ಬೆಂಗಳೂರು: ವಿಶ್ವಾಸಮತಯಾಚನೆ ಕುರಿತ ಚರ್ಚೆ ಇಂದು ವಿಧಾನ ಸಭೆಯ ಸದನದಲ್ಲಿ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ ಸಮರಕ್ಕೆ ಕಾರಣವಾಗಿದ್ದು, ಈ ನಡುವೆ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ನಡುವೆ ಕುತೂಹಲ ಮೂಡಿಸುವ ಮಾತುಕತೆ ನಡೆದಿದೆ.
ಸದನವನ್ನು ಮುಂದೂಡಿ ಸ್ಪೀಕರ್ ಅವರು ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿ ಮಾಡುತ್ತಿದಂತೆ ಎಲ್ಲ ನಾಯಕರು ಊಟಕ್ಕೆ ಹೊರ ನಡೆದಿದ್ದರು. ಆದರೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ತಮ್ಮ ಸ್ಥಾನದಲ್ಲೇ ಕುಳಿತು ಚಿಂತನೆ ನಡೆಸಿದಂತೆ ಕಂಡು ಬಂದಿತ್ತು.
ಇತ್ತ ಸಚಿವ ಡಿಕೆ ಶಿವಕುಮಾರ್ ಹಾಗೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಅವರು ಚರ್ಚೆಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಒಬ್ಬರೇ ಕುಳಿತ್ತಿದ್ದ ಶ್ರೀರಾಮುಲು ಅವರನ್ನು ನೋಡಿ ಸಿಎಂ, “ಅಲ್ಲಿ ಕುಳಿತು ಏನ್ ಯೋಚನೆ ಮಾಡ್ತಿದ್ದಿಯಾ ನಮ್ಮ ಬಳಿಗೆ ಬಾ” ಎಂದು ಕಿಚಾಯಿಸಿದ್ದರು.
ಈ ವೇಳೆ ಡಿಕೆಶಿ “ನಿನ್ನ ಡಿಸಿಎಂ ಮಾಡಲ್ಲ, ಬೇಕಿದ್ರೆ ಬೇರೆಯವರನ್ನ ಡಿಸಿಎಂ ಮಾಡ್ತಾರೆ, ಜಾರಕಿಹೊಳಿಯನ್ನ ಡಿಸಿಎಂ ಮಾಡ್ತಾರೆ” ಎಂದರು. ಡಿಕೆ ಶಿವಕುಮಾರ್ ಅವರ ಮಾತಿಗೆ ನಗುತ್ತಲೇ ಟಾಂಗ್ ಕೊಟ್ಟ ಶ್ರೀರಾಮುಲು, “ಡಿಸಿಎಂ ಅಲ್ಲ ಸಿಎಂ ಮಾಡ್ತೀನಿ ಅಂದ್ರು ಬರಲ್ಲ” ಎಂದರು. ಬಳಿಕ ಡಿಕೆ ಶಿವಕುಮಾರ್ ಶ್ರೀರಾಮುಲು ಬಳಿ ಬಂದು ನಾಲ್ಕೈದು ನಿಮಿಷ ಚರ್ಚೆ ನಡೆಸಿದರು.
ಬೆಂಗಳೂರು: ಆರ್.ಆರ್.ನಗರ ಶಾಸಕ ಮುನಿರತ್ನ ರಾಜೀನಾಮೆ ನೀಡಿದರೂ ಅವರ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ.
ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಅತಿಥಿಗಳು ಸಿಎಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಮುದ್ರಿಸಲಾಗಿತ್ತು. ಆದರೆ ಸರ್ಕಾರ ಉಳಿಸಿಕೊಳ್ಳುವಲ್ಲಿ ದೋಸ್ತಿಗಳ ಮಧ್ಯೆ ಅಸಲಿ ಕುರುಕ್ಷೇತ್ರ ನಡೆಯುತ್ತಿದೆ. ಹೀಗಾಗಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.
ನಿರ್ಮಾಪಕ ಮುನಿರತ್ನ ಅವರು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ಆಪ್ತರಾಗಿದ್ದಾರೆ. ಆಪ್ತರೇ ರಾಜೀನಾಮೆ ರಾಜೀನಾಮೆ ನೀಡಿ ಶಾಕ್ ಕೊಟ್ಟಿದ್ದರೂ ಸಚಿವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಮುನಿರತ್ನ ನನ್ನ ಆತ್ಮೀಯ ಸ್ನೇಹಿತ. ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸದ್ಯದ ರಾಜಕೀಯ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು. ಶಾಸಕರ ಮನವೊಲಿಸುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುನಿರತ್ನ ನನ್ನ ಜೊತೆಗಿದ್ದಾರೆ. ನಾನು ಅವರ ಜೊತೆ ಇದ್ದೇನೆ ಎಂದು ಹೇಳಿದರು.
ಹುಬ್ಬಳ್ಳಿ: ಸಚಿವ ಡಿ.ಕೆ.ಶಿವಕುಮಾರ್ ಅವರು ನನ್ನ ಜೊತೆ ತಿರುಗಾಡುವ ಮುಖಂಡರೊಬ್ಬರಿಗೆ ಕಾಂಗ್ರೆಸ್ ಸೇರುವಂತೆ 5 ಲಕ್ಷ ರೂ. ಆಮಿಷ ಒಡ್ಡಿದ್ದಾರೆ ಎಂದು ಸಂಸದೆ ಶೋಭಾ ಕರಂದಾಜ್ಲೆ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವರು ನನಗೆ ಆಮಿಷ ಒಡ್ಡಿದ್ದಾರೆ ಎಂದು ನಮ್ಮ ಪಕ್ಷದ ಮುಖಂಡರು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ನಾವು ಖರೀದಿಗೆ ಇಲ್ಲ ಅಂತ ಸಚಿವರಿಗೆ ಕುಂದಗೋಳ ಕ್ಷೇತ್ರದ ಜನರು ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸಚಿವರು ಶಿವಮೊಗ್ಗಕ್ಕೆ ಹೋಗಿದ್ದರು. ಭದ್ರಾವತಿಯಲ್ಲಿ ಹಣ ಹಂಚಲು ಮುಂದಾಗಿದ್ದರು. ಆದರೆ ಕಾರಿನ ಟೈಯರ್ ನಲ್ಲಿ 2 ಕೋಟಿ ರೂ. ಸಿಕ್ಕಿಬಿತ್ತು. ಈ ಹಿಂದೆ ನಂಜನಗೂಡು ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಆಗಲೂ ಲಾರಿಯಲ್ಲಿ ಹಣ ಸಾಗಿಸುವ ಪ್ರಯತ್ನ ಮಾಡಿ, ಸಿಕ್ಕಿಬಿದ್ದಿದ್ದರು. ಈ ಮೂಲಕ ಅಕ್ರಮವಾಗಿ ಚುನಾವಣೆ ಗೆಲ್ಲಲು ಸಚಿವರು ಮುಂದಾಗುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾರೆ. ಅವರಿಗೆ ನಾವು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಗೆಲುವಿನ ನೇತೃತ್ವದ ವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಗ ವಿರೋಧಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ. ಕೇವಲ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ ಎಂದು ಗುಡುಗಿದರು.
ಬೆಂಗಳೂರು: ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷವು ಶಾಸಕ, ಸಚಿವ ಸ್ಥಾನ ಸೇರಿದಂತೆ ಎಲ್ಲವನ್ನೂ ನೀಡಿದೆ. ಆದರೂ ಯಾಕೆ ಉಸಿರುಕಟ್ಟುವಂತೆ ಆಗಿದೆ ಎನ್ನುತ್ತಾರೆ ಅಂತ ತಿಳಿಯುತ್ತಿಲ್ಲ. ಭಗವಂತ ಅವರ ಆಸೆ ಈಡೇರಿಸಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯ ಹೇಳಿಕೆಯ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಪಕ್ಷದಲ್ಲಿ ನಾಯಕರಿದ್ದಾರೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಜಿ ಸಚಿವರ ಜೊತೆಗೆ ಮಾತನಾಡುತ್ತಾರೆ. ಅವರು ನನಗೆ ಭೇಟಿಯಾದರೆ ಮನವೊಲಿಸೋಕೆ ಸಾಧ್ಯ. ಸಿಕ್ಕರೆ ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಸತೀಶ್ ಜಾರಕಿಹೊಳಿ ಗೋಮುಖ ವ್ಯಾಘ್ರ: ರಮೇಶ್ ಜಾರಕಿಹೊಳಿ
20 ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯವರು ತುಂಬಾ ದಡ್ಡರಿದ್ದಾರೆ. ಅವರ ಜೊತೆ 20 ಅಲ್ಲ, 78 ಶಾಸಕರು ಇದ್ದೇವೆ. ಕಲಾಪದಲ್ಲಿ ಅವರ ಜೊತೆಗೆ ಕೂರುತ್ತೇವೆ, ಮಾತನಾಡುತ್ತೇವೆ. ಸಂಸಾರ ಬೇರೆ, ರಾಜಕಾರಣ ಬೇರೆ ಮಾಡುತ್ತೇವೆ. ನಾವು ಜನರ ಮೇಲೆ ನಂಬಿಕೆ ಇಟ್ಟಿದ್ದೇವೆ. ಗಂಟೆ, ಮುಹೂರ್ತ ಇಡುವವರಲ್ಲ ಎಂದು ಲೇವಡಿ ಮಾಡಿದರು.
ನಾವೆಲ್ಲ ಪಕ್ಷದ ಕಾರ್ಯಕರ್ತರು, ಹಳ್ಳಿಯಿಂದ ಬಂದಿರುವವರು. ನಮಗ್ಯಾಕೆ ಬೇರೆಯವರ ರಾಜಕಾರಣ? ಬಿಜೆಪಿಯವರು ಖುಷಿಯಿಂದ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ ಎಂದು ಬಿಜೆಪಿ ನಾಯಕರಿಗೆ ಸಚಿವರು ಟಾಂಗ್ ಕೊಟ್ಟರು.
ಕಂಪ್ಲಿ ಶಾಸಕ ಗಣೇಶ್ ಅವರಿಗೆ ಜಾಮೀನು ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಶಾಸಕ ಗಣೇಶ್ ತುಂಬಾ ನೋವು ಅನುಭವಿಸಿದ್ದಾರೆ. ಹಲ್ಲೆಗೆ ಒಳಗಾಗಿದ್ದ ಆನಂದ್ ಸಿಂಗ್ ಅವರು ಕೂಡ ನೋವು ಪಟ್ಟಿದ್ದಾರೆ. ಮುಂದೆ ಅವರಿಬ್ಬರೂ ಸರಿಯಾದರೆ ಸಾಕು ಎಂದು ತಿಳಿಸಿದರು.
ಶಿವಮೊಗ್ಗ: ಅಯ್ಯೋ.. ಡೋಂಟ್ ವರಿ ಬಾಬಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಅವರ ತಂತ್ರಕ್ಕೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಚುನಾವಣೆಯ ಕಡೆ ಗಳಿಗೆಯಲ್ಲಿ ಬಂದು ಹಗುರವಾಗಿ ಮಾತಾಡಿದರೆ ಏನು ಆಗಲ್ಲ. ಡೈರಿ ಬಗ್ಗೆ ತಾವು ಹೇಳುತ್ತಿರುವುದು ಸುಳ್ಳು ಅಂತ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆ. ಆದರೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ
ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಪುತ್ರ ಬಿ.ವೈ. ರಾಘವೇಂದ್ರ ಅವರು ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್ ತಂತ್ರಗಾರಿಕೆ ರೂಪಿಸಿದ್ದು, ಭದ್ರಾವತಿಯಲ್ಲಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಶಿವಮೊಗ್ಗದ ಭದ್ರಾವತಿಯಲ್ಲಿ ಬಂಡಾಯ ಶಮನವಾಗಿದೆ. ಹಾವು ಮುಂಗುಸಿಯಂತಿದ್ದ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್, ಜೆಡಿಎಸ್‍ನ ಅಪ್ಪಾಜಿ ಗೌಡ ದಶಕಗಳ ಬಳಿಕ ಒಂದಾಗಿದ್ದಾರೆ. ಇಬ್ಬರ ಮಧ್ಯೆ ಇದ್ದ ಮುನಿಸಿಗೆ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇತಿಶ್ರೀ ಹಾಡಿದ್ದಾರೆ. ಈ ಮೂಲಕ ಇಬ್ಬರು ನಾಯಕರನ್ನು ಅಕ್ಕ ಪಕ್ಕದಲ್ಲಿ ಕೂರಿಸಿಕೊಂಡು ಶುಕ್ರವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಇನ್ನು ಮುಂದೆ ಶಾಸಕ ಸಂಗಮೇಶ್ ಹಾಗೂ ಅಪ್ಪಾಜಿ ಗೌಡ ಜಂಟಿಯಾಗಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದರು.
ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರವಾಗಿ ಮಾತನಾಡಿದ್ದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಏನು ಅಧಿಕಾರವಿದೆ? ಕ್ಷಮೆ ಕೇಳಲು ಅವರು ಯಾರು? ಅವರಿಗೂ ಲಿಂಗಾಯತ ಧರ್ಮಕ್ಕೂ ಏನು ಸಂಬಂಧ? ಅವರೇನು ಕೆಪಿಸಿಸಿ ಅಧ್ಯಕ್ಷರೇ? ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ ಎಂದು ಗುಡುಗಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ನಾನು ಚುನಾವಣೆಯಲ್ಲಿ ಬಳಸಿಕೊಂಡಿಲ್ಲ. 2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಹೇಳಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಯಾಕೆ ಈ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ? ಈ ವಿಚಾರವಾಗಿ ಈಗ ಮಾತನಾಡಿ ಪಕ್ಷಕ್ಕೆ ಮುಜುಗುರ ಉಂಟು ಮಾಡುವುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸುದ್ದಿಗೋಷ್ಠಿ ಕರೆದು ಸರಿಯಾದ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ನಾಯಕರಿಗೆ, ಹೈಕಮಾಂಡಿಗೆ ದೂರು ನೀಡುತ್ತೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಸಚಿವರು ಈ ಹಿಂದೆಯೂ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಪ್ರತ್ಯೇಕ ಲಿಂಗಾಯದ ಧರ್ಮದ ವಿಚಾರವಾಗಿ ಕ್ಷಮೆ ಕೇಳಿದ್ದರು. ಇದನ್ನು ಬಳ್ಳಾರಿಯಲ್ಲಿ ಪುನರುಚ್ಛರಿಸಿದ್ದಾರೆ. ಹೀಗೆ ಹೇಳಿಕೆ ನೀಡುವುದ ಹಿಂದೆ ಹಿಡನ್ ಅಜೆಂಡಾ ಇದೆ. ಅಷ್ಟೇ ಅಲ್ಲದೆ ಮೂರು ಬಲವಾದ ಕಾರಣಗಳಿವೆ. ಅದನ್ನು ಚುನಾವಣೆ ಬಳಿಕ ಬಹಿರಂಗ ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?:
ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದ್ದರು.
ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.
– ಬಹಿರಂಗವಾಗಿ ಕ್ಷಮೆಯಾಚಿಸಿದ ಸಚಿವರು
– ಇನ್ನು ಯಾವುದೇ ಕಾರಣಕ್ಕೆ ಜಾತಿ ವಿಚಾರದಲ್ಲಿ ಕೈ ಹಾಕಲ್ಲ
ಬಳ್ಳಾರಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈಹಾಕಿದ್ವಿ. ಆದರೆ ಜನರು ನಮ್ಮ ಕಪಾಳಕ್ಕೆ ಬಾರಿಸಿದರು ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹೂವಿನಹಡಗಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದರು.
ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯಾಗಿದೆ. ದೇಶದಲ್ಲಿ ಜಾತ್ಯಾತೀತತೆ ತತ್ವ ಉಳಿಸಲು ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ನಾನು ಹೋಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆಗೆ ಮಾತನಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಈ ಮೂಲಕ ಬಿಜೆಪಿ ಒಂದು ಅಂಕಿ ದಾಟದಂತೆ ಕಟ್ಟಿ ಹಾಕುತ್ತೇವೆ ಎಂದು ಹೇಳಿದರು.
ಈಶ್ವರಪ್ಪ ಅಂತ ಒಬ್ಬರಿದ್ದಾರೆ. ಅವರು ವಿರೋಧ ಪಕ್ಷ ನಾಯಕರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಯ ನಂತರ ನೆಗೆದು ಬೀಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಸಂಸ್ಕಾರ, ಸಂಸ್ಕೃತಿ ಇದೆಯಾ ಎಂದು ಪ್ರಶ್ನಿಸಿ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ಜನರು ಬಿಜೆಪಿ ಶಾಸಕರಾದ ಶ್ರೀರಾಮುಲು, ಕರುಣಾಕರ ರೆಡ್ಡಿ, ಜೆ.ಶಾಂತಾ ಅವರನ್ನು ಮೂರು ಬಾರಿ ಗೆಲ್ಲಿಸಿ ಕಳಿಸಿದಿರಿ. ಅವರು ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ? ಈಗ ಶ್ರೀರಾಮುಲು ಅವರು ಕುಸ್ತಿ ಆಡುವುದನ್ನು ಬಿಟ್ಟು ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಹೊರಾಟ ಮಾಡಿದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಅವರಿಗೆ ರೆಸ್ಟ್ ನೀಡಿದ್ದಾರೆ. ಅವರಂತೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ರೆಸ್ಟ್ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗುತ್ತೇನೆ ಅಂತ ಕನಸು ಕಾಣುತ್ತಿದ್ದಾರೆ. ನಾವೇನು ಕಡ್ಲೆಕಾಯಿ ತಿನ್ನುತ್ತೇವಾ? ಈ ರಾಜ್ಯದಲ್ಲಿ ಇನ್ನೂ ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಹೇಳಿದ್ದು ಏನು?
2018ರ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಸಮಯದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ನಮ್ಮ ಸರ್ಕಾರದಲ್ಲಿ ನಾವು ದೊಡ್ಡ ತಪ್ಪನ್ನು ಮಾಡಿದ್ದೇವೆ. ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನಮ್ಮ ಬೇರೆ ಸಚಿವರು ವಿಭಿನ್ನವಾಗಿ ಮಾತನಾಡಿದರು. ಆದ್ರೆ ಸರ್ಕಾರದ ತೀರ್ಮಾನ ಆ ಸಂದರ್ಭದಲ್ಲಿ ಬೇಕಾದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ರಾಜಕೀಯದಲ್ಲಿ ಅನೇಕ ವಿಭಿನ್ನವಾದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಯಾವುದೇ ಸರ್ಕಾರ ಧರ್ಮದಲ್ಲಿ ಕೈ ಹಾಕಬಾರದು ಎನ್ನೋದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ನಡೆದ ಜನಾಭಿಪ್ರಾಯವೇ ಸಾಕ್ಷಿ ಎಂದಿದ್ದರು.
ಬಳ್ಳಾರಿ: ಕುರುಕ್ಷೇತ್ರ ಚಿತ್ರದಲ್ಲಿ ದುಯೋರ್ಧನನಾಗಿ ಅಭಿನಯಿಸಿರುವ ನಟ ದರ್ಶನ್ ಮುಂದೆ ಶ್ರೀಕೃಷ್ಣದೇವರಾಯನ ಅವತಾರ ಎತ್ತಲಿದ್ದಾರೆ.
ನಟ ಸೌರ್ವಭಾಮ ರಾಜಕುಮಾರ್ ಅವರ ಬಳಿಕ ಶ್ರೀಕೃಷ್ಣ ದೇವರಾಯನಾಗಿ ನಟ ದರ್ಶನ್ ಅಭಿನಯಿಸುವುದು ಪಕ್ಕಾ ಆಗಿದೆ. ಹಂಪಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಟ ದರ್ಶನ ಶ್ರೀಕೃಷ್ಣ ದೇವರಾಯ ಪಾತ್ರ ಮಾಡುವ ಮನದಾಸೆ ಹೊರಹಾಕಿದ್ದು, ಇದೇ ವೇಳೆ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ದೇವರಾಯರ ಬಗ್ಗೆ ಚಿತ್ರ ನಿರ್ಮಾಣ ಮಾಡುವೆ ಎಂದು ಖಚಿತ ಪಡಿಸಿದ್ದಾರೆ. ಇದನ್ನು ಓದಿ: ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಿಸಿರುವ ಹಂಪಿಯ ಶಿಲ್ಪಗಳನ್ನ ನೂರು ವರ್ಷವಾದ್ರೂ ನಿರ್ಮಿಸಲು ಆಗಲ್ಲ. ಆ ಸ್ಮಾರಕಗಳನ್ನ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಬೇಕೆಂದು ದರ್ಶನ್ ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ದೇವರಾಯನ ಬಗ್ಗೆ ಚಿತ್ರ ನಿರ್ಮಾಣ ಮಾಡುವೆ. ಮುತ್ತುರತ್ನಗಳನ್ನ ಮಾರಾಟ ಮಾಡುವ ಕಾಲ. ನ್ಯಾಯ ಅನ್ಯಾಯದ ಕಾಲದ ಬಗ್ಗೆ ರಾಜ್ಯದ ಜನರಿಗಾಗಿ ಚಿತ್ರ ಮಾಡುವೆ. ಶ್ರೀಕೃಷ್ಣ ದೇವರಾಯನಾಗಿ ನಟ ದರ್ಶನ್ ಅಭಿನಯಿಸಲಿದ್ದಾರೆಂದು ಘೋಷಿಸಿದರು.
ಹಂಪಿ ಉತ್ಸಾವ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಶ್ರೀಕೃಷ್ಣ ದೇವರಾಯನ ಬಗ್ಗೆ ಚಿತ್ರ ನಿರ್ಮಾಣ ಮಾಡಿದರೆ, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಐಟಿ) ದಾಖಲಿಸಿದ್ದ ಮೂರು ಪ್ರಕರಣಗಳಲ್ಲಿ ಜಲಸಂಪಸ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಐಟಿ ದಾಳಿಯ ವೇಳೆ ಸಚಿವ ಡಿಕೆ ಶಿವಕುಮಾರ್ ಅವರು ಸಾಕ್ಷ್ಯನಾಶ, ತಪ್ಪು ಮಾಹಿತಿ, ಚಟಿ ಹರಿದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಪ್ರಕರಣಗಳನ್ನು ವಜಾಗೊಳಿಸಿದೆ.
ನಾಲ್ಕನೇ ಪ್ರಕರಣ ಹವಾಲಾ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮಾರ್ಚ್ 15ಕ್ಕೆ ಆದೇಶ ನೀಡಲಾಗುತ್ತದೆ ಎಂದು ವಿಶೇಷ ನ್ಯಾಯಾಲಯದ ನ್ಯಾ. ಬಿ.ವಿ.ಪಾಟೀಲ್ ಅವರು ತಿಳಿಸಿದ್ದಾರೆ.
ಆರ್ಥಿಕ ವರ್ಷ ಮುಗಿಯುವ ಮುನ್ನವೇ ಐಟಿ ಇಲಾಖೆ ದೂರು ದಾಖಲು ಮಾಡಿದ್ದಾರೆ. ನಾನು ಸಂಪೂರ್ಣ ಲೆಕ್ಕ ನೀಡಲು ಸಿದ್ಧ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಕೋರ್ಟ್ ಮುಂದೆ ಹೇಳಿಕೊಂಡಿದ್ದರು.
ಮೂರು ಆರೋಪಗಳಿಂದ ಮುಕ್ತವಾದರೂ ಸಚಿವ ಡಿಕೆ ಶಿವಕುಮಾರ್ ಅವರಿಗೆ ಫುಲ್ ರಿಲೀಫ್ ಸಿಕ್ಕಿಲ್ಲ. ಏಕೆಂದರೆ ಸಚಿವರ ಬಳಿ ಅಘೋಷಿತ ಆಸ್ತಿ ಇದೆ ಎಂದು ಸಾಬೀತು ಪಡಿಸುವ ಸಾಕ್ಷಿಗಳಿದ್ದರೆ ಹೊಸದಾಗಿ ದೂರು ದಾಖಲಿಸಬಹುದು ಎಂದು ಐಟಿಗೆ ಕೋರ್ಟ್ ಅವಕಾಶ ನೀಡಿದೆ.
– ಜನವರಿ 12, 13ರಂದು ಹಂಪಿ ಉತ್ಸವ ಆಚರಣೆಗೆ ಮುಂದಾದ ಸರ್ಕಾರ
ಬೆಳಗಾವಿ: ಬಳ್ಳಾರಿ ಜನರ ಪ್ರತಿಭಟನೆ, ಪ್ರತಿಪಕ್ಷಗಳ ಟೀಕೆಯಿಂದ ಎಚ್ಚೆತ್ತ ಸರ್ಕಾರ 8 ಕೋಟಿ ರೂ. ವೆಚ್ಚದಲ್ಲಿ ಹಂಪಿ ಉತ್ಸವ ಆಚರಿಸುವ ನಿರ್ಧಾರ ಕೈಗೊಂಡಿದೆ.
ಪರಿಷತ್‍ನಲ್ಲಿ ಇಂದು ನಡೆದ ಕಲಾಪದಲ್ಲಿ ಹಂಪಿ ಉತ್ಸವದ ಕುರಿತು ಕೆ.ಸಿ.ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಜನವರಿ 12 ಹಾಗೂ 13ರಂದು ಹಂಪಿ ಉತ್ಸವ ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು 60 ಲಕ್ಷ ರೂ. ಬಿಡುಗಡೆ ಮಾಡಿದೆ. ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಹಂಪಿ ಉತ್ಸವ ನಡೆಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ರಾಜ್ಯದ ನೂರು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಾರಿಯ ಹಂಪಿ ಉತ್ಸವವನ್ನು ಕೈಬಿಡಲಾಗುತ್ತಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು, ಬಳ್ಳಾರಿಯ ಜನತೆ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಫೇಸ್‍ಬುಕ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಜನಾರ್ದನ ರೆಡ್ಡಿ, ಕೋಟಿ ಕೋಟಿ ಹಣ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ಮಾಡ್ತೀರಿ. ಉಪ ಚುನಾವಣೆ ಗೆಲ್ಲೋದಕ್ಕೆ ನೀರಿನಂತೆ ಹಣ ಖರ್ಚು ಮಾಡ್ತೀರಿ. ಅವೆಲ್ಲದಕ್ಕೂ ಇರದ ಬರ, ಹಂಪಿ ಉತ್ಸವದ ವಿಚಾರಕ್ಕೆ ಏಕೆ ಬರುತ್ತೆ. ಅಲ್ಲದೇ ಹಂಪಿ ಉತ್ಸವ ಮಾಡಲು ನಿಮ್ಮ ಕೈಲಿ ಆಗಲಿಲ್ಲ ಅಂದ್ರೆ ಹೇಳಿ. ನಾನು ದುಡ್ಡು ಕೊಡ್ತೇನೆ. ಹಂಪಿ ಉತ್ಸವ ನಡೆಸಿ ಅಂತ ದೋಸ್ತಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದರು.
ಹಂಪಿ ಉತ್ಸವದ ಕುರಿತು ಪ್ರತಿಕ್ರಿಯೆ ನೀಡಿದ್ದ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅವರು, ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವೂ ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ. ಸರ್ಕಾರ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆಯ ಪರಂಪರೆಯಾಗಿದೆ. ಹಂಪಿ ಉತ್ಸವಕ್ಕೆ ಒಂದು ಇತಿಹಾಸವಿದೆ ಅದನ್ನು ಎಲ್ಲರು ಗೌರವಿಸಬೇಕು ಎಂದು ಸರ್ಕಾರ ವಿರುದ್ಧ ಗುಡುಗಿದ್ದರು.