Tag: ಸಚಿವ ಕೆಜೆ ಜಾರ್ಜ್

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್:  ಸರ್ಕಾರಿ ಭೂಮಿಯನ್ನ ಬೇಕಾಬಿಟ್ಟಿ ಕೊಡಲು ಬಿಡಲ್ಲ – ಸಿಎಂ ಸ್ಪಷ್ಟನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸರ್ಕಾರಿ ಭೂಮಿಯನ್ನ ಬೇಕಾಬಿಟ್ಟಿ ಕೊಡಲು ಬಿಡಲ್ಲ – ಸಿಎಂ ಸ್ಪಷ್ಟನೆ

    ಬೆಂಗಳೂರು: ನಗರದ ಎಂಎಸ್‍ಐಎಲ್ ಜಾಗವನ್ನ ಟೆಂಡರ್ ಕರೆಯದೇ ಬಾಡಿಗೆ ನೀಡಲು ಮುಂದಾದ ಸಚಿವ ಜಾರ್ಜ್ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ತಡೆ ನೀಡಿದ್ದು, ವಿವರ ಪಡೆದು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಅಕ್ರಮವಾಗಿ ಎಂಎಎಸ್‍ಐಎಲ್ ಜಾಗವನ್ನು ಬಾಡಿಗೆ ನೀಡಲು ಮುಂದಾಗಿದ್ದ ಸಚಿವ ಜಾರ್ಜ್ ಕ್ರಮದ ಬಗ್ಗೆ ಗುರುವಾರ ಸಂಜೆ ಪಬ್ಲಿಕ್ ಟಿವಿ ವಿಸೃತವಾಗಿ ಸುದ್ದಿ ಪ್ರಸಾರ ಮಾಡಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ನಾನು ನೋಡಿದ್ದೇನೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ. ಸರ್ಕಾರದ ಭೂಮಿಗಳನ್ನ ಸ್ವೇಚ್ಛಾಚಾರವಾಗಿ ಕೊಡಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇತ್ತ ಜಾಗದ ಲೀಸ್ ಸಂಬಂಧ ತೀರ್ಮಾನ ಮಾಡಲು ಇಂದು 11.30ಕ್ಕೆ ನಿಗದಿಯಾಗಿದ್ದ ಅಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ.

    ಇದೇ ವೇಳೆ ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ಸಿಕ್ಕ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿ, ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುತ್ತೇನೆ. ಅಲ್ಲದೇ ಈ ಬಗ್ಗೆ ಸ್ವಲ್ಪ ಸಮಯ ಬೇಕಾಗಿದೆ. ನಾನು ಕಾನೂನು ಬದ್ಧವಾಗಿಯೇ ತೀರ್ಮಾನ ಮಾಡುತ್ತೇನೆ. ಯಾರಿಗೂ ರಕ್ಷಣೆ ಕೊಡುವ ಹಾಗೂ ತಪ್ಪು ಮುಚ್ಚಿ ಹಾಕುವ ಕೆಲಸ ನಾನು ಮಾಡುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ತಪ್ಪು ಮುಚ್ಚಿ ಹಾಕುವ ಕೆಲಸ ನಾನು ಮಾಡಿಲ್ಲ. ಕಾನೂನಿನ ಅನ್ವಯ ಕ್ರಮ ಖಚಿತ ಎಂದು ಭರವಸೆ ನೀಡಿದರು. 

    ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಲು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಅದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ, ಅವರ ಭವಿಷ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದರು. ಇದನ್ನು ಓದಿ: BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

    ಪುತ್ರ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ಕೆಲ ಅಭಿಮಾನಿಗಳು ಸ್ಪರ್ಧೆ ಬಗ್ಗೆ ಕೇಳಿದ್ದಾರೆ. ಮುಂದೆ ಈ ವಿಚಾರ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ನಿಖಿಲ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

    ನಿಗಮ-ಮಂಡಳಿ ನೇಮಕಕ್ಕೆ ತಡೆ ನೀಡಿರುವ ತಮ್ಮ ಕ್ರಮವನ್ನು ಎಚ್‍ಡಿಕೆ ಸಮರ್ಥನೆ ಮಾಡಿಕೊಂಡಿದ್ದು, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಇದನ್ನ ತಡೆ ಹಿಡಿಯಲಾಗಿದೆ. ಬಹಿರಂಗವಾಗಿ ಈ ಕುರಿತು ಚರ್ಚೆ ಮಾಡುವುದು ನನಗೆ ಶೋಭೆ ತರುವುದಿಲ್ಲ. ಅಲ್ಲದೇ ಸರಿಯಾದ ಜಾಗದಲ್ಲಿ ಮಾತನಾಡುತ್ತೇನ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

    BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

    – ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಹಲ್ಲೆ
    – ಲೀಸ್ ಒಪ್ಪಂದಕ್ಕೆ ಶುಕ್ರವಾರ ಬೀಳುತ್ತೆ ಸಹಿ
    – ತೈಲ ಬೆಲೆ ಏರಿಸಲು ಸರ್ಕಾರಕ್ಕೆ ಆತುರ
    – ನ್ಯಾಯವಾಗಿ ಸಿಗೋ ಸಂಪನ್ಮೂಲ ಕ್ರೋಢಿಕರಿಸಲು ವಿಫಲ

    ಬೆಂಗಳೂರು: ನಗರದ ಪ್ರಮುಖ ಸ್ಥಳವಾಗಿರುವ ಹೆಚ್‍ಎಎಲ್‍ನ ಎಂಎಸ್‍ಐಎಲ್ ಏರ್ ಕಾರ್ಗೋ ಪ್ರದೇಶವನ್ನು ಜುಜುಬಿ ಕಾಸಿಗೆ ಬಿಕರಿಗಿಟ್ಟು ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಕೋಟಿ ಕೋಟಿ ಬೆಲೆವುಳ್ಳ ಪ್ರದೇಶವನ್ನು ಪುಡಿಗಾಸಿಗೆ ಲೀಸ್ ನೀಡಲು ಸರ್ಕಾರ ಮುಂದಾಗಿದೆ. 

    ಲೀಸ್ ನೀಡಲು ಸಚಿವ ಕೆಜೆ ಜಾರ್ಜ್ ಕೃಪಾಕಟಾಕ್ಷ ಇದೆ ಎನ್ನಲಾಗಿದ್ದು, ಈ ಕುರಿತು ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ವರದಿಗಾರ್ತಿ ಹಾಗೂ ಸಿಬ್ಬಂದಿ ಮೇಲೆ ಜಾರ್ಜ್ ಬಂಟರು ಹಲ್ಲೆ ನಡೆಸಲು ಯತ್ನಿಸಿದ್ದಾರೆ.

    ಹೆಚ್‍ಎಎಲ್‍ನಲ್ಲಿರುವ ಸುಮಾರು ಮೂರು ಎಕರೆ ಹೊಂದಿರುವ ಎಂಎಸ್‍ಐಎಲ್ ಏರ್ ಕಾರ್ಗೋ ಪ್ರದೇಶವನ್ನು ಸದ್ಯ ಲೀಸ್ ನೀಡಲು ಸರ್ಕಾರ ಮುಂದಾಗಿದೆ. ಆದರೆ ಈ ಪ್ರದೇಶ ನಗರ ಪ್ರಮುಖ ರಸ್ತೆಯಲ್ಲಿ ಇದ್ದು, ಬಾಡಿಗೆ ಕೊಟ್ಟರೆ ಕೋಟಿ ಕೋಟಿ ದುಡಿಯುವ ಸಾಮಥ್ರ್ಯ ಹೊಂದಿದೆ. ಈ ಸಂಗತಿಯನ್ನು ಮರೆ ಮಾಚಿ ಲೀಸ್ ನೀಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಲೀಸ್ ಒಪ್ಪಂದಕ್ಕೆ ಸಹಿ ಮಾಡಲು ಬೋರ್ಡ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಶುಕ್ರವಾರ ಬೋರ್ಡ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಲೀಸ್ ಪತ್ರಕ್ಕೆ ಅಂಕಿತ ಬೀಳಲಿದೆ ಎನ್ನುವ ಖಚಿತ ಮಾಹಿತಿ ಪಡೆದ ಪಬ್ಲಿಕ್ ಟಿವಿ ಈ ಒಪ್ಪಂದದಿಂದ ಸರ್ಕಾರಕ್ಕೆ ಉಂಟಾಗುತ್ತಿರುವ ನಷ್ಟವನ್ನ ವರದಿ ಮಾಡಲು ಸ್ಥಳಕ್ಕೆ ತೆರಳಿತ್ತು.

    ವರದಿ ಮಾಡಲು ಸ್ಥಳಕ್ಕೆ ತೆರಳಿದ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಲ್ಲಿನ ಗೂಂಡಾಗಳಾದ ಪರ್ಲ್ ಗ್ಲೋಬಲ್ ಹಬ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಏಕಾಏಕಿ ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಈ ಸ್ಥಳ ನಮಗೆ ಸೇರಿದ್ದು, ಯಾವುದೇ ಕಾರಣಕ್ಕೂ ನಮ್ಮ ಅನುಮತಿ ಇಲ್ಲದೇ ಪ್ರವೇಶ ಮಾಡಬಾರದು ಎಂದು ಹೇಳಿ ಗೂಂಡಾಗಿರಿ ನಡೆಸಿದ್ದಾರೆ.

    ಅಂದಹಾಗೇ ಮೂರು ಎಕರೆ ಪ್ರದೇಶವಿರುವ ಈ ಸ್ಥಳಕ್ಕೆ ಸದ್ಯ 100 ರಿಂದ 200 ಕೋಟಿ ರೂ. ಬೆಲೆಯನ್ನ ಹೊಂದಿದೆ. ಆದರೆ ಇಂತಹ ಜಾಗವನ್ನು ವರ್ಷಕ್ಕೆ ಕೇವಲ 30 ಲಕ್ಷ ರೂ.ಗೆ ಗ್ಲೋಬಲ್ ಪರ್ಲ್ ಎಂಬ ಸಂಸ್ಥೆಗೆ ಬರೋಬ್ಬರಿ 85 ವರ್ಷ ಲೀಸ್ ನೀಡಲು ಸಚಿವರು ಮುಂದಾಗಿದ್ದಾರೆ. ಸಚಿವ ಜೆಕೆ ಜಾರ್ಜ್ ಒಡೆತನದ ಎಂಬೆಸಿ ಗ್ರೂಪ್ ಜಾಗವನ್ನು ಕೋಟಿ ಕೋಟಿಗೆ ರೂ.ಗೆ ನೀಡುವ ಅವರು ಸರ್ಕಾರಿ ಜಾಗವನ್ನು ಮಾತ್ರ ಬೇಕಾಬಿಟ್ಟಿ ಲೀಸ್ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಒಪ್ಪಂದದ ಬಗ್ಗೆಯೇ ಸಾಕಷ್ಟು ಅನುಮಾನ ಎದ್ದಿದೆ.

    ರೈತರ ಸಾಲಮನ್ನಾ ಮಾಡಲು ಹಾಗೂ ಸಂಪನ್ಮೂಲ ಕ್ರೋಢಿಕರಣದ ಹೆಸರು ಹೇಳಿ ತೈಲದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದೆ. ಆದರೆ ಸರ್ಕಾರ ತನ್ನ ಜಾಗದಿಂದ ನ್ಯಾಯವಾಗಿ ಬರಬೇಕಿದ್ದ ಸಂಪನ್ಮೂಲಗಳನ್ನು ಮಾತ್ರ ಕ್ರೋಢಿಕರಿಸಲು ವಿಫಲವಾಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಯಾವುದೇ ಆಲೋಚನೆ ಇಲ್ಲದೇ ಬರೋಬ್ಬರಿ 85 ವರ್ಷಕ್ಕೆ ಸರ್ಕಾರಿ ಜಾಗವನ್ನು ಲೀಸ್ ನೀಡಲು ಮುಂದಾಗಿರುವುದು ಎಷ್ಟು ಸರಿ? ಸರ್ಕಾರದ ಒಳಗಡೆ ಈ ನಿರ್ಧಾರವನ್ನು ಯಾರು ಪ್ರಶ್ನೆ ಮಾಡುವುದಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಕೆಜೆ ಜಾರ್ಜ್ ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ

    ಸಚಿವ ಕೆಜೆ ಜಾರ್ಜ್ ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಸಚಿವರ ಆಪ್ತರಾದ ಗನ್ ಇಸ್ಮಾಯಿಲ್, ಯುಗೇಂಧರ್ ಮತ್ತು ವಂದಿತ್ ರೆಡ್ಡಿ ಕಚೇರಿ ಮತ್ತು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಸ್ಮಾಯಿಲ್ ಎಂಬವರು ಗನ್ ಮಾರುವ ಅಂಗಡಿಯನ್ನು ಹೊಂದಿದ್ದು, ಸಚಿವ ಕೆಜೆ ಜಾರ್ಜ್ ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಬಿಬಿಎಂಪಿ ಹಾಗೂ ಬಿಡಿಎ ಕಾಮಗಾರಿಗಳ ಗುತ್ತಿಗೆಯನ್ನು ಪಡೆಯುವ ಕೆಲಸವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಜಾರ್ಜ್ ಅವರ ಮಗ ರಾಣಾ ಅವರ ಜೊತೆ ಆಪ್ತವಾಗ ಕಾಣಿಸಿಕೊಳ್ಳುತ್ತಿದ್ದರು. ಇವರ ಮೇಲೆ ಗುರುವಾರ ಐಟಿ ದಾಳಿ ನಡೆಸಿದೆ.

    ವಂದಿತ್ ರೆಡ್ಡಿ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾಗಿದ್ದು, ನಗರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ರಾಣಾ ಆಪ್ತವಲಯದಲ್ಲಿ ವಂದಿತ್ ಗುರುತಿಸಿಕೊಂಡಿದ್ದರು. ಅಲ್ಲದೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೂ ಆಪ್ತ ಎನ್ನಲಾಗಿದೆ. ಬೆಂಳೂರು ಕೆರೆಗಳ ಪುನರುತ್ಥಾನ ಉಸ್ತುವಾರಿಯನ್ನು ಟೆಂಡರ್ ಇಲ್ಲದೆಯೇ ನೀಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.

    ಐಟಿ ದಾಳಿಗೊಳಗಾದ ಯುಗೇಂಧರ್ ಸಹ ಗುತ್ತಿಗೆದಾರರಾಗಿದ್ದು, ಜಾರ್ಜ್ ಅವರ ವೈಯಕ್ತಿಕ ವ್ಯವಹಾರದ ಜವಾಬ್ದಾರಿಯನ್ನು ಹೊಂದಿದ್ದರು ಎನ್ನಲಾಗಿದೆ.

    ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಸಹ ಕೆಜೆ ಜಾರ್ಜ್ ಅವರ ಹೆಸರು ಕೇಳಿ ಬಂದಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಫೆಬ್ರವರಿ 10 ಅಥವಾ 12 ರೊಳಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಯಾವುದೇ ವೇಳೆ ಅಗತ್ಯ ಬಿದ್ದರೆ ಜಾರ್ಜ್‍ರನ್ನು ಸಿಬಿಐ ವಶಕ್ಕೆ ಪಡೆಯುವ ಸಂಭವವಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಭಾನುವಾರ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ನಂತರ ಸಿಬಿಐ ಬ್ರಹ್ಮಾಸ್ತ್ರ ಪ್ರಯೋಗ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆರ್. ಅಶೋಕ್ ಮೇಲೆ ಎಸಿಬಿ ಹಲವು ಭೂಹಗರಣಗಳ ಕುರಿತು ಕೇಸು ದಾಖಲಿಸುತ್ತಿದ್ದಂತೆ ಜಾರ್ಜ್ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಮಾಡಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

    https://www.youtube.com/watch?v=jcIkDVzctzY