Tag: ಸಚಿವ ಡಿಕೆ ಶಿವಕುಮಾರ್

  • Exclusive: ಲೋಕಸಭಾ ಚುನಾವಣೆಗೂ ಮುನ್ನ ಡಿಕೆಶಿ ಬಂಧನ ಆಗುತ್ತಾ?

    Exclusive: ಲೋಕಸಭಾ ಚುನಾವಣೆಗೂ ಮುನ್ನ ಡಿಕೆಶಿ ಬಂಧನ ಆಗುತ್ತಾ?

    ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಜಲ ಸಂಪನ್ಮೂಲ ಸಚಿವ, ಕನಕಪುರದ ಬಂಡೆ, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅರೆಸ್ಟ್ ಆಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಹೌದು. ಡಿ.ಕೆ. ಶಿವಕುಮಾರ್ ಬರೋಬ್ಬರಿ 110 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿರುವ ಆದಾಯ ತೆರಿಗೆ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಲಭ್ಯವಾದ ಆಸ್ತಿಗಿಂತಲೂ ಹೆಚ್ಚಿನ ಆಸ್ತಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ. 

    ಬೆನ್ನು ಬಿಡದ ಬೇತಾಳನಂತೆ ಕಳೆದ ಸೆಪ್ಟೆಂಬರ್ ನಿಂದ ಮೊನ್ನೆವರೆಗೆ ತಾಯಿ ಗೌರಮ್ಮ, ಸಹೋದರ ಸುರೇಶ್ ಜೊತೆ ಡಿಕೆಶಿ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಅಧಿಕಾರಿಗಳು ಡ್ರಿಲ್ ಮಾಡಿದ್ದರು. ಈ ಹಿಂದೆ ಡಿಕೆಶಿ ಹೇಳಿದ ಉತ್ತರಕ್ಕೂ ತಾಯಿ ನೀಡಿದ ಉತ್ತರಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆಯಂತೆ.

    ಈ ಕುರಿತು ಐಟಿ ಅಧಿಕಾರಿಗಳು ದೆಹಲಿಯ ಪ್ರಧಾನ ಕಚೇರಿಗೆ ಮತ್ತು ಬೇನಾಮಿ ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕ್ಷಣದಲ್ಲಾದರೂ ಡಿಕೆಶಿ ಅವರ ಸುಮಾರು 110 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

    ಪಿತ್ರಾರ್ಜಿತ ಆಸ್ತಿ ಎಷ್ಟಿದೆ? ಇದರಿಂದ ಎಷ್ಟೆಲ್ಲಾ ಸಂಪಾದನೆ ಆಗಿದೆ ಹೀಗೆ ವಿವಿಧ ಆದಾಯದ ಮೂಲಗಳ ಬಗ್ಗೆ ಗೌರಮ್ಮ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಿದ್ದರು. ಕೆಲವೊಂದು ಆದಾಯ ಕೃಷಿಯಿಂದ ಬಂದಿದೆ ಅಂತ ಡಿಕೆಶಿ ಹೇಳಿದ್ದರು. ಆದರೆ ತಾಯಿ ಕೃಷಿ ಆದಾಯದ ಮೂಲದ ಹೇಳಿದ ಮಾಹಿತಿಗೆ ಡಿಕೆಶಿ ಹೇಳಿಕೆಯಲ್ಲಿ ಸಾಕಷ್ಟು ವ್ಯತ್ಯಾಸ ಇರುವ ವಿಚಾರ ಐಟಿ ಮೂಲಗಳಿಂದ ತಿಳಿದು ಬಂದಿದೆ.

    ದೆಹಲಿಯ ಮನೆಯಲ್ಲಿನ ದುಡ್ಡು, ಈಗಲ್ಟನ್ ರೆಸಾರ್ಟ್ ನಲ್ಲಿ ಸಾಕ್ಷಿನಾಶ ಆರೋಪದ ಮೇಲೆ ಡಿಕೆ ಶಿವಕುಮಾರ್ ಅವರಿಗೆ ಈ ಹಿಂದೆ 108 ಪ್ರಶ್ನೆಗಳನ್ನು ಕೇಳಿ ಐಟಿ ಮಾಹಿತಿ ಕಲೆಹಾಕಿತ್ತು. ಇದೆಲ್ಲ ಮಾಹಿತಿ ಸಂಗ್ರಹಿಸಿರುವ ಆದಾಯ ತೆರಿಗೆ ಇಲಾಖೆ ಇದೀಗ ಶೀಘ್ರವೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆಯಿದೆ.

    ಬೇನಾಮಿ ಆಸ್ತಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಪ್ರಕರಣದ ಆರೋಪ ಸಾಬೀತಾದರೆ ಬೇನಾಮಿ ಆಸ್ತಿ ತಿದ್ದುಪಡಿ ಕಾಯ್ದೆ 53(2) ನ ಅನ್ವಯ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಅಲ್ಲದೇ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟು ದಂಡ ಕೂಡ ವಿಧಿಸುವ ಆಗುವ ಸಾಧ್ಯತೆ ಇದೆ. ಒಂದು ವೇಳೆ 7 ವರ್ಷ ಶಿಕ್ಷೆಯಾದಲ್ಲಿ ಡಿಕೆಶಿ ರಾಜಕೀಯ ಜೀವನ ಅಂತ್ಯವಾಗುವ ಸಾಧ್ಯತೆಯೇ ಹೆಚ್ಚು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾನೂನಿಗೆ ಗೌರವ ಕೊಟ್ಟು ಹೋಗಿದ್ವಿ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿ: ಡಿಕೆಶಿ

    ಕಾನೂನಿಗೆ ಗೌರವ ಕೊಟ್ಟು ಹೋಗಿದ್ವಿ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿ: ಡಿಕೆಶಿ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಗಳು ನೀಡಿದ ನೋಟಿಸ್‍ಗೆ ಉತ್ತರವಾಗಿ ಕಾನೂನಿಗೆ ಗೌರವ ಕೊಟ್ಟು ನಾನು, ನನ್ನ ತಾಯಿ ಐಟಿ ಕಚೇರಿಗೆ ಹೋಗಿದ್ದೇವು ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಈ ಕುರಿತು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿಯಾಗಿದ್ದು, ಮಾಧ್ಯಮಗಳಿಗೆ ಗೌರವ ಕೊಡಬೇಕಿದೆ. ನಮ್ಮ ತಾಯಿ ಅವರ ಬಳಿ ಐಟಿ ಅಧಿಕಾರಿಗಳು ಹೇಳಿಕೆ ಪಡೆದುಕೊಳ್ಳಲು ಊರಿಗೆ ಹೋಗಿದ್ದರು. ಆದರೆ ಅಂದು ನನ್ನ ತಾಯಿ ಊರಲ್ಲಿ ಇರಲಿಲ್ಲ. ಪರಿಣಾಮ ನೋಟಿಸ್ ಕೊಟ್ಟಿದ್ದರು. ಆದ್ದರಿಂದ ನಾನು ಮತ್ತು ನನ್ನ ತಾಯಿ ಕಾನೂನಿಗೆ ಗೌರವ ಕೊಟ್ಟು ಐಟಿ ಕಚೇರಿಗೆ ಹೋಗಿದ್ದೇವು ಎಂದು ತಿಳಿಸಿದರು.

    ವಿಚಾರಣೆಗೆ ನಡೆಸುವ ವೇಳೆ ನನಗೆ ಹೋಗಲು ಅವಕಾಶ ಇರಲಿಲ್ಲ. ಆದರೆ ನಮ್ಮ ತಾಯಿಗೆ 80 ವರ್ಷ ವಯಸ್ಸು ಆಗಿರುವ ಕಾರಣ, ತಾಯಿಗೆ ಸಹಕರಿಸಲು ಅಧಿಕಾರಿಗಳು ಅವಕಾಶ ಕೊಟ್ಟಿದ್ದರು. ಆದರೆ ನಾನು ತಪ್ಪು ಮಾಡಿಲ್ಲ, ಕಾನೂನಿನ ಪ್ರಕಾರವೇ ಎಲ್ಲವನ್ನು ಮಾಡಿದ್ದೇನೆ. ಇಂದು ನಡೆದ ವಿಚಾರಣೆ ವೇಳೆಯೂ ನನ್ನ ತಾಯಿಗೆ ತಿಳಿದಿದ್ದಷ್ಟು ಹೇಳಿದ್ದಾರೆ. ಅವರಿಗೆ ಅಧಿಕಾರಿಗಳು ಕೂಡ ಗೌರವ ಕೊಟ್ಟಿದ್ದಾರೆ. ಕಾನೂನಿನಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಆದರೆ 80 ವರ್ಷದ ತಾಯಿಯನ್ನ 6 ಗಂಟೆಗಳ ಕಾಲ ಕೂರಿಸಿಕೊಂಡಿದ್ದರು ಎಂಬುದು ನನಗೆ ನೋವು ತಂದಿದೆ. ಆದರೆ ನಾನು ಹೋರಾಟ ಮಾಡುತ್ತೇನೆ, ಎಲ್ಲದಕ್ಕೂ ಉತ್ತರ ನೀಡಬಲ್ಲೆ. ನನ್ನನ್ನು ವಿಚಾರಣೆಗೆ ಕರೆಯುವ ಸಂದರ್ಭಗಳು ಬರುತ್ತವೆ ಎಂದು ತಿಳಿಸಿದರು.

    ಈ ಹಿಂದೆಯೇ ನನಗೆ ಹಲವು ನೋಟಿಸ್ ಬಂದಿದೆ. ಆ ಬಗ್ಗೆ ಮಾಹಿತಿ ನೀಡಲು ಸದ್ಯ ಸಾಧ್ಯವಿಲ್ಲ. ಆದರೆ ನನ್ನನ್ನು ಇಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಪರಿಣಾಮ ನಾನು ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಈ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾದ ವೇಳೆಯೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ಈಗ ಹೆಚ್ಚೇನು ಮಾತನಾಡಲ್ಲ ಎಂದರು.

    ಇದೇ ವೇಳೆ ಸಿನಿಮಾ ನಟರ ಮೇಲೆ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿನಿಮಾ ನಟರ ಪಕ್ಕದ ಮನೆಯ ನಿವಾಸಿ. ಬೆಳಗಾದರೆ ಒಬ್ಬರ ಮುಖ ಒಬ್ಬರು ನೋಡಬೇಕು. ಆದ್ದರಿಂದಲೇ ನಾನು ನಿನ್ನೆ ಅಲ್ಲಿ ನಿಂತು ಮಾತನಾಡಿಸಿದ್ದೆ. ಆದರೆ ಅಲ್ಲಿ ತನಿಖೆ ಪೂರ್ಣಗೊಳಿಸಿರಲಿಲ್ಲ. ವಿಷಯ ತಿಳಿಯುತ್ತಿದಂತೆ ವಾಪಸ್ ಮನೆಗೆ ಬಂದೆ ಅಷ್ಟೇ. ಕಾನೂನಿನಲ್ಲಿ ಇರುವಂತೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಡಿಕೆ ಶಿವಕುಮಾರ್ ತಾಯಿಗೆ ಐಟಿ ನೋಟಿಸ್ – ವಿಚಾರಣೆಗೆ ಆಗಮಿಸಿದ ಡಿಕೆಶಿ

    ಸಚಿವ ಡಿಕೆ ಶಿವಕುಮಾರ್ ತಾಯಿಗೆ ಐಟಿ ನೋಟಿಸ್ – ವಿಚಾರಣೆಗೆ ಆಗಮಿಸಿದ ಡಿಕೆಶಿ

    ಬೆಂಗಳೂರು/ರಾಮನಗರ: ಸಚಿವ ಡಿ.ಕೆ ಶಿವಕುಮಾರ್ ಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ಡಿಕೆಶಿ ಅವರ ತಾಯಿ ಗೌರಮ್ಮ ರವರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆಶಿ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿಕೆ ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಮನೆಯ ಬಾಗಿಲ ಮೇಲೆ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿರುವ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ತಾಯಿ ಗೌರಮ್ಮ ರವರು ಬೆಂಗಳೂರಿಗೆ ತೆರಳಿದ್ದು ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಸಚಿವರ ಆಪ್ತ ವಲಯದಿಂದ ಮಾಹಿತಿ ತಿಳಿದು ಬಂದಿದೆ.

    ಮೊದಲಿಗೆ ಐಟಿ ಅಧಿಕಾರಿಗಳು ಕನಕಪುರದಲ್ಲಿನ ಮನೆಗೆ ಭೇಟಿ ನೀಡಿ ನಂತರ ಕೋಡಿಹಳ್ಳಿಯ ಮನೆ ಹಾಗೂ ದೊಡ್ಡ ಆಲಹಳ್ಳಿಯ ಮನೆಗೆ ತೆರಳಿದ್ದಾರೆ. ಆದರೆ ಎಲ್ಲೂ ಕೂಡಾ ಡಿಕೆಶಿ ತಾಯಿ ಗೌರಮ್ಮನವರು ಸಿಗದ ಹಿನ್ನೆಲೆಯಲ್ಲಿ ನೋಟಿಸನ್ನು ಬಾಗಿಲಿಗೆ ಅಂಟಿಸಿ ಹೋಗಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

    ಸದ್ಯ ವಿಚಾರಣೆಗೆ ಐಟಿ ಪ್ರಧಾನ ಕಚೇರಿಗೆ ಹಾಜರಾಗಿರುವ ಸಚಿವ ಡಿ.ಕೆ ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು ಮಧ್ಯಾಹ್ನ ಊಟಕ್ಕೆ ಬಿಡದೆ ಮಾಹಿತಿ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಐಟಿ ಕಚೇರಿಗೆ ತೆರಳುವ ಮುನ್ನವೇ ಡಿಕೆ ಶಿವಕುಮಾರ್ ಅವರು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರು. ಇತ್ತ ಐಟಿ ಕಚೇರಿಗೆ ಡಿಕೆಶಿ ಆಪ್ತ, ಉದ್ಯಮಿ ಸಚಿನ್ ನಾರಾಯಣ್ ಕೂಡ ಆಗಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಿಚಯಸ್ಥರೆಲ್ಲಾ ಬೆಂಬಲಿಗರಾಗಲು ಸಾಧ್ಯವಿಲ್ಲ: ಎಸ್‍ಎಂ ಕೃಷ್ಣ

    ಪರಿಚಯಸ್ಥರೆಲ್ಲಾ ಬೆಂಬಲಿಗರಾಗಲು ಸಾಧ್ಯವಿಲ್ಲ: ಎಸ್‍ಎಂ ಕೃಷ್ಣ

    ಬೆಂಗಳೂರು: ನಾನು ರಾಜಕೀಯ ಕ್ಷೇತ್ರದಲ್ಲಿ ಹತ್ತಾರು ವರ್ಷಗಳ ಕಾಲ ಇದ್ದಿದ್ದರಿಂದ ಹಲವರು ಪರಿಚಯ ಇದ್ದಾರೆ. ಆದರೆ ಪರಿಚಯಸ್ಥರೆಲ್ಲಾ ನನ್ನ ಬೆಂಬಲಿಗರು ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಹೇಳಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಎಸ್ ಯಡಿಯೂರಪ್ಪರನ್ನು ತಮ್ಮ ಮನೆಯಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಎಸ್.ಎಂ.ಕೃಷ್ಣ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಬೆಂಬಲಿಗರು ಎಂದು ಯಾರು ಇಲ್ಲ. ಎಲ್ಲಾ ಕಡೆ ನನಗೆ ಬಹಳ ಜನ ಪರಿಚಯಿಸ್ಥರು ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಪರಿಚಯಸ್ಥರು ಕೇವಲ ವಿಶ್ವಾಸಕ್ಕೆ ಮಾತ್ರ ಸಿಮೀತರಾಗಿದ್ದು, ಪರಿಚಯಸ್ಥರೆಲ್ಲರೂ ಬೆಂಬಲಿಗರಾಗಲೂ ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ಅವರು ಕೂಡ ಹೊಸ ವರ್ಷದ ಶುಭಾಶಯ ತಿಳಿಸಲು ಆಗಮಿಸಿದ್ದರು ಅಷ್ಟೇ ಎಂದು ತಿಳಿಸಿದರು.

    ಹೊಸ ವರ್ಷ ಎಲ್ಲರಿಗೂ ಒಳ್ಳೆಯದು ಮಾಡಲಿ. ಹೊಸ ವರ್ಷದ ಶುಭಾಶಯ ತಿಳಿಸಲು ಬಿಎಸ್‍ವೈ ಅವರಿಗೆ ಫೋನ್ ಮಾಡಿದ್ದೆ. ಆದರೆ ಅವರು ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಬಂದರು.  ಮುಂದಿನ ಲೋಕಸಭಾ ಚುನಾವಣೆ, ಪಕ್ಷದ ಕಾರ್ಯದ ಬಗ್ಗೆ ಇಂದು ಚರ್ಚೆ ನಡೆಸಲಾಯಿತು. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮಾತ್ರ ಭಾಗವಹಿಸುತ್ತೇನೆ. ದೆಹಲಿ ಸೇರಿದಂತೆ ಹಲವು ಕಡೆ ಭಾಗವಹಿಸುವ ಚಿಂತನೆ ಮಾಡಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪುತ್ರಿ ಶಾಂಭವಿ ಹೆಸರು ಮುನ್ನೆಲೆ ಬಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶಾಂಭವಿ ಹೆಸರನ್ನ ನಿಮ್ಮ ಬಾಯಿಂದಲೇ ಕೇಳುತ್ತಿರುವುದು, ಆ ರೀತಿ ಇಲ್ಲ ಎಂದು ನಗೆ ಬೀರಿದರು.

    ಇದೇ ವೇಳೆ ಸಾಲಮನ್ನಾ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಲಮನ್ನಾ ಮಾಡುವ ಪ್ರಕ್ರಿಯೆ ವೈಜ್ಞಾನಿಕವಾಗಿರಬೇಕು. ಸಹಕಾರಿ ಕ್ಷೇತ್ರದ ಲೋನ್ ರಿನಿವೇಬಲ್ ಲೋನ್ಸ್, ಬುಕ್ ಆಡ್ಜಸ್ಟ್ ಮೆಂಟ್ ರೀತಿಯ ಸಾಲಮನ್ನಾ ಆದರೆ ರೈತರಿಗೆ ಅನುಕೂಲ ಆಗಲ್ಲ. ಆದ್ದರಿಂದ ರೈತರ ಸಾಲಮನ್ನಾ ವೈಜ್ಞಾನಿಕ ಚೌಕಟ್ಟಿನಲ್ಲಿ ಮಾತ್ರ ಮಾಡಬೇಕು. ಸಾಲಮನ್ನಾ ಮಾಡುವ ಮುನ್ನ ಬ್ಯಾಂಕುಗಳ ಜೊತೆ ಒಪ್ಪಂದ ಮಾಡಿಕೊಂಡು ಮುಂದುವರಿದರೆ ಮಾತ್ರ ರೈತರಿಗೆ ಅನುಕೂಲ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಎಸ್‍ಎಂ ಕೃಷ್ಣ ಅವರ ಭೇಟಿ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಕೃಷ್ಣ ಅವರನ್ನು ಭೇಟಿ ಮಾಡಿ ಬಹಳ ಸಮಯವಾಗಿತ್ತು. ಸದ್ಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಸುವ ಯೋಜನೆ ಇದ್ದು, ಅವರ ಸಹಕಾರ ಪಡೆಯುವ ಬಗ್ಗೆ ಭೇಟಿ ನೀಡಿದ್ದೆ. ಚುನಾವಣೆಯ ಹಿನ್ನೆಲೆಯಲ್ಲಿ ಕೃಷ್ಣ ಅವರ ಬೆಂಬಲ ನಮಗೆ ಪ್ರಮುಖವಾಗಿದ್ದು, ಹಲವು ಕ್ಷೇತ್ರಗಳಲ್ಲಿ ಪ್ರಚಾರ ಸೇರಿದಂತೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.

    ಇತ್ತ ಬಿಎಸ್ ಯಡಿಯೂರಪ್ಪ ಅವರ ಭೇಟಿಗೂ ಮುನ್ನ ಜೆಡಿಎಸ್ ಶಾಸಕ ಮಂಜುನಾಥ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಮಂಜುನಾಥ್ ಅವರು ಸಾಹೇಬ್ರಿಗೆ ಶುಭಾಶಯ ತಿಳಿಸಲು ಬಂದಿದ್ದೆ. ಅಷ್ಟೇ ಎಂದು ತಿಳಿಸಿದರು. ಬಿಎಸ್‍ವೈ ಭೇಟಿಗೂ ಮುನ್ನವೇ ಜೆಡಿಎಸ್ ಶಾಸಕರು ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್‍ನಲ್ಲಿ ನಂಬಿಕೆ ಇದ್ರೆ ಪಕ್ಷಕ್ಕೆ ಬನ್ನಿ – ಬಿಜೆಪಿ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದ ಡಿಕೆಶಿ

    ಕಾಂಗ್ರೆಸ್‍ನಲ್ಲಿ ನಂಬಿಕೆ ಇದ್ರೆ ಪಕ್ಷಕ್ಕೆ ಬನ್ನಿ – ಬಿಜೆಪಿ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದ ಡಿಕೆಶಿ

    ರಾಮನಗರ: ಕಾಂಗ್ರೆಸ್ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇರುವವರು ಪಕ್ಷಕ್ಕೆ ಬನ್ನಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಚಿವ ಡಿಕೆ ಶಿವಕುಮಾರ್ ಬಹಿರಂಗ ಆಹ್ವಾನ ನೀಡಿದ್ದಾರೆ. ಈ ಮೂಲಕ ಚನ್ನಪಟ್ಟಣ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ಪರೋಕ್ಷವಾಗಿ ಚಮಕ್ ಕೊಟ್ಟಿದ್ದಾರೆ.

    ಸಚಿವ ಡಿ.ಕೆ ಶಿವಕುಮಾರ್ ತಮ್ಮ ಅಧಿಕೃತ ಲೆಟರ್ ಹೆಡ್‍ನ ಮೂಲಕ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ. ಹೊಸ ವರ್ಷದ ಆರಂಭ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

    ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಲ್ಲಿ ನಂಬಿಕೆ ಇರುವ ಚನ್ನಪಟ್ಟಣದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ತಾಲೂಕಿನ ಕೆಲ ಬಿಜೆಪಿ ಮುಖಂಡರ ಸ್ವಾರ್ಥದಿಂದ ಬೇಸತ್ತಿರುವುದಾಗಿ ಅನೇಕ ಮುಖಂಡರು, ಕಾರ್ಯಕರ್ತರು ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

    ತಮ್ಮಲ್ಲಿ ಯಾವುದೇ ಸರ್ವಾಧಿಕಾರಿ ಧೋರಣೆ ಇರುವುದಿಲ್ಲ. ಸಮಬಾಳು, ಸಮಪಾಲಿನ ಅಡಿಯಲ್ಲಿ ನಡೆದುಕೊಳ್ಳಲಾಗುತ್ತೆ. ಯಾವಾಗಲು ಪಕ್ಷದ ಬಾಗಿಲು ತೆರೆದಿದ್ದು ಮುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಸಚಿವ ಡಿಕೆ ಶಿವಕುಮಾರ್ ಆಹ್ವಾನ ನೀಡಿರುವುದಾಗಿ ಸ್ಥಳೀಯ ಮುಖಂಡರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • EXCLUSIVE: ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯಗಳು ಮಂತ್ರಿ ಕನಸು ಕಂಡವರಿಗೆ ಉರುಳಾಯ್ತು!

    EXCLUSIVE: ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯಗಳು ಮಂತ್ರಿ ಕನಸು ಕಂಡವರಿಗೆ ಉರುಳಾಯ್ತು!

    – ರಾಹುಲ್ ಗಾಂಧಿ ಜೊತೆಗಿನ ಸಭೆಯ ಇನ್‍ಸೈಡ್ ಸ್ಟೋರಿ
    – ಬಿಸಿ ಪಾಟೀಲ್‍ಗೆ ಖೆಡ್ಡಾ ತೋಡಿದ್ದು ಒಂದೇ ವಾಕ್ಯ
    – ಒಂದೇ ವಾಕ್ಯದಿಂದ ಜಾರಕಿಹೊಳಿ ತಲೆದಂಡ

    ಬೆಂಗಳೂರು: ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಂಡಾಯದ ಸಂಕಟ ವಿಸ್ತರಣೆಯಾಗುತ್ತಿದ್ದು, ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಮಂತ್ರಿಗಿರಿ ಸಿಗದವರು ತೆರೆಮರೆಯಲ್ಲಿ ಮಸಲತ್ತು ಮಾಡುತ್ತಿರುವ ಈ ಹೊತ್ತಲ್ಲೇ ಇಟರೆಸ್ಟಿಂಗ್ ಇನ್ ಸೈಡ್ ಸ್ಟೋರಿಯೊಂದು ಹೊರಬಿದ್ದಿದೆ. 

    ನಾನೂ ಮಂತ್ರಿ ಆಗಬೇಕು. ನಾನೂ ಮಂತ್ರಿ ಆಗ್ಬೇಕು ಅಂತ ಕಾಲರ್ ಏರಿಸಿ ಓಡಾಡ್ತಿದ್ದವರಿಗೆ ಹಳ್ಳ ತೋಡಿದ್ದು ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯ. ನನಗೆ ಕೊಡದಿದ್ರೆ ಅಷ್ಟೇ ಅಂತ ಧ್ವನಿಯೇರಿಸಿ ಮಾತಾಡ್ತಿದ್ದವರ ಸದ್ದಡಗಿಸಿದ್ದೇ ಆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯ.

    ಹೌದು. ಸಂಪುಟ ವಿಸ್ತರಣೆಗೂ ಒಂದು ದಿನ ಮುನ್ನ ಅದರೆ ಶುಕ್ರವಾರ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ರಾಗಾ ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ಪಟ್ಟಿ ಫೈನಲ್ ಆಗಿದ್ದೂ ತಿಳಿದಿರುವ ವಿಷಯವೇ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಭಾಗಿಯಾಗಿದ್ದ ರಹಸ್ಯ ಸಭೆ ನಾಲ್ಕೇ ನಾಲ್ಕು ಇಂಗ್ಲೀಷ್ ವಾಕ್ಯಗಳ ಮೇಲೆಯೇ ಹೆಸರು ಅಂತಿಮವಾಗಿದ್ದು ಲೇಟೆಸ್ಟ್ ನ್ಯೂಸ್.

    ಇಂಗ್ಲಿಷ್ ಫಿನಿಶ್ -1
    ಮಂತ್ರಿಗಿರಿ ಕೊಡಿಸಲು ಬಿ.ಸಿ.ಪಾಟೀಲ್ ಪರ ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಬ್ಯಾಟ್ ಬೀಸಿದ್ದರು. ಇನ್ನೇನು ರಾಹುಲ್ ಓಕೆ ಅಂತ ಮುದ್ರೆ ಒತ್ತಬೇಕು ಅಷ್ಟರಲ್ಲಿ ಬೇಡ ಬೇಡ ಅನ್ನೋ ಧ್ವನಿ ಕಿವಿಗಪ್ಪಳಿಸಿತ್ತು. ಹೌದು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಬಿ.ಸಿ ಪಾಟೀಲ್ ಬದಲಿಗೆ ಎಂ.ಬಿ ಪಾಟೀಲ್ ಪರ ಲಾಬಿ ಮಾಡಿದರು.

    ಸದ್ಯ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಒಕ್ಕಲಿಗರು ಜೆಡಿಎಸ್ ಪರವಿದ್ದಾರೆ. ಭವಿಷ್ಯದಲ್ಲಿ ಕಾಂಗ್ರೆಸ್ಸಿಗೆ ಲಿಂಗಾಯತ ಮತಗಳು ಬೇಕೇ ಬೇಕು. ಹೀಗಾಗಿ ಹೈದರಾಬಾದ್ ಕರ್ನಾಟಕದಲ್ಲಿ ಈಶ್ವರ್ ಖಂಡ್ರೆ, ಮುಂಬೈ ಕರ್ನಾಟಕದಲ್ಲಿ ಎಂ.ಬಿ.ಪಾಟೀಲ್ ಅವರನ್ನು ಬೆಳೆಸಲೇಬೇಕು. ಎಂ.ಬಿ.ಪಾಟೀಲ್ ಮಂತ್ರಿ ಮಾಡಲೇಬೇಕು. “M.B.Patil is a emerging Lingayat Leader” ಎಂದು ಕಾರಣ ಸಮೇತ ಸಿದ್ದರಾಮಯ್ಯ ಹೇಳಿದ್ದೇ ತಡ ರಾಹುಲ್ ಹೌದು ಹೌದು ಎಂದು ತಲೆಯಾಡಿಸುತ್ತಾ ಓಕೆ ಅಂದಿದ್ರು. ಅಲ್ಲಿಗೆ M.B.Patil is a emerging Lingayat Leader ಅನ್ನೋ ಇಂಗ್ಲೀಷ್ ವಾಕ್ಯ ಬಿಸಿ ಪಾಟೀಲ್ ಆಸೆಗೆ ಅಂಕುಶ ಹಾಕಿತ್ತು.

    ಇಂಗ್ಲಿಷ್ ಫಿನಿಶ್ – 2
    ಸಭೆಯಲ್ಲಿ ಗೊಡ್ಡು ಬೆದರಿಕೆ ಹಾಕುತ್ತಿರುವ ಬಂಡಾಯಗಾರರ ಪ್ರಸ್ತಾಪವೂ ಆಯ್ತು. ಇದರಿಂದ ಕೆಂಡವಾದ ರಾಹುಲ್ ಗಾಂಧಿ We must Teach Blackmailers a lesson ಅಂತ ಅಬ್ಬರಿಸಿದ್ರು. Yes yes. They are all black mailers. Dr.Sudhakar is a show man ಅಂತ ರಾಹುಲ್ ಗಾಂಧಿಯ ಸಿಟ್ಟಿಗೆ ಒಗ್ಗರಣೆ ಹಾಕಿದ್ರು. ಎಲ್ಲರೂ ಸೇರಿ ರಮೇಶ್ ಜಾರಕಿಹೊಳಿ ತಲೆದಂಡಕ್ಕೆ ಷರಾ ಬರೆದರು.

    ಇಂಗ್ಲೀಷ್ ಫಿನಿಶ್ – 3
    ಬಳ್ಳಾರಿ ಭಾಗದಿಂದ ಯಾರು ಸಚಿವರಾಗಬೇಕು ಎನ್ನುವ ವಿಚಾರ ಚರ್ಚೆಗೆ ಬಂದಾಗ ಆನಂದ್ ಸಿಂಗ್ ಹಾಗೂ ನಾಗೇಂದ್ರ ಪರ ಸಿದ್ದರಾಮಯ್ಯ ನಿಂತಿದ್ದರು. ಆದರೆ ಇದಕ್ಕೆ ಕಡ್ಡಿಯಾಡಿಸಿದ ಡಿಕೆಶಿ They are migratory birds ಬೇರೆ ಪಕ್ಷದಿಂದ ವಲಸೆ ಬಂದವರನ್ನು ನಂಬಲು ಸಾಧ್ಯವಿಲ್ಲ ಎಂದು ಬಿಟ್ಟರು. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಡಿಕೆಯ ಚತುರ ಬುದ್ಧಿಗೆ ರಾಗಾ ಬೆನ್ನು ತಟ್ಟಿದರೆ, ಅತ್ತ ತುಕಾರಂಗೆ ಮಂತ್ರಿ ಪದವಿ ಹುಡುಕಿಕೊಂಡು ಬಂದಿತ್ತು.

    ಇಂಗ್ಲೀಷ್ ಫಿನಿಶ್ – 4
    ಇನ್ನು ಹಿರಿಯರೂ ಪ್ರಭಾವಿಗಳೂ ಆದ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ವಿಚಾರ ಪ್ರಸ್ತಾಪ ಆಯ್ತು. ಆಗ They have played enough role in state…Let them play national role ಅಂತ ಕಡ್ಡಿ ತುಂಡು ಮಾಡಿದಂತೆ ರಾಹುಲ್ ಗಾಂಧಿ ಮಾತನಾಡಿದರು. ಅವರಿಬ್ಬರೂ ಲೋಕಸಭಾ ಚುನಾವಣೆಗೆ ನಿಂತು ಗೆದ್ದು ದೆಹಲಿಗೆ ಬರಲಿ ಅನ್ನೋದು ರಾಗಾ ಲೆಕ್ಕಾಚಾರವಾಗಿತ್ತು.

    ಒಟ್ಟಿನಲ್ಲಿ M.B.Patil is a emerging lingayat Leader, We must teach blackmailers a lesson. They are migratory birds, ಹಾಗೂ They have played enough role in state ಎಂಬ ನಾಲ್ಕು ಇಂಗ್ಲೀಷ್ ವಾಕ್ಯಗಳು ಸಂಪುಟ ವಿಸ್ತರಣೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ರಬಲ್ ಶೂಟರ್ ಕಾಲಿಗೆ ಬಿದ್ದ ಪಿಟಿಪಿ, ತುಕಾರಾಂ – ರಾಜಭವನದಲ್ಲಿ ಡಿಕೆಶಿ ಮಿಂಚಿಂಗ್

    ಟ್ರಬಲ್ ಶೂಟರ್ ಕಾಲಿಗೆ ಬಿದ್ದ ಪಿಟಿಪಿ, ತುಕಾರಾಂ – ರಾಜಭವನದಲ್ಲಿ ಡಿಕೆಶಿ ಮಿಂಚಿಂಗ್

    ಬೆಂಗಳೂರು: ಮೈತ್ರಿ ಸರ್ಕಾರದ ಕಾಂಗ್ರೆಸ್ ಪಕ್ಷದ ಪಾಲಿಗೆ ತೀವ್ರ ತಲೆ ನೋವಾಗಿದ್ದ ಸಂಪುಟ ವಿಸ್ತರಣೆ ಕಾರ್ಯಕ್ರಮ ಇಂದು ನಡೆದಿದ್ದು, ಸರ್ಕಾರದ ನೂತನ ಸಚಿವರಾಗಿ 8 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗಿಂತ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಅವರೇ ಹೆಚ್ಚು ಮಿಂಚಿದರು.

    ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಹಾಜರಿದ್ದ ಸಚಿವ ಡಿಕೆಶಿ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಶಾಸಕರನ್ನು ಬರಮಾಡಿಕೊಂಡರು. ಬಳ್ಳಾರಿ ಪಾಲಿಟಿಕ್ಸ್ ನಲ್ಲಿ ಗೆದ್ದ ಖುಷಿಯಲ್ಲಿ ಡಿಕೆಶಿವಕುಮಾರ್ ಕಾಲಿಗೆ ಪಿಟಿ ಪರಮೇಶ್ವರ್ ನಾಯ್ಕ್ ಮತ್ತು ತುಕಾರಾಂ ಬಿದ್ದು ಆಶಿರ್ವಾದ ತೆಗೆದುಕೊಂಡರು.

    ಮೊದಲಿಗೆ ಎಂಬಿ ಪಾಟೀಲ್, ಆರ್‍ಬಿ ತಿಮ್ಮಾಪುರ, ಸತೀಶ್ ಜಾರಕಿಹೊಳಿ, ಸಿಎಸ್ ಶಿವಳ್ಳಿ, ಪಿಟಿ ಪರಮೇಶ್ವರ ನಾಯ್ಕ್, ಇ ತುಕಾರಂ, ರಹೀಂ ಖಾನ್, ಎಂಟಿಬಿ ನಾಗರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್ ವಾಲಾ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಉಳಿದಂತೆ ಬಳ್ಳಾರಿಯಲ್ಲಿ ತಮ್ಮ ರಾಜಕೀಯ ರಾಜಕೀಯ ಗೇಮ್ ಆಡಲು ಶುರುಮಾಡಿರುವ ಡಿಕೆಶಿ ಅವರು ತಮ್ಮದೇ ತಂತ್ರದ ಮೂಲಕ ಶಾಸಕರಿಗೆ ಸಚಿವ ಸ್ಥಾನ ಸಿಗುವಂತೆ ಮಾಡಿದ್ದಾರೆ ಎಂಬ ಚರ್ಚೆ ನಡೆದಿದೆ. ಬಳ್ಳಾರಿಯಿಂದ ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ತುಕಾರಂ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಡಿಕೆ ಶಿವಕುಮಾರ್ ತಮ್ಮ ಯೋಜನೆಯಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಳ್ಳಾರಿಯಿಂದ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಮತ್ತು ಆನಂದ್ ಸಿಂಗ್ ಮಂತ್ರಿ ಸ್ಥಾನ ಸಿಗುತ್ತದೆ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಅಂತಿಮ ಹಂತದಲ್ಲಿ ಪ್ರಭಾವಿಗಳಲ್ಲದ ಇಬ್ಬರು ನಾಯಕರಿಗೆ ಸಚಿವಗಿರಿ ಕೊಡಲಾಗುತ್ತಿದೆ. ಈ ಮೂಲಕ ನಾಗೇಂದ್ರ ಮತ್ತು ಆನಂದ್ ಸಿಂಗ್ ಮಂತ್ರಿಯಾದರೇ ಬಳ್ಳಾರಿಯಲ್ಲಿ ತಮ್ಮ ಪ್ರಾಬಲ್ಯವಿರುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಅವರಿಬ್ಬರ ಮಂತ್ರಿ ಸ್ಥಾನಕ್ಕೆ ಕೊಕ್ಕೆ ಹಾಕಿದ್ದಾರೆ ಎಂದು ಬಳ್ಳಾರಿ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

    ತುಕಾರಂ – ಪಿ.ಟಿ ಪರಮೇಶ್ವರ್ ನಾಯ್ಕ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ – ಡಿಕೆಶಿ ತಿರುಗೇಟು

    ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ – ಡಿಕೆಶಿ ತಿರುಗೇಟು

    ಬೆಳಗಾವಿ: ಮೇಕೆದಾಟು ಯೋಜನೆ ಬಗ್ಗೆ ನಾನು ಈಗಲೂ ಹೆಚ್ಚು ಆತ್ಮವಿಶ್ವಾಸದಿಂದ ಇದ್ದು, ಆದರೆ ತಮಿಳುನಾಡು ಸಿಎಂ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ನನಗೆ ಅಚ್ಚರಿ ತಂದಿದೆ. ಈಗಲೂ ನಾನು ತಮಿಳುನಾಡು ಸಿಎಂ ಹಾಗು ಅಧಿಕಾರಿಗಳಿಗೆ ಯೋಜನೆ ಬಗ್ಗೆ ಭೇಟಿ ನೀಡಿಲು ಆಹ್ವಾನ ನೀಡುತ್ತೇನೆ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ಬೆಳಗಾವಿಯಲ್ಲಿ ತಮಿಳುನಾಡಿನ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ನಮ್ಮ ರಾಜ್ಯ ಹಿತಕ್ಕಾಗಿ ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಆದರೆ ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ. ನೇರ ನಾನು ತಮಿಳುನಾಡು ಸಿಎಂ ಹಾಗು ಅಧಿಕಾರಿಗಳಿಗೆ ಆಹ್ವಾನ ನೀಡುತಿದ್ದು, ಸ್ಥಳಕ್ಕೆ ಬಂದು ನಮ್ಮ ಯೋಜನೆ ಬಗ್ಗೆ ಪರಿಶೀಲನೆ ನಡೆಸಲು ಮನವಿ ಮಾಡುತ್ತೇನೆ ಎಂದರು.

    ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡು ರಾಜ್ಯಗಳಿಗೆ ಉಪಯೋಗವಾಗುವ ಯೋಜನೆಗೆ ತಮಿಳುನಾಡು ಮನವೊಲಿಸಬೇಕು. ಅಲ್ಲದೇ ತಮಿಳುನಾಡು ನ್ಯಾಯಾಲಯಕ್ಕೆ ತೆರಳಿದರೆ ಅನಿವಾರ್ಯವಾಗಿ ನಾವು ನ್ಯಾಯಾಲಯಲ್ಲೇ ಸೂಕ್ತ ಉತ್ತರ ನೀಡುತ್ತೇವೆ. ತಮಿಳುನಾಡಿನ ಈ ನಡೆ ನನಗೆ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈ ಎಲ್ಲಾ ವಿಚಾರದ ‘ಮೈನ್ ಕೀ’. ಅದ್ದರಿಂದ ಕೇಂದ್ರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ನ್ಯಾಯಾಲಯ ಈ ಕುರಿತು ನಮಗೆ ಏನು ಆದೇಶ ನೀಡಿದೆ ಅಷ್ಟು ನೀರನ್ನು ಮಾತ್ರ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮೇಕೆದಾಟು ಯೋಜನೆ: ಮಾತುಕತೆಗೆ ಸಿದ್ಧವಿಲ್ಲವೆಂದ ತಮಿಳುನಾಡು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶ್ರೀಗಳು ನನ್ನನ್ನು ಮಾತನಾಡಿಸಿದ್ರು : ಸಚಿವ ಡಿಕೆಶಿ

    ಶ್ರೀಗಳು ನನ್ನನ್ನು ಮಾತನಾಡಿಸಿದ್ರು : ಸಚಿವ ಡಿಕೆಶಿ

    ಚೆನ್ನೈ: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದು, ನನ್ನನ್ನು ಮಾತನಾಡಿಸಿದರು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಚೆನ್ನೈನ ರೇಲಾ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳ ಭೇಟಿ ಬಳಿಕ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಆಸ್ಪತ್ರೆಯ ಆಡಳಿತ ಮಂಡಳಿ ತುಂಬಾ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದು, ಯಾರನ್ನು ಒಳಗೆ ಬಿಡುವುದಿಲ್ಲ. ಆದರೆ ನಾನು ಮಂತ್ರಿ ಎಂಬ ಕಾರಣಕ್ಕೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಿದರು. ಶೀಘ್ರವೇ ಶ್ರೀಗಳು ಆಸ್ಪತ್ರೆಯಿಂದ ನಡೆದುಕೊಂಡು ಹೊರಬರುತ್ತಾರೆ. ಇಲ್ಲಿನ ಆಸ್ಪತ್ರೆ ನೋಡಿದರೆ ಖುಷಿ ಆಗುತ್ತೆ. ಅಲ್ಲದೇ ಆಡಳಿತ ವ್ಯವಸ್ಥೆ, ಚಿಕಿತ್ಸಾ ವಿಧಾನ ಎಲ್ಲವೂ ಚೆನ್ನಾಗಿದೆ. ಭಕ್ತಾದಿಗಳು ಆಸ್ಪತ್ರೆ ಬಳಿ ಬಂದು ವೈದ್ಯರಿಗೆ ತೊಂದರೆ ನೀಡುವುದು ಬೇಡ ಎಂದು ಮನವಿ ಮಾಡಿದರು.

    ರೇಲಾ ಆಸ್ಪತ್ರೆ ಅತ್ಯುತ್ತಮವಾಗಿದ್ದು, ಭಾರತದಲ್ಲೇ ಉತ್ತಮವಾದ ಆಸ್ಪತ್ರೆ ಎಂಬ ಹೆಗ್ಗಳಿಕೆ ಇದೆ. ಇಲ್ಲಿ 150 ಐಸಿಯೂ ಕೊಠಡಿಗಳಿದ್ದು, ಉತ್ತಮ ನುರಿತ ವೈದ್ಯರಿದ್ದಾರೆ. ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವನಾಗಿ ಹೇಳುತ್ತಿದ್ದು, ನಮ್ಮಲ್ಲಿ ಇಂತಹ ಆಸ್ಪತ್ರೆ ಇಲ್ಲ. ಈ ರೀತಿ ಆಸ್ಪತ್ರೆ ನಮ್ಮಲ್ಲಿ ಆಗುವ ನಂಬಿಕೆಯೂ ಇಲ್ಲ. ಐದು ದಿನದ ನವಜಾತ ಶಿಶುವಿನಿಂದ 111 ವರ್ಷದ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

    ಶ್ರೀಗಳ ಆರೋಗ್ಯದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಶ್ರೀಗಳಿಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯಕ್ಕೆ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ನಂತರ ಸ್ವಾಮೀಜಿಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳವರೆಗೂ ಐಸಿಯುನಲ್ಲೇ ಇರಬೇಕಾಗಿದೆ. ಸ್ವಾಮೀಜಿಗಳನ್ನ ಸದ್ಯ ಯಾರು ಭೇಟಿ ಮಾಡುವ ಆಗಿಲ್ಲ, ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಬಂಡೆ’ಗೆ ತೆಲಂಗಾಣದಲ್ಲೂ ಡಿಚ್ಚಿ ಹೊಡೆಯಲು ಹೊರಟ ಕಮಲ `ನಾಯಕ’!

    `ಬಂಡೆ’ಗೆ ತೆಲಂಗಾಣದಲ್ಲೂ ಡಿಚ್ಚಿ ಹೊಡೆಯಲು ಹೊರಟ ಕಮಲ `ನಾಯಕ’!

    ಬೆಂಗಳೂರು: ಬಳ್ಳಾರಿ ಉಪಚುನಾವಣೆಯಲ್ಲಿ ಮುಖಾಮುಖಿಯಾಗಿ ಪೈಪೋಟಿ ನೀಡಿದ್ದ ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತೆಲಂಗಾಣದಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.

    ಈಗಾಗಲೇ ಡಿಕೆ ಶಿವಕುಮಾರ್ ಅವರಿಗೆ ತೆಲಂಗಾಣ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ನೀಡಲಾಗಿದ್ದು ಪಕ್ಷದ ಮೈತ್ರಿ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಅಲ್ಲಿನ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಜೊತೆಗಿನ ಮೈತ್ರಿ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಅಸಮಾಧಾನವನ್ನು ಶಮನ ಮಾಡುವ ಕಾರ್ಯದಲ್ಲಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಅವರು ಒಂದು ಹಂತದ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ.

    ಇತ್ತ ತೆಲಂಗಾಣದಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಬೆನ್ನಲ್ಲೇ ಬಿಜೆಪಿ ಟಾಂಗ್ ನೀಡಲು ಮುಂದಾಗಿದ್ದು, ಈ ದೃಷ್ಟಿಯಿಂದ ಬಿಜೆಪಿ ಪರ ಪ್ರಚಾರದಲ್ಲಿ ತೊಡಗುವಂತೆ ಶ್ರೀರಾಮುಲುಗೆ ಹೈಕಮಾಂಡ್ ಸೂಚನೆ ನೀಡಿದೆ. ಡಿಸೆಂಬರ್ ಮೊದಲ ವಾರದಲ್ಲಿ ತೆಲಂಗಾಣದಲ್ಲಿ ಪ್ರಚಾರದಲ್ಲಿ ಶ್ರೀರಾಮುಲು ಭಾಗವಹಿಸಲಿದ್ದು, ಸದ್ಯ ಮೂರು ದಿನಗಳ ಕಾಲ ರಾಮುಲು ಅವರ ಪ್ರಚಾರದ ವೇಳಾಪಟ್ಟಿ ನಿಗದಿಯಾಗಿದೆ.

    ಬಳ್ಳಾರಿಯಲ್ಲಿ ಡಿಕೆ ಶಿವಕುಮಾರ್ ಪಕ್ಷದ ಅಭ್ಯರ್ಥಿ ಉಗ್ರಪ್ಪ ಅವರನ್ನು ನಿರೀಕ್ಷೆಗೂ ಹೆಚ್ಚಿನ ಮತಗಳಿಂದ ಜಯಗಳಿಸುವಂತೆ ಮಾಡಿದ್ದರು. ಈ ಮೂಲಕ ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು ಅವರಿಗೆ ಅಣ್ಣ ಎನ್ನುತ್ತಲೇ ಸೋಲಿನ ರುಚಿ ತೋರಿಸಿದ್ದರು. ಈಗ ತೆಲಂಗಾಣದಲ್ಲಿ ಇಬ್ಬರ ನಡುವಿನ ಫೈಟ್ ಹೇಗೆ ಸಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv