Tag: ಸಣ್ಣ ರಾಜಕೀಯ

  • ಭಾರತವೇ ಒಗ್ಗಟ್ಟಾಗಿ ಹೋರಾಡುತ್ತಿದ್ದರೆ ಕಾಂಗ್ರೆಸ್ ರಾಜಕೀಯ ಮಾಡ್ತಿದೆ – ಅಮಿತ್ ಶಾ ಕಿಡಿ

    ಭಾರತವೇ ಒಗ್ಗಟ್ಟಾಗಿ ಹೋರಾಡುತ್ತಿದ್ದರೆ ಕಾಂಗ್ರೆಸ್ ರಾಜಕೀಯ ಮಾಡ್ತಿದೆ – ಅಮಿತ್ ಶಾ ಕಿಡಿ

    ನವದೆಹಲಿ: ಕೊರೊನಾ ವೈರಸ್ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸಣ್ಣ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು, ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಆದರೆ ಮೋದಿ ಅವರು ಈ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ಪ್ಲಾನ್ ಮಾಡದೇ ಈ ರೀತಿ ತೀರ್ಮಾನವನ್ನು ಘೋಷಿಸಬಾರದು ಎಂದು ವಿರೋಧ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಆಕ್ರೋಶಗೊಂಡ ಅಮಿತ್ ಶಾ ಇಡೀ ಭಾರತವೇ ಒಟ್ಟುಗೂಡಿ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ಕಾಂಗ್ರೆಸ್ ಸಣ್ಣ ರಾಜಕೀಯ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ಪಿಎಂ ನರೇಂದ್ರ ಮೋದಿಯ ನಾಯಕತ್ವದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತದ ಪ್ರಯತ್ನವನ್ನು ದೇಶೀಯವಾಗಿ ಮತ್ತು ಜಾಗತಿಕವಾಗಿ ಶ್ಲಾಘಿಸಲಾಗುತ್ತಿದೆ. ಕೊರೊನಾವನ್ನು ಸೋಲಿಸಲು 130 ಕೋಟಿ ಭಾರತೀಯರು ಒಗ್ಗೂಡಿದ್ದಾರೆ. ಆದರೂ ಕಾಂಗ್ರೆಸ್ ತನ್ನ ಸಣ್ಣ ರಾಜಕೀಯವನ್ನು ಮಾಡುತ್ತಿದೆ. ಈ ಸಮಯದಲ್ಲಿ ಅವರು ದೇಶದ ಬಗ್ಗೆ ಯೋಚಿಸಬೇಕು ಮತ್ತು ಜನರನ್ನು ದಾರಿತಪ್ಪಿಸುವುದನ್ನು ಬಿಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಮೋದಿ ಅವರು ದೇಶದ ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದು, ಈ ಸಭೆಯಲ್ಲಿ ಮುಂದಿನ ವಾರವೂ ಕೊರೊನಾ ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಮೆಡಿಕಲ್ ಉತ್ಪನ್ನಗಳು ಯಾವುದೇ ತಡೆ ಇಲ್ಲದೇ ಶೀಘ್ರವಾಗಿ ತಲುಪಬೇಕು. ಮೆಡಿಕಲ್ ಉತ್ಪನ್ನ ತಯಾರಿಕೆಗೆ ಬೇಕಾಗಿರುವ ಕಚ್ಚಾ ವಸ್ತುಗಳು ಪೊರೈಕೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ತೀರ್ಮಾನ ಮಾಡಲಾಗಿದೆ.

    ಇಂದು ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, 21 ದಿನಗಳ ಲಾಕ್‍ಡೌನ್ ದೇಶಕ್ಕೆ ಅಗತ್ಯವಾಗಿರಬಹುದು. ಆದರೆ ಯೋಜಿತವಲ್ಲದ ರೀತಿಯಲ್ಲಿ ಇದನ್ನು ಜಾರಿಗೆ ತಂದಿರುವುದು ಭಾರತದಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರ ಜೀವನದಲ್ಲಿ ಅವ್ಯವಸ್ಥೆ ಮತ್ತು ನೋವನ್ನುಂಟು ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಇದೇ ಕಾಂಗ್ರೆಸ್ ಸಭೆಯಲ್ಲಿ ಭಾಗವಹಸಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಇಂದು ನಡೆದ ಸಭೆಯಲ್ಲಿ ನಾನು ಕೊರೊನಾ ವೈರಸ್ ಅನ್ನು ತಡೆಗಟ್ಟಲು ಭಾರತಕ್ಕೆ ಬೇಕಾದ ನಿರ್ದಿಷ್ಟ ಕಾರ್ಯತಂತ್ರದ ಬಗ್ಗೆ ಒತ್ತಿಹೇಳಿದ್ದೇನೆ. ಇದರ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.