Tag: ಸತೀಶ್ ಸೈಲ್

  • ಬೇಲೇಕೇರಿ ಅದಿರು ನಾಪತ್ತೆ ಕೇಸ್‌ – ನಾಳೆ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ಗೆ ಶಿಕ್ಷೆಯ ಪ್ರಮಾಣ ಪ್ರಕಟ

    ಬೇಲೇಕೇರಿ ಅದಿರು ನಾಪತ್ತೆ ಕೇಸ್‌ – ನಾಳೆ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ಗೆ ಶಿಕ್ಷೆಯ ಪ್ರಮಾಣ ಪ್ರಕಟ

    ಬೆಂಗಳೂರು: ಬೆಲೇಕೇರಿ ಬಂದರಿನಿಂದ (Belekeri Port) ಅಕ್ರಮವಾಗಿ ಅದಿರು ರಫ್ತು (llegal Export of Iron Ore) ಪ್ರಕರಣಕ್ಕೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ದೋಷಿಯಾಗಿದ್ದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ (Satish Sail) ಶನಿವಾರ ಕೋರ್ಟ್‌ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

    ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ (Special Courts for MP/MLA) ನ್ಯಾಯಾಧೀಶ ಗಜಾನನ ಭಟ್‌ ಶುಕ್ರವಾರ ಶಿಕ್ಷೆ ಪ್ರಮಾಣದ ಅರ್ಜಿಯನ್ನು ವಿಚಾರಣೆ ನಡೆಸಿ ಶನಿವಾರ ಶಿಕ್ಷೆಯನ್ನು ಪ್ರಕಟಿಸುವುದಾಗಿ ತಿಳಿಸಿದರು.

    ಇಂದು ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ ಅವರು, 3100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆ ಮಾಡಿದ್ದಾರೆ. ಹೀಗಾಗಿ ಆರೋಪಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ಗರಿಷ್ಠ ದಂಡ ವಿಧಿಸುವಂತೆ ಮನವಿ ಮಾಡಿದರು.

    ಸತೀಶ್ ಸೈಲ್ ಪರ ವಕೀಲ ಮೂರ್ತಿ ಡಿ ನಾಯ್ಕ್ ಅವರು, ಶಾಸಕ ಸತೀಶ್ ಸೈಲ್ ಗೆ ಅನಾರೋಗ್ಯ ಇದೆ. ಸದ್ಯ ಸತೀಶ್ ಸೈಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯ ಕಾರಣದಿಂದ ಬೇಲ್ ಕೂಡ ಪಡೆದಿದ್ದರು. ಹೀಗಾಗಿ ಕನಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಸತೀಶ್‌ ಸೈಲ್‌ ಆರೋಗ್ಯಕ್ಕೆ ಸಂಬಂಧಿಸಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು.

    ಗುರುವಾರ ಸತೀಶ್‌ ಸೈಲ್‌ ಅವರನ್ನು ಕಸ್ಟಡಿಗೆ ಪಡೆಯದಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಒಮ್ಮೆ ತೀರ್ಪು ನೀಡಿದ ಮೇಲೆ ಇದಕ್ಕೆ ಅವಕಾಶ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ‌Congress MLA; ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಸತೀಶ್ ಸೈಲ್ ದೋಷಿ – ಏನಿದು ಪ್ರಕರಣ?

    ಈ ಬೆನ್ನಲ್ಲೇ ನ್ಯಾಯಾಲಯದಲ್ಲಿ ಹಾಜರಿದ್ದ ಶಾಸಕ ಸತೀಶ್ ಸೈಲ್, ಅರಣ್ಯಾಧಿಕಾರಿ ಮಹೇಶ್ ಬಿಳಿಯೆ, ಚೇತನ್ ಷಾ, ಸೋಮಶೇಖರ್, ಜನಾರ್ದನ ರೆಡ್ಡಿಯ ಆಪ್ತ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಕೆವಿ ಗೋವಿಂದರಾಜುನನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದರು.

    2009-10ರ ನಡುವೆ ನಡೆದಿದ್ದ ಬೆಲೆಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದ ಆರು ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ 2013ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲಿಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರೋದನ್ನು ಪತ್ತೆ ಹಚ್ಚಿತ್ತು. 2012ರಲ್ಲಿ ಸೈಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಬಿಐ, 2013ರಲ್ಲಿ ಬಂಧಿಸಿತ್ತು. ಆಗ ಸತೀಶ್ ಸೈಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಲ್ಲಿ ಇದ್ದರು. ವಿಶೇಷ ಏನೆಂದರೆ ಆಗಲೂ ಕೂಡ ಸತೀಶ್ ಸೈಲ್ ಶಾಸಕರಾಗಿದ್ದರು.

     

  • ‌Congress MLA; ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಸತೀಶ್ ಸೈಲ್ ದೋಷಿ – ಏನಿದು ಪ್ರಕರಣ?

    ‌Congress MLA; ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಸತೀಶ್ ಸೈಲ್ ದೋಷಿ – ಏನಿದು ಪ್ರಕರಣ?

    ಕಾರವಾರ: ರಾಜ್ಯದಲ್ಲಿ 2010 ರಲ್ಲಿ ನಡೆದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

    ನಾಳೆಗೆ ಶಿಕ್ಷೆ ಪ್ರಮಾಣವನ್ನೂ ಕಾಯ್ದಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಕೋರ್ಟ್‌ನಿಂದ ಸೂಚನೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳಲ್ಲಿ ಇಂದು ಅಂತಿಮ ಆದೇಶ ಹೊರಡಿಸಲಾಗಿದೆ.

    ಸಿಬಿಐನಿಂದ ಬೇಲೆಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದ ಆಲಿಸಿ ಅಂತಿಮ ಆದೇಶವನ್ನು ಹೊರಡಿಸಿದ್ದಾರೆ.

    ಎಷ್ಟು ಆರೋಪಿಗಳು? ಎಷ್ಟು ಪ್ರಕರಣ?
    ಶಾಸಕ ಸೈಲ್‌ರನ್ನು ಮೊದಲ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ A1 ಆರೋಪಿ ಮಹೇಶ್ ಬಿಳಿಯಾ, A2 ಆರೋಪಿ ಸತೀಶ್ ಸೈಲ್, A3 ಇವರಿಗೆ ಸೇರಿದ ಕಂಪನಿ.

    ಎರಡನೇ ಪ್ರಕರಣದಲ್ಲಿ A1 ಆರೋಪಿ ಮಹೇಶ್ ಬಿಳಿಯಾ, A2 ಚೇತನ್ ಷಾ, A3 ಆರೋಪಿ ಸತೀಶ್ ಸೈಲ್.

    ಮೂರನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯ, A2 ಆರೋಪಿ ಸೋಮಶೇಖರ್, A3 ಆರೋಪಿ ಸತೀಶ್ ಸೈಲ್.

    ನಾಲ್ಕನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯೇ, A2 ಸ್ವಸ್ತಿಕ್ ನಾಗರಾಜ್, A3 KVN ಗೋವಿಂದರಾಜು, A4 ಸತೀಶ್ ಸೈಲ್.

    ಐದನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯೇ, A2 ಮಹೇಶ್ ಕುಮಾರ್ ಕೆ, A3 ಸತೀಶ್ ಸೈಲ್.

    ಆರನೇ ಪ್ರಕರಣದಲ್ಲಿ A1 ಮಹೇಶ್ ಬಿಳಿಯೇ, A2 ಪ್ರೇಮಚಂದ್ ಗರ್ಗ, A3 ಸುಶೀಲ್ ಕುಮಾರ್ ವಲೇಚ, A4 ಸತೀಶ್ ಸೈಲ್, A5 ರಾಜ್ ಕುಮಾರ್.

    ಶಾಸಕ ಸತೀಶ್ ಸೈಲ್, ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಮಹೇಶ್ ಬಿಳೆಯಿ, ಶಾಸಕ ಸತೀಶ್ ಸೇರಿ ಎಲ್ಲಾ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.

    ಸೈಲ್ ಮೇಲಿದ್ದ ಪ್ರಕರಣ ಏನು?
    ಶಾಸಕ ಸತೀಶ್ ಸೈಲ್ ಮಾಲೀಕತ್ವದ ಕಂಪನಿ ವಿರುದ್ಧ 2013ರ ಸೆ.13 ರಂದು ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2009ರ ಆರಂಭದಿಂದ 2010 ರ ಮೇ ತಿಂಗಳ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಕುರಿತು ತನಿಖೆ ಆರಂಭಿಸಲಾಗಿತ್ತು.

    ಈ ಸಮಯದಲ್ಲೇ ಸಿಬಿಐ ದಾಖಲಿಸಿದ್ದ ಐದು ಪ್ರತ್ಯೇಕ ಎಫ್‌ಐಆರ್‌ಗಳ ಪೈಕಿ ಶಾಸಕ ಸತೀಶ್ ಸೈಲ್ ಮಾಲೀಕತ್ವ ಹೊಂದಿರುವ ‘ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ.’ ಪ್ರಮುಖ ಸ್ಥಾನ ಪಡೆದುಕೊಂಡಿದ್ದು. ಆರ್‌ಸಿ 16 ‘ಎ’ ಹೆಸರಿನಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್, ‘ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ’ ಎಂದು ತಿಳಿಸಿತ್ತು.

    2009ರಿಂದ 2010ರ ಮೇ ತಿಂಗಳವರೆಗೆ ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರು, 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.

    ಇಷ್ಟು ಪ್ರಮಾಣ ಅದಿರುವು ರಫ್ತಾಗಿದ್ದರೂ, ಕೇವಲ 38.22 ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರಿಗೆ ಮಾತ್ರವೇ ಅದಿರು ಕಳುಹಿಸಲು ಪರವಾನಗಿ (ಎಂಡಿಪಿ)ಯನ್ನು ಪಡೆಯಲಾಗಿತ್ತು. ಒಟ್ಟಾರೆ ಸುಮಾರು 50 ಲಕ್ಷ ಮೆಟ್ರಿಕ್‌ನಷ್ಟು ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿತ್ತು ಎಂಬುದನ್ನು ತನಿಖೆ ವೇಳೆ ಕಂಡುಕೊಳ್ಳಲಾಗಿತ್ತು.

    ಹೀಗೆ ರಫ್ತಾಗಿರುವ ಅದಿರನಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳುಹಿಸಿರುವುದು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಎಂಬುದು ಆರೋಪ. ಜುಂಜುನ್‌ಬೈಲ್ ಸ್ಟಾಕ್‌ಯಾರ್ಡ್ ಸೇರಿದಂತೆ ಇತರೆ ಅದಿರು ಸಾಗಣೆದಾರರ ಜತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ನಿಕಟ ವ್ಯವಹಾರ ನಡೆಸಿತ್ತು ಎಂಬುದಕ್ಕೆ ಸಿಬಿಐ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕಿ ವರದಿ ಸಲ್ಲಿಸಿತ್ತು.

    ಶಾಸಕರಾಗಿದ್ದಾಗಲೇ ಸೈಲ್ ಎರಡನೇ ಬಾರಿ ಬಂಧನ!
    ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012 ರ ಸೆ. 16 ರಂದು ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು.

    ಇದರ ನಂತರ 2013ರ ಸೆ.20 ರಂದು ಸೈಲ್ ಅವರನ್ನು ಬಂಧಿಸಿತ್ತು. ಇದರಿಂದಾಗಿ ಸೈಲ್ ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಬೇಕಾಯಿತು. ಅದರ ನಂತರ 2014ರ ಡಿ.16 ಕ್ಕೆ ಜಾಮೀನು ಪಡೆದು ಹೊರಬಂದಿದ್ದರು.

    ನಂತರ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋತಿದ್ದರು. ಈ ಬಾರಿಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕಾರವಾರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದರು.

  • ಕಾಂಗ್ರೆಸ್ ಶಾಸಕನ ಅಪ್ಪಿ ಗೆಲುವಿಗೆ ಶುಭಹಾರೈಸಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ – ಗೌಪ್ಯ ಸಭೆ!

    ಕಾಂಗ್ರೆಸ್ ಶಾಸಕನ ಅಪ್ಪಿ ಗೆಲುವಿಗೆ ಶುಭಹಾರೈಸಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ – ಗೌಪ್ಯ ಸಭೆ!

    ಕಾರವಾರ: ಕಾಂಗ್ರೆಸ್ ಶಾಸಕನೊಂದಿಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಗೌಪ್ಯ ಸಭೆ ನಡೆಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಹಲವು ತಿಂಗಳಿನಿಂದ ಪಕ್ಷ ಹಾಗೂ ಕ್ಷೇತ್ರದ ಕಾರ್ಯಚಟುವಟಿಕೆಯಿಂದ ದೂರ ಉಳಿದಿದ್ದ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಗೆ ಆಗಮಿಸಿದ್ದರು.

    ಈ ವೇಳೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ರನ್ನು (Satish Sail) ಅಪ್ಪಿಕೊಂಡು ಗೆಲುವಿಗಾಗಿ ಶುಭಹಾರೈಸಿ ಬೆನ್ನು ತಟ್ಟಿದರು. ನಂತರ ತಮ್ಮದೇ ಕಾರಿನಲ್ಲಿ ಕಾರವಾರದ ಪ್ರವಾಸಿ ಮಂದಿರಕ್ಕೆ ಕರೆದೊಯ್ದು ಅವರೊಂದಿಗೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗಿಲ್ಲ ಕೇಂದ್ರದ ಅಕ್ಕಿ – ಆಶಾಭಾವನೆಯಿಂದ ಬಂದ ನಮಗೆ ಎರಡನೇ ಬಾರಿ ನಿರಾಸೆ: ಮುನಿಯಪ್ಪ

    ಈ ಹಿಂದೆ ಬಿಜೆಪಿ ಸೇರುವಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಆಹ್ವಾನವನ್ನು ಹೆಗಡೆ ನೀಡಿದ್ದರು. ಆದರೆ ಪಕ್ಷದ ವರಿಷ್ಠರ ಕಾರಣದಿಂದ ಸೈಲ್ ಬಿಜೆಪಿಗೆ ಸೇರದಂತಾಗಿತ್ತು. ಇನ್ನು ಸೈಲ್ ಕೂಡ ಚುನಾವಣಾ ಸಂದರ್ಭದಲ್ಲಿ ಪಕ್ಷದ ಯಾವ ನಾಯಕರನ್ನು ಕರೆಸದೇ ಹಾಗೂ ಪಕ್ಷದ ಯಾವುದೇ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸದೇ ಪಕ್ಷದಲ್ಲೇ ಅಂತರ ಕಾಯ್ದುಕೊಂಡಿದ್ದರು.

    2023ರ ವಿಧಾನಸಭಾ ಚುನಾವಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರವಾರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಾರದೇ ತಟಸ್ಥವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಸೈಲ್ 2000 ಮತಗಳ ಅಂತರದಲ್ಲಿ ಗೆಲ್ಲುವಂತೆ ಮಾಡಿದ್ದರು. ಇದೀಗ ಸೈಲ್ ಭೇಟಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿದ ಒತ್ತಡ; ಸಾರ್ವಜನಿಕರ ಎದುರೇ ಆಧಾರ್ ಕೇಂದ್ರದ ಸಿಬ್ಬಂದಿ ಕಣ್ಣೀರು

  • ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಐ.ಆರ್.ಬಿ ಕಂಪನಿ ಚತುಷ್ಪತ ರಸ್ತೆ ಕಾಮಗಾರಿ ಅಪೂರ್ಣ ವಾಗಿರುವಾಗಲೇ ಟೋಲ್ ನಿರ್ಮಾಣ ಮಾಡಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಂದು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ನಿನ್ನೆದಿನ ಐ.ಆರ್.ಬಿ ಕಂಪನಿ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿದ್ದೇನೆ. ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ತಪ್ಪು, ಮಾಜಾಳಿಯಿಂದ ಅಂಕೋಲದ ವರೆಗೆ ಶೇಕಡ 50 ರಷ್ಟು ಕಾಮಗಾರಿ ಪೂರ್ಣವಾಗಿಲ್ಲ ಆದರೂ ಅಂಕೋಲದ ಬೇಲಿಕೇರಿ ಬಳಿ ಶುಲ್ಕ ವಸೂಲಿ ಮಾಡುತಿದ್ದಾರೆ, ಅರಗ, ಅಮದಳ್ಳಿ, ಚಂಡಯಾ, ಹಟ್ಟಿಕೇರಿ ಬಿಡ್ಜ್ ಗಳು, ರಸ್ತೆಗಳೇ ಆಗಿಲ್ಲ. ಹೀಗಿರುವಾಗ ಹೇಗೆ ಶುಲ್ಕ ವಸೂಲಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಕರಾವಳಿ ಭಾಗದಲ್ಲಿನ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಲೇ ಬೇಕು ಈ ಹಿಂದೆ ಮಾಜಾಳಿ ನಂತರ ಗೋವಾ ಗಡಿಯಲ್ಲಿ ಗೋವಾ ಸರ್ಕಾರದ ಟೋಲ್ ಗೆ ಕಾರವಾರದ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಬೇಕೆಂದು ಗೋವಾದ ಅಂದಿನ ಮುಖ್ಯಮಂತ್ರಿ ಪಾಲೇಕರ್ ರವರಿಗೆ ನಾನು ಶಾಸಕನಾಗಿದ್ದಾಗ ವಿನಾಯ್ತಿ ನೀಡಬೇಕೆಂದು ಕೇಳಿದ್ದೆ ಆಗ ಕಾರವಾರದ ವಾಹನಗಳಿಗೆ ವಿನಾಯ್ತಿ ನೀಡಿದ್ದರು. ಆದರೇ ನಮ್ಮಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಿಲ್ಲ, ಕೇಳಿದರೆ ವೈಟ್ ಬೋರ್ಡ ಗೆ ಮಾತ್ರ ನೀಡುತ್ತೇವೆ ಎಂದು ಕಂಪನಿಯವರು ಹೇಳುತ್ತಾರೆ. ಇದು ತಪ್ಪು ಎಲ್ಲಾ ವಾಹನಗಳಿಗೆ ವಿನಾಯ್ತಿ ನೀಡಬೇಕು, ಕಾಮಗಾರಿ ಪೂರ್ಣವಾಗದೇ ಶುಲ್ಕ ವಸೂಲಿ ಮಾಡುತಿದ್ದಾರೆ. ನಾನು ಮಾಜಾಳಿಯಿಂದ ಅಂಕೋಲದ ವರೆಗೆ ರಸ್ತೆ ಸರ್ವೆ ಮಾಡಿಸಿ ಐ.ಆರ್.ಬಿ ಕಂಪನಿ ವಿರುದ್ಧ ಕೋರ್ಟ ನಲ್ಲಿ ದಾವೆ ಹೂಡುತ್ತೇನೆ. ಹತ್ತು ದಿನ ಸಮಯ ಕೇಳಿದ್ದಾರೆ ತೆಗೆದುಕೊಳ್ಳಲಿ ಆದರೇ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯ್ತಿ ನೀಡಲೇ ಬೇಕು ಎಂದರು.

    ಸರ್ಕಾರಿ ಬಸ್ಸುಗಳ ಮೇಲೆ ಟೋಲ್ ಶುಲ್ಕ:
    ಕಾರವಾರದಿಂದ ಅಂಕೋಲಕ್ಕೆ ಹೋಗುವ ಸ್ಥಳೀಯ ಸರ್ಕಾರಿ ಬಸ್ ಗಳಿಗೆ ಟೋಲ್ ಶುಲ್ಕದಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಮೂರು ಕಡೆ ಟೋಲ್‍ಗಳಿದ್ದು, ಕೆಎಸ್‌ಆರ್‌ಟಿಸಿಯ ಬಸ್ಸಿಗೆ ಕ್ರಮವಾಗಿ 9 ರೂ., ಸ್ಲೀಪರ್ ಗೆ 13 ರೂ., ರಾಜಹಂಸಕ್ಕೆ 10 ರೂ. ಏರಿಸಲಾಗಿದೆ. ಆದರೆ ಲೋಕಲ್ ಬಸ್ಸಿಗೆ ವಿನಾಯ್ತಿ ನೀಡಬೇಕು ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಹೊರೆ ತಪ್ಪುತ್ತದೆ. ಪ್ರತಿ ಟ್ರಿಪ್‍ಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ಬಿಡಬೇಕು. 24 ಘಂಟೆಗೆ ತೆಗೆದುಕೊಳ್ಳಬೇಕು. ಐ.ಆರ್.ಬಿ ಕಂಪನಿ ರಸ್ತೆಯಲ್ಲಿ ದರೋಡೆಗೆ ಮಾಡುತಿದ್ದಾರೆ. ಇದು ಸರಿಯಲ್ಲ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸತೀಶ್ ಸೈಲ್ ಹೇಳಿದರು.

    ಅಪಘಾತ ತಪ್ಪಿಸಲು ಬೀದಿ ದೀಪ ಅಳವಡಿಸಿ:
    ಮಾಜಾಳಿಯಿಂದ ಅಂಕೋಲ ಭಾಗದಲ್ಲಿ ಅಲ್ಲಲ್ಲಿ ಬೀದಿ ದೀಪವನ್ನು ರಸ್ತೆಯಲ್ಲಿ ಅಳವಡಿಸಲಾಗಿದೆ. ಆದರೆ ಎಲ್ಲಿ ಅವಷ್ಯಕತೆ ಇದೆಯೋ ಅಲ್ಲಿ ಅಳವಡಿಸಿಲ್ಲ. ರಸ್ತೆ ತಿರುವು, ಗ್ರಾಮಗಳು ಇರುವ ಪ್ರದೇಶಕ್ಕೆ ಕಡ್ಡಾಯವಾಗಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಇತ್ತ ರಸ್ತೆಯನ್ನು ಸಹ ಸಮರ್ಪಕವಾಗಿ ಮಾಡದೇ ಅಪಘಾತವಾಗಿ ಜನರು ಸಾಯುವಂತಾಗಿದೆ ಎಂದು ಐ.ಆರ್.ಬಿ ಕಂಪನಿ ವಿರುದ್ಧ ಸತೀಶ್ ಸೈಲ್ ಆಕ್ರೋಶ ವ್ಯಕ್ತಪಡಿಸಿದರು.

  • ವರದಿಗಾರನ ಮೇಲೆ ಹಲ್ಲೆಗೆ ಮುಂದಾದ ಮಾಜಿ ಶಾಸಕ ಸತೀಶ್ ಸೈಲ್ ಬೆಂಬಲಿಗರು!

    ವರದಿಗಾರನ ಮೇಲೆ ಹಲ್ಲೆಗೆ ಮುಂದಾದ ಮಾಜಿ ಶಾಸಕ ಸತೀಶ್ ಸೈಲ್ ಬೆಂಬಲಿಗರು!

    ಕಾರವಾರ: ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರ ಬೆಂಬಲಿಗರು ಪಬ್ಲಿಕ್ ಟಿವಿ ವರದಿಗಾರನಿಗೆ ಬೆದರಿಕೆ ಹಾಗೂ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

    ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿಯಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರು ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸರ್ಕಾರಿ ಕಚೇರಿಯನ್ನು ಬಿಟ್ಟು ಕೊಡಬೇಕಿತ್ತು. ಹೀಗಾಗಿ ಖಾಲಿ ಮಾಡುವ ವೇಳೆ ಮಾಜಿ ಶಾಸಕ ಕಚೇರಿಯಲ್ಲಿದ್ದ ವಸ್ತುಗಳನ್ನು ಕೊಂಡೊಯ್ದ ಕುರಿತು ವರದಿ ಮಾಡಲಾಗಿತ್ತು. ಇದರಿಂದ ಸಿಟ್ಟುಗೊಂಡ ಮಾಜಿ ಶಾಸಕ ತಮ್ಮ ಬೆಂಬಲಿಗರ ಮೂಲಕ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ

    ಹಲ್ಲೆಗೆ ವಿಫಲಯತ್ನ:
    ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ರವರಿಗೆ ನಿಗದಿಯಾಗಿದ್ದ ಸರ್ಕಾರಿ ಕಚೇರಿಯನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಟಾಯ್ಲೆಟ್ ಸೇರಿದಂತೆ ಕಚೇರಿಯಲ್ಲಿ ಅಳವಡಿಸಿದ್ದ ಪೈಪ್ ಬಲ್ಬ್ ಸೇರಿದಂತೆ ವಸ್ತುಗಳನ್ನು ಮಾಜಿ ಶಾಸಕ ಕೊಂಡೊಯ್ದರ ಕುರಿತು ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಕೆರಳಿದ ಮಾಜಿ ಶಾಸಕ ತಮ್ಮ ಕುಪಿತಗೊಂಡ ಮಾಜಿ ಶಾಸಕರು ಕಾರವಾರದ ನಗರಸಭಾ ಸದಸ್ಯ ವಿಠಲ್ ಸಾವಂತ್, ತನ್ನ ಬಲಗೈ ಬಂಟ ರಾಹುಲ್ ಬರ್ಕರ್ ಹಾಗೂ ಕೆಲವು ಮಹಿಳೆಯರನ್ನು ಜಿಲ್ಲಾ ಪತ್ರಿಕಾ ಭವನಕ್ಕೆ ಕರೆತಂದು, ವರದಿಗಾರ ನವೀನ್ ಸಾಗರ್ ಗೆ ಕರೆ ಮಾಡಿ ಪತ್ರಿಕಾಗೋಷ್ಠಿ ಇರುವುದಾಗಿ ಸುಳ್ಳು ಹೇಳುವ ಮೂಲಕ ಹಲ್ಲೆಗೆ ಮುಂದಾಗಿದ್ದರು. ಆದ್ರೆ ಸುದ್ದಿ ಸಂಬಂಧ ಬೇರೆಡೆ ತೆರಳಿದ್ದರಿಂದ ಭವನದಲ್ಲಿ ಶಾಸಕರ ಬೆಂಬಲಿಗರು ಗಲಾಟೆ ಮಾಡಿ ಹಲ್ಲೆ ಮಾಡುವ ಬೆದರಿಕೆಯೊಡ್ಡಿ ತೆರಳಿದ್ದಾರೆ.

    ಇನ್ನು ಈ ಕುರಿತು ಪತ್ರಿಕಾ ಭವನ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ರವರು ಪ್ರತಿಕ್ರಿಯಿಸಿದ್ದು, ಭವನಕ್ಕೆ ಬಂದು ಗಲಾಟೆ ಮಾಡಿರುವುದನ್ನು ಖಂಡಿಸಿದ್ದು ಒಂದು ಮೇಳೆ ಇದೇ ವರ್ತನೆ ಮುಂದುವರೆದರೆ ಪತ್ರಕರ್ತರು ಖಂಡಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಸುದ್ದಿಗಳು ಬಂದಾಗ ಆ ಕುರಿತು ಸ್ಪಷ್ಟನೇ ನೀಡಬೇಕೇ ಹೊರತು ಈ ರೀತಿ ಹಲ್ಲೆಗೆ ಮುಂದಾಗುವುದು ಸರಿಯಲ್ಲ ಎಂದಿದ್ದಾರೆ.

    https://www.youtube.com/watch?v=17a1EEoYLBo

  • ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

    ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

    ಕಾರವಾರ: ಒಂದೆಡೆ ಅಬ್ಬರದ ಪ್ರಚಾರ, ಸದಾ ತುಂಬಿ ತುಳುಕುತಿದ್ದ ಜನರ ಸಂತೆ, ಟೀಕೆ ಟಿಪ್ಪಣಿಗಳ ನಡುವೆ ತಾನು ಗೆಲ್ಲಬೇಕೆಂಬ ಹಂಬಲದಲ್ಲಿ ವಿಧಾನಸಭಾ ಚುನಾವಣೆಯ ರಂಗಿನ ರಣರಂಗದಲ್ಲಿ ಸದಾ ಬಿಸಿಯಾಗಿದ್ದ ಪ್ರತಿಷ್ಠಿತ ಕಣವಾದ ಕಾರವಾರ ವಿಧಾನಸಭಾ ಕ್ಷೇತ್ರದ ಮೂರು ಪಕ್ಷದ ನಾಯಕರು ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

    ಸದಾ ಜನರ ಮಧ್ಯೆ ಇರುವ ನಾಯಕರು ತಮ್ಮ ವೈಯಕ್ತಿಕ ಬದುಕಿಗೆ ಸಮಯ ಕೊಟ್ಟದ್ದು ಅಲ್ಪ ಸಮಯ. ಇದೇ ತಿಂಗಳ 15 ರಂದು ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ನಾಯಕರು ಇಂದು ತಮ್ಮ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ಅಡುಗೆ ಮಾಡಿ ಕುಟುಂಬವರಿಗೆ ಬಡಿಸಿದ್ದಾರೆ.

    ಕಳೆದ ಎರಡು ತಿಂಗಳ ಚುನಾವಣಾ ಕುರುಕ್ಷೇತ್ರಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇನ್ನು 15ನೇ ದಿನಾಂಕದಂದು ಜನರ ನಿರ್ಧಾರದ ಫಲಿತಾಂಶ ಬರಬೇಕಿದೆ. ತಾವು ಪಟ್ಟ ಶ್ರಮದ ನಿರೀಕ್ಷೆಯಲ್ಲಿ ನಾಯಕರು ಒತ್ತಡದಲ್ಲಿ ಇರೋದು ಸಹಜವಾಗಿದೆ. ತ್ರಿಕೋನ ಸ್ಪರ್ಧೆ ಇರುವ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್, ಜೆಡಿಎಸ್ ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತು ಬಿಜೆಪಿಯಿಂದ ರೂಪಾಲಿ ನಾಯ್ಕ ಸ್ಪರ್ಧಿಸಿದ್ದರು.

    ಸದ್ಯ ಇಂದು ಮತ್ತು ನಾಳೆ ಮನಸ್ಸಿನಲ್ಲಿ ಅಳುಕು ಮತ್ತು ಒತ್ತಡ ಇದ್ದರು ಮೂವರು ಅಭ್ಯರ್ಥಿಗಳು ಈ ಒತ್ತಡ ಮರೆಯಲು ಹರಸಾಹಸ ಪಡುತಿದ್ದಾರೆ. ಕಳೆದ ಎರಡು ತಿಂಗಳಿಂದ ಕ್ಷೇತ್ರ ಸುತ್ತಿ ಪ್ರಚಾರ ನಡೆಸಿ ದಣಿದಿರುವ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೋವಾಕ್ಕೆ ತೆರಳಿ ರಿಲ್ಯಾಕ್ಸ್ ಮಾಡುತ್ತಿದ್ದು, ಅವರ ಅಧಿಕೃತ ನಿವಾಸ ಜನರಿಲ್ಲದೇ ಬಿಕೋ ಎನ್ನುತಿತ್ತು. ಒತ್ತಡ ಮರೆಯಲು ಜನರಿಂದ ದೂರ ವಿರಲು ಬಯಸಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಾರವಾರದ ಸೋನಾರವಾಡದಲ್ಲಿರುವ ಮನೆಯ ಮುಂಭಾಗಕ್ಕೆ ಬೀಗ ಹಾಕಿ ಒಳ ಸೇರಿದ್ದಾರೆ. ಮನೆಯ ಬಳಿ ಬಂದ ಜನರ ಸಂಪರ್ಕಕ್ಕೆ ಸಿಗಲಿಲ್ಲ.

    ಇನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ರವರ ಮಾಜಾಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಮನೆ ಕೂಡ ಯಾವುದೇ ಕಾರ್ಯಕರ್ತರ ಸದ್ದಿಲ್ಲದೇ ತಟಸ್ಥವಾಗಿತ್ತು. ಶಾಂತವಾಗಿದ್ದ ಮನೆಯಲ್ಲಿ ಸತೀಶ್ ಸೈಲ್ ಪತ್ನಿ ಕಲ್ಪನಾರೊಂದಿಗೆ ಅಡುಗೆ ಮನೆ ಸೇರಿ ಮಧ್ಯಾಹ್ನದ ಊಟಕ್ಕಾಗಿ ಚಿಕನ್ ತಯಾರಿಸಿದ್ದಾರೆ. ಅವರ ಕುಷಲೋಪರಿ ವಿಚಾರಿಸಲು ಬಂದವರಿಗೆ ತಮ್ಮ ಕೈಯಾರೆ ಟೀ ಮಾಡಿ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಸಂಸಾರಕ್ಕೆ ಹೆಚ್ಚು ಸಮಯ ಕೊಡಲಾಗುತಿಲ್ಲ. ಮಕ್ಕಳೊಂದಿಗೆ ಬೆರೆಯದೇ ಎಷ್ಟೂ ದಿನಗಳಾಗಿವೆ. ಒಂದು ದಿನವಾದರೂ ನನ್ನ ಒತ್ತಡ ಮರೆತು ಮಕ್ಕಳು ಸಂಸಾರದೊಂದಿಗೆ ಬೆರೆಯಬೇಕೆಂದು ತೀರ್ಮಾನಿಸಿ ಜಂಜಾಟದಿಂದ ರಿಲಾಕ್ಸ್ ಮಾಡುತ್ತಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ನನ್ನ ತಂದೆ ಕ್ಯಾನ್ಸರ್ ನಿಂದ ತೀರಿಕೊಂಡರು. ಆಗ ಅವರಿಗೆ ಕ್ಯಾನ್ಸರ್ ಇದೇ ಎಂದು ತಿಳಿದುಕೊಳ್ಳವ ವೇಳೆ ಅವರು ನಮ್ಮನ್ನು ಅಗಲಿದ್ದರು. ಕಾರವಾರ ಕ್ಷೇತ್ರದಲ್ಲಿ ಕೈಗಾ ಅಣು ಸ್ಥಾವರ, ಆದಿತ್ಯ ಬಿರ್ಲಾ ಕೆಮಿಕಲ್ ಕಾರ್ಖಾನೆಗಳಿವೆ. ಇವುಗಳಿಂದ ಸಾಕಷ್ಟು ಜನರಿಗೆ ಕ್ಯಾನ್ಸರ್ ನಂತಹ ರೋಗಗಳು ಬಂದಿವೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ವ್ಯವಸ್ಥೆ ಸರಿಯಾಗಿ ಇಲ್ಲ. ನನ್ನ ಅವಧಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಾಡಿಸುವ ಪ್ರಯತ್ನ ಮಾಡಿದ್ದೇನೆ. ಈಗ ಅದು ಸಫಲವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕರಾದ್ರು.

    ನನ್ನ ಕ್ಷೇತ್ರದ ಜನರಿಗೆ ಉದ್ಯೋಗ ಇಲ್ಲಿಯೇ ಸಿಗುವಂತೆ ಮಾಡಬೇಕು. ಅದಕ್ಕಾಗಿ ಈ ಬಾರಿ ಚುನಾವಣಾ ಕಣದಲ್ಲಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ ಎಂದು ನಾಲ್ಕು ವರ್ಷದ ತಮ್ಮ ಸಾಧನೆಯ ಬಗ್ಗೆ ಮನದ ಮಾತು ಹಂಚಿಕೊಂಡ್ರು. ಕಾರವಾರ ಕ್ಷೇತ್ರದ ಮೂರು ಪಕ್ಷದ ಅಭ್ಯರ್ಥಿಗಳು ಇಂದು ಜನರ, ಕಾರ್ಯಕರ್ತರ ಜಂಜಾಟದಿಂದ ದೂರ ಉಳಿದು ತಮ್ಮ ದಣಿವನ್ನು ನೀಗಿಸಿಕೊಂಡಿದ್ದು, 15ರ ಅಗ್ನಿ ಪರೀಕ್ಷೆಗೆ ರಿಫ್ರೆಶ್ ಆಗುತ್ತಿದ್ದಾರೆ.

  • ಕಾರವಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸತೀಶ್ ಸೈಲ್‍ಗೆ ಬಂಧನದ ಭೀತಿ

    ಕಾರವಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸತೀಶ್ ಸೈಲ್‍ಗೆ ಬಂಧನದ ಭೀತಿ

    ಕಾರವಾರ: ಪಕ್ಷೇತರ ಶಾಸಕ, ಕಾರವಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸತೀಶ್ ಸೈಲ್‍ಗೆ ಬಂಧನದ ಭೀತಿ ಎದುರಾಗಿದೆ.

    ಅಕ್ರಮ ಅದಿರು ಸಾಗಾಣಿಕೆ ಪ್ರಕಣರದ ವಿಚಾರಣೆ ನಡೆಸುತ್ತಿರುವ ಗೋವಾ ಎಸ್‍ಐಟಿ ಸತೀಶ್ ಸೈಲ್‍ಗೆ ಇಂದು ಕೋರ್ಟ್ ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

    ಏಪ್ರಿಲ್ 9 ರಂದೇ ಎಸ್‍ಐಟಿ ನೋಟಿಸ್ ನೀಡಿದ್ರೂ ಸತೀಶ್ ಸೈಲ್ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಹೀಗಾಗಿ ಮತ್ತೆ ನೋಟಿಸ್ ಜಾರಿ ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ಗೋವಾ ಎಸ್‍ಐಟಿ ಸತೀಶ್‍ರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

    ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇಂದು ಏನ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು. ಒಂದು ವೇಳೆ, ಬಂಧನಕ್ಕೆ ಒಳಗಾದ್ರೆ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪೋದು ನಿಶ್ಚಿತ. ಹೀಗಾಗಿ ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಮತ್ತೋರ್ವ ಆಕಾಂಕ್ಷಿ ರಾಜೇಂದ್ರ ನಾಯ್ಕ್ ರನ್ನ ದೆಹಲಿಗೆ ಕರೆಸಿಕೊಂಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.