Tag: ಸಚಿವ ಜೆ.ಸಿ.ಮಾಧುಸ್ವಾಮಿ

  • ಹುಳಿಯಾರು ಕನಕ ವೃತ್ತ ತೆರವು ವಿವಾದ- ಮಾಧುಸ್ವಾಮಿ ಸ್ಪಷ್ಟನೆ

    ಹುಳಿಯಾರು ಕನಕ ವೃತ್ತ ತೆರವು ವಿವಾದ- ಮಾಧುಸ್ವಾಮಿ ಸ್ಪಷ್ಟನೆ

    ಮಂಡ್ಯ: ಚಿಕ್ಕನಾಯಕನಹಳ್ಳಿಯಲ್ಲಿನ ವೃತ್ತಕ್ಕೆ ಹೆಸರಿಡುವ ಕುರಿತ ವಿವಾದ ತಾರಕಕ್ಕೇರಿದ್ದು, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲ್ಲ, ಬದಲಿಗೆ ಕನಕ ವೃತ್ತ ಎಂದು ಹೆಸರಿಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಕೆ.ಆರ್.ಪೇಟೆಯಲ್ಲಿ ಹುಳಿಯಾರು ಕನಕ ವೃತ್ತ ತೆರವುಗೊಳಿಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ನಾನು ಬೆಳಗಾವಿಯಲ್ಲಿದ್ದಾಗ ಕನಕ ವೃತ್ತ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಎಂಬ ಹೆಸರಿನ ನಾಮಫಲಕಗಳನ್ನು ಹಾಕಲು ಎರಡು ಗುಂಪುಗಳು ಮುಂದಾಗಿದ್ದವು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಶಾಂತಿಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಮುಂದಾಗಿದ್ದೆ. ಸ್ವಾಮೀಜಿಯವರಿಗಾಗಿ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದೆ. ಬಳಿಕ ನಡೆದ ಸಭೆಯಲ್ಲಿ ಕನಕ ವೃತ್ತ ಹೆಸರಿಡಲು ಎದುರಾಗಿರುವ ಕಾನೂನು ತೊಡಕುಗಳನ್ನ ಗಮನಕ್ಕೆ ತಂದಿದ್ದೆ. ನಂತರ ಕನಕ ವೃತ್ತ ಎಂದೆ ಹೆಸರಿಡೋಣ ಎಂದು ಸ್ವಾಮೀಜಿಗೆ ತಿಳಿಸಿದೆ.

    ಹುಳಿಯಾರು ಈ ಹಿಂದೆ ಗ್ರಾಮ ಪಂಚಾಯಿತಿಯಾಗಿತ್ತು. ಈಗ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜೆಗೇರಿದೆ. ಪಟ್ಟಣ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ಕನಕ ವೃತ್ತ ಎಂದು ಹೆಸರಿಡೋಣ ಅಂತ ಹೇಳಿದೆ. ಈ ವೇಳೆ ಕಾಗಿನೆಲೆ ಶ್ರೀಗಳು ಈಗಲೇ ಆಗಬೇಕೆಂದು ಪಟ್ಟು ಹಿಡಿದರು. ಆ ವೇಳೆ ನಾನು ಶ್ರೀಗಳ ಮೇಲೆ ರೇಗಿದ್ದು ನಿಜ. ಇದಾದ ಬಳಿಕ ಯಾರ್ಯಾರೋ ದಿನ ನಿತ್ಯ ಕರೆ ಮಾಡಿ ನೀವು ಕುರುಬರ ವಿರೋಧಿ ಎಂದು ಕೇಳುತ್ತಿದ್ದರು. ನಾನು ಕುರುಬ ಸಮುದಾಯದ ಬೆಂಬಲದಿಂದಲೇ ಚಿಕ್ಕನಾಯಕನಹಳ್ಳಿಯಲ್ಲಿ ಗೆದ್ದು ಬಂದಿದ್ದೇನೆ. ನನ್ನ ಜೊತೆ ಆ ಸಮುದಾಯದ ಮುಖಂಡರು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.

    ನಾನು ಅಧಿಕಾರದಲ್ಲಿ ಇರುವವರೆಗೂ ಆ ವೃತ್ತಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಬಿಡಲ್ಲ. ಶ್ರೀಗಳ ಹೆಸರಿಟ್ಟು ನಾನು ಜಾತಿವಾದಿ ಆಗಲು ತಯಾರಿಲ್ಲ. ದಾಸ ಶ್ರೇಷ್ಠ ಕನಕ ವೃತ್ತ ಎಂದೇ ನಾಮಕರಣ ಮಾಡುತ್ತೇನೆ ಎಂದು ಹೇಳಿದ್ದೇನೆ. ಹೀಗಿರುವಾಗ ಇವತ್ತು ಒಬ್ಬ ಕರೆ ಮಾಡಿ ನೀವು ಒಂದು ಸಮಾಜಕ್ಕೆ ಮಾತ್ರ ಮಂತ್ರೀನ ಎಂದು ಕೇಳಿದ, ಹೂ ಅಂದೆ. ಸಿಟ್ಟಾಗಿ ಬೈದು ಫೋನ್ ಕಟ್ ಮಾಡಿದೆ. ಆ ಆಡಿಯೋವನ್ನು ವಾಟ್ಸಪ್ ಮೂಲಕ ವೈರಲ್ ಮಾಡಿ ವಿವಾದ ಸೃಷ್ಠಿಸುತ್ತಿದ್ದಾರೆ. ಉಪ ಚುನಾವಣೆ ಗುರಿಯಾಗಿಟ್ಟುಕೊಂಡೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

  • ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ: ಮಾಧುಸ್ವಾಮಿ

    ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ: ಮಾಧುಸ್ವಾಮಿ

    ತುಮಕೂರು: ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ನೆರೆಯಿಂದಾಗಿ ಬಿದ್ದಿರುವ ಮನೆಗಳ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಹಾಕಿದ್ದೇವೆ. ಸಂಪೂರ್ಣ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂ. ಹಾಗೂ ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳುವವರಿಗೆ 50 ಸಾವಿರ ರೂ. ನೀಡಲಾಗುತ್ತದೆ. ಆದರೆ ಯಾರು ಕೂಡ ಮುಂದೆ ಅರ್ಜಿ ಸಲ್ಲಿಸುತ್ತಿಲ್ಲ ಎಂದರು. ಇದನ್ನೂ ಓದಿ: ಎತ್ತು ಏರಿಗೆ, ಕೋಣ ನೀರಿಗೆ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

    ನೆರೆಗೆ 40 ರಿಂದ 50 ಸಾವಿರ ಮನೆಗಳು ಹಾನಿಯಾಗಿವೆ ಎನ್ನುವ ಮಾಹಿತಿ ಇದೆ. ಆದರೆ ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳಿಗೆ 9 ಸಾವಿರ ಅರ್ಜಿಗಳು ಮಾತ್ರವೇ ಬಂದಿವೆ. ಸಂತ್ರಸ್ತರು ಪರಿಹಾರ ಪಡೆದು ಮನೆ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ಸರ್ಕಾರ ಎಲ್ಲೂ ಫೇಲ್ ಆಗಿಲ್ಲ. ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ರಾಜ್ಯಕ್ಕೆ ಬರಲಿದೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ:  ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ: ಸಿದ್ದರಾಮಯ್ಯ

    ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ನ್‌ಡಿಆರ್‌ಎಫ್‌) ಕರ್ನಾಟಕಕ್ಕೆ 1,200 ಕೋಟಿ ರೂ. ಮತ್ತು ಬಿಹಾರಕ್ಕೆ 400 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಗುರುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆದಿತ್ತು. ಕ್ಯಾಬಿನೆಟ್ ಸಭೆಗೂ ಮುನ್ನ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸದಾನಂದ ಗೌಡ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

    ನೆರೆ ಪರಿಹಾರ ವಿಳಂಬಕ್ಕಾಗಿ ಜನರು ಪ್ರಶ್ನೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿವೆ. ಆದಷ್ಟು ಬೇಗ ಪರಿಹಾರ ನೀಡುವಂತೆ ಸಚಿವರು ಮನವಿ ಮಾಡಿದ್ದರು.

  • ಅಧ್ಯಕ್ಷರೇ ಮಿಸ್ಡ್ ಕಾಲ್ ಮಾಡಿ ಪಕ್ಷಕ್ಕೆ ಸೇರಿ ಎಂದಿದ್ದಾರೆ, ಯಾರು ಬೇಕಾದ್ರೂ ಸೇರಬಹುದು – ಮಾಧುಸ್ವಾಮಿ

    ಅಧ್ಯಕ್ಷರೇ ಮಿಸ್ಡ್ ಕಾಲ್ ಮಾಡಿ ಪಕ್ಷಕ್ಕೆ ಸೇರಿ ಎಂದಿದ್ದಾರೆ, ಯಾರು ಬೇಕಾದ್ರೂ ಸೇರಬಹುದು – ಮಾಧುಸ್ವಾಮಿ

    – ಅನಿಲ್ ಲಾಡ್ ಸಹ ಪಕ್ಷ ಸೇರಬಹುದು

    ಹಾಸನ: ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಸೇರಬಹುದು, ನಮ್ಮ ಅಧ್ಯಕ್ಷರೇ ಮಿಸ್ಡ್ ಕಾಲ್ ಮಾಡಿ ಪಕ್ಷಕ್ಕೆ ಸೇರಿ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷ ನಮಗೇನು ಮಡಿವಂತಿಕೆ ಇಲ್ಲ. ಹೀಗಾಗಿ ಅನಿಲ್ ಲಾಡ್ ಸಹ ಪಕ್ಷಕ್ಕೆ ಸೇರಬಹುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿಲ್ ಲಾಡ್ ಬಿಜೆಪಿ ಸೇರ್ಪಡೆಯಿಂದ ಬಳ್ಳಾರಿಯಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಅಲ್ಲದೆ, ಮಿಸ್ಡ್ ಕಾಲ್ ನೀಡುವ ಮೂಲಕ ಯಾರೂ ಬೇಕಾದರೂ ಬಿಜೆಪಿ ಸದಸ್ಯತ್ವ ಪಡೆಯಬಹುದು ಎಂದು ಈಗಾಗಲೇ ಅಧ್ಯಕ್ಷರೇ ತಿಳಿಸಿದ್ದಾರೆ. ನಮ್ಮ ನಾಯಕರು ದೊಡ್ಡ ಘೋಷಣೆ ಮಾಡಿಬಿಟ್ಟಿದ್ದಾರೆ. ಅನಿಲ್ ಲಾಡ್ ಸೇರಿದಂತೆ ಯಾರು ಬೇಕಾದರೂ ಬರಬಹುದು ಎಂದು ಆಹ್ವಾನಿಸಿದರು.

    ರಾಜಕೀಯ ಪಕ್ಷ ನಮಗೇನು ಮಡಿವಂತಿಕೆ ಇಲ್ಲ. ಬಿಜೆಪಿ ಕೇಡರ್ ಬೇಸ್ ಪಕ್ಷ, ಸಂಘಟನೆಯಿಂದ ಬೆಳೆದು ಬಂದಿರುವ ಪಕ್ಷ. ನಾವೇ ಇದ್ದರೂ ಪಕ್ಷ ಚೆನ್ನಾಗಿರುತ್ತೆ, ಯಾರು ಬಂದರೂ ಪಕ್ಷ ಚೆನ್ನಾಗಿರುತ್ತದೆ. ಬರುವುದರಿಂದ, ಹೋಗುವುದರಿಂದ ಸಂಘಟನೆಯಲ್ಲಿ ವ್ಯತ್ಯಾಸ ಆಗುತ್ತದೆ ಎಂದು ನಾನು ಭಾವಿಸಿಲ್ಲ ಎಂದು ವಿವರಿಸಿದರು.

    ಆಯೋಗ ಘೋಷಣೆ ಮಾಡಿದಾಗ ಉಪಚುನಾವಣೆ ನಡೆಯುತ್ತವೆ. ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಹಾಸನ ನೂತನ ಕೋರ್ಟ್ ಕಟ್ಟಡದ ಉಳಿದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಉದ್ಘಾಟನೆ ಮಾಡುತ್ತೇವೆ. ಕೋರ್ಟ್ ಉದ್ಘಾಟನೆ ರಾಜಕೀಯ ಕಾರಣಕ್ಕೆ ನಿಂತಿಲ್ಲ. ಬಿಜೆಪಿ ವರ್ಸಸ್ ಜೆಡಿಎಸ್ ರಾಜಕೀಯ ಏನಿಲ್ಲ ಎಂದು ಸ್ಪಷ್ಟಪಡಿಸಿದರು.

    ಫೋನ್ ಟ್ಯಾಪಿಂಗ್ ಕುರಿತು ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಯುತ್ತಿರುವಾಗ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಅಲೋಕ್ ಕುಮಾರ್ ವಿಚಾರಣೆ ಇನ್ನೂ ಮುಗಿದಿಲ್ಲ. ಈ ಮಧ್ಯೆ ನಾವು ಕಾಲ್ಪನಿಕವಾಗಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಹೇಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

  • ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    – ನಮ್ಮ ಸರ್ಕಾರ ಇನ್ನು ಸಾಲ ಮನ್ನಾ ನಿರ್ಧಾರ ತೆಗೊಂಡಿಲ್ಲ

    ತುಮಕೂರು: ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ನೀಡುವುದು ತಪ್ಪಲ್ಲ. “ಕಮರ್ಷಿಯಲ್ ಬ್ಯಾಂಕ್‍ಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಮನ್ನಾ ಮಾಡಿದರೂ ರೈತರಿಗೆ ನೋಟಿಸ್ ನೀಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಾಲದ ಕುರಿತು ನೋಟಿಸ್ ನೀಡಬೇಡಿ ಎಂದು ನಮ್ಮ ಸಹಕಾರಿ ಬ್ಯಾಂಕ್‍ಗಳಿಗೆ ನಿರ್ದೇಶನ ಕೊಡಬಹುದು. ಆದರೆ ಕಮರ್ಷಿಯಲ್ ಬ್ಯಾಂಕ್‍ಗಳಿಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ. ಅಲ್ಲದೆ ಸಾಲ ಮನ್ನಾ ನಿರ್ಧಾರವನ್ನು ನಮ್ಮ ಸರ್ಕಾರ ಇನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಾಲ ವಸೂಲಾತಿಗೆ ಬ್ಯಾಂಕ್‍ಗಳು ಪ್ರತಿ ಸಾರಿ ಅದಾಲತ್ ಮಾಡುತ್ತವೆ. ಸಾಲ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿರಬಹುದು. ಸರ್ಕಾರ ಸಾಲಮನ್ನಾ ಯೋಜನೆಯ ಹಣವನ್ನು ಬ್ಯಾಂಕಿಗೆ ತುಂಬದೆ ಬ್ಯಾಂಕಿನವರಿಗೆ ನೋಟಿಸ್ ಕೊಡಬೇಡಿ ಎಂದು ಹೇಳಲು ಆಗುವುದಿಲ್ಲ. ಬ್ಯಾಂಕಿನವರು ಸಾಲದ ನೋಟಿಸ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ರೈತರ ಆಸ್ತಿಗಳನ್ನು ಜಪ್ತಿ ಮಾಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

  • ಸವದಿ ಬ್ಲೂಫಿಲಂ ನೋಡಿದ್ದನ್ನ ಮನುಷ್ಯತ್ವ ಇರೋರು ಯಾರೂ ಒಪ್ಪಿಕೊಳ್ಳಲ್ಲ: ಮಾಧುಸ್ವಾಮಿ

    ಸವದಿ ಬ್ಲೂಫಿಲಂ ನೋಡಿದ್ದನ್ನ ಮನುಷ್ಯತ್ವ ಇರೋರು ಯಾರೂ ಒಪ್ಪಿಕೊಳ್ಳಲ್ಲ: ಮಾಧುಸ್ವಾಮಿ

    ಕೊಪ್ಪಳ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವಿಧಾನಸಭೆ ಕಲಾಪದಲ್ಲಿ ಬ್ಲೂಫಿಲಂ ನೋಡಿದ್ದನ್ನು ಮನುಷ್ಯತ್ವ ಇರುವವರು ಯಾರೂ ಒಪ್ಪಿಕೊಳ್ಳಲ್ಲ. ಒಂದು ತಪ್ಪಿಗೆ ಅನೇಕ ಬಾರಿ ಶಿಕ್ಷೆ ಕೊಡುವ ಕಾನೂನು ಎಲ್ಲೂ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ಲಕ್ಷ್ಮಣ ಸವದಿ ಅವರನ್ನು ಸಮರ್ಥನೆ ಮಾಡಿಕೊಂಡಿಲ್ಲ. ಸಮರ್ಥನೆ ಮಾಡಿಕೊಳ್ಳುವ ಜಾಯಮಾನವೂ ನನ್ನದಲ್ಲ. ಅದೊಂದು ಆಕಸ್ಮಿಕ ಘಟನೆ. ಆಗಿದ್ದು ತಪ್ಪು, ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅದನ್ನೇ ಯಾಕೆ ಪದೇ ಪದೇ ಮಾತನಾಡುತ್ತಿದ್ದಾರೆ. ಸವದಿ ಅವರಿಗೆ ಶಿಕ್ಷೆಯಾಗಿದೆ. ಶಿಕ್ಷೆಯಾದ ಮೇಲೆ ಮಾಜಿ ಸಿಎಂ ಪದೇ ಪದೇ ಅದನ್ನೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪಿತಸ್ಥ ಅಂತ ಜಾರಿ ನಿರ್ದೇಶನಾಲಯ ಬಂಧಿಸಿಲ್ಲ. ಅಂದಮೇಲೆ ನಮ್ಮ ಪಾತ್ರ ಇನ್ನು ಆರಂಭವಾಗಿಲ್ಲ ಎಂದು ಬಂಧನದ ಹಿಂದೆ ಕೈವಾಡ ಇದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

    ಸಿದ್ದರಾಮಯ್ಯ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರ ಗರಡಿಯಲ್ಲಿ ಬೆಳೆದು ಇದೀಗ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮೊದಲು ಸಿದ್ದರಾಮಯ್ಯ ಅವರ ಮನೆ ತೊಳೆದುಕೊಳ್ಳಲಿ. ಒಂದು ತಿಂಗಳಾದರೂ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಿಲ್ಲ. ಒಂದು ತಿಂಗಳಿಂದ ಹೆಸರು ಕೇಳುತ್ತಿದ್ದೇವೆ ಹೆಸರು ಕೊಡುತ್ತಿಲ್ಲ. ಕಾಂಗ್ರೆಸ್‍ನ ಮುಖಂಡರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಹಾಗೂ ಪರಮೇಶ್ವರ್ ಅವರು ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

    ರಾಜ್ಯ ಸರ್ಕಾರವು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ತುರ್ತು ಪರಿಹಾರ ಕೊಟ್ಟಿದೆ. ಆದರೆ ನಷ್ಟ ಎಷ್ಟಾಗಿದೆ ಎನ್ನುವುದು ನಿರೀಕ್ಷೆ ಮಾಡಲಾಗಿಲ್ಲ. ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಮಳೆ ಇರುವುದರಿಂದ ನಿರೀಕ್ಷಿತ ನಷ್ಟದ ಪ್ರಮಾಣ ತಿಳಿಯಲು ಸಾಧ್ಯವಿಲ್ಲ. ಕೇಂದ್ರದಿಂದ ಹಣ ತಂದು ಕಾರ್ಯಕ್ರಮ ಅನುಷ್ಠಾನ ಮಾಡುವ ಶಕ್ತಿ ನಮಗಿದೆ. ಆ ಕಾಲ ನಮಗಿನ್ನೂ ಬಂದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

    ಪ್ರವಾಹ ಪೀಡಿತ ಪ್ರದೇಶದ ಸಾಲಗಾರರಿಗೆ ಹಣ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಾಯ ಮಾಡುವಂತಿಲ್ಲ. ನಾವು ಬ್ಯಾಂಕ್‍ನವರ ಜೊತೆ ಮಾತಾಡುತ್ತಿದ್ದೇವೆ ಎಂದು ತಿಳಿಸಿದರು.