Tag: ಸಟ್ಲೇಜ್ ನದಿ

  • ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

    ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

    – 17ಕ್ಕೂ ಹೆಚ್ಚು ಗಡಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ

    ಚಂಡೀಗಢ: ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವುದು ತಿಳಿದ ಸಂಗತಿ. ಯಾವಾಗಲೂ ಭಾರತದ ವಿರುದ್ಧ ಸಂಚು ಮಾಡುತ್ತಲೇ ಇರುವ ಪಾಕ್, ಈಗ ನೀರಿನ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆಯಾ ಎನ್ನುವ ಅನುಮಾನಗಳು ಹುಟ್ಟುಕೊಂಡಿದೆ.

    ಹೌದು. ಪಾಕಿಸ್ತಾನದ ಭಾಗದಲ್ಲಿರುವ ಸಟ್ಲೇಜ್ ನದಿಯಿಂದ ಏಕಾಏಕಿ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದ ಕಾರಣಕ್ಕೆ ಪಂಜಾಬ್ ಗಡಿ ಭಾಗದ ಗ್ರಾಮಗಳಲ್ಲಿ ಗುರುವಾರ ದಿಢೀರ್ ಪ್ರವಾಹ ಪರಿಸ್ಥಿತಿ ತಲೆದೋರಿದೆ.

    ಪಾಕಿಸ್ತಾನವು ತನ್ನ ಕೌಸರ್ ನಗರ ಸಮೀಪದಲ್ಲಿರುವ ಸಟ್ಲೇಜ್ ನದಿಯ ಕ್ರಸ್ಟ್ ಗೇಟ್‍ಗಳನ್ನು ತೆಗೆದಿದೆ. ಇದರಿಂದಾಗಿ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ 17ಕ್ಕೂ ಹೆಚ್ಚು ಗಡಿ ಗ್ರಾಮಗಳು ಜಲಾವೃತವಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಈ ಹಿನ್ನೆಲೆ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಜಾಗಗಳಿಗೆ ತಲುಪಿಸಲು ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    ಈ ಬಗ್ಗೆ ಫಿರೋಜ್‍ಪುರ ಜಿಲ್ಲಾಧಿಕಾರಿ ಚಂದರ್ ಗೈಂದ್ ಮಾತನಾಡಿ, ಪಾಕಿಸ್ತಾನ ಸಟ್ಲೇಜ್ ನದಿ ನೀರು ಬಿಟ್ಟಿರುವುದರಿಂದ ಗಡಿಭಾಗದ ಫಿರೋಜ್‍ಪುರ 17ಕ್ಕೂ ಗ್ರಾಮಗಳು ಜಲಾವೃತಗೊಂಡಿದೆ. ಸಟ್ಲೇಜ್ ನದಿಯಿಂದ ಫಿರೋಜ್‍ಪುರ ಕಡೆ ಹರಿಬಿಡಲಾಗಿರುವ ನೀರಿನಲ್ಲಿ ಚರ್ಮೋದ್ಯಮ ತ್ಯಾಜ್ಯದ ಕಲುಷಿತ ನೀರು ಮಿಶ್ರಣವಾಗಿದೆ. ಈ ಮಿಶ್ರಿತ ನೀರಿನಲ್ಲಿ ಕ್ಯಾನ್ಸರ್‌ಕಾರಕ ರೋಗಾಣುಗಳಿವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದ ಕೌಸರ್ ಜಿಲ್ಲೆಯು ಚರ್ಮೋದ್ಯಮ ಘಟಕಗಳಿಗೆ ಹೆಸರುವಾಸಿಯಾಗಿದೆ. ಈ ಘಟಕಗಳ ಕಲುಷಿತ ನೀರನ್ನು ಕೂಡ ಸಟ್ಲೇಜ್ ನದಿಗೆ ಬಿಡಲಾಗಿದೆ. ಚರ್ಮೋದ್ಯಮ ಹಾನಿಕಾರದ ಕಲುಷಿತ ನೀರು ಕ್ಯಾನ್ಸರ್‌ಕಾರಕವಾಗಿದ್ದು, ಈ ನೀರನ್ನು ನದಿಗೆ ಬಿಟ್ಟಿರುವುದರಿಂದ ಜಲಚರಗಳಿಗೆ ಹಾಗೂ ನದಿ ಪಾತ್ರದ ಜನರಿಗೆ ಮಾರಕವಾಗಿ ಪರಿಣಮಿಸಲಿದೆ. ಈ ವಿಚಾರ ಗೊತ್ತಿದ್ದರೂ ಕೂಡ ಪಾಕಿಸ್ತಾನ ಕಲುಷಿತ ನೀರನ್ನು ನದಿಗೆ ಬಿಡುವುದನ್ನು ತಡೆಯದೆ, ಕ್ರಮ ತೆಗೆದುಕೊಳ್ಳದೆ ಸುಮ್ಮನಿದೆ.

    ಭಾರತ ಸರ್ಕಾರ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಕ್ರಮದ ವಿರುದ್ಧ ಪಾಕಿಸ್ತಾನ ರೊಚ್ಚಿಗೆದ್ದಿದೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಚರ್ಮೋದ್ಯಮ ಘಟಕಗಳ ಕಲುಷಿತ ನೀರನ್ನು ಸಟ್ಲೇಜ್ ನದಿಗೆ ಬಿಟ್ಟು, ನಂತರ ಕ್ರಸ್ಟ್ ಗೇಟ್ ತೆರೆದಿದೆ ಎಂಬ ಆರೋಪ ಕೂಡ ಪಾಕಿಸ್ತಾನದ ವಿರುದ್ಧ ಕೇಳಿಬರುತ್ತಿದೆ.