ದಾವಣಗೆರೆ: ನಿಮ್ಮ ಹೊಟ್ಟೆ ಇನ್ನೂ ಕಡಿಮೆಯಾಗಿಲ್ಲವಲ್ರಿ, ಬಡವರ ದುಡ್ಡು ತಿನ್ನುವುದು ಬಿಟ್ಟು ಇನ್ನಾದರೂ ಸರಿಯಾಗಿ ಕೆಲಸ ಮಾಡಿ, ತಿಮಿಂಗಿಲ ರೀತಿ ವರ್ತಿಸಬೇಡಿ ಎಂದು ಸ್ಲಂ ಬೋರ್ಡ್ ಸಿಇಒ ಕಪಿನಿ ಗೌಡಗೆ ವಸತಿ ಸಚಿವ ವಿ.ಸೋಮಣ್ಣ ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಯಾವತ್ತಾದ್ರೂ ಭೇಟಿ ಮಾಡಿದ್ದೀರಿರೇನ್ರಿ ಎಂದು ಪ್ರಶ್ನಿಸಿದ್ದಾರೆ. ಆಗ ಸಭೆಗೆ ಬಂದಾಗ ಮಾತ್ರ ಸರ್ ಎಂದು ಕಪಿನಿ ಗೌಡ ಹೇಳಿದ್ದಾರೆ. ಅಷ್ಟಕ್ಕೆ ಸಿಟ್ಟಿಗೆದ್ದ ಸಚಿವ ವಿ.ಸೋಮಣ್ಣ, ನಿಮಗೊಂದು ಗೂಟದ ಕಾರು ಎಲ್ಲ ವ್ಯವಸ್ಥೆ, ಅದಕ್ಕೆ ಜಿಪಿಎಸ್ ಹಾಕಿಸಬೇಕಿದೆ. ಇನ್ನೋವಾ ಕಾರು ಐಎಎಸ್ ಅಧಿಕಾರಿಗಳಿಗೆ ನೀಡುವ ಕಾರು. ಅಂತಹ ಕಾರಲ್ಲಿ ನೀವು ಓಡಾಡುತ್ತಿದ್ದೀರಿ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಬಡವರಿಗೆ ಸರಿಯಾಗಿ ಮನೆ ಹಾಕಿಕೊಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್
ಅಲ್ಲದೆ ಇವರೊಬ್ಬರು, ಇನ್ನೊಬ್ಬ ಪದ್ಮನಾಭ ಅಂತ ಮೈಸೂರಲ್ಲಿ ಇದ್ದರು. ದೊಡ್ಡ ತಿಮಿಂಗಲ ಇವರು. ನ್ಯಾಷನಲ್ ಅಲ್ಲ, ಇಂಟರ್‍ನ್ಯಾಷನಲ್ ಲೆವೆಲ್ ಇವರು. 55 ವರ್ಷ ಆಯಿತು, ದೇವರಾಜ ಅರಸು ಅವರು ಬಡವರಿಗಾಗಿ ಇಂತಹ ಯೋಜನೆ ತಂದಿದ್ದಾರೆ. ಆದರೆ ಇವರು ಬಡಿದು ತಿಂದು, ತಿಂದು ಕೊಬ್ಬಿದ್ದಾರೆ. ಈಗ ಸಚಿವರಿಗೇ ಇವರು ಬಗ್ಗುತ್ತಿಲ್ಲ. ಇನ್ಯಾರಿಗೆ ಬಗ್ಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನನಗೆ ಯಾವ್ಯಾವ ವಿಧಾನಸಭಾ ಕ್ಷೇತ್ರದಲ್ಲಿ ಏನೇನಾಗಿದೆ ಅಂಕಿ ಅಂಶ ಬೇಕು. ಸಾಕು ತಿಂದಿದ್ದು, ಇನ್ನೂ ಎಷ್ಟು ಲಂಚ ತಿನ್ನುತ್ತೀರಿ. ಕೊರೊನಾ ಬಂದು ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ. ಇನ್ನಾದರೂ ಬಡವರ ಕೆಲಸ ಮಾಡಿಕೊಡಿ, ಈ ರೀತಿ ಮಾಡುವುದು ಗೌರ ಅಲ್ಲ. ಇನ್ನಾದರೂ ಸರಿಯಾಗಿ ಕೆಲಸ ಮಾಡ್ರಯ್ಯ, ಯಾಕ್ರಯ್ಯ ಹೀಗೆ ಮಾಡ್ತಿರಾ? ದಾವಣಗೆರೆ ಜಿಲ್ಲೆಯಲ್ಲಾದ್ರೂ ಉತ್ತಮವಾಗಿ ಕೆಲಸ ಮಾಡಿ ಎಂದು ಕೇಳಿದ್ದಾರೆ. 1008 ಜನ ಅರ್ಜಿ ಹಾಕಿದ್ದಾರೆ ಎಲ್ಲರೂ ಸೆಲೆಕ್ಟ್ ಆಗಬೇಕು. ಶ್ರೀಮಂತರು ಅರ್ಜಿ ಹಾಕಿದ್ದರೆ ಅಂತಹವನ್ನು ರದ್ದು ಮಾಡಿ, ಬಡವರಿಗೆ ಅನ್ಯಾಯ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಬೆಂಗಳೂರು: ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಾವೇರಿಪುರ ವಾರ್ಡಿನ ಕುಟುಂಬಗಳಿಗೆ ವಸತಿ ಸಚಿವ ವಿ.ಸೋಮಣ್ಣ ಫುಡ್ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ.
ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡಿನಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರಧಾನ್ಯ ಕಿಟ್ ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ದೇಶದ 80 ಕೋಟಿ ಜನರಿಗೆ ವರ್ಷಾಂತ್ಯದವರೆಗೆ ಉಚಿತ ಆಹಾರಧಾನ್ಯಗಳನ್ನು ವಿತರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಬಡವರಿಗೆ ನಗದು ಪರಿಹಾರ ಸೇರಿದಂತೆ ಉಪಯುಕ್ತ ಹಲವು ಪ್ಯಾಕೇಜ್ ಗಳನ್ನು ಘೋಷಿಸಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹ ಬಡ ಜನರು ಹೆಚ್ಚಾಗಿದ್ದು, ಕ್ಷೇತ್ರದ ಜನರಿಗೆ ಉತ್ತಮ ಗುಣಮಟ್ಟದ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಜನತೆ ಭಯಭೀತರಾಗಬಾರದು ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಮಂಡಲಾಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದಾಸೇಗೌಡ, ವಾಗೀಶ್, ಮೋಹನ್ ಕುಮಾರ್, ಉಮಾಶಂಕರ್ ಹಾಗೂ ಕಾರ್ಯಕರ್ತರು ಸಚಿವರ ಜೊತೆ ಇದ್ದರು.
ಬೆಂಗಳೂರು: ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ವಿ.ಸೋಮಣ್ಣ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಪ್ರಮುಖ ಲೇಖಕ, ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು ಎಂದು ಸ್ಮರಿಸಿದ್ದಾರೆ.
ಡಾ.ಸಿದ್ದಲಿಂಗಯ್ಯ ಅವರು 1954 ರಲ್ಲಿ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ್ದರು. ಅವರ ಜಿಲ್ಲೆಯಿಂದಲೇ ನಾನು ರಾಜಕೀಯ ಪ್ರವೇಶ ಮಾಡಿದ್ದು ಎಂಬುದನ್ನು ವಿನಮ್ರತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಸಿದ್ದಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಳು ಸಂದಿವೆ.
ಕವಿ ಡಾ.ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ 2006-08ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಗೀತೆಯನ್ನು ಎರಡು ಚಲನಚಿತ್ರಗಳಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ‘ಗೆಳತಿ ಓ ಗೆಳತಿ’ ಬಂಡಾಯ ಕವಿಯ ಪ್ರೇಮ ಗೀತೆಗಳು. ಅವರೊಳಗಿದ್ದ ವ್ಯವಸ್ಥೆಯ ಬಗೆಗಿನ ಕಿಚ್ಚಿನ ಜೊತೆಯಲ್ಲೇ ಒಬ್ಬ ಅಪ್ಪಟ ಪ್ರೇಮಿಯು ಇದ್ದ ಎಂಬುದಕ್ಕೆ ಮೇಲಿನ ಗೀತೆಗಳು ಸದಾ ಹಸಿರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಅವರ ಸಾಹಿತ್ಯಾಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಸಹ ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕವಿ ಸಿದ್ದಲಿಂಗಯ್ಯನವರು ತಮ್ಮ `ಹೊಲೆಮಾದಿಗರ ಹಾಡು’ ಕವನ ಸಂಕಲನದ ಮೂಲಕ ದಮನಿತರ, ತುಳಿತಕ್ಕೆ ಒಳಗಾದವರ ನೋವು, ದುಃಖ, ದುಮ್ಮಾನಗಳನ್ನು ಸಮಾಜದ ಮುಂದೆ ಇರಿಸಿದ್ದರು. ತಮ್ಮ ಸಾಹಿತ್ಯದಲ್ಲಿ ಗಾಂಭೀರ್ಯತೆಯ ನಡುವೆಯೂ ಅಸಹಾಯಕರ ನೋವು, ಅವಮಾನಗಳನ್ನು ಮನನೀಯವಾಗಿ ಚಿತ್ರಿಸುತ್ತಿದ್ದರು. ನನ್ನೊಂದಿಗೆ ಆತ್ಮೀಯರಾಗಿದ್ದ ಕವಿ ಸಿದ್ದಲಿಂಗಯ್ಯನವರು ದೂರಾಗಿರುವುದು ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸದನದ ಭೂಷಣಪ್ರಾಯರಾಗಿ ವಿಷಯಗಳನ್ನು ಚರ್ಚಿಸುತ್ತಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಕವಿ ಸಿದ್ದಲಿಂಗಯ್ಯನವರು ಪಾತ್ರರಾಗಿದ್ದನ್ನೂ ಸಚಿವರು ಸ್ಮರಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಹಂಪಿ ಕನ್ನಡ ವಿವಿಯ ನಾಡೋಜ ಪುರಸ್ಕಾರ, ವಿ.ಸೋಮಣ್ಣ ಪ್ರತಿಷ್ಠಾನದ ಪ್ರಥಮ ಜೆ.ಹೆಚ್ ಪಟೇಲ್ ಪ್ರಶಸ್ತಿ, ಪ್ರತಿಷ್ಟಿತ ನೃಪತುಂಗ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಹಿರಿಯ ಕವಿಗಳ ಚೇತನಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕೋರಿದ್ದಾರೆ.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸಹ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ದಲಿತ ಚಳವಳಿಯ ಆದ್ವರ್ಯು ಹಾಗೂ ದಲಿತ ಸಾಹಿತ್ಯದ ಮೇರು ಆಗಿದ್ದ ಕವಿ ಸಿದ್ದಲಿಂಗಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕಾದ ಬಹುದೊಡ್ಡ ನಷ್ಟ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು, ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಗುಣಗಾನ ಮಾಡಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ ಅವರು, ನೆಲದ ಸೊಗಡನ್ನೂ ತಮ್ಮ ಸಾಹಿತ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟವರು. ಅಪ್ರತಿಮ ಭಾಷಣಕಾರರು ಆಗಿದ್ದ ಸಿದ್ದಲಿಂಗಯ್ಯ ಅವರು, ವಿಧಾನ ಪರಿಷತ್ ಸದಸ್ಯರಾಗಿಯೂ ಚಿರಸ್ಮರಣೀಯ ಸೇವೆ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.
ಎಚ್.ಕೆ.ಪಾಟೀಲ್ ಸಹ ಸಂತಾಪ ಸೂಚಿಸಿ, ಕನ್ನಡದ ಲೇಖಕ ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಡಾ.ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆ ಬಗ್ಗೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ ಮತ್ತು ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ನಮ್ಮೊಂದಿಗೆ ಕೆಲಸ ಮಾಡಿದ್ದರು. ತುಂಬಾ ಮೊನಚಾದ ಮಾತು ಹಾಗೂ ಅಷ್ಟೇ ಹಾಸ್ಯಪ್ರಜ್ಞೆ ಅವರಲ್ಲಿತ್ತು. ಸದನದಲ್ಲಿ ಅವರು ಮಾತನಾಡುತ್ತಿದ್ದಾಗ ಹೊಸ ವಿಚಾರಗಳು ಪ್ರಕಟವಾಗುತ್ತಿದ್ದವು ಎಂದಿದ್ದಾರೆ.
ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದವರಾದ ಇವರು, ನಮ್ಮ ಉತ್ತರ ಕರ್ನಾಟಕ ಭಾಷೆಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಸಾಹಿತ್ಯ ಅಕಾದೆಮಿಯಲ್ಲಿ ಕೆಲಸ ಮಾಡಿದ್ದರು. ಕನ್ನಡದ ಸಾಹಿತ್ಯ, ದಲಿತ-ಬಂಡಾಯ ಚಳುವಳಿಗೆ ಹೊಸ ದಿಕ್ಕನ್ನು ತಂದುಕೊಟ್ಟವರು. ಉತ್ತಮ ಭಾಷಣಕಾರರಾಗಿದ್ದ ಸಿದ್ದಲಿಂಗಯ್ಯನವರು, ಅಂಬೇಡ್ಕರ್, ಪೆರಿಯಾರ್ ಮತ್ತು ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಬೆಳೆದವರು.
ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು ಇವರ ದಾಖಲಾರ್ಹ ಕೃತಿಗಳು. ಕನ್ನಡ ಸಾಹಿತ್ಯಕ್ಕೊಂದು ಹೊಸ ತಿರುವನ್ನು ನೀಡಿದ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದ ಡಾ.ಸಿದ್ದಲಿಂಗಯ್ಯ ನಿಧನರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡದ ಉತ್ತಮ ಸಂಸದೀಯ ಪಟುವಾಗಿದ್ದ ಇವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ವೈರಸ್ ನಿಂದಾಗಿ ಹೋರಾಟದ ಸಾಹಿತಿಗಳನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ, ಇದೊಂದು ವಿಪರ್ಯಾಸ. ಇತ್ತಿಚೆಗೆ ನನ್ನ ಕೃತಿಗೆ ಮುನ್ನುಡಿ ಬರೆಯಲು ಕೋರಿದ್ದಾಗ ಪ್ರೀತಿಯಿಂದ ಒಪ್ಪಿ ಬರೆದು ಕೊಡುವುದಾಗಿ ಹೇಳಿದ್ದರು. ಒಬ್ಬ ಸ್ನೇಹಜೀವಿ, ಬುದ್ಧಿಜೀವಿ ಹಾಗೂ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಆಗಲಿದ ಸಿದ್ದಲಿಂಗಯ್ಯನವರ ಆತ್ಮಕ್ಕೆ ಶಾಂತಿಯನ್ನು ಹಾಗೂ ಕುಟುಂಬ ವರ್ಗಕ್ಕೆ, ಬಂಧುವರ್ಗಕ್ಕೆ, ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಮಡಿಕೇರಿ: ಹೋಮ್ ಕ್ವಾರಂಟೈನ್ ನಿಂದಾಗಿಯೇ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುತ್ತಿದ್ದು, ಡೆತ್ ರೇಟ್ ಸಹ ಜಾಸ್ತಿ ಆಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರನ್ನು ಮುಲಾಜಿಲ್ಲದೆ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿ ಎಂದು ನಗರದಲ್ಲಿ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಹೋಮ್ ಕ್ವಾರಂಟೈನ್ ನಿಂದ ಜಿಲ್ಲೆಯಲ್ಲಿ ಸಾವುಗಳು ಸಂಭವಿಸುತ್ತಿವೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸಚಿವರ ಗಮನ ಸೇಳೆದರು. ಹೀಗಾಗಿ ಯಾರೇ ಹೋಮ್ ಕ್ವಾರಂಟೈನ್ ನಲ್ಲಿ ಇದ್ದರೂ ಅವರನ್ನು ಮನೆಯಲ್ಲಿ ಇರಿಸದೇ ಕೋವಿಡ್ ಕೇರ್ ಸೆಂಟರ್ ಗಳಿಗೆ ಕರೆ ತರಬೇಕು, ಯಾರ ಒತ್ತಡಕ್ಕೂ ಒಳಗಾಗಬರದು. ಈ ರೀತಿಯಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗಿರುವುದರಿಂದಲೇ ಸಿಎಂ ಗಮನಕ್ಕೆ ತಂದು ಕೊಡಗು ಜಿಲ್ಲೆಯನ್ನು ಮತ್ತೆ ಒಂದುವಾರ ಲಾಕ್‍ಡೌನ್ ಮಾಡಲು ಮನವಿ ಮಾಡಿದೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.
– ಅಶೋಕ್, ಸಿಟಿ ರವಿ, ಶೆಟ್ಟರ್ ಸಭೆ ನಡೆಸಿರುವುದು ಸುಳ್ಳು
– ಯಾರೂ ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ
ಹಾಸನ: ಸಿಎಂ ಬದಲಾವಣೆ ಮಾಧ್ಯಮಗಳ ಉಹಾಪೋಹ ಅಷ್ಟೆ. ಸಿಎಂ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರೇ ನಮ್ಮ ಪಕ್ಷದ ನಾಯಕ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭೆ ಬಳಿಕ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿ ರಾಷ್ಟ್ರ ನಾಯಕರ ಭೇಟಿ ವಿಚಾರವಾಗಿ ಮಾತನಾಡುವಾಗ ಅವರು ಈ ಕುರಿತು ಸ್ಪಷ್ಟಪಡಿಸಿದರು. ಜಗದೀಶ್ ಶೆಟ್ಟರ್ ಬೃಹತ್ ಕೈಗಾರಿಕಾ ಸಚಿವರು, ಪ್ರಭಾವಿ ನಾಯಕರು. ಕೈಗಾರಿಕಾ ಕ್ಷೇತ್ರದ ಕುರಿತು ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಇನ್ನಾವುದೇ ಉದ್ದೇಶ ಇಲ್ಲ ಎಂದು ಅವರು ತಿಳಿಸಿದರು.
ಕೈಗಾರಿಕಾ ಸಚಿವರು ಯಾಕೆ ದೆಹಲಿಗೆ ಹೋಗಿದ್ದರು ಎಂದು ನನ್ನನ್ನು ಕೇಳಿದರೆ ನನ್ನಂಥ ದಡ್ಡ ಯಾರೂ ಇಲ್ಲ. ಆದರೆ ಯಡಿಯೂರಪ್ಪ ಈ ರಾಜ್ಯದ ಮತ್ತು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಚಿಕ್ಕಮಗಳೂರಿನಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ಸಿ.ಟಿ.ರವಿ ಭೇಟಿ ಮಾಡಿ ಸಭೆ ನಡೆಸಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿಯವರಿಗೆ ಕೋವಿಡ್-19 ಸೋಂಕು ತಗುಲಿತ್ತು. ಅವರನ್ನು ಮಾತನಾಡಿಸಲು ಯಾರೂ ಹೋಗಿರಲಿಲ್ಲ. ಆರ್.ಅಶೋಕ್ ಸಹ ಎಲ್ಲೋ ಇದ್ದರು. ಜಗದೀಶ್ ಶೆಟ್ಟರ್ ಅಲ್ಲಿ ಇರಲೇ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದರು.
ಮಡಿಕೇರಿ: ತಲಕಾವೇರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ನಾರಾಯಣ ಆಚಾರ್ ಹಾಗೂ ಸೋದರ ಆನಂದತೀರ್ಥ ಅವರ ಕುಟುಂಬಸ್ಥರಿಗೆ ಸಚಿವ ವಿ.ಸೋಮಣ್ಣ ಪರಿಹಾರ ಚೆಕ್ ವಿತರಿಸಿದ್ದಾರೆ.
ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಐದು ಲಕ್ಷ ಪರಿಹಾರದಲ್ಲಿ ಇಬ್ಬರು ಮಕ್ಕಳಾದ ನಮಿತಾ ಹಾಗೂ ಸುಶೀಲಾ ಅವರಿಗೆ ತಲಾ 2.5 ಲಕ್ಷ ಪರಿಹಾರ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ. ಆನಂದ ತೀರ್ಥ ಅವರು ಬ್ರಹ್ಮಚಾರಿ ಆಗಿದ್ದ ಹಿನ್ನೆಲೆಯಲ್ಲಿ ತಂಗಿ ಸುಶೀಲಾ ಅವರಿಗೆ 5 ಲಕ್ಷ ಚೆಕ್ ನೀಡಲಾಗಿದೆ. ಇನ್ನು ಇಡೀ ಕುಟುಂಬವನ್ನು ಕಳೆದುಕೊಂಡು ಒಂಬಂಟಿ ಆಗಿದ್ದೇನೆ. ಮತ್ತೆ ಮನೆಗೆ ಬರಲು ಯಾರೂ ಇಲ್ಲ ಎಂದು ನಾರಾಯಣ ಆಚಾರ್ ಸಹೋದರಿ ಅಣ್ಣಂದಿರನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ನನ್ನ ಅಣ್ಣ ತಮ್ಮಂದಿರು ಸ್ವಲ್ಪವೂ ನೋವಾಗದಂತೆ ನೋಡಿಕೊಂಡಿದ್ದರು.ಈಗ ನನಗೆ ತವರು ಮನೆಕಡೆಯವರಾಗಿ ಒಬ್ಬರೂ ಇಲ್ಲ. ಅತ್ತ ತವರು ಮನೆಯೂ ಇಲ್ಲ. ನನ್ನ ತಾಯಿಯ ಸಂಬಂಧಿಯಾಗಿ ಇನ್ನು ಯಾರು ಇಲ್ಲ ಎಂದು ಆನಂದತೀರ್ಥರ ತಂಗಿ ಸುಶೀಲ ಕಣ್ಣೀರು ಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರು ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣದ ಮೃತರ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಿಸಿದರು. pic.twitter.com/kkih5k0R2Y
ಭೂಕುಸಿತವಾದ ಸ್ಥಳದಲ್ಲಿ ಇಂದು ಮತ್ತೊಂದು ಶವ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೇ ಭೂಕುಸಿತದಲ್ಲಿ ರವಿಕಿರಣ್ ಮತ್ತು ಶ್ರೀನಿವಾಸ್ ಇಬ್ರು ನಾಪತ್ತೆಯಾಗಿದ್ದರು. ಸದ್ಯ ದೊರೆತಿರುವ ಶವ ಯಾರದ್ದೆಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಬ್ಬರ ಸಂಬಂಧಿಕರು ಬಂದು ಬಳಿಕ ಶವದ ಗುರುತು ಪತ್ತೆ ಹಚ್ಚಬೇಕಾಗಿದೆ. ಇಲ್ಲದಿದ್ದರೆ ಡಿಎನ್‍ಎ ಪರೀಕ್ಷೆಗೆ ಕಳುಹಿಸ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಮಡಿಕೇರಿ: ರಾಜ್ಯ ಸರ್ಕಾರ ಮೆಡಿಕಲ್ ಕಿಟ್‍ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಸಿದ್ದರಾಮಯ್ಯನವರು ಹೇಳುವ ಮೂಲಕ ಹಿಟ್ ರನ್ ಕೆಲಸ ಮಾಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮಾಜಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಕೊರೊನಾ ಸಂಬಂಧ ಮಡಿಕೇರಿಯಲ್ಲಿ ಪ್ರಗತಿ ಪರಿಶೀಲಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಸರ್ಕಾರ ಮೆಡಿಕಲ್ ಕಿಟ್ ಅನ್ನು ಖರೀದಿಯನ್ನೇ ಮಾಡಿಲ್ಲ. ಅವ್ಯವಹಾರ ಹೇಗೆ ನಡೆಯುತ್ತದೆ, ಇದು ಸುಮ್ಮನೇ ಮಾಡಿರುವ ಆರೋಪ ಎಂದು ಟೀಕಿಸಿದರು.
ಅವ್ಯವಹಾರ ಆಗಿದೆ ಎಂದಾಗಲೇ ಸಿಎಂ ಅವರು ಸಿದ್ದರಾಮಯ್ಯನವರಿಗೆ ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಖರೀದಿಯಲ್ಲಿ ಅವ್ಯವಹಾರ ಆಗಿದೆ ಎನ್ನೋ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯನವರು ಸಭೆಗೆ ಹೋಗದೆ ಕೇವಲ ಹಿಟ್ ಅಂಡ್ ರನ್ ಕೆಲಸ ಮಾಡುತ್ತಿದ್ದಾರೆ. ಆ ರೀತಿ ಯಾವುದೇ ದಾಖಲೆಗಳಿದ್ದರೆ ತೋರಿಸಲಿ ಎಂದು ಸವಾಲು ಎಸೆದರು.
ಕೊರೊನಾ ಸಂದಿಗ್ಧ ಸಂದರ್ಭದಲ್ಲಿ 500 ರಿಂದ 600 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಆದರೆ ಈ ಹಣದಲ್ಲಿ ಸರ್ಕಾರ ಒಂದೇ ಒಂದು ರೂಪಾಯಿ ಅವ್ಯವಹಾರ ಮಾಡಿಲ್ಲ. ಆದರೂ ಹೀಗೆ ಸುಮ್ಮನೇ ಆರೋಪ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಕೂಡ 5 ವರ್ಷ ಮುಖ್ಯಮಂತ್ರಿಗಳಾಗಿದ್ದರೂ, ಹಣ ಹೆಚ್ಚುವರಿ ಖರ್ಚು ಮಾಡದೆ ಇದ್ದರೂ ಅವ್ಯವಹಾರ ಹೇಗೆ ಆಗುತ್ತೆ ಎಂದು ಅವರೇ ಚಿಂತನೆ ನಡೆಸಬೇಕು ಎಂದು ಸಚಿವ ಸೋಮಣ್ಣ ಹೇಳಿದರು.
ಮೈಸೂರು: ನಗರದಲ್ಲಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ಶೀಘ್ರವೇ ಲೋಕಾಪರ್ಣೆಗೊಳಿಸುವಂತೆ ಮಾಜಿ ಶಾಸಕ ವಾಸು ಅವರು ಜಿಲ್ಲಾ ಉಸ್ತುವಾರಿ ಮತ್ತು ವಸತಿ ಖಾತೆಯ ಸಚಿವ ವಿ. ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದಾರೆ.
ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಮೈಸೂರು, ಮಂಡ್ಯ, ಹಾಸನ, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳಿಂದ ಬಡ ರೋಗಿಗಳು ಬರುತ್ತಾರೆ. ಇದರಿಂದ ಕೆ.ಆರ್ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ. ಈ ಒತ್ತಡ ತಗ್ಗಿಸಲು ಹಿಂದಿನ ಸರ್ಕಾರ 64 ಕೋಟಿ ರೂ ವೆಚ್ಚದಲ್ಲಿ ಹೊಸ ಜಿಲ್ಲಾಸ್ಪತ್ರೆ ನಿರ್ಮಿಸಿದೆ. ಐದು ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ತಿಯಾಗಿದೆ. ಆದರೆ, ಅವಶ್ಯಕ ಯಂತ್ರೋಪಕರಣಗಳ ಅಳವಡಿಕೆ ಬಾಕಿ ಇದೆ.
ಕೂಡಲೇ ಯಂತ್ರೋಪಕರಣಗಳ ಅಳವಡಿಸಿ, ವೈದ್ಯಕೀಯೇತರ ಸಿಬ್ಬಂದಿಗಳು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಾತಿ ಮಾಡಿ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿ ಎಂದು ಶಾಸಕರು ಮನವಿ ಮಾಡಿದ್ದಾರೆ.
ಮೈಸೂರು: ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಕಾರಣ ಮೈಸೂರಿನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‍ಗೆ ವೇದಿಕೆಯಲ್ಲೇ ಸಚಿವ ವಿ.ಸೋಮಣ್ಣ ಮೊನ್ನೆ ಬೆವರಳಿಸಿದ್ದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು.
ಇದರ ಬೆನ್ನಲ್ಲೇ ಇಂದು ಉಸ್ತುವಾರಿ ಸಚಿವರ ವಿರುದ್ಧವೇ ಅಧಿಕಾರಿ ಸುರೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ತಪ್ಪು ಮಾಡಿಲ್ಲ ನನ್ನ ಬಗ್ಗೆ ತಪ್ಪು ಮಾಹಿತಿ ಪಡೆದು ನೀವು ಸಾರ್ವಜನಿಕವಾಗಿ ನನ್ನನ್ನು ನಿಂದಿಸಿದ್ದೀರಿ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಆರೋಪಿಸಿದ್ದಾರೆ.
ಸಚಿವರ ಬೈಗುಳದಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ದಾರಿಯಲ್ಲಿ ಓಡಾಡುವಾಗ ಜನ ನನ್ನನ್ನು ನೋಡುವಂತಾಗಿದೆ. ನನ್ನ ಮಗಳು, ಹೆಂಡತಿ ಎಲ್ಲರೂ ಕೆಲಸ ಬಿಟ್ಟುಬಿಡಿ ಅಂತಿದ್ದಾರೆ. ನಾನು ತಪ್ಪು ಮಾಡಿದ್ದರೆ ತನಿಖೆ ನಡೆಸಿ ಶಿಕ್ಷೆ ಕೊಡಿಸಲಿ. ಅದು ಬಿಟ್ಟು ಬಹಿರಂಗವಾಗಿ ನಿಂದಿಸಿ ಮರ್ಯಾದೆ ತೆಗೆಯೋದು ಎಷ್ಟು ಸರಿ. ಒಳ್ಳೆಯ ಕೆಲಸ ಮಾಡಿ ಎಂದು ಒಳ್ಳೆಯ ಭಾಷೆಯಲ್ಲಿ ಹೇಳಿ ಸರ್. ನೀವು ಆಡಿದ ಮಾತುಗಳು ಸರಿಯಿಲ್ಲ. ನಿಮ್ಮ ಮಾತಿನಿಂದ ನಾನು ಏನೇನೋ ಯೋಚನೆ ಮಾಡಿಬಿಟ್ಟಿದ್ದೆ. ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು. ನಗದು ಹಣ ನೀಡೋದು ನನ್ನ ಕೆಲಸ ಅಲ್ಲ. ಈಗಲೂ ಸ್ಪರ್ಧಿಗಳಿಗೆ ಹಣ ಬಂದಿರೋದು ನನ್ನ ಕೇಂದ್ರ ಕಚೇರಿಯಿಂದಲೇ. ನನ್ನದಲ್ಲದ ತಪ್ಪಿಗೆ ನನ್ನನ್ನು ನಿಂದಿಸಿದ್ದು ಸರಿಯೇ ಎಂದು ಪ್ರಶ್ನಿಸಿದರು.
ಜ.3 ರಂದು ನಡೆದ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ, ವೇದಿಕೆ ಮೇಲೆ ಇದ್ದ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್ ಕಂಡೊಡನೆ ತೀವ್ರವಾಗಿ ತರಾಟೆ ತೆಗೆದು ಕೊಂಡಿದ್ದರು.
ಸಚಿವರ ತರಾಟೆಯ ಅಕ್ಷರ ರೂಪ ಇಲ್ಲಿದೆ: ಇವನು ಎಲ್ಲವನ್ನು ತಿಂದು ತೇಗಿತ್ತಾನೆ. ಏ… ಅಕೌಂಟ್ ಬುಕ್ ತಗೋ ಬಾ ಈಗಲೇ. ಈಗಲೇ ಇವನನ್ನು ಸಸ್ಪೆಂಡ್ ಮಾಡಿ. ಈ ಇಸ್ ಎ ಬಾಸ್ಟೆರ್ಡ್. ಮಕ್ಕಳಿಗೆ ಕೊಡೊ ಹಣನಾದ್ರು ಕೊಡಬೇಕಲ್ವಾ? ಅದನ್ನು ಕೂಡ ತಿಂದು ತೇಗಿದ್ದಾನೆ. ಈ ಸ್ಪೋಟ್ರ್ಸ್‍ಗಾಗಿ 7 ಕೋಟಿ ರೂ. ಕೊಟ್ಟಿರೋದು ನಾವು. ಅದನ್ನು ತಿಂದು ತಿಂದು ತೇಗಿದ್ದಾನೆ. ಲೆಟ್ ಇಮ್ ದಿ ಸಸ್ಪೆಂಡ್ ನೌ. ಹೋಗ್ತಾ ಇರು ಇಲ್ಲಿಂದ ಜಾಗ ಖಾಲಿ ಮಾಡು. ನಾನು ಕ್ಯಾಬಿನೆಟ್‍ನಲ್ಲಿ ಅಪ್ರೋಲ್ ಮಾಡಿ ಸಂಸ್ಪೇಡ್ ಮಾಡಿಸ್ತಿನಿ. ನಾನು ಈವರೆಗೂ ಇಲ್ಲಿ ಒಂದು ಕಾಫಿಯನ್ನು ಕುಡಿದಿಲ್ಲ ಎಂದು ಹೇಳಿದ್ದರು. ಸಚಿವರ ಮಾತುಗಳನ್ನು ಕೇಳಿದ ಅಧಿಕಾರಿ ಸುರೇಶ್, ಮರು ಮರುಮಾತನಾಡದೆ ವೇದಿಕೆಯಿಂದ ಕೆಳಗೆ ಇಳಿದು ಹೋಗಿದ್ದರು.
ಮೈಸೂರು: ಗಾಯಕ ಚಂದನ್ ಶೆಟ್ಟಿ ತನ್ನ ಲವ್ ಕೇಸ್‌ನ್ನ ಮೈಸೂರು ದಸರಾದಲ್ಲಿ ತಂದ ಹಾಕಿ ತಲೆನೋವು ಕೊಟ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಚಂದನ್ ಶೆಟ್ಟಿ ಚಿಕ್ಕವನಿದ್ದಾಗಿನಿಂದ ನನಗೆ ಗೊತ್ತು. ಅವನ ಲವ್ ಕೇಸ್ ಅನ್ನು ಮೈಸೂರು ಯುವ ದಸರಾದಲ್ಲಿ ತಂದು ಹಾಕಿಬಿಟ್ಟ. ಅವನು ಎಲ್ಲಾದರೂ ಮಜಾ ತಗೋಬಹುದಿತ್ತು. ಅದನ್ನ ಬಿಟ್ಟು ವೇದಿಕೆ ಮೇಲೆ ಪ್ರಪೋಸ್ ಮಾಡಿ ನನಗೆ ಹಿಂಸೆ ಕೊಡುತ್ತಿದ್ದಾನೆ. ಇದು ಯಾರಿಗೆ ಬೇಕಿತ್ತು ಎಂದು ವ್ಯಂಗ್ಯವಾಡಿದರು.
ಚಂದನ್ ಶೆಟ್ಟಿ ಫೋನ್ ಮಾಡಿ ತಪ್ಪಾಗಿದೆ ಎಂದು ಕೇಳಿಕೊಂಡ. ಆಗ ನಾನು, ಅಲ್ಲೋ ಚಂದನ್ ಶನಿದೇವರ ತರ ಬಂದು ಹೆಗಲು ಏರಿಬಿಟ್ಟೆಲ್ಲೋ. ನನ್ನ ಒಳ್ಳೆತನ ನೀನು ದೂರುಪಯೋಗ ಮಾಡಿಕೊಂಡೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದೆ. ಅವರ ತಾಯಿ ಕೂಡ ಫೋನ್ ಮಾಡಿ ಅರ್ಧ ಗಂಟೆ ಮಾತನಾಡಿ ಪಿಟೀಲು ಕೂಯ್ದರು ಎಂದು ಹೇಳಿದರು.
ಯುವ ದಸರಾ ವೇದಿಕೆ ಚಂದನ್ ಶೆಟ್ಟಿ ತನ್ನ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ಸಮಾಧಾನ ಸಿಗುತ್ತಿಲ್ಲ. ಇಂತಹ ಘಟನೆಗಳಿಗೆ ನಾವೇ ಹೊಣೆ ಆಗುತ್ತೇವೆ. ಹೀಗಾಗಿ ನಿನ್ನೆ ರಾತ್ರಿ ಚಾಮುಂಡಿ ತಾಯಿ ದರ್ಶನ ಮಾಡಿ, ಇದಕ್ಕೊಂದು ಪರಿಹಾರ ನೀಡಮ್ಮ ಅಂತ ಬೇಡಿಕೊಂಡಿದ್ದೇನೆ. ನಾನು ನಿಂತಿದ್ದನ್ನು ಕಂಡು ಜನರು ಬೈಯಲು ಶುರು ಮಾಡಿದರು. ಹೀಗಾಗಿ ಅಲ್ಲಿಂದ ಹೊರಗೆ ಬಂದೆ ಎಂದು ಸುದ್ದಿಗೋಷ್ಠಿನಲ್ಲಿ ನಗೆ ಹರಿಸಿದರು.
ಚಂದನ್‍ಶೆಟ್ಟಿ ಗೌರವ ಧನ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ, ತಂದೆ ಅಕ್ಟೋಬರ್ 8ರ ವರೆಗೆ ಆ ವಿಚಾರ ಬಿಟ್ಟುಬಿಡಿ. ಮೊದಲು ದಸರಾ ಮುಗಿಯಲಿ ಆಮೇಲೆ ಎಲ್ಲವನ್ನೂ ವಿಚಾರ ಮಾಡೋಣ. ಚಂದನ್ ಶೆಟ್ಟಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.