Tag: ಸಚಿವ ಕೆ.ಎಸ್.ಈಶ್ವರಪ್ಪ

  • ‘ಬೀಪ್’ ಹಾಕುವ ಪದ ಬಳಸಿದ ಮಂತ್ರಿ ಈಶ್ವರಪ್ಪ- ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು ಎಂದ ಸಚಿವ

    ‘ಬೀಪ್’ ಹಾಕುವ ಪದ ಬಳಸಿದ ಮಂತ್ರಿ ಈಶ್ವರಪ್ಪ- ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು ಎಂದ ಸಚಿವ

    ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರು ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಕಾಂಗ್ರೆಸ್‍ನವರು ಕುಡುಕ…….ಮಕ್ಕಳು ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ವಿಧಾನಸೌಧದಲ್ಲಿ ಈಶ್ವರಪ್ಪನವರು ಮಾಧ್ಯಮಗಳ ಜೊತೆ ಮಾತನಾಡುವಾಗ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು’ ಎಂದು ಹೇಳಿದ್ದಾರೆ. ಈಶ್ವರಪ್ಪನವರು ಹೆಸರು ಬದಲಾಯಿಸಿಕೊಳ್ಳಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕರಗೆ ತಿರುಗೇಟು ನೀಡುವ ಭರದಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆ

    ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಈಶ್ವರಪ್ಪನಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ, ಸಂಸ್ಕಾರ ಇಲ್ಲದವರು ಮಾತ್ರ ಹೀಗೆ ಮಾತನಾಡುತ್ತಾರೆ. ಅವರು ಬಂದಿರುವ ದಾರಿಯೇ ಅಂಥದ್ದು, ಅವರಿಂದ ಒಳ್ಳೆದಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿರುವವರಿಗೆ ಟೀಕೆ, ಟಿಪ್ಪಣಿ ಇರುತ್ತವೆ. ಅಧಿಕಾರದಲ್ಲಿರುವವರು ಸಹಿಸಿಕೊಳ್ಳಬೇಕು. ಸಂಸ್ಕೃತಿ ಇಲ್ಲದವರು ಈ ತೀತಿ ಮಾತನಾಡುತ್ತಾರೆ. ನಾನು ಸರ್ಕಾರದಲ್ಲಿದ್ದೇನೆ, ಮಂತ್ರಿಯಾಗಿದ್ದೇನೆ ಎಂಬ ಜವಾಬ್ದಾರಿ ಈಶ್ವರಪ್ಪನವರಿಗೆ ಇಲ್ಲ, ಬೇಜವಾಬ್ದಾರಿ, ಸಂಸ್ಕೃತಿ ಇಲ್ಲದಿರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಈಶ್ವರಪ್ಪ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಧ್ರುವನಾರಾಯಣ

    ಅಶ್ಲೀಲ ಪದ ಬಳಸಿದ ಮಂತ್ರಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ಒಬ್ಬ ಅನಾಗರಿಕ, ಮೆದುಳಿನ ಸಮತೋಲನ ತಪ್ಪಿದೆ. ಅವರಿಗೆ ಮೆದುಳು ಪರೀಕ್ಷೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

    ಸಚಿವ ಈಶ್ವರಪ್ಪ ಪದೇ ಪದೇ ನಾಲಗೆ ಹರಿಬಿಡುತ್ತಿದ್ದು, ಈ ಹಿಂದೆ ಶಿವಮೊಗ್ಗದಲ್ಲಿ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಒಂದಕ್ಕೆ ಎರಡು ತೆಗೆದುಬಿಡಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ವೇಳೆ ಸಹ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

    ಬಾಯಿಗೆ ಬಂದಂತೆ ಮಾತಾಡಿ ಬಳಿಕ ಮಾಧ್ಯಮಗಳ ವಿರುದ್ಧ ಮಾತಾಡುವುದು ಮಂತ್ರಿ ಈಶ್ವರಪ್ಪ ರೂಢಿಸಿಕೊಂಡಿರುವ ಪದ್ಧತಿ. ಇವತ್ತೂ ಈಶ್ವರಪ್ಪನವರು ಇದನ್ನೇ ಮಾಡಿದ್ದು, ಅಶ್ಲೀಲ ಪದ ಬಳಕೆ ನಂತರ, ಪ್ರತಿಕ್ರಿಯಿಸಿದ್ದು, ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ. ಮಾಧ್ಯಮದವರು ಇಂತಹದ್ದನ್ನೇ ಹುಡುಕುತ್ತಿರುತ್ತೀರಿ ಎಂದರು.

  • ದೇಶದ ಕೆಟ್ಟ ಕನಸುಗಾರ ಸಿದ್ದರಾಮಯ್ಯ: ಈಶ್ವರಪ್ಪ

    ದೇಶದ ಕೆಟ್ಟ ಕನಸುಗಾರ ಸಿದ್ದರಾಮಯ್ಯ: ಈಶ್ವರಪ್ಪ

    ಚಿತ್ರದುರ್ಗ: ಈ ದೇಶ ಹಾಗೂ ರಾಜ್ಯದ ಕೆಟ್ಟ ಕನಸುಗಾರ ಸಿದ್ದರಾಮಯ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಮಾದಾರಚನ್ನಯ್ಯ ಗುರುಪೀಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ಈ ಬಿಜೆಪಿ ಸರ್ಕಾರ ಇಂದು ಬೀಳುತ್ತೆ, ನಾಳೆ ಹೋಗುತ್ತೆ, ಇಂದು ಬೆಳಗ್ಗೆ ಬೀಳುತ್ತೆ, ರಾತ್ರಿ ಹೋಗುತ್ತೆ ಅಂತ ಬರೀ ಕೆಟ್ಟ ಕನಸು ಕಾಣುತಿದ್ದರು. ಈ ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ಕಳೆದುಕೊಂಡಾಗಿಂದ ಕೆಟ್ಟ ಕನಸು ನಿರಂತರವಾಗಿದ್ದು, ಮತ್ತೆ ಸಿಎಂ ಆಗುವ ಕನಸು ಕಾಣುತಿದ್ದಾರೆ. ಆದರೆ ಹಿಂದುಳಿದ, ದಲಿತರಿಗೆ ಮಾಡಿದ ಮೋಸದಿಂದ ಸಿದ್ದರಾಮಯ್ಯ ಸರ್ಕಾರ ಹೋಗಿದೆ. ರಾಜ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಸರ್ಕಾರ ಬರಲ್ಲ ಹೀಗಾಗಿ ಸಿದ್ದರಾಮಯ್ಯ ಸಿಎಂ ಕನಸು ಕಾಣುವುದು ಬೇಡ ಎಂದು ವ್ಯಂಗ್ಯವಾಡಿದರು.

    ಹೊರಗಡೆಯಿಂದ ಬಂದವರು ವಲಸಿಗರು ಎಂದು ಡಿಕೆಶಿ ಹೇಳಿದ್ದ ಮಾತಿಗೆ ಕಿಡಿಕಾರಿದ ಸಚಿವರು, ತಾವು ಕಾಂಗ್ರೆಸ್ ಪಕ್ಷದ ಸೊಸೆ ಎಂದು ಹೇಳಿ ಸಿದ್ದರಾಮಯ್ಯ ಒಪ್ಪಿಕೊಂಡರು. ಈ ಹಿಂದೆ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷದ ಮಗ ಎಂದು ಹೇಳಿ ಗೆದ್ದರು. ಬಳಿಕ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಮಗ ಎಂದು ಹೇಳಿದರು. ಈಗ ಯಾರಿಗೆ ಮಗ, ಯಾರಿಗೆ ಸೊಸೆ, ಯಾರು ಅಪ್ಪ, ಅಮ್ಮ ಯಾರು ನಿಮಗೆ? ಬಿಜೆಪಿಯವರು ಮಾತ್ರ ನಮ್ಮ ತಾಯಿ ಭಾರತಮಾತೆ ಎಂದು ಹೇಳುತ್ತೇವೆ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ತಾಯಿನಾ? ಜೆಡಿಎಸ್ ನಿಮ್ಮ ತಾಯಿನಾ? ಎಬಿಪಿಜೆಡಿ ನಿಮ್ಮ ತಾಯಿನಾ? ಅಥವಾ ಮತ್ತೊಂದು ಪಕ್ಷಕ್ಕೆ ಹೋದರೆ ಅದು ನಿಮ್ಮ ತಾಯಿನಾ ಎಂದು ಸ್ಪಷ್ಟಪಡಿಸಲಿ ಎಂದಿದ್ದಾರೆ.

    ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಮರ್ಥಿಸಿಕೊಂಡ ಅವರು, ಸುಖಾಸುಮ್ಮನೆ ಇಂದಿರಾ ಕ್ಯಾಂಟೀನ್ ಹೆಸರು ತೆಗೆಯಲ್ಲ. ಜನ ಸಂತೋಷಪಡುವ ದಿಕ್ಕಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅಲ್ಲದೆ ರಾಜೀವ್ ಗಾಂಧಿ ಹೆಸರು ತೆಗೆದು ಧ್ಯಾನಚಂದ್ ಹೆಸರು ಇಟ್ಟಿದ್ದಾರೆ, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲಿ ನೋಡೋಣ ಎಂದಿದ್ದ ಡಿಕೆಶಿಗೆ ತಿರುಗೇಟು ನೀಡಿದರು.

    ಖಾತೆ ಹಂಚಿಕೆ ಅಸಮಧಾನ ಬಿಜೆಪಿ ಸರಿಪಡಿಸಲಿದೆ. ನೂತನ ಸಂಪುಟದಲ್ಲಿ ಮಂತ್ರಿಗಳಿಗೆ ಖಾತೆ ಹಂಚಿಕೆ ವೇಳೆ ಅಸಮಾಧಾನ ಸಹಜ. ಆದರೆ ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರಾದ ಎಂಟಿಬಿ ಹಾಗೂ ಆನಂದಸಿಂಗ್ ಅಪಸ್ವರ ಎತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಂದ ಅನೇಕರಿಂದ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಬರದಿದ್ದರೆ ಈ ಸರ್ಕಾರ ಕೂಡ ಆಗುತ್ತಿರಲಿಲ್ಲ. ಈ ವೇಳೆ ಅವರು ಬಯಸಿದ ಖಾತೆ ಸಿಗದಿದ್ದಾಗ ಅಸಮಧಾನ ಸ್ವಾಭಾವಿಕ. ಆದರೆ ಎಲ್ಲರನ್ನೂ ಸಮಾಧಾನಪಡಿಸುವ ಕೆಲಸ ಬಿಜೆಪಿ ಮಾಡಲಿದೆ ಎಂದರು.

  • ಶೆಟ್ಟರ್ ರೀತಿ ಮಂತ್ರಿ ಸ್ಥಾನ ಬೇಡ ಎನ್ನಲ್ಲ: ಈಶ್ವರಪ್ಪ

    ಶೆಟ್ಟರ್ ರೀತಿ ಮಂತ್ರಿ ಸ್ಥಾನ ಬೇಡ ಎನ್ನಲ್ಲ: ಈಶ್ವರಪ್ಪ

    – ಉಪ ಮುಖ್ಯಮಂತ್ರಿ ಆಗಬೇಕೆಂಬ ಒತ್ತಾಯ ಇದೆ

    ಶಿವಮೊಗ್ಗ: ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಜಗದೀಶ್ ಶೆಟ್ಟರ್ ರೀತಿಯಲ್ಲಿ ನಾನು ಸಚಿವ ಸ್ಥಾನ ಬೇಡ ಎಂದು ಹೇಳುವುದಿಲ್ಲ, ಜೊತೆಗೆ ಲಾಬಿಯನ್ನೂ ಮಾಡುವುದಿಲ್ಲ. ಪಕ್ಷ ಉಪ ಮುಖ್ಯಮಂತ್ರಿ ಆಗು ಅಂದ್ರೆ ಆಗ್ತೇನೆ, ಸಚಿವನಾಗು ಅಂದ್ರೆ ಸಚಿವನಾಗುತ್ತೇನೆ. ಶಾಸಕನಾಗಿರು ಅಂದ್ರೆ ಶಾಸಕನಾಗಿಯೇ ಇರುತ್ತೇನೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಅತಿರಥ ಮಹಾರಥರು ಇದ್ದರೂ ಪಕ್ಷ ನನ್ನನ್ನು ಗುರುತಿಸಿ ಈ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಈ ಬಾರಿಯೂ ನನಗಿಂತಲೂ ಹಿರಿಯರು, ಪ್ರವೀಣರು ಇದ್ದಾರೆ. ಆದರೆ ನಾನು ಉಪ ಮುಖ್ಯಮಂತ್ರಿ ಆಗಬೇಕು ಎಂದು ಹಲವು ಸಮಾಜದ ಮುಖಂಡರು, ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದಾರೆ. ಆದರೆ ಯಾರು ಸಹ ಈ ರೀತಿ ಒತ್ತಡ ಹಾಕಬೇಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನನಗೆ ತುಂಬಾ ಆತ್ಮೀಯರು, ಅವರ ಬಳಿ ಮಾತಾಡ್ತೀನಿ: ಬೊಮ್ಮಾಯಿ

    ನಮಗೆ ರಾಮನ ರೀತಿಯಲ್ಲಿ ರಾಜಕಾರಣ ಮಾಡಲು ಬರುತ್ತದೆ. ಕೃಷ್ಣನ ರೀತಿಯಲ್ಲಿ ತಂತ್ರಗಾರಿಕೆಯೂ ಇರುತ್ತದೆ. ಕಾಂಗ್ರೆಸ್ ವಿರುದ್ಧ ಈಗ ಕೃಷ್ಣನ ರೀತಿ ತಂತ್ರಗಾರಿಕೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಈ ಸರ್ಕಾರವೇ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವ್ಯಂಗ್ಯವಾಡಿದ್ದರು. ಈಗ ಎರಡು ವರ್ಷ ಅವರು ಏನಾದರೂ ಮಾತನಾಡಲಿ ನೋಡೋಣ ಎಂದರು.

    ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ಆಗಿವೆ. ಉಳಿದ ಅವಧಿಯಲ್ಲಿ ಉತ್ತಮ ಆಡಳಿತ ನಡೆಸುವುದರ ಜೊತೆಗೆ ಪಕ್ಷವನ್ನು ಕಟ್ಟುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಯೋಜನೆ ರೂಪಿಸಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

  • ಮೋದಿ ಪ್ರಧಾನಿಯಾದ ನಂತರ ರಾಷ್ಟ್ರ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ: ಈಶ್ವರಪ್ಪ

    ಮೋದಿ ಪ್ರಧಾನಿಯಾದ ನಂತರ ರಾಷ್ಟ್ರ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ: ಈಶ್ವರಪ್ಪ

    – ಕಾಂಗ್ರೆಸ್ ನದ್ದು ಪಲಾಯನ ಸಂಸ್ಕೃತಿ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಈ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎನ್ನುವ ಕಾರಣಕ್ಕೆ ಬಿಜೆಪಿಯೇತರ ಪಕ್ಷಗಳು ವಿರೋಧ ಮಾಡುತ್ತಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ನಗರದ ಮಾಂಗಲ್ಯ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ನೂತನ ಕೃಷಿ ಕಾಯ್ದೆ ಸತ್ಯ – ಮಿಥ್ಯ ವಿಚಾರ ಸಂಚಿರಣ ಉದ್ಘಾಟಿಸಿ ಮಾತನಾಡಿದ ಸಚಿವರು, ಕೃಷಿ ಕಾಯ್ದೆ ಜಾರಿಗೊಳಿಸಿದ ನಂತರ ಕಾಯ್ದೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿಯೇತರ ಪಕ್ಷಗಳು ಮಾಡಲಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎನ್ನುವ ಕಾರಣಕ್ಕೆ ಬಿಜೆಪಿಯೇತರ ಪಕ್ಷಗಳು ವಿರೋಧ ಮಾಡುತ್ತಿವೆ. ನಾವು ಏನೇ ಮಾಡಿದರೂ ಅದನ್ನು ವಿರೋಧ ಮಾಡುವ ಸಲುವಾಗಿಯೇ ದೊಡ್ಡ ಗುಂಪು ಇದೆ. ಹೀಗಾಗಿಯೇ ನಮ್ಮ ಕಾರ್ಯಕರ್ತರು ಸಹ ನೂತನ ಕಾಯ್ದೆಯನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ವಿರೋಧಿಗಳಿಗೆ ಉತ್ತರ ಕೊಡಲು ಸಾಧ್ಯ ಎಂದರು.

    ಮೋದಿ ದೇಶದ ಪ್ರಧಾನಿ ಆದ ನಂತರ ರಾಷ್ಟ್ರದಲ್ಲಿ ಅಭಿವೃದ್ಧಿ ಕೆಲಸಗಳು ಸ್ವಾಭಾವಿಕವಾಗಿ ಆಗುತ್ತಿವೆ. ಎಂದೂ ಕಾಣದ ರಸ್ತೆಗಳು, ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ವಿದೇಶಗಳು ಮೆಚ್ಚುವ ರೀತಿಯಲ್ಲಿ ಮೋದಿಯವರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಕಾಂಗ್ರೆಸ್ ನವರು ವಿರೋಧ ಮಾಡಿದರು. ಆದರೆ ಈಗ ಅವರು ರಾಮ ಮಂದಿರ ನಿರ್ಮಾಣ ಬೇಡ ಅನ್ನುತ್ತಿಲ್ಲ. ಬದಲಿಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಹಣದ ಲೆಕ್ಕ ಕೊಡಿ ಎನ್ನುತ್ತಾರೆ. ಈ ಮೂಲಕ ಕಾಂಗ್ರೆಸ್ ಒಂದು ರೀತಿಯ ಪಲಾಯನ ಅನುಸರಿಸುತ್ತಿದೆ ಎಂದರು.

    ಪ್ರಾರಂಭದಲ್ಲಿ ಯೋಗವನ್ನು ವಿರೋಧ ಮಾಡಿದರು. ಯೋಗ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು. ಆದರೆ ಅಂದು ಯೋಗವನ್ನು ವಿರೋಧ ಮಾಡಿದವರು ಇಂದು ಯೋಗ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಮೋದಿ ಅವರು ಕೋವಿಡ್ ವ್ಯಾಕ್ಸಿನೇಷನ್ ಜಾರಿಗೆ ತಂದರು. ಆ ಸಂದರ್ಭದಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ವ್ಯಾಕ್ಸಿನೇಷನ್ ಗೆ ವಿರೋಧ ಮಾಡುವ ಜೊತೆಗೆ ಅಪಪ್ರಚಾರ ಸಹ ಮಾಡಿದರು. ಆದರೆ ಇದಕ್ಕೆ ಜಗ್ಗದ ಮೋದಿ ಸರ್ಕಾರ ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ನಂತರ ವಿರೋಧ ಮಾಡಿದವರು ಸಹ ಇದೀಗ ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.

  • ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

    ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

    ಶಿವಮೊಗ್ಗ: ಕಳೆದೊಂದು ವಾರದಿಂದ ಮಲೆನಾಡಿನ ತವರು ಶಿವಮೊಗ್ಗದಲ್ಲಿ ಒಂದೇ ಸಮನೆ ವರುಣ ಅಬ್ಬರಿಸಿದ್ದು, ಆಗಾಗ್ಗೆ ಮಳೆ ಸುರಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನಿರಂತರವಾಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ಮನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತುಂಬಿದ ತುಂಗೆಗೆ ಬಾಗಿನ ಸಮರ್ಪಿಸಿದ್ದಾರೆ.

    ಜಿಲ್ಲೆಯ ಗಾಜನೂರು ತುಂಗಾ ಜಲಾಶಯ ಪ್ರತಿ ವರ್ಷ ಬೇಗ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ತುಂಗಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ. ಹೀಗಾಗಿ ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ

    588.24 ಮೀಟರ್ ಎತ್ತರ ಇರುವ ಗಾಜನೂರು ಜಲಾಶಯದಲ್ಲಿ ನೀರಿನ ಮಟ್ಟ 587.69 ಮೀಟರ್ ತಲುಪಿದ ಕಾರಣ ಎಲ್ಲ ಗೇಟ್ ಗಳಿಂದ ನೀರು ಹೊರ ಬಿಡಲಾಗಿದೆ. ಈ ತುಂಗಾ ಜಲಾಶಯ 3.25 ಟಿಎಂಸಿ ಸಾಮಥ್ರ್ಯದ್ದಾಗಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಡ್ಯಾಂ ಭರ್ತಿಯಾಗಿ ನಳನಳಿಸುತ್ತಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ತುಂಗಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾರೆ.

    ಮಲೆನಾಡಿನ ತವರು ಎಂದೆನಿಸಿಕೊಳ್ಳುವ ಶಿವಮೊಗ್ಗದ ಕೇಂದ್ರ ಬಿಂದುವಾಗಿರುವ ಗಾಜನೂರು ಜಲಾಶಯ ಇದೀಗ ಸುಂದರವಾಗಿ ಕಂಗೊಳಿಸುತ್ತಿದ್ದು, ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ನಿಂದ ನೀರು ಹೊರಕ್ಕೆ ಬಿಡುತ್ತಿರುವ ಪರಿಣಾಮ ಡ್ಯಾಂ ಗೆ ಮತ್ತಷ್ಟು ಜೀವ ಕಳೆ ಬಂದಂತಾಗಿದೆ. ತುಂಗೆಯ ಮೂಲ ಸೆಲೆಯಾಗಿರುವ ಶೃಂಗೇರಿ, ಕೊಪ್ಪ ಭಾಗದ ಪ್ರದೇಶದಲ್ಲಿ ಯಥೇಚ್ಛ ಮಳೆಯಾಗುತ್ತಿರುವ ಕಾರಣ ರಾಜ್ಯದಲ್ಲಿಯೇ ಭರ್ತಿಯಾಗಿರುವ ಪ್ರಥಮ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 22 ಕ್ರಸ್ಟ್ ಗೇಟ್ ಗಳಿದ್ದು, ಎಲ್ಲ ಗೇಟುಗಳಿಂದ ನದಿಗೆ ನೀರು ಹರಿಬಿಡಲಾಗಿದೆ. ಕೊರೊನಾ ಕಾಟದಿಂದ ಪ್ರವಾಸಿಗರಿಗೆ ಪ್ರವೇಶ ನಿಷಿದ್ಧವಾಗಿದ್ದು, ಇದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

    ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕಿನಾದ್ಯಂತ ಮಳೆ ಬಿರುಸಾಗಿದ್ದು, ಹಳ್ಳ-ಕೊಳ್ಳ ನದಿಗಳಿಗೆ ನೀರು ಹರಿದು ಬಂದಿದೆ. ತುಂಗಾ, ಭದ್ರಾ, ಮಾಲತಿ, ಶರಾವತಿ, ವರದಾ, ಕುಮುದ್ವತಿ ನದಿಗಳು ಸೇರಿದಂತೆ, ದೊಡ್ಡ, ದೊಡ್ಡ ಹಳ್ಳಗಳು ನೀರಿನಿಂದ ತುಂಬಿವೆ. ಹೀಗಾಗಿ ಜಿಲ್ಲೆಯ ರೈತರು ಹಾಗೂ ನಾಗರೀಕರಲ್ಲಿ ಹರ್ಷ ಮನೆ ಮಾಡಿದೆ.

  • ನಿಮ್ಮಂಗೆ ಬ್ರಿಗೇಡ್ ಕಟ್ಟಿಲ್ಲ, ರಾಜ್ಯಪಾಲರಿಗೆ ಪತ್ರ ಬರೆದಿಲ್ಲ- ಈಶ್ವರಪ್ಪಗೆ ರೇಣುಕಾಚಾರ್ಯ ಟಾಂಗ್

    ನಿಮ್ಮಂಗೆ ಬ್ರಿಗೇಡ್ ಕಟ್ಟಿಲ್ಲ, ರಾಜ್ಯಪಾಲರಿಗೆ ಪತ್ರ ಬರೆದಿಲ್ಲ- ಈಶ್ವರಪ್ಪಗೆ ರೇಣುಕಾಚಾರ್ಯ ಟಾಂಗ್

    – ನಾನು ವೇಷಧಾರಿಯಲ್ಲ, ಜನಸೇವಕ, ಹಗುರವಾಗಿ ಮಾತಾಡ್ಬೇಡಿ

    ದಾವಣಗೆರೆ: ನಾನು ಯಾವುದೇ ವೇಷಧಾರಿಯಲ್ಲ, ನಾನೊಬ್ಬ ಜನಸೇವಕ, ಕ್ಷೇತ್ರದ ಜನರಿಗಾಗಿ ಹಗಲಿರುಳು ಸೇವೆ ಮಾಡುವವ ಎಂದು ಹೇಳುವ ಮೂಲಕ ಶಾಸಕ ಎಂ.ಪಿ.ರೇಣುಕಾಚಾರ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪಗೆ ತಿರುಗೇಟು ನೀಡಿದರು.

    ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಮಾತನಾಡಿ, ರೇಣುಕಾಚಾರ್ಯ ವೇಷಧಾರಿ ಎಂಬ ಸಚಿವ ಈಶ್ವಪ್ಪ ಹೇಳಿಕೆಗೆ ಟಾಂಗ್ ನೀಡಿದರು. ಹಿರಿಯರ ಬಗ್ಗೆ ಗೌರರವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲ. ನನ್ನ ಬಗ್ಗೆ ಹುಲಿ ವೇಷ ಎಂದು ಹೇಳಿದವರು ಆತ್ಮವಲೋಕನ ಮಾಡಿಕೊಳ್ಳಲಿ. ಯಡಿಯೂರಪ್ಪನವರನ್ನು ರಾಜ್ಯಾದ್ಯಕ್ಷರಾಗಿ ಮಾಡಿದಾಗ ನೀವು ಬ್ರೀಗೇಡ್ ಕಟ್ಟಿ ಯಾವ ವೇಷ ಹಾಕಿಕೊಂಡಿದ್ದಿರಿ ಎಂಬುದು ಗೊತ್ತಿರಲಿ. ಸಚಿವರಾಗಿ ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ಉಲ್ಟಾ ಹೊಡೆದ್ರಿ, ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನನ್ನನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿ ಕಟ್ಟಲಿಲ್ವಾ? ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ರಿ ಗೊತ್ತಿಲ್ಲವೇ? ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದರು.

    ಶಾಸಕ ಅರವಿಂದ್ ಬೆಲ್ಲದ್ ವಿರುದ್ಧ ಗುಡುಗಿದ ಅವರು, ಬೆಲ್ಲದ್ ಅವರೇ ಸುಮಾರು 65ಕ್ಕೂ ಹೆಚ್ಚು ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೋ ಪತ್ರ ನನ್ನ ಬಳಿ ಇದೆ. ಹಳೆ ಪತ್ರ ಎಂದು ಯಾರು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡುತ್ತೇನೆ. ರಾಜ್ಯಾಧ್ಯಕ್ಷರು ಪತ್ರ ಕೊಡುವುದು ಬೇಡ ಎಂದು ಹೇಳಿದ್ದಾರೆ, ಹೀಗಾಗಿ ಕೊಟ್ಟಿಲ್ಲ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. 2013ರಲ್ಲಿ ನೋವು ಪಟ್ಟಿದ್ದೇವೆ, ಇದು ಪದೆ ಪದೇ ಆಗಬಾರದು. ಹಡಗಿನಲ್ಲಿ ಕೂತವರೇ ರಂದ್ರ ಕೊರೆಯಬಾರದು. ನಾಯಕನ ಜೊತೆ ಎಲ್ಲರೂ ಮುಳುಗುತ್ತಾರೆ ಎಂದು ಟಾಂಗ್ ನೀಡಿದರು.

  • ಕೋವಿಡ್ ವಾರ್ಡ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ವೀಕ್ಷಿಸಿದ ಸಚಿವ ಈಶ್ವರಪ್ಪ

    ಕೋವಿಡ್ ವಾರ್ಡ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ವೀಕ್ಷಿಸಿದ ಸಚಿವ ಈಶ್ವರಪ್ಪ

    – ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ

    ಶಿವಮೊಗ್ಗ: ನಗರದ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಪಡಿಸಲು ಕೋವಿಡ್ ವಾರ್ಡ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಇಂದು ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕೊರೊನಾ ಪಾಸಿಟಿವ್ ವಾರ್ಡ್ ನಲ್ಲಿ ಮೈಕ್ ವ್ಯವಸ್ಥೆ ಅಳವಡಿಸಲಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ಕಂಟ್ರೋಲ್ ರೂಂನಿಂದ ನೇರವಾಗಿ ವೈದ್ಯರೊಂದಿಗೆ ಅಥವಾ ಕರ್ತವ್ಯದಲ್ಲಿರುವ ದಾದಿಯರೊಂದಿಗೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಈ ಸೌಲಭ್ಯವನ್ನು ರೋಗಿಗಳು ಬಳಸಿಕೊಳ್ಳಬಹುದಾಗಿದೆ ಎಂದರು.

    ವಾರ್ಡ್ ನಲ್ಲಿ ಟೆಲಿಫೋನ್ ವ್ಯವಸ್ಥೆ ಸಹ ಕಲ್ಪಿಸಲಾಗಿದ್ದು, ರೋಗಿಗಳ ಸಂಬಂಧಿಕರು ಈ ಮೂಲಕ ತಮ್ಮವರ ಆರೋಗ್ಯದ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ರೋಗಿಗಳು ಸಹ ಇದರ ಮನಯವರೊಂದಿಗೆ ಮಾತನಾಡಿದಂತಾಗುತ್ತದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • ಶಿವಮೊಗ್ಗದಲ್ಲಿ ಆಯುಷ್ ಕಿಟ್ ವಿತರಣೆಗೆ ಸಚಿವ ಈಶ್ವರಪ್ಪ ಚಾಲನೆ

    ಶಿವಮೊಗ್ಗದಲ್ಲಿ ಆಯುಷ್ ಕಿಟ್ ವಿತರಣೆಗೆ ಸಚಿವ ಈಶ್ವರಪ್ಪ ಚಾಲನೆ

    – ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿಟ್ ಸಹಕಾರಿ

    ಶಿವಮೊಗ್ಗ: ಕೊರೊನಾ ಸೋಂಕು ತಡೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಕಿಟ್ ವಿತರಣೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

    ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಶ್ರೀಸೀತಾರಾಮ ದೇವರಿಗೆ ಪೂಜೆ ಸಲ್ಲಿಸಿ, ನಂತರ ಕಿಟ್ ವಿತರಣೆಗೆ ಚಾಲನೆ ನೀಡಿದರು. ಇದೇ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ರಾಮ್ ಚರಣ್ ಅವರಿಗೆ ಆಯುಷ್ ಕಿಟ್ ವಿತರಿಸಿದರು. ನಂತರ ಹಿರಿಯರಾದ ನಾಗಭೂಷಣ ಭಟ್ಟರಿಗೆ ಮೊಬೈಲ್ ನಲ್ಲಿದ್ದ ಆಧಾರ್ ಕಾರ್ಡ್ ಪರಿಶೀಲಿಸಿ ಕಿಟ್ ವಿತರಣೆ ಮಾಡಿದರು.

    ದೇವಸ್ಥಾನದ ಎದುರಿನ ಕಾಂಡಿಮೆಂಟ್ಸ್ ಗೆ ತೆರಳಿ ಅಲ್ಲಿನ ಎಲ್ಲ ನಿವಾಸಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಕಿಟ್ ನೀಡಲಾಯಿತು. ನಂತರ ಪುತ್ರ ಜಿ.ಪಂ.ಸದಸ್ಯ ಕಾಂತೇಶ್, ಪಾಲಿಕೆ ಆಡಳಿ ಪಕ್ಷದ ನಾಯಕ ಚನ್ನಬಸಪ್ಪ ಆಯುರ್ವೇದಿಕ್ ಕಿಟ್ ಹಂಚಿಕೆಯನ್ನು ಮುಂದುವರೆಸಿದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಿ.ಎಸ್.ಅರುಣ್, ಪಾಲಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್ ಉಪಸ್ಥಿತರಿದ್ದರು.

  • ಕಾಂಗ್ರೆಸ್‍ನವರಿಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿಯಿಲ್ಲ: ಈಶ್ವರಪ್ಪ

    ಕಾಂಗ್ರೆಸ್‍ನವರಿಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿಯಿಲ್ಲ: ಈಶ್ವರಪ್ಪ

    ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿದೆ ಎನ್ನುವುದಕ್ಕೆ ರೈತ ಸಂಘದ ಜೊತೆ ಸೇರಿ ಹೋರಾಟ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ಸಾಕ್ಷಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.

    ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿ ಇದ್ದಿದ್ದರೆ ರೈತ ಸಂಘವನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು, ಅವರು ಹತಾಶರಾಗಿದ್ದಾರೆ. ಲೋಕಸಭೆಯಲ್ಲಿ ಒಂದೇ ಸ್ಥಾನ ಗೆದ್ದಿದ್ದು, ಅಧಿಕಾರ ಕಳೆದುಕೊಂಡಿದ್ದು, ಎಲ್ಲವೂ ಇದಕ್ಕೆ ಉದಾಹರಣೆಯಾಗಿವೆ. ಈ ಕಾರಣಕ್ಕೆ ಜೀವ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

    ಕಾಂಗ್ರೆಸ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ನಾನು ಲೀಡರ್ ಆಗಬೇಕು, ನಾನು ಲೀಡರ್ ಆಗಬೇಕು ಎಂಬ ಪೈಪೋಟಿ ನಡೆಯುತ್ತಿದೆ. ರಾಜಕೀಯವಾಗಿ ಏನಾದರೂ ಆಪಾದನೆ ಮಾಡಿದರೆ ನಾಯಕರಾಗುತ್ತೇವೆ ಎಂಬ ಉದ್ದೇಶ ಹೊಂದಿದ್ದಾರೆ. ಅಲ್ಲದೆ ಹೋರಾಟ ಮಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸಬೇಕು ಅದಕ್ಕಾಗಿ ಹೀಗೆ ಮಾತನಾಡುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಜೀವಂತವಾಗಿದ್ದೇವೆ ಎಂದು ತೋರಿಸಬೇಕಲ್ಲ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

    ಕಾಂಗ್ರೆಸ್ಸಿನವರು ಈ ಪರಿಸ್ಥಿತಿಯಲ್ಲಿ ಪಕ್ಷ ಬೇಧ ಮರೆತು ಸರ್ಕಾರಕ್ಕೆ ಬೆಂಬಲ ಕೊಡಬೇಕಾಗಿತ್ತು. ಜನ ಸಂಕಷ್ಟದಲ್ಲಿದ್ದಾರೆ, ರಾಜಕೀಯ ಮಾಡಬಾರದು ಎಂದು ಸಹಕಾರ ಕೊಡುವುದು ಬಿಟ್ಟು, ಹುಳುಕು ಹುಡುಕುತ್ತಿದ್ದಾರೆ. ಇದನ್ನು ಜನ ಗಮನಿಸುತ್ತಾರೆ. ಇಂತಹ ಸಂದರ್ಭದಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಜನ ಸಿದ್ದರಾಮಯ್ಯ ಅವರಿಗೆ ಛೀಮಾರಿ ಹಾಕುತ್ತಾರೆ ಎಂದರು.

  • ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಗಿಲ್ಲ ಚಿಕಿತ್ಸೆ, ಸಚಿವರ ಎದುರು ಅಳಲು ತೋಡಿಕೊಂಡ ಅಧಿಕಾರಿ

    ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಗಿಲ್ಲ ಚಿಕಿತ್ಸೆ, ಸಚಿವರ ಎದುರು ಅಳಲು ತೋಡಿಕೊಂಡ ಅಧಿಕಾರಿ

    – ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಘಟನೆ

    ಶಿವಮೊಗ್ಗ: ಕೊರೊನಾ ವಾರಿಯರ್ಸ್ ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಸಚಿವರ ಮುಂದೆ ಅಳಲು ತೋಡಿಕೊಂಡಿರುವ ಘಟನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಜಿಲ್ಲೆಯಾದ್ಯಂತ ಹಾಫ್ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಲಾಕ್‍ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು.

    ಸಭೆಯಲ್ಲಿ ಭಾಗವಹಿಸಿದ್ದ ದೊಡ್ಡಪೇಟೆ ಠಾಣೆಯ ಇನ್‍ಸ್ಪೆಕ್ಟರ್ ವಸಂತ ಕುಮಾರ್, ತಮಗಾದ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಕಳೆದ ಎರಡು ದಿನದ ಹಿಂದೆ ಎಎಸ್ ಐ ಒಬ್ಬರಿಗೆ ಜ್ವರ ಬಂದಿತ್ತು. ಜ್ವರ ಬಂದ ಕಾರಣ ಚಿಕಿತ್ಸೆಗಾಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಸಾಗ ಹಾಕುವ ಪ್ರಯತ್ನವನ್ನೇ ಮಾಡಿದರು. ಸುಮಾರು ಐದಾರು ಆಸ್ಪತ್ರೆಗೆ ಹೋದರೂ ಯಾವ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ದೊರೆಯಲಿಲ್ಲ. ನಂತರ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು ಎಂದರು.

    ಕೊರೊನಾ ವಾರಿಯರ್‍ಗಳಾದ ನಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಸಕಾಲಕ್ಕೆ ಸರಿಯಾಗಿ ಪೊಲೀಸರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಯನ್ನು ಗುರುತಿಸುವಂತೆ ಪೊಲೀಸ್ ಅಧಿಕಾರಿ ಸಚಿವ ಈಶ್ವರಪ್ಪ ಬಳಿ ಮನವಿ ಮಾಡಿದ್ದಾರೆ.