Tag: ಸಚಿವ ಕೆ.ಎಸ್.ಈಶ್ವರಪ್ಪ

  • ಸರ್ಕಾರ ಬರಲು ಕಾರಣರಾದವರಿಗೆ ಪರಿಷತ್‍ನಲ್ಲಿ ಸ್ಥಾನ: ಸಚಿವ ಈಶ್ವರಪ್ಪ

    ಸರ್ಕಾರ ಬರಲು ಕಾರಣರಾದವರಿಗೆ ಪರಿಷತ್‍ನಲ್ಲಿ ಸ್ಥಾನ: ಸಚಿವ ಈಶ್ವರಪ್ಪ

    – ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ

    ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಮೂಲಕ ಅವರ ಋಣ ತೀರಿಸುವುದರ ಜೊತೆಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಈ ಮೂಲಕ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಗೆ ಪರಿಷತ್ ಟಿಕೆಟ್ ನೀಡುವ ಸುಳಿವು ನೀಡಿದ್ದಾರೆ.

    ಶಿವಮೊಗ್ಗದ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂಬ ದೃಷ್ಟಿಯಿಂದ ಕೆಲ ಕಾಂಗ್ರೆಸ್, ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬಂದಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರಿಗೆ ಮಾತು ಕೊಟ್ಟು ಮೋಸ ಮಾಡಲು ಬರುವುದಿಲ್ಲ. ಅಲ್ಲದೆ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಅನೇಕ ಸಾಮಾನ್ಯ ಕಾರ್ಯಕರ್ತರು ಇದ್ದಾರೆ. ಅವರಿಗೂ ಅವಕಾಶ ಮಾಡಿಕೊಡಬೇಕಿದೆ ಎಂದರು.

    ಪರಿಷತ್ ಚುನಾವಣೆ ಸಂಬಂಧ ಸೋಮವಾರ ಸಂಜೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತೇವೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಬರಲು ಕಾರಣರಾದವರನ್ನು ಹಾಗೂ ಕಾರ್ಯಕರ್ತರನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಟಿಕೆಟ್ ಹಂಚಿಕೆ ವೇಳೆ ಡಿವಿಜನ್ ವಾರ್, ಜಿಲ್ಲಾವಾರು ಹಾಗೂ ಜಾತಿವಾರು ಎಂಬುದು ನಡೆಯುವುದಿಲ್ಲ. ಬಿಜೆಪಿಯಲ್ಲಿ ಜಾತಿವಾರು ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂಬುದು ಸುಳ್ಳು. ಬಿಜೆಪಿಯಲ್ಲಿ ಕಾರ್ಯಕರ್ತರ ಶಕ್ತಿ ಮೇಲೆ ಟಿಕೆಟ್ ಹಂಚಿಕೆ ನಡೆಯಲಿದೆ. ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ ನಡೆಯಲಿದ್ದು, ಸಂಪುಟದಲ್ಲಿ ಖಾಲಿ ಇರುವ ಸ್ಥಾನವನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

  • ಶಾಸಕರ ಅಸಮಾಧಾನದಿಂದ ವಿರೋಧ ಪಕ್ಷಗಳು ಲಾಭ ಪಡೆಯುತ್ತವೆ ಎನ್ನುವುದು ಹಾಸ್ಯಾಸ್ಪದ- ಈಶ್ವರಪ್ಪ

    ಶಾಸಕರ ಅಸಮಾಧಾನದಿಂದ ವಿರೋಧ ಪಕ್ಷಗಳು ಲಾಭ ಪಡೆಯುತ್ತವೆ ಎನ್ನುವುದು ಹಾಸ್ಯಾಸ್ಪದ- ಈಶ್ವರಪ್ಪ

    ಶಿವಮೊಗ್ಗ: ಕಾಂಗ್ರೆಸ್‍ನಿಂದ ಪಕ್ಷವನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ, ಜೆಡಿಎಸ್ ಮೇಲೆ ಎದ್ದೇಳಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಆ ಪಕ್ಷಗಳು ಲಾಭ ಪಡೆಯುತ್ತವೆ ಎನ್ನುವುದು ಹಾಸ್ಯಾಸ್ಪದ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದೊಡ್ಡ ಪಕ್ಷ ಹೀಗಾಗಿ ಅಪೇಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶನಿವಾರ ಕೋರ್ ಕಮಿಟಿ ಸಭೆ ಆಗಿದೆ. ಅಪೇಕ್ಷಿತರ ಪಟ್ಟಿ ಮಾಡಿ ಕೇಂದ್ರ ಸಮಿತಿಗೆ ಕಳುಹಿಸಿದ್ದೇವೆ. ಕೇಂದ್ರ ಸಮಿತಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಅಸಮಾಧಾನ ಇಲ್ಲ ಎನ್ನುವ ಮಾತನ್ನು ನಾನು ಹೇಳುವುದಿಲ್ಲ. ನಮ್ಮ ಶಾಸಕರಲ್ಲಿ ಸ್ವಲ್ಪ ಅಸಮಾಧಾನ ಇದೆ. ಬಿಜೆಪಿ ಒಂದು ಕುಟುಂಬ ಇದ್ದಂತೆ. ಕುಟುಂಬದಲ್ಲಿ ಇರುವವರು ತಮ್ಮ ಭಾವನೆ ಹೇಳಿಕೊಳ್ಳುತ್ತಾರೆ. ಅದು ಅಸಮಾಧಾನ ಎಂದು ಕೆಲವರು ಹೇಳುತ್ತಾರೆ ಅದನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.

    ಬಿಜೆಪಿ ಪಕ್ಷದ ಸಂಘಟನೆ ಎಷ್ಟರ ಮಟ್ಟಿಗೆ ಇದೆ ಎಂದರೆ ಎಲ್ಲ ಅಸಮಾಧಾನಿತರನ್ನು ಕರೆದು ಕೂರಿಸಿ, ಮಾತುಕತೆ ನಡೆಸಿ ತೃಪ್ತಿಪಡಿಸಿ ಯಶಸ್ವಿ ಕಾಣುತ್ತೇವೆ. ಅಸಮಧಾನಿತರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಚರ್ಚಿಸಿ ಸರಿಪಡಿಸುತ್ತಾರೆ. ವಿರೋಧ ಪಕ್ಷಗಳು ಶಾಸಕರ ಅಸಮಾಧಾನದ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನೇ ಉಳಿಸಿಕೊಳ್ಳಲು ಆಗದೆ ಸರ್ಕಾರ ಕಳೆದುಕೊಂಡರು. ಇನ್ನು ಜೆಡಿಎಸ್ ಮೇಲೆ ಎದ್ದೇಳುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಆ ಪಕ್ಷಗಳು ಲಾಭ ಪಡೆದುಕೊಳ್ಳುತ್ತವೆ ಎಂದರೆ ಇದು ಹಾಸ್ಯಾಸ್ಪದ. ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ ಎಂದರು.

  • ಸಾಮಾಜಿಕ ಅಂತರ ಇಲ್ಲದೆ ಹತ್ತಾರು ಕಾರ್ಯಕರ್ತರೊಂದಿಗೆ ಈಶ್ವರಪ್ಪ ರಾಯರ ದರ್ಶನ

    ಸಾಮಾಜಿಕ ಅಂತರ ಇಲ್ಲದೆ ಹತ್ತಾರು ಕಾರ್ಯಕರ್ತರೊಂದಿಗೆ ಈಶ್ವರಪ್ಪ ರಾಯರ ದರ್ಶನ

    – ಕೊರೊನಾ ಮುಕ್ತಿಗಾಗಿ ಮಂತ್ರಾಲಯದಲ್ಲಿ ರಾಯರ ವಿಶೇಷ ದರ್ಶನ
    – ನೂರಾರು ಕಾರ್ಯಕರ್ತರ ಜೊತೆ ಕಾಮಗಾರಿ ಪರಿಶೀಲನೆ

    ರಾಯಚೂರು: ಕೊರೊನಾ ತಾಂಡವಾಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹತ್ತಾರು ಕಾರ್ಯಕರ್ತರೊಂದಿಗೆ ಮಂತ್ರಾಲಯದ ರಾಯರ ನವವೃಂದಾವನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ನಿಯಮ ಪಾಲಿಸದೆ ಓಡಾಡಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಹೆಚ್ಚಿದೆ. ಹೀಗಾಗಿ ಪ್ರಾರ್ಥನೆ ಮಾಡಲು ಮಂತ್ರಾಲಯಕ್ಕೆ ಹೋಗಿದ್ದೆ. ದೇಶದಲ್ಲಿ ಮೋದಿ ಹೀರೋ ಆಗಿದ್ದಾರೆ ಆದರೂ, ಎಲ್ಲರನ್ನೂ ಕಾಪಾಡಬೇಕು ಎಂದು ರಾಯರ ದರ್ಶನ ಮಾಡಿದೆ ಎಂದು ರಾಯಚೂರಿನ ಎಲೆಬಿಚ್ಚಾಲಿಯಲ್ಲಿ ಹೇಳಿದ್ದಾರೆ.

    ಸಾರ್ವಜನಿಕರಿಗೆ ದರ್ಶನಕ್ಕೆ ಅನುಮತಿ ಇಲ್ಲ ವಿಶೇಷ ಅನುಮತಿ ಪಡೆದು ರಾಯರ ದರ್ಶನ ಪಡೆದು ಸ್ವಾಮೀಜಿ ಭೇಟಿ ಮಾಡಿದ್ದೇನೆ. ನಾನು ರಾಯರ ಪರಮಭಕ್ತ ಸ್ವಾಮಿಜಿ ಅನುಮತಿ ಪಡೆದು ದರ್ಶನ ಮಾಡಿದ್ದೇನೆ ಎಂದು ಅಂತರಾಜ್ಯ ದೇವಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡು ಬಂದಿರುವುದನ್ನ ಈಶ್ವರಪ್ಪ ಸಮರ್ಥಿಸಿಕೊಂಡರು. ಅಲ್ಲದೆ ಕಾರ್ಯಕರ್ತರೊಂದಿಗೆ ಎಲೆಬಿಚ್ಚಾಲಿಯ ರಾಯರ ನವವೃಂದಾವನದ ದರ್ಶನ ಪಡೆದರು. ಈ ವೇಳೆ ಸಹ ಸಾಮಾಜಿಕ ಅಂತರ ಮಾಯವಾಗಿತ್ತು.

    ಅನಿವಾರ್ಯ ಕಾರಣಕ್ಕೆ ಒಟ್ಟಾಗಿರಬೇಕಾಗುತ್ತೆ ಯಾವಾಗಲೂ ಸಾಮಾಜಿಕ ಅಂತರ ಕಾಪಾಡುವುದು ಆಗುವುದಿಲ್ಲ. ಡಿನ್ನರ್ ರಾಜಕೀಯದ ಬಗ್ಗೆ ನನಗೇನೂ ಗೊತ್ತಿಲ್ಲ. ಎಲ್ಲರೂ ಒಂದೆಡೆ ಸೇರಬಾರದಾ, ಊಟಕ್ಕೆ ಸೇರಿದಾರೆ. ಅನಿವಾರ್ಯವಾಗಿ ಕೆಲವು ಆಗಲೇಬೇಕಿದೆ. ರಮೇಶ್ ಕತ್ತಿ, ದಿನೇಶ್ ಕತ್ತಿ ಏನು ಮಾಡಿದಾರೋ ಗೊತ್ತಿಲ್ಲ ಎಂದರು.

    ಗ್ರಾಮ ಪಂಚಾಯಿತಿ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆಡಳಿತಾಧಿಕಾರಿ ನೇಮಕ ಮಾಡಬೇಕಾ, ಸಮಿತಿ ಮಾಡಬೇಕೋ ತೀರ್ಮಾನ ಮಾಡಬೇಕಿದೆ. ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸಲು ನಾವು ಹೇಳಿದ್ದೇವೆ ಆದರೆ, ಕೊರೊನಾ ಕಾರಣಕ್ಕೆ ಆಯೋಗ ಚುನಾವಣೆ ಬೇಡ ಎಂದಿದೆ. ಕಾಂಗ್ರೆಸ್ ಮಾಡುತ್ತಿರುವ ಯಾವುದೇ ಆರೋಪಗಳಿಗೆ ಹುರುಳಿಲ್ಲ ಎಂದರು.

    ನರೇಗಾ ಮೂಲಕ ಗ್ರಾಮೀಣ ಭಾಗದ ಬಡವರಿಗೆ ಉದ್ಯೋಗ ಸೃಷ್ಠಿ ಮಾಡಿದ್ದೇವೆ. 5,800ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಟ್ಟಿದ್ದೇವೆ. ಹಿಂದಿನ ಬಾಕಿ ಹಣವನ್ನು ಬಿಡುಗಡೆ ಮಾಡಿ ತೀರಿಸುತ್ತಿದ್ದೇವೆ. ಯಾರೇ ಬಂದರೂ ಜಾಬ್ ಕಾರ್ಡ್ ಮಾಡಿ ಕೆಲಸ ಕೊಡುತ್ತಿದ್ದೇವೆ. ಕೇಂದ್ರದ 20 ಲಕ್ಷ ಕೋಟಿ ರೂ.ಗಳಲ್ಲಿ 40 ಸಾವಿರ ಕೋಟಿ ರೂ. ಹಣವನ್ನ ಬಡವರಿಗೆ ಉದ್ಯೋಗ ಕೊಡಲು ಮೀಸಲಿಟ್ಟಿದ್ದೇವೆ ಎಂದರು. ರಾಯಚೂರು ತಾಲೂಕಿನ ವಿವಿಧೆಡೆ ನರೇಗಾ ಕಾಮಗಾರಿ ವೀಕ್ಷಣೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಈಶ್ವರಪ್ಪ ಭಾಗವಹಿಸಿ ಯಾದಗಿರಿಗೆ ತೆರಳಲಿದ್ದಾರೆ.

  • ಶಿವಮೊಗ್ಗದಲ್ಲಿ ಒಂದು ಪಾಸಿಟಿವ್ ಬಂದರೂ ಲಾಕ್‍ಡೌನ್: ಸಚಿವ ಈಶ್ವರಪ್ಪ

    ಶಿವಮೊಗ್ಗದಲ್ಲಿ ಒಂದು ಪಾಸಿಟಿವ್ ಬಂದರೂ ಲಾಕ್‍ಡೌನ್: ಸಚಿವ ಈಶ್ವರಪ್ಪ

    ಶಿವಮೊಗ್ಗ: ಲಾಕ್‍ಡೌನ್ ಸಡಿಲಿಕೆಯಾಗಿದೆ ಎಂದ ತಕ್ಷಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿರುವುದು ಅಪಾಯಕಾರಿಯಾಗಿದೆ. ಆದರೆ ಶಿವಮೊಗ್ಗದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಬಂದರೂ ಮತ್ತೆ ಲಾಕ್‍ಡೌನ್ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿದ್ದ ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಇದೀಗ 30ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗದಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾದರೆ, ಇಡೀ ನಗರದಲ್ಲಿ ಪುನಃ ಲಾಕ್‍ಡೌನ್ ಕಠಿಣಗೊಳ್ಳಲಿದೆ. ಜನರು ಇದನ್ನು ಅರಿತುಕೊಂಡು ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

    ಹೊರ ಜಿಲ್ಲೆಗಳಿಗೆ ತೆರಳಲು ಬಯಸುವವರಿಗೆ ಒನ್ ವೇ ಪಾಸ್ ನೀಡಲಾಗುವುದು. ಇದೇ ರೀತಿ ಬೇರೆ ಕಡೆ ಸಿಲುಕಿರುವವರನ್ನು ಕರೆ ತರಲು ಸಹ ಪಾಸ್ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರವಲ್ಲದೆ, ತಾಲೂಕುಗಳಲ್ಲಿ ತಹಶೀಲ್ದಾರ್‍ಗಳು ಸಹ ಪಾಸ್ ನೀಡಲಿದ್ದಾರೆ. ಜನರು ಗೊಂದಲಗೊಳ್ಳುವ ಅಗತ್ಯವಿಲ್ಲ. ಬೇರೆ ಜಿಲ್ಲೆಗಳಿಂದ ಪಾಸ್ ಇಲ್ಲದೆ, ಅನಧಿಕೃತವಾಗಿ ಅಡ್ಡದಾರಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಮೇಲೆ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಅಂತಹವರ ಮೇಲೆ ಎಫ್‍ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ, ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ತಪ್ಪಿಸಲು ಗಾಂಧಿ ಬಜಾರ್ ಹಾಗೂ ದುರ್ಗಿಗುಡಿ ರಸ್ತೆಗಳಲ್ಲಿ ಒಂದು ಬದಿಯ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗುವುದು. ಗಾಂಧಿ ಬಜಾರ್ ನಂತೆಯೇ ಇಲ್ಲಿಯೂ ಒಂದು ಬದಿಯ ಫಾರ್ಮುಲಾ ಕಲ್ಪಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಪ್ರಸ್ತುತ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳಿಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಸೆಲೂನ್, ಬ್ಯೂಟಿ ಪಾರ್ಲರ್ ಗಳನ್ನೂ ತೆರೆಯಲು ಅನುಮತಿ ನೀಡಲಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.