Tag: ಸಚಿವ ಜಮೀರ್ ಅಹ್ಮದ್

  • ಲೋಕ ಚುನಾವಣೆಯಲ್ಲಿ ಮೈತ್ರಿ ಬೇಡವಾಗಿತ್ತು: ಸಚಿವ ಜಮೀರ್

    ಲೋಕ ಚುನಾವಣೆಯಲ್ಲಿ ಮೈತ್ರಿ ಬೇಡವಾಗಿತ್ತು: ಸಚಿವ ಜಮೀರ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಾರದಿತ್ತು. ಇಂತಹ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

    ಲೋಕ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಈ ರೀತಿಯ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಬಾರದಿತ್ತು. ಈ ಅಭಿಪ್ರಾಯ ವೈಯಕ್ತಿಕವಾದ ಅಭಿಪ್ರಾಯ ಅಷ್ಟೇ. ಈಗ ಜನರು ತೀರ್ಪು ನೀಡಿದ್ದು, ಅವರ ನಿರ್ಧಾರವನ್ನು ಗೌರವಿಸಬೇಕಿದೆ ಎಂದರು.

    ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಅವರ ಗೆಲುವು ಸುಲಭವಾಗಿರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮೈತ್ರಿ ಇಲ್ಲದಿದ್ದರೆ ಸುಮಲತಾ ಅವರಿಂದ ಸುಲಭವಾಗಿ ಗೆಲ್ಲುವ ಅವಕಾಶ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ ಎಂದು ಆರೋಪಿಸಿದರು. ಚುನಾವಣೆಯಲ್ಲಿ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 4 ವರ್ಷ ಸರ್ಕಾರ ಮುಂದುವರಿಯುತ್ತದೆ ಎಂದರು.

    ಇದೇ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ಮೈತ್ರಿ ಸರ್ಕಾರದಿಂದಲೇ ಈ ಫಲಿತಾಂಶ ಬಂದಿದೆ ಎನ್ನುವುದು ತಪ್ಪು. ಕರ್ನಾಟಕದಲ್ಲಿ ಮೈತ್ರಿಯಿಂದ ಈ ಫಲಿತಾಂಶ ಬರಲು ಮೈತ್ರಿ ಕಾರಣ ಎಂದರೆ ಬೇರೆ ರಾಜ್ಯಗಳಲ್ಲಿ ಉತ್ತಮ ಫಲಿತಾಂಶ ಬರಬೇಕಿತ್ತು. ಆದರೆ ಅಲ್ಲಿಯೂ ಭಿನ್ನ ಫಲಿತಾಂಶ ಬಂದಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಮುಂದಿನ ಹೋರಾಟದ ಹಾದಿಯನ್ನ ರೂಪಿಸುತ್ತೇವೆ ಎಂದರು.

  • ಕೊಚ್ಚೆಗೆ ಕಲ್ಲು ಹಾಕಿದ್ರೆ ನಮ್ಮ ಮೇಲೆ ಹಾರುತ್ತೆ – ಈಶ್ವರಪ್ಪ ವಿರುದ್ಧ ಜಮೀರ್ ವಾಗ್ದಾಳಿ

    ಕೊಚ್ಚೆಗೆ ಕಲ್ಲು ಹಾಕಿದ್ರೆ ನಮ್ಮ ಮೇಲೆ ಹಾರುತ್ತೆ – ಈಶ್ವರಪ್ಪ ವಿರುದ್ಧ ಜಮೀರ್ ವಾಗ್ದಾಳಿ

    ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕರಾಗಿ ಈಶ್ವರಪ್ಪ ಅವರಿಗೆ ಮಾತನಾಡಲು ಬರುವುದಿಲ್ಲ. ಕೊಚ್ಚೆಗೆ ಕಲ್ಲು ಹಾಕಿದರೆ ನಮ್ಮ ಮೇಲೆ ಹಾರುತ್ತೆ. ಇದರಂತೆ ಅವರ ಮಾತಿಗೆ ಪ್ರಾಮುಖ್ಯತೆ ಕೊಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಈಶ್ವರಪ್ಪ ಮಾತಿಗೆ ಆದ್ಯತೆ ಕೊಡುವ ಅಗತ್ಯವಿಲ್ಲ. ಇದುವರೆಗೂ ಈಶ್ವರಪ್ಪ ಯಾರ ಬಗ್ಗೆಯಾದರು ಉತ್ತಮ ಮಾತು ಹೇಳಿದ್ದರಾ? ಕಳ್ಳ, ಸುಳ್ಳ ಅಂತ ಹೇಳಲು ಅವನು ಯಾರು? ಅವನಿಗೆ ಕಳ್ಳತನ ಮಾಡಿ ಅಭ್ಯಾಸವಿರಬೇಕು. ಎಲ್ಲರಿಗೂ ಕಳ್ಳರು ಎನ್ನುತ್ತಿದ್ದಾನೆ. ಈಶ್ವರಪ್ಪ ಮನುಷ್ಯನಾ ಎಂದು ಜಮೀರ್ ಪ್ರಶ್ನೆ ಮಾಡಿ ಏಕವಚನದಲ್ಲೇ ತಿರುಗೇಟು ನೀಡಿದರು.

    ಸಿದ್ದರಾಮಯ್ಯಗೆ ಜೈಕಾರ: ನಾನು ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಪಕ್ಷಕ್ಕೆ ನಿಷ್ಠೆನಾಗಿದ್ದೆ. ಈಗ ಕಾಂಗ್ರೆಸ್ ನಲ್ಲಿ ಇದ್ದೇನೆ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದು, ಪಕ್ಷಕ್ಕೆ ನಿಷ್ಠೆಯಾಗಿರುತ್ತೇನೆ. ಲೋಕಸಭಾ ಚುನಾವಣೆ ನಂತರ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ಬಿಎಸ್ ವೈ ಮನೆಯಲ್ಲಿ ವಾಚ್ ಮೆನ್ ಕೆಲಸ ಮಾಡಲು ಸಿದ್ಧ ಎಂಬ ಮಾತಿಗೆ ನಾನು ಈಗಲೂ ಬದ್ಧ. ಆದರೆ ನಾನು ಈಶ್ವರಪ್ಪ ಮುಖ ನೋಡಲು ನಾನು ಸಿದ್ಧವಿಲ್ಲ. ಏಕೆಂದರೆ ಈಶ್ವರಪ್ಪ ಸಿಎಂ ಆಗೋದು ಕನಸಿನ ಮಾತು ಎಂದರು.

    ಕಾಂಗ್ರೆಸ್ ನಾಯಕರ ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ ಅವರು, ಇಷ್ಟು ದಿನ ಕಾಂಗ್ರೆಸ್ ನಾಯಕರು ಬಾಯಿಯೇ ಬಂದಂತೆ ಮಾತನಾಡುತ್ತಿದ್ದರು. ಆದರೆ ವಿಶ್ವನಾಥ್ ಅವರು ಹೇಳಿಕೆ ನೀಡಿದ ಬಳಿಕ ಈಗ ನಾವು ಮಾತನಾಡುವುದು ಬೇಡ ನೀವು ಮಾತನಾಡ ಬೇಡಿ ಎಂದು ಹೇಳಿದ್ದಾರೆ. ಆದ್ದರಿಂದಲೇ ಇಬ್ಬರು ಸುಮ್ಮನಿದ್ದಾರೆ. ಆದರೆ ಲೋಕಸಭಾ ಚುನಾವಣೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಮಾಧ್ಯಮಗಳು ಕದನ ವಿರಾಮ ಎಂದು ಹೇಳುತ್ತಿದ್ದು, ಚುನಾವಣೆ ಬಳಿಕ ಈ ಕದನ ಮತ್ತೆ ಮುಂದುವರಿಯುತ್ತದೆ. ಆದರೆ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುದಿಲ್ಲ ಎಂದು ಹೇಳಿದ್ದರು.

  • ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    – ಸಚಿವರ ಕಚ್ಚಾಟದಿಂದಲೇ ಸಿಎಂ ರೆಸಾರ್ಟಿಗೆ ಹೋಗಿದ್ದಾರೆ

    ಯಾದಗಿರಿ: ಸಚಿವ ಜಮೀರ್ ಅಹ್ಮದ್ ಅವರ ತಲೆಕೆಟ್ಟಿದೆ. ಹೀಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಚಿಂಚೋಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ತಲೆ ಕಡಿದುಕೊಳ್ಳುತ್ತೇನೆ ಅಂತ ಈ ಹಿಂದೆ ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೇ ಸಚಿವರಾಗಿದ್ದಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಮನೆ ಕಾಯುತ್ತೇನೆ ಎನ್ನುತ್ತಿದ್ದಾರೆ. ಅವರ ತಲೆ ಆಗಾಗ ಕೆಡುತ್ತಿರುತ್ತದೆ. ಸಚಿವರ ಮಾತಿಗೆ ಬೆಲೆ ಇಲ್ಲ. ಜಮೀರ್ ಅಹ್ಮದ್ ಅವರು ಒಮ್ಮೆ ತಲೆ ಬೋಳಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ತಲೆ ಕಡಿದು ಟೇಬಲ್ ಮೇಲೆ ಇಡುತ್ತೇನೆ ಅಂತ ಹೇಳಿದ್ದರು ಎಂದು ತಿರುಗೇಟು ನೀಡಿದರು.

    ಮೈತ್ರಿಯ ಆಂತರಿಕ ಜಗಳ, ಕಚ್ಚಾಟದಿಂದಲೇ ಸಿಎಂ ಕುಮಾರಸ್ವಾಮಿ ಅವರು ರೆಸಾರ್ಟಿಗೆ ಹೋಗಿದ್ದಾರೆ. ಅವರ ಪಾಪಕ್ಕೆ ಜನರು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

    ಕಳೆದ ಒಂದು ವರ್ಷದಿಂದ ಯಾವ ಸಚಿವರು ಇತ್ತ ಕಡೆ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಐತಿಹಾಸಿಕ ವಿಧಾನಸೌಧ ಬಿಟ್ಟು ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ವೇದಿಕೆಯಲ್ಲಿ ಯಾರು, ಏನು ಮಾತನಾಡುತ್ತಾರೆಂದು ಸಿಎಂಗೆ ತಿಳಿಸಲು ಪೊಲೀಸ್ ಮತ್ತು ಗುಪ್ತಚರ ಇಲಾಖೆಯವರು ಇಲ್ಲಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ರೆಸಾರ್ಟಿನಲ್ಲಿ ಮಲಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದರು.

    ಹಿಂದುಳಿದ ವರ್ಗಗಳ ನಾಯಕ ನಾನೇ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ತಮ್ಮ ಕುರುಬ ಸಮಾಜಕ್ಕೆ ಏನು ಮಾಡಿದ್ದಾರೆ? ಅನ್ನ ಭಾಗ್ಯ ಯೋಜನೆಗಾಗಿ ಕೇಂದ್ರ ಬಿಜೆಪಿ ಸರ್ಕಾರ ಸಹಾಯ ಮಾಡುತ್ತಿದೆ. ಇದನ್ನು ಯಾವ ಕಾಂಗ್ರೆಸ್ ನಾಯಕರೂ ಹೇಳುವುದಿಲ್ಲ. ಕಾಂಗ್ರೆಸ್ ಚೆಲಾಗಳು, ಪುಡಾರಿಗಳು ಅನ್ನಭಾಗ್ಯ ಅಕ್ಕಿಗಳನ್ನು ಪಕ್ಕದ ರಾಜ್ಯದ ಅಮ್ಮನ ಇಡ್ಲಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

  • ಸಿಎಂ ಬೇಜಾರಾದ್ರೆ ನಾವೇನ್ ಮಾಡೋಕೆ ಆಗುತ್ತೆ: ಮಂಡ್ಯ ‘ಕೈ’ ಮುಖಂಡರ ಪರ ಜಮೀರ್ ಬ್ಯಾಟಿಂಗ್

    ಸಿಎಂ ಬೇಜಾರಾದ್ರೆ ನಾವೇನ್ ಮಾಡೋಕೆ ಆಗುತ್ತೆ: ಮಂಡ್ಯ ‘ಕೈ’ ಮುಖಂಡರ ಪರ ಜಮೀರ್ ಬ್ಯಾಟಿಂಗ್

    ಬೆಂಗಳೂರು: ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತದಾನ ಮುಗಿದ ಬಳಿಕ ಸುಮಲತಾ ಅವರ ಜೊತೆ ಊಟಕ್ಕೆ ಹೋಗಿದ್ದಾರೆ. ಇದಕ್ಕೆ ಸಿಎಂ ಕುಮಾರಸ್ವಾಮಿಯವರು ಬೇಜಾರು ಮಾಡಿಕೊಂಡರೆ ನಾವೇನು ಮಾಡಲು ಆಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇಂದು ಮಾಜಿ ಶಾಸಕ ಚಲುವರಾಯ ಸ್ವಾಮಿ ಅವರಿಗೆ ತುರ್ತು ಬುಲಾವ್ ನೀಡಿದ್ದರು. ಈ ಹಿನ್ನಲೆಯಲ್ಲಿ ಆಗಮಿಸಿದ್ದ ಮಾಜಿ ಶಾಸಕರಿಗೆ ಸಾಥ್ ನೀಡಿದ್ದ ಜಮೀರ್ ಅಹಮ್ಮದ್ ಅವರು ಮಾತನಾಡಿ, ಊಟಕ್ಕೆ ಹೋಗುವುದು ತಪ್ಪಲ್ಲ. ಯಾರೇ ಕರೆದರೂ ಊಟಕ್ಕೆ ಹೋಗುತ್ತಾರೆ. ನನ್ನನ್ನು ಕರೆದರೂ ನಾನು ಊಟಕ್ಕೆ ಹೋಗುತ್ತೇನೆ. ಬರ್ತ್‍ಡೇ ಪಾರ್ಟಿ ಅಂತ ಹೋಗಿದ್ದಾರೆ. ಮಂಡ್ಯ ನಾಯಕರು ಹೋಗಿದ್ದ ಪಾರ್ಟಿಗೆ ಸುಮಲತಾ ಅಂಬರೀಶ್ ಅವರು ಬರುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಇದರಲ್ಲಿ ತಪ್ಪೇನಿದೆ ಎಂದು ಮಂಡ್ಯ ಮುಖಂಡರ ಪರ ಬ್ಯಾಟ್ ಬೀಸಿದರು.

    ಮಂಡ್ಯ ಉಪ ಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಸಿಎಂ ಮಾತನಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡಿಲ್ಲ. ಎಲ್ಲರನ್ನೂ ಕರೆದು ಮಾತನಾಡಿದ್ದರೆ ಸರಿ ಆಗುತಿತ್ತು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ದೂರಿದರು.

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲುವ ಪ್ರಶ್ನೆಯೇ ಬರುವುದಿಲ್ಲ. ಅವರು ಕನಿಷ್ಠ 1.5 ಲಕ್ಷ ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತಾಡ್ತಾರೆ: ಎಚ್‍ಡಿಡಿ

    ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತಾಡ್ತಾರೆ: ಎಚ್‍ಡಿಡಿ

    – ಅಲ್ಪಸಂಖ್ಯಾತರನ್ನ ಓಲೈಸಲು ಜಮೀರ್ ಅಹ್ಮದ್ ಮೊರೆಹೋದ ಗೌಡ್ರು

    ತುಮಕೂರು: ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ನನ್ನ ಬದಲಾಗಿ ಆಹಾರ ಹಾಗೂ ನಾಗರಿಗ ಪೂರೈಕೆ ಸಚಿವ ಜಮೀರ್ ಅಹ್ಮದ್ ಮಾತಾಡುತ್ತಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಅಲ್ಪಸಂಖ್ಯಾತರನ್ನ ಓಲೈಸಲು ಸಚಿವರ ಮೊರೆಹೋದರು.

    ನಗರದ ಗ್ರಂಥಾಲಯದ ಆವರಣದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ, ಶಿವಸೇನೆ, ಅಕಾಲಿದಳ ಬಿಟ್ಟರೆ ಎಲ್ಲರೂ ಮಹಾಘಟಬಂಧನ್ ಸೇರಿದ್ದಾರೆ. ಜೆಡಿಎಸ್‍ಗೆ ಕಡಿಮೆ ಶಕ್ತಿ ಹಾಗೂ ಕಾಂಗ್ರೆಸ್‍ಗೆ ಹೆಚ್ಚು ಶಕ್ತಿ ಇರಬಹದು. ಎರಡೂ ಶಕ್ತಿಯನ್ನು ಒಟ್ಟುಗೂಡಿಸಿ ಬಿಜೆಪಿಯನ್ನು ಕುಗ್ಗಿಸಬಹುದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ತಲುಪಲು ಬಿಜೆಪಿಗೆ ಅವಕಾಶ ಕೊಡಬಾರದು. ಈ ಸಾಧನೆಗೆ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.

    ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿದ ಎಚ್.ಡಿ.ದೇವೇಗೌಡ ಅವರು, ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತನಾಡುತ್ತಾರೆ ಎಂದು ತಿಳಿಸಿದರು. ಈ ಮೂಲಕ ಮಾಜಿ ಶಿಷ್ಯ ಜಮೀರ್ ಅಹ್ಮದ್ ಅವರ ಮೂಲಕ ಅಲ್ಪಸಂಖ್ಯಾತರನ್ನ ಓಲೈಸಲು ಯತ್ನಿಸಿದರು.

    ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡ ಅವರು ಭಾಷಣ ಆರಂಭಿಸಿದ ಐದು ನಿಮಿಷದಲ್ಲೇ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಧ್ವನಿ ಧ್ವನಿವರ್ಧಕದ ಮೂಲಕ ಕೇಳಿಸಿತು. ಇದರಿಂದಾಗಿ ಸ್ವಲ್ಪ ಸಮಯ ಭಾಷಣವನ್ನು ನಿಲ್ಲಿಸಿದರು. ಪಾರ್ಥನೆ ಮುಗಿದ ಬಳಿಕ ಪುನಃ ಭಾಷಣ ಆರಂಭಿಸಿ, ಕಡಿಮೆ ಸಮಯದಲ್ಲಿ ಮಾತು ನಿಲ್ಲಿಸಿ ಸಚಿವ ಜಮೀರ್ ಅಹ್ಮದ್ ಅವರಿಗೆ ಅವಕಾಶ ನೀಡಿದರು.

  • ದೇಶ ಅಭಿವೃದ್ಧಿ ಆಗ್ತಿಲ್ಲ – ಮೋದಿ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದು ಜಮೀರ್ ವ್ಯಂಗ್ಯ

    ದೇಶ ಅಭಿವೃದ್ಧಿ ಆಗ್ತಿಲ್ಲ – ಮೋದಿ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದು ಜಮೀರ್ ವ್ಯಂಗ್ಯ

    ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ಟ್ರೈಲ್ ನಲ್ಲೇ ಭಾಷಣ ಮಾಡಿದ ಟಾಂಗ್ ಕೊಟ್ಟಿದ್ದು, ಜಮೀರ್ ಅವರ ಭಾಷಣ ಕೇಳಿದ ಸಭಿಕರು ಬಿದ್ದು ಬಿದ್ದು ನಕ್ಕಿದ್ದಾರೆ.

    ನಗರದ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ದೇಶ ಅಭಿವೃದ್ಧಿ ಆಗಿಲ್ಲ. ಆದ್ರು ಅವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.

    ಥೇಟ್ ಮೋದಿ ಅವರಂತೆಯೇ ಎರಡು ಕೈಗಳನ್ನು ಅಗಲಿಸಿ ಮಾತನಾಡಿದ ಸಚಿವರು, ‘ಮನ್ ಕಿ ಬಾತ್’ ಮಾಡುವುದರಿಂದ ಏನು ಅಭಿವೃದ್ಧಿ ಆಗಿಲ್ಲ. ನಮಗೇ ಮನ್ ಕಿ ಬಾತ್ ಕಾರ್ಯಕ್ರಮ ಬೇಡ, ಕಮ್ ಕಿ ಬಾತ್ ಕಾರ್ಯಕ್ರಮ ಬೇಕು. ಜನರಿಗೆ ಚುನಾವಣೆಗೂ ಮುನ್ನ ನೀಡಿದ ಭರವಸೆಗಳು ಈಡೇರಿಲ್ಲ. ಸಬ್ ಕ ಸಾಥ್ ಸಬ್ ಕ ವಿಕಾಸ್ ಎನ್ನುತ್ತೀರಿ, ಆದರೆ ಯಾರ ಅಭಿವೃದ್ಧಿ ಆಗಿದೆ ಎಂದು ಪ್ರಶ್ನೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮೀರ್ ಅಹ್ಮದ್ ಕೆಲಸ ಮಾಡೋ ವ್ಯಕ್ತಿ, ಅದಕ್ಕೆ ಮಂತ್ರಿ ಮಾಡಿದೆ: ಸಿದ್ದರಾಮಯ್ಯ

    ಜಮೀರ್ ಅಹ್ಮದ್ ಕೆಲಸ ಮಾಡೋ ವ್ಯಕ್ತಿ, ಅದಕ್ಕೆ ಮಂತ್ರಿ ಮಾಡಿದೆ: ಸಿದ್ದರಾಮಯ್ಯ

    – ಎಲ್ಲರ ಜೊತೆ ಬೆರೆತು ಕೆಲಸ ಮಾಡುವ ಹೃದಯವಂತ ಜಮೀರ್
    – ಮುಸ್ಲಿಂರನ್ನ, ಕ್ರಿಶ್ಚಿಯನ್‍ರನ್ನು ಕಡೆಗಣಿಸಿದ ಬಿಜೆಪಿಯಿಂದ ‘ಸಬ್ ಕಾ ವಿಕಾಸ್’ ಜಪ

    ಬಾಗಲಕೋಟೆ: ಸಚಿವ ಜಮೀರ್ ಅಹ್ಮದ್ ಅವರನ್ನು ಮಂತ್ರಿ ಮಾಡಲು ಬೇರೆಯವರು ಅಸಮಾಧಾನ ಆಗುತ್ತಾರೆಂದು ಕೆಲವರು ಹೇಳಿದರು. ಆದರೂ ಅವರನ್ನೇ ಸಚಿವರನ್ನಾಗಿ ಮಾಡಿದೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಆಹಾರ ಹಾಗೂ ನಾಗರಿಕ ಸಬರಾಜು ಸಚಿವರ ಪರ ಬ್ಯಾಟ್ ಬೀಸಿದ್ದಾರೆ.

    ಬಾದಾಮಿಯಲ್ಲಿ ನಡೆದ ಅಂಜುಮ್ ಎ ಇಸ್ಲಾಂ ಸಂಸ್ಥೆಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಸಿಎಂ, ಸಚಿವ ಜಮೀರ್ ಅಹ್ಮದ್ ಎಲ್ಲರ ಜೊತೆ ಬೆರೆತು ಕೆಲಸ ಮಾಡುವ ಹೃದಯವಂತ. ಜಮೀರ್ ಅವರೊಂದಿಗೆ ಒಟ್ಟು ಏಳು ಜನರು ಕಾಂಗ್ರೆಸ್ ಸೇರಿದ್ದರು. ಎಲ್ಲರಿಗೂ ವಿಧಾನಸಭಾ ಚುನಾವಣೆ ಟಿಕೆಟ್ ಕೊಟ್ಟಿದ್ದೆ. ಅವರಲ್ಲಿ ಮೂವರು ಗೆದ್ದರು. ಜಮೀರ್ ಅಹ್ಮದ್ ಅವರು ಮಂತ್ರಿ ಮಾಡುವಂತೆ ಕೇಳಿಕೊಂಡು ಬರಲಿಲ್ಲ. ಆದರೂ ಕಾಂಗ್ರೆಸ್ ಪಕ್ಷ ಅವರನ್ನ ಮಂತ್ರಿ ಮಾಡಿದೆ ಎಂದು ಸಚಿವರನ್ನು ಹೊಗಳಿದರು. ಇದನ್ನು ಓದಿ: ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್ ಹೀರೋ: ಸಿದ್ದರಾಮಯ್ಯ

    ನಾನು ಹಾಗೂ ಸಚಿವ ಜಮೀರ್ ಅಹ್ಮದ್ ಎಲ್ಲ ವರ್ಗದ ಜನರ ಪರವಾಗಿದ್ದೇವೆ. ವಿಶೇಷವಾಗಿ ಎಲ್ಲ ಜಾತಿಯ ಬಡ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ. ನಾನು ಅಕ್ಕಿ, ಹಾಲು ಕೊಟ್ಟೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನಿಧಿ ನೀಡಿರುವೆ ಎಂದ ಅವರು, ಇಲ್ಲಿ ಯಾರು ಯಾರ ಗುಲಾಮರಲ್ಲ. ಅಧಿಕಾರ ಸಿಕ್ಕಾಗ ಜನರ ಸೇವೆ ಮಾಡುವುದನ್ನು ಕಲಿಯಬೇಕು. ಇದು ನಮ್ಮ ಕರ್ತವ್ಯ ಕೂಡ ಎಂದು ಮಾಜಿ ಸಿಎಂ ಹೇಳಿದರು.

    ದೇಶದ ಶೇ. 14 ಮುಸ್ಲಿಮರು, ಶೇ. 2 ರಷ್ಟು ಕ್ರಿಶ್ಚಿಯನ್ ರನ್ನ ಬಿಟ್ಟು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಬಿಜೆಪಿಯವರು ಹೇಳುತ್ತಾರೆ. ಇದು ಯಾವ ರೀತಿಯ ಸಬ್ ಕಾ ವಿಕಾಸ್ ರೀ ಮಿಸ್ಟರ್ ಮೋದಿ ಅವರೇ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

    ನನ್ನ ಅಧಿಕಾರ ಅವಧಿಯಲ್ಲಿ ಅನೇಕ ಜಯಂತಿಗಳನ್ನು ಜಾರಿಗೆ ತಂದಿದ್ದೇನೆ. ಆದರೆ ಟಿಪ್ಪು ಜಯಂತಿಗೆ ಕೆಲವರು ವಿರೋಧ ಮಾಡಿದರು. ಅವರು ಆರೋಪಿಸುವಂತೆ ಟಿಪ್ಪು ಮತಾಂದನಾಗಿಲ್ಲ. ಟಿಪ್ಪು ದೇಶಪ್ರೇಮಿ, ಸ್ವತಂತ್ರ ಪ್ರೇಮಿ. ಆದರೂ ಅವರ ಬಗ್ಗೆ ಸುಮ್ನೆ ಅಪಪ್ರಚಾರ ಮಾಡಿದರು. ಬಿಜೆಪಿಯವರು ಡೋಂಗಿಗಳು ಟಿಪ್ಪು ಜಯಂತಿಗೆ ಬಿಡಲ್ಲ ಎನ್ನುತ್ತಾರೆ. ಅದೇನೇ ಆಗಲಿ ಎಲ್ಲ ಜಯಂತಿ ರೀತಿ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಸವಾಲು ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿದ್ದರಾಮಯ್ಯ ಬಂದ್ಮೇಲೆ ಕಾಂಗ್ರೆಸ್ ಬಲಿಷ್ಠವಾಗಿದೆ – ಜನಾರ್ದನ ಪೂಜಾರಿಗೆ ಜಮೀರ್ ತಿರುಗೇಟು

    ಸಿದ್ದರಾಮಯ್ಯ ಬಂದ್ಮೇಲೆ ಕಾಂಗ್ರೆಸ್ ಬಲಿಷ್ಠವಾಗಿದೆ – ಜನಾರ್ದನ ಪೂಜಾರಿಗೆ ಜಮೀರ್ ತಿರುಗೇಟು

    ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ಗೆ ಬಂದ ಮೇಲೆ ಪಕ್ಷ ಬಲಿಷ್ಠವಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಬೋರ್ಡ್ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಇಂದು ಹಾವೇರಿ ನಗರದಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜನಾರ್ದನ ಪೂಜಾರಿ ಹೇಳಿಕೆಗೆ ತಿರುಗೇಟು ನೀಡಿದರು. ಅವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿದ್ದಾಗ ಪಕ್ಷ ಹೇಗಿತ್ತು ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ ಅವರ ಶಕ್ತಿ ಪಕ್ಷ ಕಾರ್ಯಕರ್ತರಿಗೆ ಗೊತ್ತಿದೆ. ಆದರೆ ಪಾಪ ಜನಾರ್ದನ ಪೂಜಾರಿ ಅವರಿಗೆ ಗೊತ್ತಿಲ್ಲ ಎಂದರು.

    ಕಾಂಗ್ರೆಸ್ ಪಕ್ಷವನ್ನು ಯಾರು ಮುಗಿಸಿದ್ದಾರೆ ಎನ್ನುವುದು ಕೂಡ ತಿಳಿದಿದ್ದು, ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದ ಕಾಲದಿಂದಲೂ ಅದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಅಂದಿನಿಂದಲೂ ಕೂಡ ಪಕ್ಷ ಮತ್ತಷ್ಟು ಬಲಿಷ್ಠ ಆಗುತ್ತಾ ಬರುತ್ತಿದೆ. ಎಲ್ಲವನ್ನ ಪಕ್ಷದ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದು ಹೇಳಿ ಟಾಂಗ್ ನೀಡಿದರು.

    ಮಂಗಳೂರಿನಲ್ಲಿ ಗುರುವಾರ ಮಾತನಾಡಿದ್ದ ಜನಾರ್ದನ ಪೂಜಾರಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸುವುದಕ್ಕೆ ಪಕ್ಷ ಸೇರಿಕೊಂಡರು. ಸಿದ್ದರಾಮಯ್ಯನವರಿಂದ ಇಂದು ಸಮ್ಮಿಶ್ರ ಸರ್ಕಾರ ರಚನೆಯಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ. ಸರ್ಕಾರ ಉಳಿಯುವಲ್ಲಿ ದೊಡ್ಡ ಗೌಡರದ್ದು ಮಹತ್ವದ ಪಾತ್ರವಿದೆ. ದೇವೇಗೌಡರನ್ನು ಯಾರು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕ ಬಿಸಿ ಪಾಟೀಲ್‍ಗೆ ಸಿಹಿ ಸುದ್ದಿಕೊಟ್ಟ ಜಮೀರ್ ಅಹ್ಮದ್!

    ಶಾಸಕ ಬಿಸಿ ಪಾಟೀಲ್‍ಗೆ ಸಿಹಿ ಸುದ್ದಿಕೊಟ್ಟ ಜಮೀರ್ ಅಹ್ಮದ್!

    ಹಾವೇರಿ: ಸಮ್ಮಿಶ್ರ ಸರ್ಕಾರದ ರಚನೆಯಾದ ಬಳಿಕ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಶಾಸಕ ಬಿಸಿ ಪಾಟೀಲ್ ಅವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಗೆ ವೇಳೆ ಮಂತ್ರಿಸ್ಥಾನ ನೀಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಶಾಸಕ ಬಿಸಿ ಪಾಟೀಲ್ ನನಗಿಂತ ಹಿರಿಯರು. ನಾನು ಅವರನ್ನು ಮಂತ್ರಿ ಮಾಡಬೇಕೆಂದು ಮುಖಂಡರಿಗೆ ತಿಳಿಸಿದ್ದೇನೆ. ಖಂಡಿತ ಅವರು ಈ ಬಾರಿ ಸಚಿವರಾಗುತ್ತಾರೆ. ಮುಂದಿನ ಡಿಸೆಂಬರ್ 3ರ ಒಳಗೆ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಶಾಸಕ ಬಿಸಿ ಪಾಟೀಲ್, ನಾನು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು, ಯಾವುದಕ್ಕೂ ಈಗಲೇ ನಿರ್ಧಾರ ಕೈಗೊಳ್ಳುವುದಿಲ್ಲ. ಕಳೆದ 4, 5 ತಿಂಗಳಿನಿಂದ ಸಚಿವ ಸ್ಥಾನ ಬಗ್ಗೆ ಕಾಯುತ್ತಿದ್ದೇನೆ. ಇನ್ನು ಹತ್ತು ದಿನ ಕಾಯುವುದರಲ್ಲಿ ಏನು ಆಗುವುದಿಲ್ಲ. ಇಲ್ಲವಾದರೆ ಶಾಸಕನಾಗಿಯೇ ಇರುತ್ತೇನೆ. ಸಚಿವನಾದರೆ ತಾಲೂಕಿನ, ಜಿಲ್ಲೆಯ ಸೇವೆ ಮಾಡಲು ಸಹಕಾರ ಆಗಲಿದೆ. ಶೀಘ್ರವೇ ಸಂಪುಟ ರಚನೆ ಮಾಡುವುದಾಗಿ ಹೇಳಿದ್ದಾರೆ. ಈ ಬಾರಿ ಆಗದಿದ್ದರೆ ಇನ್ನೊಂದು ದಿನಾಂಕ ಕೊಡಬಹುದು. ನಾನು ಆಶಾವಾದಿಯಾಗಿದ್ದು, ತಾಳಿದವನು ಬಾಳಿಯಾನು ಎಂಬಂತೆ ನಾನು ಶಾಸನಾಗಿಯೇ ಇರುತ್ತೇನೆ ಎಂದರು.

    ಇದಕ್ಕೂ ಮುನ್ನ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಪರಮೇಶ್ವರ್ ಅವರು, ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುವ ಅಗತ್ಯವಿದೆ. ಆದರೆ ಪಂಚರಾಜ್ಯಗಳ ಚುನಾವಣೆಯ ಪ್ರವಾಸದಲ್ಲಿ ರಾಹುಲ್ ಗಾಂಧಿ ಅವರು ನಿರತರಾಗಿವುದರಿಂದ ಕಾರಣ ಸಚಿವ ಸಂಪುಟ ಸಭೆ ತಡವಾಗಲಿದೆ. ಅಧಿವೇಶನದ ಒಳಗೆ ಸಂಪುಟ ವಿಸ್ತರಣೆ ಮಾಡಿದರೆ ಉತ್ತಮವಾಗಿರಲಿದೆ ಎಂದು ಹೈಕಮಾಂಡ್‍ಗೆ ಮನವಿ ಮಾಡಿದ್ದೇವೆ. ಅವರು ಯಾವ ರೀತಿ ನಮಗೇ ಸೂಚನೆ ನೀಡುತ್ತಾರೆ ಎಂಬುವುದನ್ನು ಕಾದು ನೋಡಬೇಕು ಎಂದರು. ಡಿಸಿಎಂ ಪರಮೇಶ್ವರ್ ಹೇಳಿಕೆ ಬೆನ್ನಲ್ಲೇ ಶಾಸಕ ಬಿಸಿ ಪಾಟೇಲ್ ಈ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಎಸ್‍ವೈಗೆ ಅಧಿಕಾರ ಸಿಕ್ಕಿಲ್ಲ: ಜಮೀರ್ ಅಹ್ಮದ್

    ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಎಸ್‍ವೈಗೆ ಅಧಿಕಾರ ಸಿಕ್ಕಿಲ್ಲ: ಜಮೀರ್ ಅಹ್ಮದ್

    ಬೆಂಗಳೂರು: ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬಿಜೆಪಿ 2013ರಲ್ಲಿ ಟಿಪ್ಪು ಜಯಂತಿ ಆಚರಿಸಿಲ್ಲ. ಹೀಗಾಗಿಯೇ ಅವರು ಅಧಿಕಾರಕ್ಕೆ ಬರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ 3 ವರ್ಷಗಳ ಕಾಲ ಆಚರಣೆ ಮಾಡಿದರು. ಅದೇ ಕಾರಣಕ್ಕೆ ಅವರು ಪದೇ ಪದೇ ಗೆಲುವು ಸಾಧಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

    ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಬಿ.ಎಸ್.ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದಾರೆ. ಅಬ್ಬಾಬ್ಬಾ ಏನದು ಟಿಪ್ಪು ಕತ್ತಿ, ಟೋಪಿ ವೇಷ, ಮುಸ್ಲಿಂ ಬಂಧು ಅಂತ ನಾಟಕ ಮಾಡಿದರು. ನೋಡಿ… ನೋಡಿ… ಬಿಜೆಪಿಯವರ ಟಿಪ್ಪು ಜಯಂತಿ ಆಚರಣೆ ಡ್ರಾಮ ಎಂದು ವ್ಯಂಗ್ಯವಾಡಿದ ಸಚಿವರು, ತಮ್ಮ ಮೊಬೈಲ್ ತೆಗೆದು ವಿಡಿಯೋ ತೋರಿಸಿದರು.

    ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಶ್ರೀರಾಮುಲು, ಆರ್.ಅಶೋಕ್, ಪಿ.ಸಿ.ಮೋಹನ್, ಸಿ.ಪಿ.ಯೋಗೇಶ್ವರ್ ಟಿಪ್ಪು ಜಯಂತಿ ಆಚರಿಸಿದ ವಿಡಿಯೋ ತೋರಿಸಿದ ಸಚಿವ ಜಮೀರ್ ಅಹ್ಮದ್ ಬಿಜೆಪಿ ನಾಯಕರ ಕಾಲೆಳೆದರು.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಬ್ಯಾಟ್ ಬೀಸಿದ ಸಚಿವ ಜಮೀರ್ ಅಹ್ಮದ್, ವಾರ್ತಾ ಇಲಾಖೆ ಆಹ್ವಾನ ಪತ್ರಿಕೆ ನೋಡಿ ಶಾಕ್ ಆಗಿತ್ತು. ಆಗ ನಿರ್ದೇಶಕರು ಕೇಳಿದರೆ ಸಿಎಂ ಕಚೇರಿಯಿಂದ ಹೆಸರು ಬೇಡ ಅಂತ ಅಂದಿದ್ದರು ಎನ್ನುವ ಮಾಹಿತಿ ಕೊಟ್ಟರು. ಹೀಗಾಗಿ ನಾನೇ ಖುದ್ದು ಕುಮಾರಸ್ವಾಮಿ ಅವರಿಗೆ ನವೆಂಬರ್ 3 ರಂದು ಕರೆ ಮಾಡಿ ವಿಚಾರಿಸಿದೆ. ಆಗ ಅವರು ಆರೋಗ್ಯ ವಿಚಾರವಾಗಿ 3 ದಿನಗಳ ಕಾಲ ಬೇರೆ ಊರಿಗೆ ಹೋಗುತ್ತಿದ್ದಾರೆ ಅಂತ ತಿಳಿಸಿದರು ಎಂದು ಸ್ಪಷ್ಟನೆ ನೀಡಿದ ಸಚಿವರು, ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ. ಟಿಪ್ಪು ಜಯಂತಿ ಆಚರಣೆ ಅಷ್ಟೇ ಎಂದು ಗುಡುಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews