Tag: ಸಚಿವ ಜಿ.ಟಿ.ದೇವೇಗೌಡ

  • ನಾನು ಆ ರೀತಿ ಹೇಳಿಲ್ಲ: ಯೂಟರ್ನ್ ಹೊಡೆದ ಸಚಿವ ಜಿ.ಟಿ.ದೇವೇಗೌಡ

    ನಾನು ಆ ರೀತಿ ಹೇಳಿಲ್ಲ: ಯೂಟರ್ನ್ ಹೊಡೆದ ಸಚಿವ ಜಿ.ಟಿ.ದೇವೇಗೌಡ

    – ಎಲ್ಲದಕ್ಕೂ ನೀನೇ ಹೊಣೆ ಎಂದು ಒಬ್ಬ ವ್ಯಕ್ತಿಗೆ ಹೇಳುವುದು ಸರಿಯಲ್ಲ

    ಮೈಸೂರು: ಹೊಣೆಯಲ್ಲ ಅಂತ ಯಾರು ಹೇಳಿದ್ದಾರೆ. ನಾನು ಹಾಗೇ ಹೇಳೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಯೂಟರ್ನ್ ಹೊಡೆದಿದ್ದಾರೆ.

    ನಗರಲ್ಲಿ ನಡೆದಿದ್ದ ಜೆಡಿಎಸ್ ಸಭೆಗೂ ಮುನ್ನ ಮಾತನಾಡಿದ್ದ ಸಚಿವರು, ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಸೋಲಾದರೆ ನಾನಾಗಲಿ ಅಥವಾ ಸಚಿವ ಸಾ.ರಾ.ಮಹೇಶ್ ಹೊಣೆಗಾರರಲ್ಲ ಎಂದು ಹೇಳಿದ್ದರು. ಆದರೆ ಈಗ ನಾನು ಹಾಗೇ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ನಾವು ಎಲ್ಲರೂ ಸೇರಿ ದೋಸ್ತಿ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಅವರ ಗೆಲುವಿಗೆ ಶ್ರಮಿಸಬೇಕು. ಒಂದು ವೇಳೆ ಅವರು ಸೋತರೆ ಕೇವಲ ನಾನು ಹಾಗೂ ಸಚಿವ ಸಾ.ರಾ.ಮಹೇಶ್ ಹೊಣೆಯಾಗಲ್ಲ. ಕಾಂಗ್ರೆಸ್-ಜೆಡಿಎಸ್‍ನ ಎಲ್ಲಾ ನಾಯಕರೂ ಹೊಣೆಯಾಗುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಮೈಸೂರು-ಕೊಡಗು ಅಭ್ಯರ್ಥಿ ಎಚ್.ವಿಶ್ವನಾಥ್ ಸೋತಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರೇ ಹೊಣೆಯೇ ಎಂದು ಪ್ರಶ್ನಿಸಿದ್ದೆಯೇ ಹೊರತು, ಈ ಬಾರಿ ದೋಸ್ತಿ ಅಭ್ಯರ್ಥಿ ಸೋತರೆ ನಾವು ಹೊಣೆಗಾರರು ಅಲ್ಲ ಅಂತ ಹೇಳಿಲ್ಲ. ನಾನು ಏಕವ್ಯಕ್ತಿಯಲ್ಲ. ನಾನು ಎನ್ನುವ ಪದ ನನ್ನಲ್ಲಿ ಬರುವುದಿಲ್ಲ. ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಲ್ಲಾ ನಾಯಕರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಅದನ್ನು ಬಿಟ್ಟು ಎಲ್ಲದಕ್ಕೂ ನೀನೇ ಹೊಣೆ ಎಂದು ಒಬ್ಬ ವ್ಯಕ್ತಿಗೆ ಹೇಳುವುದು ಸರಿಯಲ್ಲ. ಒಬ್ಬನಿಂದಲೇ ಅಭ್ಯರ್ಥಿ ಗೆಲುವು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ ಎಂದರು.

    ದೋಸ್ತಿ ಪಕ್ಷದ ನಾಯಕರು ಮತದಾರರ ಮನವೊಲಿಸಬೇಕು. ವಿಜಯ್‍ಶಂಕರ್ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಜಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಈ ವೇಳೆ ಕೆಲ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಅವರನ್ನು ಸಮಾಧಾನಪಡಿಸಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಸೇರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಮಗೆ ಸಚಿವ ಸ್ಥಾನ ನೀಡಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಎಲ್ಲರೂ ವಿಜಯ್‍ಶಂಕರ್ ಅವರ ಗೆಲುವಿಗೆ ಶ್ರಮಿಸಬೇಕು ಅಂತ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದೇನೆ. ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

    ಕೆಲ ಕಾರ್ಯಕ್ರಮದ ನಿಮಿತ್ತ ಸಿ.ಎಚ್.ವಿಜಯ್‍ಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದೆ. ಇದಾದ ಬಳಿಕ ವಿಜಯ್‍ಶಂಕರ್, ಮಹಾದೇವಪ್ಪ, ತನ್ವೀರ್ ಸೇಠ್ ಅವರು ನಮ್ಮ ಮನೆಗೆ ಆಗಮಿಸಿದ್ದರು. ಆಗ ಎಲ್ಲರೂ ಸುದೀರ್ಘ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಭಾನುವಾರ ಸುದ್ದಿಗೋಷ್ಠಿ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಜೆಡಿಎಸ್ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.

    ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಪ್ರತಿಕ್ರಿಯಿಸಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಮಾತನಾಡಿಲ್ಲ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ನಮ್ಮ ಕಾರ್ಯಕರ್ತರು ಪ್ರಚಾರ ಮಾಡುತ್ತಿಲ್ಲ. ಸ್ಥಳೀಯ ಜೆಡಿಎಸ್ ಮುಖಂಡರು ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

  • ಮೈಸೂರು ಜೆಡಿಎಸ್ ಸಭೆಯಲ್ಲಿ ಗಲಾಟೆ – ಮೋದಿಗೆ ಜೈ ಎಂದ ಕಾರ್ಯಕರ್ತರು

    ಮೈಸೂರು ಜೆಡಿಎಸ್ ಸಭೆಯಲ್ಲಿ ಗಲಾಟೆ – ಮೋದಿಗೆ ಜೈ ಎಂದ ಕಾರ್ಯಕರ್ತರು

    ಮೈಸೂರು: ದೋಸ್ತಿ ಅಭ್ಯರ್ಥಿ ವಿಜಯ್‍ಶಂಕರ್ ಅವರಿಗೆ ಬೆಂಬಲ ನೀಡುವ ಸಲುವಾಗಿ ಕರೆಯಲಾದ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿ ಗಲಾಟೆ ಮಾಡಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಇಂದು ಜೆಡಿಎಸ್ ಸಭೆಯನ್ನು ಆಯೋಜಿಸಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ ಮಾತನಾಡುತ್ತಿದ್ದಾಗ ಕೆಲ ಕಾರ್ಯಕರ್ತರು ಏಕಾಏಕಿ ಗಲಾಟೆಗೆ ಮುಂದಾದರು. ಇದನ್ನು ಓದಿ: ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿಗೆ ಸೋಲಾದ್ರೆ ನಾನು, ಸಾ.ರಾ.ಮಹೇಶ್ ಹೊಣೆಯಾಗಲ್ಲ: ಜಿ.ಟಿ.ದೇವೇಗೌಡ

    “ನೀವು ಈಗ ಮೈತ್ರಿ ಅಂತ ಹೇಳುತ್ತಿದ್ದೀರಿ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿವೆ. ಅದನ್ನು ಮರೆತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಹೇಗೆ ಎಂದು ಕಾರ್ಯಕರ್ತರು, ನಾಯಕರನ್ನು ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದರು.

    ಸಭೆಯಲ್ಲಿ ಕೆಲ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂದು ಕೂಗಿದರು. ಅಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಬಳಿ ಬಂದು ಮತ ಕೇಳಲಿ, ಆಮೇಲೆ ನೋಡುತ್ತೇವೆ ಎಂದು ಕಿಡಿಕಾರಿದರು.

    ಗಲಾಟೆ ಹೆಚ್ಚಾಗುತ್ತಿದ್ದಂತೆ ಸಚಿವ ಜಿ.ಟಿ.ದೇವೇಗೌಡ ಅವರು ಎದ್ದು ನಿಂತು ಕಾರ್ಯಕರ್ತರಿಗೆ ಕೈ ಮುಗಿದರು. ಆದರೂ ಸಭೆಯಲ್ಲಿ ಕಾರ್ಯಕರ್ತರು ಮೈತ್ರಿಯನ್ನು ವಿರೋಧಿಸಿದರು. ಈ ವೇಳೆ ಸಚಿವರು ವೇದಿಕೆ ಬಿಟ್ಟು ಕೆಳಗಿಳಿದು, ಕಾರ್ಯಕರ್ತರ ಬಳಿಗೆ ಹೋಗಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಸಚಿವರ ಮಾತಿಗೂ ಕಾರ್ಯಕರ್ತರು ಕ್ಯಾರೆ ಎನ್ನಲಿಲ್ಲ.

    ಹಾಸನದಲ್ಲೂ ಭಿನ್ನಮತ: ಚನ್ನರಾಯಪಟ್ಟಣ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗುರುವಾರ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಭಾಷಣ ಆರಂಭಿಸುತ್ತಿದ್ದಂತೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ನಾವು ಜೆಡಿಎಸ್‍ಗೆ ಮತ ಹಾಕಲ್ಲ. ಬಿಜೆಪಿ ಹಾಕುತ್ತೇವೆ ಎಂದು ಘೋಷಣೆ ಕೂಗಿದರು. ಈ ವೇಳೆ “ಮೋದಿ, ಮೋದಿ” ಎಂದು ಜೈಕಾರ ಹಾಕಿದ್ದರು. ಮುಖಂಡರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟವೂ ನಡೆಯಿತು. ಕುರ್ಚಿಗಳನ್ನು ಎಸೆದು ಆಕ್ರೋಶ ಹೊರ ಹಾಕಿದ್ದರು.

  • ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿಗೆ ಸೋಲಾದ್ರೆ ನಾನು, ಸಾ.ರಾ.ಮಹೇಶ್ ಹೊಣೆಯಾಗಲ್ಲ: ಜಿ.ಟಿ.ದೇವೇಗೌಡ

    ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿಗೆ ಸೋಲಾದ್ರೆ ನಾನು, ಸಾ.ರಾ.ಮಹೇಶ್ ಹೊಣೆಯಾಗಲ್ಲ: ಜಿ.ಟಿ.ದೇವೇಗೌಡ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲಾದರೆ ನಾನಾಗಲಿ ಅಥವಾ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೊಣೆಗಾರರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

    ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಚಿವರು, 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್ ಸೋತಿದ್ದರು. ಆಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೊಣೆಯಾದರೆ ಹಾಗೇ ಇದು. ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ತಿಳಿಸಿದರು.

    ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್-ಜೆಡಿಎಸ್ ನಡುವೆ ಯುದ್ಧ ನಡೆದಿದೆ. 2018ರ ವಿಧಾನಸಭಾ ಚುನಾವಣೆ ಬಳಿಕ ಈ ವಾತಾವರಣ ನಿರ್ಮಾಣವಾಗಿದೆ. ಆದರೆ ಇದು ರಾಷ್ಟ್ರಮಟ್ಟದ ಚುನಾವಣೆ. ಹೀಗಾಗಿ ಸ್ಥಳೀಯ ವಿರೋಧಗಳನ್ನು ಮರೆತು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದೇವೆ. ಈ ನಿಟ್ಟಿನಲ್ಲಿ ಇಂದು ಸಭೆ ಕೂಡ ಮಾಡಿದ್ದೇವೆ ಎಂದು ತಿಳಿಸಿದರು.

    ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸೂತ್ರದ ಅನ್ವಯ ಹಳೆ ಮೈಸೂರು ಭಾಗದಲ್ಲಿ ಮಂಡ್ಯ, ಹಾಸನ, ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದರೆ, ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಾಗಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಂದ ನಿರೀಕ್ಷಿತ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಈಗ ಬಹಿರಂಗವಾಗಿಯೇ ಬಹಿರಂಗವಾಗಿಯೇ ಕೈ ನಾಯಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

  • ಮುನಿಸು ಮರೆತು ಮಾಜಿ ಸಿಎಂ, ಜಿಟಿ ದೇವೇಗೌಡ ಭೇಟಿ

    ಮುನಿಸು ಮರೆತು ಮಾಜಿ ಸಿಎಂ, ಜಿಟಿ ದೇವೇಗೌಡ ಭೇಟಿ

    ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಕಡು ವೈರಿಗಳಂತೆ ವರ್ತಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ಕೊನೆಗೂ ಪರಸ್ಪರ ಭೇಟಿಯಾಗಿದ್ದಾರೆ.

    ಚಾಮುಂಡೇಶ್ವರಿ ಚುನಾವಣೆ ಸೋಲಿನ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಜಿ.ಟಿ.ದೇವೇಗೌಡರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.

    ಎರಡು ದಿನಗಳ ಹಿಂದೆ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಬೆಂಗಳೂರು ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಒಟ್ಟಿಗೆ ಭೋಜನ ಸವಿದಿದ್ದಾರೆ. ಬಳಿಕ ಮೈಸೂರಿನಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಉಭಯ ನಾಯಕರ ನಡುವೆ ಸುದೀರ್ಘ ಚರ್ಚೆ ನಡೆದಿದೆ. ಈ ಮೂಲಕ ಪಕ್ಷಕ್ಕಾಗಿ, ಮೈತ್ರಿ ಧರ್ಮ ಪಾಲನೆಗಾಗಿ ಪರಸ್ಪರ ಮುನಿಸು ಮರೆತು ಮಾಜಿ ಸಿಎಂ ಹಾಗೂ ಹಾಲಿ ಸಚಿವರು ಒಂದಾಗಿದ್ದಾರೆ.

    ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಜಿ.ಟಿ.ದೇವೇಗೌಡ ಅವರು ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಅವರ ಹೆಸರನ್ನು ಕೂಗಿ, ಜನರಿಂದ ಜೈಕಾರ ಕೂಗಿಸಿದ್ದಾರೆ.

  • ನಾಡದೇವತೆ ಚಾಮುಂಡಿ ತಾಯಿ ಇರುವ ಬೆಟ್ಟದಲ್ಲಿ ನೀರಿಗೆ ಹಾಹಾಕಾರ!

    ನಾಡದೇವತೆ ಚಾಮುಂಡಿ ತಾಯಿ ಇರುವ ಬೆಟ್ಟದಲ್ಲಿ ನೀರಿಗೆ ಹಾಹಾಕಾರ!

    ಮೈಸೂರು: ನಾಡದೇವತೆ ಚಾಮುಂಡಿ ತಾಯಿ ಇರುವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

    10 ದಿನಕ್ಕೆ ಒಮ್ಮೆ ಒಂದು ಗಂಟೆ ನೀರು ಬರುತ್ತೆ, ನಾವು ಹೇಗೆ ಇಲ್ಲಿ ಜೀವನ ಮಾಡಬೇಕು ಹೇಳಿ ಎಂದು ಚಾಮುಂಡಿ ಬೆಟ್ಟದ ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡಗೆ ಪ್ರಶ್ನಿಸಿದಾಗ ಸಚಿವರು ತಬ್ಬಿಬ್ಬಾಗಿದ್ದಾರೆ.

    ಬೆಟ್ಟದ ಸಮಸ್ಯೆ ಪರಿಶೀಲನೆಗೆ ಸಚಿವರು ತೆರಳಿದ್ದಾಗ ಮಹಿಳೆ ಬೆಟ್ಟದಲ್ಲಿನ ನೀರಿನ ಸಮಸ್ಯೆಯನ್ನು ವಿವರಿಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಅತೀ ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಚಿವ ಜಿಟಿಡಿ ಸೂಚಿಸಿದ್ದಾರೆ.

    ಇದೇ ವೇಳೆ ಚಾಮುಂಡಿ ಬೆಟ್ಟದಲ್ಲಿ ಶುಚಿತ್ವ ಕಾಪಾಡುವಂತೆ ಅಧಿಕಾರಿಗಳಿಗೆ ಸಚಿವ ಜಿ.ಟಿ ದೇವೇಗೌಡರು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಂಚೆಯಲ್ಲಿಯೇ ಓಡಿ ಬಿದ್ರು ಸಚಿವರು: ವಿಡಿಯೋ

    ಪಂಚೆಯಲ್ಲಿಯೇ ಓಡಿ ಬಿದ್ರು ಸಚಿವರು: ವಿಡಿಯೋ

    ಮೈಸೂರು: ಪಂಚೆಯಲ್ಲೇ ಓಡುತ್ತಿದ್ದ ಉನ್ನತ ಶಿಕ್ಷಣ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ರಸ್ತೆ ಮಧ್ಯದಲ್ಲಿಯೇ ಬಿದ್ದಿದ್ದಾರೆ. ಅದೃಷ್ಟವಶಾತ್ ಸಚಿವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

    ದಸರಾ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಓವಲ್ಸ್ ಮೈದಾನದಲ್ಲಿ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಚಿವರಾದ ಸಾರಾ ಮಹೇಶ್ ಹಾಗೂ ಜಿ.ಟಿ.ದೇವೇಗೌಡ, ಶ್ರೀನಿವಾಸ್ ಮ್ಯಾರಥಾನ್‍ಗೆ ಚಾಲನೆ ನೀಡಿದರು.

    ಮ್ಯಾರಥಾನ್ ಚಾಲನೆ ಬಳಿಕ ಸಚಿವರು ಓಟಗಾರರ ಜೊತೆಗೆ ಸ್ಪರ್ಧೆ ನೀಡಲು ಮುಂದಾದರು. ಆದರೆ ಪಂಚೆ ಧರಿಸಿದ್ದ ಜಿ.ಟಿ.ದೇವೇಗೌಡ ಅವರು, ಪಂಚೆಯನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ವೇಗವಾಗಿ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಕಾಲು ತೊಡರಾಗಿ ನೆಲಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗಿಲ್ಲ. ಸಚಿವರು ಬೀಳುತ್ತಿದ್ದಂತೆ ಇಬ್ಬರು ಕ್ಯಾಮೆರಾ ಮೆನ್ ಹಾಗೂ ಒಬ್ಬರು ಮ್ಯಾರಥಾನ್ ಸ್ಪರ್ಧಿ ಅವರ ಕೈ ಹಿಡಿದು ಮೇಲೆತ್ತಿದ್ದಾರೆ.

    ಇದಕ್ಕೂ ಮುನ್ನ ಮ್ಯಾರಥಾನ್ ಉದ್ಘಾಟನೆಗೆ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಒಂದೂವರೇ ಗಂಟೆ ತಡವಾಗಿ ಬಂದಿದ್ದರು. ಇದರಿಂಗಾಗಿ ಸ್ಪರ್ಧಿಗಳು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=rcI0vmfDiW0

  • ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    -ಮೈಸೂರು ದಸರಾ ಉಪಾಧ್ಯಕ್ಷ ಸ್ಥಾನಕ್ಕೆ ದೋಸ್ತಿ ಸಚಿವರಲ್ಲಿ ಜಟಾಪಟಿ

    ಚಾಮರಾಜನಗರ: ಮೈತ್ರಿ ಸರ್ಕಾರದಲ್ಲಿ ಕೈ ಹಾಗೂ ತೆನೆ ಸಚಿವರ ವಾಗ್ದಾಳಿ ಮತ್ತೆ ಮುಂದುವರಿದಿದೆ. ಈ ಬಾರಿ ಮೈಸೂರು ದಸರಾ ಸ್ಥಾನಮಾನಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ವಿರುದ್ಧ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಪ್ರತಿ ದಸರಾದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಶೇಷ ಸ್ಥಾನ ಮಾಡ ನೀಡುವುದು ವಾಡಿಕೆ. ಆದರೆ ಜಿ.ಟಿ.ದೇವೇಗೌಡ ಅವರು ಯಾವುದೇ ವಾಡಿಕೆ ಉಳಿಸಿಲ್ಲ. ಎಲ್ಲವನ್ನೂ ನಾನೇ ಮಾಡುತ್ತೇನೆ ಎನ್ನುತ್ತಾರೆ. ಅವರ ದರ್ಬಾರ್ ದಸರಾದಲ್ಲಿ ನಡೆಯಲಿ. ನಾನು ಮೈಸೂರು ದಸರಾಗೆ ಬರಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮನ್ನ ಕರೆಯದೆ ತಮಗೆ ಇಷ್ಟ ಬಂದ ಹಾಗೆ ಮೈಸೂರು ದಸರಾ ಸಮಿತಿಗಳನ್ನು ಮಾಡಿಕೊಂಡರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ ಸ್ಥಾನ ನೀಡುವುದಿರಲ್ಲಿ ಎಲ್ಲಿಯೂ ನನ್ನ ಹೆಸರನ್ನು ಪ್ರಕಟಿಸಿಲ್ಲ. ಇದೆಲ್ಲ ಆಗಿದ್ದು ಜಿ.ಟಿ.ದೇವೇಗೌಡ ಅವರಿಂದ ಎಂದು ಕಿಡಿಕಾರಿದರು.

    ಈ ಹಿಂದೆ ಆಗಿದ್ದೇನು?:
    ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲವು ದಿನಗಳ ಹಿಂದೆ ಮೈಸೂರು ದಸರಾ ವಿಚಾರವಾಗಿ ಸಭೆ ನಡೆದಿತ್ತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮೈಸೂರು ದಸರಾದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಅಷ್ಟೇ ಆಮಂತ್ರಣ ಪತ್ರದಲ್ಲಿ ನನ್ನ ಹೆಸರು ಹಾಗೂ ಫೋಟೋವನ್ನು ಕೂಡ ಸೇರಿಸಿಲ್ಲ. ನಿಮ್ಮ ಇಷ್ಟ ಬಂದ ಹಾಗೆ ಸಮಿತಿ ರಚನೆ ಮಾಡಿರುವಿರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಜಿ.ಟಿ.ದೇವೇಗೌಡ ಅವರನ್ನು ತರಾಟೆ ತಗೆದುಕೊಂಡಿದ್ದರು.

    ಪುಟ್ಟರಂಗಶೆಟ್ಟಿ ಅವರು ಅಸಮಾಧಾನ ಹೊರಹಾಕುತ್ತಿದ್ದಂತೆ ಮನವೊಲಿಕೆಗೆ ಮುಂದಾದ ಜಿ.ಟಿ.ದೇವೇಗೌಡ, ಆಮಂತ್ರಣದಲ್ಲಿ ಹೆಸರು ಹಾಗೂ ಫೋಟೋ ಹಾಕಿಸುತ್ತೇವೆ. ಉಪಾಧ್ಯಕ್ಷರಾಗಿ ಘೋಷಣೆ ಮಾಡುತ್ತೇನೆ ಎಂದು ಓಲೈಸಿದ್ದರು. ಆದರೆ ದಸರಾ ಉಪಾಧ್ಯಕ್ಷರಾಗಿ ಪುಟ್ಟರಂಗನಶೆಟ್ಟಿ ಅವರ ಹೆಸರು ಇದ್ದರೂ, ಎಲ್ಲಿಯೂ ಪ್ರಸ್ತಾಪ ಮಾಡಿಲ್ಲವಂತೆ. ಇದರಿಂದಾಗಿ ಇಬ್ಬರು ಸಚಿವರ ನಡುವೆ ಜಟಾಪಟಿ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿ.ಟಿ ದೇವೇಗೌಡರಿಗೆ ಯಾವ ಖಾತೆ ಅನ್ನೋದು ಇನ್ನೆರಡು ದಿನಗಳಲ್ಲಿ ನಿರ್ಧಾರ: ಸಚಿವ ಸಾರಾ ಮಹೇಶ್

    ಜಿ.ಟಿ ದೇವೇಗೌಡರಿಗೆ ಯಾವ ಖಾತೆ ಅನ್ನೋದು ಇನ್ನೆರಡು ದಿನಗಳಲ್ಲಿ ನಿರ್ಧಾರ: ಸಚಿವ ಸಾರಾ ಮಹೇಶ್

    ಮೈಸೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಖಾತೆ ಬದಲಾವಣೆಗೆ ಒತ್ತಾಯಿಸುತ್ತಿದು, ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಲಿದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಮೈಸೂರಿನಲ್ಲಿ ಗುರುವಾರ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯಿಂದಾಗಿ ಇಂದಿನ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರು ಭಾಗವಹಿಸಿಲ್ಲ. ಇನ್ನೆರಡು ದಿನಗಳಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ಜಿಟಿಡಿಗೆ ಖಾತೆ ಬದಲಾವಣೆ?- ಎಚ್‍ಡಿಡಿ ಜೊತೆ ಸಿಎಂ ಮಾತುಕತೆ

    ಉನ್ನತ ಶಿಕ್ಷಣ ಖಾತೆ ನನಗೆ ಬೇಡ, ಸಹಕಾರ ಇಲ್ಲವೇ, ಅಬಕಾರಿ ಖಾತೆ ನೀಡುವಂತೆ ಸಚಿವ ಜಿ.ಟಿ.ದೇವೇಗೌಡ ಅವರು ಪಟ್ಟು ಹಿಡಿದಿದ್ದರು. ಇದಕ್ಕೆ ಕಾರಣ ಉನ್ನತ ಶಿಕ್ಷಣ ಸಲಹೆಗಾರರಾಗಿ ಪ್ರೊ. ಕೆ.ಎಸ್.ರಂಗಪ್ಪ ಅವರನ್ನು ನೇಮಕ ಮಾಡಲಾಗುತ್ತಿದೆ ಎನ್ನಲಾಗುತ್ತಿತ್ತು. ಅಷ್ಟೇ ಅಲ್ಲದೆ ಕೆಲವು ದಿನಗಳಿಂದ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು. ಇದನ್ನು ಓದಿ: ನಾನು ದೇವೇಗೌಡರ ಸಂಬಂಧಿ ಅಂತಾ ಉನ್ನತ ಹುದ್ದೆ ಸಿಗುತ್ತಿಲ್ಲ: ಪ್ರೊ. ರಂಗಪ್ಪ