Tag: ಸಚಿವ ಡಿ.ಸಿ.ತಮ್ಮಣ್ಣ

  • ಮುಂದಿನ ವಾರದಿಂದ ಬಸ್ ಪ್ರಯಾಣದ ದರ ಏರಿಕೆ- ಡಿ.ಸಿ.ತಮ್ಮಣ್ಣ

    ಮುಂದಿನ ವಾರದಿಂದ ಬಸ್ ಪ್ರಯಾಣದ ದರ ಏರಿಕೆ- ಡಿ.ಸಿ.ತಮ್ಮಣ್ಣ

    ಮಂಡ್ಯ: ಬಸ್ ಪ್ರಯಾಣದ ದರ ಹೆಚ್ಚಿಸುವ ಕುರಿತು ಈ ಹಿಂದೆ ಸುಳಿವು ನೀಡಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಮುಂದಿನ ವಾರದಲ್ಲಿಯೇ ದರ ಏರಿಕೆಯಾಗಲಿದೆ ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿದೆ. ಇದರಿಂದಾಗಿಯೇ ಬಸ್ ಪ್ರಯಾಣದ ದರ ಏರಿಕೆ ಮಾಡಲಾಗುತ್ತಿದೆ ಎಂದ ಅವರು, ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯದಲ್ಲಿಯೇ ಬಸ್ ಪ್ರಯಾಣ ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬಸ್ ಪ್ರಯಾಣದ ದರ ಏರಿಕೆಗೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಆದರೆ ನಾನು ಅದನ್ನು ತಡೆಹಿಡಿದಿದ್ದೆ. ಈಗ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದೆ. ಹೀಗಾಗಿ ಈ ಹಿಂದೆ ಅಧಿಕಾರಿಗಳು ಸಲ್ಲಿಸಿರುವ ಬಸ್ ಪ್ರಯಾಣದ ದರದ ಆಧಾರದ ಮೇಲೆ ದರವನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

    ಪ್ರಯಾಣದ ದರ ಹೆಚ್ಚಾದರೆ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್‍ಗೆ ಹೆಚ್ಚು ಹಣ ಪಾವತಿಸಿ ಖರೀದಿಸುತ್ತಿದ್ದಾರೆ. ಇದು ಅವರಿಗೆ ಹೊರೆ ಆಗುತ್ತಿಲ್ಲವೇ? ಹಾಗೇ ಬಸ್ ಪ್ರಯಾಣದ ದರ ಏರಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

    ಇನ್ನು ಭಾರತ್ ಬಂದ್ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಂದ್‍ಗೆ ಜೆಡಿಎಸ್ ಪಕ್ಷದಿಂದ ಬೆಂಬಲ ನೀಡಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಬಂದ್ ಅನ್ನು ಬೆಂಬಲಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೆಟ್ರೋಲ್, ವಿದ್ಯುತ್ ಆಯ್ತು ಶೀಘ್ರವೇ ಬಸ್ ಪ್ರಯಾಣ ದರ ಏರಿಕೆ?

    ಪೆಟ್ರೋಲ್, ವಿದ್ಯುತ್ ಆಯ್ತು ಶೀಘ್ರವೇ ಬಸ್ ಪ್ರಯಾಣ ದರ ಏರಿಕೆ?

    ಬೆಂಗಳೂರು: ಬಸ್ ಪ್ರಯಾಣದ ದರವನ್ನು ಹೆಚ್ಚಿಸುವ ಸುಳಿವನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೊರ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಹೆಚ್ಚಳದಿಂದ ಸಾರಿಗೆ ಇಲಾಖೆಯ ನಷ್ಟದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಇಲಾಖೆಗೆ ಕನಿಷ್ಟ 1 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ಕೇಳಿದ್ದೇವೆ. ಇದರೊಂದಿಗೆ 20%ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಎಲ್ಲ ಸಾರಿಗೆ ನಿಗಮಗಳೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

    ಬಸ್ ಪ್ರಯಾಣ ದರವನ್ನು ಏರಿಕೆ ಮಾಡಬೇಕು ಎಂದು ಈ ಹಿಂದೆ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಈ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೈಗೆ ಒಪ್ಪಿಸಲಾಗಿದೆ ಎಂದರು.

    ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿಚಾರವಾಗಿ ಮಾತನಾಡಿದ ಸಚಿವರು, ಉಚಿತ ಬಸ್ ಪಾಸ್ ಗೆ 2 ಸಾವಿರ ಕೋಟಿ ರೂ. ಖರ್ಚು ಬರಲಿದೆ. ಹೀಗಾಗಿ ಶಿಕ್ಷಣ ಸಚಿವ ಎಂ.ಮಹೇಶ್ ಶಿಕ್ಷಣ ಇಲಾಖೆಯಿಂದ 25% ಅನುದಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಸಾರಿಗೆ ಇಲಾಖೆಯಿಂದ 25% ರಷ್ಟು ಅನುದಾನ ಕೂಡಿಸುತ್ತೇವೆ. ಆದರೆ ಉಳಿದ 50%ರಷ್ಟು ಅನುದಾನವನ್ನು ಸರ್ಕಾರ ಕೊಡಲಿದೆ. ಹಿಂದಿನ ಸರ್ಕಾರವು ಇಷ್ಟೇ ನೆರವು ಕೊಡುತ್ತಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿಯಲ್ಲಿದ್ದಾರೆ. ರಾಜ್ಯಕ್ಕೆ ಮರಳಿದ ಬಳಿಕ ಉಚಿತ ಬಸ್ ಪಾಸ್ ಕುರಿತು ಚರ್ಚೆ ನಡೆಸಲಾಗುತ್ತದೆ. ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾರಿಗೆ ಸೆಸ್ ಸಂಗ್ರಹಿಸುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಹಾನಗರ ಪಾಲಿಕೆ ಈಗಾಗಲೇ ಭಿಕ್ಷುಕರ ಕರ ಸೇರಿದಂತೆ ವಿವಿಧ ಸೆಸ್‍ಗಳನ್ಮು ವಿಧಿಸಲಾಗುತ್ತಿದೆ. ಅದೇ ರೀತಿ ಸಾರಿಗೆ ಸೆಸ್ ಸಂಗ್ರಹಿಸಿ ಕೊಟ್ಟರೆ ನಗರ ಸಾರಿಗೆಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:  ಬೆಂಗಳೂರಿಗರ ಮೇಲೆ ಟ್ರಾನ್ಸ್ ಪೋರ್ಟ್ ಸೆಸ್: ಸಾರಿಗೆ ಸಚಿವರಿಂದ ಶಾಕ್!

    ಮನಸ್ಸಿಗೆ ದುಃಖ ಆದಾಗ ಅತ್ತು ಬಿಡಬೇಕು. ಆಗಲೇ ಮನಸ್ಸಿಗೆ ಸಮಾಧಾನವಾಗುತ್ತದೆ. ಕುಮಾರಸ್ವಾಮಿ ಭಾವನಾತ್ಮಕ ವ್ಯಕ್ತಿ. ಹೀಗಾಗಿ ಅವರು ಅಳುವಿನ ಮೂಲಕ ತಮ್ಮ ದುಃಖ ಶಮನ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಯಾರ ಮೇಲೂ ಆರೋಪ ಮಾಡಿಕೊಂಡಿಲ್ಲ. ಅಲ್ಲದೆ ತಮಗೆ ನೋವು ಕೊಟ್ಟಿದ್ದಾರೆ ಎಂದು ಹೇಳಿಲ್ಲ ಎಂದು ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದರು.

    ನಿಗಮಗಳ ಬೇಡಿಕೆ ಏನು:
    ಸಾರಿಗೆ ಇಲಾಖೆ ಮೂರುವರೆ ವರ್ಷಗಳ ಹಿಂದೆ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿತ್ತು. ಈಗ ಸಾರಿಗೆ ಇಲಾಖೆ 65 ರೂ. ಗೆ ಹೋಲ್ ಸೇಲ್ ದರದಲ್ಲಿ ಪ್ರತಿ ಲೀಟರ್ ಡೀಸೆಲ್ ಪಡೆಯುತ್ತಿದೆ. ಆಗುತ್ತಿರುವ ನಷ್ಟವನ್ನು ಸರಿದೂಗಿಸಲು 8% ದಿಂದ 10% ದರ ಏರಿಸಲು ಸಾರಿಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಕಳೆದ ಕೆಲ ತಿಂಗಳಿಂದ ಡೀಸೆಲ್ ದರ ಹೆಚ್ಚಾಗುತ್ತಿದೆ. ಏಪ್ರಿಲ್ ನಲ್ಲಿ ಲೀಟರ್ ಗೆ 61.02 ರೂ. ಇತ್ತು. ಆದರೆ ಮೇ ತಿಂಗಳಲ್ಲಿ 70.25 ರೂ. ಗೆ ಏರಿಕೆ ಆಗಿದೆ. ಇದರ ಜೊತೆ ಬಜೆಟ್‍ನಲ್ಲಿ ತೈಲ ದರದ ಮೇಲೆ ವಿಧಿಸಲಾಗುತ್ತಿದ್ದ ಸೆಸ್ ದರವನ್ನು 30% ದಿಂದ 32%ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಶನಿವಾರದಿಂದ ಪೆಟ್ರೋಲ್ ಪ್ರತಿ ಲೀಟರ್ ಗೆ 1.14 ರೂ. ಮತ್ತು ಡೀಸೆಲ್ ಲೀಟರ್ ಗೆ 1.12 ರೂ. ದುಬಾರಿಯಾಗಿದೆ.

    ಡೀಸೆಲ್ ಏರಿಕೆಯಿಂದ ದಿನಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಉಪಯೋಗಿಸುವ ಸಾರಿಗೆ ನಿಗಮಗಳು ಈಗ ಡೀಸೆಲ್ ಗಾಗಿ ಅಧಿಕ ಹಣ ಪಾವತಿಸುತ್ತಿದೆ. ಮೊದಲೇ ಸಾರಿಗೆ ನಿಮಗ ನಷ್ಟದಲ್ಲಿರುವುದರಿಂದ ಈಗ ಟಿಕೆಟ್ ಬೆಲೆ ಏರಿಕೆ ಅನಿವಾರ್ಯವಾಗಿದೆ. ಅಷ್ಟೇ ಅಲ್ಲದೆ ತೈಲ ಕಂಪೆನಿಗಳು ಸಗಟು ಡೀಸೆಲ್ ಬೆರೆಯನ್ನು ಏರಿಕೆ ಮಾಡಿವೆ. ಆದ್ದರಿಂದ ಸಾರಿಗೆ ನಿಗಮಗಳಿಗೆ ಪ್ರತಿದಿನ 30.97 ಲಕ್ಷ ರೂ. ಅಧಿಕವಾಗಿ ಆರ್ಥಿಕ ಹೊರೆ ಬೀಳುತ್ತಿದ್ದು, ತಿಂಗಳಿಗೆ 9.29 ಕೋಟಿ ರೂ. ಅಧಿಕ ವೆಚ್ಚವಾಗುತ್ತಿದೆ ಎಂದು ವರದಿಯಾಗಿತ್ತು.