Tag: ಸಚಿವ ಜಮೀರ್ ಅಹ್ಮದ್

  • ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗ್ತಾರೆ ಅಂದಿದ್ರೆ ಅವ್ರ ಪರ ಪ್ರಚಾರ ಮಾಡ್ತಿರಲಿಲ್ಲ: ಸಚಿವ ಜಮೀರ್ ಅಹ್ಮದ್

    ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗ್ತಾರೆ ಅಂದಿದ್ರೆ ಅವ್ರ ಪರ ಪ್ರಚಾರ ಮಾಡ್ತಿರಲಿಲ್ಲ: ಸಚಿವ ಜಮೀರ್ ಅಹ್ಮದ್

    ಬಳ್ಳಾರಿ: ಶಾಸಕ ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗುತ್ತಾರೆ ಅಂತಾ ಗೊತ್ತಿದ್ದರೆ, ನಮ್ಮ ಅಪ್ಪನಾಣೆ ನಾನು 2011ರ ಉಪಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡುತ್ತಿರಲಿಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.

    ಜಿಲ್ಲೆಯ ಕೌಲಬಜಾರನಲ್ಲಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೋಮುವಾದಿ ಪಕ್ಷಕ್ಕೆ ಮತ್ತೆಂದು ಹೋಗುವುದಿಲ್ಲ ಅಂತಾ ಶಾಸಕ ಶ್ರೀರಾಮುಲು ಹೇಳಿದ್ದರು. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯಂತೆ 2011ರ ಉಪಚುನಾವಣೆಯಲ್ಲಿ ಶ್ರೀರಾಮಲು ಪರ ಪ್ರಚಾರ ಮಾಡಿದ್ದೆ. ಆದರೆ ಶ್ರೀರಾಮುಲು ಮಾತಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಅವರೊಬ್ಬ ಸುಳ್ಳು ಹೇಳುವ ರಾಜಕಾರಣಿ ಎಂದು ದೂರಿದರು.

    ಒಂದು ವೇಳೆ ಶ್ರೀರಾಮುಲು ಮತ್ತೆ ಬಿಜೆಪಿ ಸೇರುತ್ತಾರೆ ಅಂತಾ ಅವತ್ತೇ ಗೊತ್ತಾಗಿದ್ದರೆ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಅವರ ವಿರುದ್ಧ ಪ್ರಚಾರ ಮಾಡುವುದಕ್ಕೆ ನನಗೆ ಈಗ ಅವಕಾಶ ಕೂಡಿ ಬಂದಿದೆ. ಅವಕಾಶವಾದಿ ರಾಜಕಾರಣ ಮಾಡುವವರನ್ನು ಯಾರೂ ನಂಬುವುದಿಲ್ಲ. ಶ್ರೀರಾಮುಲು ಅವರ ಬಗ್ಗೆ ನಂಬಿಕೆ ಕಳೆದಕೊಂಡಿದ್ದೇವೆ ಅಂತಾ ಜಿಲ್ಲೆಯ ಜನರೇ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವರು, ಶ್ರೀರಾಮುಲು ಅಥವಾ ನಾಯಕ ಸಮುದಾಯವನ್ನು 420 ಅಂತಾ ಮಾಜಿ ಸಿದ್ದರಾಮಯ್ಯ ಅವರು ಹೇಳಿಲ್ಲ. ಶ್ರೀರಾಮುಲು ಅವರಿಗೆ 371 ಜೆ ಬಗ್ಗೆ ಗೊತ್ತಿಲ್ಲವೆಂದು ಲೇವಡಿ ಮಾಡಿದ್ದಾರೆ ಎಂದ ಅವರು, ಕೇವಲ ಒಂದೇ ಜನಾಂಗದ ಮತಗಳಿಂದ ಜಯ ಗಳಿಸಲು ಸಾಧ್ಯವಿಲ್ಲ. ಎಲ್ಲ ಜನಾಂಗದವರು ಬೇಕಾಗುತ್ತಾರೆ ಎಂದು ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೆನ್ನೈ ಬಳಿ ದೇವಸ್ಥಾನಕ್ಕೆ ಹೋಗಿ ಬಂದ್ರು- ಸುಧಾಕರ್ ಪರ ಜಮೀರ್ ಬ್ಯಾಟಿಂಗ್

    ಚೆನ್ನೈ ಬಳಿ ದೇವಸ್ಥಾನಕ್ಕೆ ಹೋಗಿ ಬಂದ್ರು- ಸುಧಾಕರ್ ಪರ ಜಮೀರ್ ಬ್ಯಾಟಿಂಗ್

    ಬೆಂಗಳೂರು: ಶಾಸಕ ಡಾ.ಕೆ ಸುಧಾಕರ್ ಚೆನ್ನೈಗೆ ಹೋಗಿದ್ದು ನಿಜ. ಆದರೆ ಅವರು ಹೊಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿ, ಶನಿವಾರ ರಾತ್ರಿಯೇ ವಾಪಸ್ ಆಗಿದ್ದಾರೆ. ಅವರು ಪಕ್ಷ ಬಿಡುವ ಮಾತೇ ಇಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಚಿವ ಜಮೀರ್ ಅವರು ಸುಧಾಕರ್ ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು. ಇಂದು ಬೆಳಗ್ಗೆ ಡಾ.ಕೆ.ಸುಧಾಕರ್ ನಿವಾಸಕ್ಕೆ ಸಚಿವರು ಬಂದು ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸುಧಾಕರ್ ನನ್ನ ಸ್ನೇಹಿತರು. ತಿಂಡಿ ತಿನ್ನಲು ಕರೆದಿದ್ದರು. ಹೀಗಾಗಿ ಬಂದಿದ್ದೇನೆ. ಅವರು ಊಟಕ್ಕೆ ಕರೆದರೂ ಬರುತ್ತೇನೆ ಎಂದರು. ಇದನ್ನು ಓದಿ: ಸಮ್ಮಿಶ್ರ ಸರ್ಕಾರಕ್ಕೀಗ ಸಿದ್ದರಾಮಯ್ಯ ಟ್ರಬಲ್ ಶೂಟರ್!

    ಇದೇ ವೇಳೆ ಸುಧಾಕರ್ ಅವರು ದೇವಸ್ಥಾನಕ್ಕೆ ಹೋಗುವುದೇ ತಪ್ಪಾ ಎಂದು ಪ್ರಶ್ನಿಸಿದ ಅವರು, ಸುಧಾಕರ್ ಅವರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಅವರು ಚೆನ್ನೈ ಪ್ರವಾಸದ ಕುರಿತು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರು ಯಾವುದೇ ಶಾಸಕರಿಗೂ ಫೋನ್ ಮಾಡಿ, ಎಲ್ಲಿ ಇದ್ದಾರೆ ಅಂತ ವಿಚಾರಿಸಿಲ್ಲ ಎಂದು ತಿಳಿಸಿದರು.

    ಸಚಿವರ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುಧಾಕರ್ ಅವರು, ನನಗೆ ಬ್ಲಾಕ್‍ಮೇಲ್ ಮಾಡಲು ಗೊತ್ತಿಲ್ಲ. ಗೊತ್ತಿರುವುದು ಇ-ಮೇಲ್ ಮಾತ್ರ. ನಾನು ಯಾರನ್ನೂ ಹೆದರಿಸುತ್ತಿಲ್ಲ. ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೇರೆ ಪಕ್ಷ ಸೇರುವ ಮಾತೇ ಇಲ್ಲ ಎಂದರು. ಇದನ್ನು ಓದಿ: ನಾನೊಬ್ಬ ಡಾಕ್ಟರ್, ಆಪರೇಷನ್‍ಗೆ ಒಳಗಾಗುವುದಿಲ್ಲ: ಶಾಸಕ ಸುಧಾಕರ್

    ಕೆಲವು ಅಭಿಪ್ರಾಯ ಹಾಗೂ ಭಿನ್ನಾಭಿಪ್ರಾಯಗಳು ರಾಜಕೀಯದಲ್ಲಿ ಇರುವುದು ಸಹಜ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಯಾರು ಉತ್ತಮ ಕೆಲಸ ಮಾಡುತ್ತಾರೋ ಅಂತಹ ನಾಯಕರನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ನಮ್ಮ ಜ್ಞಾನ ಹಾಗೂ ಸಾಮಥ್ರ್ಯವನ್ನು ಹೈಕಮಾಂಡ್ ಗುರುತಿಸಿ, ಸಚಿವ ಸ್ಥಾನ ನೀಡಿದರೆ ಸ್ವಾಗತಾರ್ಹ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೊಳಗಾದ ಬಡವರಿಗೆ ಸರ್ಕಾರದಿಂದ ಯಾತ್ರೆಗೆ ಅವಕಾಶ: ಜಮೀರ್

    ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೊಳಗಾದ ಬಡವರಿಗೆ ಸರ್ಕಾರದಿಂದ ಯಾತ್ರೆಗೆ ಅವಕಾಶ: ಜಮೀರ್

    ಬೆಂಗಳೂರು: ಹಜ್ ಯಾತ್ರೆ ಪ್ರಕರಣದಲ್ಲಿ ಮೋಸಕ್ಕೆ ಒಳಗಾದ ಬಡ ಕುಟುಂಬಕ್ಕೆ ಸರ್ಕಾರವೇ ಉಚಿತ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಿಕೊಡಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ತಿಲಕ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಮೋಸಕ್ಕೆ ಒಳಗಾದ 113 ಜನರು ಬಡವರೆಂದು ಕೇಳಿಬಂದಿದೆ. ಮೂರ್ನಾಲ್ಕು ವರ್ಷಗಳಿಂದ ಹಣ ಕೂಡಿಸಿ ಹಜ್ ಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರೆಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.

    ಮೋಸಕ್ಕೆ ಒಳಗಾದವರ 113 ಜನರ ಬಗ್ಗೆ ಮಾಹಿತಿ ಕಲೆ ಹಾಕಿ, ಅತ್ಯಂತ ಬಡವರನ್ನು ಗುರುತಿಸಲಾಗುತ್ತದೆ. ಅವರ ಸಂಖ್ಯೆ 20ಕ್ಕೂ ಹೆಚ್ಚಾದರೂ ಸರಿ, ಅವರಿಗೆ ಸರ್ಕಾರದಿಂದ ಹಜ್ ಯಾತ್ರೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಸರ್ಕಾರ ಒಪ್ಪದಿದ್ದರೆ ನನ್ನ ಸ್ವಂತ ಹಣದಲ್ಲಿ ಅವರ ಯಾತ್ರೆಗೆ ಖರ್ಚು ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.

    ಏನಿದು ಹಜ್ ಯಾತ್ರೆ ಪ್ರಕರಣ?
    ಜಯನಗರದ ‘ಹರೀಂ ಟೂರ್ಸ್’ ಏಜೆನ್ಸಿ ಮಾಲೀಕ ಸಿಗ್ಬತ್‍ವುಲ್ಲಾ ಷರೀಫ್ ರಿಯಾಯ್ತಿ ದರದಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ 113 ಮಂದಿಯಿಂದ ಹಣ ಸಂಗ್ರಹಿಸಿದ್ದರು. 15 ವರ್ಷಗಳಿಂದ ಏಜೆನ್ಸಿ ನಡೆಸುತ್ತಿರುವ ಸಿಗ್ಬತ್‍ವುಲ್ಲಾ ಹಾಗೂ ಮಕ್ಕಳು ಇದರಲ್ಲಿ ಭಾಗಿಯಾಗಿದ್ದರು.

    ಹಜ್ ಯಾತ್ರೆಯ ಕುರಿತು ಜಯನಗರ ಸುತ್ತಮುತ್ತ ಪ್ರಚಾರ ಮಾಡಿದ್ದರು. ಅದನ್ನು ನಂಬಿದ ಕೆಲ ಸ್ಥಳೀಯರು, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೂ ವಿಷಯ ತಿಳಿಸಿದ್ದರು. ಈ ಸೌಲಭ್ಯ ಪಡೆಯಲು 113 ಮಂದಿ ತಲಾ 3.20 ಲಕ್ಷ ರೂ. ಹಾಗೂ ತಮ್ಮ ಪಾಸ್ ಪೋರ್ಟ್ ಗಳನ್ನು ಏಜೆನ್ಸಿಗೆ ಕೊಟ್ಟಿದ್ದರು.

    ಜುಲೈ 30ರಂದು ಹಣ ಪಾವತಿ ಮಾಡಿದ್ದ ವ್ಯಕ್ತಿಯೊಬ್ಬರು ತಮ್ಮ ಯಾತ್ರೆಯ ಕುರಿತು ವಿಚಾರಿಸಲು ಬಂದಾಗ, ನೀವು ಯಾರು? ನಮಗೆ ನೀವು ಹಣ ನೀಡಿಲ್ಲ. ಇನ್ನೊಮ್ಮೆ ಕಚೇರಿ ಕಡೆಗೆ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಸಿಗ್ಬತ್‍ವುಲ್ಲಾ ಜೀವ ಬೆದರಿಕೆ ಹಾಕಿದ್ದರಂತೆ. ಇವರ ವಿರುದ್ಧ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಮೊಹಮದ್ ಅರಾಫತ್ ಶಫಿ ಎಂಬುವರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ದೂರು ಕೊಟ್ಟಿದ್ದರು. ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕಮಿಷನರ್ ತಿಲಕ್ ನಗರ ಪೊಲೀಸರಿಗೆ ಸೂಚಿಸಿದ್ದರು.

    ತಮ್ಮನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸುತ್ತಾರೆ ಎಂದು ಅರಿತ ಆರೋಪಿಗಳು ಏಜೆನ್ಸಿ ಮುಚ್ಚಿ ತಲೆ ಮರೆಸಿಕೊಂಡು ಹೋಗಿದ್ದರು. ಅವರ ಪತ್ತೆಗಾಗಿ ಡಿಸಿಪಿ ವಿಶೇಷ ತಂಡ ರಚಿಸಿದ್ದರು. ಆ ತಂಡವು ಆರೋಪಿಗಳ ಮೊಬೈಲ್ ಕರೆ ಮಾಹಿತಿ ಆಧಾರ ಮೇಲೆ ಅಜ್ಮೇರ್ ಹಾಗೂ ಮುಂಬೈನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಬಲೆ ಬೀಸಿದ್ದರು. ಬುಧವಾರ ಅವರನ್ನು ಬಂಧಿಸಿ ತಿಲಕ್ ನಗರ ಪೊಲೀಸ್ ಠಾಣೆಗೆ ತಂದಿದ್ದರು.

    ಸಿಗ್ಬತ್‍ವುಲ್ಲಾ, ಅವರ ಮಕ್ಕಳಾದ ರೆಹಮಾನ್, ರಿಜ್ವಾನ್, ಏಜೆಂಟರಾದ ತೌಸಿಫ್, ಮಹಮದ್ ಮಾಮ್ಜ್ ಹಾಗೂ ಉಮೇರ್ ಬಂಧಿತ ಆರೋಪಿಗಳು. ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮೋಸಕ್ಕೆ ಒಳಗಾದವರು ಹಾಗೂ ಅವರ ಸಂಬಂಧಿಕರು ಗುರುವಾರ ಸಂಜೆ ತಿಲಕ್ ನಗರ ಪೊಲೀಸ್ ಠಾಣೆ ಮುಂದೆ ನಿಂತಿದ್ದರು.