Tag: ಸಚಿವ

  • ಕೊರೊನಾ ಲಸಿಕೆ ಪಡೆದುಕೊಂಡ ಸಚಿವ ಬಿ.ಸಿ ಪಾಟೀಲ್

    ಕೊರೊನಾ ಲಸಿಕೆ ಪಡೆದುಕೊಂಡ ಸಚಿವ ಬಿ.ಸಿ ಪಾಟೀಲ್

    ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಹಾವೇರಿ ಜಿಲ್ಲೆಯ ಹಿರೇಕರೂರು ನಿವಾಸದಲ್ಲಿ ಕೊವೀಡ್ ಲಸಿಕೆ ಪಡೆದುಕೊಂಡಿದ್ದಾರೆ. ಹಿರೇಕೆರೂರು ನಿವಾಸದಲ್ಲಿ ತಾಲೂಕು ಆಸ್ಪತ್ರೆಯ ಸಿಬ್ಬಂದಿ ವಾಕ್ಸಿನ್ ನೀಡಿದ್ದಾರೆ.

    ನಂತರ ಮಾತನಾಡಿದ ಸಚಿವರು, ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುವುದು ಸರಿಯಲ್ಲ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಇದರತ್ತ ಯಾರೂ ಗಮನ ನೀಡಬಾರದು. ಕರ್ನಾಟಕ ಸರ್ಕಾರ ಜನರ ಸುರಕ್ಷತೆಯಿಂದ ಕೊರೊನಾ ಲಸಿಕೆ ನೀಡುತ್ತಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆಯನ್ನು ಸರ್ಕಾರಿ ವೈದ್ಯರಿಂದ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಮ್ಮ ಭಾರತದಲ್ಲಿಯೇ ತಯಾರಿಸಿದ ಕೊರೊನಾ ಲಸಿಕೆಗೆ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ ಎಂದರು.

    ಕೊರೊನಾ ಸಂಘರ್ಷದ ಸಮಯದಲ್ಲಿ ಕರ್ನಾಟಕ ಹಾಗೂ ಭಾರತ ಸರ್ಕಾರ ಜನರೊಂದಿಗೆ ನಿಂತು ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿದೆ. ವೈದ್ಯರು ಲಸಿಕೆಗೆ ನೀಡಿದ ಬಳಿಕ ಹೇಳಿದ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಸಾಕು. ಯಾವುದೇ ನಿರ್ಭೀತಿಯಿಂದ ಕೊರೊನಾ ಲಸಿಕೆ ಪಡೆಯಬೇಕೆಂದು ಸಚಿವರು ಕರೆ ನೀಡಿದರು.

  • ಕೋಟಾ ಶ್ರೀನಿವಾಸ ಪೂಜಾರಿ ಕಾರು ಅಪಘಾತ

    ಕೋಟಾ ಶ್ರೀನಿವಾಸ ಪೂಜಾರಿ ಕಾರು ಅಪಘಾತ

    ಬೆಂಗಳೂರು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬೆಂಗಳೂರು ಹೊರವಲಯದ ನೈಸ್ ರಸ್ತೆಯಲ್ಲಿ ನಡೆದಿದೆ.

    ಸಚಿವರು ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನೈಸ್ ರಸ್ತೆಯ ಕದಂಬ ಹೊಟೇಲ್ ಬಳಿ ಕೆಎಸ್‍ಆರ್‍ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನಯಿಂದ ಶ್ರೀನಿವಾಸ ಪೂಜಾರಿ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಿಂದ ಕಾರು ಕೂಡ ಹಾನಿಗೊಳಗಾಗಿದೆ. ಈ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

  • ಸಚಿವ ನಾರಾಯಣ ಗೌಡಗೆ ಸಂಕಷ್ಟ

    ಸಚಿವ ನಾರಾಯಣ ಗೌಡಗೆ ಸಂಕಷ್ಟ

    ಬೆಂಗಳೂರು: ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ನೀಡಿದ ಆರೋಪದಲ್ಲಿ ಇದೀಗ ಸಚಿವ ನಾರಾಯಣಗೌಡಗೆ ಸಂಕಷ್ಟ ಎದುರಾಗಿದೆ.

    2013, 2018 ಮತ್ತು ಉಪ ಚುನಾವಣೆಯ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಕಡಿಮೆ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಇವರ ಪತ್ನಿ ಹೆಸರಲ್ಲಿ ಶೇ.5000ರಷ್ಟು ಆಸ್ತಿ ಹೆಚ್ಚಳವಾಗಿದೆ. ಆದರೂ ಆದಾಯದ ಮೂಲ ಯಾವುದು ಅಂತ ತೋರಿಸಿಲ್ಲ. ಲೋಕಾಯುಕ್ತಕ್ಕೆ ಸರಿಯಾದ ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ ಐಟಿ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಆರೋಪಿಸಿ ಸಾಮಾಜಿ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರು ರಾಜ್ಯಪಾಲರಿಗೆ ದೂರು ನೀಡಿದ್ರು.

    ಈ ಬಗ್ಗೆ ಪರಿಶೀಲನೆ ನಡೆಸಿದ ರಾಜ್ಯಪಾಲರು ಮುಂದಿನ ಕ್ರಮಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ. ಆದರೆ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟಿಲ್ಲ. ಮುಖ್ಯ ಕಾರ್ಯದರ್ಶಿಗಳಿಗೆ ಮುಂದಿನ ಕ್ರಮಕ್ಕಾಗಿ ವರ್ಗಾಯಿಸಿದ್ದಾರೆ ಅಂತ ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.

  • ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ: ಉಮೇಶ್ ಕತ್ತಿ

    ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ: ಉಮೇಶ್ ಕತ್ತಿ

    ಬೆಂಗಳೂರು: ಬಿಪಿಎಲ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕತ್ತಿ, ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ. ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಕತ್ತಿ ಈ ಹಿಂದೆ ಹೇಳಿದ್ದೇನು..?
    ಈ ಹಿಂದೆ ಸಚಿವರು, 5 ಎಕ್ರೆಗಿಂತದ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್, ಟಿವಿ, ಫ್ರಿಡ್ಜ್ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ. ಇವುಗಳಲ್ಲಿ ಯಾವುದಾದರು ಒಂದು ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದರು.

    ಏಪ್ರಿಲ್ ಬಳಿಕ ಸರ್ಕಾರ ಕಾರ್ಡ್ ಹೊಂದಿರುವವರ ಪರಿಶೀಲನೆ ನಡೆಸಲಿದೆ. ಈ ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವರಿಗೆ ದಂಡದ ಜೊತೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದರು.

    ಸರ್ಕಾರಿ ಅಧಿಕಾರಿಗಳು, ಅರೆ ಸರ್ಕಾರಿ ಅಧಿಕಾರಿಗಳು, 1.20 ಲಕ್ಷ ರೂ. ಆದಾಯ ಇರುವವರು ಬಿಪಿಎಲ್ ಕಾರ್ಡ್ ಹೊಂದಿರಲು ಸಾಧ್ಯವೇ ಇಲ್ಲ. ಅದರೂ ಕೆಲ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹೀಗಾಗಿ ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ. ಈ ಕಾರಣಕ್ಕೆ ಕಾರ್ಡ್ ಹೊಂದಿದವರಿಗೆ ಮತ್ತೊಂದು ಅವಕಾಶವನ್ನು ಸರ್ಕಾರ ನೀಡುತ್ತಿದೆ. ಮಾರ್ಚ್ ಅಂತ್ಯದ ವರೆಗೆ ಸ್ವಯಂ ಪ್ರೇರಿತವಾಗಿ ಬಿಪಿಎಲ್ ಕಾರ್ಡ್ ಸರ್ಕಾರಕ್ಕೆ ಹಿಂದಿರುಗಿಸಲು ಸೂಚನೆ ನೀಡಲಾಗಿದೆ. ಬಳಿಕ ಸರ್ಕಾರವೇ ಸರ್ವೇ ನಡೆಸಿ ಪತ್ತೆ ಹಚ್ಚಲಿದೆ ಎಂದು ಹೇಳಿದ್ದರು.

  • ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿಗೆ ಮುಂದಾದ ಹೆಚ್.ವಿಶ್ವನಾಥ್

    ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿಗೆ ಮುಂದಾದ ಹೆಚ್.ವಿಶ್ವನಾಥ್

    – ಭೂಪೇಂದ್ರ ಯಾದವ್ ಮುಂದೆ ವಿಶ್ವನಾಥ್ ಮನವಿ

    ನವದೆಹಲಿ: ಸಚಿವ ಸ್ಥಾನಕ್ಕಾಗಿ ಎಂಎಲ್‍ಸಿ ಹೆಚ್.ವಿಶ್ವನಾಥ್ ಲಾಬಿ ಮುಂದುವರಿಸಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತ ಸಂಸಸದ ಭೂಪೇಂದ್ರ ಯಾದವ್ ಅವರನ್ನ ಭೇಟಿಯಾಗಿ ಬಿಜೆಪಿ ಪಕ್ಷದೊಳಗಿನ ಬೆಳವಣಿಗೆ ಮತ್ತು ಸಚಿವ ಸ್ಥಾನದ ಕುರಿತು ಚರ್ಚೆ ನಡೆಸಿದ್ದಾರೆ.

    ಭೂಪೇಂದ್ರ ಯಾದವ್ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಹೆಚ್.ವಿಶ್ವನಾಥ್, ನಾನು ಅಸೆಂಬ್ಲಿಯಿಂದ ಕೌನ್ಸಿಲ್ ಗೆ ಬರಬೇಕಿತ್ತು. ನನ್ನನ್ನು ನಾಮ ನಿರ್ದೇಶನ ಮಾಡಿದ್ದರಿಂದ ಸಚಿವ ಸ್ಥಾನ ಸೇರಿದಂತೆ ಹಲವು ಜವಾಬ್ದಾರಿ ತೆಗೆದುಕೊಳ್ಳಲು ಅಡ್ಡಿಯಾಗುತ್ತಿದೆ. ಈ ವ್ಯತ್ಯಾಸವನ್ನ ಸರಿ ಮಾಡುವಂತೆ ಕೇಳಿಕೊಂಡಿದ್ದೇನೆ. ಮೃತ ಧರ್ಮೇಗೌಡರ ಅವಧಿ ಇನ್ನೂ ಮೂರೂವರೆ ವರ್ಷ ಇದೆ. ಹಾಗಾಗಿ ಆ ಸ್ಥಾನಕ್ಕೆ ನನ್ನನ್ನು ಸೂಚಿಸಬೇಕೆಂದು. ನನ್ನ ಪರಿಷತ್ ಅವಧಿ ಇನ್ನೂ ಐದುವರೆ ವರ್ಷವಿದ್ದು, ಯಾರಿಗಾದರೂ ಕೊಡಬಹುದು ಎಂದು ಹೇಳಿದರು.

    ಇದೇ ವೇಳೆ ರಾಜ್ಯದಲ್ಲಿ ಮೀಸಲಾತಿ ಹೋರಾಟಗಳು, ಬಿಜೆಪಿ ಪಕ್ಷದೊಳಗಿನ ಬೆಳವಣಿಗೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಚಿವ ಸ್ಥಾನ ವಂಚಿತರಾದಾಗಿನಿಂದಲೂ ವಿಶ್ವನಾಥ್ ಸಿಎಂ ಬಿಎಸ್‍ವೈ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

  • ಶಾಸಕರು ಆಯ್ತು ಈಗ ಸಚಿವ ಮಾಧುಸ್ವಾಮಿಯಿಂದಲೇ ಸರ್ಕಾರಕ್ಕೆ ಮುಜುಗರ

    ಶಾಸಕರು ಆಯ್ತು ಈಗ ಸಚಿವ ಮಾಧುಸ್ವಾಮಿಯಿಂದಲೇ ಸರ್ಕಾರಕ್ಕೆ ಮುಜುಗರ

    ಬೆಂಗಳೂರು: ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರಿಂದಲೇ ಸರ್ಕಾರಕ್ಕೆ ಮುಜುಗರ ಉಂಟಾದ ಘಟನೆ ಇಂದು ನಡೆದಿದೆ.

    ವಿಧಾನಸಭಾ ಕಲಾಪದ ವೇಳೆ ಸಚಿವರು, ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಿಟ್ಟು ಬೇರೆ ಇಲಾಖೆಗೆ ನಾನು ಹೇಗೆ ಉತ್ತರಿಸಲಿ ಎಂದು ಹೇಳುವ ಮೂಲಕ ಸದನದಲ್ಲಿ ಅಸಹಾಯಕತೆ ಹೊರಹಾಕಿದರು.

    ಮುಳವಾಡ ಮುಖ್ಯ ಕಾಲುವೆ ವಿಷಯದ ಬಗ್ಗೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಪ್ರಸ್ತಾಪ ಮಾಡಿದರು. ಅನಧಿಕೃತವಾಗಿ ಕಾಲುವೆ ಒಡೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ. ಈ ಬಗ್ಗೆ ಫೋಟೋ ಸಮೇತ ನೀರಾವರಿ ಸಚಿವರಿಗೆ ಪತ್ರ ಬರೆದಿದ್ದೆ. ಆದರೆ ಏನೂ ಕ್ರಮ ಆಗಿಲ್ಲ ಎಂದು ಹೇಳಿ ಸರ್ಕಾರದ ಗಮನ ಸೆಳೆದರು.

    ಇದಕ್ಕೆ ಉತ್ತರ ಕೊಡಲು ಹಿಂದೇಟು ಹಾಕಿದ ಮಾಧುಸ್ವಾಮಿ ಅಲ್ಲ, ಇದು ನನ್ನ ಇಲಾಖೆಗೆ ಬರಲ್ಲ, ಆದರೂ ನೀವೇ ಉತ್ತರ ಕೊಡಿ ಎಂದು ಅಧಿಕಾರಿಗಳು ನನಗೆ ನೋಟಿಸ್ ಕೊಡ್ತಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

    ಬಳಿಕ ಇದಕ್ಕೆ ನೀವೇ ಉತ್ತರ ಕೊಡಿ ಪರವಾಗಿಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು. ಗಟ್ಟಿಯಾಗಿ ಉತ್ತರ ಕೊಟ್ಟಿದ್ದಕ್ಕೆ ನಾನು ಈಗ ಹಿಂದಕ್ಕೆ ಬಂದಿದ್ದೇನೆ ಎಂದು ಮಾರ್ಮಿಕವಾಗಿ ಮಾಧುಸ್ವಾಮಿ ಉತ್ತರಿಸಿದರು. ಈ ಮೂಲಕ ಖಾತೆ ಕಿತ್ತುಕೊಂಡಿದ್ದಕ್ಕೆ ಮಾಧುಸ್ವಾಮಿ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ.

  • ಲಂಚಕ್ಕೆ ಬೇಡಿಕೆ ಆರೋಪ – ಆರ್ ಅಶೋಕ್ ಪಿಎ ವಿರುದ್ಧ ಎಫ್‍ಐಆರ್

    ಲಂಚಕ್ಕೆ ಬೇಡಿಕೆ ಆರೋಪ – ಆರ್ ಅಶೋಕ್ ಪಿಎ ವಿರುದ್ಧ ಎಫ್‍ಐಆರ್

    – ಕೇಸ್ ದಾಖಲಿಸಿ ತನಿಖೆಗೆ ಸೂಚಿಸಿದ ನ್ಯಾಯಾಲಯ

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರಿಂದ ಲಂಚ ಕೇಳಿದ ಕಂದಾಯ ಸಚಿವ ಆರ್ ಅಶೋಕ್ ಪಿ.ಎ ಗಂಗಾಧರ್ ವಿರುದ್ಧ ಶೃಂಗೇರಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಜನವರಿ 20ರಂದು ವಾಟ್ಸಪ್ ಮೂಲಕ ಫೋನ್ ಮಾಡಿದ್ದ ಅಶೋಕ್ ಪಿಎ ಗಂಗಾಧರ್, 24ರಂದು ಸಚಿವರು ಶೃಂಗೇರಿಗೆ ಬರುತ್ತಾರೆ ಭೇಟಿಯಾಗಿ ಎಂದು ಹೇಳಿದ್ದರು. 24ರಂದು ಸಂಜೆ 6 ಗಂಟೆಗೆ ಸಬ್ ರಿಜಿಸ್ಟ್ರಾರ್ ಚೆಲುವರಾಜು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ಬಂದಿದ್ದರು. ಸಚಿವರು ಸಂಜೆ 7.30ಕ್ಕೆ ಶೃಂಗೇರಿಗೆ ಭೇಟಿ ನೀಡಿದ್ದರು.

    ಆಗ ಪಿ.ಎ. ಗಂಗಾಧರ್ ಅಲ್ಲೇ ಇದ್ದ ಒಂದು ರೂಮಿನಲ್ಲಿ ಭೇಟಿಯಾಗಿ ಏನಿದೆ ಕೊಡಿ ಎಂದಿದ್ದರು. ಇದೇ ವೇಳೆ ಚೆಲುವರಾಜು, ನಾನು ಯಾರಿಗೂ ಹಣ ಕೊಡುವುದಿಲ್ಲ. ಯಾರಿಂದಲೂ ಹಣ ಪಡೆಯುವುದಿಲ್ಲ ಎಂದಿದ್ದರು. ಅದಕ್ಕೆ ಅವರು ಆಯ್ತು ಹೋಗಿ ಎಂದಿದ್ದರು. ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದ್ದರು. ನಾನು ದೂರಿನ ಪ್ರತಿ. ಕರ್ನಾಟಕ ಸೆಕ್ರೆಟರಿಗೆ ಕಳಿಸಿದ್ದೇನೆ. ಸಚಿವರಿಗೂ ಕೊಡಿ ಎಂದು ಹೇಳಿದೆ. ಅವರು ನೀವೇ ಕೊಡಿ ಎಂದು ಹೋದರು.

    ಸಚಿವರ ಪಿ.ಎ. ಗಂಗಾಧರ್ ರಾತ್ರಿ ಮತ್ತೆ ಫೋನ್ ಮಾಡಿದ್ದರು. ನಾನು ನೋಡಿರಲಿಲ್ಲ, ನಾನು ಬೆಳಗ್ಗೆ ಫೋನ್ ಮಾಡಿದ್ದಕ್ಕೆ ಏನೋ… ಫೈಲ್ ಕೊಡುತ್ತೇನೆ ಎಂದು ಹೇಳಿ ಕೊಡಲಿಲ್ಲ ಎಂದರು. ನಾನು ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದ್ರಿ ನಾನು ಇಲ್ಲ ಎಂದು ಹೇಳಿದ್ದೆ ಎಂದು ಚೆಲುವರಾಜು ಹೇಳಿದ್ದರಂತೆ.

    ಸರ್ಕಾರಿ ಅಧಿಕಾರಿಯಿಂದ ಲಂಚ ಕೇಳಿದ ಬಗ್ಗೆ ಹಾಗೂ ನಿನ್ನ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆಂದು ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರ್ಕಾರಿ ಅಧಿಕಾರಿಯಾಗಿರುವುದರಿಂದ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಶೃಂಗೇರಿ ಜೆಎಂಎಫ್‍ಸಿ ನ್ಯಾಯಾಲಯದ ಅನುಮತಿ ಕೋರಿದ್ದರು. ಈ ಬಗ್ಗೆ ಶೃಂಗೇರಿ ನ್ಯಾಯಾಲಯ ಕೂಡ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿರೊ ಹಿನ್ನೆಲೆ ಶೃಂಗೇರಿ ಪೊಲೀಸರು ಎಫ್‍ಐಆರ್ ತನಿಖೆ ಕೈಗೊಂಡಿದ್ದಾರೆ.

  • ಮಂತ್ರಿಯಾಗುವ ಹಳ್ಳಿಹಕ್ಕಿ ಕನಸು ಭಗ್ನ!

    ಮಂತ್ರಿಯಾಗುವ ಹಳ್ಳಿಹಕ್ಕಿ ಕನಸು ಭಗ್ನ!

    ನವದೆಹಲಿ: ಮೇಲ್ಮನೆ ಸದಸ್ಯ ವಿಶ್ವನಾಥ್‍ಗೆ ಬಿಗ್ ಶಾಕ್ ಸಿಕ್ಕಿದೆ. ವಿಶ್ವನಾಥ್ ಮಂತ್ರಿಯಾಗುವ ಆಸೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ತಣ್ಣೀರೆರಚಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ವಿಶ್ವನಾಥ್‍ಗೆ ಇದೀಗ ಆಘಾತ ಉಂಟಾಗಿದೆ. ನಾಮನಿರ್ದೆಶನದ ಆಧಾರದ ಮೇಲೆ ಸಚಿವರಾಗುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿತ್ತು. ಈ ಆದೇಶ ಪ್ರಶ್ನಿಸಿ ಎಚ್.ವಿಶ್ವನಾಥ್ ಅವರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಸುಪ್ರೀಂಕೋರ್ಟಿನಲ್ಲಿ ವಿಶ್ವನಾಥ್ ಅರ್ಜಿ ವಜಾ ಆಗಿದ್ದು, ನಾಮ ನಿರ್ದೇಶಿತರು ಸಚಿವರಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

    ವಿಶ್ವನಾಥ್ ಅವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿತ್ತು. ನಾಮ ನಿರ್ದೇಶನವಾದ ಬಳಿಕ ವಿಶ್ವನಾಥ್ ಸಚಿವರಾಗಲು ಪ್ರಯತ್ನಿಸಿದ್ದರು. ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡದಂತೆ ರಾಜ್ಯ ಹೈಕೋರ್ಟಿನಲ್ಲಿ ದೂರು ದಾಖಲು ಮಾಡಲಾಗಿತ್ತು. ವಿಚಾರಣೆ ನಡೆಸಿದ್ದ ಪೀಠ ಸಚಿವರಾಗುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

    ಸಚಿವ ಸ್ಥಾನದ ಬದಲು ಮೇಲ್ಮನೆ ಸಭಾಪತಿ ಸ್ಥಾನದ ಮೇಲೆ ವಿಶ್ವನಾಥ್ ಕಣ್ಣಿಟ್ಟಿದ್ದರು. ಹುಣಸೂರಿಗೆ ತೆರಳಿದ್ದಾಗ ಆಪ್ತರ ಬಳಿ ಮಾತುಕತೆ ವೇಳೆ ಸಭಾಪತಿ ಆಸೆಯನ್ನು ವ್ಯಕ್ತಪಡಿಸಿದ್ದರು. ಸಿಎಂ, ಪಕ್ಷ ಸಭಾಪತಿ ಸ್ಥಾನ ಕೊಟ್ಟರೆ ನೋಡೋಣ ಎಂದು ಹೇಳಿದ್ದರು. ಅಲ್ಲದೆ ಮಿತ್ರ ಮಂಡಳಿಯ ಬಗ್ಗೆ ಸಿಡಿಮಿಡಿಗೊಂಡಿದ್ದರು. ಮಿತ್ರ ಮಂಡಳಿಯ ಸಹಾನುಭೂತಿ ಯಾರಿಗೆ ಬೇಕು. 17 ಮಂದಿ ಸಿಎಂ ಜೊತೆ ಮಾತನಾಡಬೇಕಿತ್ತು ಎಂದು ಗರಂ ಆಗಿದ್ದರು.

    ಈ ಹಿಂದೆ ಹೈಕೋರ್ಟ್ ಹೇಳಿದ್ದೇನು..?
    ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಲಾಗಿದ್ದರೆ, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಎಂಟಿಬಿ, ಶಂಕರ್ ಆಯ್ಕೆ ಆಗಿದ್ದರು. ವಿಶ್ವನಾಥ್ ಯಾವುದೇ ಚುನಾವಣೆ ನಡೆಯದೇ ಅವಿರೋಧವಾಗಿ ಪರಿಷತ್ ಮೆಟ್ಟಿಲು ಹತ್ತಿದ ಕಾರಣ ಮಂತ್ರಿ ಸ್ಥಾನ ಮಾಡಲು ಬರುವುದಿಲ್ಲ ಎಂದು ಕೋರ್ಟ್ ಹೇಳಿತ್ತು.

    ಏನಿದು ಪ್ರಕರಣ?
    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಲಿ ವಿಧಾನಸಭೆ ಮುಗಿಯುವವರೆಗೆ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ವಿಧಾನಸಭೆ ಮುಗಿಯುವವರೆಗೂ ಅನರ್ಹತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬಹುದು ಎಂದು ಮಹತ್ವದ ಆದೇಶವನ್ನು ಪ್ರಕಟಿಸಿತ್ತು.

    ಈ ಕಾರಣಕ್ಕೆ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹುಣಸೂರು ಮತ್ತು ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತ ಹಿನ್ನೆಲೆಯಲ್ಲಿ ಇಬ್ಬರನ್ನು ಬಿಜೆಪಿ ಪರಿಷತ್‍ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಮುಂದಾಗಿತ್ತು. ಈ ನಡುವೆ ಹೈಕೋರ್ಟ್‍ನಲ್ಲಿ ಅನರ್ಹರಾದವರಿಗೆ ಪರಿಷತ್ ಮೂಲಕ ಮಂತ್ರಿಯಾಗಲು ನಿರ್ಬಂಧಿಸಿ ಕೋರಿ ಪಿಐಎಲ್ ಸಲ್ಲಿಕೆಯಾಗಿತ್ತು. ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದ ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೈ ತಪ್ಪಿದರೆ ಎಂಟಿಬಿಗೆ ಮಂತ್ರಿಯಾಗಿದ್ದಾರೆ.

  • ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಶಿಕ್ಷಣ ಸಚಿವರಿಂದ ಎಡವಟ್ಟು

    ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಶಿಕ್ಷಣ ಸಚಿವರಿಂದ ಎಡವಟ್ಟು

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊತ್ತಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ರಾಮನಾಮ ಜಪಿಸಿ ಅಧಿಕಾರಕ್ಕೇರಿದ ಪ್ರಭಾವಿ ಸಚವರೊಬ್ಬರಿಂದ ಮಹಾ ಪ್ರಮಾದ ಉಂಟಾಗಿದೆ. ಪಬ್ಲಿಕ್ ಟಿವಿಯಲ್ಲಿ ದಾಖಲೆ ಸಮೇತ ಸಚಿವರ ಬಂಡವಾಳ ಬಯಲಾಗಿದೆ.

    ಹೌದು. ಗ್ರಂಥಾಲಯ ಸಚಿವ ಸುರೇಶ್ ಕುಮಾರ್ ಅವರು ರಾಮ ಮಂದಿರ ನಿರ್ಮಾಣದ ವೇಳೆ ಮಹಾ ಎಡವಟ್ಟು ಮಾಡಿದ್ದಾರೆ. ಗ್ರಂಥಾಲಯಕ್ಕೆ ಈ ವರ್ಷದ ಪುಸ್ತಕ ಖರೀದಿಯಲ್ಲಿ ‘ರಾಮ ಮಂದಿರ ಏಕೆ ಬೇಡ?’ ಅನ್ನೋ ಕೃತಿ ಖರೀದಿಗೆ ಅನುಮತಿ ನೀಡಿದ್ದಾರೆ. ವಿವಾದಿತ ಲೇಖಕ ಕೆ.ಎಸ್. ಭಗವಾನ್ ಬರೆದಿರುವ ಈ ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಸಚಿವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ರಾಜ್ಯ ಗ್ರಂಥಾಲಯ ಇಲಾಖೆ ಪ್ರತಿ ವರ್ಷ ವಿವಿಧ ಲೇಖಕರ ಕೃತಿ ಖರೀದಿ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆ, ತಾಲೂಕು ಗ್ರಂಥಾಲಯಗಳಿಗೆ ಕೃತಿಗಳ ಹಂಚಿಕೆ ಮಾಡಲಾಗುತ್ತಿದೆ. ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷತೆಯ ಪುಸ್ತಕ ಆಯ್ಕೆ ಸಮಿತಿಯಿಂದ 5109 ಕೃತಿ ಆಯ್ಕೆ ಮಾಡಿದ್ದು, 5109 ಕೃತಿಗಳ ಪೈಕಿ ‘ರಾಮ ಮಂದಿರ ಯಾಕೆ ಬೇಡ?’ ಕೂಡ ಒಂದಾಗಿದೆ. ಕೆ.ಎಸ್ ಭಗವಾನ್ ಬರೆದಿರುವ ‘ರಾಮ ಮಂದಿರ ಯಾಕೆ ಬೇಡ?’ ಕೃತಿಯನ್ನು ಸಮಿತಿ ಶಿಫಾರಸು ಮಾಡಿದ ಪಟ್ಟಿಗೆ ಹಿಂದೆ-ಮುಂದೆ ನೋಡದೇ ಸಚಿವರು ಸಹಿ ಮಾಡಿದ್ದು, ಇದೀಗ ವಿವಾದಕ್ಕೀಡಾಗಿದೆ.

  • ಶಾಲೆಗಳಿಗೆ ಭೇಟಿ ನೀಡಿ ಸಚಿವ ಸುರೇಶ್ ಕುಮಾರ್ ಪರಿಶೀಲನೆ

    ಶಾಲೆಗಳಿಗೆ ಭೇಟಿ ನೀಡಿ ಸಚಿವ ಸುರೇಶ್ ಕುಮಾರ್ ಪರಿಶೀಲನೆ

    – ಜ್ವರ, ನೆಗಡಿ, ಕೆಮ್ಮು ಬಂದ್ರೆ ಶಾಲೆಗೆ ಬರಬೇಡಿ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಬರೋಬ್ಬರಿ 9 ತಿಂಗಳ ಬಳಿಕ ಕೆಲವೊಂದು ಮಾರ್ಗಸೂಚಿಗಳೊಂದಿಗೆ ಇಂದಿನಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿವೆ. ಶಾಲಾ-ಕಾಲೇಜು ಪ್ರಾರಂಭ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಹೆಬ್ಬುಗೋಡಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತಾಡಿದ್ದಾರೆ. ಅಲ್ಲದೆ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಸಚಿವರು ಮಕ್ಕಳಿಗೆ ಮಾರ್ಗಸೂಚಿಗಳ ಬಗ್ಗೆ ಬೋಧನೆ ಮಾಡಿದ್ದಾರೆ.

    ಜ್ವರ, ನೆಗಡಿ, ಕೆಮ್ಮು ಬಂದ್ರೆ ಶಾಲೆಗೆ ಬರಬೇಡಿ ಎಂದು ಸಲಹೆ ನೀಡಿದ್ದಾರೆ. ಮಾರ್ಚ್ ನಲ್ಲಿ ಪರೀಕ್ಷೆ ಮಾಡೋಣ ಎಂದಾಗ ವಿದ್ಯಾರ್ಥಿಗಳು ಮಾಡಿ ಸರ್ ಎಂದು ಹೇಳಿದ್ದಾರೆ.

    ಧರ್ಮಸ್ಥಳ ವೀರೇಂದ್ರ ಹೆಗ್ಗಡೆ, ಸಿದ್ದಗಂಗಾ ಮಠದ ಶ್ರೀ, ಆದಿಚುಂಚನಗಿರಿ ಶ್ರೀಗಳು, ಸುತ್ತೂರು ಶ್ರೀಗಳು ನಿಮಗೆ ಶುಭಾಶಯ ಹೇಳಿದ್ದಾರೆ ಎಂದು ಹೇಳುವ ಮೂಲಕ ಸಚಿವರು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ನಂತರ ಮಕ್ಕಳಿಂದಲೇ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.