Tag: ಸಚಿವ ಸಿ.ಟಿ.ರವಿ

  • ಯಡಿಯೂರಪ್ಪನವರಿಗೆ ಬಿಜೆಪಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ: ಸಿ.ಟಿ.ರವಿ

    ಯಡಿಯೂರಪ್ಪನವರಿಗೆ ಬಿಜೆಪಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ: ಸಿ.ಟಿ.ರವಿ

    ಪಣಜಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಪರವಾಗಿ ಮಾತನಾಡಿದ್ದಾರೆ.

    ಗೋವಾದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಜನಪ್ರಿಯ ನಾಯಕರು, ಬಿಎಸ್‍ವೈ ಅವರ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಅವರೊಬ್ಬ ಉತ್ತಮ ನಾಯಕ, ಅದರಂತೆ ಪಕ್ಷ ಅವರಿಗೆ ಸಾಕಷ್ಟು ಅವಕಾಶಗಳನ್ನ ನೀಡಿದೆ. ಇದಕ್ಕಾಗಿಯೇ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿ ಕರ್ನಾಟಕ ಜನತೆ ಸೇವೆ ಮಾಡಲು ಅವಕಾಶ ಸಿಕ್ಕಿದೆ. ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಪಕ್ಷ ಅವಕಾಶ ನೀಡಲಾಗಿದೆ ಎಂದರು.

    ಕಾಂಗ್ರೆಸ್, ಜನತದಳ, ಕಮ್ಯೂನಿಸ್ಟ್ ಪಕ್ಷಗಳಲ್ಲಿ ಈ ರೀತಿ ಅವಕಾಶ ನೀಡಿಲ್ಲ, ಬಿಜೆಪಿ ಎಲ್ಲ ಅವಕಾಶವನ್ನು ಅವರಿಗೆ ನೀಡಿದೆ. ಬಿಜೆಪಿ ಕಾರ್ಯಕರ್ತನಿಂದ ಹಿಡಿದು ನಾಯಕನಾಗಿ ಬೆಳೆಯುವಂತೆ ಅವಕಾಶ ನೀಡಿದೆ. ಎಲ್ಲ ಕಾರ್ಯಕರ್ತರ ಶಕ್ತಿಯಿಂದ ಇಂದು ಬಿಜೆಪಿಗೆ ಶಕ್ತಿ ಬಂದಿದೆ ಎಂದು ಹೇಳಿದ್ದಾರೆ.

    ಯಡಿಯೂರಪ್ಪನವರ ಬಗ್ಗೆ ಸಚಿವರು, ಶಾಸಕರು ಬೇಸರ ವ್ಯಕ್ತಪಡಿಸುತ್ತಿರುವುದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮಾತನಾಡುತ್ತಾರೆ. ರಾಜಕಾರಣದಲ್ಲಿ ಇವೆಲ್ಲವೂ ಸಹಜ, ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದಿದ್ದಾರೆ.

  • ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    -ನಾನು ರೈತ ಚಳುವಳಿಯಿಂದ ಬಂದವನು
    -ರೈತರ ತಾಕತ್ತೇನೆಂದು ನನಗೆ ಗೊತ್ತು

    ಚಿಕ್ಕಮಗಳೂರು: ಕಾಂಗ್ರೆಸ್, ಜೆಡಿಎಸ್ ಹೋರಾಟ ರೈತರ ಪರವೆಂದು ಅನ್ನಿಸೋದಿಲ್ಲ. ಅವರದ್ದು ದಲ್ಲಾಳಿಗಳ ಪರ ಹೋರಾಟ. ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಇಲ್ಲಿ ಕಮ್ಯುನಿಸ್ಟ್ರು ಕೂಗಾಡ್ತಾರೆ. ಅವರ ರಾಜ್ಯವಿರುವ ತ್ರಿಪುರದಲ್ಲಿ ಎಪಿಎಂಸಿಯೇ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಜನರು ತಿರಸ್ಕರಿಸಿದ್ದಾಹರೆ. ರೈತರು ನಮ್ಮ ಜತೆಯೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಾಕಿದ್ದ ಬೇಡಿಯನ್ನ ಕಳಚುವ ಕೆಲಸ ಎಪಿಎಂಸಿ ಕಾಯ್ದೆ ಮೂಲಕ ಆಗಿದೆ. ರೈತ ದೇಶದಲ್ಲಿ ಎಲ್ಲಿ ಬೇಕಾದ್ರು ತಾವು ಬೆಳೆದ ಬೆಳೆಯನ್ನ ಮಾರಬಹುದು ಎಂಬ ಅನುಮತಿ ಕೊಟ್ಟಿದೆ. ಮೊದಲು ಎಪಿಎಂಸಿಯಲ್ಲೇ ಮಾರಬೇಕು ಎಂದು ಮಾಡಿದ್ದರು. ಈಗ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಬಹುದು. ಎಲ್ಲಿ ಬೆಲೆ ಜಾಸ್ತಿ ಇರುತ್ತೋ ಅಲ್ಲಿಗೆ ಹೋಗಿ ಮಾರುತ್ತಾರೆ. ಅದರಿಂದ ರೈತರ ಶೋಷಣೆ ತಪ್ಪಿದೆ. ಸ್ಫರ್ದೆ ಬರುತ್ತೆ ಜೊತೆಗೆ ರೈತ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಬರುತ್ತೆ ಎಂದರು. ಊರಲ್ಲಿ ಒಬ್ಬನೇ ಕೊಳ್ಳುವವನಿದ್ದರೆ ಅವನು ಹೇಳಿದ್ದೇ ದರ. ಆದರೆ 10 ಜನ ಬಂದರೆ ಸ್ಪರ್ಧೆ ಬರುತ್ತೆ. ಲಾಭ ಬರುತ್ತೆ. ರೈತ ವಿಚಾರಿಸುತ್ತಾನೆ. ಯಾರಿಗೆ ಮಾರಿದರೆ ಲಾಭ ಬರುತ್ತೋ, ಯಾರು ಜಾಸ್ತಿ ರೇಟ್ ಕೊಡ್ತಾರೋ ಅವನಿಗೆ ಮಾರುತ್ತಾರೆ ಎಂದಿದ್ದಾರೆ.

    ಎಲ್ಲದಕ್ಕೂ ವಿರೋಧ ಮಾಡಬೇಕು. ಬಿಜೆಪಿ-ಮೋದಿ ವಿರೋಧಿಸಬೇಕು. ಅದಕ್ಕೆ ಮುಖವಾಡ ತೊಟ್ಟಿಕೊಂಡು ಈ ಕೆಲಸ ಮಾಡುತ್ತಾರೆ ಅಷ್ಟೆ. ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದಿದ್ದಾರೆ. ಈಗಿರೋ ಎಪಿಎಂಸಿ ಕಾಯ್ದೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದು ಇದೆ. ಬೆಳೆದಿರೋನು ರೈತ, ಬೆವರು ಸುರಿಸಿರೋನು ರೈತ. ಅವನಿಗೆ ಇಷ್ಟ ಬಂದೆಡೆ ಮಾರಾಟ ಮಾಡುತ್ತಾನೆ. ತಿದ್ದುಪಡಿ ಮಾಡಿರೋ ಕಾಯ್ದೆ ದೇಶದಲ್ಲಿ ಎಲ್ಲಿ ಬೇಕಾದ್ರು ಮಾರಬಹುದು. ಈ ಕಾಯ್ದೆ ರೈತನಿಗೆ ಸ್ವತಂತ್ರ ಕೊಟ್ಟಿರೋದು. ಅವನಿಗೆ ಸಹಾಯ ಮಾಡಿರೋ ಕಾಯ್ದೆ ಇದು ಎಂದಿದ್ದಾರೆ. ಮುಂಚೆ ಮೋಸ ಮಾಡಿರೋ ಕಾಯ್ದೆ ಇತ್ತು. ದಲ್ಲಾಳಿಗಳು ಬಲಿತಿದ್ರು. ಈಗ ರೈತ ಬಲಿಯುತ್ತಾನೆ. ತಾತ್ಕಾಲಿಕವಾಗಿ ಸುಳ್ಳು ಹೇಳಿಕೊಂಡು ತಿರುಗಬಹುದು. ಮುಂದೆ ಹೋಗ್ತಾ-ಹೋಗ್ತಾ ಸತ್ಯ ಏನು ಅಂತ ಗೊತ್ತಾಗುತ್ತಲ್ಲ ಎಂದರು. ನಾವು ಜನಜಾಗೃತಿ ಮಾಡ್ತೀವಿ. 90 ಪರ್ಸೆಂಟ್ ರೈತರು ನಮ್ಮ ಜೊತೆ ಇದ್ದಾರೆ. ಅದಕ್ಕೆ ಯಾರೂ ರೈತರು ಬೀದಿಗೆ ಇಳಿದಿಲ್ಲ.

    ನಾನು ರೈತ ಚಳುವಳಿಯಿಂದ ಬಂದವನು : ನಾನು ರೈತ ಚಳುವಳಿಯಿಂದ 1983, 84, 85ರವರೆಗೂ ರೈತ ಚಳುವಳಿಯಲ್ಲಿದ್ದು, ಅಲ್ಲಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದೋನು. ರೈತರ ತಾಕತ್ತೇನು ಅಂತ ನನಗೆ ಗೊತ್ತು. ರೈತರು ಬೀದಿಗೆ ಇಳಿದರೆ ಯಾವ ಸರ್ಕಾರನೂ ಉಳಿಯಲ್ಲ. ಇವರ ಜೊತೆ ಯಾರು ಬೀದಿಗೆ ಇಳಿದವರು. ದಿನಾ ಬಿಜೆಪಿ ವಿರೋಧಿಸುವ ಒಂದು ಸೆಟ್ ಜನ ಮಾತ್ರ ಇಂದು ಬೀದಿಗೆ ಇಳಿದವರು. ಅವರು ದಿನಾ ಬೈಯೋರು. ಚೀನಾ-ಭಾರತ ಯುದ್ಧವಾದರೆ ಭಾರತವನ್ನ ಬೈಯೋರು. ಭಾರತ-ಪಾಕಿಸ್ತಾನ ಜಗಳ ಮಾಡಿದರೆ ಭಾರತವನ್ನೇ ಬೈಯೋರು. ಈ ಜನ ಮಾತ್ರ ಇಂದು ಬೀದಿಗೆ ಇಳಿದವರು. ರೈತರು ನಮ್ಮ ಜೊತೆಯೇ ಇದ್ದಾರೆ ಎಂದಿದ್ದಾರೆ.

  • ಡ್ರಗ್ ಮಾಫಿಯಾ ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಿ.ಟಿ.ರವಿ

    ಡ್ರಗ್ ಮಾಫಿಯಾ ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಿ.ಟಿ.ರವಿ

    ಚಿಕ್ಕಮಗಳೂರು: ಡ್ರಗ್ ಮಾಫಿಯಾ ತನಿಖೆ ಚುರುಕುಗೊಂಡಿದ್ದು, ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಬಳಿಕ ಮಾತನಾಡಿದ ಅವರು, ಕೆಲವರು ಇಂತಹ ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡು ಈ ಹಿಂದೆ ರಾಜಕಾರಣ ಮಾಡಿದ್ದಾರೆ. ಅಧಿಕಾರ ನಡೆಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರಿಗೆ ಓಲೈಸುವ, ಒತ್ತಡ ತರುವ ಕೆಲಸ ಮಾಡಬಹುದು. ಆದರೆ, ಬಿಜೆಪಿ ಇಂತಹವರ ಜೊತೆ ರಾಜಿ ಮಾಡಿಕೊಂಡು ಸರ್ಕಾರ ಮಾಡಿಲ್ಲ. ಹಾಗಾಗಿ ಅವರು ಒತ್ತಡ ತರುವ ಪ್ರಶ್ನೆ ಇಲ್ಲ. ಒಂದು ವೇಳೆ ಒತ್ತಡವಿದ್ದಿದ್ದರೆ ಇಷ್ಟು ಸಮಗ್ರ ತನಿಖೆಯೂ ನಡೆಯುತ್ತಿರಲಿಲ್ಲ.

    ರಾಜ್ಯದ ಇತಿಹಾಸದಲ್ಲಿ ಡ್ರಗ್ ಕೇಸ್ ಹೊಸದಲ್ಲ. ಆದರೆ ಇಷ್ಟು ಗಂಭೀರವಾಗಿರುವುದು ಇದೇ ಮೊದಲು. ಈಗ ತನಿಖೆ ನಡೆಯುತ್ತಿದೆ. ತನಿಖೆಯ ಎಳೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ. ಆಗ ಎಲ್ಲ ವಿಷಯವೂ ಹೊರಬರುತ್ತೆ. ಅಲ್ಲಿವರೆಗೂ ಕಾಯಬೇಕು. ಸಾಂದರ್ಭಿಕ ಸಾಕ್ಷಿಯಲ್ಲಿ ನಟಿ ರಾಗಿಣಿ ಮೇಲೆ ಸಂಶಯ ಬಂದು ತನಿಖೆ ನಡೆಯುತ್ತಿದೆ. ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ. ನಟಿಯಾಗಿ ತನ್ನದೇ ಆದ ಸ್ಥಾನ ಪಡೆದಿದ್ದಾರೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

    ಯಾರು ತಪ್ಪು ಮಾಡಿದ್ದರೂ ನಮ್ಮ ಸರ್ಕಾರ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೆ ಎಂಬುದಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ನಡೆಸುತ್ತಿರುವ ತನಿಖೆಯ ದಾಟಿಯೇ ಸಾಕ್ಷಿ. ಯಾರೇ ಇದ್ದರೂ ಕಾಂಪ್ರಮೈಸ್ ಮಾಡ್ಕೊಂಡು, ಅವರ ಜೊತೆ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ರಾಜಕಾರಣ ಮಾಡುವ ಪಕ್ಷ ಬಿಜೆಪಿಯಲ್ಲ. ನಮ್ಮ ಸರ್ಕಾರವೂ ಅಷ್ಟೇ ನಿಷ್ಪಕ್ಷಪಾತವಾದ ತನಿಖೆ ನಡೆಸುತ್ತಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹೊಸ ಆಯಾಮಗಳೇನಾದರೂ ಸಿಕ್ಕರೆ ಅದಕ್ಕೆ ತಕ್ಕ ಸಹಕಾರ ಹಾಗೂ ಸಹಾಯವನ್ನು ಕೇಂದ್ರದಿಂದಲೂ ಪಡೆಯಬಹುದು ಎಂದರು.

  • ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಬೀಳಿಸಿತ್ತೋ, ಡ್ರಗ್ ಮಾಫಿಯಾ ಬೀಳಿಸಿತೋ- ಸಿಟಿ ರವಿ ವ್ಯಂಗ್ಯ

    ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಬೀಳಿಸಿತ್ತೋ, ಡ್ರಗ್ ಮಾಫಿಯಾ ಬೀಳಿಸಿತೋ- ಸಿಟಿ ರವಿ ವ್ಯಂಗ್ಯ

    – ಎಚ್‍ಡಿಕೆ ವಿರುದ್ಧ ಸಚಿವ ಸಿಟಿ ರವಿ ಟ್ವೀಟ್ ವಾಗ್ದಾಳಿ

    ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ರೂಢ ಸರ್ಕಾರದ ಸಚಿವರು ಹಾಗೂ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ನಡುವಿನ ಕೆಸರೆರಚಾಟ ಮುಂದುವರಿದಿದೆ.

    ಕುಮಾರಸ್ವಾಮಿ ಅವರೊಂದಿಗೆ ಟ್ವೀಟ್ ಸಚಿವ ಸುಧಾಕರ್ ನಿನ್ನೆ ಟ್ವೀಟ್ ವಾರ್ ನಡೆಸಿದರೆ, ಇಂದು ಸಚಿವ ಸಿ.ಟಿ. ರವಿ ಮಾಜಿ ಸಿಎಂ ವಿರುದ್ಧ ಟ್ವೀಟ್ ವಾಗ್ದಾಳಿ ಮಾಡಿದ್ದಾರೆ. ಡ್ರಗ್ ಮಾಫಿಯಾ ಮೈತ್ರಿ ಸರ್ಕಾರವನ್ನು ಉರುಳಿಸಿತ್ತು ಎಂಬ ಎಚ್‍ಡಿಕೆ ಅವರ ಹೇಳಿಕೆಗೆ ಸಚಿವ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಸಿಎಂ ಆದ್ರಿ: ಸುಧಾಕರ್

    ಟ್ವೀಟ್ ಮಾಡಿ ತಿರುಗೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು, Odd day ಕಾಂಗ್ರೇಸ್ ನನ್ನ ಸರಕಾರವನ್ನು ಬೀಳಿಸಿತು. ಅನ್ನುವ ತಾವು EvenDay ಡ್ರಗ್ ಮಾಫಿಯಾ ನನ್ನ ಸರಕಾರವನ್ನು ಬೀಳಿಸಿತು ಅನ್ನುತ್ತೀರಿ. ಯಾವುದು ಸತ್ಯ- ಯಾವುದು ಮಿಥ್ಯ? ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ! ಎಂದು ಹೇಳುವ ಮೂಲಕ ಎಚ್‍ಡಿಕೆ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಅಲ್ಲದೇ, ನೀವೇ ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತಿದ್ದಾಗ ಡ್ರಗ್ ಮಾಫಿಯಾ ನಿಮ್ಮ ಸರ್ಕಾರವನ್ನು ಬೀಳಿಸುವಷ್ಟು ಪ್ರಬಲವಾಗಿತ್ತೆ ಕುಮಾರಸ್ವಾಮಿಯವರೇ? ಒಂದು ಮಾಫಿಯಾವನ್ನು ಬಗ್ಗುಬಡಿಯದಷ್ಟು ದುರ್ಬಲವಾಗಿತ್ತೆ ತಮ್ಮ ಸರ್ಕಾರ ಮಾಜಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್

  • ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಸಿಟಿ ರವಿ ಅವರ ‘ಮತ್ತಿನ’ ಆರೋಪಕ್ಕೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿರುವ ಎಚ್‍ಡಿಕೆ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು ಎಂದರು ಕಿಡಿಕಾರಿದ್ದಾರೆ.

    ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪನಿ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.

    ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು. ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಮತ್ತೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

    ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ ಎಂದಿದ್ದಾರೆ.

    ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಗಿಳಿಯೋದಿ ಫಲವೇನು, ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು. ಇದಿರ ಗುಣವ ಬಲ್ಲವೆಂಬರು, ತಮ್ಮ ಗುಣವನರಿಯರು, ಕೂಡಲಸಂಗಮದೇವಾ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಟಿ ರವಿ ಅವರು, ಕುಮಾರಸ್ವಾಮಿ ಅವರ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಕುಮಾರಸ್ವಾಮಿ ಅವರನ್ನು ಮೊದಲು ತಪಾಸಣೆ ಮಾಡಬೇಕು. ಅವರು ಮತ್ತಿನಲ್ಲಿ ಹೇಳಿದ್ದಾರಾ? ಅಥವಾ ಸರಿಯಾಗಿದ್ದಾಗಿ ಆ ಹೇಳಿಕೆ ಕೊಟ್ಟಿದ್ದಾರಾ ಟೆಸ್ಟ್ ಮಾಡಿಸಬೇಕು. ಅವರ ಸಂಪುಟದ ಸಚಿವರೇ ರಾಜೀನಾಮೆ ಕೊಟ್ಟಿದ್ದು. ಕುಮಾರಸ್ವಾಮಿ ಕಾಲದ ಇಂಟಲಿಜೆನ್ಸ್ ದುರ್ಬಲವಾಗಿತ್ತಾ? ಅಧಿಕಾರದಲ್ಲಿದ್ದಾಗ ಏಕೆ ಡ್ರಗ್ ಮಾಫಿಯಾ ಕಡಿವಾಣಕ್ಕೆ ಕೈ ಹಾಕಿಲ್ಲ. ರಾಜಕೀಯ ಪ್ರಚಾರದ ಗೀಳಿಗೆ ಕುಮಾರಸ್ವಾಮಿ ಸರ್ಕಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದಿದ್ದರು.

  • ಸಚಿವ ಸಿ.ಟಿ.ರವಿ ವಿರುದ್ಧ ಬ್ಯಾಟರಿ ಪ್ರೊಟೆಸ್ಟ್ – ಕ್ಷಮೆಗೆ ಆಗ್ರಹ

    ಸಚಿವ ಸಿ.ಟಿ.ರವಿ ವಿರುದ್ಧ ಬ್ಯಾಟರಿ ಪ್ರೊಟೆಸ್ಟ್ – ಕ್ಷಮೆಗೆ ಆಗ್ರಹ

    ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ಖಂಡಿಸಿ ಚಿಕ್ಕಮಗಳೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾಟರಿ ಪ್ರೊಟೆಸ್ಟ್ ನಡೆಸಿದರು. ಎರಡು ದಿನಗಳ ಹಿಂದೆ ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ರೆ, ನೀವೇ ಐದು ವರ್ಷ ಅಧಿಕಾರದಲ್ಲಿದ್ರಿ ಸಂಘವನ್ನ ನಿಷೇಧ ಮಾಡಲು ಶಿಫಾರಸ್ಸು ಮಾಡಬಹುದಿತ್ತು. ಬ್ಯಾಟರಿ ಇರಲಿಲ್ವಾ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯರನ್ನ ವ್ಯಂಗ್ಯವಾಡಿದ್ದರು. ಸಚಿವ ಸಿ.ಟಿ ರವಿಯ ಈ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಸ್ತೆ ಮಧ್ಯೆ ಬ್ಯಾಟರಿಗಳನ್ನ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

    ಸಿದ್ದರಾಮಯ್ಯನವರಿಗೆ ಬ್ಯಾಟರಿ ಇಲ್ಲ ಎಂದು ಹೇಳಿದ್ದೀರಾ? ನೀವು ಚಾರ್ಜ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಯ್ತು ಸ್ವಾಮಿ, ನೀವು ಹೇಳಿದ್ದೆಲ್ಲವನ್ನ ಕೇಳ್ತೀವಿ. ನಿಮ್ಮ ಬ್ಯಾಟರಿಯ ಬ್ಯಾಟರಿ ಎಲ್ಲಿದೆ ಹೇಳಿ. ನಾವು ಬಂದು ಚಾರ್ಜ್ ಮಾಡಿಕೊಂಡು ಆಮೇಲೆ ನಿಮಗೆ ಏನ್ ಮಾಡಬೇಕೋ ಅದನ್ನೇ ಮಾಡ್ತೀವಿ ಎಂದು ಸಚಿವರ ವಿರುದ್ಧ ವ್ಯಂಗ್ಯವಾಗಿದ್ದಾರೆ. ಸಿ.ಟಿ.ರವಿ ಬ್ಯಾಟರಿ ಸೆಂಟರ್ ಅನ್ನೋ ಕಟೌಟ್‍ಗಳನ್ನು ಹಿಡಿದುಕೊಂಡು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು. ಸಚಿವರು ಕೂಡಲೇ ತಮ್ಮ ಹೇಳಿಕೆಯನ್ನ ಹಿಂಪಡೆದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

  • ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ: ಸಚಿವ ಸಿ.ಟಿ.ರವಿ ಕಿಡಿ

    ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ: ಸಚಿವ ಸಿ.ಟಿ.ರವಿ ಕಿಡಿ

    ಬೆಂಗಳೂರು: ಕೆಜಿ ಹಳ್ಳಿ ಘಟನೆಗೆ ಪೊಲೀಸರೇ ಕಾರಣ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಸಿ.ಟಿ.ರವಿ ಆಕ್ರೋಶ ಹೊರ ಹಾಕಿದ್ದಾರೆ.

    ಸಾಲು ಸಾಲು ಟ್ವೀಟ್ ಮಾಡಿರುವ ಸಚಿವರು, ಪೊಲೀಸರೇ ಡಿಜಿ ಹಳ್ಳಿ ಘಟನೆಗೆ ಕಾರಣ ಡಿಕೆ ಹೇಳಿಕೆ ಬಾಂಧವರದ್ದೇನು ತಪ್ಪಿಲ್ಲ. ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ ಗಲಭೆ ಎಬ್ಬಿಸಿದವರು ಬೆಂಕಿ ಹಾಕಿದವರ ಬಗ್ಗೆ ಮರುಕ! ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಬಹುದು. ನವೀನ್ ಕಳೆದ ಬಾರಿ ಬಿಜೆಪಿಗೆ ವೋಟು ಹಾಕಿದ್ದಾನೆ, ಡಿಕೆಶಿ ಹೇಳಿಕೆ, ವೋಟು ಸೀಕ್ರೆಟ್, ಡಿಕೆಶಿಗೆ ತಿಳಿದಿದ್ದು ಹೇಗೆ? ಸುಳ್ಳೇ ಇವರ ಮನೆ ದೇವರು ಎಂದು ಕಿಡಿಕಾರಿದ್ದಾರೆ.

    ಡಿಕೆಶಿ ಹೇಳಿದ್ದೇನು?: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಾಟೆಗೆ ಪೊಲೀಸರು ನೇರ ಕಾರಣ. ವಿವಾದಾತ್ಮಕ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮಕೈಗೊಂಡಿದ್ದರೆ ಗಲಾಟೆ ನಡೆಯುತ್ತಿರಲಿಲ್ಲ ಎಂದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

  • ಅಯೋಧ್ಯೆಗೆ ಅಂದು ಹೇಳ್ದೆ ಹೋಗಿದ್ದೆ, ಇಂದು ಹೋಗಲ್ವಾ ಅಂದ್ರು ಅಪ್ಪ : ಸಿ.ಟಿ.ರವಿ

    ಅಯೋಧ್ಯೆಗೆ ಅಂದು ಹೇಳ್ದೆ ಹೋಗಿದ್ದೆ, ಇಂದು ಹೋಗಲ್ವಾ ಅಂದ್ರು ಅಪ್ಪ : ಸಿ.ಟಿ.ರವಿ

    -“ಸೂಸೈಡ್ ಸ್ಕ್ವಾಡ್‍ಗೆ ಸೇರಿಸಿಕೊಳ್ಳಿ ಎಂದು ನಾನು-ಸುನಿಲ್ ಕೇಳಿದ್ವಿ”

    ಚಿಕ್ಕಮಗಳೂರು: ಆವತ್ತು ದೋಬಿ ಅಂಗಡಿಯಲ್ಲಿದ್ದ ಬಟ್ಟೆಯನ್ನ ಹಾಗೇ ಬ್ಯಾಗಿಗೆ ತುಂಬಿಕೊಂಡು, ರಾಧಾಕೃಷ್ಣ ಕಾಮತ್ ಬಳಿ ಹಣ ಇಸ್ಕೊಂಡು ಹೇಳ್ದೆ-ಕೇಳ್ದೆ ಅಯೋಧ್ಯೆಗೆ ಹೋಗಿದ್ದಲ್ಲಾ ಇವತ್ತು ಹೋಗಲ್ವಾ ಎಂದು ಸಚಿವ ಸಿ.ಟಿ.ರವಿ ಅವರಿಗೆ ಅವರ ತಂದೆ ಪ್ರಶ್ನೆ ಮಾಡಿದ್ದಾರೆ. ಈ ವಿಷಯವನ್ನ ಸ್ವತಃ ಸಿ.ಟಿ.ರವಿಯವರೇ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಇಂದು ಅವರ ಮನೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕುರಿತಂತೆ ಮಾತನಾಡಿದ ಅವರು, ಅವತ್ತು ಅಪ್ಪನ ಬಳಿ ಹಣ ಕೇಳಿದ್ದರೆ ಹೋಗಲು ಬಿಡುತ್ತಿರಲಿಲ್ಲ ಎಂಬ ಭಯ ಇತ್ತು. ಅದಕ್ಕೆ ಅಪ್ಪನಿಗೆ ಹೇಳದೆ ರಾಧಾಕೃಷ್ಣ ಕಾಮತ್ ಬಳಿ ಹಣ ಪಡೆದು ಹೇಳ್ದೆ-ಕೇಳ್ದೆ ಹೋಗಿದ್ದೆ. ಈಗ ಅಪ್ಪ ಅವತ್ತು ಹೇಳ್ದೆ ಹೋಗಿದ್ದಲ್ಲಪ್ಪಾ, ಇವತ್ತು ಹೋಗಲ್ವ ಎಂದು ಕೇಳಿದ್ದಾರೆ ಎಂದರು. ಈಗ ಸಂದರ್ಭದ ಕಾರಣ ಹೋಗಲು ಆಗುತ್ತಿಲ್ಲ. ಆದರೆ ಮಂದಿರ ನಿರ್ಮಾಣದ ವೇಳೆಗೆ ಹೋಗೇ ಹೋಗ್ತೀನಿ ಎಂದರು. ಮಂದಿರ ನಿರ್ಮಾಣಕ್ಕೆ ನನ್ನ ಕೈಲಾದ ಸೇವೆಯನ್ನೂ ಮಾಡ್ತೀನಿ ಎಂದಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣದ ಬಳಿಕ ಕುಟುಂಬ ಸಮೇತ ಹಾಗೂ ಪರಿವಾರದ ಕಾರ್ಯಕರ್ತರ ಜೊತೆ ಹೋಗಿ ರಾಮನ ದರ್ಶನ ಪಡೆಯುತ್ತೇನೆ ಎಂದರು.

    ಅವಶೇಷಗಳನ್ನ ಪಂಚೆಯಲ್ಲಿ ಕಟ್ಟಿಕೊಂಡಿದ್ದೆ: ಉಮಾಭಾರತಿ, ಅಡ್ವಾಣಿ ಭಾಷಣದ ವೇಳೆ ಎಲ್ಲರೂ ಕಳಂಕಿತ ಕಟ್ಟಡದತ್ತ ಕೂಗಿಕೊಂಡು ನೋಡುತ್ತಿದ್ದರು. ನಾಲ್ಕೈದು ಜನ ಗುಂಬಜ್ ಮೇಲೆ ಹತ್ತಿದ್ದರು. ಜನ ಆಕಡೆಯೇ ಓಡುತ್ತಿದ್ದರು. ನಾವು ಹೋಗಲು ಹೊರಟಾಗ ಕಾನ ರಾಮಸ್ವಾಮಿಯವರು ಬೇಡ ಎಂದು ತಡೆಯುತ್ತಿದ್ದರು. ನಾವು ಬಂದಿರೋ ಕೆಲಸವೇ ಬೇರೆ ಎಂದು ಅವರ ಮಾತನ್ನ ಧಿಕ್ಕರಿಸಿ ಹೋಗಿ ಕಳಂಕಿತ ಕಟ್ಟಡವನ್ನ ಉರುಳಿಸೋದ್ರಲ್ಲಿ ನಮ್ಮದ್ದು ಅಳಿಲು ಸೇವೆ ಇತ್ತು. ಅದೇ ಜೀವನದ ಸಾರ್ಥಕತೆಯ ಕ್ಷಣ ಎಂದರು. ಅವಶೇಷಗಳನ್ನ ಪಂಚೆಯಲ್ಲಿ ಕಟ್ಟಿಕೊಂಡಿದ್ದೆ. ಆದರೆ ಫೈಜಿಯಾಬಾದ್‍ಗೆ ಬರಬೇಕಾದ್ರೆ ಯಾರೂ ಏನನ್ನೂ ತೆಗೆದುಕೊಂಡು ಹೋಗಬಾರದೆಂಬ ಸೂಚನೆ ಮೇರೆಗೆ ಅವಶೇಷಗಳನ್ನ ಅಲ್ಲೇ ಬಿಟ್ಟು ಬಂದೆವು. ಡಿಸೆಂಬರ್ 6ರಂದು ವಿವಾದಿತ ಕಟ್ಟಡ ಧ್ವಂಸವಾಯ್ತು. ನಾವು 3ನೇ ತಾರೀಖಿನಂದೇ ಅಲ್ಲಿ ಇದ್ದೇವೆ ಎಂದರು. ಯಾರು ಯಾವ ಸಂಸ್ಕೃತಿಯ ನಾಶಕ್ಕೆ ಬಯಸಿದ್ರೋ ಆ ಸಂಸ್ಕೃತಿಯ ನಾಶ ಸಾಧ್ಯವಿಲ್ಲ. ನಮ್ಮದು ಮೃತ್ಯುಂಜಯ ಸಮಾಜ. ನಾವು ಯಾರ ನಾಶವನ್ನ ಬಯಸಲ್ಲ. ಹಾಗೇ ನಮ್ಮ ನಾಶವನ್ನ ಒಪ್ಪಿಕೊಳ್ಳುವರಲ್ಲ ಎಂಬ ಸಂದೇಶ ಕೊಟ್ಟೆವು ಎಂದರು.

    ಐದು ಶತಮಾನಗಳ ಹೋರಾಟ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಹೋರಾಟ ಸುಮಾರು ಐದು ಶತಮಾನಗಳದ್ದು. 1947ರ ನಂತರ ಹೋರಾಟದ ರೂಪುರೇಷೆ ಬದಲಾಗಿದೆ. ಐದು ಶತಮಾನಗಳಿಂದ ಈ ಹೋರಾಟದಲ್ಲಿ ಪಾಲ್ಗೊಂಡು ಲಕ್ಷಾಂತರ ಜನರ ಬಲಿದಾನವಾಗಿದೆ. ರಾಮನಿಗಾಗಿ ನೂರಾರು ಯುದ್ಧಗಳೇ ನಡೆದಿವೆ. ಐದು ಶತಮಾನಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದ್ದು ಕೋಟ್ಯಾಂತರ ಮನೆ-ಮನಗಳಲ್ಲಿ ಇಂದು ಹಬ್ಬದ ವಾತಾವರಣ ಎಂದು ಸಚಿವ ಸಿ.ಟಿ.ರವಿ ಹರ್ಷ ವ್ಯಕ್ತಪಡಿಸಿದರು. 1526ರಲ್ಲಿ ಬಾಬಾರ್ ಸೇನಾಧಿಪತಿ ಮೀರ್ಬಾಖಿ ಭವ್ಯವಾದ ಮಂದಿರವನ್ನ ಧ್ವಂಸ ಮಾಡಿ, ಆ ಧ್ವಂಸದ ಅವಶೇಷಗಳಿಂದಲೇ ಅದೇ ಅದೇ ಅಡಿಪಾಯ ಬಳಸಿಕೊಂಡು ಗುಂಬಜ್ ಕಟ್ಟುತ್ತಾನೆ. 80ರ ದಶಕದಲ್ಲಿ ಅದನ್ನ ಬಾಬ್ರಿ ಮಸೀದಿ ಎಂದು ಕರೆಯುತ್ತಾರೆ. ಅದಕ್ಕಿಂತ ಮೊದಲು ಅದಕ್ಕೆ ಜನ್ಮಸ್ಥಾನ್ ಮಸೀದಿ ಎಂದು ಕರೆಯುತ್ತಿದ್ದರು. ಅಂದರೆ, ರಾಮಜನ್ಮ ಸ್ಥಾನದಲ್ಲಿ ಕಟ್ಟಿದ ಮಸೀದಿ ಎಂಬುದು ಅದರ ತಾತ್ಪಾರ್ಯ ಎಂದರು. ಅವರಿಗೆ ಸಾಮ್ರಾಜ್ಯ ವಿಸ್ತರಣೆ ಉದ್ದೇಶ ಆಗಿರಲಿಲ್ಲ. ಸಂಸ್ಕೃತಿಯ ನಾಶದ ಉದ್ದೇಶವೂ ಇತ್ತು. ಹಾಗಾಗೇ, ಭಾರತದ ಪ್ರತೀಕವಾಗಿ ರಾಮನ ಜನ್ಮಸ್ಥಾನವನ್ನ ಧ್ವಂಸ ಮಾಡಿದರು.

    ಲಕ್ಷಾಂತರ ಯುವಕರು ಹಿಂದುತ್ವದತ್ತ ಆಕರ್ಷಿತರಾದರು : ನನ್ನಂತ ಲಕ್ಷಾಂತರ ಯುವಕರು ಹಿಂದುತ್ವದ ಕಡೆ ಆಕರ್ಷಿತರಾಗಲು ರಾಮಜನ್ಮಭೂಮಿ ಆಂದೋಲನ ಒಂದು ಕಾರಣ. ಆರಂಭದಲ್ಲಿ ನಡೆದ ಇಟ್ಟಿಗೆ ಪೂಜೆ, ಶಿಲಾ ಪೂಜೆ, ರಾಮಜ್ಯೋತಿ ಯಾತ್ರೆ, ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆವರೆಗೆ ಹೊರಟ ರಥಯಾತ್ರೆ ಇರಬಹುದು. ಇವೆಲ್ಲಾ ನನ್ನಂತ ಯುವಕರಿಗೆ ಯಾರೂ ಹೇಳದೆ-ಕೇಳದ ಆಂದೋಲನದಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ಕೊಡ್ತು. ನಾನು 90ರ ಕರಸೇವೆಯಲ್ಲಿ ತಲುಪಲು ಆಗಲಿಲ್ಲ. 92ರಲ್ಲಿ ನಾನು, ಅಂದಿನ ಕಾರ್ಕಳ ಬಜರಂಗದಳ ಮುಖಂಡ ಸುನಿಲ್ ಕುಮಾರ್, ಬಾಳಿಗರು, ವಕೀಲ ಕಾನ ರಾಮಸ್ವಾಮಿ ಜೊತೆ ಕರಸೇವೆಯಲ್ಲಿ ಪಾಲ್ಗೊಳ್ಳೊವ ಭಾಗ್ಯ ಸಿಕ್ತು. ಕಳಂಕಿತ ಕಟ್ಟಡವನ್ನ ಉರುಳಿಸಿ, ಅಲ್ಲಿಂದ ಕಳಂಕವನ್ನ ತೊಡೆದು ಹಾಕೋ ಕಾರ್ಯದಲ್ಲಿ ನಾನು ಭಾಗಿಯಾದೆ ಅನ್ನೋದು ನನಗೆ ಸಂತೃಪ್ತಿಯ ಕ್ಷಣ, ಕೊವೀಡ್ ಇಲ್ಲದಿದ್ರೆ ನಾನೂ ಭಾಗಿಯಾಗುತ್ತಿದೆ ಎಂದರು.

    ಹಿರಿಯೂರು ಕೃಷ್ಣಮೂರ್ತಿಯನ್ನ ಸ್ಮರಿಸಿದ ಸಿ.ಟಿ.ರವಿ : ಹಿರಿಯೂರು ಕೃಷ್ಣಮೂರ್ತಿ ನಮ್ಮೊಂದಿಗಿಲ್ಲ. ಕೃಷ್ಣಮೂರ್ತಿ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಬಳಿ ನಾನು-ಸುನಿಲ್ ಸೂಸೈಡ್ ಸ್ಕ್ವಾಡ್ ಮಾಡುತ್ತಾರೆಂದು ಸುದ್ದಿ ಇತ್ತು. ಅಲ್ಲಿಗೆ ಸೇರಿಸಿಕೊಳ್ಳಿ ಎಂದು ಕೇಳಿದ್ವಿ. ಸುನಿಲ್‍ಗೆ 20ರ ಒಳಗಿನ ವಯಸ್ಸು. ನನಗೆ ಮನೆಯಲ್ಲಿ ಹೇಳಿ ಬಂದಿದ್ದೀಯಾ ಎಂದರು. ನಾನು ಇಲ್ಲ ಎಂದಿದ್ದೆ. ಅದಕ್ಕೆ ನಿಮಗೆ ಕೊಟ್ಟ ಕೆಲಸ ಮಾಡಿ ಎಂದಿದ್ದರು. ನಮಗೆ ಸರಯು ನದಿಯಿಂದ ಮರಳು ತರಲು ಸೂಚಿಸಿದ್ದರು. ನಾವು ಬಂದಿರೋ ಕೆಲಸವೇ ಬೇರೆ. ಸರಯು ನದಿಯಲ್ಲಿ ಮರಳು ತನ್ನಿ ಎಂದು ಹೇಳ್ತಾರೆಂದು ಗೊಣಗುತ್ತಲೇ ಮರಳು ತಂದಿದ್ದೇವು ಎಂದರು.

  • “ರೀಡೂ” ಪದದ ಜನಕ ಯಾರು ಸಿದ್ದರಾಮಯ್ಯನವರೆ- ಸಚಿವ ಸಿ.ಟಿ.ರವಿ ಪ್ರಶ್ನೆ

    “ರೀಡೂ” ಪದದ ಜನಕ ಯಾರು ಸಿದ್ದರಾಮಯ್ಯನವರೆ- ಸಚಿವ ಸಿ.ಟಿ.ರವಿ ಪ್ರಶ್ನೆ

    – ಡಿಕೆಶಿ-ಸಿದ್ದು ಮಧ್ಯೆ ಪ್ರಚಾರದ ಕಾಂಪಿಟೇಷನ್

    ಚಿಕ್ಕಮಗಳೂರು: ಪುನರ್ ಪರಿಶೀಲನೆ (ರೀಡೂ)  ಎಂಬ ಹೊಸ ಪರಿಭಾಷೆಯ ಜನಕ ಯಾರು ಸಿದ್ದರಾಮಯ್ಯನವರೇ, ಡಿನೋಟಿಫಿಕೇಶ್‍ನಲ್ಲಿ “ರೀಡೂ” ಹುಟ್ಟುಹಾಕಿ 600-700 ಎಕರೆ ಡಿನೋಟಿಫಿಕೇಶನ್ ಮಾಡಿದ್ದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ, ಉತ್ತರ ಹೇಳಬೇಕಾದವರೇ ಇಂದು ಪ್ರಶ್ನೆ ಕೇಳುತ್ತಿದ್ದಾರೆ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಪರಿಸ್ಥಿತಿ ಕುರಿತು ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಕೋವಿಡ್-19 ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕಿಡಿಕಾರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆಲೋಚಿಸೋದು ಕೂಡ ತಪ್ಪು. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ನೀಡಿ. ಇಲ್ಲವಾದಲ್ಲಿ ಎಲುಬಿಲ್ಲದ ನಾಲಿಗೆ ಏನ್ನನ್ನು ಬೇಕಾದರೂ ಹೇಳುತ್ತೆ ಎಂಬುದು ಸಿದ್ದರಾಮಯ್ಯನವರಿಗೆ ಅನ್ವಯ ಆಗಬಾರದು. ಅವರು ಸಿಎಂ ಆಗಿದ್ದವರು. ದಾಖಲೆ ಇದ್ದರೆ ನೀಡಿ ಎಂದು ಸವಾಲು ಹಾಕಿದರು.

    ಆಧಾರ ಇದ್ದರೆ ಭಯ ಯಾಕೆ, ಆಧಾರ ಇಲ್ಲದೆ ಆರೋಪ ಮಾಡಿದರೆ ಮಾತ್ರ ಭಯಪಡಬೇಕು. ಅವರದ್ದು ಆಧಾರ ರಹಿತ ಆರೋಪವಾಗಿದ್ದರೆ ಕೋರ್ಟಿಗೂ ಹೆದರಬೇಕು. ಲೀಗಲ್ ನೋಟಿಸ್ ಗೂ ಹೆದರಬೇಕು. ಆರೋಪವನ್ನು ಯಾರ ಮೇಲಾದರೂ ಮಾಡಬಹುದು. ಅದಕ್ಕೆ ಆಧಾರ ಒದಗಿಸಬೇಕು. ಇವರ ಬಳಿ ಆಧಾರ ಇದ್ದರೆ ಲೋಕಾಯುಕ್ತಕ್ಕೆ ಕೊಡಲಿ, ಕೋರ್ಟಿಗೆ ಸಲ್ಲಿಸಲಿ, ಪಿಐಎಲ್ ಹಾಕಲಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.

    ಎರಡು ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ ಎಂದಿದ್ದಾರೆ. ಖರ್ಚಾಗಿರೋದೇ 2 ಸಾವಿರ ಕೋಟಿ ರೂ. ಲೂಟಿ ಎಲ್ಲಾಗುತ್ತೆ ಎಂದು ಸರ್ಕಾರದ ಐವರು ಮಂತ್ರಿಗಳು ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರದ ಬಗ್ಗೆ ಅವರಿಗೆ ತೃಪ್ತಿ ಇಲ್ಲದಿದ್ದರೆ, ಅವರಿಗಿರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ, ದೂರು ಸಲ್ಲಿಸಬಹುದು. ಆದರೆ ಇದುವರೆಗೂ ಸಲ್ಲಿಸಿಲ್ಲ. ಕೋರ್ಟ್ ಗೂ ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಅಕೌಂಟ್ಸ್ ಕಮಿಟಿ ಏನು ದಾಖಲೆ ಕೊಡಬೇಕೋ ಅದನ್ನು ಕೊಟ್ಟಿದೆ. ಪಬ್ಲಿಕ್ ಅಕೌಂಟ್ಸ್ ಕಮಿಟಿ ತೀರ್ಮಾನ ಹೇಳುವ ಮುನ್ನವೇ ಊರು ತುಂಬಾ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ, ಇವರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದಾಗುತ್ತದೆ. ಇಲ್ಲವೆ ಕಾಂಗ್ರೆಸ್ ನೊಳಗೆ ಇಂಟರ್ನನಲ್ ಕಾಂಪಿಟೇಷನ್ ನಡೆಯುತ್ತಿರಬಹುದು. ಡಿಕೆಶಿ ಹಾಗೂ ಸಿದ್ದು ಮಧ್ಯೆ ಅವರಿಗಿಂತ ನಾನು ಮುಂದಿರಬೇಕೆಂದು ಪ್ರಚಾರ ತೆಗೆದುಕೊಳ್ಳಲು ಸ್ಪರ್ಧೆ ನಡೆಯುತ್ತಿರಬಹುದು ಎಂದು ಮಾತಿನ ಮೂಲಕ ತಿವಿದಿದ್ದಾರೆ.

  • ವೃಕ್ಷಮಾತೆಗೆ ಮತ್ತೊಂದು ಗರಿ – ಮಾನಸ ಪ್ರಶಸ್ತಿ ಸನ್ಮಾನ

    ವೃಕ್ಷಮಾತೆಗೆ ಮತ್ತೊಂದು ಗರಿ – ಮಾನಸ ಪ್ರಶಸ್ತಿ ಸನ್ಮಾನ

    ಚಾಮರಾಜನಗರ: ಮಾನಸ ಶಿಕ್ಷಣ ಸಂಸ್ಥೆಯ ಆರ್. ಸಿದ್ದೇಗೌಡ – ಲಿಂಗಮ್ಮ ಸ್ಮರಣಾರ್ಥ ಮಾನಸ ಪ್ರಶಸ್ತಿ 2019 ಅನ್ನು ಸಾಲುಮರದ ತಿಮ್ಮಕ್ಕ ಅವರಿಗೆ ನೀಡಲಾಗುತ್ತಿದೆ.

    ಈ ಬಾರಿ ಮಾನಸ ಪ್ರಶಸ್ತಿ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇದೇ 27ರಿಂದ 29ರವರೆಗೆ ಮಾನಸೋತ್ಸವ ಕಾರ್ಯಕ್ರಮ ನಡೆಯಲಿದೆ. 27ರ ಬೆಳಗ್ಗೆ 10ಕ್ಕೆ ಸಚಿವ ಸಿ.ಟಿ.ರವಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

    ಈ ಬಾರಿ 25 ಸಾವಿರ ರೂ. ನಿಂದ 50 ಸಾವಿರ ರೂ.ಗೆ ಪ್ರಶಸ್ತಿ ಮೊತ್ತ ಹೆಚ್ಚಿಸಲಾಗಿದೆ. ಈ ಹಿಂದೆ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ, ಕವಿ ನಿಸಾರ್ ಅಹಮ್ಮದ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ರೈತ ಹೋರಾಟಗಾರ ಜಿ. ಮಾದೇಗೌಡ, ಭತ್ತದ ವಿಜ್ಞಾನಿ ಮಹಾದೇವಪ್ಪ, ಸಂಸದ ವಿ. ಶ್ರೀನಿವಾಸಪ್ರಸಾದ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಉಳಿದಂತೆ 3 ದಿನಗಳ ಕಾಲ ಕಾಲೇಜಿನ ವಿದ್ಯಾರ್ಥಿಗಳು, ಚಿತ್ರನಟರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.