Tag: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

  • ಜೂನ್ 1ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನ ಓಪನ್: ಸಚಿವ ಪೂಜಾರಿ

    ಜೂನ್ 1ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನ ಓಪನ್: ಸಚಿವ ಪೂಜಾರಿ

    ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿ ಮಾಡಲಾಗಿದ್ದ ಲಾಕ್‍ಡೌನ್‍ನಿಂದ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಬರೋಬ್ಬರಿ 63 ದಿನಗಳ ಬಳಿಕ ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

    ದೇವಾಲಯಗಳನ್ನು ತೆರೆಯುವ ಕುರಿತ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭಾಗಿದ್ದರು. ಸಭೆಯಲ್ಲಿ ಜೂನ್ ತಿಂಗಳಲ್ಲಿ ದೇವಸ್ಥಾನಗಳಿಗೆ ಅವಕಾಶ ಕೊಡುವ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಜೂನ್ 1 ರಿಂದ ದೇವಸ್ಥಾನ ತೆರೆಯುವ ನಿರ್ಧಾರ ಮಾಡಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಮಸೀದಿ, ಚರ್ಚ್‍ಗಳನ್ನು ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

    ದೇವಾಲಯಗಳನ್ನು ತೆರೆಯಲು ಮಾರ್ಚ್ 31ರ ವೇಳೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಧಾರ್ಮಿಕ ಸಭೆ, ಜಾತ್ರೆ ಹಾಗೂ ದೇವರ ಉತ್ಸವಗಳನ್ನು ನಡೆಸಲು ಅನುಮತಿ ಇಲ್ಲ. ನಾಳೆಯಿಂದ ಆಯ್ದ 52 ದೇವಸ್ಥಾನಗಳಲ್ಲಿ ಆನ್‍ಲೈನ್ ಮೂಲಕ ದೇವರ ಸೇವೆಗಳ ಕಾರ್ಯಗಳ ಬುಕಿಂಗ್ ಆರಂಭ ಮಾಡಲಾಗುತ್ತದೆ. ಮೈಸೂರು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮುಕಾಂಭಿಕಾ, ಧರ್ಮಸ್ಥಳ ಸೇರಿದಂತೆ ಪ್ರಮುಖ 52 ದೇವಾಲಯಗಳು ಜೂನ್ 1ರಿಂದ ತೆರೆಯಲಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಹೆಗ್ಗಡೆ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಭಕ್ತರಿಗೆ ಮಂಜುನಾಥನ ದರ್ಶನ ಭಾಗ್ಯ ನೀಡಲಾಗುವುದು. ಮುಜರಾಯಿ ಇಲಾಖೆಯ ಸೂಚನೆಯಂತೆ ಧರ್ಮಸ್ಥಳದಲ್ಲೂ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಸಾಮಾಜಿಕ ಅಂತರ, ಸ್ಯಾನಿಟೈಜರ್, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸಿದ್ಧತೆ ನಡೆದಿದೆ. ಭಕ್ತರಿಗೆ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.

  • ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ, ಇ-ಹುಂಡಿ ವ್ಯವಸ್ಥೆ ಜಾರಿಗೆ ಸರ್ಕಾರ ನಿರ್ಧಾರ

    ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ, ಇ-ಹುಂಡಿ ವ್ಯವಸ್ಥೆ ಜಾರಿಗೆ ಸರ್ಕಾರ ನಿರ್ಧಾರ

    ಬೆಂಗಳೂರು: ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿವ ಬಿಜೆಪಿ ಸರ್ಕಾರವು, ಇ-ಹುಂಡಿ ವ್ಯವಸ್ಥೆ ಜಾರಿಗೆ ತರಲು ನಿರ್ಧಾರ ಕೈಗೊಂಡಿದೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, 15 ದಿನಗಳಲ್ಲಿ ರಾಜ್ಯ ಧಾರ್ಮಿಕ ಪರಿಷತ್ ರಚನೆ ಆಗಲಿದೆ. ಜೊತೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ರಚನೆ ಮಾಡುತ್ತೇವೆ. ಈ ಬೆನ್ನಲ್ಲೇ ಇ-ಹುಂಡಿ ಪ್ರಕ್ರಿಯೆ ಜಾರಿಗೆ ತರುತ್ತಿದ್ದೇವೆ. ಪ್ರಾರಂಭದಲ್ಲಿ 10-15 ದೇವಸ್ಥಾನಗಳಲ್ಲಿ ಇ-ಹುಂಡಿ ಪ್ರಕ್ರಿಯೆ ಜಾರಿ ಬಲಿದೆ ಎಂದು ತಿಳಿಸಿದರು.

    ಜಿಲ್ಲಾ ಪರಿಷತ್ ರಚನೆ ಆದ ಬಳಿಕ ಬಿ ಮತ್ತು ಸಿ ವಲಯದ ದೇವಾಲಯಗಳಿಗೆ ಆಡಳಿತ ಮಂಡಳಿಗಳ ನೇಮಕ ಮಾಡಲಾಗುತ್ತದೆ. ರಾಜ್ಯದಲ್ಲಿ ಇರು ಮುಜರಾಯಿ ದೇವಾಲಯಗಳ ಜಾಗ ಸರ್ವೆ ಮಾಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ವೆ ತಂಡ ರಚನೆ ಮಾಡಲಾಗುವುದು. ಸರ್ವೆ ವೇಳೆ ದೇವಸ್ಥಾನದ ಜಾಗ ಅತಿಕ್ರಮ ಮಾಡಿದ್ದರೆ ವಶಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇಷ್ಟು ದಿನ ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದ್ದ ಇಂಜಿನಿಯರಿಂಗ್ ವಿಭಾಗದ ಬದಲಾಗಿ ಇಲಾಖೆಯಿಂದಲೇ ಇಂಜಿನಿಯರಿಂಗ್ ವಿಭಾಗ ಪ್ರಾರಂಭ ಮಾಡಲಾಗುತ್ತೆ. ಇಲಾಖೆಯ ವ್ಯಾಪ್ತಿಗೆ ಬರುವ ಅನುವಂಶಿಕ ದೇವಸ್ಥಾನಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಎ ವರ್ಗದ 62 ದೇವಾಲಯಗಳಿಗೆ ಆಡಳಿತ ಮಂಡಳಿ ರಚನೆ ಮಾಡುವ ಆದೇಶ ಹೊರಡಿಸಲಾಗಿದೆ. ಇದಲ್ಲದೆ ಇಲಾಖೆಯಲ್ಲಿ ಅಗತ್ಯವಾಗಿ ಖಾಲಿ ಇರುವ ಒಂದು ಸಾವಿರ ಹುದ್ದೆಗಳ ನೇಮಕ ಶೀಘ್ರವೇ ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

    ಏನಿದು ಇ-ಹುಂಡಿ?
    ಭಕ್ತರು ನೀಡುವ ಕಾಣಿಕೆಯನ್ನು ನೇರವಾಗಿ ಇ-ಹುಂಡಿಗೆ ಹಾಕುವುದು. ಇದರಿಂದಾಗಿ ಕಾಣಿಕೆ ನೀಡುವುದಕ್ಕೆ ಯಾವುದೇ ವ್ಯಕ್ತಿಗಳ ಅವಶ್ಯಕತೆ ಇರುವುದಿಲ್ಲ. ಎಷ್ಟು ಹಣ ಹಾಕಲಾಗಿದೆ, ಹೆಸರು ಸಮೇತ ನಿಮಗೆ ಮಾಹಿತಿ ತಕ್ಷಣಕ್ಕೆ ಲಭ್ಯವಾಗುತ್ತದೆ. ಕಾಣಿಕೆ ಮೊತ್ತದ ವಿವರ ಸ್ಲಿಪ್‍ನಲ್ಲಿ ತಕ್ಷಣವೇ ಲಭ್ಯವಾಗಲಿದೆ. ಯಾವುದೇ ವ್ಯಕ್ತಿ ಕೈಗೆ ಕಾಣಿಕೆ ಕೊಡುವ ಅವಶ್ಯಕತೆ ಇರುವುದಿಲ್ಲ. ಅಷ್ಟೇ ಅಲ್ಲದೆ ಸ್ಲಿಪ್ ಬರೆಸುವ ಗೋಜು ಇರುವುದಿಲ್ಲ. ಭಕ್ತರು ಇ-ಹುಂಡಿಯಲ್ಲಿ ಹಾಕಿದ ಹಣ ನೇರವಾಗಿ ದೇವಸ್ಥಾನ ಬ್ಯಾಂಕ್ ಅಕೌಂಟ್‍ಗೆ ಜಮೆ ಆಗುತ್ತೆ. ಈ ಸೇವೆಗಳನ್ನು ನಿಂತಲ್ಲೆ ಬುಕ್ ಮಾಡಿಸಬಹುದು. ಇ-ಹುಂಡಿಯಲ್ಲಿ ಹಣ ಕಟ್ಟಿ ವಿಶೇಷ ಸೇವೆಗಳನ್ನು ದೇವಸ್ಥಾನಗಳಲ್ಲಿ ಮಾಡಿಸಬಹುದು.

    ಇದೇ ವೇಳೆ ನೆರೆ ಪರಿಹಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಕೇಂದ್ರ ತಂಡ ಪರಿಶೀಲನೆ ಮಾಡಿಕೊಂಡು ಹೋಗಿದೆ. ಆದಷ್ಟು ಬೇಗ ಕೇಂದ್ರ ಹೆಚ್ಚು ಅನುದಾನ ನೀಡುವ ನಿರೀಕ್ಷೆ ರಾಜ್ಯ ಸರ್ಕಾರಕ್ಕೆ ಇದೆ. ಆದಷ್ಟು ಬೇಗ ಕೇಂದ್ರದಿಂದ ಅನುದಾನ ಬರುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅನುದಾನ ರಾಜ್ಯಕ್ಕೆ ಬರಲಿದೆ. ಕೇಂದ್ರ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ ಎಂದು ತಿಳಿಸಿದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪರ ಬುಧವಾರ ನಡೆದ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಜಾರಿ ನಿರ್ದೇಶನಾಲಯ (ಇಡಿ) ತೆಗೆದುಕೊಂಡ ನಿರ್ಧಾರ ಸರಿ ಇದೆ. ನಮ್ಮ ಬಿಜೆಪಿ ನಾಯಕರು ಯಾರು ಪ್ರತಿಭಟನೆ ಹೋಗಿಲ್ಲ. ಯಾರಾದರು ಹೋಗಿದ್ದರೆ ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ನನ್ನ ಗಮನಕ್ಕೆ ಬಂದಿರುವಂತೆ ನಮ್ಮ ಪಕ್ಷದ ಯಾವ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಬಂಧನದಲ್ಲಿ ಕೇಂದ್ರ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.