾಷಣಕ್ಕೆ ಕಿರುಚಿ ಅಡ್ಡಿಪಡಿಸಿ ಸುಸ್ತಾಗಿದ್ದ ಪ್ರತಿಪಕ್ಷ ಸದಸ್ಯರಿಗೆ ನೀರು ನೀಡಿದ ಮೋದಿ – ವಿಡಿಯೋ ವೈರಲ್‌

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಬೃಹತ್ ಕಾರ್ಯಕ್ರಮಕ್ಕೆ ಭದ್ರತೆಗಾಗಿ ಕೇವಲ 40 ಪೊಲೀಸ್‌ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು. ಈ ಬಗ್ಗೆ ರಾಜ್ಯ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದರೂ ಪ್ರಕರಣ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ.

    ಎಫ್‌ಐಆರ್‌ನಲ್ಲಿ ಸ್ವಯಂಘೋಷಿತ ದೇವಮಾನವನ ಸಹಾಯಕ, ಕಾರ್ಯಕ್ರಮದ ಮುಖ್ಯ ಸಂಘಟಕ ದೇವಪ್ರಕಾಶ್‌ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಹೆಸರು ಎಫ್‌ಐಆರ್‌ನಲ್ಲಿ ಇಲ್ಲ.

    ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ನರಹತ್ಯೆಗೆ ಸಂಬಂಧಿಸಿ ಕೊಲೆಗೆ ಸಮನಾದ  ಇತ್ಯಾದಿ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಸ್ವಯಂ ಘೋಷಿತ ದೇವಮಾನವನನ್ನು ಬಂಧಿಸಲಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್, ಸದ್ಯ ಈಗ ಪ್ರಕರಣ ತನಿಖಾ ಹಂತದಲ್ಲಿದೆ. ಈಗಲೇ ಯಾವುದೇ ತೀರ್ಮಾನ ತಗೆದುಕೊಂಡು ತನಿಖೆಯ ಮೇಲೆ ಪ್ರಭಾವ ಬೀರಲು ಬಯಸುವುದಿಲ್ಲ ಎಂದು ಹೇಳಿದರು.

     

  • ಹತ್ರಾಸ್‌ ಕಾಲ್ತುಳಿತಕ್ಕೆ 116 ಮಂದಿ ಬಲಿ – ಅಂದು ಹೆಡ್‌ ಕಾನ್‌ಸ್ಟೇಬಲ್‌ ಈಗ ಸ್ವಯಂಘೋಷಿತ ಗುರು!

    ಹತ್ರಾಸ್‌ ಕಾಲ್ತುಳಿತಕ್ಕೆ 116 ಮಂದಿ ಬಲಿ – ಅಂದು ಹೆಡ್‌ ಕಾನ್‌ಸ್ಟೇಬಲ್‌ ಈಗ ಸ್ವಯಂಘೋಷಿತ ಗುರು!

    ಲಕ್ನೋ: ಹತ್ರಾಸ್‌ ಸತ್ಸಂಗ (Satsang) ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 116 ಮಂದಿ ಬಲಿಯಾಗಿದ್ದಾರೆ. ಈ ಸತ್ಸಂಗ ಕಾರ್ಯಕ್ರಮದ ಕೇಂದ್ರಬಿಂದು ಆಗಿರುವ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ (Bhole Baba aka Narayan Saakar Hari) ಅವರು ಈ ಹಿಂದೆ ಗುಪ್ತಚರ ಬ್ಯೂರೋದಲ್ಲಿ (Intelligence Bureau) ಕೆಲಸ ಮಾಡಿದ್ದರು.

    ಸರ್ಕಾರಿ ಸೇವೆಯಲ್ಲಿದ್ದಾಗ ಆಧ್ಯಾತ್ಮದತ್ತ ಒಲವು ಹೊಂದಿದ್ದ ಅವರು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ಹುದ್ದೆಗೆ ರಾಜೀನಾಮೆ ನೀಡಿದ್ದರು.

    ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಹದ್ದೂರ್ ನಗರಿ ಗ್ರಾಮದ ರೈತ ನನ್ನೆ ಲಾಲ್ ಮತ್ತು ಕಟೋರಿ ದೇವಿಯವರ ಮಗನಾಗಿ ಜನಿಸಿದ್ದರು. ಗುರು ಭೋಲೆ ಬಾಬಾ ಅವರ ಮೂಲ ಹೆಸರು ಸೂರಾಜ್‌ ಪಾಲ್‌. ಇವರಿಗೆ ಇಬ್ಬರು ಸಹೋದರರಿದ್ದು ಒಬ್ಬರು ಮೃತಪಟ್ಟಿದ್ದಾರೆ.

     

    ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಕಾಲೇಜ್‌ ಶಿಕ್ಷಣ ಓದಿ ಉತ್ತರ ಪ್ರದೇಶ ಪೊಲೀಸ್‌ನ ಸ್ಥಳೀಯ ಗುಪ್ತಚರ ಘಟಕದಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದರು. ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಇವರ ಮನಸ್ಸು ಆಧ್ಯಾತ್ಮಿಕತೆಯ ಕಡೆಗೆ ತಿರುಗಿತು. 1999 ರಲ್ಲಿ ಪೊಲೀಸ್ ಕೆಲಸವನ್ನು ತೊರೆದ ಬಳಿಕ ತನ್ನ ಹೆಸರನ್ನು ನಾರಾಯಣ್ ಸಾಕರ್ ಹರಿ ಎಂದು ಬದಲಾಯಿಸಿ ಧಾರ್ಮಿಕ ಉಪನ್ಯಾಸ ನೀಡಲು ಆರಂಭಿಸಿದರು. ಇದನ್ನೂ ಓದಿ: ಹತ್ರಾಸ್‌ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು

    ಇವರು ಕೇಸರಿ ಬಟ್ಟೆಯನ್ನು ಧರಿಸುತ್ತಿರಲಿಲ್ಲ. ಬಿಳಿ ಬಣ್ಣದ ಶರ್ಟ್‌ ಮತ್ತು ಪ್ಯಾಂಟ್‌ ಧರಿಸುತ್ತಿದ್ದರು. ತನಗೆ ಸಿಕ್ಕಿದ ದೇಣಿಗೆಯನ್ನು ನಾನು ಇಟ್ಟುಕೊಳ್ಳುವುದಿಲ್ಲ. ಅದನ್ನು ಭಕ್ತರಿಗೆ ನೀಡುತ್ತೇನೆಂದು ಭೋಲೆ ಬಾಬಾ ಉಪದೇಶದಲ್ಲಿ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಉಪನ್ಯಾಸ ನೀಡುವಾಗ ಹತ್ತಿರದಲ್ಲೇ ಪತ್ನಿ ಸಹ ಇರುತ್ತಾರೆ.

    ನಾನು ಹರಿ(ವಿಷ್ಣು) ಭಕ್ತ ಎಂದು ಹೇಳಿಕೊಳ್ಳುವ ಇವರಿಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ. ಕಾಲ್ತುಳಿತವಾದ ನಂತರ ಭೋಲೆ ಬಾಬಾ ನಾಪತ್ತೆಯಾಗಿದ್ದು ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

    ಮಂಗಳವಾರ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತಕ್ಕೆ 116 ಮಂದಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮ ನಡೆದ ಸ್ಥಳ ತುಂಬಾ ಚಿಕ್ಕದಾಗಿದ್ದು ಅಲ್ಲಿ ನೆರೆದಿದ್ದ ಜನಸಮೂಹಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆಗೆ ಸಮಿತಿಯನ್ನು ರಚಿಸಲಾಗಿದ್ದು, ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.

    ಘಟನೆ ಹೇಗಾಯ್ತು?
    ಅಯೋಜಕರು 80 ಸಾವಿರ ಮಂದಿ ನಡೆಸುವ ಕಾರ್ಯಕ್ರಮ ಎಂದು ಹೇಳಿದ್ದರು. ಆದರೆ 1 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ ನಿರ್ಗಮನ ಜಾಗ ಬಹಳ ಕಿರಿದಾಗಿತ್ತು. ಜನ ಮರಳುತ್ತಿದ್ದಾಗ ಸಣ್ಣ ಮೋರಿ ಬಳಿ ಕಾಲ್ತುಳಿತ ಸಂಭವಿಸಿದೆ.

  • ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥೆ ಹೇಳಿದ ಎರಡೇ ಪದಗಳಿಂದ ಆಕೆಯನ್ನ ಕುಟುಂಬದೊಂದಿಗೆ ಸೇರಿಸಿದ ಪೊಲೀಸರು

    ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥೆ ಹೇಳಿದ ಎರಡೇ ಪದಗಳಿಂದ ಆಕೆಯನ್ನ ಕುಟುಂಬದೊಂದಿಗೆ ಸೇರಿಸಿದ ಪೊಲೀಸರು

    ಮುಂಬೈ: ಕೆಲವು ದಿನಗಳ ಹಿಂದೆ ಕಾಣೆಯಾಗಿ ಕುಟುಂಬದಿಂದ ಬೇರ್ಪಟ್ಟಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಲ್ಲೂ ಯುವತಿ ಹೇಳಿಕ ಎರಡೇ ಎರಡು ಪದಗಳನ್ನ ಇಟ್ಟುಕೊಂಡು ಪೊಲೀಸರು ಆಕೆಯ ಪೋಷಕರನ್ನ ಪತ್ತೆ ಮಾಡಿದ್ದಾರೆ.

    ಮಾನಸಿಕ ಅಸ್ವಸ್ಥ ಯುವತಿ ಕೇವಲ ಸತ್ಸಂಗ್ ಮತ್ತು ಭಾಯಂದರ್ ಎಂಬ ಎರಡು ಪದಗಳನ್ನಷ್ಟೇ ಹೇಳಿದ್ದಳು. ಇದನ್ನೇ ಆಧಾರವಾಗಿಟ್ಟುಕೊಂಡ ಪೊಲೀಸರು ಮುಂಬೈ ಬಳಿಯ ಭಾಯಂದರ್ ಪ್ರದೇಶಕ್ಕೆ ಭೇಟಿ ನೀಡಿ, ಸಿಕ್ಕ ಮಾಹಿತಿಯನ್ನ ಒಂದಕ್ಕೊಂದು ಜೋಡಿಸಿ ಪೋಷಕರನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಪೊಲೀಸರ ತಂಡ ಮೊದಲಿಗೆ ಭಾಯಂದರ್‍ನಲ್ಲಿ ನಡೆದ ಹಾಗೂ ನಡೆಯುತ್ತಿರುವ ಸತ್ಸಂಗಗಳ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ನಂತರ ಈ ಹಿಂದೆ ನಡೆದ ಸತ್ಸಂಗಗಳ ಆಯೋಜಕರು ಹಾಗೂ ಅವುಗಳಲ್ಲಿ ಭಾಗಿಯಾದ ಜನರನ್ನ ಮಾತನಾಡಿಸಿದ್ದರು.

    ಆಗಿದ್ದೇನು?: ಜನವರಿ 1ರಂದು ಸಂಜೆ 5.30ರ ವೇಳೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆಯೊಂದು ಬಂದಿತ್ತು. ಅಪರಿಚಿತ ಯುವತಿಯೊಬ್ಬಳು ವಡಾಲಾದ ಬಿಪಿಟಿ ಕಾಲೋನಿಯ ರಸ್ತೆ ಮೇಲೆ ಬಿದ್ದಿದ್ದಾಳೆಂದು ಮಾಹಿತಿ ಪಡೆದಿದ್ದರು. ನಂತರ ಕಂಟ್ರೋಲ್ ರೂಮಿನವರು ವಡಾಲಾದಲ್ಲಿನ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದರು. ಬಳಿಕ ಪೊಲೀಸ್ ವ್ಯಾನ್‍ನಲ್ಲಿ ಸಬ್ ಇನ್ಸ್ ಪೆಕ್ಟರ್ ಸಂದೀಪ್ ಪವಾರ್ ಸ್ಥಳಕ್ಕೆ ಭೇಟಿ ನೀಡಿದಾಗ, ಯುವತಿ ಮಾತನಾಡಲೂ ಕಷ್ಟಪಡುತ್ತಿದ್ದು, ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದಳು.

    ಮೊದಲಿಗೆ ಯುವತಿಯನ್ನ ಪರೇಲ್‍ನ ಕೆಇಎಮ್ ಆಸ್ಪತ್ರೆಗೆ ದಾಖಲಿಸಿ ನಂತರ ಜೆಜೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಯುವತಿಯನ್ನ ನೋಡಿಕೊಳ್ಳಲು ಮಹಿಳಾ ಪೇದೆಯರನ್ನ ನಿಯೋಜಿಸಲಾಗಿತ್ತು. ಶಿಫ್ಟ್‍ಗಳಲ್ಲಿ ಕೆಲಸ ಮಾಡಿದ ಮಹಿಳಾ ಪೇದೆಗಳು ಯುವತಿಯೊಂದಿಗೆ ಮಾತನಾಡಲು ಪ್ರತ್ನಿಸಿದ್ದರು. ಆದ್ರೆ ಯುವತಿ ಸಂತ್ಸಂಗ್, ಭಾಯಂದರ್ ಎಂಬ ಎರಡು ಪದಗಳನ್ನು ಮಾತ್ರ ಹೇಳುತ್ತಿದ್ದಳು.

    ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಬಳಿ ಇದ್ದ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಮಾಡಿದೆವು. ನಾನು ಭಾಯಂದರ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಿ, ಯಾವುದಾದ್ರೂ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ಯಾ ಎಂದು ಪರಿಶೀಲಿಸಿದೆ. ಆದ್ರೆ ಆ ರೀತಿ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಅವರು ತಿಳಿಸಿದರು ಎಂದು ಪಿಎಸ್‍ಐ ಸಂದೀಪ್ ಪವಾರ್ ಹೇಳಿದ್ದಾರೆ.

    ನಂತರ ಪವಾರ್ ಅವರು ಆ ಪ್ರದೇಶದಲ್ಲಿ ಇತ್ತೀಚೆಗೆ ಯಾವುದಾದ್ರೂ ಸತ್ಸಂಗ ನಡೆದಿತ್ತಾ ಎಂದು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ದರು. ಕಳೆದ ವಾರ ಅಂತಹ ಎರಡು ಮೂರು ಕಾರ್ಯಕ್ರಮಗಳು ನಡೆದಿವೆ ಎಂಬ ಮಾಹಿತಿ ಸಿಕ್ಕಿತ್ತು.

    ಇದನ್ನಾಧರಿಸಿ ಜನವರಿ 7ರಂದು ಕಾರ್ಯಕ್ರಮ ನಡೆದ ಒಂದು ಸ್ಥಳಕ್ಕೆ ಭೇಟಿ ನೀಡಿದ ಪವಾರ್, ದೇರಾ ಸಚ್ಛಾ ಸೌದಾ ಸತ್ಸಂಗ ಆಯೋಜಕರಿಗೆ ಯುವತಿಯ ಫೋಟೋ ತೋರಿಸಿ ವಿಚಾರಿಸಿದ್ದರು. ಸತ್ಸಂಗದಲ್ಲಿ ಭಾಗವಹಿಸಿದ್ದ ಕುಟುಂಬವೊಂದು, ಸುಮಾರು ಇದೇ ವಯಸ್ಸಿನ ತಮ್ಮ ಮಗಳನ್ನ ಕಳೆದುಕೊಂಡಿದ್ದಾರೆಂದು ಆಯೋಜಕರು ಹೇಳಿದ್ದರು. ನಂತರ ಸತ್ಸಂಗ ಆಯೋಜಕರು ಮಗಳನ್ನು ಕಳೆದುಕೊಂಡಿದ್ದ ಕುಟುಂಬದವರನ್ನ ಸಂಪರ್ಕಿಸಲು ಪವಾರ್ ಅವರಿಗೆ ಸಹಾಯ ಮಾಡಿದ್ದರು.

    ನಾನು ಸೂರತ್ ಮೂಲದ ಕುಟುಂಬವನ್ನ ಸಂಪರ್ಕಿಸಿ ಯುವತಿಯ ಫೋಟೋವನ್ನ ಹಂಚಿಕೊಂಡೆ. ಅವರು ಕೂಡಲೇ ಅದು ನಮ್ಮ ಮಗಳು ಫಲ್ಗುಣಿ ಪಟೇಲ್ ಎಂದು ಗುರುತಿಸಿದ್ರು. ಯುವತಿ ದಲ್‍ಸುಖ್ ಪಟೇಲ್ ಎಂಬವರ ಮಗಳಾಗಿದ್ದು ಕುಟಂಬಸ್ಥರು ಸತ್ಸಂಗದಲ್ಲಿ ಭಾಗವಹಿಸಲು ವಾಸೈ ರೈಲ್ವೆ ನಿಲ್ದಾಣಕ್ಕೆ ಬಂದಾಗ ಕಾಣೆಯಾಗಿದ್ದಳು. ಕುಟುಂಬಸ್ಥರು ಈಗ ಮುಂಬೈಗೆ ಬಂದಿದ್ದು, ಯುವತಿಯನ್ನ ಅವರಿಗೆ ಒಪ್ಪಿಸಲಾಗಿದೆ ಎಂದು ಪವಾರ್ ಹೇಳಿದ್ರು.