Tag: ಸಚಿವ ಪುಟ್ಟರಂಗ ಶೆಟ್ಟಿ

  • ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್

    ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್

    ಬೆಂಗಳೂರು: ಕೆಲವರು ಮಗನಿಗೆ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ಕೊಡುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಜಾತಿ, ಸಮುದಾಯದವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು, ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ನಡೆದ ನೂತನ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇನ್ನೂ 5 ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಆಗುತಿತ್ತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

    ಸಿದ್ದರಾಮಯ್ಯ ಅವರು ನನ್ನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷನನ್ನಾಗಿ ಮಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಒಂದು ಮಾತು ಹೇಳಿದರೂ ಹೆಚ್ಚು ಕಡಿಮೆ ಆಗುತ್ತದೆ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಲಮಾಡಿ ಸ್ಪರ್ಧಿಸಿದರು. ಆದರೆ ಅವರ ವಿರುದ್ಧವೇ ಒಳಸಂಚು ರೂಪಿಸಿ ಪ್ರತಿಸ್ಪರ್ಧಿ ಅಭ್ಯರ್ಥಿ ಹಾಕಿದರು ಎಂದು ಹೆಸರು ಹೇಳದೇ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನಮಗೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಅವರ ಬಳಿಯೇ ಹೇಳಿಕೊಳ್ಳುತ್ತೇವೆ. ನಾನು ಮೂರು ಬಾರಿ ಶಾಸಕನಾಗಲು ಸಿದ್ದರಾಮಯ್ಯ ಅವರೇ ಕಾರಣ. ಅವರು ನಿಜವಾದ ಮಣ್ಣಿನ ಮಗ. ಯಾರು ಏನೇ ಹೇಳಿದರೂ ಶಾಸಕ ಸುಧಾಕರ್ ಹೇಳಿದ್ದಂತೆ ನಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದರು.

    ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದವರಿಗೆ ದೇವರಾಜು ಅರಸ್ ಬಳಿಕ ಸಿದ್ದರಾಮಯ್ಯ ಅವರು ಸಿಕ್ಕಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ಧ್ವನಿಯಾದರು. ಸಿದ್ದರಾಮಯ್ಯ ಹಸು ಇದ್ದಂತೆ. ಹಸು ತನ್ನ ಹಾಲು ತಾನೇ ಕುಡಿಯಲ್ಲ. ಹಾಗೇ ಸಿದ್ದರಾಮಯ್ಯ ಯಾವಾಗಲೂ ಪರೋಪಕಾರಿ. ಅವರು ಮತ್ತೆ ಸಿಎಂ ಆಗಬೇಕು ಎಂದರು.

    ನಾಡಿನ ಜನರಿಗೆ ಸಿದ್ದರಾಮಯ್ಯ ಕೊಟ್ಟ ಯೋಜನೆ ಪೂರ್ಣವಾಗಬೇಕು. ಅವರು ಘೋಷಿಸಿದ ಅನುದಾನ ಈವರೆಗೂ ಬಿಡುಗಡೆ ಆಗಿಲ್ಲ. ಸಿಎಂ ಕುಮಾರಸ್ವಾಮಿ ಅವರು ನಿರ್ದೇಶನ ನೀಡುವ ಮೂಲಕ ಅನುದಾನ ಬಿಡುಗಡೆಗೆ ಶ್ರಮಿಸಲಿ ಎಂದು ಈಶ್ವರಾನಂದಪುರಿ ಸ್ವಾಮೀಜಿ ಮನವಿ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದ ಪಶ್ಚಿಮ ಗೇಟ್‍ನಲ್ಲಿ ಸಿಕ್ತು ಕಂತೆ ಕಂತೆ ಹಣ – ಸಚಿವರ ಕಚೇರಿ ಟೈಪಿಸ್ಟ್ ಬಳಿಯೇ ಹಣ ಪತ್ತೆ!

    ವಿಧಾನಸೌಧದ ಪಶ್ಚಿಮ ಗೇಟ್‍ನಲ್ಲಿ ಸಿಕ್ತು ಕಂತೆ ಕಂತೆ ಹಣ – ಸಚಿವರ ಕಚೇರಿ ಟೈಪಿಸ್ಟ್ ಬಳಿಯೇ ಹಣ ಪತ್ತೆ!

    ಬೆಂಗಳೂರು: ವಿಧಾನ ಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದೆ.

    ಮೋಹನ್ ಎಂಬಾತನ ಬಳಿ ಸುಮಾರು 25.76 ಲಕ್ಷ ರೂ. ಹಣ ಪತ್ತೆಯಾಗಿದೆ. ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಾ ವೇಳೆ ಬ್ಯಾಗ್ ಪತ್ತೆಯಾಗಿದ್ದು, ಅನುಮಾನಗೊಂಡ ಪೊಲೀಸರು ತೆರೆದು ನೋಡಿದಾಗ ಹಣ ಇರುವುದು ಬೆಳಕಿಗೆ ಬಂದಿದೆ.

    ಹಣ ಪತ್ತೆಯಾದ ಕೂಡಲೇ ಮೋಹನ್ ನನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದ್ದು, ಹಣದ ಮೂಲದ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

    ಮೋಹನ್ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಟೈಪಿಸ್ಟ್ ಎನ್ನುವ ಪ್ರಾಥಮಿಕ ಮಾಹಿತಿ ಲಭಿಸಿದೆ. ಆದರೆ ಭಾರೀ ಮೊತ್ತದ ಹಣ ಹೇಗೆ ವಿಧಾನಸೌಧದ ಒಳಗೆ ಪ್ರವೇಶಿಸಿದೆ ಎನ್ನುವ ಬಗ್ಗೆ ಪ್ರಶ್ನೆ ಎದ್ದಿದೆ. ಅಲ್ಲದೇ ಈ ಹಣ ಸರ್ಕಾರಿ ಯೋಜನೆಯೊಂದರ ಗುತ್ತಿಗೆಯನ್ನು ಮಂಜೂರು ಮಾಡಿಸಿಕೊಳ್ಳಲು ಸಚಿವರೊಬ್ಬರಿಗೆ ಕೊಡಲು ತಂದಿದ್ದ ಹಣ ಎನ್ನಲಾಗಿದೆ.

    ಹಣ ಪತ್ತೆಯಾಗುತ್ತಿದಂತೆ ಮೋಹನ್ ಸ್ಥಳದಿಂದ ಪರಾರಿಯಾಗಲು ಕೂಡ ಯತ್ನಿಸಿದ್ದ. ಈ ಬಗ್ಗೆ ಯಾರದರೂ ದೂರು ನೀಡಿದರೆ ಮಾತ್ರ ತನಿಖೆ ಮುಂದುವರಿಸಲು ಸಾಧ್ಯ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಅವರು, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಇಂದು ನಾನು ವಿಧಾನಸೌಧದ ಕಚೇರಿಗೂ ಹೋಗಿರಲಿಲ್ಲ. ಕ್ಷೇತ್ರದ ಕೆಲಸ ನಿಮಿತ್ತ ಇಲ್ಲೇ ಉಳಿದ್ದೇನೆ. ಅಲ್ಲದೇ ಮೋಹನ್ ಯಾರು ಎಂಬ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ನನ್ನ ಆಪ್ತ ಸಹಾಯಕರು ಬೇರೆ ಇದ್ದಾರೆ. ಈ ಕುರಿತು ಅವರಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ. ಸುಳ್ವಾಡಿ ಪ್ರಕರಣದ ಬಳಿಕ ನಾನು ಈಗ ಹೆಚ್ಚಾಗಿ ಕ್ಷೇತ್ರದಲ್ಲೇ ಇರುವ ಅನಿವಾರ್ಯತೆ ಇದ್ದು, ಆದ್ದರಿಂದ ಕಚೇರಿಯಲ್ಲಿ ಯಾರನ್ನು ನೇಮಕ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

    ಮುಖ್ಯವಾಗಿ ವಿಧಾನಸೌಧದ ಪ್ರವೇಶದ ಎಲ್ಲಾ ಗೇಟ್‍ಗಳಲ್ಲೂ ಹೆಚ್ಚಿನ ಭದ್ರತೆ ಇರುತ್ತದೆ. ವಿಧಾನಸೌಧದ ಒಳ ಹೋಗುವ ಎಲ್ಲಾ ವಾಹನಗಳನ್ನು ಪರಿಶೀಲನೆ ನಡೆಸಿದ ಬಳಿಕವೇ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ವಿಧಾನಸೌಧದಿಂದ ಹೊರ ಹೋಗುತ್ತಿದ್ದ ಕಾರಿನ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಮೊದಲೇ ಇಷ್ಟು ಮೊತ್ತದ ಹಣ ಒಳಗೆ ಹೋಗಿದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭಿವಿಸಿದ್ದು, ಇದರ ಹಿಂದೆ ಅಧಿಕಾರಿಗಳ ಸಹಾಯ ಇದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಸಚಿವ ಪುಟ್ಟರಂಗಶೆಟ್ಟಿಯವರ ಮೂರನೇ ಮಹಡಿಯಿಂದ ಕೆಳಗಡೆ ಬರುತ್ತಿರುವ ವ್ಯಕ್ತಿಯ ಬಳಿ ದಾಖಲೆಯಿಲ್ಲದ ಹಣ ಇದೆ ಎನ್ನುವ ಮಾಹಿತಿಯನ್ನು ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೆಂಗಲ್ ಗೇಟ್ ಬಳಿ ಕೈಯಲ್ಲಿ ಬ್ಯಾಗ್ ಹಿಡಿದು ಬಂದ ವ್ಯಕ್ತಿಯನ್ನು ಮಾಧ್ಯಮದ ಮಂದಿ ಅಡ್ಡ ಹಾಕಿ, ಯಾರದ್ದು ಈ ಹಣ? ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ನಾನು ಸಚಿವರ ಪಿಎ. ನನ್ನನ್ನು ಬಿಡಿ ಎಂದು ಹೇಳಿ ಬೈಕನ್ನು ಏರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಮಯದಲ್ಲಿ ಮಾಧ್ಯಮದವರು ಜೋರಾಗಿ ಕೂಗಿಕೊಂಡಾಗ ಸ್ಥಳಕ್ಕೆ ಬಂದ ಪೊಲೀಸರು ಮೋಹನನ್ನು ಮೋಹನ್ ಬಳಿಯಿದ್ದ ಬ್ಯಾಗನ್ನು ತೆರೆದು ನೋಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರು ದಸರಾ 2018: `ಕೈ’ ನಾಯಕರ ಗೈರು ಹಿಂದಿನ ರಹಸ್ಯ ಬಿಚ್ಚಿಟ್ರು ಪುಟ್ಟರಂಗ ಶೆಟ್ಟಿ

    ಮೈಸೂರು ದಸರಾ 2018: `ಕೈ’ ನಾಯಕರ ಗೈರು ಹಿಂದಿನ ರಹಸ್ಯ ಬಿಚ್ಚಿಟ್ರು ಪುಟ್ಟರಂಗ ಶೆಟ್ಟಿ

    ಚಾಮರಾಜನಗರ: ಮೈಸೂರು ದಸರಾ ನಾಡಹಬ್ಬದಲ್ಲಿ ಈ ಹಿಂದಿನಿಂದಲೂ ಚಾಮರಾಜನಗರ, ಮೈಸೂರು ಉಸ್ತುವಾರಿ ಸಚಿವರು ಹಾಗೂ ಸಿಎಂ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಉಸ್ತುವಾರಿಯಾಗಿರುವ ಸಚಿವ ಜಿ.ಟಿ ದೇವೇಗೌಡ ಅವರು ತಮ್ಮ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾಮ್ ಕೇ ವಾಸ್ತೆಗೆ ದಸರಾ ಸಮಿತಿ ರಚಿಸಿ ನನ್ನನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದು ಬಿಟ್ಟರೆ ಯಾವುದೇ ಇತರೆ ಕಮಿಟಿಗಳನ್ನು ರಚಿಸಿಲ್ಲ. ಈ ಕುರಿತು ಕೇಳಿದರೆ ಮಾಡೋಣ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇಲ್ಲಿಯವರೆಗೆ ಕಮಿಟಿ ರಚಿಸಿ ಸೂಕ್ತ ಸ್ಥಾನಮಾನ ನೀಡಿಲ್ಲ. ಮೈಸೂರು, ಚಾಮರಾಜನಗರದಲ್ಲಿ ಇರುವ ಏಕೈಕ ಸಚಿವ ನಾನು. ಆದರೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಯಾರೂ ಇಲ್ಲದ ಕಾರಣ ಕಮಿಟಿಗಳಲ್ಲಿ ನಮ್ಮವರನ್ನು ನೇಮಕ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು. ಅದು ಕೂಡ ಸಾಧ್ಯವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿರುವುದರಿಂದ ನಾವು ಈ ಕುರಿತು ಏನೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕೂಡ ನೀವು ಹೇಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ನಾಡಹಬ್ಬ ಮೈಸೂರಿನ ದಸರಾದಲ್ಲಿ ಭಾಗವಹಿಸುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರರಾದ ಕಾಂಗ್ರೆಸ್ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.

    ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭ ದಸರಾ ಸಾಂಸ್ಕೃತಿಕ  ಕಾರ್ಯಕ್ರಮಗಳಿಗೂ ಕಾಂಗ್ರೆಸ್ ಸಚಿವರು ಗೈರುಹಾಜರಾಗಿದ್ದರು. ಇದರೊಂದಿಗೆ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿತ್ತು. ದಸರಾ ಕಾರ್ಯಕ್ರಮದ ಮೊದಲ ದಿನ ಮೈಸೂರು-ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ. ಬುಧವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸಚಿವೆ ಜಯಮಾಲ ಅವರು ಹಾಜರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

    ಈಗಲೂ ನನಗೆ ಸಿದ್ದರಾಮಯ್ಯರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗ ಶೆಟ್ಟಿ

    ಮೈಸೂರು: ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಖಾತೆಯ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

    ಇಂದು ವರುಣಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ಉಪ್ಪಾರರು ವಿಧಾನಸೌದದ ಮೆಟ್ಟಿಲು ತುಳಿದಿದ್ದಾರೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ನಾನು ಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯನವರಿಂದ. ಹೀಗಾಗಿ ನನ್ನ ಪಾಲಿಗೆ ಅವರೇ ಮುಖ್ಯಮಂತ್ರಿಗಳು ಎಂದು ಸಚಿವ ಪುಟ್ಟರಂಗಶೆಟ್ಟಿ ಬಹಿರಂಗವಾಗಿ ಹೇಳಿದರು.

    ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಧರ್ಮಸೇನಾ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗದಿದ್ದರೂ ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನವಾದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದು ನಮಗೆ ಸಾಕು. ಜೊತೆಯಲ್ಲಿದ್ದವರೇ ಮೋಸ ಮಾಡಿದಾಗ ನೋವಾಗುತ್ತೆ. ಆದರೆ ನೀವು ಚಾಮುಂಡೇಶ್ವರಿ ಸೋಲಿನಿಂದ ಎದೆಗುಂದಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಅಲ್ಲದೇ ನಾನು ಮೊದಲೇ ಹೇಳಿದ್ದೆ ಚಾಮುಂಡೇಶ್ವರಿ ಕ್ಷೇತ್ರ ಬೇಡ ಎಂದು, ಆದರೆ ನನಗೆ ಭಯವಿಲ್ಲ ನಿನಗೇಕೆ ಭಯ ಎಂದು ನನ್ನನ್ನು ಸುಮ್ಮನಾಗಿಸಿದ್ದರು. ಈಗ ಇಲ್ಲಿನ ಜನರೇ ಕೈ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು. ಇದನ್ನು ಓದಿ: ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಗನನ್ನು ಭಾರೀ ಅಂತರದಿಂದ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ 30 ಸಾವಿರ ಅಂತರ ನೀಡಿದ್ದ ನೀವು, ನನ್ನ ಮಗನಿಗೆ ಅದರ ದುಪ್ಪಟ್ಟು ಮತ ನೀಡಿದ್ದೀರಿ. ಒಳ್ಳೆಯ ನಿರ್ಧಾರ ಮಾಡಿದ ನಿಮಗೆ ನನ್ನ ಧನ್ಯವಾದ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಒಳ್ಳೆ ಕೆಲಸ ಮಾಡಿದರೂ ಜನ ಏಕೆ ಆಶೀರ್ವಾದ ಮಾಡಲಿಲ್ಲ ಎಂದು ತಮ್ಮನ್ನ ತಾವೇ ಪ್ರಶ್ನೆ ಮಾಡಿಕೊಂಡು ಬಳಿಕ ತಮ್ಮ ವ್ಯಂಗ್ಯದ ಶೈಲಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ಕೂಡ ನಡೆಸಿದರು. ಇಷ್ಟೇಲ್ಲ ಆದರೂ ಒಮ್ಮೆಯೂ ಚಾಮುಂಡೇಶ್ವರಿ ಕ್ಷೇತ್ರದ ಹೆಸರು ಹೇಳದೆ ತಮ್ಮ ಸೋಲಿನ ನೋವನ್ನು ಹೇಳಿಕೊಳ್ಳದೇ ತಮ್ಮ ಒಳಗೆ ನುಂಗಿದರು.