Tag: ಸಚಿವ ಡಿಕೆ ಸುರೇಶ್ ಕುಮಾರ್

  • ಹಸ್ತಲಾಘವ ಮಾಡಿ, ಬೆನ್ನು ತಟ್ಟಿದ್ರು – ಮುನಿಸು ಮರೆತು ಒಂದಾದ್ರಾ ಮಂತ್ರಿಗಳು

    ಹಸ್ತಲಾಘವ ಮಾಡಿ, ಬೆನ್ನು ತಟ್ಟಿದ್ರು – ಮುನಿಸು ಮರೆತು ಒಂದಾದ್ರಾ ಮಂತ್ರಿಗಳು

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್ ಪಕ್ಷದ ಒಳಗಡೆ ಉಂಟಾಗಿದ್ದ ನಾಯಕರ ಮುನಿಸು ಸದ್ಯ ತಣ್ಣಗೆ ಆದಂತೆ ಕಾಣುತ್ತಿದ್ದು, ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪರಸ್ಪರ ಹಸ್ತಲಾಘವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಬುಧವಾರ ನಿಗದಿಯಾಗಿದ್ದ ಸಿಎಂ ಕುಮಾರಸ್ವಾಮಿ ಅವರೊಂದಿನ ಸಭೆಗೆ ಹಾಜರಾಗಿದ್ದ ಇಬ್ಬರು ನಾಯಕರು ಸಭೆಗೂ ಮುನ್ನ ಹಸ್ತಲಾಘವ ಮಾಡಿ ಪರಸ್ಪರ ಬೆನ್ನನ್ನು ತಟ್ಟಿ ಒಳಗೆ ಹೋದರು. ಬೆಳಗಾವಿ ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ಹಾಗೂ ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರದ ಬಗ್ಗೆ ಈ ಹಿಂದೆ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆದರೆ ಇಂದು ಕಂಡು ಬಂದ ದೃಶ್ಯಗಳು ನಾಯಕರ ನಡುವೆ ಉಂಟಾಗಿದ್ದ ಮುನಿಸು ದೂರವಾಗಿದೆಯಾ ಎಂಬಂತೆ ಕಂಡು ಬಂತು.

    ಸಿಎಂ ಜೊತೆಗಿನ ಸಭೆ ಬಳಿಕ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ, 11ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಸಾಕಷ್ಟು ವಿಷಯಗಳಿಗೆ ಮುಖ್ಯ ಮಂತ್ರಿಗಳಿಂದ ಅನುಮೋದನೆ ಸಿಕ್ಕಿದೆ. ಗದಗದ ಕಪ್ಪತಗುಡ್ಡ ವನ್ಯ ಜೀವಧಾಮವಾಗಿ ಘೋಷಣೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಾಡಿಗಳಿಗೆ ವಿದ್ಯುತ್ ಒದಗಿಸಲು ಅನುಮೋದನೆ, ಮುಳ್ಳಯ್ಯನಗಿರಿ ನೈಸರ್ಗಿಕ ಭೂ ಪ್ರದೇಶವನ್ನ ಸಂರಕ್ಷಿತ ಪ್ರದೇಶವೆಂದು ಘೋಷಣೆ, ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಹೆಚ್ಚಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಆದರೆ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ನಿರ್ಮಾಣಕ್ಕಾಗಿ 1,470 ಎಕರೆ ಭೂಮಿ ಮಂಜೂರು ಮಾಡುವ ವಿಚಾರ ಮುಂದೂಡಿದ್ದಾರೆ ಎಂದು ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.

    ಜನವರಿಯಿಂದ ಮೇ ತಿಂಗಳವರೆಗೆ ಕಾಡಿನಲ್ಲಿ ಕಾಡ್ಗಿಚ್ಚು ಹೆಚ್ಚಳವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಅರಣ್ಯ ಇಲಾಖೆ ಸಿದ್ಧವಾಗಿದೆ. ಈ ಅವಧಿಯದಲ್ಲಿ ಸಿಬ್ಬಂದಿಗೆ ರಜೆ ಕಡಿಮೆ ಮಾಡಿ, ಅಗ್ನಿಶಾಮಕ ದಳದ ಸಹಕಾರದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮವಹಿಸುತ್ತೇವೆ ಎಂದರು. ಅಲ್ಲದೇ ಕಪ್ಪತಗುಡ್ಡವನ್ನ ಮೀಸಲು ಅರಣ್ಯ ಪ್ರದೇಶವಾಗಿ ಘೋಷಣೆ ಮಾಡಿದ್ದು, ತುಮಕೂರಿನ ಬುಕ್ಕಾ ಪಟ್ಟಣ ಮೀಸಲು ಅರಣ್ಯ ಪ್ರದೇಶದ 220 ಎಕರೆ ಜಾಗವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ್ದೇವೆ ಎಂದು ವಿವರಿಸಿದರು.

    ಸಭೆಯಲ್ಲಿ ಪ್ರಮುಖವಾಗಿ ದೇಶದಲ್ಲಿ ಅತಿ ಹೆಚ್ಚು 6ನೇ ಧಾಮವನ್ನ ಹುಲಿ ಸಂರಕ್ಷಿತ ಪ್ರದೇಶವಾಗಿರುವ ಮಲೆಮಹದೇಶ್ವರ ವನ್ಯಧಾಮವನ್ನ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವ ಹಾಗೂ ಕೋಲಾರದ ಕಾಮಸಮುದ್ರ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಎಂದು ಹೊಸದಾಗಿ ಘೋಷಣೆ ಮಾಡಿದ್ದೇವೆ. ಉಳಿದಂತೆ ಮುಳಬಾಗಿಲಿನ ಹೊನ್ನಹಳ್ಳಿ ಗುಹೆಗಳಿಗೆ ವಿದ್ಯುತ್ ಸಂಪರ್ಕ ಯೋಜನೆ, ಕೈಗಾ 5 ಮತ್ತು 6ನೇ ಘಟಕ ವಿಸ್ತರಣೆಗೆ ಎನ್‍ಒಸಿ ನೀಡಲಾಗಿದೆ ಎಂದು ತಮ್ಮ ಇಲಾಖೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv