ಹಾಸನ: ನಾನು ಕಳೆದ 15 ದಿನಗಳಿಂದ ಹೇಳುತ್ತಲೇ ಇದ್ದೇನೆ ನನ್ನ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಡಿಸಿ ಕೊಡುತ್ತಿಲ್ಲ. ಹಿಂಗಾದ್ರೆ ನಮ್ ಜನ ಸಾಯಲ್ವ. ನಮ್ಮ ಕ್ಷೇತ್ರಕ್ಕೆ ದುಡ್ಡು ಕೊಡಿಸಿ, ಇಲ್ಲ ಸಭೆಯನ್ನು ನೀವೇ ಮಾಡ್ಕೊಳ್ಳಿ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಸಭೆಯಿಂದ ಹೊರ ನಡೆಯುವ ನಾಟಕೀಯ ಬೆಳವಣಿಗೆ ಹಾಸನದ ಹೊಯ್ಸಳ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯ್ತಿನಲ್ಲಿ ಸಚಿವ ಸುಧಾಕರ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗಿರೀಶ್ ಮಾತನಾಡಲು ಮುಂದಾದ್ರು. ಈ ವೇಳೆ ಡಿಸಿ ಮಾತನಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ರೇವಣ್ಣ, ಬೇಕಾದ್ರೆ ಸಚಿವರು ಮಾತನಾಡಲಿ. ಆದರೆ ನಮ್ಮ ಬೇಡಿಕೆಗೆ ಸ್ಪಂದಿಸದ ಡಿಸಿ ಮಾತನಾಡುವುದು ಬೇಡ ಎಂದು ಪಟ್ಟು ಹಿಡಿದಿದ್ದರು.
ಕಳೆದ 15ದಿನಗಳಿಂದ ಕ್ಷೇತ್ರದಲ್ಲಿ ಜನ ಸಾಯ್ತ ಇದ್ದಾರೆ. ಡಿಸಿಯವರು ಒಂದು ರೂಪಾಯಿ ಹಣ ಬಿಡುಗಡೆ ಮಾಡುತ್ತಿಲ್ಲ. ಮತ್ತೆ ನಾವ್ಯಾಕೆ ಶಾಸಕರಾಗಿ ನಮ್ಮ ಕ್ಷೇತ್ರದಲ್ಲಿ ಇರಬೇಕು. ಇವತ್ತಿನವರೆಗೆ ಒಂದು ಬಿಡಿಗಾಸು ಕೂಡ ಬಿಡುಗಡೆ ಮಾಡಿಲ್ಲ. ಇದರ ಜೊತೆಗೆ ಔಷಧಿಯು ಕೂಡ ಸರಿಯಾಗಿ ತಾಲೂಕಿಗೆ ಬರುತ್ತಿಲ್ಲ. ಹೀಗಾದರೆ ನಮ್ಮ ಜನರ ಪರಿಸ್ಥಿತಿಯನ್ನು ಯಾರಿಗೆ ಹೇಳುವುದು ಎಂದು ತಾವು ಕುಳಿತಿದ್ದ ಆಸನದಿಂದ ಎದ್ದು ಸಭೆಯಿಂದ ನಿರ್ಗಮಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ಓದಿ: ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ
ರೇವಣ್ಣನ ಮಾತಿನ ಮಧ್ಯೆ ಪ್ರವೇಶ ಮಾಡಿದ ಹಾಸನ ಶಾಸಕ ಪ್ರೀತಮ್ ಗೌಡ, ರೇವಣ್ಣನ ಆಕ್ರೋಶವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಸರ್ಕಾರ ಹೇಳಿದಂತೆ ಕೆಲಸ ಮಾಡುತ್ತಾರೆ. ನಿಮ್ಮ ಯಾವುದೇ ಕೆಲಸ ಬೇಕಾದ್ರು ಸರ್ಕಾರದಿಂದ ಮಾಡಿಸೋಣ. ನಾವು ಕೂಡ ನಿಮಗೆ ಸಾಥ್ ಕೊಡುತ್ತೇವೆ. ಎಲ್ಲದಕ್ಕೂ ಡಿಸಿ ಹೊಣೆಗಾರಿಕೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡ ರೇವಣ್ಣ ಸಭೆಯಿಂದ ಹೊರನಡೆಯಲು ಮುಂದಾದರು. ಈ ವೇಳೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಶಾಸಕ ಪ್ರೀತಮ್ ಗೌಡ ಮನವೊಲಿಸುವ ಮೂಲಕ ವಾಪಸ್ ಅವರ ಸ್ಥಳಕ್ಕೆ ಕೂರಿಸಿ, ಸಭೆಯ ಗದ್ದಲವನ್ನು ತಿಳಿಗೊಳಿಸಿದರು.
ಬೆಂಗಳೂರು: ಮೈತ್ರಿ ಸರ್ಕಾರ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಉತ್ತರ ನೀಡಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಬಡ ಮಕ್ಕಳ ಅನುಕೂಲತೆಗೆ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭ ಮಾಡಿ ಎಂದು ಮನವಿ ಮಾಡಿದ್ದೆ ಇದೇ ನನ್ನ ತಪ್ಪಾ ಎಂದು ಕೇಳಿದ್ದಾರ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ. ಬೇರೆ ಯಾವುದೇ ಇಲಾಖೆಯಲ್ಲೂ ಕೂಡ ನಾನು ಮಧ್ಯಪ್ರವೇಶ ಮಾಡಿಲ್ಲ. ನನ್ನ ಇಲಾಖೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅದು ಬಿಟ್ಟು ಬೇರೆಯವರ ವಿಚಾರದಲ್ಲಿ ನಾನೇನು ಮಾಡಿಲ್ಲ. ನಾನು ಮಾಡಿದ ತಪ್ಪು ಅಂದರೆ ಕನ್ನಡ ಶಾಲೆ ಬೇಕು ಎಂದು ಹೇಳಿ ಬಡ ಮಕ್ಕಳಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭಿಸಲು ಮನವಿ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.
ಮುಜರಾಯಿ ಇಲಾಖೆಗೆ ಸೇರಿದ ಸ್ಥಳ ತಿರುಪತಿಯಲ್ಲಿ ಇದ್ದು, ಆದರ ಅಭಿವೃದ್ಧಿ ನಮ್ಮ ಇಲಾಖೆಯಿಂದಲೇ ನಡೆಯುತ್ತಿದೆ. ವಿವಿಧ ರಸ್ತೆಗಳ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿ ಮಹಾದೇಶ್ವರ ದೇವಸ್ಥಾನಕ್ಕೆ ಮೆಟ್ಟಿಲು, ದಸರಾಗೆ ಅನುಕೂಲವಾಗುವಂತೆ ರಸ್ತೆ, ತಲಕಾಡು ರಸ್ತೆ ಅಭಿವೃದ್ಧಿ ಕೆಲಸಗಳು ಸೇರಿದೆ. ನಾನು ಜೀವನದಲ್ಲಿ ತಪ್ಪು ಮಾಡಿದರೆ ಮಹಾ ಲಕ್ಷ್ಮಿ ದೇವಿ ನೋಡಿಕೊಳ್ಳಲಿ ಎಂದರು.
ಬೆಂಗಳೂರು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗೆ ಸಂಬಂಧಿಸಿದ ಕೆಲಸವನಷ್ಟೇ ಮಾಡಿದ್ದೇನೆ. ಅದು ಬಿಟ್ಟು ಬೇರೆಯವರ ಇಲಾಖೆಯ ವಿಚಾರದಲ್ಲಿ ನಾನೇನು ಮಾಡಿಲ್ಲ. ಔಟರ್ ರಿಂಗ್ ರೋಡ್ ಕೆಲಸಕ್ಕೆ ಹಣವನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ನಾನು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಆರಂಭ ಮಾಡಿ ಪೂರ್ಣ ಮಾಡದ ಕೆಲಸಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆ ಮಾಡಿದ್ದೇನೆ. ಅಭಿವೃದ್ಧಿ ಸಂಬಂಧ ಶಾಸಕರ ಜೊತೆ ಸಭೆ ಕರೆಯಲಾಗಿತ್ತು, ಸಿಎಂ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆ. ಆದರೆ ನನ್ನ ಮೇಲೆ ಆರೋಪ ಮಾಡಲಾಗಿದೆ. ನಾವು ಶಾಸಕರ ಮನಸ್ಸಿಗೆ ನೋವುಂಟು ಮಾಡಿಲ್ಲ, ಒಂದೊಮ್ಮೆ ತಿಳಿಯದೆ ಮಾಡಿದ್ದರೆ ಕ್ಷಮೆಯಾಚನೆ ಮಾಡಲಿದ್ದೇವೆ ಎಂದರು.
ನನ್ನ ಕ್ಷೇತ್ರದಲ್ಲಿ ನಡೆಯಬೇಕಾದ ವರ್ಗಾವಣೆಗಳ ಸಂಬಂಧ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದು, ಇದುವರೆಗೂ ಬೇರೆ ಯಾವುದೇ ಇಲಾಖೆಯಲ್ಲೂ ವರ್ಗಾವಣೆ ಮಾಡಲು ಕೈ ಹಾಕಿಲ್ಲ. ನಾನು ಯಾವುದೇ ಇಲಾಖೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ, ಶಾಸಕರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದರು.
ಮಾಧ್ಯಮಗಳು ನನ್ನನ್ನು ‘ಸೂಪರ್ ಸಿಎಂ’ ಎಂದು ಕರೆಯುತ್ತಾರೆ. ಅದನ್ನು ನಿಮ್ಮ ಆಶೀರ್ವಾದ ಎಂದು ಹೇಳಿ ಸುಮ್ಮನೆ ಆಗಿದ್ದೇನೆ. ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದು, ಒಬ್ಬರನ್ನು ಕರೆತಂದು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೆ. ಆ ರಾಜ್ಯಸಭಾ ಸದಸ್ಯನನ್ನು ದೇವಿ ನೋಡಿಕೊಳ್ಳುತ್ತಾರೆ. ತಾಯಿ ಸನ್ನಿಧಿಯಲ್ಲಿ ಏನು ನಡೆದಿದೆ ಎಂದು ಗೊತ್ತು ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದರು.
ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೂ ನನಗೂ ಸಂಬಂಧವಿಲ್ಲ. ನಾಳೆ ಏನಾಗುತ್ತೆ ಎಂಬುವುದನ್ನು ಕಾದು ನೋಡೋಣ. ಈ ವಿಚಾರಗಳನ್ನು ಸಿಎಂ ಅವರು ನೋಡಿಕೊಳ್ಳುತ್ತಾರೆ. ನನಗೆ ನನ್ನ ಇಲಾಖೆಯದ್ದೇ ಜಾಸ್ತಿ ಕೆಲಸ ಆಗಿದ್ದು, ನೀಡಿರುವ ಪಿಡಬ್ಲೂಡಿ ಇಲಾಖೆ ನೋಡೋಕೊಳ್ಳವ ಕೆಲಸ ಮಾಡುತ್ತೇನೆ ಎಂದರು. ಅಲ್ಲದೇ ಸಿಎಂ, ರೇವಣ್ಣ ಅಸಮಾಧಾನ ಹೊಂದಿದ್ದಾರೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಅಷ್ಟೇ. ದೇವೇಗೌಡರು ಇರುವವರೆಗೂ ಇದು ಆಗಲ್ಲ. ನನಗೆ ಸಿಎಂ, ಡಿಸಿಎಂ ಪೋಸ್ಟ್ ಮೇಲೆ ಕಣ್ಣಿಲ್ಲ ಎಂದರು.
ಬೆಂಗಳೂರು: `ದೇವರ’ ಇಲಾಖೆಗೂ ಸಿಎಂ ಹಿರಿಯ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೈ ಹಾಕಿದ್ದು, ಮುಜರಾಯಿ ಇಲಾಖೆ ವ್ಯವಹಾರದಲ್ಲೂ ಮಧ್ಯಪ್ರವೇಶ ಮಾಡಿದ್ದಾರೆ.
ಮುಜರಾಯಿ ಇಲಾಖೆಯನ್ನು ಕಾಂಗ್ರೆಸ್ಸಿನ ಪರಮೇಶ್ವರ್ ನಾಯ್ಕ್ ಅವರು ನಿರ್ವಹಿಸುತ್ತಿದ್ದಾರೆ. ಆದರೆ ಈಗ ಕಲ್ಯಾಣ ಮಂಟಪ ಒಂದರ ಗುತ್ತಿಗೆಯನ್ನು ಶೃಂಗೇರಿ ಮಠಕ್ಕೆ ಕೊಡುವಂತೆ ರೇವಣ್ಣ ಅವರು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆದು ಕಾನೂನು ಮೀರಿ ಕಲ್ಯಾಣ ಮಂಟಪ ಗುತ್ತಿಗೆ ನೀಡಲು ಹೊರಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ರೇವಣ್ಣ ಅವರು ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು, ಬೆಂಗಳೂರಿನ ಕಲ್ಯಾಣ ಮಂಟಪವನ್ನು ಶೃಂಗೇರಿ ಪೀಠಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ತಿಳಿಸಿದ್ದಾರೆ.
ಈ ಬಗ್ಗೆ ಸಚಿವರಿಂದ ಪತ್ರ ಪಡೆದಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದುಡ್ಡಿಲ್ಲ. ಆದ್ದರಿಂದ ಪೀಠಕ್ಕೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಈ ಹಿಂದೆ ಸಚಿವರ ಮನೆಯ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದ ಸರ್ಕಾರ ಇಂದು ಸಾರ್ವಜನಿಕರ ಉಪಯೋಗಕ್ಕೆ ಬರುವ ಕಲ್ಯಾಣ ಮಂಟಪಕ್ಕೆ ಹಣ ಇಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಬರುವ ಈ ಯೋಜನೆಯನ್ನು ಪೀಠಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಸಗೀಕರಣ ಗೊಳಿಸಿ ಹಣ ಮಾಡುವ ಉದ್ದೇಶ ಹೊಂದಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.
ಪತ್ರದಲ್ಲೇನಿದೆ:
ಬಸವನಗುಡಿಯಲ್ಲಿರುವ ಮುಜರಾಯಿಗೆ ಸೇರಿದ ಕಾರಂಜಿ ಅಂಜನೇಯ ದೇಗುಲದ ಅವರಣದಲ್ಲಿ ಕಲ್ಯಾಣ ಮಂಟಪ ಇದೆ. ಈ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದೆ. ಪರಿಷ್ಕೃತ ದರ ಐದುಕೋಟಿಯಷ್ಟು ಆಗಲಿದೆ. ಆದರೆ ದೇಗುಲದ ಖರ್ಚಿನಲ್ಲಿ ಕೇವಲ 66 ಲಕ್ಷ ಭರಿಸಲು ಸಾಧ್ಯವಿದೆ. ಉಳಿದ ಖರ್ಚನ್ನು ಭರಿಸಲು ಸಾಧ್ಯವಿಲ್ಲ. ಅನುದಾನದ ಕೊರತೆ ಇದೆ. ಈ ಕಾರಣಕ್ಕೆ ಲೋಕೋಪಯೋಗಿ ಸಚಿವರು ಈ ಕಲ್ಯಾಣ ಮಂಟಪದ ಗುತ್ತಿಗೆಯನ್ನು ಶೃಂಗೇರಿ ಪೀಠ ಕ್ಕೆ ವರ್ಗಾಯಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಹಾಗೂ ಶೃಂಗೇರಿ ಪೀಠ ಎರಡು ನಿಭಾಯಿಸಿ ಕಲ್ಯಾಣ ಮಂಟಪದ ಲಾಭವನ್ನು ಸರ್ಕಾರ ಹಾಗೂ ಪೀಠ ಶೇ.50 ರಂತೆ ಹಂಚಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಹಾಗಾಗಿ ಈ ಮನವಿಯನ್ನು ಪರಿಗಣಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿದ್ದಾರೆ.
ನಿಯಮ ಏನು ಹೇಳುತ್ತೆ?
ನಗರದ ಮುಜರಾಯಿ ಇಲಾಖೆ ಸೇರಿದ ದೇವಾಲಯದ ಈ ಕಲ್ಯಾಣ ಮಂಟಪ ನಿರ್ಮಾಣವನ್ನು ಮಾಡಲಾಗುತ್ತಿದೆ. ಮುಜರಾಯಿಗೆ ಸೇರಿದ ಕಟ್ಟಡ, ಆಸ್ತಿಯನ್ನು ಸಾರ್ವಜನಿಕ ಹರಾಜಿನ ಮೂಲಕವೇ ಗುತ್ತಿಗೆ ನೀಡಬೇಕ್ಕು ಎನ್ನುವ ನಿಯಮವಿದೆ.
ಈ ಹಿಂದೆ ಸಂಪಗಿರಾಮನಗರದ ದೇಗುಲದ ಜಾಗವನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ತಗಾದೆಯಾದಾಗ ಮುಜರಾಯಿ ಇಲಾಖೆ ತನಗೆ ಸೇರಿದ ಜಾಗವನ್ನು ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿತ್ತು. ಕಾಯ್ದೆ ಹೀಗಿದ್ದರೂ ಧಾರ್ಮಿಕ ಇಲಾಖೆಯ ನಡೆ ಅಚ್ಚರಿ ಮೂಡಿಸಿದೆ. ಈ ಗುತ್ತಿಗೆ ನೀಡಲು ದೇವಾಲಯದ ಸಮಿತಿಯೇ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಮನವಿ ಹಿನ್ನೆಲೆಯಲ್ಲಿ ಕಾನೂನು ಅಂಶಗಳನ್ನು ಪರಿಗಣನೆ ತೆಗೆದುಕೊಳ್ಳದ ಸಚಿವರು ನೇರ ಪತ್ರ ಬರೆದಿದ್ದಾರೆ.
ಮುಜರಾಯಿ ಇಲಾಖೆ ಆಯುಕ್ತರು ಕೂಡ ಸಚಿವರ ಪತ್ರ ಬರುತ್ತಿದಂತೆ ನಿಯಮ ಮೀರಿ ಪತ್ರ ಬರೆದಿದ್ದಾರೆ. ಇತ್ತ ದೇವಸ್ಥಾನದ ಮುಂಭಾಗದಲ್ಲಿ “ಕಲ್ಯಾಣ ಮಂಟಪಕ್ಕಾಗಿ ದೇಣಿಗೆ ನೀಡಿ ರಸೀದಿ ಪಡೆದುಕೊಳ್ಳಿ” ಎಂದು ಬೋರ್ಡ್ ಹಾಕಲಾಗಿದೆ. ಹಾಗದರೆ ದೇವಾಲಯದ ಕಲ್ಯಾಣ ಮಂಟಪ ನಿರ್ಮಾಣ ಮಾಡುವಲ್ಲಿ ಜನ ಕೊಟ್ಟಿರುವ ದುಡ್ಡು ಎಲ್ಲಿಗೆ ಹೋಗುತ್ತೆ ಎಂಬ ಬಹುದೊಡ್ಡ ಅನುಮಾನವೂ ಮೂಡಿದೆ. ಇತ್ತ ಈ ಕುರಿತು ವರದಿ ಮಾಡಲು ತೆರಳಿದರೆ ದೇಗುಲದ ದೃಶ್ಯಾವಳಿ ತೆಗೆದುಕೊಳ್ಳಲು ಖಾಸಗಿ ವ್ಯಕ್ತಿಗಳು ಪಬ್ಲಿಕ್ ಟಿವಿ ಕ್ಯಾಮೆರಾಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಕಲ್ಯಾಣ ಮಂಟಪ ಕಟ್ಟಲು ದುಡ್ಡಿಲ್ಲ ನೀವು ಹಣ ನೀಡುತ್ತೀರಾ ಎಂದು ಪಬ್ಲಿಕ್ ಟಿವಿ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ.
ಸಚಿವರು ಏನು ಹೇಳಿದ್ರು:
ಪಬ್ಲಿಕ್ ಟಿವಿ ನೇರ ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ರೊಂದಿಗೆ ಸಂಪರ್ಕ ಮಾಡಿದ್ದು, ಸಿಎಂ ಅವರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ರಾಜ್ಯದ ಮುಖ್ಯ ದೇವಾಲಯದ ಅಭಿವೃದ್ಧಿಗೆ ನಮ್ಮ ಇಲಾಖೆಯಿಂದ ಹಣ ನೀಡಲಾಗಿತ್ತು. ಆದ್ದರಿಂದ ಸಭೆಯಲ್ಲಿ ಲೋಕೋಪಯೋಗಿ ಸಚಿವರು ಭಾಗವಹಿಸಿದ್ದರು. ಸದ್ಯ ಭಕ್ತರ ಆಶಯದೊಂದಿಗೆ ದೇವಾಲಯದ ಅಭಿವೃದ್ಧಿ ಮಾಡಲಾಗಿದೆ ಅಷ್ಟೇ. ಆದರೆ ನಾವು ಯಾರಿಗೂ ಗುತ್ತಿಗೆ ನೀಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದರು. ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಹಣ ಇಲ್ಲವೇ ಎಂಬ ಪ್ರಶ್ನೆಗೆ ಗರಂ ಆದ ಸಚಿವರು ಕರೆ ಕಡಿತಗೊಳಿಸಿದ್ದಾರೆ.
ಹಾಸನ: ಹೊಳೆನರಸೀಪುರ ಕ್ಷೇತ್ರದ ಮತದಾರನಿಗೆ ನಗುತ್ತಲೆ ಲೋಕೋಪಯೋಗಿ ಸಚಿವ ಕ್ಲಾಸ್ ತೆಗೆದುಕೊಂಡ ಘಟನೆ ಇಂದು ಹಾಸನದ ಕೆಪಿಟಿಎಲ್ ನ ಕಾರ್ಯ ಮತ್ತು ಪಾಲನಾ ವಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದಿದೆ.
ರೇವಣ್ಣ ಕಡೆಯವರು ಎಂದು ಹೇಳಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ 450 ಜನ ಗ್ಯಾಂಗ್ ಮ್ಯಾನ್ ವಜಾ ಮಾಡಿದ್ದಾರೆ. ಈಗ ನೀವು ಶೋಭಾ ಕರಂದ್ಲಾಜೆ ಬಳಿ ಹೋಗಿ ಎಂದು ರೇವಣ್ಣ ನಗುತ್ತಲೇ ವ್ಯಕ್ತಿಯ ಕಾಲೆಳೆದರು. ಆ ಬಳಿಕ ಮಾರಗೋಡನಹಳ್ಳಿಯ ಇವನು, ವೋಟ್ ಯಾರಿಗೆ ಹಾಕಿದ್ದಾನೆ ಕೇಳಿ? ಎಂದು ಭಾಷಣದ ನಡುವೆ ಹೇಳಿದರು.
ವೋಟ್ ಬಿಜೆಪಿಗೆ ಹಾಕುವವ ನನ್ನ ಬಳಿ ಬಂದು ಈಗ ಚೀಟಿ ಕೊಟ್ಟಿದ್ದಾನೆ. ಆದರೆ ನನಗೆ ಬಿಜೆಪಿ, ಕಾಂಗ್ರೆಸ್ ಸಂಬಂಧವಿಲ್ಲ. ಅವರು ಒಳ್ಳೆಯ ಅಧಿಕಾರಿ ಆಗಿದ್ದಾರೆ. ಎಲ್ಲರದ್ದು ಕೆಲಸ ಮಾಡಿಕೊಡುತ್ತೇನೆ. ಈ ಭಾಗದ ಜನರಿಗೆ ಬೇಕಾದ ಕೆಲಸ ಮಾಡಲು ಬಂದಿದ್ದು, ಎಲ್ಲರ ಕೆಲಸ ಮಾಡುತ್ತೇನೆ ಎಂದರು.
ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಸಮ್ಮಿಶ್ರ ಸರ್ಕಾರ ಬಗ್ಗೆ ಪ್ರಸ್ತಾಪಿಸಿದ ಅವರು, ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಎಲ್ಲಾ ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡಿತ್ತೀವಿ ಎಂದರು. ಆ ಮೂಲಕ ಸರ್ಕಾರ ಪತನದ ಕುರಿತು ಪರೋಕ್ಷವಾಗಿ ಸುಳಿವು ನೀಡಿದ್ರಾ ಎಂಬ ಚರ್ಚೆ ಕೂಡ ನಡೆದಿದೆ.
ಹಾಸನ: ‘ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಸಚಿವ ರೇವಣ್ಣ ಅವರು ಸುದ್ದಿಗೊಷ್ಠಿ ವೇಳೆ ಬಾಯ್ತಪ್ಪಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಪಕ್ಷದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮು ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದೆ. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದರು. ಈ ವೇಳೆ ಜನರ ಅಭಿಪ್ರಾಯ ಏನು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಮೈತ್ರಿಯಿಂದ ಜನ ಬೇಸತ್ತಿದ್ದಾರೆ. ಜನ ಬುದ್ಧಿ ಕಲಿಸುತ್ತಾರೆ ಎಂದರು. ತಕ್ಷಣ ಎಚ್ಚೆತ್ತ ಅವರು, ಮೈತ್ರಿ ಸರ್ಕಾರದಿಂದ ಜನ ಖುಷಿಯಾಗಿದ್ದಾರೆ ಎಂದು ತಿದ್ದಿಕೊಂಡರು.
ಕಳೆದ 9 ತಿಂಗಳಿನಿಂದ ರಾಜ್ಯ ಸರ್ಕಾರ ಉರುಳುತ್ತೆ ಎಂದು ಹೇಳುತ್ತಿದ್ದಾರೆ. ಏನಾದ್ರು ಆಯಿತಾ? ಮುಂದು ಕೂಡ ಸರ್ಕಾರ ಉತ್ತಮವಾಗಿರುತ್ತದೆ. ಶಿಕ್ಷಣ, ಅಭಿವೃದ್ಧಿ, ಆರೋಗ್ಯ, ಉದ್ಯೋಗ ಕ್ಷೇತ್ರಗಳತ್ತ ಸಮ್ಮಿಶ್ರ ಸರ್ಕಾರ ಹೆಚ್ಚಿನ ಗಮನ ಹರಿಸುತ್ತದೆ ಎಂದು ತಿಳಿಸಿದರು. ಇದೇ ವೇಳೆ ಎ. ಮಂಜು ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿ, ಅವರ ಯಾವುದೇ ಆರೋಪಗಳಿಗೆ ನಾನು ಉತ್ತರ ಕೊಡಲ್ಲ. ಎಲ್ಲ ಜಿಲ್ಲೆಯ ಜನರು ತೀರ್ಮಾನ ಮಾಡಲಿದ್ದಾರೆ. ಚುನಾವಣೆ ಎದುರಿಸಲು ಶಕ್ತಿ ಇಲ್ಲದೇ ನನ್ನ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು. ಆದರೆ ನ್ಯಾಯಾಲಯ ಪ್ರಕರಣವನ್ನು ಡಿಸ್ಮಿಸ್ ಮಾಡಿದೆ. ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿ, ಈಗ ಮೋದಿ ಹಿಂದೆ ಹೋಗಿದ್ದಾರೆ. ಅವರಿಗೆ ಯಾವಾಗ ಟೋಪಿ ಹಾಕುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಮಂಡ್ಯ: ಸುಮಲತಾ ಅಂಬರೀಶ್ ಅವರ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಮಂಡ್ಯದ ಬಿಜೆಪಿ ಮುಖಂಡರೊಬ್ಬರು ರೇವಣ್ಣ ವಿರುದ್ಧ ಸಲ್ಲಿಸಿದ್ದಾರೆ.
ಬಿಜೆಪಿ ಮುಖಂಡ ಸಿಟಿ.ಮಂಜುನಾಥ್ ಮಂಡ್ಯ ಜಿಲ್ಲಾಧಿಕಾರಿ ಮುಖೇನ ಮಹಿಳಾ ಆಯೋಗಕ್ಕೆ ರೇವಣ್ಣರ ವಿರುದ್ಧ ದೂರು ಸಲ್ಲಿಸಿದ್ದಾರೆ. ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ ಆಗಲೇ ರಾಜಕೀಯಕ್ಕೆ ಬರಬೇಕಾಗಿತ್ತ ಎಂದು ಸುಮಲತಾ ಅಂಬರೀಶ್ ವಿರುದ್ಧ ಸಚಿವ ರೇವಣ್ಣ ಕೀಳುಮಟ್ಟದ ಪದ ಬಳಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳಲ್ಲ ಅಂತಿದ್ದಾರೆ. ಹೀಗಾಗಿ ಸಚಿವರಿಗೆ ಛೀಮಾರಿ ಹಾಕಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಮಹಿಳಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್ ರಾಜ್ಯಾಧ್ಯಕ್ಷ
ಸುಮಲತಾ ಅವರ ವಿರುದ್ಧ ಸಚಿವ ರೇವಣ್ಣ ಹೇಳಿದ್ದ ಹೇಳಿಕೆ ಮಂಡ್ಯ ಸೇರಿದಂತೆ ಅನೇಕ ಕಡೆ ಅಂಬರೀಶ್ ಅಭಿಮಾನಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ರಾಜಕೀಯದ ಬಗ್ಗೆ ಕ್ರಿಕೆಟ್ ಟೀಂ ಎಂದು ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹೆಚ್ಚಾಗಿದ್ದು, ಬರನಿರ್ವಹಣೆಗೆ ಕೇಂದ್ರ ಸರ್ಕಾರ ರಾಜ್ಯದ ನೆರವಿನಿಗೆ ಆಗಮಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಪ್ರಧಾನಿಗಳ ಗೃಹಕಚೇರಿಯಲ್ಲಿ ಸಿಎಂ ಭೇಟಿ ಮಾಡಿ ಸರಾಜ್ಯದ ಬರದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದರು. ರಾಜ್ಯದಲ್ಲಿ 156 ತಾಲೂಕು ಬರಪೀಡಿತವಾಗಿದ್ದು, ಬರ ಪರಿಹಾರ ಹಾಗು ನರೇಗಾ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಬರನಿರ್ವಹಣೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ನಿಧಿ ಮಾರ್ಗ ಸೂಚಿಯನ್ವಯ 2064.30 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾಗಿ ಪ್ರಕೃತಿ ವಿಕೋಪ ಪರಿಹಾರ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.https://t.co/RnywTOnloQpic.twitter.com/redxuCzygs
ರಾಜ್ಯಕ್ಕೆ ಇದುವರೆಗೂ ಕೇವಲ ಕೇವಲ 949 ಕೋಟಿ ರೂ. ಮಾತ್ರ ಪರಿಹಾರ ಬಂದಿದೆ. ಅಂದರೆ ಅರ್ಧದಷ್ಟು ಕೂಡ ಹಣ ಬಿಡುಗಡೆಯಾಗಿಲ್ಲ. ಹಿಂಗಾರು ಅವಧಿಯಲ್ಲಿ 11,384 ಕೋಟಿ ರೂ. ಮೌಲ್ಯ ಬೆಳೆ ನಷ್ಟಗಿದ್ದಾರೆ. ಹಿಂಗಾರು ಮತ್ತು ಮುಂಗಾರು ಸೇರಿ ಒಟ್ಟು 32,335 ಕೋಟಿ ರೂ. ರಾಜ್ಯಕ್ಕೆ ನಷ್ಟ ಆಗಿದೆ. ಇದು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಮನ್ರೇಗಾ ಯೋಜನೆಯಡಿ ಕೇಂದ್ರದಿಂದ 1,351 ಕೋಟಿ ರೂ. ಬಾಕಿ ಬಿಡುಗಡೆ ಆಗಬೇಕಾಗಿತ್ತು. ಆದ್ದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ.
ಇದೇ ವೇಳೆ ದೆಹಲಿಯ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನ ಸಿಎಂ ಭೇಟಿ ಮಾಡಿದರು. ಈ ವೇಳೆ ಹಾಸನದ ನ್ಯಾಯಾಲಯದ ಸಂಕೀರ್ಣ ಉದ್ಘಾಟನೆಗೆ ಆಹ್ವಾನ ನೀಡಿದರು. ಸಿಎಂ ಕುಮಾರಸ್ವಾಮಿ ಅವರಿಗೆ ಲೋಕೋಪಯೋಗಿ ಸಚಿವ ರೇವಣ್ಣ ಸಾಥ್ ನೀಡಿದರು.
Chief Minister H.D.Kumaraswamy met Chief Justice Ranjan Gogoi today and invited him to inaugurate the District court complex in Hassan. PWD Minister H.D. Revanna was also present. pic.twitter.com/kBN1iZqL7f
ಉಡುಪಿ: ಲೋಕೋಪಯೋಗಿ ಸಚಿವ ರೇವಣ್ಣ, ಸುಮಲತಾ ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ. ಅವರು ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಮೂರು ದಶಕದಿಂದ ಮಂಡ್ಯದ ಮಗಳು. ಅವರಿಗೆ ಈಗ ಅಂಬರೀಶ್ ಅವರಂತೆ ಜನಸೇವೆ ಮಾಡುವ ಮನಸ್ಸಾಗಿದೆ. ಸಚಿವ ರೇವಣ್ಣ ಜವಾಬ್ದಾರಿಯುತ ರಾಜಕಾರಣಿಯಾಗಿ ಈ ರೀತಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ. ಅಂಬರೀಶ್ ಸಾಯಲು ಸುಮಲತಾ ಕಾರಣವಲ್ಲ. ಈ ಹಿಂದೆ ಅಂಬರೀಶ್ ಅವರು ಕಾವೇರಿ ವಿಚಾರಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದರು. ಅಂತಹ ವ್ಯಕ್ತಿಯ ಪತ್ನಿ ಬಗ್ಗೆ ಕೀಳಾಗಿ ಮಾತನಾಡಿದ್ದು ಸರಿಯಲ್ಲ ಎಂದರು.
ಗಂಡ ಸತ್ತವರು ರಾಜಕೀಯಕ್ಕೆ ಬರಲು ಇಷ್ಟೇ ದಿನ ಆಗಬೇಕಾಗಿಲ್ಲ. ಅವರು ರಾಜಕಾರಣಿಯಾಗಿ ಜನಸೇವೆ ಮಾಡುತ್ತಾ ತಮ್ಮ ದುಃಖ ಮರೆಯುವ ಪ್ರಯತ್ನದಲ್ಲಿದ್ದಾರೆ. ಸಮಾಜಸೇವೆಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲಾ ಮಾತನಾಡಿದ್ದು ಸರಿಯಲ್ಲ. ಅದ್ದರಿಂದ ರೇವಣ್ಣ ಅವರು ಕೂಡಲೇ ಕ್ಷಮೆ ಯಾಚಿಸಲಿ. ಗಂಡ ಕಳೆದುಕೊಂಡ ನೋವಲ್ಲಿರುವವರಿಗೆ ಮತ್ತೆ ನೋವು ಕೊಡಬೇಡಿ. ಅದು ಕೂಡ ಮಹಿಳಾ ದಿನಾಚರಣೆ ದಿನ ರೇವಣ್ಣ ಅವರು ಹೀಗೆ ಮಾತನಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಲತಾ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದು, ಅವರು ಪಕ್ಷೇತರವಾಗಿ ನಿಂತರೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಈಗ ಸುಮಲತಾ ಅವರು ಕಾಂಗ್ರೆಸ್ ಮನೆಯ ರಾಜಕಾರಣಿ. ಅವರು ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹೀಗಾಗಿ ಕೀಳು ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ. ದೇಶದ ಸೈನಿಕರಿಗೆ ಅವರನ್ನು ಅವಮಾನ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದು ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ದೇಶದ ವಿರುದ್ಧವಾಗಿ ಮಾತನಾಡಿದವರಿಗೆ ಕಾಂಗ್ರೆಸ್ ಪಕ್ಷ ಇದುವರೆಗೂ ಶಿಕ್ಷೆ ಕೊಟ್ಟಿಲ್ಲ. ಇಷ್ಟೆಲ್ಲಾ ಮಾತನಾಡುವ ನೀವು ಪುಲ್ವಾಮಾ ಘಟನೆ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು.
ಮುಸಲ್ಮಾನರು ಒಪ್ಪಿದ್ರೆ ಎಲ್ಲ ಸಮಸ್ಯೆ ಬಗೆ ಹರಿಯುತ್ತೆ: ಮುಸಲ್ಮಾನರು ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಿ. ಆಗ ಎಲ್ಲಾ ಸಮಸ್ಯೆ ಬಗೆ ಹರಿದು, ಹಿಂದುಗಳ ಕನಸು ನನಸಾಗುತ್ತದೆ. ರಾಮಮಂದಿರ ವಿವಾದ ಸುಪ್ರೀಂ ಆದೇಶದಂತೆ ಸಂಧಾನದಲ್ಲೇ ಬಗೆಹರಿಯಲಿ. ಅಯೋಧ್ಯೆಯ ರಾಮಮಂದಿರ ವಿಚಾರವನ್ನು ನಾವು ಚುನಾವಣೆಗೆ ಬಳಸಲ್ಲ. ಅಯೋಧ್ಯೆ ಭಕ್ತಿಯ ಶ್ರದ್ಧಾಕೇಂದ್ರ. ಈ ಬಗ್ಗೆ ನ್ಯಾಯಾಲಯ ನೀಡಿದ ಆದೇಶಕ್ಕೆ ತಲೆಬಾಗುತ್ತೇವೆ. ಎಂಟು ವಾರದ ಗಡುವಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ಮಾತುಕತೆ ಪ್ರಯತ್ನದಿಂದ ಸಮಸ್ಯೆ ಬಗೆಹರಿದರೆ ಸಂತಸ ಎಂದರು.
2014 ರಲ್ಲಿ ಮೋದಿ ಅವರು ಜನತೆಯ ಮುಂದಿಟ್ಟ ನಾಲ್ಕು ಭರವಸೆ ಈಡೇರಿದೆ. ಇನ್ನೆರಡು ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. 2014 ರಲ್ಲಿ ನೀಡಿರುವ ಭರವಸೆಯಂತೆ ಭ್ರಷ್ಟಾಚಾರ ರಹಿತ, ಅಭಿವೃದ್ಧಿ, ಸ್ವಚ್ಛತೆ, ವಿದೇಶಾಂಗ ನೀತಿ, ಕೃಷಿ ಸಹಿತ ರಕ್ಷಣೆ ಒತ್ತು ಕೊಟ್ಟಿದ್ದೇವೆ. ದೇಶದ ಸೈನಿಕರು ಮೋದಿ ಸರ್ಕಾರದ ಆಡಳಿತ ಮೆಚ್ಚಿದ್ದಾರೆ. ಒನ್ ರಾಂಕ್ ಒನ್ ಪೆನ್ಶನ್ ನಂತರ ಸೈನಿಕರು ಖುಷಿಯಲ್ಲಿದ್ದಾರೆ ಎಂದರು.
ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಿಡುಗಡೆಯೇ ಮಾಡಿಲ್ಲ. ಟೆಂಡರ್ ಕರೆಯದೆ ಕೋಟಿ ಕೋಟಿ ರೂ. ಹಣ ನೆನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಉಡುಪಿ-ಚಿಕ್ಕಮಗಳೂರಿಗೆ ಬಂದಿದೆ. ರಸ್ತೆ, ಪಾಸ್ ಪೋರ್ಟ್, ಸಖಿ ಸೆಂಟರ್ ಸ್ಥಾಪನೆಯಾಗಿದೆ ತಮ್ಮ ಐದು ವರ್ಷದ ರಿಪೋಟ್ ಕಾರ್ಡನ್ನು ತೆರೆದಿಟ್ಟರು.
ಮಂಡ್ಯ: ಬೆಳೆದು ನಿಂತಿರುವ ಕಬ್ಬು ಮತ್ತು ಭತ್ತದ ಬೆಳೆಗಳನ್ನು ಉಳಿಸಿಕೊಳ್ಳಲು ಹೇಮಾವತಿ ನದಿಗೆ ಗೊರೂರು ಜಲಾಶಯದಿಂದ ನೀರು ಹರಿಸಬೇಕು. ಇಲ್ಲದಿದ್ದರೆ ಸಚಿವ ರೇವಣ್ಣ ಅವರ ಮನೆಯ ಮುಂದೆ ಸಾಮೂಹಿಕವಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಮತ್ತು ಕಸಬಾ ಹೋಬಳಿಯಲ್ಲಿ ರೈತರು ಅಸಹಾಯಕತೆ ಹೊರಹಾಕುತ್ತಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನಲ್ಲಿ ಬೆಳೆದು ನಿಂತಿರುವ ಕಬ್ಬು ಮತ್ತು ಭತ್ತದ ಬೆಳೆಗಳನ್ನು ಉಳಿಸಿಕೊಳ್ಳಲು ಗೊರೂರು ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್ ನೀರನ್ನು ಹೇಮಾವತಿ ನದಿಗೆ ಹರಿಸಿ ಎಂದು ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಮಂದಗೆರೆ ನದಿ ಅಣೆಕಟ್ಟೆಯ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ಕನಿಷ್ಠ 10 ದಿನಗಳ ಕಾಲ ನೀರು ಹರಿಸಬೇಕು ಎಂದು ರೈತ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಹಾಗೆಯೇ ರೈತರ ಸಮಸ್ಯೆಗಳಿಗೆ ಪರಿಹಾರ ನೀಡದೇ ಸಚಿವ ರೇವಣ್ಣ ಅವರು ಕೃಷ್ಣರಾಜಪೇಟೆ ತಾಲೂಕಿನ ರೈತರನ್ನು ಮಲತಾಯಿ ಧೋರಣೆಯಿಂದ ಕಾಣುತ್ತಿದ್ದಾರೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.
ಹೊಳೆನರಸೀಪುರ ರೈತರಿಗೆ ಶ್ರೀರಾಮದೇವರ ಅಣೆಕಟ್ಟೆಯ ನಾಲೆಯ ಮೂಲಕ ನೀರು ಹರಿಸಿ ಬೇಸಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಟ್ಟಿರುವ ಸಚಿವ ರೇವಣ್ಣ, ಕೆ.ಆರ್.ಪೇಟೆ ತಾಲೂಕಿನ ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನದಿಗೆ ನೀರು ಹರಿಸಲು ಆದೇಶ ನೀಡದೆ ಕೃಷ್ಣರಾಜಪೇಟೆಯ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರದ ಒಳಗೆ ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ನೀರು ಹರಿಸದಿದ್ದರೆ ಹೊಳೆನರಸೀಪುರದಲ್ಲಿನ ಸಚಿವ ರೇವಣ್ಣ ಅವರ ಮನೆಯ ಮುಂದೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಜೊತೆಗೆ ಗೊರೂರು ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ರೇವಣ್ಣ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನೀರು ಹರಿಸದಿದ್ದರೆ ಕೃಷ್ಣರಾಜಪೇಟೆ ತಾಲೂಕಿನ ರೈತರು ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಹಾಸನ: ಸೋಮವಾರ ಹಾಸನದಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸಚಿವ ರೇವಣ್ಣ ಪುತ್ರ ಸೂರಜ್ ರೇವಣ್ಣ ಅವರಿಗೆ ವೇದಿಕೆಯಲ್ಲಿ ಮೊದಲ ಸಾಲಿನಲ್ಲಿ ಆಸನ ನೀಡಿದ್ದು, ಈ ವಿಷಯ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಸರ್ಕಾರದ ರೈತರ ಸಾಲಮನ್ನಾ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸೌಟು ಹಿಡಿದ ಭವಾನಿ ರೇವಣ್ಣ!
ಈ ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳ ಮುಂಚಿತವಾಗಿ ವೇದಿಕೆಗೆ ಆಗಮಿಸಿದ ಸಚಿವ ರೇವಣ್ಣನವರು ತಮ್ಮ ಪುತ್ರ ಸೂರಜ್‍ಗೆ ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿಯೇ ಆಸನವನ್ನು ವ್ಯವಸ್ಥೆ ಮಾಡಿಕೊಟ್ಟರು.
ಯಾವುದೇ ಚುನಾಯಿತ ಪ್ರತಿನಿಧಿಯೂ ಅಲ್ಲ ಆದರೂ ವೇದಿಕೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೂರಜ್ ವೇದಿಕೆಯಲ್ಲಿ ಕುಳಿತು ಗಮನ ಸೆಳೆದರು. ಒಂದು ಕಡೆ ಪೊಲೀಸ್ ಐಜಿ ಮತ್ತೊಂದೆಡೆ ಎಸ್‍ಪಿ ನಡುವೆ ಸೂರಜ್ ಕುಳಿತುಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.