ವಿಜಯಪುರ: ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುರ್ಚಿಯ ಜಪ ಶುರುವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಳಿಕ ನಾನೇ ಸಿಎಂ ಎಂದು ಗೃಹ ಸಚಿವ ಎಂಬಿ ಪಾಟೀಲ್ ಘೋಷಿಸಿಕೊಂಡಿದ್ದಾರೆ.
ಬಬಲೇಶ್ವರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಸಿಎಂ ಆಗ್ತೀನಿ. ನನಗೂ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ ದುರಾಸೆ ಇಲ್ಲ. ಸಿದ್ದರಾಮಯ್ಯ ಬಳಿಕ ನಾನೇ ಸಿಎಂ ಎಂದು ಹೇಳಿದರು.
ಇದೇ ವೇಳೆ ಐಟಿ ದಾಳಿಗೆ ಪ್ರತಿಕ್ರಿಯೆ ನೀಡಿ, ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆ ಮೇಲೆ ನಾಳೆಯೂ ಐಟಿ ದಾಳಿ ಆಗಬಹುದು. ಅವರ ಮನೆಯಲ್ಲಿ 6 ಲಕ್ಷ ರೂ. ನಗದು ಇರಬಹುದು. ಐಟಿ ದಾಳಿ ಮಾಡಬೇಕಿದ್ದರೆ ಆಪರೇಷನ್ ಕಮಲ ಮಾಡುವವರ ಮನೆಯಲ್ಲಿ ಐಟಿ ದಾಳಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು ಮತ್ತೆ ಮುಖ್ಯಮಂತ್ರಿ ಆದರೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ನಾನೇ ಸಿಎಂ ಅಭ್ಯರ್ಥಿ ಎಂದು ಹೇಳುವ ಶಕ್ತಿ ನನಗಿದೆ. ಈಶ್ವರಪ್ಪ ಅವರನ್ನು ಈ ರೀತಿ ಹೇಳುವಂತೆ ಕೇಳಿ ನೋಡೋಣ ಎಂದು ಟಾಂಗ್ ನೀಡಿದ್ದರು. ಆ ಬಳಿಕ ಮತ್ತೆ ರಾಜ್ಯದಲ್ಲಿ ಸಿಎಂ ಸ್ಥಾನದ ಕುರಿತ ಚರ್ಚೆ ಹೆಚ್ಚಾಗಿತ್ತು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್, ನನಗೆ ಇನ್ನೂ ವಯಸ್ಸಿದೆ ಎಂಬ ಉತ್ತರಿಸಿದ್ದರು.
ಶಿವಮೊಗ್ಗ: ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿಗಳು ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಸರ್ಕಾರ ಇಬ್ಬರು ಸಚಿವರು ಕಿತ್ತಾಡುತ್ತಿದ್ದಾರೆ. ಅಲ್ಲದೇ ಸಿಎಂ ಎಚ್‍ಡಿಕೆ ಹಾಗೂ ರೇವಣ್ಣ ಬಗ್ಗೆ ಮಾತನಾಡಿದ್ದಾರೆ. ಆದರೆ ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ಸಣ್ಣ ಸಣ್ಣ ವಿಚಾರಗಳನ್ನು ಪ್ರಸ್ತಾವನೆ ಮಾಡಿದ್ದು ಸರಿಯಲ್ಲ. ಅದ್ದರಿಂದ ನಾನು ಅವರಿಗೆ ನೇರವಾಗಿ ಹೇಳುತ್ತಿದ್ದು, ಕಾಂಗ್ರೆಸ್ ಪಕ್ಷ ಧರ್ಮ ಒಡೆಯುವ ವಿಚಾರಕ್ಕೆ ಕೈ ಹಾಕಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮದ ವಿಚಾರ ಕೇವಲ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿಯದ್ದು ಮಾತ್ರ ಅಲ್ಲ. ಇದು ಅಂದು ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು, ಅವತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮನಮೋಹನ್ ಸಿಂಗ್ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದನ್ನು ಅವರಿಬ್ಬರು ಮುಂದುವರಿಸಿದ್ದರು. ಆದರೆ ಆ ಪತ್ರಕ್ಕೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಸಹಿ ಹಾಕಿದ್ದಾರೆ. ನಾನು ಕ್ಯಾಬಿನೆಟ್ ನಲ್ಲಿ ಸಮ್ಮತಿ ಸೂಚಿಸಿದ್ದೆ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಪ್ಪಿಗೆ ಸೂಚಿಸಿದ್ದೆ. ಇದರಿಂದ ನನಗೆ ವೈಯುಕ್ತಿಕವಾಗಿ ಹಿನ್ನಡೆ ಆಯ್ತು, ಮಾಡಬಾರದಿತ್ತು ಎಂದು ಹೇಳಿದ್ದು ನಿಜ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಬೇರೆ ಯಾರು ಏನ್ ಬೇಕಾದ್ರೂ ಅಂದುಕೊಳ್ಳಲಿ ಬಿಡಿ ಎಂದರು.
ಧರ್ಮ, ಜಾತಿಯ ವಿಚಾರವನ್ನೇ ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದು ತಪ್ಪು. ಆದರೆ ಬಡ ರೈತರ ಸಮಸ್ಯೆ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಪರಿಹಾರ ಕೊಡಲು ಮನಸ್ಸಿಲ್ಲ. ನಮ್ಮ ಪಕ್ಷದ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಲಿಲ್ಲವಾ? ಈಗ ರಾಜಕೀಯಕ್ಕಾಗಿ ಸೈನಿಕರನ್ನು ಬಳಸಿಕೊಳುತ್ತೀರಾ? ಗುಪ್ತಚರ ವರದಿ ವಿಫಲತೆಯನ್ನು ಮರೆಮಾಚಿ ಪುಲ್ವಾಮಾ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರದಿಂದ ಎಲ್ಲಾ ಇಲಾಖೆಗಳನ್ನು ಮಿಸ್ ಯೂಸ್ ಮಾಡಲಾಗಿದೆ. ಸಿಎಜಿ ರಿಪೋರ್ಟ್ ಏನಾಯ್ತು? ರಾಜಕೀಯಕ್ಕೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿರಲ್ಲ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಎಸೆದರು. ಇದೇ ವೇಳೆ ಈಶ್ವರಪ್ಪ ಅವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಈಶ್ವರಪ್ಪ ಮೆಂಟಲ್ ಕೇಸ್. ಅವರ ಪಾರ್ಟಿ ಅವರೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.
ಬಳ್ಳಾರಿ: ಮಾಜಿ ಡಿಸಿಎಂ ಆರ್.ಅಶೋಕ್ ನಮ್ಮ ಬದ್ರರ್. ಅವರಿಗೆ ಅಧಿಕಾರ ಬೇಕು ಅಂದ್ರೆ ಕಾಂಗ್ರೆಸ್-ಜೆಡಿಎಸ್ ಸಿದ್ಧಾಂತಗಳನ್ನ ಒಪ್ಪಿಕೊಂಡು ನಮ್ಮ ಪಕ್ಷಕ್ಕೆ ಬರಲಿ. ಆಗ ನಾವೇ ಅಧಿಕಾರ ಕೊಡಿಸುತ್ತೇವೆ ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರಿಗೆ ಅಧಿಕಾರ ಬೇಕು, ರಾಜಕೀಯದಲ್ಲಿ ಬೆಳೆಯಬೇಕು ಅಂತ ಆಸೆ ಇದ್ದರೆ ನಮ್ಮ ಪಕ್ಷಕ್ಕೆ ಬರಲಿ. ಇಲ್ಲವೇ ಬಿಜೆಪಿಯಲ್ಲಿ ಬೆಳೆಯುವುದಾದರೆ ಬೆಳೆಯಲಿ. ಅವರು ಎಲ್ಲೆ ಬೆಳೆದರೂ ನಮಗೆ ಸಂತೋಷ ಎಂದು ಹೇಳಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆಗೆ ಹೊಂದಾಣಿಕೆ ರಾಜಕಾರಣಕ್ಕೆ ನಾನು ಒಪ್ಪಲಿಲ್ಲ. ಇದಕ್ಕೆ ಸಾಕ್ಷಿ ಬೇಕು ಎನ್ನುವುದಾದರೆ ಕಳೆದ ಚುನಾವಣೆಯಲ್ಲಿನ ಫೋಟೋಗಳನ್ನು ಒಮ್ಮೆ ಆರ್.ಅಶೋಕ್ ನೋಡಲಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
ಆರ್.ಅಶೋಕ್ ಹೇಳಿದ್ದೇನು?:
ಬೆಂಗಳೂರಿನಲ್ಲಿ ಇಂದು ನಡೆದ ಮಾಧ್ಯಮ ಸಂವಾದದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿದ ಆರ್.ಅಶೋಕ್ ಅವರು, ಡಿಸೆಂಬರ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗಬೇಕಿತ್ತು. ಆದರೆ ಲೋಕಸಭಾ ಚುನಾವಣೆಯಿಂದಾಗಿ ಮುಂದೆ ಹಾಕಲಾಗಿದೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದ್ದು, ರಾಜ್ಯಾಧ್ಯಕ್ಷ ಸ್ಥಾನವನ್ನು ಕೂಡ ಕೊಡುತ್ತದೆ. ಈಗಲೇ ಬೇಕು ಅಂತ ಕಾದು ಕುಳಿತಿಲ್ಲ. ಈಗ ಟವೆಲ್ ಹೆಗಲ ಮೇಲೆ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ರಾಜ್ಯಾಧ್ಯಕ್ಷ ಕುರ್ಚಿ ಮೇಲೆ ಟವೆಲ್ ಹಾಕಿಕೊಂಡು ಕುಳಿತಿಲ್ಲ. ನಾನು ಬೆಂಗಳೂರಿಗೆ ಸೀಮಿತ ಅಲ್ಲ ಎಂದು ತಿಳಿದರು.
ನಾನು ಹಾಗೂ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ ಸಚಿವ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎಲ್ಲಿಯವರೆಗೂ ಇಬ್ಬರು ನಾಯಕರು ಇರುತ್ತಾರೋ ಅಲ್ಲಿಯವರೆಗೂ ನನಗೆ ಅವಕಾಶ ಸಿಗಲ್ಲ. ಅವರಿಬ್ಬರೂ ಬದಿಗೆ ಸರಿದರೆ ಮಾತ್ರ ನನಗೆ ಬೆಳೆಯಲು ಅವಕಾಶವಾಗುತ್ತದೆ. ಆದರೆ ಅವರಿಗೆ ಅವಕಾಶ ಮಾಡಿಕೊಡಲು ನಾನು ಸನ್ಯಾಸಿಯಲ್ಲ. ನಾನು ಸನ್ಯಾಸ ಸ್ವೀಕಾರ ಮಾಡಿಲ್ಲ. ಇಲ್ಲೇ ಇದ್ದು ರಾಜಕಾರಣ ಮಾಡುತ್ತೇನೆ. ನನಗೂ ಬೆಳೆಯಬೇಕೆಂಬ ಆಸೆ ಹಾಗೂ ಕನಸು ಇದೆ. ಬಿಜೆಪಿಯಲ್ಲಿ ನಾನು ಬೆಳೆದೇ ಬೆಳೆಯುತ್ತೇನೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆಗೂ ಸಚಿವ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ನಾನು ಎಚ್.ಡಿ.ದೇವೇಗೌಡ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದರು.
ಶಿವಮೊಗ್ಗ: ಸಿಎಂ ಕುಮಾರಸ್ವಾಮಿ ಅವರು ನೆಗೆದು ಬಿಳ್ತಾರೆ ಎಂದು ಹೇಳಿಕೆ ನೀಡಿದ್ದ ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಲ ಸಂಪನ್ಮೂಲ ಸಚಿವ ಡಿಕೆ ಕುಮಾರ್, ಇದರ ಹಿಂದೆ ಏನೋ ಒಂದು ಸಂಚು ಕಾಣಿಸುತ್ತಿದೆ. ಮುಖ್ಯಮಂತ್ರಿಗಳ ಕೊಲೆಗೆ ಸಂಚು ಇದು ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನ ಕೊಳಚೆ ನಾಲಿಗೆಗೆ ಯಡಿಯೂರಪ್ಪ ಅಂತ್ಯ ಹೇಳುತ್ತಾರೆ. ಅವರ ಈ ಹೇಳಿಕೆ ಮುಖ್ಯಮಂತ್ರಿ ಕೊಲೆಗೆ ಸಂಚು ಇದು. ‘ಹೌ ಕೆನ್ ಈ ಟೆಲ್ ದಟ್’ ಇದು ದೇಶದ ಅಥವಾ ಆರ್‍ಎಸ್‍ಎಸ್ ಸಂಸ್ಕೃತಿನಾ ಎಂದು ಪ್ರಶ್ನಿಸಿದ್ದಾರೆ.
ಅವರ ಆಚಾರ- ವಿಚಾರ ನಾಲಿಗೆಯಿಂದ ಗೊತ್ತಾಗುತ್ತಿದೆ. ಒಂದು ಪಂಚಾಯ್ತಿ ಸದಸ್ಯ ಆಗಲು ಕೂಡ ಅವರಿಗೆ ಯೋಗ್ಯತೆ ಇಲ್ಲ. ಈಶ್ವರಪ್ಪ ನಾಲಿಗೆ ಬಗ್ಗೆ ಯಡಿಯೂರಪ್ಪ, ಸದಾನಂದಗೌಡ, ಸುರೇಶ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ? ಇದೇನಾ ಬಿಜೆಪಿ ಸಂಸ್ಕೃತಿ. ಹೆಣದ ಮೇಲೆ ರಾಜಕಾರಣ, ಅಧಿಕಾರ ಮಾಡಬೇಕೇ? ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು. ಆತ ಸಂವಿಧಾನ ಓದಿಕೊಂಡಿರಾ? ಡಿಸಿಎಂ ಆಗಿರೋರು ಎಲ್ಲಾ ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅವರು ಹಿಂದೂ ಅಂತಾರಾ, ನಾವೂ ಎಲ್ಲರೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದರು.
ಮಂಡ್ಯ ನಟರ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಹಾಸನ ಮತ್ತು ಮಂಡ್ಯ ಜನರು ಬುದ್ಧಿವಂತರಿದ್ದಾರೆ. ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ. ಮತ ಗಳಿಸಲು ಪ್ರಚಾರ ಮಾಡುವುದು ತಪ್ಪಲ್ಲ ಎಂದರು.
ಈಶ್ವರಪ್ಪ ಹೇಳಿದ್ದೇನು?
ಕೊಪ್ಪಳದಲ್ಲಿ ಮಾತನಾಡಿದ್ದ ಅವರು, ಬೇಡಾ ಅಂದ್ರು ಲೋಕಸಭೆ ಚುನಾವಣೆ ಮುಗಿಯುತ್ತೆ, ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ನೆಗೆದು ಬಿದ್ದು ಹೋಗುತ್ತಾರೆ. ಮೈತ್ರಿ ಸರ್ಕಾರ ಬೀಳುತ್ತೆ. ಕೊಪ್ಪಳದಲ್ಲಿ ಬಿಜೆಪಿ ಗೆಲ್ಲಬೇಕು. ಹೀಗಾಗಿ ಕಾರ್ಯಕರ್ತರು ಚೆನ್ನಾಗಿ ಪಕ್ಷದ ಪರ ಕೆಲಸ ಮಾಡಬೇಕು. ನಾನು ನೇರವಾಗಿ ಮಾತನಾಡಿ ನಿಷ್ಠುರವಾಗಿದ್ದೇನೆ. ಮೋದಿ ಪ್ರಧಾನಿ ಆಗ್ತಾರೆ ಕೊಪ್ಪಳದಲ್ಲಿ ಸಂಗಣ್ಣ ಗೆಲ್ಲುತ್ತಾರೆ. ನಾವು ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದ್ದರು.
ಬೆಂಗಳೂರು: ಲೋಕಸಭಾ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಪಕ್ಷವನ್ನು ಗೆದ್ದ ಮಾಡಲು ಯಶಸ್ವಿಯಾಗಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನೇ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಆಗುವಂತೆ ಮಾಡಲು ಒತ್ತಡ ಕೇಳಿ ಬಂದಿದ್ದು, ಇದಕ್ಕೆ ಸಿಎಂ ಕುಮಾರಸ್ವಾಮಿ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ದೋಸ್ತಿ ಪಕ್ಷಗಳ ಅಭ್ಯರ್ಥಿ ಆಗಿರುವ ಮಧು ಬಂಗಾರಪ್ಪ ಅವರೇ ಸ್ವತಃ ಕ್ಷೇತ್ರದ ಜವಾಬ್ದಾರಿಯನ್ನು ಡಿಕೆಶಿ ಅವರಿಗೆ ನೀಡಿದರೆ ಪಕ್ಷದ ಗೆಲುವು ಸುಲಭ ಸಾಧ್ಯ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ನೀಡಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಡಿಕೆಶಿ ಅವರನ್ನೇ ಉಸ್ತುವಾರಿಯನ್ನಾಗಿ ಮಾಡಲು ಜಾತಿ ಸಮೀಕರಣವೂ ಕಾರಣವಿದ್ದು, ಒಕ್ಕಲಿಗ ಸಮುದಾಯದ ಹೆಚ್ಚು ಮಂದಿ ಮತದಾರರು ಇರುವ ಭದ್ರಾವತಿ, ತೀರ್ಥಹಳ್ಳಿ, ಸಾಗರದ ಕೆಲವು ಭಾಗ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ಡಿಕೆಶಿ ಉಸ್ತುವಾರಿ ಸಹಾಯವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಬೆಳವಣಿಗೆ ನಡೆದಿದೆ.
ಈ ಕುರಿತಂತೆ ಸಿಎಂ ಕುಮಾರಸ್ವಾಮಿ ಅವರೇ ಜೆಡಿಎಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಕ್ಷೇತ್ರಕ್ಕೆ ಉಸ್ತುವಾರಿಯಾಗಿಸಲು ಸಿಎಂ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಿಎಸ್ ಯಡಿಯೂರಪ್ಪ ಅವರಂತಹ ಪ್ರಬಲ ನಾಯಕರನ್ನು ಎದುರಿಸಬೇಕಾದರೆ ಡಿಕೆ ಶಿವಕುಮಾರ್ ಅವರೇ ಸರಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ ಡಿಕೆಶಿ ಅವರನ್ನ ಶಿವಮೊಗ್ಗ ಉಸ್ತುವಾರಿಯಾಗಿ ಮಾಡಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ನಿಮ್ಮನ್ನು ಬಹಳ ಚಿಕ್ಕವಯಸ್ಸಿನಿಂದಲೇ ನಾನು ನೋಡಿದ್ದೇನೆ. ಅಂದು ಸ್ಪೀಕರ್ ಆಗಿದ್ದಾಗ ಸಾಕಷ್ಟು ಎಮೋಷನಲ್ ಆಗಿದ್ದನ್ನು ಕೂಡ ನಾನು ಕಂಡಿದ್ದೇನೆ. ಅಲ್ಲದೇ ಅಂದು ಈ ಕುರ್ಚಿ ಬಿಟ್ಟು ಎದ್ದು ಹೋಗಿದ್ದನು ಕೂಡ ನಾನು ಗಮನಿಸಿದ್ದೇನೆ. ಆದ್ರೆ ಇಂದು ಮತ್ತೆ ಎಮೋಷನಲ್ ಆಗಬೇಡಿ ಎಂದು ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು.
ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡಿರುವ ಆಡಿಯೋದಲ್ಲಿ 50 ಕೋಟಿ ಕೊಟ್ಟು ಸ್ಪೀಕರ್ ಅವರನ್ನು ಖರೀದಿಸಿರುವ ವಿಚಾರ ಭಾರೀ ಸದ್ದು ಮಾಡಿತ್ತು. ಕಲಾಪದ ಆರಂಭದಲ್ಲೇ ಸ್ಪೀಕರ್ ಈ ವಿಚಾರ ಪ್ರಸ್ತಾಪಿಸಿ ಕಣ್ಣೀರು ಹಾಕಿದ್ರು. ಹೀಗಾಗಿ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ದಯವಿಟ್ಟು ಇದನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಬಗ್ಗೆ ಕೇವಲವಾಗಿ ಮಾತನಾಡಿದವರು, ಖರೀದಿ ಮಾಡಿದ್ದೀವಿ ಎಂದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.
ನೀವು ಒಂದು ದೊಡ್ಡ ಸ್ಥಾನದಲ್ಲಿ ಕುಳಿತಿದ್ದೀರಿ. ಇಲ್ಲಿ ಬಹಳ ದೊಡ್ಡ ದೊಡ್ಡ ವಿಚಾರ ಅಡಗಿರುವುದರಿಂದ ಇಂದು ಇಡೀ ದೇಶ ಹಾಗೂ ಹೊರದೇಶದಲ್ಲಿಯೂ ಕರ್ನಾಟಕದ ಪ್ರಜಾಪ್ರಭುತ್ವನ್ನು ಗಮನಿಸುತ್ತಿದೆ. ಹೀಗಾಗಿ ತಾವು ಎಮೋಷನಲ್ ಆಗಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಬಾರದು. ಇದು ತಮ್ಮ ಒಬ್ಬರದ್ದೇ ವಿಚಾರವಲ್ಲ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿರುವವರು ಅವರಿಗೆ ತಿಳಿದ ವಿಚಾರದ ಪತ್ರವನ್ನು ತಮಗೆ ಕೊಟ್ಟು, ಅದನ್ನು ಕೂಡ ತಾವು ಗಮನದಲ್ಲಿಟ್ಟುಕೊಂಡು ಇಂದು ಪ್ರಸ್ತಾಪ ಮಾಡಿದ್ದೀರಿ.
ಇಲ್ಲಿ ಶಾಸಕ ಹಾಗೂ ಸಚಿವರ ಮರ್ಯಾದೆ ಎಲ್ಲಾ ಹಾಳಾಗಿ ಹೋಗುತ್ತಿದೆ. ಇದರಿಂದ ಇಂದು ನಾವು ಯಾರೂ ಕೂಡ ತಲೆ ಎತ್ತಿ ನಡೆಯೋ ಹಾಗಿಲ್ಲ. ಹೀಗಾಗಿ ತಾವು ಅದನ್ನು ಪ್ರಶ್ನೆ ಮಾಡಿದ್ದೀರಿ. ನಮ್ಮ ಗೌರವವನ್ನು ಉಳಿಸಬೇಕಾದವರು ಹಾಗೆಯೇ ನಮ್ಮನ್ನು ರಕ್ಷಣೆ ಮಾಡಬೇಕಾದವರು ನೀವು. ಹೀಗಾಗಿ ತಾವು ಮೇಲ್ಗಡೆ ಕೂತಂತಹ ಸಂದರ್ಭದಲ್ಲಿ ನಿಮ್ಮದೊಂದು ವಿಚಾರದಲ್ಲಿ ಮಾತ್ರ ನೀವು ತೀರ್ಪು, ಆದೇಶ, ಸಂದೇಶ, ಈ ಸರ್ಕಾರಕ್ಕೆ ಹಾಗೂ ಈ ಮನೆಗೆ ನೀವು ಅವಕಾಶ ಮಾಡಿಕೊಡಬಾರದು ಅಂದ್ರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಸಚಿವರನ್ನು ನೀವು ರಕ್ಷಣೆ ಮಾಡಬೇಕು. ಸಂಸತ್ತಿನ ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ನಮ್ಮ ಬಗ್ಗೆ ಏನು ಮಾತಾಡ್ತಿದ್ದಾರೆ. ಹೀಗಾಗಿ ಇಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಚರ್ಚೆ ನಡೆಸಬಾರದು ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಈ ಬಗ್ಗೆ ನೀವು ಕೊಡುವ ಆದೇಶ ಇತಿಹಾಸವಾಗಲೇ ಬೇಕು. ಈ ಮೂಲಕ ತಮ್ಮ ತೀರ್ಪನ್ನು ಇಡೀ ದೇಶ ನೋಡುವಂತಾಗಬೇಕು. ಇಲ್ಲಿ ನಾನು ಯಾರನ್ನೂ ಆರೋಪಿಗಳನ್ನಾಗಿ ಮಾಡಿ ಎಂದು ಹೇಳುತ್ತಿಲ್ಲ. ಆದ್ರೆ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿ, ಮನವಿ ಮಾಡಿಕೊಂಡರು.
ಬೆಂಗಳೂರು: ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಅವರು ಇಂದು ಬಜೆಟ್ ಮಂಡಿಸಿದ್ರೂ, ಸದನದಲ್ಲಿ ಪಾಸ್ ಆಗುವುದು ಡೌಟ್ ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಸದನದ ಲೆಕ್ಕಾಚಾರ ಸಾಕ್ಷಿಯಾಗಿದೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ವಿರೋಧದ ನಡುವೆಯೇ ಸಿಎಂ ಕುಮಾರಸ್ವಾಮಿ ಅವರು ಇಂದು ಬಜೆಟ್ ಮಂಡನೆ ಮಾಡಿದರು. ಸುಮಾರು 3 ಗಂಟೆ 10 ನಿಮಿಷಗಳ ಕಾಲ ಸಿಎಂ ಬಜೆಟ್ ಓದಿದರು. ಆದರೆ ಈ ವೇಳೆ ಸಚಿವರ ಕೈಗೆ ಬಂದ ಚೀಟಿಯಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯಬಹುದಾದ ಸ್ಫೋಟಕ ಬೆಳವಣಿಗೆಗಳ ಸುಳಿವಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಿದ್ದರು. ಆದರೂ ಸಭೆಗೆ ಕೆಲ ಶಾಸಕರು ಗೈರಾಗಿದ್ದರು. ಆದರೆ ಗೈರು ಹಾಜರಿಗೆ ಶಾಸಕರು ಕಾರಣ ನೀಡಿ ನೋಟಿಸ್‍ಗೆ ಉತ್ತರಿಸಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದರು.
ಚೀಟಿಯಲ್ಲಿ ಏನಿದೆ?
ಸಮ್ಮಿಶ್ರ ಸರ್ಕಾರ ರಚನೆ ಆದ ದಿನದಿಂದಲೂ ಸರ್ಕಾರ ಉಳಿವಿಗೆ ಸಚಿವ ಡಿಕೆ ಶಿವಕುಮಾರ್ ಅವರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಲ್ಲದೇ ರೆಸಾರ್ಟ್ ರಾಜಕೀಯದ ವೇಳೆಯೂ ಶಾಸಕರ ನೇತೃತ್ವ ವಹಿಸಿಕೊಂಡಿದ್ದರು. ಅಲ್ಲದೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾದ ಶಾಸಕರ ಮನವೊಲಿಕೆಗೆ ಬೇಕಾದ ಸಿದ್ಧತೆಯನ್ನು ಮಾಡಿದ್ದರು.
ಇಂದು ಡಿಕೆ ಶಿವಕುಮಾರ್ ಅವರ ಕೈಯಲ್ಲಿದ್ದ ಚೀಟಿಯಲ್ಲಿ ಆತೃಪ್ತ ಶಾಸಕರ ಹೆಸರು ಇದ್ದು, ಇದುವರೆಗೂ ಆತೃಪ್ತರ ಪಟ್ಟಿಯಲ್ಲಿ ಕಾಣಸಿಗದ ಹೆಸರುಗಳು ಕೂಡ ಪಟ್ಟಿಯಲ್ಲಿ ಸಿಕ್ಕಿದೆ. ಈಗಾಗಲೇ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಬಂಡಾಯ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಹೊಸದಾಗಿ ಪಟ್ಟಿಯಲ್ಲಿ ಮಾಜಿ ಸಿಎಂ ಧರಂಸಿಂಗ್ ಅವರ ಪುತ್ರ ಅಜಯ್ ಸಿಂಗ್ ಹೆಸರು ಕೂಡ ಇದ್ದು, ಇದು ಸಾಕಷ್ಟು ಕುತೂಹಲ ಮೂಡಿಸಿದೆ.
ಶಾಸಕ ಅಜಯ್ ಸಿಂಗ್ ಅವರೊಂದಿಗೆ ಜೆಡಿಎಸ್ ಪಕ್ಷದ ನಾರಾಯಣಗೌಡರ ಹೆಸರು ಕೂಡ ಇದೆ. ಮಂಡ್ಯ ಕೆಆರ್ ಪೇಟೆ ಶಾಸಕರಾಗಿರುವ ನಾರಾಯಣ ಗೌಡರನ್ನು ಕೂಡ ಕಾಂಗ್ರೆಸ್ ಕೈ ಬಿಟ್ಟ ಶಾಸಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಉಳಿದಂತೆ 3 ಶಾಸಕರ ಹೆಸರು ಡೇಂಜರ್ ಝೋನ್ ಪಟ್ಟಿಯಲ್ಲಿ ನೀಡಲಾಗಿದೆ. ಇದರಲ್ಲಿ ಶಾಸಕ ಬಿಸಿ ಪಾಟೀಲ್, ರೋಷನ್ ಬೇಗ್, ಕಂಪ್ಲಿ ಗಣೇಶ್ ಅವರ ಹೆಸರು ಕೂಡ ಇದೆ.
ಸದ್ಯ ಬಿಜೆಪಿ 104 ಸ್ಥಾನಗಳನ್ನು ಹೊಂದಿದ್ದು, ಇಬ್ಬರು ಪಕ್ಷೇತರರು ಸೇರಿದಂತೆ ಬಂಡಾಯ ಶಾಸಕರ ಸಂಖ್ಯೆಯನ್ನು ಹೆಸರಿನ ಸಮೇತ ನೀಡಲಾಗಿದೆ. ಇದರಲ್ಲಿ 6 ಪಸ್ಲ್ 3 ಎಂದು ಕೂಡ ಲೆಕ್ಕಾ ಮಾಡಲಾಗಿದೆ. ಇಂದಿನ ಕಲಾಪಕ್ಕೆ ಅಜಯ್ ಸಿಂಗ್ ಹಾಗೂ ರೋಷನ್ ಬೇಗ್ ಅವರು ಗೈರಾಗಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತರಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ಇಂತಿದೆ ಲೆಕ್ಕಾಚಾರ: ಸದ್ಯ ಬಿಜೆಪಿ 104 ಶಾಸಕರೊಂದಿಗೆ ಇಬ್ಬರು ಪಕ್ಷೇತರ ಬೆಂಬಲ ಹೊಂದಿದ್ದರೆ, ಆತೃಪ್ತ ಶಾಸಕರ ಪಟ್ಟಿಯಲ್ಲಿ 6 ಜನ ಶಾಸಕರ ಹೆಸರಿದೆ. ಇಂದು ಕಂಡು ಬಂದ ಡೇಂಜರ್ ಝೋನ್ ಪಟ್ಟಿಯಲ್ಲಿ 3 ಶಾಸಕರ ಹೆಸರಿದ್ದು, ಒಟ್ಟಾರೆ 115 ಆಗಲಿದೆ. ಹಾಲಿ ಸದನದಲ್ಲಿ 119 ಶಾಸಕರ ಬಲ (ನಾಮ ನಿರ್ದೇಶಿತರು ಸೇರಿ) ಸಮ್ಮಿಶ್ರ ಸರ್ಕಾರಕ್ಕೆ ಇದ್ದು, 9 ಶಾಸಕರು ಕೈ ಕೊಟ್ಟರೆ 110ಕ್ಕೆ ಬೆಂಬಲ ಸಂಖ್ಯೆ ಇಳಿಕೆ ಆಗಲಿದೆ. ಒಂದೊಮ್ಮೆ ಈ ಲೆಕ್ಕಾಚಾರದಂತೆ ನಡೆದರೆ ಸದನದಲ್ಲಿ ಬಜೆಟ್ ಪಾಸ್ ಆಗುವುದು ಕಷ್ಟಸಾಧ್ಯ ಆಗಲಿದೆ.
ಮೇಲಿನ ಲೆಕ್ಕಾಚಾರದಂತೆ ಸಚಿವ ಡಿಕೆ ಶಿವಕುಮಾರ್ ಅವರು ಚಿಂತನೆ ನಡೆಸಿದ್ದು, ಬಜೆಟ್ ಸದನದಲ್ಲಿ ಪಾಸ್ ಆಗಲು ಬೇಕಾದ ಸಂಖ್ಯಾಬಲ ಉಳಿಸಿಕೊಳ್ಳಲು ಚಿಂತನೆ ನಡೆಸಿದಂತೆ ಕಂಡು ಬಂತು.
ಬಳ್ಳಾರಿ: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ ಮಾರಾಮಾರಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಗಲಾಟೆ ನಡೆದ ದಿನದಂದು ಸಚಿವ ಡಿಕೆ ಶಿವಕುಮಾರ್ ಗಲಾಟೆ ನಡದೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಗಲಾಟೆ ನಡೆದ ಬಳಿಕ ಡಿಕೆ ಶಿವಕುಮಾರ್ ಅವರು ರೆಸಾರ್ಟಿಗೆ ಆಗಮಿಸಿದ್ದರು ಎಂದು ಸಚಿವ ತುಕಾರಾಂ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಘಟನೆ ನಡೆದ ದಿನ ನಾನು ರಾತ್ರಿ 10 ಗಂಟೆ ವೇಳೆಗೆ ಮಲಗಿದ್ದೆ. ಆದರೆ 4.45ರ ವೇಳೆಗೆ ಗಲಾಟೆ ನಡೆದ ಸದ್ದು ಕೇಳಿ ಹೊರಗೆ ಬಂದೆ. ಆಗ ತನ್ವೀರ್ ಸೇಠ್, ರಾಮಪ್ಪ, ರಘುಮೂರ್ತಿ ಅವರು ನಿಂತಿದ್ದರೆ ಗಣೇಶ್ ಮತ್ತೊಂದು ಕಡೆ ನಿಂತಿದ್ದರು. ಗಲಾಟೆಯ ಬಗ್ಗೆ ತಿಳಿದು ಈ ರೀತಿ ಮಾಡಬಾರದು ಎಂದು ನಾನು ಗಣೇಶ್‍ಗೆ ಹೇಳಿದೆ. ಆದರೆ ಆತ ಸಿಟ್ಟಿನಿಂದಿದ್ದ ಕಾರಣ ಹೆಚ್ಚು ಮಾತನಾಡದೇ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದೆವು. ಆ ಬಳಿಕ ಸಚಿವ ಡಿಕೆ ಶಿವಕುಮಾರ್ ಅವರು ಗಣೇಶ್‍ರನ್ನು ರೂಮ್‍ಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿದರು ಎಂದು ತಿಳಿಸಿದ್ದಾರೆ.
ನಾನು ಹೋಟೆಲಿನ ಗ್ಯಾಲರಿಗೆ ಬರುವ ವೇಳೆಗೆ ಗಲಾಟೆ ನಡೆದಿತ್ತು. ಆದ್ದರಿಂದ ಏಕೆ ಘಟನೆ ನಡೆಯಿತು ಎಂದು ನನಗೆ ತಿಳಿದಿಲ್ಲ. ಸದ್ಯ ಪಕ್ಷದ ವಿಚಾರಣೆಗೆ ಸಮಿತಿ ನೇಮಿಸಿದೆ. ಅಲ್ಲಿ ಕೂಡ ವಿವರಣೆ ನೀಡಿದ್ದೇನೆ. ಸತ್ಯ ಏನಿದೆ ಎಂದು ಹೇಳಿದ್ದೇನೆ. ಮುಂದೆ ಏನು ಮಾಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಪಕ್ಷ ಈಗಾಗಲೇ ಗಣೇಶ್ ಅವರನ್ನು ಅಮಾನತು ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಫೇಸ್‍ಬುಕ್ ಪೋಸ್ಟ್ ಮಾಹಿತಿಯಂತೆ ನಿಮ್ಮ ಸಚಿವ ಸ್ಥಾನ ಕಾರಣಕ್ಕೂ ಜಗಳ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಯಾವುದೇ ಜಾತಿ ಪ್ರಶ್ನೆ ಬರುವುದಿಲ್ಲ. ಪಕ್ಷ ಹೈಕಮಾಂಡ್ ಜವಾಬ್ದಾರಿಯನ್ನು ನೀಡಿದೆ. ಉಳಿದದ್ದು ಅವರ ವೈಯಕ್ತಿಕ ವಿಚಾರ. ಎರಡು ಕುಟುಂಬಗಳ ಜೊತೆ ಕುಳಿತು ಮಾತನಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಘಟನೆ ಬಗ್ಗೆ ಏನೂ ಮಾಡಲು ಸಾಧ್ಯವೋ ಮಾಡೋಣ. ಸಮಾಜವನ್ನ ಒಂದುಗೂಡಿಸಿಕೊಂಡು ಹೋಗಬೇಕಾಗಿದೆ ಎಂದರು.
ಇತ್ತ ಘಟನೆ ನಡೆದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಡಿಕೆ ಶಿವಕುಮಾರ್, ಯಾವ ಶಾಸಕರು ಮಾರಾಮಾರಿ ಮಾಡಿಕೊಂಡಿಲ್ಲ. ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನಾವೆಲ್ಲರು ನಿನ್ನೆ ಬಳ್ಳಾರಿಯಲ್ಲಿ ನಡೆದ ಸಭೆ ಮುಗಿಸಿಕೊಂಡು, ಅಮಿತ್ ಪಾಳ್ಯ ಅವರ ಮದುವೆ ಆರತಕ್ಷತೆಗೆ ಹೋಗಿ ವಾಪಾಸ್ಸಾಗಿದ್ದೇವೆ. ಬಳಿಕ ಎಲ್ಲಾ ಊಟ ಮಾಡಿ ಮಲಗಿದ್ದಾರೆ. ಆನಂದ್ ಸಿಂಗ್ ಅವರು ಮದುವೆಗೆ ಹೋಗಿದ್ದಾರೆ. ಸುಮ್ಮನೆ ಗಲಾಟೆಯಾಯ್ತು, ಮಾರಮಾರಿಯಾಯ್ತು ಅಂತ ಮಾಧ್ಯಮದವರೇ ಸುದ್ದಿ ಮಾಡಿಕೊಂಡಿದ್ದೀರಿ. ನಿಮಗೆ ಯಾರೋ ಮಿಸ್‍ಲೀಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.
ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ತಲೆಗೆ ಪೆಟ್ಟಾಗಿದ್ದು, ವೈದ್ಯರು 12 ಹೊಲಿಗೆ ಹಾಕಿದ್ದಾರೆ ಎಂಬ ಮಾಹಿತಿ ಅಪೋಲೋ ಆಸ್ಪತ್ರೆಯ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮೊದಲಿನಿಂದಲೂ ಭಿನ್ನ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರು ಸತ್ಯವನ್ನು ಮುಚ್ಚಿಡಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ವಿಚಾರ ಮತ್ತಷ್ಟು ಬಲಗೊಂಡಿದೆ. ಇದನ್ನು ಓದಿ:ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್
ಮೊದಲು ಸಚಿವ ಡಿಕೆ ಶಿವಕುಮಾರ್ ಅವರು ಮಾತನಾಡಿ ಆನಂದ್ ಸಿಂಗ್ ರಾತ್ರಿ ಮದುವೆಗೆ ತೆರಳಿದ್ದು, ಆ ಬಳಿಕ ಎಲ್ಲರೂ ಮಾತನಾಡಿ ತೆರಳಿದ್ದಾರೆ. ಯಾವುದೇ ಗಲಾಟೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು ಆನಂದ್ ಸಿಂಗ್ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ತಲೆಗೆ ಯಾವುದೇ ಗಾಯ ಆಗಿಲ್ಲ ಎಂದು ಎಂದಿದ್ದರು. ಆದರೆ ಈಗ ಆಸ್ಪತ್ರೆಯ ದಾಖಲೆಯಲ್ಲಿ ಬೇರೆಯೇ ಮಾಹಿತಿ ದಾಖಲಿಸಿದ್ದಾರೆ. ಇದನ್ನು ಓದಿ: ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?
ಆಸ್ಪತ್ರೆ ದಾಖಲೆ ಮಾಹಿತಿ ಪ್ರಕಾರ ಆನಂದ್ ಸಿಂಗ್ ಅವರು ಕಾರಿಗೆ ಹತ್ತುವ ವೇಳೆ ಜಾರಿ ಬಿದ್ದು ತಲೆಗೆ ಗಾಯವಾಗಿದೆ. ಆದ್ದರಿಂದ ಅವರ ತಲೆಗೆ 12 ಹೊಲಿಗೆ ಹಾಕಲಾಗಿದೆ. ಅಲ್ಲದೇ ಗಾಯದ ಬಗ್ಗೆ ತಲೆಗೆ ಸಿಟಿ ಸ್ಕ್ಯಾನ್ ತಪಾಸಣೆ ನಡೆದಿದ್ದು, ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಇದನ್ನು ಓದಿ: ಗುರು ಆನಂದ್ ಸಿಂಗ್ ಮೇಲೆ ಶಿಷ್ಯ ಗಣೇಶ್ ಅಟ್ಯಾಕ್?-ಇದು ಇನ್‍ಸೈಡ್ ಸ್ಟೋರಿ
ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ ವೈದ್ಯ ಯತೀಶ್ ಅವರು, ಶಾಸಕರೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಅವರ ಆರೋಗ್ಯದಿಂದ ಇದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ ಅವರು ಆಸ್ಪತ್ರೆಗೆ ದಾಖಲಾದ ವೇಳೆ ಯಾವ ಸ್ಥಿತಿಯಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಮಾಹಿತಿಯನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದು, ಪಕ್ಷವೇ ನನಗೆ ಸುಪ್ರೀಂ. ಆದ್ದರಿಂದ ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ಬಿಟ್ಟು ಕೊಡಲು ಕೇಳಿದರೆ ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಧರ್ಮ ಸಿಂಗ್ ಸರ್ಕಾರದ ವೇಳೆಯಲ್ಲಿ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಅಂದು 6 ಬಾರಿ ನಾನು ಶಾಸಕನಾಗಿ ಆಯ್ಕೆ ಆಗಿದ್ದೆ. ಈಗ 7ನೇ ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಸಿದ್ದರಾಮಯ್ಯ ಅವರು ಕೂಡ ನನಗೆ ಸಚಿವ ಸ್ಥಾನ ನೀಡಿರಲಿಲ್ಲ. ಆಗ ನಾನು ಬಾಯಿ ಮುಚ್ಚಿ ಸುಮ್ಮನಾಗಿ, ಕಾರ್ಯಕರ್ತನಾಗಿ ಪಕ್ಷದ ಕಾರ್ಯ ಮಾಡಿದ್ದೆ ಎಂದರು.
ಈಗಲೂ ಪಕ್ಷ ಸಚಿವ ಸ್ಥಾನ ಬಿಟ್ಟು ಕೊಡಲು ಕೇಳಿದರೆ ನಾನು ಸಿದ್ಧನಿದ್ಧೇನೆ. ನಾನು ಮಾತ್ರ ಅಲ್ಲ, ನಮ್ಮ ಪಕ್ಷದ ಎಲ್ಲಾ ಹಿರಿಯ ಶಾಸಕರು ಕೂಡ ಇದಕ್ಕೆ ಬದ್ಧರಾಗಿರುತ್ತಾರೆ ಎಂದು ಅಧಿಕಾರ ತ್ಯಾಗದ ಕುರಿತು ಸ್ಪಷ್ಟನೆ ನೀಡಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಡಿಕೆ ಶಿವಕುಮಾರ್ ಅವರನ್ನು ಸರ್ಕಾರದಿಂದ ಕೈಬಿಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೆ ಡಿಕೆಶಿ ಅವರು ಅಧಿಕಾರ ತ್ಯಾಗದ ಕುರಿತು ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವೇಳೆ ಈಗಲ್ ಟನ್ ರೆಸಾರ್ಟ್ ಸರ್ಕಾರಕ್ಕೆ ಪಾವತಿ ಮಾಡಬೇಕಾದ 883 ಕೋಟಿ ರೂ. ಬಾಕಿ ಮೊತ್ತದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರ ನೀಡಲು ನಿರಾಕರಿಸಿದರು. ಈ ವಿಷಯಕ್ಕೂ ನಮಗೂ ಸಂಬಂಧವಿಲ್ಲ, ಸರ್ಕಾರ ಈ ಕುರಿತು ಕ್ರಮಕೈಗೊಳ್ಳುತ್ತದೆ ಎಂದರು.
ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಬಿಡುಗಡೆ ಆಗಿರುವ ಅನುದಾನದ ಕುರಿತು ಚರ್ಚೆ ನಡೆಸಲು ಸಭೆ ಕರೆದಿರುವುದಾಗಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದರು. ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಶಾಸಕರಾದ ಆನಂದ್ ಸಿಂಗ್, ಭೀಮಾನಾಯಕ್, ಕಂಪ್ಲಿ ಗಣೇಶ್ ಹಾಗೂ ಸಚಿವರಾದ ತುಕಾರಾಂ, ಪಿ.ಟಿ ಪರಮೇಶ್ವರ್ ನಾಯ್ಕ್ ಸೇರಿದಂತೆ ಸಂಸದ ಉಗ್ರಪ್ಪ ಅವರು ಹಾಜರಿದ್ದರು.