Tag: ಸತ್ಯೇಂದ್ರ ಜೈನ್

  • ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‍ಗೆ ಕೊರೊನಾ ಪಾಸಿಟಿವ್

    ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‍ಗೆ ಕೊರೊನಾ ಪಾಸಿಟಿವ್

    – ಎಎಪಿ ಶಾಸಕಿ ಅತಿಶಿಗೂ ಸೋಂಕು

    ನವದೆಹಲಿ: ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಇಂದು ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ತೀವ್ರ ಜ್ವರದಿಂದ ಬಳಲುತ್ತಿದ್ದ 55 ವರ್ಷದ ಸಚಿವರನ್ನು ಮಂಗಳವಾರ ಮುಂಜಾನೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಆರ್‍ಜಿಎಸ್‍ಎಸ್‍ಹೆಚ್)ಗೆ ಕರೆತರಲಾಗಿತ್ತು. ಅಲ್ಲದೆ ನಿನ್ನೆ ಬೆಳಗ್ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರ ವರದಿಯಲ್ಲಿ ಕೊರೊನಾ ನೆಗೆಟಿವ್ ಅಂತ ಬಂದಿತ್ತು.

    ಆದರೆ ಸಚಿವರಿಗೆ ಜ್ವರ ಕಡಿಯಾಗದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಆಗಿ 24 ಗಂಟೆಯ ನಂತರ ಇಂದು ಮತ್ತೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸಚಿವರ ಆರೋಗ್ಯ ಸ್ಥಿರವಾಗಿದ್ದು, ಆಕ್ಸಿಜನ್ ಸಹಾಯ ನೀಡಲಾಗಿದೆ ಎಂದು ಆರ್‍ಜಿಎಸ್‍ಎಸ್‍ಹೆಚ್ ನ ವೈದ್ಯರು ಹೇಳಿದ್ದಾರೆ.

    ಭಾನುವಾರ ಸತ್ಯೇಂದರ್ ಜೈನ್ ಅವರು ಕೇಂದ್ರ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಅರವಿಂದ್ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ವೈರಸ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅಂದರೆ ಸೋಮವಾರ ಜ್ವರ ಹಾಗೂ ಉಸಿರಾಟದ ತೊಂದರೆ ಕಂಡುಬಂದಿದ್ದರಿಂದ ಮುಂಗಳವಾರ ಮುಂಜಾನೆ ಜೈನ್ ಅವರು ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದರು.

    ಇತ್ತ ದೆಹಲಿಯ ಎಎಪಿ ಶಾಸಕಿ ಅತಿಶಿ(39) ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅತಿಶಿಗೆ ಮಂಗಳವಾರ ಕಫ ಹಾಗೂ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಟೆಸ್ಟ್‍ಗೆ ಕಳುಹಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಪಾಸಿಟಿವ್ ಇರುವುದು ದೃಢಪಟ್ಟಿದೆ. ಸದ್ಯ ಅವರನ್ನು ಹೋಂಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

    ಅತಿಶಿ ಕೊರೊನಾ ವೈರಸ್ ಕಾಣಿಸಿಕೊಂಡು ಮೂರನೇ ಶಾಸಕಿಯಾಗಿದ್ದಾರೆ. ಈ ಹಿಂದೆ ತಮ್ಮ ಪಕ್ಷದ ವಿಶೇಷ್ ರವಿ ಹಾಗೂ ರಾಜ್ ಕುಮಾರ್ ಆನಂದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

    ಇಂದು ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರು ಆದಷ್ಟು ಬೇಗ ಕೊರೊನಾ ವೈರಸ್ ಮಹಾಮಾರಿಯಿಂದ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಎಕಯಿದೆ ಎಂದು ಬರೆದುಕೊಂಡಿದ್ದಾರೆ.

  • ದೆಹಲಿ ಅಗ್ನಿ ಅವಘಡ- 11 ಜನರ ಜೀವ ಉಳಿಸಿದ ಫೈರ್ ಮ್ಯಾನ್

    ದೆಹಲಿ ಅಗ್ನಿ ಅವಘಡ- 11 ಜನರ ಜೀವ ಉಳಿಸಿದ ಫೈರ್ ಮ್ಯಾನ್

    – ಗೃಹ ಸಚಿವರಾದಿಯಾಗಿ ಹಲವರಿಂದ ಮೆಚ್ಚುಗೆ

    ನವದೆಹಲಿ: ನಗರದ ಕೃಷಿ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 43 ಜನ ಸಾವನ್ನಪ್ಪಿದ್ದು, ಈ ನಡುವೆಯೇ ಬೆಂಕಿಯ ಕೆನ್ನಾಲೆಯಿಂದ 11 ಜನರನ್ನು ರಕ್ಷಿಸುವ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿಯೊಬ್ಬರು ಹೀರೋ ಆಗಿದ್ದಾರೆ.

    ಬೆಂಕಿ ಹೊತ್ತಿಕೊಂಡ ಕಟ್ಟಡಕ್ಕೆ ಮೊದಲು ಪ್ರವೇಶಿಸಿ ರಕ್ಷಣಾ ಕಾರ್ಯ ನಡೆಸಿ, ಅಗ್ನಿಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ತಮ್ಮ ಶಕ್ತಿ ಮೀರಿ ಕಾರ್ಯನಿರ್ವಹಿಸುವ ಮೂಲಕ 11 ಜನರನ್ನು ರಕ್ಷಿಸಿದ್ದಾರೆ. ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಉತ್ತರ ದೆಹಲಿಯ ಅನಾಜ್ ಮಂಡಿಯ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದ್ದು, ಬೃಹತ್ ಬೆಂಕಿಯನ್ನು ಕಂಡು ರಕ್ಷಣಾ ಕಾರ್ಯಕ್ಕೆ ಇಳಿಯಲು ಬಹುತೇಕ ಅಗ್ನಿಶಾಮಕ ಸಿಬ್ಬಂದಿ ಆರಂಭದಲ್ಲಿ ಹಿಂದೇಟು ಹಾಕಿದ್ದರು. ಆದರೆ ಯಾವುದನ್ನೂ ಲೆಕ್ಕಿಸದೆ ಬೆಂಕಿ ಹೊತ್ತಿಕೊಂಡ ಕಟ್ಟಡಕ್ಕೆ ಪ್ರವೇಶಿಸಿ ರಾಜೇಶ್ ಶುಕ್ಲಾ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಶುಕ್ಲಾ ಸೇರಿದಂತೆ ಅನೇಕ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    11 ಜನರನ್ನು ರಕ್ಷಿಸಿದ ಹೀರೋ ಶುಕ್ಲಾ ಅವರಿಗೂ ಸಹ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಲು ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಎಲ್‍ಎನ್‍ಜೆಪಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಶುಕ್ಲಾ ಅವರು ಮೊದಲು ಕಟ್ಟಡದೊಳಗೆ ಪ್ರವೇಶಿಸಿ 11 ಜನರನ್ನು ರಕ್ಷಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೇ ನಿಜವಾದ ಹೀರೋ ಎಂದು ಸಂಬೋಧಿಸಿದ್ದಾರೆ.

    ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಶುಕ್ಲಾ ಅವರ ಫೋಟೋವನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ನಿಜವಾದ ಹೀರೋ. ಬೆಂಕಿ ವ್ಯಾಪಿಸಿದ ಕಟ್ಟಡದೊಳಗೆ ಮೊದಲು ಪ್ರವೇಶಿಸಿ ಕಾರ್ಯಾಚರಣೆ ಪ್ರಾರಂಭಿಸುವ ಮೂಲಕ 11 ಜೀವಗಳನ್ನು ಉಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗುವವರೆಗೂ ಪ್ರಯತ್ನ ಬಿಡದೆ ಕಾರ್ಯಾಚರಣೆ ನಡೆಸಿದ್ದಾರೆ. ಈ ಧೈರ್ಯಶಾಲಿ ನಾಯಕನಿಗೊಂದು ಸೆಲ್ಯೂಟ್ ಎಂದು ಬರೆದುಕೊಂಡಿದ್ದಾರೆ.

    ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕಟ್ಟಡಕ್ಕೆ ಬೆಳಗ್ಗೆ 5.22ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ 43 ಜನ ಸಾವನ್ನಪ್ಪಿದ್ದಾರೆ. ಫ್ಯಾಕ್ಟರಿಯೊಳಗೆ ಕಾರ್ಮಿಕರು ಮಲಗಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ತುಂಬಾ ಸಾವು ನೋವು ಸಂಭವಿಸಿದೆ. ಶಾರ್ಟ್ ಸಕ್ರ್ಯೂಟಿನಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

    ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.

    ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.