ಬೆಂಗಳೂರು: ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳು ಮಂಡಿಸಿದ್ದ ವಿಶ್ವಾತಮತಯಾಚನೆ ಕುರಿತ ಚರ್ಚೆ ಇಂದು ಮುಂದುವರಿದಿದ್ದು, ಈ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮಿ ನಡುವಿನ ಚೀಟಿ ಮಾತುಕತೆ ಗಮನ ಸೆಳೆದಿತ್ತು.
ಭೋಜನ ವಿರಾಮ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು 3:30ಕ್ಕೆ ಮುಂದೂಡಿದ್ದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಎಲ್ಲಿಗೂ ತೆರಳದೆ ಕುಳಿತು ಒಬ್ಬರೆ ಕೆಲ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಅವರ ಬಳಿ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಚೀಟಿ ನೀಡಿ ಅದರಲ್ಲಿದ್ದ ಅಂಶಗಳನ್ನು ವಿವರಿಸಿದ್ದರು. ಚೀಟಿಯನ್ನು ತೆಗೆದುಕೊಂಡ ಶಿವಕುಮಾರ್ ಅದರಲ್ಲಿ ಮತ್ತೆ ಕೆಲ ಅಂಶಗಳನ್ನು ಬರೆದರು.
ಆ ಹಂತದಲ್ಲಿ ಅಲ್ಲಿಂದ ತೆರಳುತ್ತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಾಪಸ್ ಕರೆದ ಶಿವಕುಮಾರ್ ಅವರು ಎರಡು ಚೀಟಿಗಳನ್ನ ಕೈಗಿಟ್ಟರು. ಚೀಟಿಗಳನ್ನು ಪಡೆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅವುಗಳನ್ನು ಗ್ಯಾಲರಿ ಬಳಿ ಇದ್ದ ವ್ಯಕ್ತಿಗೆ ನೀಡಿದ ಕೆಲ ವಿವರಣೆಗಳನ್ನು ನೀಡಿ ಕಳುಹಿಸಿದರು.
ಸಾಮಾನ್ಯವಾಗಿ ಸದನದಲ್ಲಿ ಕೆಲ ಪ್ರಮುಖ ಪ್ರಮುಖ ವಿಚಾರಗಳನ್ನು ಚೀಟಿಯಲ್ಲಿ ಬರೆದುಕೊಟ್ಟು ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಈ ಹಿಂದೆಯೂ ಸದನ ಸದಸ್ಯರ ನಡುವೆ ನಡೆದ ಕೆಲ ಚೀಟಿ ಮಾತುಕತೆಗಳು ನೋಡುಗರ ಗಮನ ಸೆಳೆದಿತ್ತು.
ಮಧ್ಯಾಹ್ನದ ವಿರಾಮದ ಬಳಿಕ ಆರಂಭವಾದ ಚರ್ಚೆಯಲ್ಲಿ ಭಾರೀ ಆಡಳಿತ ಪಕ್ಷ ಹಾಗೂ ಮೈತ್ರಿ ನಾಯಕರ ನಡುವಿನ ವಾಕ್ ಸಮಯ ಜೋರಾಗಿತ್ತು. ಇದಕ್ಕೂ ಮುನ್ನ ಸದನದ ಹೊರಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ವಿಶ್ವಾಸ ಮತಯಾಚನೆ ನಾಳೆಗೆ ಮುಂದೂಡುವ ಕುರಿತು ಸುಳಿವು ನೀಡಿದರು. ಸದನದಲ್ಲಿ ಸ್ಪೀಕರ್ ಅವರು ಹೇಳಿದಂತೆ ನಡೆಯುತ್ತಿದೆ. ನಾನು, ಸಿಎಂ ಇಬ್ಬರೂ ಸೋಮವಾರ ವಿಶ್ವಾಸಮತ ನಡೆಸೋದಾಗಿ ಹೇಳಿದ್ವಿ. ಆದರೆ ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಏನೆಲ್ಲಾ ಬೆಳವಣಿಗೆಯಾಗಿದೆ ನೋಡಬೇಕಿದೆ. ಕೆಪಿಜೆಪಿಯ ಶಂಕರ್ ಮತ್ತು ನಾಗೇಶ್ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ನಾಳೆ ವಿಚಾರಣೆಗೆ ಬರಬಹುದು, ಅಲ್ಲದೇ ವಿಪ್ ವಿಚಾರವಾಗಿ ಗೊಂದಲವಿದೆ. ಇದು ಕೂಡ ನಾಳೆ ವಿಚಾರಣೆಗೆ ಬರಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಶ್ವಾಸಮತ ಇಂದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
– ಕೆಎಂಎಫ್ ನಲ್ಲಿ ಭಾರೀ ಹಗರಣ
– ರೇವಣ್ಣ ವರ್ಗಾವಣೆ ಮಂತ್ರಿ
ಹಾಸನ: ಸದನದಲ್ಲಿ ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದಂತೆ ಇಂದು ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಅಪ್ಪ-ಮಕ್ಕಳು ಮುಂಬೈ ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.
ನಗರದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಯಾವುದೋ ಕಾಲದಿಂದಲೂ ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ನೇರವಾಗಿ ಹೇಳಿದ್ದೆ. ಈಗ ಅವರು ಇದನ್ನು ಅರ್ಥೈಸಿಕೊಂಡಂತೆ ಕಾಣಿಸುತ್ತಿದೆ. ಆದರೆ ಈಗಲೂ ಕೂಡ ಸಿದ್ದರಾಮಯ್ಯ ಅವರ ಮೇಲೆಯೇ ಆರೋಪ ಮಾಡಲಾಗುತ್ತಿದೆ. ಜೆಡಿಎಸ್ ಪಕ್ಷದಿಂದ ಹೋದ ಶಾಸಕರ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕೆಎಂಎಫ್ ನಲ್ಲಿ ಭಾರೀ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಹಗರಣಗಳು ಹಾಸನ ಜಿಲ್ಲೆಯ ರೈತರಿಗೆ ಮಾರಕವಾಗಿದೆ. ಕೆಎಂಎಫ್ ಆಡಳಿತ ಮಂಡಳಿಯಿಂದ ಒಂದು ಲೀಟರ್ ಗೆ 23 ರೂ. ನೀಡುತ್ತಿದೆ. ಮಂಡ್ಯ, ಮೈಸೂರಿನಲ್ಲಿ 25 ರೂ. ಲೀಟರ್ ನೀಡಲಾಗುತ್ತಿದೆ. ಒಬ್ಬ ರೈತನಿಗೆ ಎರಡು ರೂಪಾಯಿ ಕಡಿಮೆ ಹಣ ನೀಡುತ್ತಿದ್ದಾರೆ. ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿದೆ. ದಿನಕ್ಕೆ 20 ಲಕ್ಷ ರೂ. ತಿಂಗಳಿಗೆ 6 ಕೋಟಿ ರೂ. ರೈತರಿಗೆ ನಷ್ಟ ಆಗುತ್ತಿದೆ ಎಂದರು.
ಸಚಿವ ರೇವಣ್ಣ ಅವರಿಗೆ ಕೆಎಂಎಫ್ ಮೇಲೆ ವ್ಯಾಮೋಹವಿದೆ. ಅದು ಕೂಡ ಸರ್ಕಾರ ಅಭದ್ರತೆಗೆ ಇದು ಒಂದು ಕಾರಣವಾಗಿದ್ದು, ಆದರೂ ಅವರು ತಮ್ಮ ಹಳೇ ಚಾಳಿ ಬಿಟ್ಟಿಲ್ಲ. ಸರ್ಕಾರ ಸಂಕಷ್ಟದಲ್ಲಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವರ ಸ್ಥಾನ ಬದಲಾಗಿದ್ದು, ಅವರು ವರ್ಗಾವಣೆ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಸುಪ್ರೀಂಕೋರ್ಟ್ ನ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯಪಾಲರು ಕೂಡಲೇ ತಡೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಕಳೆದುಕೊಂಡಿದೆ. ಅಲ್ಲದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿಯಾಗಲ್ಲ ಎಂದು ಜನ ಮನಗಂಡಿದ್ದಾರೆ. ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಜನಪರವಾದ ಕೆಲಸವನ್ನು ಮಾಡುತ್ತದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬೈ: ಬೆಳಗ್ಗಿನಿಂದ ರಿನೈಸನ್ಸ್ ಹೊಟೇಲ್ ಮುಂದೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಕೆ ಶಿವಕುಮಾರ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೋಟೆಲ್ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಸಮೀಪ 144 ಸೆಕ್ಷನ್ ಹಾಕಿ ನಿಷೇಧಾಜ್ಞೆ ವಿಧಿಸಿದ್ದರು. ಆದರೂ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತತ 6 ಗಂಟೆಗಳ ಕಾಲ ಹೋಟೆಲ್ ಮುಂಭಾಗ ಪ್ರತಿಭಟಿಸಿದ್ದ ಅವರನ್ನು ಪೊಲೀಸರು ತಮ್ಮ ವ್ಯಾನಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಡಿಕೆಶಿ ಜೊತೆ ಸಚಿವ ಜಿಟಿಡಿ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದರು. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ.
ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿತ್ತು. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು.
ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದರು.
ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ಡಿಕೆಶಿ ತನ್ನ ಪಟ್ಟು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.
Karnataka Minister DK Shivakumar who after being denied entry, was sitting outside Renaissance – Mumbai Convention Centre Hotel, detained by Mumbai Police.Section 144 had been imposed in the area. pic.twitter.com/dpHAObKkID
ಡಿಕೆಶಿ ಅವರ ಬೆಳಗ್ಗಿನ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಅತೃಪ್ತರು, ನಮಗೆ ಡಿಕೆಶಿ ಮೇಲೆ ಗೌರವವಿದೆ. ನಾವಿಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣ. ಹೀಗಾಗಿ ಮುಂಬೈನಲ್ಲಿ ಅವರಿಗೆ ಅವಮಾನ ಆಗುವುದು ನಮಗೆ ಸರಿ ಅನ್ನಿಸುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದರು.
ಮುಂಬೈ: ಮಳೆ ಬಂದರೂ ಕೊಡೆ ಹಿಡಿದುಕೊಂಡೇ ಸಚಿವ ಡಿ.ಕೆ ಶಿವಕುಮಾರ್ ಅವರು ಮುಂಬೈನ ರೆನೈಸನ್ಸ್ ಹೋಟೆಲ್ ಮುಂಭಾಗ ಪಟ್ಟು ಬಿಡದೆ ಕುಳಿತಿದ್ದಾರೆ.
ಅತೃಪ್ತ ಶಾಸಕರನ್ನು ಭೇಟಿಯಾಗದೇ ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯಲ್ಲ ಎಂದು ಹಠ ಹಿಡಿದಿರುವ ಡಿಕೆಶಿ, ಬೆಳಗ್ಗಿನಿಂದಲೂ ಹೋಟೆಲ್ ಮುಂಭಾಗದಿಂದ ಕದಲಿಲ್ಲ. ಹೋಟೆಲ್ ಒಳಗಡೆ ಬಿಡುವವರೆಗೂ ನಾನು ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದಾರೆ. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿಲ್ಲ.
ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿದೆ. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅತೃಪ್ತರು, ನಮಗೆ ಡಿಕೆಶಿ ಮೇಲೆ ಗೌರವವಿದೆ. ನಾವಿಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣ. ಹೀಗಾಗಿ ಮುಂಬೈನಲ್ಲಿ ಅವರಿಗೆ ಅವಮಾನ ಆಗುವುದು ನಮಗೆ ಸರಿ ಅನ್ನಿಸುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಒಂದೆಡೆ ಅತೃಪ್ತರು ಡಿಕೆಶಿ ಭೇಟಿಗೆ ನಿರಾಕರಿಸಿದರೆ ಇತ್ತ ಸಚಿವರು ನಾನು ಶಾಸಕರನ್ನು ಭೇಟಿ ಮಾಡಿಯೇ ಬೆಂಗಳೂರಿಗೆ ವಾಪಸ್ಸಾಗುವುದು ಎಂಬ ಹಠಕ್ಕೆ ಬೀಳುವ ಮೂಲಕ ಮುಂಬೈನಲ್ಲಿ ಭಾರೀ ಹೈಡ್ರಾಮಾ ನಡೆಯುತ್ತಿದೆ.
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಪಕ್ಷದ ಶಾಸಕರ ಮನವೊಲಿಸಿ ಕರೆತರಲು ನಾಳೆ ಮುಂಬೈಗೆ ತೆರಳುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲವನ್ನು ಆರಂಭ ಮಾಡಿರುವ ಬಿಜೆಪಿ ಶಾಸಕರು ಈಗ ಏನು ತಿಳಿಯದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ನನ್ನ ಸ್ನೇಹಿತರು, ಶಾಸಕರನ್ನು ಭೇಟಿ ಮಾಡಲು ನಾಳೆ ಮುಂಬೈಗೆ ತೆರಳುತ್ತೇನೆ. ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರು. ಪಕ್ಷ ಸಂಕಷ್ಟದಲ್ಲಿ ಇದ್ದ ವೇಳೆ ಅವರು ಹೆಗಲು ನೀಡಿ ನಿಂತಿದ್ದರು. ಆದರೆ ಇಂದು ಅವರು ಅಸಮಾಧಾನ ಹೊಂದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು.
ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಶಾಸಕರು ಹೇಳಿದ್ದಾರೆ. ಅದರಲ್ಲೂ ಸೋಮಶೇಖರ್ ಅವರು ಪಕ್ಷದ ಪರ ಸಂಕಷ್ಟದ ಸಮಯದಲ್ಲಿ ಕೆಲಸ ಮಾಡಿದ್ದರು. ಅವರೊಂದಿಗೆ ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಮಾತನಾಡುವ ಅಗತ್ಯವಿದೆ. ಆದ್ದರಿಂದ ನಾನು ಅವರ ಭೇಟಿಗೆ ತೆರಳುತ್ತೇನೆ ಎಂದರು. ಅಲ್ಲದೇ ಇದೇ ಸಂದರ್ಭದಲ್ಲಿ ರಿವರ್ಸ್ ಆಪರೇಷನ್ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರು ಏನು ಮಾತನಾಡುತ್ತಾರೆ ಮಾತನಾಡಲಿ. ಜನರನ್ನು ತಪ್ಪು ದಾರಿಗೆ ಎಳೆಯುವ ಅವರ ಯತ್ನ ಸಫಲ ಆಗುವುದಿಲ್ಲ ಎಂದರು.
ಕೆಲವರಿಗೆ ಕೆಲವು ಸಮಸ್ಯೆಗಳಿರುತ್ತವೆ, ಹಾಗೆಯೇ ನನಗೂ ಹೊಟ್ಟೆ ನೋವು ಇದ್ದು, ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ಅದರಂತೆ ಶಾಸಕರಿಗೂ ಕೆಲವು ಅಸಮಾಧಾನಗಳಿವೆ. ಶಾಸಕ ಸ್ಥಾನಕ್ಕೆ ಆಯ್ಕೆ ಆಗಿರುವ 224 ಮಂದಿಯೂ ನನಗೆ ಸ್ನೇಹಿತರಾಗಿದ್ದು, ಎಲ್ಲರೂ ನನ್ನ ಬಳಿ ಅವರ ಕೆಲಸ ಮಾಡಿಕೊಳ್ಳಲು ಬರುತ್ತಾರೆ. ಆದರೆ ನಾನು ಎಂದು ಅವರ ಬಳಿ ಅಭಿವೃದ್ಧಿ ವಿಚಾರ ಬಿಟ್ಟು ರಾಜಕೀಯ ಮಾತನಾಡಿಲ್ಲ. ಯಾರು ಏನು ಮಾತನಾಡುತ್ತಾರೆ ಎಲ್ಲವನ್ನು ನಾನು ಹೇಳಿಕೊಳ್ಳುತ್ತೇನೆ ಎಂದರು.
ಬೆಂಗಳೂರು: ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಭಾವುಟ ಹಾರಿಸಿರುವ 13 ಶಾಸಕರು ಸರ್ಕಾರಕ್ಕೆ ಮುಳುವಾಗಿದ್ದಾರೆ. ಇತ್ತ ರಾಜೀನಾಮೆ ಕೊಟ್ಟಿರುವ ಶಾಸಕರ ಈ ನಿರ್ಧಾರಕ್ಕೆ ಕಾರಣಗಳು ಏನು ಎಂಬುವುದು ಕೂಡ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಆರಂಭಗೊಂಡ ಜಾರಕಿಹೊಳಿ ರಾಜಕೀಯ ವೈರುಧ್ಯ 13 ಶಾಸಕರ ರಾಜೀನಾಮೆವರೆಗೂ ಬಂದಿದ್ದು, ಈ ಅವಧಿಯ ಬೆಳವಣಿಗೆಗಳು ಶಾಸಕರ ಪ್ರಮುಖ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ. ಪ್ರಮುಖವಾಗಿ ಬಂಡಾಯ ಶಾಸಕರ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ರಮೇಶ್ ವಿರುದ್ಧ ನಿಂತ ಸಚಿವ ಡಿಕೆ ಶಿವಕುಮಾರ್ ಅವರು ನಿಂತಿದ್ದೆ ಕಾರಣ ಎನ್ನಲಾಗಿದೆ. ಅಲ್ಲದೇ ಇದೇ ವೇಳೆ ಸಚಿವ ಸ್ಥಾನದಿಂದ ಕಿತ್ತು ಹಾಕಿ ಅವಮಾನ ಮಾಡಿದ್ದು, ಪಿಎಲ್‍ಡಿ ಬ್ಯಾಂಕ್ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು ಕೂಡ ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್‍ನಿಂದ ದೂರ ಮಾಡಿತ್ತು. ಆ ಬಳಿಕ ಸಹೋದರ ಸತೀಶ್ ಜಾರಕಿಹೊಳಿಗೆ ಮಣೆ ಹಾಕಿ, ಸಾಹುಕಾರ ಹೋದ್ರೆ ಹೋಗ್ಲಿ ನಷ್ಟ ಇಲ್ಲ ಎಂಬ ಸಿದ್ದು ಧೋರಣೆಯೂ ರಾಜೀನಾಮೆಗೆ ಕಾರಣ ಎನ್ನಲಾಗಿದೆ.
ಇಂದಿನ ಶಾಸಕ ರಾಜೀನಾಮೆ ನಡೆಯಲ್ಲಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರಿಗೆ ರಾಜೀನಾಮೆಗೆ ಪ್ರಮುಖ ಕಾರಣ ಬೆಂಗಳೂರಿನಲ್ಲಿ ಕಿರಿಯರಿಗೆ ಮಣೆ ಹಾಕಿ ಸಚಿವ ಸ್ಥಾನ ನಿರಾಕರಿಸಿದ್ದು. ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟಾದರು ಸಿದ್ದರಾಮಯ್ಯ ಹಾಗೂ ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ನಿರ್ಲಕ್ಷ್ಯ ಮಾಡಿದ್ದರು. ಅಸಮಾಧಾನವಾಗಿದ್ರೂ ಮನವೊಲಿಸಲು ಹೈಕಮಾಂಡ್ ಯಾವುದೇ ಪ್ರಯತ್ನ ಮಾಡಿಲ್ಲ. ಇದರಿಂದ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಬಿಜೆಪಿಯಲ್ಲಿ ನನಗೆ ಮತ್ತು ಮಗಳಿಗೆ ಭವಿಷ್ಯ ಇದೆ ಎನ್ನುವ ಲೆಕ್ಕಾಚಾರ ಹಾಗೂ ಸಿದ್ದರಾಮಯ್ಯ ಆಂಡ್ ಟೀಂಗೆ ಬಿಸಿ ಮುಟ್ಟಿಸಲು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಎಚ್ ವಿಶ್ವನಾಥ್ ರಾಜೀನಾಮೆ ಜೆಡಿಎಸ್ ವರಿಷ್ಠರಿಗೆ ಶಾಕ್ ನೀಡಿದೆ. ಸಿದ್ದರಾಮಯ್ಯ ವಿರುದ್ಧ ತಗೊಡೆ ತಟ್ಟಿ ರಾಜೀನಾಮೆಗೆ ನಿರ್ಧಾರ ಮಾಡಿರುವ ವಿಶ್ವನಾಥ್ ಅವರು, ಸಮನ್ವಯ ಸಮಿತಿಯಿಂದ ದೂರ ಇಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದರು. ಪಕ್ಷದ ಅಧ್ಯಕ್ಷರಾದರು ಪದೇ ಪದೇ ಅವರಿಗೆ ಅವಮಾನ ಎದುರಾಗಿತ್ತು. ಇದರಿಂದ ಬೇಸತ್ತು ಪದತ್ಯಾಗ ನಿರ್ಧಾರ ಮಾಡಿದ್ರು. ಅಲ್ಲದೇ ತಮ್ಮ ಮತ್ತು ಮಗನ ಭವಿಷ್ಯಕ್ಕಾಗಿ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಮೂರು ಬಾರಿ ಸಂಪುಟ ವಿಸ್ತರಣೆ ಆದರೂ ಸಚಿವ ಸ್ಥಾನ ಆಸೆ ಹೊಂದಿದ್ದ ಬಿಸಿ ಪಾಟೀಲ್ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ದೋಸ್ತಿಗಳು ಮಂತ್ರಿಗಿರಿ ನೀಡದ ಕಾರಣ ಬಿ.ಸಿ ಪಾಟೀಲ್ ರಾಜೀನಾಮೆ ನಿರ್ಧಾರಕ್ಕೆ ಮುಂದಾಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‍ನಿಂದ ಒಂದು ಕಾಲು ಹೊರಗೇ ಇಟ್ಟಿರುವ ಬಿಸಿ ಪಾಟೀಲ್ ಅವರಿಗೆ ನಿಗಮ ಮಂಡಳಿಯಲ್ಲೂ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ನಂಬಿ ಕೂತರೆ ಭವಿಷ್ಯ ಇಲ್ಲ ಎಂದು ನಿರ್ಧರಿಸಿ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಯಾವುದೇ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ಅವರು, ಬಿಜೆಪಿಯಿಂದಲೇ ಬಂದು ಮತ್ತೆ ಮಾತೃಪಕ್ಷಕ್ಕೆ ಹೋಗುವ ತೀರ್ಮಾನ ಮಾಡಿದ್ದು, ಬಳ್ಳಾರಿ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪವೇ ಆನಂದ್ ಸಿಂಗ್ ಸಿಟ್ಟಿಗೆ ಕಾರಣವಾಗಿತ್ತು. ಇತ್ತ ಕಂಪ್ಲಿ ಗಣೇಶ್ ಬಡಿದಾಟದಲ್ಲೂ ಪಕ್ಷದ ಬೆಂಬಲ ಅವರಿಗೆ ಸಿಕ್ಕಿರಲಿಲ್ಲ. ಪರಿಣಾಮ ಜಿಂದಾಲ್ ವಿವಾದ ನೆಪವಾಗಿಸಿ ಸಚಿವ ಸ್ಥಾನ ಸಿಗದ ಕಾರಣ ರಾಜೀನಾಮೆ ನೀಡಿದ್ದಾರೆ.
ಉಳಿದಂತೆ ಜೆಡಿಎಸ್‍ನಲ್ಲಿ ಸಿಗದ ಸ್ಥಾನಮಾನ, ಸಚಿವ ಸ್ಥಾನ ಹಾಗೂ ಮಂಡ್ಯ ರಾಜಕೀಯದಲ್ಲೂ ಹಿಡಿತ ಸಿಗದ ಹಿನ್ನೆಲೆಯಲ್ಲಿ ನಾರಾಯಣ ಗೌಡ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಮುಖವಾಗಿ ಕೆಆರ್ ಪೇಟೆ ರಾಜಕೀಯದಲ್ಲಿ ರೇವಣ್ಣ-ಭವಾನಿ ರೇವಣ್ಣ ಹಸ್ತಕ್ಷೇಪ ಹಾಗೂ ಎಲೆಕ್ಷನ್ ರಾಜಕೀಯಕ್ಕೆ ವಿದಾಯದತ್ತ ಚಿಂತನೆ ನಡೆಸಿದ್ದ ಅವರು ಮೊದಲಿನಿಂದಲೂ ಬಿಜೆಪಿ ಸೇರುವತ್ತ ಹೆಚ್ಚು ಒಲವು ತೋರಿದ್ದರು.
ಮೈತ್ರಿ ಸರ್ಕಾರದಲ್ಲಿ ದೇವೇಗೌಡರ ಕುಟುಂಬದ ವಿಪರೀತ ಹಸ್ತಕ್ಷೇಪಕ್ಕೆ ಅಸಮಾಧಾನ ಗೊಂಡಿದ್ದ ಎಸ್.ಟಿ ಸೋಮಶೇಖರ್ ಅವರನ್ನು ಬಿಡಿಎ ಆಯುಕ್ತರ ಬದಲಾವಣೆಗೆ ಡಿಸಿಎಂ ಪರಮೇಶ್ವರ್ ಸತಾಯಿಸಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಿದ್ದರು. ಪರಿಣಾಮ ಬಿಜೆಪಿ ಸೇರಿದರೆ ಬೆಂಗಳೂರು ರಾಜಕಾರಣದಲ್ಲಿ ಭವಿಷ್ಯ ಇದೆ ಎಂಬ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ನಿಷ್ಠರಾಗಿದ್ದ ಶಾಸಕ ಮುನಿರತ್ನ ಅವರ ರಾಜೀನಾಮೆ ಪಕ್ಷದ ನಾಯಕರಿಗೆ ಅಚ್ಚರಿ ಹಾಗೂ ಆಘಾತಕಾರಿಯಾಗಿದ್ದು, ಬಿಜೆಪಿಗೆ ಸೇರಿದರೆ ಬೆಂಗಳೂರಿನಲ್ಲಿ ಉತ್ತಮ ಭವಿಷ್ಯ ಸಿಗಲಿದೆ. ದೋಸ್ತಿ ಸರ್ಕಾರದಲ್ಲಿ ಯಾವುದೇ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಸಲ್ಲಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಆರಂಭದಿಂದಲೂ ಸಚಿವ ಸ್ಥಾನ ಮೇಲೆ ಕಣ್ಣಿಟ್ಟಿದ್ದ ಶಿವರಾಂ ಹೆಬ್ಬಾರ್ ಅವರಿಗೆ ಪಕ್ಷದ ನಾಯಕರು ಸಚಿವ ಸ್ಥಾನ ನೀಡದೇ ಸತಾಯಿಸಿದ್ದರು. ಅಲ್ಲದೇ ಸಚಿವ ಸ್ಥಾನ ನೀಡದೆ ನಿಗಮ ಮಂಡಳಿ ಕೊಟ್ಟಿದ್ದು ಅಸಮಾಧಾನ ಹೆಚ್ಚಾಗಲು ಕಾರಣವಾಗಿತ್ತು. ಮೊದಲಿನಿಂದಲೂ ಬಿಜೆಪಿ ಕಡೆ ಹೆಚ್ಚು ಒಲವು ಹೊಂದಿದ್ದ ಅವರು ಉತ್ತರ ಕನ್ನಡದಲ್ಲಿ ಸೇಫ್ ಎಂಬ ಮುಂದಾಲೋಚನೆಯೊಂದಿಗೆ ಬಿಜೆಪಿಗೆ ಸೇರಲು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ರಾಜಕೀಯ ಗುರು ರಮೇಶ್ ಜಾರಕಿಹೊಳಿ ಹಾದಿಯಲ್ಲೇ ಸಾಗಿರುವ ಮಹೇಶ್ ಕುಮಟಳ್ಳಿ ಅವರು ಗುರು ಆದೇಶದಂತೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಮೇಶ್ ಹಾರಕಿಹೊಳಿಗೆ ಹೈಕಮಾಂಡ್ ಅವಮಾನ ಮಾಡಿದ್ದರಿಂದ ರಮೇಶ್‍ಗೆ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
8 ತಿಂಗಳ ಮೊದಲೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡ್ತೀವಿ ಎಂದು ಹೇಳಿ ಕಾಂಗ್ರೆಸ್ ನಾಯಕರು ಕೈಕೊಟ್ಟಿದ್ದರು. ರಮೇಶ್ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅವರು, ಬಿಎಸ್‍ವೈಗೆ ಮೊದಲೇ ನೀಡಿದ್ದ ಮಾತಿನಿಂತೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಬಿಜೆಪಿಯಿಂದ ಒಳ್ಳೆ ಭವಿಷ್ಯ ಇದೆ ಎಂಬ ಕಾರಣದಿಂದ ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಆಪ್ತವಲಯದಲ್ಲಿದ್ದರೂ ಕೆ.ಜೆ. ಜಾರ್ಜ್ ಜೊತೆ ಮನಸ್ತಾಪ ಅವರ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿತ್ತು. ಸಿದ್ದರಾಮಯ್ಯ ಹೆಚ್ಚು ಕೆಜೆ ಜಾರ್ಜ್ ಮತ್ತು ಭೈರತಿ ಸುರೇಶ್‍ಗೆ ಮಣೆ ಹಾಕಿದ್ದು ಭೈರತಿ ಬಸವರಾಜ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಜೆಡಿಎಸ್ ಪಕ್ಷದ ನಾಯಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಶಾಸಕ ಗೋಪಾಲಯ್ಯ ಅವರು ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಯ ಅಸಮಾಧಾನ ಹೊಂದಿದ್ದರು. ಮುಂದಿನ ಭವಿಷ್ಯವನ್ನು ನೋಡಿಕೊಂಡು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕುನಿಯಿಂದ ನಾವು ಸೋತ್ತಿದ್ದೇವೆ ಎಂದು ಗೊತ್ತಾಯಿತು ಎಂದು ಶಾಸಕ ಶ್ರೀರಾಮುಲು ಅವರು ಸಚಿವ ಡಿಕೆ ಶಿವಕುಮಾರ್ ಅವರ ಹೆಸರು ಹೇಳದೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಇಂದು ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿಗೆ ತಲುಪಿದೆ. ಆದರೆ ಕೆಲ ನಾಯಕರು ಪ್ರಚಾರಕ್ಕೆ ಮಾತನಾಡುತ್ತಾ ನೆಗೆಟಿವ್ ಪಬ್ಲಿಸಿಟಿ ಪಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕೃಷ್ಣೆ ಬತ್ತಿ ಹೋಗಿದ್ದರೂ ಕೂಡ ಇದುವರೆಗೂ ಉಸ್ತುವಾರಿ ಸಚಿವರಾಗಿ ಒಮ್ಮೆಯೂ ಭೇಟಿ ನೀಡಿಲ್ಲ. ಜನರು ಕುಡಿಯಲು ನೀರು ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದರೆ ಇವರು ಇಲ್ಲಿ ಮಾತನಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ನಾನೇ ಸುಪ್ರೀಂ ಎಂದು ಪೋಸ್ ಕೊಟ್ಟವರು ಮೂಲೆ ಸೇರಿದ್ದಾರೆ. ಉಸ್ತುವಾರಿ ಸಚಿವರು ಯಾವ ರೀತಿ ಕೆಲಸ ಮಾಡಿದ್ದಾರೆ ಗೊತ್ತಿದೆ ಎಂದರು.
ಮಹಾಭಾರತದ ಕುರುಕ್ಷೇತ್ರದಲ್ಲಿ ಶಕುನಿಯಿಂದ ನಾವು ಸೋತಿದ್ದು ಎಂದು ಸೋತ ಬಳಿಕ ಕೌರವರಿಗೆ ತಿಳಿಯಿತು. ಕಾಂಗ್ರೆಸ್‍ಗೆ ಈಗ ಕೂಡ ಶಕುನಿ ಮಾತಿನಿಂದ ಸೋಲಾಗಿದೆ ಎಂದು ಗೊತ್ತಾಗಿದೆ. ಆದರೆ ಸಮ್ಮಿಶ್ರ ಸರ್ಕಾರ ಉರುಳಿ ಹೋದ ಬಳಿಕ ಕಾಂಗ್ರೆಸ್ ನಾಯಕರಿಗೆ ಶಕುನಿ ಮಾಮಾ ಯಾರು ಎಂಬ ಬಗ್ಗೆ ಜ್ಞಾನೋದಯ ಆಗುತ್ತೆ ಎಂದರು.
ನಿನ್ನೆಯಷ್ಟೇ ಕುಂದಗೋಳದಲ್ಲಿ ಮಾತನಾಡಿದ್ದ ಸಚಿವ ಡಿಕೆ ಶಿವಕುಮಾರ್ ಅವರು, ತಮಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿ ಆಗಿದ್ದ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷ ಸೇರಲು ಆಹ್ವಾನ ನೀಡಿದ್ದರು ಎಂದು ಪರೋಕ್ಷವಾಗಿ ಶ್ರೀರಾಮುಲು ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಇದೇ ರೀತಿ ಇಂದು ಶ್ರೀರಾಮುಲು ಅವರು ಕೂಡ ಸಚಿವ ಡಿಕೆ ಶಿವಕುಮಾರ್ ಅವರ ಹೆಸರು ಹೇಳದೆ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮುಳುಗಿರುವ ಕಾಂಗ್ರೆಸ್, ಬಿಜೆಪಿ ನಾಯಕರು ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಇಂದು ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋರಾಟ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದಂತೆ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ಅವರೊಂದಿಗೆ ಮಾತಕತೆ ನಡೆಸಿದ್ದು, ಸುಮಾರು 30 ನಿಮಿಷ ಕಾಲ ಇಬ್ಬರು ಮಾತನಾಡಿದ್ದಾರೆ. ಇದೇ ವೇಳೆ ಶ್ರೀರಾಮುಲು ಅಣ್ಣ ಎಂದು ಕರೆಯುವ ಮೂಲಕ ಡಿಕೆ ಶಿವಕುಮಾರ್ ಅವರು ಕೈಮುಗಿದು ಮಾತನಾಡಿದರು. ಡಿಕೆ ಶಿವಕುಮಾರ್ ಅವರ ಈ ಮಾತಿಗೆ ಕ್ಷಣ ಕಾಲ ಕಕ್ಕಾಬಿಕ್ಕಿಯಾದ ಶ್ರೀರಾಮುಲು ಅವರು, ಟ್ರಬಲ್ ಶೂಟರ್ ಎಂದು ಕರೆದು ಮುಗಳ್ನಕ್ಕರು. ಆ ಮೂಲಕ ಇಬ್ಬರು ಮಾತಿನಲ್ಲೇ ಕಾಲೆಳೆದುಕೊಂಡರು.
ಅಪರೇಷನ್ ಕಮಲ: ಇದಕ್ಕೂ ಮುನ್ನ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಎರಡು ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಆ ಬಳಿಕ ದೇಶದಲ್ಲಿ ನಮ್ಮ ಸರ್ಕಾರ ರಚನೆ ಆದರೆ ಕರ್ನಾಟಕದಲ್ಲೂ ನಮ್ಮದೇ ಸರ್ಕಾರ ರಚನೆ ಆಗಲಿದೆ. ಈಗಾಗಲೇ 104 ಸ್ಥಾನಗಳಲ್ಲಿ ಗೆದ್ದಿದ್ದು, ಉಪಚುನಾವಣೆ ಬಳಿಕ 106 ಆಗುತ್ತೆ. ಇದರ ಬೆನ್ನಲ್ಲೇ ಇಬ್ಬರು ಪಕ್ಷೇತರರು ಬೆಂಬಲ ಸಿಗುತ್ತೆ. ಇನ್ನು ಹೆಚ್ಚಿನ ಶಾಸಕನ್ನು ಸೆಳೆಯಲು ನಮ್ಮ ರಾಜ್ಯಾಧ್ಯಕ್ಷರು ಪ್ರಯತ್ನ ನಡೆಸಿದ್ದಾರೆ. ಸರ್ಕಾರ ರಚನೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಆಪರೇಷ್‍ನ್ ಕಮಲ ಸುಳಿವು ನೀಡಿದರು.
ಕುಮಾರಸ್ವಾಮಿ ರೆಸಾರ್ಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ವಿಶ್ರಾಂತಿ ಪಡೆಯುವುದಕ್ಕೆ ನನ್ನ ವಿರೋಧ ಇಲ್ಲಾ. ಆದರೆ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಅವರ ಆಡಳಿತ ಸೀಮಿತವಾಗಬಾರದು. ನಾವೇನೂ ತಪ್ಪು ಮಾಡಿಲ್ಲ, ಉಳಿದ ಜಿಲ್ಲೆಗಳ ಕಡೆ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಅವರು ಅಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರ ಮಾತಿನಲ್ಲೇ ಒಂದು ಅರ್ಥ ಇರುತ್ತೆ, ಮನಸ್ಸಿನಲ್ಲಿ ಮತ್ತೊಂದು ಅರ್ಥ ಇರುತ್ತೆ. ಈ ವಿಚಾರ ಎಲ್ಲರಿಗೂ ತಿಳಿದಿದ್ದು. ನಮ್ಮನ್ನು ಅಣ್ಣ ಎಂದು ಕರೆದರೆ ಏನು ಆಗುವುದಿಲ್ಲ. ಅವರ ಮಾತಿನ ಒಳಾರ್ಥ ಎಲ್ಲರಿಗೂ ತಿಳಿದಿದೆ ಎಂದರು.
ಹುಬ್ಬಳ್ಳಿ: ನಮ್ಮಲ್ಲಿ ಸಣ್ಣ ಅಸಮಾಧಾನ ಇರುವುದು ನಿಜ. ಆದರೆ ಪಕ್ಷದಲ್ಲಿಯೇ ಅವುಗಳನ್ನು ಸರಿ ಮಾಡಿಕೊಳ್ಳುತ್ತೇವೆ. ನಾನು ಮತ್ತು ರಮೇಶಣ್ಣ ಪಕ್ಷದಲ್ಲೇ ಇರುತ್ತೇವೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ಮಾಡಲ್ಲ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ. ರಮೇಶಣ್ಣ ನಾನು ಪಕ್ಷದಲ್ಲೇ ಇದ್ದೇವೆ. ಇದು ಹೈಕಮಾಂಡ್ ಅವರಿಗೂ ತಿಳಿದಿದೆ. ಆದ್ದರಿಂದ ಮಾಧ್ಯಮಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದರು.
ನಮ್ಮಲ್ಲಿ ಇರುವ ಅಸಮಾಧಾನವನ್ನು ನಾವೇ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸುಕೊಳ್ಳುತ್ತೇವೆ. ಈ ಬಗ್ಗೆ ಹೈಕಮಾಂಡ್‍ಗೆ ತಿಳಿಸಿದ್ದೇವೆ. ನಮ್ಮಲ್ಲಿ ಯಾರು ಸಂಧಾನ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ಕುಂದಗೋಳದಲ್ಲಿ ನಾವು ಗೆಲ್ಲುತ್ತೇವೆ. ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರೂ ನಮ್ಮ ನಾಯಕರಾಗಿದ್ದಾರೆ. ಯಾರು ಅಂತಕ ಪಡೆಯುವ ಅಗತ್ಯವಿಲ್ಲ ಎಂದರು.
ಇತ್ತ ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ತಮ್ಮತ್ತ ಸೆಳೆದು ಬಿಜೆಪಿಗೆ ಚಮಕ್ ನೀಡಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರ ಚುನಾವಣೆ ಬಳಿಕ ಉಳಿಯುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
– ಬೆಳಗಾವಿ ಬ್ರದರ್ಸ್ ದೊಡ್ಡವರು, ಪ್ರೀತಿ ಜಾಸ್ತಿ ಇರುತ್ತೆ
– ಸತೀಶ್ ಜಾರಕಿಹೋಳಿ ಅವರು ದೊಡ್ಡವರು, ಸಾಹುಕಾರರು
ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನದ ಬೆನ್ನಲ್ಲೇ ರಾಜ್ಯದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ವೈಮನಸ್ಸು ಹೊರ ಬಹಿರಂಗವಾಗುತ್ತಿದೆ. ಇಂದು ಸಚಿವ ಡಿಕೆ ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಚುನಾವಣಾ ಕುರಿತ ಆಕ್ಷೇಪಕ್ಕೆ ವ್ಯಂಗ್ಯವಾಡಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ನಾನು ಉಪಚುನಾವಣೆ ಜವಾಬ್ದಾರಿ ಹಿನ್ನೆಲೆಯಲ್ಲಿ ಕುಂದಗೋಳಕ್ಕೆ ತೆರಳಬೇಕಿತ್ತು. ಆದರೆ ಐಟಿ ಪ್ರಕರಣದ ಸಂಬಂಧ ವಿಚಾರಣೆ ಇರುವುದರಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದು, ನಾಳೆಯೂ ನ್ಯಾಯಾಲಯಕ್ಕೆ ಹೋಗಬೇಕು ಎಂದು ವಿವರಿಸಿದರು.
ಇದೇ ವೇಳೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರೇ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳ ಚುನಾವಣಾ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಸಮಿಕ್ಷೆಗಳನ್ನು ನೋಡಿ ನೋಡಿ ನನ್ನ ಕೂದಲು ಬೆಳ್ಳಗಾಗಿದೆ ಎಂದು ವ್ಯಂಗ್ಯವಾಡಿದರು.
ಉತ್ತರ ಕರ್ನಾಟಕದತ್ತ ಡಿಕೆಶಿ: ಮೈಸೂರು ಪ್ರಾಂತ್ಯದ ರಾಜಕೀಯದಿಂದ ಡಿಕೆ ಶಿವಕುಮಾರ್ ಉತ್ತರ ಕರ್ನಾಟಕಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬ ಅನುಮಾನ ಮಾಡಿದೆ. ಇತ್ತ ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನಾಗಿ ಹೈಕಮಾಂಡ್ ಡಿಕೆಶಿ ಅವರನ್ನು ನೇಮಕ ಮಾಡಿರುವುದಕ್ಕೆ ಸತೀಶ್ ಜಾರಕಿಹೊಳಿ ಸೇರಿದಂತೆ, ಆ ಭಾಗದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿವಕುಮಾರ್ ಅವರು, ಸತೀಶ್ ಜಾರಕಿಹೋಳಿ ಅವರು ದೊಡ್ಡವರು, ಸಾಹುಕಾರ್ ಇದ್ದಾರೆ. ನಾಯಕರು ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಜಾಸ್ತಿ ಏಕೆ ಮಾತನಾಡುತ್ತಾರೆ ಅಂದರೆ, ಅವರಿಗೆ ನಮ್ಮ ಮೇಲೆ ಜಾಸ್ತಿ ಪ್ರೀತಿ ಇರುತ್ತದೆ. ಆದ್ದರಿಂದಲೇ ಅವರು ನನ್ನನ್ನು ನೆನೆಸಿಕೊಳ್ಳುತ್ತಾರೆ. ಅಲ್ಲದೇ ಅವರು ನಾಯಕರು ನಾವು ಸಾಮಾನ್ಯ ಪ್ರಜೆಗಳು. ಪಕ್ಷ ನೀಡಿದ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಿಸುತ್ತಿದ್ದೇನೆ ಎಂದರು. ಇದೇ ಸಮಯದಲ್ಲಿ ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೋಳಿ ಬೆಂಗಳೂರಿನಲ್ಲಿ ಇದ್ದಾರಾ? ಇದ್ದರೆ ಅವರೊಂದಿಗೆ ಮಾತನಾಡುತ್ತೇನೆ. ಬೆಂಗಳೂರಲ್ಲೇ ಇದ್ದರೆ ಕಾಲ್ ಮಾಡಿ ಮಾತನಾಡುತ್ತೇನೆ ಎಂದು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು.
ಸಚಿವ ಶಿವಳ್ಳಿ ಅವರು ನಾನು ಉತ್ತಮ ಸ್ನೇಹಿತರು. ಅವರನ್ನು ಸೋನಿಯಾ ಗಾಂಧಿ ಅವರ ಬಳಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರ್ಪಡೆ ಮಾಡಿದ್ದು ನಾನು. ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲು ನನ್ನ ಕುಟುಂಬಕ್ಕೆ ನಾನು ಅನ್ಯಾಯ ಮಾಡುತ್ತಿದ್ದೇನೆ. ಕುಟುಂಬದೊಂದಿಗೆ ಪ್ರವಾಸ ಮಾಡುವ ನಿರ್ಧಾರ ಮಾಡಿದ್ದೆ. ಆದರೆ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದ ಪರಿಣಾಮ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾರು ವಿರೋಧಿಗಳು ಇಲ್ಲ, ಎಲ್ಲರೂ ನನ್ನ ಸ್ನೇಹಿತರೇ ಎಂದರು.