Tag: ಸಚಿವ ಪ್ರಭು ಚೌವ್ಹಾಣ್

  • ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕಲಬುರಗಿ: ಜಿಲ್ಲೆಯ ಪಶುಸಂಗೋಪನೆ ಇಲಾಖೆಗೆ ಸಚಿವ ಪ್ರಭು ಚೌವ್ಹಾಣ್ ಧಿಡೀರ್ ಭೇಟಿ ನೀಡಿದ್ದು, ಸತತ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನು ಅಮಾನತು ಮಾಡಿದ್ದಾರೆ.

    ‘ಡಿ’ ಗ್ರೂಪ್ ನೌಕರ ಉಪೇಂದ್ರರನ್ನು ಅಮಾನತುಗೊಳಿಸಲಾಗಿದೆ. ಸತತ 2 ತಿಂಗಳಿನಿಂದ ಕರ್ತವ್ಯಕ್ಕೆ ಬರದೆ ಉಪೇಂದ್ರ ಗೈರಾಗಿದ್ದರು. ಕಚೇರಿ ಭೇಟಿ ವೇಳೆ ಈ ವಿಚಾರ ತಿಳಿದ ಸಚಿವರು ಬೇಜವಾಬ್ದಾರಿ ತೋರಿದ ನೌಕರನ ಮೇಲೆ ಗರಂ ಆಗಿ ಅಮಾನತು ಮಾಡಿದ್ದಾರೆ. ಇದೇ ವೇಳೆ ಪಶು ಆಸ್ಪತ್ರೆ ಅವ್ಯವಸ್ಥೆ ಕಂಡು ಉಪನಿರ್ದೇಶಕ ಹನುಮಂತಪ್ಪ ಮೇಲೂ ಸಚಿವರು ಗರಂ ಆಗಿದ್ದು, ಆಸ್ಪತ್ರೆಯಲ್ಲಿನ ಎಕ್ಸ್-ರೇ ಮಷಿನ್, ಪಿಠೋಪಕರಣಗಳು ತುಕ್ಕು ಹಿಡಿದಿರುವುದನ್ನ ಕಂಡು ಎಲ್ಲವನ್ನು 1 ತಿಂಗಳಿನಲ್ಲಿ ಸರಿಪಡಿಸುವಂತೆ ಸೂಚಿಸಿದ್ದಾರೆ.

    ಈ ಹಿಂದೆ ಬೀದರ್‍ನಲ್ಲಿ ಪಶು ವೈದ್ಯಕೀಯ ಕಚೇರಿಗೆ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದ ಕಾರಣಕ್ಕೆ ಸಚಿವರನ್ನು ಕಂಡು ಕಂಗಾಲಾಗಿದ್ದರು. ಕಚೇರಿಯಲ್ಲಿ ಸ್ವಚ್ಛತೆ ಕಾಪಾಡದೇ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್. ಗಾಂಧಿ ಹಾಗೂ ‘ಡಿ’ ಗ್ರೂಪ್ ನೌಕರ ಬಾಬು ಗುಟ್ಕಾ ಹಾಗೂ ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದರು. ಇವರನ್ನು ಗಮನಿಸಿದ ಸಚಿವರು ಇಬ್ಬರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು.

    ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಕೆಲಸಕ್ಕೆ ಹಾಜರಾಗದ 6ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪಡೆದು ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೆ ಕರ್ತವ್ಯ ಲೋಪ ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

  • ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಬೀದರ್: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಅದೇ ರೀತಿ ರೋಗಿಗಳಿಗೆ ಹಣ್ಣು ಹಂಚುವ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಎಡವಟ್ಟು ಮಾಡಿದ್ದು, ಹತ್ತಾರು ಬೆಂಬಲಿಗರೊಂದಿಗೆ ತುರ್ತುನಿಗಾ ಘಟಕ(ಐಸಿಯು)ಕ್ಕೆ ನುಗ್ಗಿ ಹಣ್ಣು ಹಂಚಿದ್ದಾರೆ.

    ಮೋದಿ ಜನ್ಮ ದಿನ ಆಚರಣೆ ಅಂಗವಾಗಿ ಇಂದು ಬೀದರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಚುತ್ತಿದ್ದರು. ಈ ವೇಳೆ ಕೇವಲ ವಾರ್ಡ್‍ನಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನು ಹಂಚದೆ, ಐಸಿಯುನಲ್ಲಿರುವ ರೋಗಿಗಳಿಗೂ ಹಣ್ಣುಗಳನ್ನು ಹಂಚಿದ್ದು, ಈ ಮೂಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರೋಗಿಗಳಿಗೆ ಸಚಿವರು ತೊಂದರೆ ಕೊಟ್ಟಿದ್ದಾರೆ.

    ಸಚಿವರು ಹಾಗೂ ಅವರೊಂದಿಗೆ 50ಕ್ಕೂ ಹೆಚ್ಚು ಬೆಂಬಲಿಗರು ಶೂ ಹಾಕಿಕೊಂಡೇ ಐಸಿಯುಗೆ ನುಗ್ಗಿದ್ದು, ತುರ್ತುನಿಗಾ ಘಟಕಕ್ಕೆ ಒಂದೇ ಸಮಯಕ್ಕೆ ಹತ್ತಾರು ಮಂದಿ ನುಗ್ಗಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಐಸಿಯುನಲ್ಲಿರುವ ರೋಗಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಹೋದರೂ ಸಹ ಒಬ್ಬಿಬ್ಬರು ಮಾತ್ರ ತೆರಳಬೇಕು. ಆದರೆ, ಸಚಿವರು ಇದಾವುದನ್ನೂ ಲೆಕ್ಕಿಸದೆ ಹತ್ತಾರು ಬೆಂಬಲಿಗರೊಂದಿಗೆ ನುಗ್ಗಿದ್ದಾರೆ.

    ಈ ಮೂಲಕ ಆಸ್ಪತ್ರೆಯ ನಿಯಮವನ್ನು ಗಾಳಿಗೆ ತೂರಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಹಣ್ಣು ವಿತರಣೆ ಮಾಡದೆ, ಐಸಿಯುಗೂ ನುಗ್ಗಿ ವೈದ್ಯರಿಗೂ ಸಹ ಇರುಸುಮುರುಸು ಉಂಟುಮಾಡಿದ್ದಾರೆ.