Tag: ಸಚಿವ ಡಾ.ಕೆ ಸುಧಾಕರ್

  • ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ- ವಲಯವಾರು ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚನೆ

    ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ- ವಲಯವಾರು ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚನೆ

    – ಬೂತ್ ಮಟ್ಟದ ಕಾರ್ಯಪಡೆ ರಚನೆ, ತರಬೇತಿ, ಸಮೀಕ್ಷೆಗೆ ಕಾಲಮಿತಿ ನಿಗದಿ
    – ವಾರದೊಳಗೆ ಮಾದರಿಗಳು ಬಾಕಿ ಉಳಿಯದಂತೆ ನೋಡಿಕೊಳ್ಳಿ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದು, ಅದರನ್ವಯ ಕಾರ್ಯ ನಿರ್ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಲಯವಾರು ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದರು.

    ಎರಡು ತಾಸಿಗೂ ಹೆಚ್ಚು ಕಾಲ ಅಧಿಕಾರಗಳ ಜೊತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಮಾಹಿತಿ ಪಡೆದ ಅವರು, ನಿರ್ದಿಷ್ಟ ಹೊಣೆಗಾರಿಕೆ ವಹಿಸಿಕೊಂಡಿರುವ ಅಧಿಕಾರಿಗಳು ಇತರೆ ಸಹೋದ್ಯೋಗಿಗಳ ಜೊತೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಲಾಕ್‍ಡೌನ್ ಅವಧಿ ಮುಕ್ತಾಯಗೊಳ್ಳುವ ಮುನ್ನ ಬೂತ್ ಮಟ್ಟದಲ್ಲಿ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಸಮಿತಿಗಳ ರಚನೆ, ತರಬೇತಿ ಪ್ರಕ್ರಿಯೆಯನ್ನು ಒಂದೆರಡು ದಿನಗಳಲ್ಲಿ ಮುಗಿಸಬೇಕು. ನಂತರ ಸಮಿತಿ ಸದಸ್ಯರು ತಮಗೆ ನಿಗದಿಗೊಳಿಸಿರುವ ಬೂತ್‍ಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು ತಿಳಿಸಿದರು.

    ಸಮೀಕ್ಷೆ ವೇಳೆ ಐಎಲ್‍ಐ ಮತ್ತು ಸಾರಿ ಪ್ರಕರಣಗಳ ತಪಾಸಣೆ ನಡೆಸಿ ರೋಗ ಲಕ್ಷಣ ಆಧರಿಸಿ ಅವರನ್ನು ಹೋಮ್ ಐಸೋಲೇಷನ್, ಕೋವಿಡ್-19 ಕೇರ್ ಸೆಂಟರ್ ಮತ್ತು ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು. ಮಾರ್ಗಸೂಚಿ ಬಗ್ಗೆ ಸಮಿತಿ ಸದಸ್ಯರಿಗೆ ತರಬೇತಿ ಸಮಯದಲ್ಲೇ ಮನವರಿಕೆ ಮಾಡಿಕೊಡಬೇಕು. ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಸದಸ್ಯರಿಗೆ ಒದಗಿಸಬೇಕು. ಅಂಬುಲೆನ್ಸ್ ಒದಗಿಸುವುದು ಸಮಿತಿಯ ಜವಾಬ್ದಾರಿ ಆಗಬೇಕು. ಸಂಪರ್ಕಿತರ ಪತ್ತೆ ಕಾರ್ಯವೂ ಮರು ಆರಂಭ ಆಗಬೇಕು ಎಂದು ತಿಳಿಸಿದರು.

    ವಲಯವಾರು ಉಸ್ತುವಾರಿ ಅಧಿಕಾರಿಗಳು ಪ್ರತಿದಿನ ಈ ಎಲ್ಲ ಕೆಲಸಗಳ ಮೇಲೆ ನಿಗಾವಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಜೊತೆಗೆ ತಮ್ಮ ವ್ಯಾಪ್ತಿಗೆ ಸೇರಿರುವ ಲ್ಯಾಬ್ ಗಳ ಪರೀಕ್ಷೆ ಮತ್ತು ಕಾರ್ಯ ನಿರ್ವಹಣೆ ಮೇಲೂ ನಿಗಾ ಇಡಬೇಕು. ಇನ್ನೊಂದು ವಾರದೊಳಗೆ ಯಾವುದೇ ಸ್ಯಾಂಪಲ್ ಬಾಕಿ ಇಲ್ಲದಂತೆ ನೋಡಿಕೊಳ್ಳಬೇಕು. ಇದರ ಸಮನ್ವಯವನ್ನು ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಕೊಳಚೆ ಪ್ರದೇಶ ಮತ್ತು ಹೋಮ್ ಕ್ವಾರಂಟೈನ್ ಸೌಲಭ್ಯಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ಪಾಸಿಟಿವ್ ಆದವರನ್ನು ಸರ್ಕಾರಿ ವ್ಯವಸ್ಥೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡುವ ಕೆಲಸ ಆಗಬೇಕು. ಇದಕ್ಕಾಗಿ ಮುಂಬೈನ ಧಾರಾವಿಯಲ್ಲಿ ಅಳವಡಿಸಿಕೊಂಡಿರುವ ರೀತಿಯ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.

    ವಲಯವಾರು ಅಗತ್ಯವಿರುವ ವಾಹನ ಮತ್ತು ಸಿಬ್ಬಂದಿ ಕೊರತೆಯನ್ನು ಬಿಬಿಎಂಪಿ ಆಯುಕ್ತರು ನಿರ್ವಹಿಸಬೇಕು. ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಕೊರತೆ ನಿವಾರಿಸುವ ಕೆಲಸವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ನೋಡಿಕೊಳ್ಳಬೇಕು ಎಂದು ಆದೇಶಿಸಿದರು.

  • ರಾಜ್ಯದಲ್ಲಿ ಇಂದು 1,843 ಮಂದಿಗೆ ಸೋಂಕು- 25 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ರಾಜ್ಯದಲ್ಲಿ ಇಂದು 1,843 ಮಂದಿಗೆ ಸೋಂಕು- 25 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

    -ಕೊರೊನಾ ಸೋಂಕಿಗೆ 30 ಮಂದಿ ಬಲಿ
    -ಬೆಂಗಳೂರಿನಲ್ಲಿ 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಬೆಂಗಳೂರು: ರಾಜ್ಯದಲ್ಲಿ ಇಂದು 1,843 ಮಂದಿಗೆ ಕೊರೊನಾ ಪಾಟಿಸಿಟಿವ್ ದೃಢವಾಗಿದ್ದು, 30 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 15,880 ಕೊರೊನಾ ಟೆಸ್ಟ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಟೆಸ್ಟ್ ಪ್ರಮಾಣ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಬೆಂಗಳೂರಿನಲ್ಲಿ 981 ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿದೆ. ಇಂದು 10 ಮಂದಿ ಬೆಂಗಳೂರಿನಲ್ಲಿ ಬಲಿಯಾಗಿದ್ದು, ಸಾವಿನ ಸಂಖ್ಯೆ 154ಕ್ಕೇರಿದೆ. ಅಲ್ಲದೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 25,317 ಕ್ಕೇರಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.58, ಬೆಂಗಳೂರಿನಲ್ಲಿ ಶೇ. 1.51 ರಷ್ಟಿದೆ.

    ಕೋವಿಡ್ ಕೇರ್ ಸೆಂಟರ್ ಮೂಲಕ ಬೆಂಗಳೂರಿನಲ್ಲಿ ಮುಂದಿನ 2-3 ದಿನಗಳಲ್ಲಿ 10 ಸಾವಿರ ಬೆಡ್‍ಗಳನ್ನು ಸಿದ್ಧ ಮಾಡಿಸಲಿದ್ದೇವೆ ಎಂದು ಸಚಿವ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ 6,600 ಬೆಡ್ ಗಳನ್ನು ಸಿದ್ಧ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಬೆಡ್‍ಗಳನ್ನು ನೀಡುವುದಾಗಿ ಸರ್ಕಾರಕ್ಕೆ ಅಭಯ ನೀಡಿದ್ದವು. ಇದರ ಅನ್ವಯ ನಮಗೆ ನಗರದಲ್ಲಿ 3 ಸಾವಿರ ಬೆಡ್ ಗಳು ಲಭ್ಯವಿದೆ. ಆದರೆ 156 ಬೆಡ್‍ಗಳು ಮಾತ್ರ ಭರ್ತಿ ಆಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸಚಿವ ಆರ್.ಅಶೋಕ್ ಅವರಿಗೆ ಸಿಎಂ ವಹಿಸಿದ್ದಾರೆ ಎಂದು ತಿಳಿಸಿದರು.

    ಬೆಂಗಳೂರಿನ 17 ಮೆಡಿಕಲ್ ಕಾಲೇಜುಗಳಲ್ಲಿ 2,000 ಜನ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಸ್ ಔಟ್ ಆಗುತ್ತಿದ್ದಾರೆ. ಅವರು ಪಾಸ್ ಔಟ್ ಆಗುತ್ತಿದಂತೆ ಹೌಸ್ ಸರ್ಜನ್ ಆಗಿ ಕೋವಿಡ್ ಸರ್ವಿಸ್ ಬಳಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ. ಪೋಸ್ಟ್ ಗ್ರಾಜುಯೇಶನ್‍ನಲ್ಲಿ ನೀಟ್ ಎಗ್ಸಾಂ ಬರೆಯುವವರು, ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದರೆ 5 ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

    1918 ರಲ್ಲಿ ಸ್ಪ್ಯಾನಿಷ್ ಫ್ಲೂ ಬಂದಾಗ 102 ವರ್ಷದ ಹಿಂದೆ ನೋಟಿಸ್ ನೀಡಿದ್ದು ನನಗೆ ಸಿಕ್ಕಿದೆ. 102 ವರ್ಷಗಳ ಹಿಂದೆ ಇದೇ ರೀತಿ ಸ್ವಚ್ಚತೆ, ಸ್ಯಾನಿಟೈಸ್ ಬಗ್ಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಿದ್ದಾರೆ. ಈಗ ರಾಜ್ಯದ ಜನರು ಸಂಕಷ್ಟದಲ್ಲಿದ್ದು, ಸರ್ಕಾರ ಅವರ ನೆರವಿಗೆ ಬರಲು ಕಾರ್ಯ ಪ್ರವೃತ್ತಿಯಾಗಿದ್ದೇವೆ. ಜನರು ಕೂಡ ಸಹಕಾರ ನೀಡಿ ಸೋಂಕಿನ ಕುರಿತು ಮತ್ತಷ್ಟು ಜಾಗೃತಿ ವಹಿಸಬೇಕಿದೆ ಎಂದು ಮನವಿ ಮಾಡಿದರು.

    ಕೋವಿಡ್ ವಾರಿಯರ್ಸ್ ಸಂಬಳ ದುಪ್ಪಟ್ಟು: ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಬಿ ಮತ್ತು ಸಿ, ಡಿ ಗ್ರೂಪ್ ನೌಕರರ ಸಂಬಳವನ್ನು ದುಪ್ಪಟ್ಟು ಮಾಡುವ ಚಿಂತನೆ ಮಾಡಿದ್ದೇವೆ. ಸರ್ಕಾರದ ಹಂತದಲ್ಲಿ ಸಿಎಂ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಳೆದ 120 ದಿನಗಳಿಂದ ಆರೋಗ್ಯ ಸಿಬ್ಬಂದಿ ಶ್ರಮ ವಹಿಸುತ್ತಿದ್ದು, ಅವರ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಾವೆಲ್ಲರೂ ಸೇರಿ ಆ ಕೆಲಸ ಮಾಡೋಣ, ಅವರಿಗೆ ನೈತಿಕ ಬೆಂಬಲ ನೀಡೋಣ ಎಂದು ಸಚಿವರು ಮನವಿ ಮಾಡಿದರು.

  • ಶಿಷ್ಯವೇತನಕ್ಕಾಗಿ ಭಿಕ್ಷೆ ಬೇಡಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

    ಶಿಷ್ಯವೇತನಕ್ಕಾಗಿ ಭಿಕ್ಷೆ ಬೇಡಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

    – ಪ್ರತಿಭಟನೆ ವೇಳೆ ಕುಸಿದು ಬಿದ್ದ ವೈದ್ಯ ವಿದ್ಯಾರ್ಥಿನಿ

    ದಾವಣಗೆರೆ: ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ ಹೌಸ್ ಸರ್ಜನ್‍ಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು 16 ತಿಂಗಳ ಶಿಷ್ಯ ವೇತನ ಬಿಡುಗಡೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ನಡೆಸುತ್ತಿರುವ ಪ್ರತಿಭಟನೆ 2 ದಿನ ಪೂರೈಸಿದೆ. ಆದರೆ ಪ್ರತಿಭಟನೆ ಹಿಂಪಡೆಯದಿದರೆ ಲೈಸೆನ್ಸ್ ರದ್ದು ಮಾಡುವುದಾಗಿ ಎಸ್‍ಪಿ, ತಹಶೀಲ್ದಾರ್ ಬೆದರಿಕೆ ಹಾಕಿದ್ದು, ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆ ಬಗೆಹರಿಸುವ ಅಶ್ವಾಸನೆ ನೀಡಿದರು. ಆದರೆ ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಲ್ಲ. ಬದಲಿಗೆ ಸಾರ್ವಜನಿಕವಾಗಿ ಭಿಕ್ಷೆ ಬೇಡಿ ಶಿಷ್ಯವೇತನಕ್ಕಾಗಿ ಆಗ್ರಹಿಸಿದರು. 16 ತಿಂಗಳಿನಿಂದ 220 ವಿದ್ಯಾರ್ಥಿಗಳಿಗೆ 8 ಕೋಟಿ ರೂ. ಶಿಷ್ಯ ವೇತನ ಬÁಕಿ ಉಳಿಸಿಕೊಂಡಿದೆ. ಶಿಷ್ಯವೇತನ ನೀಡದಿದ್ದರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ 16 ತಿಂಗಳ ಶಿಷ್ಯವೇತನ ನೀಡದೆ ಸರ್ಕಾರ ಸತಾಯಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ನಾಗರಾಜು, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ ತಹಶೀಲ್ಧಾರ್ ಗಿರೀಶ್ ಭೇಟಿ ನೀಡಿದ್ದರು. ವೈದ್ಯಕೀಯ ವಿದ್ಯಾರ್ಥಿಗಳ ಶೀಷ್ಯ ವೇತನ ಪಾವತಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ವಿಚಾರ ಕುರಿತಂತೆ ಮ್ಯಾನೇಜ್‍ಮೆಂಟ್‍ನವರು ಹಾಗೂ ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಈ ವೇಳೆ ಲಿಖಿತ ರೂಪದಲ್ಲಿ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟುಹಿಡಿದ ಘಟನೆ ಜರುಗಿತು.

    ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ವಿದ್ಯಾರ್ಥಿಗಳ ಪರವಾಗಿದೆ. ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ. ಅದಕ್ಕೆ ಧನ್ಯವಾದಗಳನ್ನು ಹೇಳಿದ್ದೇವೆ. ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಗಂಭೀರವಾಗಿ ಪ್ರಯತ್ನ ಮಾಡುತ್ತಿದೆ. ಆದರೆ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಎಲ್ಲಾ ನಿರ್ಧಾರಗಳು ಸರ್ಕಾರದ ಮಟ್ಟದಲ್ಲೇ ತೀರ್ಮಾನವಾಗಬೇಕಿದೆ. ಪ್ರತಿಭಟನೆ ಕೈಬಿಡದಿದ್ದರೆ ಕಾನೂನು ರೀತಿ ಕ್ರಮ ವಹಿಸುವುದು ಅನಿವಾರ್ಯವಾಗುತ್ತದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಹ ವಿದ್ಯಾರ್ಥಿಗಳಿಗೆ ತಿಳಿಹೇಳಿದ್ದಾರೆ. ಪ್ರತಿಭಟನೆ ಮಾಡುವುದು ಸರಿಯಲ್ಲ ಕೂಡಲೇ ಹಿಂಪಡೆಯಿರಿ ಎಂದು ಹೇಳಿದರು.

    ಈ ಕುರಿತು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ವೈದ್ಯ ಶಿಕ್ಷಣ ಸಚಿವ ಸುಧಾಕರ್ ಅವರು, ಖಾಸಗಿ ಕಾಲೇಜುಗಳು ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.

  • ವೈದ್ಯಕೀಯ ಶಿಕ್ಷಣ ಸಚಿವರ ಸ್ವಗ್ರಾಮದ ಮನೆ ಕೆಲಸದಾಕೆಗೂ ಸೋಂಕು?

    ವೈದ್ಯಕೀಯ ಶಿಕ್ಷಣ ಸಚಿವರ ಸ್ವಗ್ರಾಮದ ಮನೆ ಕೆಲಸದಾಕೆಗೂ ಸೋಂಕು?

    ಚಿಕ್ಕಬಳ್ಳಾಪುರ: ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸ್ವಗ್ರಾಮದ ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದ ಮನೆ ಕೆಲಸದಾಕೆಗೂ ಕೊರೊನಾ ಸೋಂಕು ತಗುಲಿರುವ ಮಾಹಿತಿ ಸಿಕ್ಕಿದೆ.

    ಪೇರೇಸಂದ್ರ ಗ್ರಾಮದ ನಿವಾಸದಲ್ಲಿ ಅಡುಗೆ ಕೆಲಸ ಸೇರಿದಂತೆ ಮನೆ ಕೆಲಸ ಮಾಡುತ್ತಿದ್ದ ಸರಿ ಸುಮಾರು 55 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಮಹಿಳೆ ವಾಸವಿದ್ದ ಮನೆ ಹಾಗೂ ಅಕ್ಕಪಕ್ಕದ ಮನೆಗಳನ್ನ ಸೀಲ್‍ಡೌನ್ ಮಾಡಲಾಗಿದೆ. ಇನ್ನೂ ಮಹಿಳೆಯ ಜೊತೆ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಉಳಿದಂತೆ ಸಚಿವರ ತಂದೆ ಸೇರಿದಂತೆ ಪತ್ನಿ ಹಾಗೂ ಮಕ್ಕಳಿಗೂ ಕೊರೊನಾ ಸೋಂಕು ದೃಢವಾಗಿತ್ತು. ಹೀಗಾಗಿ ಮುಂಜಾಗ್ರತೆಯಾಗಿ ಈ ಮಹಿಳೆಯ ಸ್ವಾಬ್ ಟೆಸ್ಟ್ ಮಾಡಲಾಗಿತ್ತು.

    ಇಂದು 1 ಸಾವು: ಜಿಲ್ಲೆಯಲ್ಲಿ ಕೊರೊನಾಗೆ ಇಂದು ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಚಿಕ್ಕಬಳ್ಳಾಪುರ ನಗರದ 9ನೇ ವಾರ್ಡ್ ನಿವಾಸಿ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 58 ವರ್ಷದ ಉಪನ್ಯಾಸಕರು ಕೋವಿಡ್‍ಗೆ ಬಲಿಯಾಗಿದ್ದಾರೆ.

  • ಸಚಿವ ಡಾ.ಸುಧಾಕರ್ ತಂದೆ ನಂತರ ಮನೆಗೆಲಸದವನಿಗೂ ಕೊರೊನಾ ಸೋಂಕು ದೃಢ

    ಸಚಿವ ಡಾ.ಸುಧಾಕರ್ ತಂದೆ ನಂತರ ಮನೆಗೆಲಸದವನಿಗೂ ಕೊರೊನಾ ಸೋಂಕು ದೃಢ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಂದೆಯ ಬಳಿಕ ಮನೆಗೆಲಸದವನಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಡಾ.ಸುಧಾಕರ್ ತಂದೆ ಹಾಗೂ ಮನೆಗೆಲಸದವನಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಅವರ ಇಡೀ ಕುಟುಂಬವನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸಚಿವ ಡಾ.ಸುಧಾಕರ್, ಡಾ.ಸುಧಾಕರ್ ಪತ್ನಿ, ಇಬ್ಬರು ಮಕ್ಕಳು, 10ಕ್ಕೂ ಹೆಚ್ಚು ಮನೆಗೆಲಸದವರನ್ನು ಸದ್ಯ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಿನ ಹೋಮ್ ಕ್ವಾರಂಟೈನ್ ಮಾಡಿದ್ದಾರೆ.

    ಕೊರೊನಾ ಆತಂಕದ ಹಿನ್ನೆಲೆ ಸಚಿವರ ಕುಟುಂಬ ಕಟ್ಟುನಿಟ್ಟಿನ ನಿಯಮ ಪಾಲಿಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು, ಇಮ್ಯುನಿಟಿ ಪವರ್ ಹೆಚ್ಚಿಸುವ ಆಹಾರ ಸೇವಿಸುತ್ತಿದ್ದಾರೆ. ಸ್ವತಃ ತಂದೆಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಸಚಿವರು ಇಡೀ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ. ಕಟ್ಟುನಿಟ್ಟಾಗಿ ಕೋವಿಡ್-19 ಮಾರ್ಗಸೂಚಿ ಪಾಲಿಸುತ್ತಿದ್ದು, ಕುಟುಂಬ ಸದಸ್ಯರಿಗೂ ಈ ಕುರಿತು ತಿಳಿ ಹೇಳುತ್ತಿದ್ದಾರೆ.

    ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಒಟ್ಟು ಮೂವರು ಮಕ್ಕಳಿಗೂ ಸುಧಾಕರ್ ಧೈರ್ಯ ಹೇಳುತ್ತಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ 14 ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ 26 ಜನರನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಕುಟುಂಬಸ್ಥರು ಮತ್ತು ಮನೆಗೆಲಸದವರ ಪಟ್ಟಿಯನ್ನು ಅಧಿಕಾರಿಗಳು ಪಡೆದಿದ್ದಾರೆ. ಈ ಪಟ್ಟಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಸಹ ಇದೆ.

    ಸಚಿವ ಸುಧಾಕರ್ ತಂದೆಯವರಿಗೆ 82ವರ್ಷ ವಯಸ್ಸಾಗಿದ್ದರಿಂದ ಮನೆಯೊಳಗೇ ಇರುತ್ತಿದ್ದರು. ಕುಟುಂಬಸ್ಥರು ಮತ್ತು ಮನೆಗೆಲಸದವರು ಮಾತ್ರ ಇವರ ಸಂಪರ್ಕದಲ್ಲಿದ್ದರು. ಹೊರಗಿನ ಯಾರ ಸಂಪರ್ಕವೂ ಇದ್ದಂತಿಲ್ಲ. ಆದರೂ ಕೊರೊನಾ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ. ಹೀಗಾಗಿ ತಲೆ ಕೆಡಿಸಿಕೊಂಡು ಅಧಿಕಾರಿಗಳು ಹಿಸ್ಟರಿ ಪರಿಶೀಲಿಸುತ್ತಿದ್ದಾರೆ.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ತಂದೆಗೆ ಕೊರೊನಾ ಸೋಂಕು ದೃಢಪಟ್ಟಿರುವ ಕುರಿತು ಸ್ವತಃ ಸುಧಾಕರ್ ಟ್ವೀಟ್ ಮಾಡಿ ಖಚಿತಪಡಿಸಿದ್ದರು. ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿ ಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದರು.


    ಜ್ವರ, ಕೆಮ್ಮು ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ 82 ವರ್ಷದ ನನ್ನ ಪೂಜ್ಯ ತಂದೆಯವರು ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್-19 ಪರೀಕ್ಷೆಗೂ ಒಳಗಾಗಿದ್ದಾರೆ. ವರದಿಯ ಫಲಿತಾಂಶವನ್ನು ಕಾಯುತ್ತಿದ್ದೇವೆ. ಅವರು ಶೀಘ್ರ ಗುಣಮುಖರಾಗುವಂತೆ ನೀವೂ ಪ್ರಾರ್ಥಿಸಿ ಎಂದು ಕೋರಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಈ ಮೊದಲು ಟ್ವೀಟ್ ಮಾಡಿದ್ದರು.

  • ಕಳಪೆ ಪಿಪಿಇ ಕಿಟ್ ಸರಬರಾಜು ಆಗಿದ್ದರೆ ಕ್ರಮ: ಸಚಿವ ಡಾ.ಸುಧಾಕರ್

    ಕಳಪೆ ಪಿಪಿಇ ಕಿಟ್ ಸರಬರಾಜು ಆಗಿದ್ದರೆ ಕ್ರಮ: ಸಚಿವ ಡಾ.ಸುಧಾಕರ್

    – ರಾಯಚೂರಿನಲ್ಲಿ 8 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸಚಿವ ಗರಂ
    – ಓಪೆಕ್ ಕೋವಿಡ್-19 ಆಸ್ಪತ್ರೆಯಲ್ಲಿನ ಸುರಕ್ಷತೆ ಬಗ್ಗೆ ವರದಿ ನೀಡಲು ಸೂಚನೆ

    ರಾಯಚೂರು: ಕಳಪೆ ಗುಣಮಟ್ಟದ ಪಿಪಿಇ ಕಿಟ್ ಸರಬರಾಜು ಆಗಿಲ್ಲ. ಯಾವುದಾದರೂ ಸಂಸ್ಥೆಯಲ್ಲಿ ಕಳಪೆ ಮಟ್ಟದ ಕಿಟ್ ಇದ್ದರೆ, ಸಂಸ್ಥೆಯ ನಿರ್ದೇಶಕರ ಮೇಲೆ ಕ್ರಮ ವಹಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಕಿಟ್ ಗಳು ಇರಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ಸಬ್ ಸ್ಟ್ಯಾಂಡರ್ಡ್ ಕಿಟ್ ಗಳು ಬಂದಿದ್ದವು. ಕೇಂದ್ರ ಸರ್ಕಾರ ಮೊದಲು ಕಳುಹಿಸಿದ್ದ ಕಿಟ್‍ಗಳು ಸಬ್ ಸ್ಟ್ಯಾಂಡರ್ಡ್ ಆಗಿದ್ದವು. ಅವುಗಳನ್ನು ಕೇಂದ್ರ ವಾಪಸ್ ತರಿಸಿಕೊಂಡಿತು. ರಾಜ್ಯ ಸರ್ಕಾರ ಅಂತರರಾಷ್ಟ್ರೀಯ ಗುಣಮಟ್ಟದ 2 ಲಕ್ಷ ಕಿಟ್ ತರಿಸಿದೆ. ಕೇಂದ್ರ ಸರ್ಕಾರ ನಮ್ಮಲ್ಲಿ 15 ಸಂಸ್ಥೆಗೆ ಕಿಟ್ ತಯಾರಿಸಲು ಅನಮತಿ ಕೊಟ್ಟಿದೆ. ಅವರೂ ಕೂಡ ಗುಣಮಟ್ಟದ ಕಿಟ್ ಗಳನ್ನು ತಯಾರಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಂದಿರಲು ಸಾಧ್ಯವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

    ಕಳಪೆ ಮಟ್ಟದ ಕಿಟ್ ಗಳು ಬಂದಿದ್ದರೆ ತುಂಬಾ ಜನಕ್ಕೆ ಪಾಸಿಟಿವ್ ಬರುತ್ತಿತ್ತು. ಮಂತ್ರಿಯಾಗಿ ಹೇಳುತ್ತಿದ್ದೇನೆ ಯಾವುದೇ ಸಂಸ್ಥೆಗೂ ಕಳಪೆ ಗುಣಮಟ್ಟದ ಕಿಟ್ ಸರಬರಾಜು ಆಗಿಲ್ಲ. ಇದುವರೆಗೂ ಸರಬರಾಜು ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ವಿಕ್ಟೋರಿಯಾದಲ್ಲಿ ಕಿಟ್ ಸಬ್ ಸ್ಟ್ಯಾಂಡರ್ಡ್ ಆಗಿದ್ದರೆ ಬಹಳ ಜನಕ್ಕೆ ಪಾಸಿಟಿವ್ ಆಗಬೇಕಿತ್ತು. ವಿಕ್ಟೋರಿಯಾ ಫಸ್ಟ್ ಕೋವಿಡ್ ಡೆಸಿಗ್ನೆಟೆಡ್ ಆಸ್ಪತ್ರೆ. ನಾನು ಆಸ್ಪತ್ರೆಯ ಬಗ್ಗೆ ಗಮನಹರಿಸಿದ್ದೇನೆ. ಕಿಟ್ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಕ್ರಮಕೈಗೊಳ್ಳುತ್ತೇನೆ ಎಂದರು.

    ರಾಯಚೂರಿನಲ್ಲಿ 8 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಸಚಿವ ಡಾ.ಸುಧಾಕರ್ ಗಂಭೀರವಾಗಿ ಎಚ್ಚರಿಕೆ ನೀಡಿದರು. ಕೋವಿಡ್-19 ಆಸ್ಪತ್ರೆ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದು ಆತಂಕ ಹೆಚ್ಚಿಸುತ್ತೆ. ಸಿಬ್ಬಂದಿಗೆ ಯಾಕೆ ಸುರಕ್ಷತೆ ಇಲ್ಲ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಬೇಕು. ಆಸ್ಪತ್ರೆಯಲ್ಲಿ ಸರಿಯಾದ ಸುರಕ್ಷತಾ ಕ್ರಮ ಕೈಗೊಂಡಿಲ್ಲವೇ, ಈ ಕುರಿತು ಮೂರು ದಿನಗಳಲ್ಲಿ ಮಾಹಿತಿ ಬೇಕು. ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟು ವೈದ್ಯಕೀಯ ಸಿಬ್ಬಂದಿಗೆ ಪಾಸಿಟಿವ್ ಬಂದಿಲ್ಲ. ಈ ಕುರಿತು ವರದಿ ನೀಡುವಂತೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರೆಗೆ ಸೂಚಿಸಿದರು.

    ಪಂಜಾಬ್ ನಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ನಾವು ಹಿಂದೆ ಲಾಕ್‍ಡೌನ್ ಮಾಡಿದ್ದೇವೆ. ಆರೋಗ್ಯ ಕ್ಷೇತ್ರದ ಸಿದ್ಧತೆಗಾಗಿ ಲಾಕ್‍ಡೌನ್ ಮಾಡಲಾಯಿತು. ಈಗ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಲಾಕ್‍ಡೌನ್ ಮತ್ತೆ ಮುಂದುವರಿಸಿದರೆ ಜೀವ ಉಳಿಸುವುದು ಒಂದೇ ಆಗುತ್ತೆ. ಜೀವನದ ಕಡೆ ಲಕ್ಷ್ಯ ಕೊಡದಿದ್ದರೆ ಬಹಳ ಅನ್ಯಾಯವಾಗುತ್ತೆ. ಹೀಗಾಗಿ ಎರಡು ಕಡೆ ಪರಿಗಣಿಸಿ ಜೀವ, ಜೀವನ ಉಳಿಸುತ್ತಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು.

  • ಸಚಿವ ಸುಧಾಕರ್, ಸಿಎಂ ಬಿಎಸ್‍ವೈ ರಾಜ್ಯದ ನರೇಂದ್ರ ಮೋದಿಗಳಿದ್ದಂತೆ: ಈಶ್ವರಪ್ಪ

    ಸಚಿವ ಸುಧಾಕರ್, ಸಿಎಂ ಬಿಎಸ್‍ವೈ ರಾಜ್ಯದ ನರೇಂದ್ರ ಮೋದಿಗಳಿದ್ದಂತೆ: ಈಶ್ವರಪ್ಪ

    -ಎಚ್‍ಡಿಕೆ ಟೀಕೆ ಮಾಡೋದು ವಿರೋಧ ಪಕ್ಷದವರಾಗಿ ಅವರ ಕರ್ತವ್ಯ

    ಚಿಕ್ಕಬಳ್ಳಾಪುರ: ಕೊರೊನಾದಿಂದ ನಲುಗಿರುವ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ಅವರು ಎಚ್‍ಡಿಕೆ ವಿರೋಧ ಪಕ್ಷದವರಾಗಿ ಟೀಕೆ ಮಾಡುವುದು ಅವರ ಕರ್ತವ್ಯ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಚ್‍ಡಿ ಕುಮಾರಸ್ವಾಮಿ ಅವರು ಪ್ರಧಾನಿಗಳನ್ನು ಟೀಕೆ ಮಾಡಿ ತೃಪ್ತಿ ಪಡುತ್ತಿದ್ದಾರೆ. ಪಡೆಯಲಿ. ಆದರೆ ನಾವು ಎಚ್‍ಡಿ ಕುಮಾರಸ್ವಾಮಿ ಅವರ ಟೀಕೆಗಳನ್ನು ಮಾರ್ಗದರ್ಶನ ಎಂದು ಭಾವಿಸುತ್ತೇವೆ. ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಪ್ರಧಾನ ಮಂತ್ರಿಗಳ ಪ್ಯಾಕೇಜನ್ನು ಇಡೀ ದೇಶದ ಜನ ಮೆಚ್ಚಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಟೀಕೆ ಮಾಡುವುದು ಸರಿನೋ, ತಪ್ಪೋ ಅನ್ನೋದನ್ನು ರಾಜ್ಯದ ಜನರಿಗೆ ಬಿಡುತ್ತೇನೆ ಎಂದರು.

    ಇದೇ ವೇಳೆ ವಿಶ್ವದಲ್ಲೇ ಕೊರೊನಾವನ್ನು ದೂರ ಓಡಿಸುವಲ್ಲಿ, ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಬೆಸ್ಟ್ ಎನಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಸಹ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಯಶಸ್ವಿಯಾಗಿ ಕೊರೊನಾ ಸಂಕಷ್ಟ ನಿಭಾಯಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಸಹ ನರೇಂದ್ರ ಮೋದಿಗಳಿದ್ದಂತೆ ಎಂದು ಈಶ್ವರಪ್ಪ ಹೇಳಿದರು.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಪುನಶ್ಚೇತನ ಯೋಜನೆಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಸುಧಾಕರ್ ಹಾಗೂ ಸಂಸದ ಬಚ್ಚೇಗೌಡ ಚಾಲನೆ ನೀಡಿದರು.

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಸಚಿವ ಸುಧಾಕರ್

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಸಚಿವ ಸುಧಾಕರ್

    – ಕೆಐಎಎಲ್‍ಗೆ ಅನಿರೀಕ್ಷಿತ ಭೇಟಿ ವೇಳೆ ತಪಾಸಣೆ

    – ವಿಮಾನ ನಿಲ್ದಾಣದಲ್ಲಿ ಸಚಿವ ಸುಧಾಕರ್‌ಗೆ ಕೊರೊನಾ ತಪಾಸಣೆ

    ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‍ಗೆ ಸಿಬ್ಬಂದಿ ಕೊರೊನಾ ತಪಾಸಣೆ ನಡೆಸಿದ್ದಾರೆ.

    ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಸಿಬ್ಬಂದಿ ಸಚಿವರಿಗೂ ಉಷ್ಣದ ಮಾಪನ ಹಿಡಿದು ತಪಾಸಣೆ ನಡೆಸಿದರು. ಸುಧಾಕರ್ ಅವರು ಸಹ ತಪಾಸಣೆಗೆ ಸಹಕರಿಸಿ, ನಂತರ ಒಳಗೆ ಹೋದರು.

    ಕೊರೊನಾ ತಪಾಸಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ವಿಮಾನ ನಿಲ್ದಾಣದ ಒಳಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದ್ದು, ಶಂಕಿತರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದು, ಇದಕ್ಕೆ ಸಹಕರಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವರು ಕರೆ ನೀಡಿದರು.

    ಇದೇ ವೇಳೆ ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ಹೋಟೆಲುಗಳನ್ನು ಸೋಂಕಿತರಿಗಾಗಿ ಪ್ರತ್ಯೇಕಿಸುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದ್ದು, ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹತ್ತಿರದ ಹೋಟೆಲುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಖಾಸಗಿ ಸ್ಥಳಗಳಲ್ಲಿ ಸರ್ಕಾರದ ವತಿಯಿಂದಲೇ ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಕುರಿತು ಪರಾಮರ್ಶೆ ಮಾಡಲಾಗುತ್ತಿದೆ ಎಂದರು.

    ಮತ್ತೊಂದೆಡೆ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಎದುರಾದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದರು. ನಂತರ ಶಂಕಿತರನ್ನು ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗುವ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಲ್ಯಾಪ್‍ಟಾಪ್ ವಿತರಣೆಯಲ್ಲಿನ ತಾರತಮ್ಯವೇ ಹಿಂದಿನ ಸರ್ಕಾರ ಮನೆಗೆ ಹೋಗಲು ಕಾರಣ: ಸುಧಾಕರ್

    ಲ್ಯಾಪ್‍ಟಾಪ್ ವಿತರಣೆಯಲ್ಲಿನ ತಾರತಮ್ಯವೇ ಹಿಂದಿನ ಸರ್ಕಾರ ಮನೆಗೆ ಹೋಗಲು ಕಾರಣ: ಸುಧಾಕರ್

    ಚಿಕ್ಕಬಳ್ಳಾಪುರ: ನಮ್ಮ ಸರ್ಕಾರ ತಾರತಮ್ಯ ಮಾಡದೇ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ವಿತರಣೆ ಮಾಡುತ್ತಿದೆ. ಆದರೆ ಹಿಂದಿನ ಸರ್ಕಾರ ಕೇವಲ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‍ಟಾಪ್ ವಿತರಣೆ ಮಾಡುವ ಮೂಲಕ ತಾರತಮ್ಯ ಮಾಡಿದ್ದವು. ಹೀಗಾಗಿ ಆ ಸರ್ಕಾರ, ಪಕ್ಷಗಳು ಮನೆಗೆ ಹೋದವು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟಾಂಗ್ ನೀಡಿದರು.

    ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ 238 ವಿದ್ಯಾರ್ಥಿನಿಯರಿಗೆ ಹಾಗೂ ಪ್ರಥಮ ದರ್ಜೆ ಕಾಲೇಜಿನ 439 ವಿದ್ಯಾರ್ಥಿಗಳಿಗೆ ಜ್ಞಾನದೀಪ್ತಿ ಯೋಜನೆಯಡಿ ಉಚಿತ ಲ್ಯಾಪ್‍ಟಾಪ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದರು. ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಶಕ್ತಿ ನೀಡುವ ಪರಿಕಲ್ಪನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡುತ್ತಿದ್ದಾರೆ. ಅರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ವರ್ಷ ಪದವಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸುವ ಕೆಲಸ ಮಾಡಲಾಗುವುದು ಎಂದರು.

    ಕಳೆದ ಸರ್ಕಾರಗಳು ಕೇವಲ ಎಸ್‍ಇ ಹಾಗೂ ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‍ಟಾಪ್ ವಿತರಣೆ ಮಾಡುವ ಮೂಲಕ ತಾರತಮ್ಯ ಮಾಡಿದ್ದವು. ಹೀಗಾಗಿ ಆ ಸರ್ಕಾರ, ಪಕ್ಷಗಳು ಮನೆಗೆ ಹೋದವು. ಇದೀಗ ಯಾವುದೇ ತಾರತಮ್ಯ ಮಾಡದೆ ನಾವೆಲ್ಲರೂ ಭಾರತೀಯರು ಒಂದೇ ಎಂದು ಹೇಳುವ ಬದ್ಧತೆ ಇರುವುದು ಬಿಜೆಪಿ ಪಕ್ಷ ಹಾಗೂ ಸರ್ಕಾರಕ್ಕೆ ಮಾತ್ರ ಎಂದರು.

    ಇದೇ ವೇಳೆ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಅದರ ಜೊತೆ ಸೇರಿರುವ ಕೆಲ ಪಕ್ಷಗಳು ಉದ್ದದೇಶ ಪೂರ್ವಕವಾಗಿಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದ ವೇಳೆ ಕೃತ್ಯ ನಡೆಸಿವೆ. ಭಾರತದ ಗೌರವ ಘನತೆ ಮಣ್ಣುಪಾಲು ಮಾಡಲು ಈ ರೀತಿಯ ದುರುದ್ದೇಶದ ತಂತ್ರ ನಡೆಸಿದ್ದರು ಎಂದರು.

  • ಸಿದ್ದರಾಮಣ್ಣನನ್ನ ನೋಡಿದ್ರೆ ನನಗೆ ಅಯ್ಯೋ ಪಾಪ ಅನಿಸುತ್ತೆ: ನೂತನ ಸಚಿವ ಸುಧಾಕರ್

    ಸಿದ್ದರಾಮಣ್ಣನನ್ನ ನೋಡಿದ್ರೆ ನನಗೆ ಅಯ್ಯೋ ಪಾಪ ಅನಿಸುತ್ತೆ: ನೂತನ ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ನಾವು ಸಿದ್ದರಾಮಯ್ಯ ಜೊತೆ ಇರುವಾಗ ಸಿದ್ದರಾಮಯ್ಯರನ್ನು ಸೇಫ್ ಗಾರ್ಡ್ ಮಾಡ್ತಿದ್ದೇವು. ಆದರೆ ಈಗ ಸಿದ್ದರಾಮಣ್ಣನ ಸ್ಥಿತಿ ನೋಡಿ ಅಯ್ಯೋ ಅನಿಸ್ತಿದೆ ಎಂದು ನೂತನ ಸಚಿವ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ಹೇಳಿದ್ದಾರೆ.

    ಇಂದು ನಗರದ ಚಾಮರಾಜಪೇಟೆಗೆ ಭೇಟಿ ನೀಡಿದ್ದ ನೂತನ ಸಚಿವರು ಡಾ.ಬಿ.ಆರ್.ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು. ಸಿದ್ದರಾಮಯ್ಯ ಚೆನ್ನಾಗಿ ಕಾನೂನು ಬಲ್ಲವರು. ಸುಪ್ರೀಂಕೋರ್ಟ್ ತೀರ್ಪನ್ನೇ ಪ್ರಶ್ನೆ ಮಾಡುತ್ತಾರೆ. ಅವರಿಗೆ ಸಂವಿಧಾನ, ನ್ಯಾಯಾಂಗದ ಮೇಲೆ ನಂಬಿಕೆ ಇದೆಯಾ ಎಂದು ಮೊದಲು ಸ್ಪಷ್ಟಪಡಿಸಲಿ ಎಂದರು.

    ಸಿದ್ದರಾಮಯ್ಯ ಸ್ಥಿತಿ ಈಗ ಏನಾಗಿದೆ ಎಂದು ಇಡೀ ರಾಜ್ಯವೇ ನೋಡ್ತಿದೆ. ಯಾರು ಹಿತವರು, ಯಾರು ಶತ್ರುಗಳು ಅನ್ನೊದನ್ನ ಸಿದ್ದರಾಮಯ್ಯ ಈಗಲಾದ್ರೂ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು. ಇದೇ ವೇಳೆ ನೂತನ ಸಚಿವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶೀಘ್ರವೇ ಖಾತೆ ಹಂಚಿಕೆ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ: ಯಡಿಯೂರಪ್ಪನನ್ನು ನೋಡಿದ್ರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ: ಸಿದ್ದರಾಮಯ್ಯ