Tag: ಸಣ್ಣ ನೀರಾವರಿ ಇಲಾಖೆ

  • ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ

    ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ 1.43 ಲಕ್ಷ ರೂ. ಮೌಲ್ಯದ ಪೀಠೋಪಕರಣ ಜಪ್ತಿ

    ಕೊಪ್ಪಳ: ಹೆಚ್ಚುವರಿ ಪರಿಹಾರ ನೀಡದ್ದಕ್ಕೆ ಕೋರ್ಟ್ ಆದೇಶದ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಪೀಠೋಪಕರಣ ಜಪ್ತಿ ಮಾಡಿರುವ ಘಟನೆ ಕೊಪ್ಪಳ (Koppal) ನಗರದ ಕಿನ್ನಾಳ ರಸ್ತೆಯಲ್ಲಿನ ಇಲಾಖೆಯಲ್ಲಿ ನಡೆದಿದೆ.

    ರೈತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪು ಪಾಲನೆ ಮಾಡದ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶದ ಹಿನ್ನೆಲೆ ರೈತರ ಪರ ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ನೊಂದ ರೈತರ ಹಾಜರಾತಿಯಲ್ಲಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.ಇದನ್ನೂ ಓದಿ: ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೇದೆ ಆತ್ಮಹತ್ಯೆ

    ನ್ಯಾಯಾಲಯದ ಸಿಬ್ಬಂದಿ 27 ಕಬ್ಬಿಣದ ಅಲ್ಮಾರ್, 13 ಕಟ್ಟಿಗೆ ಟೇಬಲ್, 3 ಕಬ್ಬಿಣದ ಟೇಬಲ್, 1 ಕಂಪ್ಯೂಟರ್ ಟೇಬಲ್, 2 ಕಬ್ಬಿಣದ ರ‍್ಯಾಕ್, 2 ಕಟ್ಟಿಗೆ ಚೇರ್, 11 ವೀಲ್ ಚೇರ್, 10 ಪ್ಲಾಸ್ಟಿಕ್ ಚೇರ್, 2 ಕಂಪ್ಯೂಟರ್ ಸೆಟ್ ಮತ್ತು 1 ಕಂಪ್ಯೂಟರ್ ಮಾನಿಟರ್ ಸೇರಿ ಸುಮಾರು 1.43 ಲಕ್ಷ ರೂ. ಅಂದಾಜು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

    ಏನಿದು ಪ್ರಕರಣ?
    ಕುಕನೂರು ತಾಲೂಕು ಡಿ.ಬಾಲಾಪೂರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯು ಜಿನುಗು ಕೆರೆ ನಿರ್ಮಾಣ ಮಾಡಿದೆ. 14 ರೈತರಿಂದ ಸರ್ಕಾರ ಕೆರೆ ನಿರ್ಮಾಣಕ್ಕೆ ಅಗತ್ಯವಾದ 26 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಳೆದ 2007ರಲ್ಲೇ ಭೂಮಿ ವಶಕ್ಕೆ ಪಡೆದು, 2012ರಲ್ಲಿ ಪ್ರತಿ ಎಕರೆಗೆ 41 ಸಾವಿರ ರೂ. ಪರಿಹಾರ ನೀಡಿದ್ದರು.

    ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟು, ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಂತರ 2022ಲ್ಲಿ ನ್ಯಾಯಾಲಯ ಎಲ್ಲ 14 ರೈತರ ಒಟ್ಟು 26 ಎಕರೆ ಪೈಕಿ ಪ್ರತಿ ಎಕರೆಗೆ 3.50 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಗಳು ಮಾತ್ರ ನ್ಯಾಯಾಲಯದ ತೀರ್ಪಿಗೆ ತಲೆಕೆಡಿಸಿಕೊಳ್ಳದೇ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿತ್ತು. ಇದರಿಂದ ರೈತರು ಕೋರ್ಟ್ಗೆ ಅಮಲ್ ಜಾರಿ ಪ್ರಕರಣ ದಾಖಲಿಸಿದ್ದು, ಪೀಠೋಪಕರಣ ಜಪ್ತಿ ಮಾಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪಿನ ಬೆನ್ನಲ್ಲೇ ಇಲಾಖೆಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.ಇದನ್ನೂ ಓದಿ: ಕೋಳಿ ಕಾಲು ಸುಡದಿದ್ದಕ್ಕೆ ಬಾಮೈದುನನ ಕೊಂದ ಬಾವ

    :

  • 8 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ದಿಢೀರ್ ಪ್ರತ್ಯಕ್ಷ!

    8 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ದಿಢೀರ್ ಪ್ರತ್ಯಕ್ಷ!

    ಕಾರವಾರ: ಸರ್ಕಾರಿ ನೌಕರರು ಎಂದರೆ ಹೀಗೂ ಇರುತ್ತಾರಾ ಎಂದು ಯಾರೂ ಎಣಿಸಿರಲೂ ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಣ್ಣ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ 8 ವರ್ಷದಿಂದ ಕೆಲಸಕ್ಕೆ ಬಾರದೇ ಸರ್ಕಾರಿ ಸಂಬಳ ಎಣಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಮುಂಡಗೋಡಿನ ಚಿಕ್ಕ ನೀರಾವರಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ ಕಣ್ಣಿ ಕರ್ತವ್ಯ ಹಾಜರಾಗದೆ ಸಂಬಳ ಪಡೆದ ಅಧಿಕಾರಿ. ಅಧಿಕಾರಿಯ ಗೈರು ಹಾಜರಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಬಂದು ಆತನಿಗೆ ನೋಟಿಸ್ ನೀಡಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದ್ದರು. ಆದ್ರೆ ಈತ ಮಾತ್ರ ಕೆಲಸಕ್ಕೆ ಚಕ್ಕರ್ ಹೊಡೆದು ಅಧಿಕಾರಿಗಳಿಗೆ 8 ವರ್ಷದಿಂದ ಯಾಮಾರಿಸಿದ್ದ. ಈ ವಿಷಯ ತಡವಾಗಿ ಬೆಳಕಿಗೆ ಬಂದು ಈತನನ್ನು ಬಂಧಿಸಲು ಸಹ ದೂರು ನೀಡಲಾಗಿತ್ತು.

    ಸಂಬಳ ಪಡೆದು ಕರ್ತವ್ಯಕ್ಕೆ ಬಾರದೇ ಇದ್ದ ಈತ ಬಂಧನದ ಭಯದಲ್ಲಿ ಯಾರಿಗೂ ತಿಳಿಯದಂತೆ ಕಚೇರಿಯಲ್ಲಿ ಪ್ರತ್ಯಕ್ಷವಾಗಿ ರಾಜೀನಾಮೆ ಸಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಕಳೆದ 8 ದಿನಗಳ ಹಿಂದೆ ಕಚೇರಿಗೆ ಆಗಮಿಸಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಘಟನೆಯೂ ತಡವಾಗಿ ಬೆಳಕಿಗೆ ಬಂದಿದೆ.

    ಚಿಕ್ಕ ನೀರಾವರಿ ಉಪ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ವಿನೋದ ಕಣ್ಣಿ 8 ವರ್ಷದಿಂದ ಕೆಲಸಕ್ಕೆ ಹಾಜುರಾಗದೆ ಸಂಬಳ ಪಡೆದಿದ್ದ. 2009 ಸೆ.10 ರಿಂದ 2012 ಜ.25ರ ವರೆಗೂ ಕರ್ತವ್ಯ ನಿರ್ವಹಿಸಿದ್ದ ವಿನೋದ ಕನ್ಣಿ 2012 ಜ.26ರಿಂದ ಇದೂವರೆಗೂ ಕಚೇರಿಗೆ ಬಾರದೆ ಗೈರು ಹಾಜರಾಗಿದ್ದಾನೆ. ಈ ಕುರಿತು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಹಲವಾರು ಭಾರಿ ಪತ್ರ ಬರೆದಿದ್ದರು. ಇದಕ್ಕೆ ಇಂಜಿನಿಯರ್ ವಿನೋದ ಕಣ್ಣಿ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ.

    ಈತನ ವಿರುದ್ಧ ಕರ್ತವ್ಯ ಲೋಪದ ದೂರು ದಾಖಲಾಗುತ್ತಿದ್ದಂತೆ ಕಳೆದ ಎಂಟು ದಿನಗಳ ಹಿಂದೆ ಕಚೇರಿಗೆ ಆಗಮಿಸಿ ರಾಜೀನಾಮೆ ನೀಡಿ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಹೆಚ್ಚು ಸ್ಪಷ್ಟನೆ ನೀಡಲು ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಹಿಂಜರಿದಿದ್ದು, 8 ವರ್ಷದಿಂದ ಕೆಲಸಕ್ಕೆ ಹಾಜರಾಗದೆ ಇರುವ ಕುರಿತು ಮಾಹಿತಿ ನೀಡಿ ಆತ ರಾಜೀನಾಮೆ ನೀಡಿ ಹೋಗಿರುವ ಕುರಿತು ಸ್ಪಷ್ಟಪಡಿಸಿದ್ದಾರೆ.

  • ಅಧಿಕಾರಿಗಳ ಗ್ರಹಣ ಬಿಡಿಸಿದ ಸಚಿವ ಮಾಧುಸ್ವಾಮಿ

    ಅಧಿಕಾರಿಗಳ ಗ್ರಹಣ ಬಿಡಿಸಿದ ಸಚಿವ ಮಾಧುಸ್ವಾಮಿ

    -ಜನವರಿ 14, 15ರಂದು ಸಚಿವ ಸಂಪುಟ ವಿಸ್ತರಣೆ

    ಕಾರವಾರ: ಸೂಕ್ತ ಮಾಹಿತಿ ಇಲ್ಲದೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕಾನೂನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.

    ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಣ್ಣ ನೀರಾವರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಅಧಿಕಾರಿಗಳು ಸಚಿವರು ಕೇಳಿದ ಮಾಹಿತಿ ನೀಡಲು ಪರದಾಡಿದರು. ಯಾವ ಕಾಮಗಾರಿ ಬಗ್ಗೆ ಕೇಳಿದರೂ ಸ್ಪಷ್ಟ ಮಾಹಿತಿ ನೀಡಲಿಲ್ಲ. ಅಷ್ಟೇ ಅಲ್ಲದೇ, ಟೆಂಡರ್ ಪ್ರಕಟಣೆ ಬಗ್ಗೆಯೂ ವಿವರವನ್ನು ಅಧಿಕಾರಿಗಳು ಸರಿಯಾಗಿ ನೀಡಿರಲಿಲ್ಲ. ಅಧಿಕಾರಿಗಳ ನಡೆಯಿಂದ ಅಸಮಾಧಾನಗೊಂಡ ಸಚಿವರು ತರಾಟೆಗೆ ತೆಗೆದುಕೊಂಡರು.

    ಕಾಮಗಾರಿಗೆ ಎಷ್ಟು ವೆಚ್ಚವಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಲಾಖೆಯ ವರದಿ ಪತ್ರದಲ್ಲಿ ಇರುವ ಮಾಹಿತಿ ಬೇರೆ, ನೀವು ನೀಡುತ್ತಿರುವ ಮಾಹಿತಿಯೇ ಬೇರೆ ಇದೆ. ದಾಖಲೆಗಳನ್ನು ಬರೆಯುವಾಗ ಕುಡಿದು ಸಿದ್ದಪಡಿಸಿದ್ಧೀರಾ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಆಕ್ರೋಶ ಹೊರಹಾಕಿದರು.

    ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದ್ದೇನೆ. ನೀವು ಮನೆಗೆ ಹೋಗುವ ಆಸೆಯಿದೆಯೇ? ಸರ್ಕಾರದಿಂದ ಸಂಬಳ ತೆಗೆದುಕೊಳ್ಳುತ್ತೀರಾ, ಕೆಲಸ ಮಾಡದೇ ಇರಲು ನಾಚಿಕೆಯಾಗುವುದಿಲ್ಲವೇ? ಎಂದು ಕಿಡಿಕಾರಿದರು. ಸೂಕ್ತ ಮಾಹಿತಿ ನೀಡದ ಮತ್ತು ಸಮರ್ಪಕ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುಂಡಗೋಡ ಎಂಜಿನಿಯರ್ ಮುರುಳೀಧರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದರು.

    ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ ಅವರು, ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವುದು ಸಿಎಂ ಅವರಿಗೆ ಬಿಟ್ಟ ವಿಚಾರ. ಆದ್ದರಿಂದ ಮಂತ್ರಿ ಮಂಡಲದ ಸದಸ್ಯರು ಈ ಬಗ್ಗೆ ಮಾತನಾಡಬಾರದು. ಸಿಎಂ ಅವರ ನಿರ್ಧಾರವೇ ಅಂತಿಮ ಎಂದರು.

    ಡಿಸಿಎಂ ಆಗುವ ಆಸೆ: ಸಚಿವ ಶ್ರೀರಾಮಲು ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕೊಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನಗೂ ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಲಿಂಗಾಯತರಿಗೆ ಉಪಮುಖ್ಯಮಂತ್ರಿ ಕೊಡಬೇಕು ಎಂದು ನಾವು ಕೇಳಬಹುದು. ಲಕ್ಷ್ಮಣ ಸವದಿ ಅವರಿಗೆ ಈಗಾಗಲೇ ಡಿಸಿಎಂ ಹುದ್ದೆ ಕೊಡಲಾಗಿದೆ. ಆದರೂ ಜನಸಂಖ್ಯೆಗೆ ಅನುಗುಣವಾಗಿ ನಾವು ಕೇಳಬಹುದು. ಆದರೆ ಅದೆಲ್ಲಾ ಸಿಎಂ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಜನವರಿ 14 ಮತ್ತು 15ರಂದು ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದರು.

  • ಸಿ.ಎಸ್.ಪುಟ್ಟರಾಜು ಸಾರಥ್ಯದ ಸಣ್ಣ ನೀರಾವರಿಗೆ ಸಿಕ್ಕಿದ್ದೇನು?

    ಸಿ.ಎಸ್.ಪುಟ್ಟರಾಜು ಸಾರಥ್ಯದ ಸಣ್ಣ ನೀರಾವರಿಗೆ ಸಿಕ್ಕಿದ್ದೇನು?

    ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಹಲವು ಕೊಡುಗೆಗಳನ್ನು ನೀಡಿದೆ.

    ಹೇಮಾವತಿ ನದಿಯಿಂದ ಹಾಸನ ತಾಲೂಕಿನ ದುದ್ದ ಹಾಗೂ ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆ ತುಂಬಿಸುವ ಯೋಜನೆಗೆ 70 ಕೋಟಿ ರೂ. ಘೋಷಿಸಿದೆ. ಈ ಮೂಲಕ ಕುಡಿಯುವ ನೀರು ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

    ಅದೇ ರೀತಿ, ಮಂಡ್ಯ ಜಿಲ್ಲೆಯ ಲೋಕಪಾವನಿ ನದಿಯಿಂದ ದುದ್ದ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಲು ಹಾಗೂ ಮಂಡ್ಯ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 30 ಕೋಟಿ ರೂ.ಗಳ ಯೋಜನೆಯನ್ನು ಘೋಷಿಸಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೊಡಿ, ನಾಗರಾಳ, ನೇಜ ಇತ್ಯಾದಿ ಗ್ರಾಮಗಳ 10225 ಹೆಕ್ಟೇರ್ ಜಮೀನಿಗೆ ಏತ ನೀರಾವರಿ ಯೋಜನೆಗಾಗಿ ಕೃಷ್ಣಾ ನದಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿಯವರು ಘೋಷಿಸಿದ್ದಾರೆ.