Tag: ಸತ್ಯಪಾಲ್ ಸಿಂಗ್

  • ಒವೈಸಿ ವಿರುದ್ಧ ಗುಡುಗಿದ ಶಾ – ಲೋಕಸಭೆಯಲ್ಲಿ ಎನ್‍ಐಎ ಮಸೂದೆ ಪಾಸ್

    ಒವೈಸಿ ವಿರುದ್ಧ ಗುಡುಗಿದ ಶಾ – ಲೋಕಸಭೆಯಲ್ಲಿ ಎನ್‍ಐಎ ಮಸೂದೆ ಪಾಸ್

    ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಅವರ ಭಾಷಣವನ್ನು ಅಡ್ಡಿಪಡಿಸಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.

    ಇಂದು ನಡೆದ ಲೋಕಸಭಾ ಕಲಾಪದಲ್ಲಿ ಬಿಜೆಪಿಯ ಉತ್ತರ ಪ್ರದೇಶದ ಸಂಸದ ಸತ್ಯಪಾಲ್ ಸಿಂಗ್ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಲ ತುಂಬಲು ತಂದಿರುವ ಮಸೂದೆಯ ಬಗ್ಗೆ ಮಾತನಾಡುತ್ತಿರುವಾಗ, ಹೈದರಾಬಾದಿನ ಸಂಸದ ಒವೈಸಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ಸತ್ಯಪಾಲ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.

    ಅಲ್ಲದೇ ಓವೈಸಿ, ಸತ್ಯಪಾಲ್ ಸಿಂಗ್ ಅವರು ಮಸೂದೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸದನದಕ್ಕೆ ಸಲ್ಲಿಸಿ ನಂತರ ಅವರು ಈ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಈ ಸಮಯದಲ್ಲಿ ಕೋಪಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಲ್ಪ ಸತ್ಯಪಾಲ್ ಸಿಂಗ್ ಹೇಳುವುದನ್ನು ತಾಳ್ಮೆಯಿಂದ ಕೇಳಿ ಎಂದು ಹೇಳಿದರು.

    ಅಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಸದಸ್ಯರ ಭಾಷಣದ ವೇಳೆ ಯಾವುದೇ ರೀತಿಯ ತೊಂದರೆ ನೀಡಲಿಲ್ಲ. ಆದ್ದರಿಂದ ಪ್ರತಿಪಕ್ಷದ ಸದಸ್ಯರು ಕೂಡ ಅದೇ ರೀತಿ ನಾವು ಮಾಡುವ ಭಾಷಣವನ್ನು ತಾಳ್ಮೆಯಿಂದ ಕೇಳಬೇಕು ಎಂದು ಹೇಳಿದರು. ಈ ಸಮಯದಲ್ಲಿ ಒವೈಸಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು ಕೇಳಿಸಿಕೊಳ್ಳುವ ತಾಳ್ಮೆ ಕಲಿತುಕೊಳ್ಳಿ ಒವೈಸಿ ಸಾಬ್ ಎಂದು ಹೇಳಿದರು.

    ಇದಕ್ಕೆ ಆಕ್ರೋಶಗೊಂಡು ಉತ್ತರಿಸಿದ ಒವೈಸಿ, ಅಮಿತ್ ಶಾ ಅವರು ನನಗೆ ಬೆರಳು ತೋರಿಸಬಾರದು. ಅಮಿತ್ ಶಾ ಅವರ ಮಾತಿಗೆ ನಾವು ಹೆದರಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಸತ್ಯಪಾಲ್ ಅವರ ಮಾತಿಗೆ ಅಡ್ಡಿ ಪಡಿಸುತ್ತಿಲ್ಲ ಬದಲಿಗೆ ಅವರನ್ನು ಸಾಕ್ಷಿ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.

    https://twitter.com/ShobhaBJP/status/1150747222062952448

    ಇದಕ್ಕೆ ಉತ್ತರಿಸಿದ ಅಮಿತ್ ಶಾ ಅವರು ನಾವು ಯಾರನ್ನು ಹೆದರಿಸುವ ಕೆಲಸ ಇಲ್ಲಿ ಮಾಡುತ್ತಿಲ್ಲ. ನಮ್ಮ ಸದಸ್ಯರು ಹೇಳುವ ಮಾತುಗಳನ್ನು ಕೇಳುವ ತಾಳ್ಮೆ ಇರಬೇಕು ಎಂದು ಹೇಳುತ್ತಿದ್ದೇವೆ. ನಿಮ್ಮ ಮನಸ್ಸಿನಲ್ಲಿ ಭಯ ಇದ್ದಾಗ ನಾವು ಏನು ಮಾಡಲು ಆಗುವುದಿಲ್ಲ ಎಂದು ಹೇಳಿ ತಿರುಗೇಟು ನೀಡಿದರು.

    ಮಸೂದೆಯಲ್ಲಿ ಏನಿದೆ?
    ಭಾರತ ಮತ್ತು ವಿದೇಶಗಳಲ್ಲಿನ ಭಯೋತ್ಪಾದಕ ಪ್ರಕರಣಗಳ ತನಿಖೆಗಾಗಿ ಎನ್‍ಐಎಗೆ ಹೆಚ್ಚಿನ ಶಕ್ತಿ ನೀಡುವ ನಿಟ್ಟಿನಲ್ಲಿ ಇಂದು ಲೋಕಸಭೆ ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆಯನ್ನು ಪಾಸ್ ಮಾಡಿದೆ. ಮಸೂದೆಯ ಪರ 278 ಮಂದಿ ಮತ ಹಾಕಿದರೆ 6 ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

    ಈ ಮಸೂದೆ ರಾಜ್ಯಸಭೆಯಲ್ಲೂ ಪಾಸಾಗಿ ಕಾಯ್ದೆಯಾಗಿ ಬಂದರೆ ಭದ್ರತೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇವಲ ಭಾರತ ಮಾತ್ರವಲ್ಲದೇ ಹೊರದೇಶಕ್ಕೂ ಹೋಗಿ ತನಿಖೆ ಮಾಡುಬಹುದಾಗಿದೆ. ಈ ತಿದ್ದುಪಡಿಯ ಪ್ರಕಾರ ಎನ್‍ಐಎ ತನಿಖಾ ಸಂಸ್ಥೆ ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳಸಾಗಣಿಕೆ ಪ್ರಕರಣಗಳನ್ನು ಹೊರದೇಶಗಳಿಗೂ ಹೋಗಿ ಭೇದಿಸುವ ಶಕ್ತಿಯನ್ನು ನೀಡಲಾಗಿದೆ. ಇದಕ್ಕೂ ಮೊದಲು ಭಾರತದಲ್ಲಿ ಅಪರಾಧ ಮಾಡಿ ಆರೋಪಿ ವಿದೇಶಕ್ಕೆ ಪಲಾಯನ ಮಾಡಿದರೆ ಎನ್‍ಐಎಗೆ ವಿದೇಶಕ್ಕೆ ಹೋಗಿ ತನಿಖೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಈ ಮಸೂದೆಯಿಂದ ಎನ್‍ಐಎಗೆ ಹೊಸ ಶಕ್ತಿ ಬಂದಂತೆ ಆಗಿದೆ.

    ವಿದೇಶಗಳಲ್ಲಿನ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳ ಮೇಲಿನ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡುವ ಅಂಶ ಈ ಮಸೂದೆಯಲ್ಲಿದೆ.

    2009 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಈ ಪ್ರಕರಣ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ ಎನ್‍ಐಎಯನ್ನು ಆರಂಭಿಸಿತ್ತು.

  • ಕಲ್ಯಾಣ ಮಂಟಪಕ್ಕೆ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದ ಹುಡ್ಗಿಯನ್ನ ಯಾರಾದ್ರು ಮದ್ವೆ ಆಗ್ತಾರಾ: ಕೇಂದ್ರ ಸಚಿವ

    ಕಲ್ಯಾಣ ಮಂಟಪಕ್ಕೆ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದ ಹುಡ್ಗಿಯನ್ನ ಯಾರಾದ್ರು ಮದ್ವೆ ಆಗ್ತಾರಾ: ಕೇಂದ್ರ ಸಚಿವ

    ಲಕ್ನೋ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಮದುವೆ ಮಂಟಪಕ್ಕೆ ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಲ್ಲಿ ಯಾವ ಹುಡುಗನೂ ಆಕೆಯನ್ನು ಮದುವೆಯಾಗಲು ಒಪ್ಪಲ್ಲ ಅಂತ ಹೇಳಿದ್ದಾರೆ.

    ಗೊರಖ್ ಪುರದ ಮಹರಾಣಾ ಪ್ರತಾಪ್ ಶಿಕ್ಷಾ ಪರಿಷದ್ ನಲ್ಲಿ ನಡೆದ ಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಭಾಷಣದ ವೇಳೆ ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡುವ ಭರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಯಾರಾದರೂ ದೇವಾಲಯದ ಪೂಜಾರಿಗೆ ಪ್ಯಾಂಟ್ ಧರಿಸಿ ಪೂಜೆ ಮಾಡು ಎಂದರೆ ಜನರು ಆತನನ್ನು ಹೇಗೆ ಪೂಜಾರಿಯಾಗಿ ನೋಡುವುದಿಲ್ಲವೋ ಅದೇ ರೀತಿಯಾಗಿ ಮದುವೆ ಮಂಟಪಕ್ಕೆ ಜೀನ್ಸ್ ಧರಿಸಿ ಹುಡುಗಿ ಬಂದರೆ ಯಾಕೆಯನ್ನು ಮದುವೆಯಾಗಲು ಯಾರಾದರೂ ಮುಂದೆ ಬರುತ್ತಾರಾ ಎಂದು ಪ್ರಶ್ನಿಸಿದ್ದಾರೆ.

    ಸಚಿವರು ಈ ಹೇಳಿಕೆ ನೀಡಿದ ಸಂದರ್ಭದಲ್ಲಿ ವೇದಿಕೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದರು.