ರಾಮನಗರ: ಇಲ್ಲಿ ಎಲ್ಲರೂ ಕೂಡ ಸಚಿವ ಡಿಕೆ ಶಿವಕುಮಾರ್ ಆಪ್ತರೇ, ಮಾಧ್ಯಮದವರು ಕೂಡ ಡಿಕೆಶಿಯವರ ಆಪ್ತರು. ಯಾರಿಗೆ ಅನುಕೂಲ ಆಗುತ್ತೆ ಎಲ್ಲರಿಗೂ ಅವರು ಆಪ್ತರೇ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಇಂದು ಬೆಳಗ್ಗೆ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಆಪಾರ ಹಣ, ಆಸ್ತಿಯೊಂದಿಗೆ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿ ಗೌಡಯ್ಯ ಡಿಕೆ ಶಿವಕುಮಾರ್ ಆಪ್ತರು ಎಂದು ವರದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ಎಲ್ಲರೂ ಡಿ.ಕೆ ಶಿವಕುಮಾರ್ ಆಪ್ತರೇ. ಮಾಧ್ಯಮದವರು ಕೂಡ ಅವರಿಗೆ ಮತ್ತು ಡಿಕೆ ಸುರೇಶ್‍ಗೆ ಆಪ್ತರು. ಆದರೆ ಡಿ.ಕೆ ಶಿವಕುಮಾರ್ ಆಪ್ತರಾದರೆ ನಿಮಗೂ ಕೂಡಾ ಅನುಕೂಲವಾಯಿತು ಎಂದರ್ಥವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಗೌಡಯ್ಯ ಅವರು ಡಿ.ಕೆ ಶಿವಕುಮಾರ್ ಇಲಾಖೆಯಲ್ಲಿ ಕೆಲಸ ಮಾಡಿಲ್ಲ. ಅವರ ಜೊತೆಯೂ ಇಲ್ಲ. ಗೌಡಯ್ಯ ಅವರು ಒಬ್ಬ ಸರ್ಕಾರಿ ಅಧಿಕಾರಿ ಅಷ್ಟೇ. ಅಲ್ಲದೇ ಸಾಕಷ್ಟು ಜನರು ಸಚಿವ ಡಿ.ಕೆ ಶಿವಕುಮಾರ್‍ಗೆ ಆಪ್ತರಿದ್ದಾರೆ. ನೀವು ಕೂಡ ಆಪ್ತರೇ ಎಂದು ಹೇಳಿದರು.
ರಾಮನಗರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಅವರ ಪುತ್ರಿ ಶಾಂಭವಿ ಅವರು ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಅವಕಾಶವಿದೆ. ಯಾರೇ ಚುನಾವಣೆಗೆ ನಿಂತರೂ ಸ್ವಾಗತ ಮಾಡುತ್ತೇವೆ. ನಾನು ಕೂಡ ಸ್ಪರ್ಧಿಸಲು ಸಮಯ ಬಂದಾಗ ಸ್ಪರ್ಧೆ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಎಸಿಬಿ ದಾಳಿ ವೇಳೆ ಪಾರ್ಕಿಂಗ್ ಕಾರಿನಲ್ಲಿ ಹಣ, ಪೈಪಿನಲ್ಲಿ ಚಿನ್ನ ಪತ್ತೆ!
ಬೆಂಗಳೂರು: ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಹಾಗೂ ಐಟಿ ಇಲಾಖೆ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್, ನನ್ನ ಪರ ಯಾರು ಪ್ರತಿಭಟನೆ ಮಾಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಡಿಕೆಶಿ, ನನ್ನ ಪರವಾಗಿ ಯಾವುದೇ ಪ್ರತಿಭಟನೆ, ಚಳವಳಿ, ಹೋರಾಟ ಮಾಡಬಾರದು ಎಂದು ಯುವ ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ನನಗೆ ಈ ನೆಲದ ಕಾನೂನಿನ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಇದೆ. ನನಗೆ ಎದುರಾಗಿರುವ ಸವಾಲು ಹಾಗೂ ಸಮಸ್ಯೆಗಳನ್ನು ಕಾನೂನಾತ್ಮಾಕವಾಗಿ ಹಾಗೂ ರಾಜಕೀಯವಾಗಿ ಎದುರಿಸುವ ಶಕ್ತಿಯೂ ಇದೆ. ರಾಜಕೀಯ ಎದುರಾಳಿಗಳಿಗೆ ರಾಜಕೀಯವಾಗಿಯೇ ಉತ್ತರ ನೀಡುತ್ತೇನೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಚಳವಳಿಯಲ್ಲಿ ನಡೆಸುವುದಾಗಲಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವುದಾಗಲಿ ಮಾಡುವುದು ಬೇಡ. ಇಂಥ ಹೋರಾಟಗಳಿಂದ ಜನಸಾಮಾನ್ಯರಿಗೂ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ.
I appeal to all congress workers and my well wishes not to hold protests on my behalf creating hassles for common people.
I have full faith in the law of the land. I will face all the issues legally and answer my rivals politically. pic.twitter.com/W5Bd5Wx4Se
ಇಂದು ನಗರದ ಆದಾಯ ತೆರಿಗೆ ಇಲಾಖೆ ಎದುರು ಶಿವಕುಮಾರ್ ವಿರುದ್ಧದ ವಿಚಾರಣೆಯನ್ನು ವಿರೋಧಿಸಿ ನೂರಕ್ಕೂ ಹೆಚ್ಚು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯಾಗಿರುವ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ: ಡಿಕೆಶಿ ಮೇಲಿನ ಐಟಿ ವಿಚಾರಣೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಆರೋಪಿ ನಲಪಾಡ್ ಪ್ರತ್ಯಕ್ಷ!
ಉಡುಪಿ: ರಾಜ್ಯವೇ ಕಂಡು ಕೇಳರಿಯದ ದಬ್ಬಾಳಿಕೆ ಇಂದು ನಡೆದಿದೆ. ಸಿಎಂ ಕುಮಾರಸ್ವಾಮಿಯವರ ಆಣತಿಯಂತೆ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್‍ವೈ ಮನೆಗೆ ಮುತ್ತಿಗೆ ಹಾಕಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ ಅಂತ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಸಿಎಂ ಭಯೋತ್ಪಾದಕನ ಮಾದರಿಯ ಹೇಳಿಕೆ ಕೊಡುತ್ತಾರೆ. ಭಯೋತ್ಪಾದಕರ ಮಾದರಿಯಲ್ಲಿ ದಂಗೆ ಏಳುವುದಾಗಿ ಕರೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪ ಮೇಲಿನ ಎಲ್ಲಾ ಕೇಸ್ ಖುಲಾಸೆಯಾಗಿದೆ. ಸಿಎಂ ಹಳೇ ಕೇಸ್ ರೀ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದಾರೆ. ಸಚಿವ ರೇವಣ್ಣ ಮೇಲಿನ ಕೇಸಿಗೂ ಪುನರ್ ಜೀವ ಕೊಡ್ತೀರಾ? ರೇವಣ್ಣ ಮೇಲೆ ಭಾರೀ ಭೂ ಕಬಳಿಕೆ ಆರೋಪವಿದೆ. ಮಾಜಿ ಸಚಿವ ಎ ಮಂಜು ಆರೋಪಗಳ ಸಮಗ್ರ ತನಿಖೆ ಮಾಡುತ್ತೀರಾ ಎಂದು ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದರು.
ಐಟಿ ಹಾಗೂ ಇಡಿ ಸ್ವತಂತ್ರ ಸಂಸ್ಥೆಗಳು. ಈ ಕುರಿತು ಗೃಹಸಚಿವ ರಾಜ್ ನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಸ್ವಾತಂತ್ರ ಸಂಸ್ಥೆಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ನುಡಿದಂತೆ ನಡೆಯುವ ಸರ್ಕಾರ ನಿಮ್ಮದಾಗಿರುವುದರಿಂದ ಡಿಕೆಶಿಯವರನ್ನು ಸಚಿವ ಸಂಪುಟದಿಂದ ಕೈಬಿಡಿ. ಇಡಿ ತನಿಖೆ ನಡೆಯುವಾಗ ಸಚಿವ ಡಿಕೆ ಶಿವಕುಮಾರ್ ಅಧಿಕಾರದಲ್ಲಿ ಇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಂಡೆ ಬಿದ್ದು ಕುಂದಾನಗರಿ ಅಪ್ಪಚ್ಚಿ:
ಕಾಂಗ್ರೆಸ್ ನಾಯಕರಾದ ಜಾರಕಿ ಹೋಳಿ ಸಹೋದರರಿಗೆ ಅಸಮಾಧಾನವಿದೆ. ಕುಂದಾನಗರದ ಮೇಲೆ ಕನಕಪುರದ ಬಂಡೆ ಬಿದ್ದು ಅಪ್ಪಚ್ಚಿಯಾಗಿದೆ. ಕಾಂಗ್ರೆಸ್ ಒಳಗೆ ಯಾವುದೂ ಸರಿಯಿಲ್ಲ ಎಂದು ಅವರೇ ಒಪ್ಪಿದ್ದಾರೆ. ಬಿಜೆಪಿ ಆಪರೇಷನ್ ಮಾಡುತ್ತಿಲ್ಲ. ನಾವೇನೂ ಯಾರನ್ನೂ ಸೆಳೆಯಲ್ಲ. ಅಸಮಾಧಾನ ಇದ್ದವರು ಬಿಜೆಪಿ ಸೇರಿದರೆ ನಂಬರ್ ಆಧಾರದ ಮೇಲೆ ಪಕ್ಷ ರಚನೆಯಾಗಬಹುದು. ಕಾಂಗ್ರೆಸ್ ಒಳಗೆ ಅವರಿಗವರೇ ಆಪರೇಷನ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಗೆ ಕುಟುಕಿದರು.
ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡಿದರೆ ನನ್ನನ್ನು ಜೈಲಿಗೆ ಹಾಕಿ, ಗಲ್ಲಿಗೂ ಏರಲು ನಾನು ಸಿದ್ಧ ಎಂದು ಜಲಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಫುಡ್ ಪಾಯ್ಸಸನ್ ಆಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಿಕೆ ಶಿವಕುಮಾರ್ ಬುಧವಾರ ಸಂಜೆ ಡಿಸ್ಚಾರ್ಜ್ ಆಗಿ ಕ್ರೆಸೆಂಟ್ ಸರ್ಕಾರಿ ಬಂಗಲೆಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ತನ್ನ ವಿರುದ್ಧದ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ರಾಷ್ಟ್ರಮಟ್ಟದಲ್ಲಿ ಪ್ರಸಾರವಾಗಬೇಕು ಎನ್ನುವ ಉದ್ದೇಶದಿಂದ ಡಿಕೆಶಿ ಇಂಗ್ಲಿಷಿನಲ್ಲೇ ಸುದ್ದಿಗೋಷ್ಠಿ ನಡೆಸಿದ್ದು ವಿಶೇಷವಾಗಿತ್ತು.
ಬಿಜೆಪಿ ಆರೋಪಗಳಿಗೆ ಉತ್ತರಿಸಲು ಅನಾರೋಗ್ಯದ ನಡುವೆಯೂ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರ ಪಡೆಯಲು ನನ್ನ ವಿರುದ್ಧ ಐಟಿ, ಇಡಿ ಇಲಾಖೆಗಳನ್ನು ಬಳಕೆ ಮಾಡಿಕೊಂಡು ಒತ್ತಡ ಹಾಕಲಾಗುತ್ತಿದೆ. ತನಿಖಾ ಸಂಸ್ಥೆಗಳಿಗೆ ರಾಜಕೀಯ ಒತ್ತಡ ಹೆಚ್ಚಾಗಿರುವುದರಿಂದ ನನ್ನ ಹಾಗೂ ಸ್ನೇಹಿತರ ನಿವಾಸದ ಮೇಲೆ ದಾಳಿ ನಡೆಸಿ ಒತ್ತಾಯ ಪೂರ್ವಕವಾಗಿ ಹೇಳಿಕೆ ಪಡೆದಿದ್ದಾರೆ. ಅಧಿಕಾರಿಗಳು ನನ್ನ ಬಳಿ ತಮ್ಮ ಅವರ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ ಎಂದು ತನ್ನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದರು.
ಪ್ರಕರಣದಲ್ಲಿ ಆರೋಪಿಗಳಾಗಿರುವ ಆಪ್ತರೆಲ್ಲರೂ ಆದಾಯವನ್ನು ಘೋಷಿಸಿಕೊಂಡಿದ್ದಾರೆ. ನಾನು ನಾನು ದೆಹಲಿಯಲ್ಲೇ ಪತ್ರಿಕಾಗೋಷ್ಠಿ ಮಾಡಿ ಅವರಿಗೆ ಉತ್ತರ ಕೊಡುತ್ತೇನೆ. ಅಲ್ಲದೇ ಎಲ್ಲಾ ಆರೋಪದಿಂದ ಮುಕ್ತನಾಗಿ ಪರಿಶುದ್ಧನಾಗಿ ಹೊರ ಬರುತ್ತೇನೆ. ಈ ದೇಶದ ಪ್ರಜೆಯಾಗಿ ನನಗೂ ಈ ನೆಲದ ಕಾನೂನು ಗೊತ್ತು. ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಗಲ್ಲಿಗೇರಲು ಸಿದ್ಧ ಎಂದು ಸವಾಲು ಎಸೆದರು.
BJP has today admitted their role in forcing Investigative Agencies to target me. It's being done to destabilize Karnataka Coalition Govt keeping 2019 LS Elections in mind. They are day dreaming of forming Govt in K'taka.
1 ವರ್ಷ ಬೇಕೇ: ನನ್ನ ವಿರುದ್ಧ ಐಟಿ ಅಧಿಕಾರಿಗಳು ದಾಳಿ ನಡೆಸಿ 1 ವರ್ಷ ಕಳೆದಿದೆ. ಆದರೆ ಒಂದು ಪ್ರಕರಣ ದಾಖಲಿಸಲು ಇಡಿಗೆ 1 ವರ್ಷ ಅವಧಿ ಬೇಕೇ ಆದರೆ ನನಗೆ ಎಂತಹ ಟಾರ್ಚರ್ ಕೊಟ್ಟರು ಸಹಿಸಲು ಸಿದ್ಧ. ಯಾವುದೇ ಅಕ್ರಮ ಹಣ ವರ್ಗಾವಣೆ ಮಾಡಿಲ್ಲ. ನನ್ನ ಮನೆಯಲ್ಲಿ ಸಿಕ್ಕ 41 ಲಕ್ಷ ರೂ. ನನ್ನದೇ. ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೊಟ್ಟಿದ್ದೇನೆ. ನನ್ನ ಆಪ್ತರು ತಮ್ಮ ಆಸ್ತಿಯ ಕುರಿತು ಲೆಕ್ಕ ನೀಡಿದ್ದಾರೆ ಎಂದರು.
ಕುಟುಂಬಕ್ಕೂ ಒತ್ತಡ: ಆದಾಯ ತೆರಿಗೆ ಇಲಾಖೆ ಅವರು ನನ್ನ ಆಪ್ತರು, ಕುಟುಂಬ, ಸಹೋದರ ಸೇರಿದಂತೆ ಎಲ್ಲರಿಗೂ ಒತ್ತಡ ಹಾಕಿದ್ದಾರೆ. ಈ ಮೂಲಕ ಅವರ ಹೇಳಿಕೆ ಪಡೆಯಲಾಗಿದೆ. ಈಗಾಗಲೇ ಸಹೋದರ ಸುರೇಶ್ ಗೆ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದು, ಸುರೇಶ್ ಅಧಿಕಾರಿಗಳ ಮುಂದೇ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ಈವರೆಗೂ ತನಗೆ ಯಾವುದೇ ನೋಟಿಸ್ ಬಂದಿಲ್ಲ. ಬಂಧನದ ಭಯವೂ ಇಲ್ಲ. ಈ ಹಿಂದೆ ನನ್ನ ಬಂಧನದ ಕುರಿತು ನೀಡಿರುವ ಹೇಳಿಕೆ ನಿಜ. ಸುರೇಶ್ ಆಪ್ತ ಸ್ನೇಹಿತರು ನೀಡಿದ ಎಚ್ಚರಿಕೆ ಮೇಲೆ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಆದರೆ ಕಾನೂನು ಕೇವಲ ಬಿಜೆಪಿ ಅವರಿಗೆ ಮಾತ್ರ ಅಲ್ಲ ನನಗೂ ತಿಳಿದಿದೆ ಎಂದು ಎಚ್ಚರಿಕೆ ನೀಡಿದರು.
We have statements of DK Shivakumar's driver, who told the IT department, about how money in kgs were sent to AICC. We now know, why Congress party was crying during demonetisation : Dr. @sambitswarajpic.twitter.com/BUtcOqlaBk
ಎಲ್ಲರ ಮಾಹಿತಿ ಬಿಚ್ಚಿಡುತ್ತೇನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಅವರು ನೇರ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿ ಬಂದಿದ್ದಾರೆ. ಅಲ್ಲದೇ ಈ ಕುರಿತು ಅಧಿಕಾರಿಗಳು ಸ್ವಷ್ಟಪಡಿಸಿದ್ದಾರೆ. ಜೈಲಿಗೆ ಹೋಗಿ ಬಂದ ವ್ಯಕ್ತಿಗಳಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ. ನಾನು ಏಕೆ ರಾಜೀನಾಮೆ ನೀಡಬೇಕು. ಜೈಲಿಗೆ ಹೋಗಿ ಬಂದವರಿಗೆ ರಾಜ್ಯಾಧ್ಯಕ್ಷ ಸಿಎಂ ಅಭ್ಯರ್ಥಿ ಎಂದು ಘೋಷಿಸುತ್ತಾರೆ. ಅಧಿಕಾರ, ಹಣದ ಆಮಿಷ ಎಲ್ಲವೂ ಈ ಹಿಂದಿದೆ. 2019 ಚುನಾವಣೆಯಲ್ಲಿ ಜನರು ಇವುಗಳಿಗೆ ಎಲ್ಲ ತಕ್ಕ ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು.
ಅಧಿಕಾರಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ, ನನಗೆ ಭೇಟಿ ಮಾಡಿ ಚರ್ಚೆ ನಡೆಸಿ ಎಲ್ಲರ ಬಗ್ಗೆಯೂ ಮಾಹಿತಿ ನೀಡುತ್ತೇನೆ. ಯಾವುದೇ ಆರೋಪಕ್ಕೂ ಹೆದರಿ ಓಡಿ ಹೋಗುವುದಿಲ್ಲ. ಸಹರಾ ಡೈರಿ ಕಥೆ ಏನಾಯ್ತು? ಯಾರು ಎಷ್ಟು ಹಣ ಪಡೆಯಲಾಗಿದೆ ಎನ್ನುವುದು ಗೊತ್ತಿದೆ. ನನ್ನ ಮನೆಯಲ್ಲಿ ಡೈರಿ ಸಿಕ್ಕಿದೆ ಎಂದು ಕಥೆ ಕಟ್ಟಿ ಅದರಲ್ಲಿ ಕೋಡ್ ವರ್ಡ್ ಗಳನ್ನು ಸೃಷ್ಟಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಗೋವಿಂದ ರಾಜು ಡೈರಿಯನ್ನು ಬಿಜೆಪಿ ಅವರೇ ಕ್ರಿಯೇಟ್ ಮಾಡಿದ್ದಾರೆ. ಅಲ್ಲಿ ಕೆಲ ಹೆಸರುಗಳನ್ನು ಬರೆದಿದ್ದಾರೆ. ನಾನು ರಾಜೀನಾಮೆ ನೀಡಲ್ಲ. ಈ ಕುರಿತು ಸಮ್ಮಿಶ್ರ ಸರ್ಕಾರದ ಸಿಎಂ ಎಚ್‍ಡಿಕೆ ಅವರಿಗೆ ಏನು ಹೇಳುವ ಅಗತ್ಯವಿಲ್ಲ. ಅವರಿಗೆ ಎಲ್ಲವೂ ಅರಿವಿದೆ. ಮಾಜಿ ಸಿಎಂ ಅವರಿಗೂ ಸಿದ್ದರಾಮಯ್ಯ ಅರಿವಿದೆ ಎಂದರು. ಇದನ್ನು ಓದಿ: ಕರ್ನಾಟಕ ಕಾಂಗ್ರೆಸ್‍ನ ಮತ್ತೊಂದು ಎಟಿಎಂ-ಕೆಜಿ ಲೆಕ್ಕದಲ್ಲಿ ಹವಾಲ ಹಣ ರವಾನೆ: ಸಂಬಿತ್ ಪಾತ್ರ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಾನೇ ಅಡ್ಡಿ ಎಂದು ಅವರು ಭಾವಿಸಿದ್ದು, ನನ್ನನ್ನು ಜೈಲಿಗೆ ಕಳುಹಿಸಿದರೆ ಸರ್ಕಾರ ರಚನೆ ಮಾಡಬಹುದು ಎಂಬುವುದು ಅವರ ಅನಿಸಿಕೆ. ಆದರೆ ನಾನು ಜೈಲಿಗೆ ಹೋದರೂ ಅವರು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ನಾನು ನನ್ನ ಪಕ್ಷ ಸಿದ್ಧಾಂತಕ್ಕೆ ಬದ್ಧವಾಗಿದ್ದು ಅದನ್ನೇ ಇಲ್ಲಿವರೆಗೂ ಮಾಡಿದ್ದೇನೆ. ಯಾವುದೇ ಹಣ, ಅಧಿಕಾರ ಅಮಿಷಕ್ಕೆ ಒಳಗಾಗಿಲ್ಲ ಅದ್ದರಿಂದ ಹೆಚ್ಚಿನ ಒತ್ತಡ ಬಂದಿದೆ ಎಂದು ಹೇಳಿದರು.
ವೈದ್ಯರ ಸಲಹೆ ನಿರ್ಲಕ್ಷ್ಯ ಮಾಡಿ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಆಸ್ಪತ್ರೆ ಸೇರಿದ ಸಮಯವನ್ನು ಅವರು ಬೇಕಾದ ಹಾಗೇ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ನಾನು ಸಮಯವನ್ನು ಬಳಕೆ ಮಾಡಿಕೊಡುತ್ತೇನೆ. ಇದು ಕೇವಲ ಮೊದಲ ಡೋಸ್ ಅಷ್ಟೇ, ಸಮಯ ಬಂದಾಗ ಎಲ್ಲಾವನ್ನು ಬಹಿರಂಗ ಪಡಿಸುತ್ತೇನೆ. ಇದುವರೆಗೂ ನನಗೆ 40 ರಿಂದ 50 ಬಾರಿ ವಾಂತಿ ಆಗಿದೆ. ಅದರು ನಾನು ನಿಮ್ಮ ಮುಂದೇ ಬಂದು ಮಾತನಾಡುತ್ತಿದ್ದೇನೆ ಎಂದರು. ಇದನ್ನು ಓದಿ: ದೇವೇಗೌಡರ ಕುಟುಂಬದಿಂದ ಭೂ ಹಗರಣ -ಕುಮಾರಸ್ವಾಮಿ ಯಾಕ್ ಮಾತಾಡ್ತಿಲ್ಲ, ಬಿಎಸ್‍ವೈ ಪ್ರಶ್ನೆ
ನವದೆಹಲಿ: ಸಮ್ಮಿಸ್ರ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಇಡಿ ಎಫ್‍ಐಆರ್ ದಾಖಲಿಸುತ್ತಿದಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾಂಗ್ರೆಸ್ ವಿರುದ್ಧ ಹವಾಲ ಹಣ ದಂಧೆ ಆರೋಪ ಮಾಡಿದೆ.
ದೆಹಲಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದ್ದು, ಎಐಸಿಸಿ ಹೈಕಮಾಂಡ್‍ಗೆ ಹವಾಲ ಮೂಲಕ ಸಂಗ್ರಹಣೆ ಮಾಡಿದ್ದ 600 ಕೋಟಿ ರೂ. ರವಾನೆ ಮಾಡಲಾಗಿದೆ. ಭ್ರಷ್ಟಾಚಾರ ಹಾಗೂ ಹವಾಲ ಹಣ ಕಾಂಗ್ರೆಸ್ ಪಕ್ಷಕ್ಕೆ ಆಧಾರವಾಗಿದೆ ಎಂದು ಆರೋಪ ಮಾಡಿದ್ದಾರೆ.
We have statements of DK Shivakumar's driver, who told the IT department, about how money in kgs were sent to AICC. We now know, why Congress party was crying during demonetisation : Dr. @sambitswarajpic.twitter.com/BUtcOqlaBk
ಇದೇ ವೇಳೆ ದೆಹಲಿ ಅಪಾರ್ಟ್‍ಮೆಂಟ್‍ನಿಂದ 8 ಕೋಟಿ ರೂ. ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎಫ್‍ಐಆರ್ ದಾಖಲಿಸಿದ್ದನ್ನು ಪ್ರಸ್ತಾಪಿಸಿದ ಅವರು, ಕೆಜಿ ಲೆಕ್ಕದಲ್ಲಿ ಕಾಂಗ್ರೆಸ್ ಹೈಕಮಾಂಡ್‍ಗೆ ಹಣ ರವಾನೆ ಮಾಡಲಾಗಿದೆ ಎಂದು ಆರೋಪಿಸಿದರು.
ಮೂಲಗಳ ಮಾಹಿತಿ ಅನ್ವಯ ಹವಾಲ ಹಣವನ್ನು ಮೊದಲು ದೆಹಲಿಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ ಮಂತ್ರಿಗಳಿಗೆ ನೀಡಲಾಗಿದೆ. ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಚಾಲಕ ಐಟಿ ಇಲಾಖೆ ಎದುರು ಎಐಸಿಸಿಗೆ ಕೆಜಿ ಲೆಕ್ಕದಲ್ಲಿ ಹಣ ನೀಡಿರುವ ಕುರಿತು ಹೇಳಿಕೆ ನೀಡಿದ್ದಾರೆ. ನೋಟು ನಿಷೇಧದ ವೇಳೆ ಕಾಂಗ್ರೆಸ್ ಏಕೆ ಭಾರೀ ಪ್ರತಿಭಟನೆ ಮಾಡಿತ್ತು ಎನ್ನುವುದು ಈಗ ತಿಳಿಯುತ್ತಿದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರು: ಕಳ್ಳನ ಥರ ಓಡಿಹೋಗಲ್ಲ. ನಾನು ಏನೂ ಮಾಡಿಲ್ಲ. ನನ್ನ ಮನೆಯಲ್ಲಿ ಸಿಕ್ಕ ದುಡ್ಡಿಗೆ ಲೆಕ್ಕ ಕೊಟ್ಟಿದ್ದೇನೆ. ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕ ದುಡ್ಡಿಗೆ ಅವರು ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದಿಂದ ಬಂಧನದ ಭೀತಿಯಲ್ಲಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಬೆಳಗ್ಗೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಅಕ್ರಮ ಹಣ ವರ್ಗಾವಣೆ ಮಾಡಿಲ್ಲ. ನನಗೆ ಯಾವುದೇ ಇಲಾಖೆಯಿಂದ ನೋಟಿಸ್ ಬಂದಿಲ್ಲ. ವಿದೇಶಕ್ಕೂ ಯಾವುದೇ ಹಣ ವರ್ಗಾವಣೆ ಮಾಡಿಲ್ಲ. ವಿದೇಶದಲ್ಲಿ ಯಾವುದೇ ಆಸ್ತಿಯೂ ಇಲ್ಲ. ಅಲ್ಲಿಂದ ನನಗೆ ಯಾವುದೇ ಹಣವೂ ಬಂದಿಲ್ಲ. ನನಗೆ ದೆಹಲಿಯಲ್ಲಿ 2 ನಿವಾಸ ಇರುವುದು ನಿಜ. ಅಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ. ನನ್ನ ಸ್ನೇಹಿತರ ಮನೆಯಲ್ಲಿ ಸಿಕ್ಕ ದುಡ್ಡಿಗೆ ಅವರು ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಇನ್ನು ಈ ಕುರಿತು ಯಾವುದೇ ನೋಟಿಸ್ ಬಂದರು ಕಾನೂನು ಮೂಲಕ ಎದುರಿಸುತ್ತೇನೆ. ಹೈಕಮಾಂಡ್‍ಗೂ ಈ ಕುರಿತು ಸ್ಪಷ್ಟಮನವರಿಕೆಯಾಗಿದೆ. ಪಕ್ಷ ನೀಡುವ ಜವಾಬ್ದಾರಿಯನ್ನು ಈಗಲು ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಹಣ್ಣು ಕೆಂಪಗೆ ಇದ್ದರೆ ಜನ ಮರಕ್ಕೆ ಕಲ್ಲು ಹೊಡೆಯೋದು ಸಹಜ. ಚೆನ್ನಾಗಿದ್ದವರು ಬೀದಿಯಲ್ಲಿ ಹೋಗುತ್ತಿದ್ದಾರೆ ಜನ ನೋಡುತ್ತಾರೆ. ನಮ್ಮನ್ನೆಲ್ಲಾ ನೋಡೋಕೆ ದೇವರೊಬ್ಬ ಇದ್ದಾನೆ. 40 ವರ್ಷಗಳ ಜೀವನದಲ್ಲಿ ಸಾಕಷ್ಟು ಪೆಟ್ಟು ತಿಂದಿದ್ದೇನೆ. ಕಲ್ಲು ಪೆಟ್ಟು ತಿಂದರೆ ಮಾತ್ರ ವಿಗ್ರಹವಾಗಲು ಸಾಧ್ಯ. ನಾನು ಹೆದರುವ ಮಾತೇ ಇಲ್ಲ. ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ, 29 ವಯಸ್ಸಿಗೆ ಬೆಂಗಳೂರಿಗೆ ರಾಜಕೀಯ ಮಾಡಲು ಆಗಮಿಸಿದ್ದಾಗಿ ಗುಡುಗಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ ಎಂಬ ಸಹೋದರ ಡಿಕೆ ಸುರೇಶ್ ಆರೋಪವನ್ನು ಸಮರ್ಥಿಸಿಕೊಂಡರು. ಪುಟ್ಟಸ್ವಾಮಿ ಗೌಡರ ಲೆಟರ್‍ಗೆ ಯಡಿಯೂರಪ್ಪ ಕವರ್ ಹಾಕಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡಿದ್ದಾರೆ, ಇನ್ನು ಒಡ್ಡುತ್ತಿದ್ದಾರೆ. ಆದರೆ 104 ಸಂಖ್ಯೆಗೂ 118ಕ್ಕೂ ತುಂಬಾ ವ್ಯತ್ಯಾಸ ಇದೆ ಎಂದು ಹೇಳಿದರು.
ಉಡುಪಿ: ಸಚಿವ ಡಿಕೆಶಿ ಆಟ ಇನ್ನು ಹೆಚ್ಚು ದಿನ ನಡೆಯಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ಪೂಜಾರಿ, ಇಡಿ ನೋಟಿಸ್ ಬರುತ್ತದೆ ಎಂಬ ಆತಂಕ ಡಿಕೆ ಶಿವಕುಮಾರ್ ಅವರಿಗಿದೆ. ಅಪಾರ ಅಕ್ರಮ ಸಂಪತ್ತು ಹೊಂದಿರುವ ಕಾರಣ ಅವರ ಮೇಲೆ ಕಾನೂನು ಕ್ರಮ ಜಾರಿಯಾಗಿದೆ. ಆದರೆ ಡಿಕೆ ಬ್ರದರ್ಸ್ ಇನ್ನೂ ಅಧಿಕಾರ ನಡೆಸುವ ಭ್ರಮೆಯಲ್ಲಿದ್ದಾರೆ. ನಮ್ಮ ಬಳಿ ಯಾವುದೇ ಅಕ್ರಮ ಸಂಪತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಹಣ ಬಲದಿಂದಲೇ ಅಧಿಕಾರ ನಡೆಸುವ ಭ್ರಮೆ ಅವರಲ್ಲಿದೆ. ಒಂದೊಮ್ಮೆ ಅವರು ಅಕ್ರಮ ಸಂಪತ್ತು ಹೊಂದಿಲ್ಲ ಎನ್ನುವುದಾದರೆ ಕಾನೂನು ಕ್ರಮ ಎದುರಿಸಬೇಕು. ತಪ್ಪು ಮಾಡದಿದ್ದರೆ ಹೆದರುವ ಅವತ್ಯವಿಲ್ಲ ಎಂದು ಹೇಳಿದರು. ಇದನ್ನು ಓದಿ: ಬಿಜೆಪಿ ಅವರೆಲ್ಲ ನನ್ನ ಗೆಳೆಯರು – ಡಿಕೆಶಿ
ಸಚಿವ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಸಂಪತ್ತು ಗಳಿಸಿದ ಆರೋಪ ಮೇಲೆ ಆದಾಯ ತೆರಿಗೆ (ಐಟಿ), ಕಂದಾಯ ಇಲಾಖೆ (ಇಡಿ) ಅಧಿಕಾರಿಗಳು ದಾಳಿ ನಡೆಸಿದೆ. ಡಿಕೆ ಶಿವಕುಮಾರ್ ಅವರ ಮೇಲೆ ಆರೋಪಗಳು ಕೇಳಿ ಬಂದಿದ್ದರೂ ಕಾಂಗ್ರೆಸ್ ಹಾಗೂ ಸಿಎಂ ಕುಮಾರಸ್ವಾಮಿ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ ಎಂಬುವುದನ್ನ ಸಾಬೀತುಪಡಿಸಲು ಕೂಡಲೇ ಡಿಕೆಶಿಯನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಇದನ್ನು ಓದಿ:ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್
ಮೈಸೂರು: ರಾಜ್ಯದ ಜ್ಯಾತ್ಯಾತೀತ ಸರ್ಕಾರವನ್ನು ರಚನೆ ಮಾಡಲು ಎರಡು ಪಕ್ಷಗಳು ಒಂದಾಗಿದ್ದು, ಉತ್ತಮ ಆಡಳಿತ ನೀಡಲು ಮುಂದಾಗಿದ್ದು, ಇದಕ್ಕೆ ವರುಣ ದೇವರು ಕರುಣೆ ತೋರಿದ್ದು ಉತ್ತಮ ಮಳೆಯಾಗಿ ರಾಜ್ಯ ಸಂವೃದ್ಧಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚಾಮುಂಡಿ ದೇವಿಯ ದರ್ಶನದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಎರಡು ಜಲಾಶಯ ಭರ್ತಿಯಿಂದ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ತಮಿಳುನಾಡಿಗೆ ಈ ಬಾರಿ ನಾವು ನೀಡಬೇಕಿರುವ ನೀರಿನ ಪಾಲು ನೀಡಿದ್ದೇವೆ. ಜಲಾಶಯದಿಂದ ವಿದ್ಯುತ್ ಉತ್ಪಾದನೆಯೂ ಹೆಚ್ಚಿದೆ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ. ನಾವು ಶುದ್ಧ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ರಾಜ್ಯ ಸಮೃದ್ಧಿಯಾಗಿದೆ ಎಂದರು.
ಇದೇ ವೇಳೆ ಇಂದು ತಾವು ಎರಡನೇ ಬಾರಿಗೆ ಅಯ್ಯಪ್ಪ ಮಾಲೆ ಹಾಕುತ್ತಿರುವುದಾಗಿ ತಿಳಿಸಿದ ಸಚಿವರು, ಈ ಹಿಂದೆ ಮಾಲೆ ಹಾಕುವ ಹರಕೆ ಕಟ್ಟಿಕೊಂಡಿದ್ದೆ. ಅದರಂತೆ ಇವತ್ತು ಸಂಜೆ ಅಯ್ಯಪ್ಪ ಮಾಲೆ ಹಾಕುತ್ತೇನೆ ಎಂದರು.
ಸಿಎಂ ಎಚ್‍ಡಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿಂದತೆ ಸಚಿವರಾದ ಸಾರಾ ಮಹೇಶ್, ಜಿಡಿ ದೇವೇಗೌಡ ಅವರು ಸಾಥ್ ನೀಡಿದ್ದರು. ಚಾಮುಂಡೇಶ್ವರಿಯ ದರ್ಶನದ ಬಳಿಕ ಕಬಿನಿ ಜಲಾಶಯ ಭರ್ತಿಯಾಗಿರುವ ಕಾರಣ ಬಾಗಿನ ಆರ್ಪಿಸಲು ತೆರಳಿದರು.
ಬೆಂಗಳೂರು: ದೋಸ್ತಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಡಿಸಿಎಂ ಪರಮೇಶ್ವರ್ ಟಾಂಗ್ ಕೊಟ್ಟ ಬೆನ್ನಲ್ಲೇ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸರ್ಕಾರದ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಿಲ್ಲ. ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಸಿದ್ದರಾಮಯ್ಯ ಹೇಳಿಕೆ ಅಧಿಕೃತವೂ ಅಲ್ಲ. ಅವರ ಹೇಳಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ. ಈ ಸರ್ಕಾರ ಐದು ವರ್ಷ ಇದ್ದೇ ಇರುತ್ತೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಹಿ ಮಾಡಿ ದಾಖಲೆ ಮಾಡಿದ್ದೇವೆ. ಅದ್ದರಿಂದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗಿದೆ. ಪಕ್ಷ ವಿರೋಧಿ ಹೇಳಿಕೆಗಳನ್ನ ಯಾರೇ ನೀಡಬಾರದು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಲೋಕಾಭಿರಾಮವಾಗಿ ಹೇಳಿದ ಮಾತನ್ನು ಕಿಡಿಗೇಡಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಜತೆ ಕಾಂಗ್ರೆಸ್ ನಾಯಕರು ಅಶೋಕ ಹೊಟೇಲ್ ನಲ್ಲಿ ಮಾಡಿಕೊಂಡ ಒಪ್ಪಂದವೇ ಅಧಿಕೃತ. ಯಾರೂ ಕೂಡ ಪಕ್ಷದ ಬಗ್ಗೆಯಾಗಲಿ ಮೈತ್ರಿಯ ಬಗ್ಗೆಯಾಗಲಿ ಹೇಳಿಕೆ ನೀಡುವಂತಿಲ್ಲ. ಈ ಕುರಿತು ಯಾವುದೇ ಗೊಂದಲ ಸೃಷ್ಠಿ ಮಾಡಬೇಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಮೈತ್ರಿ ಬೆಂಗಳೂರಿಗೆ ಸೀಮಿತ ಮಂಡ್ಯಕ್ಕಲ್ಲ ಎಂದು ಹೇಳಿಕೆ ನೀಡಿದ್ದೂ ಸರಿಯಲ್ಲ. ಚುನಾವಣಾ ಹೊಂದಾಣಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ ಎಂದರು.
ಅಧಿವೇಶನಕ್ಕೆ ಗೈರು ಅಪಾರ್ಥ ಬೇಡ: ಜುಲೈ 5 ರಂದು ನೊಣವಿನಕೆರೆ ಗುರುಗಳ ಆಶ್ರಮದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಚುನಾವಣೆಗೆ ಮುನ್ನವೇ ಕಾರ್ಯಕ್ರಮ ನಿಗದಿಯಾಗಿತ್ತು. ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ಅಂದು ಬಜೆಟ್ ಮಂಡನೆ ಇದ್ದರೂ ಒಂದು ದಿನದ ಮಟ್ಟಿಗೆ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ರಾಜ್ಯಪಾಲರ ಜತೆಗೆ ಅಥವಾ ಹೆಲಿಕ್ಯಾಪ್ಟರ್ ನಲ್ಲಿ ಬಂದು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದರು.
ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಸಚಿವ ಡಿಕೆಶಿ ಅವರ ಆರಾಧ್ಯ ದೈವವಾಗಿದೆ. ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವ ಮೊದಲು ಅವರು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಾರೆ.