Tag: ಸಚಿವ ಕೆಎಸ್ ಈಶ್ವರಪ್ಪ

  • ವರ್ಷದೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭ ನಿರೀಕ್ಷೆ: ಸಿಎಂ ಬಿಎಸ್‍ವೈ

    ವರ್ಷದೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭ ನಿರೀಕ್ಷೆ: ಸಿಎಂ ಬಿಎಸ್‍ವೈ

    – ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ

    ಶಿವಮೊಗ್ಗ: ಜಿಲ್ಲೆಯ ಸೋಗಾನೆ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಮುಂದಿನ ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿದ್ದು, 2022ರ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಆರಂಭದಲ್ಲಿ 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಏರ್ ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರಿಗೆ ಹೆಚ್ಚಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 75 ಕೋಟಿ ರೂಪಾಯಿಯನ್ನು ಮುಂದಿನ ಬಜೆಟ್ ನಲ್ಲಿ ಮಂಜೂರು ಮಾಡಲಾಗುವುದು ಎಂದರು.

    ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಉಡಾನ್ ಯೋಜನೆ ವ್ಯಾಪ್ತಿಯಲ್ಲಿ ಒಳಪಡಿಸುವ ಕುರಿತು ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೂ ಸಹ ವಿಮಾನಯಾನ ಕೈಗೊಳ್ಳಲು ಸಾಧ್ಯವಾಗಲಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಿಂದ ಭೂಮಿ ಕಳೆದುಕೊಂಡ ಪ್ರತಿಯೊಬ್ಬರಿಗೂ ಸಮರ್ಪಕವಾದ ಪರಿಹಾರವನ್ನು ಒದಗಿಸಲಾಗುವುದು ಎಂದರು.

    ವಿಮಾನ ನಿಲ್ದಾಣ ಸ್ಥಾಪನೆಯಿಂದಾಗಿ ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ವೇಗ ದೊರಕುವುದನ್ನು ನಿರೀಕ್ಷಿಸಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಆರಂಭಿಸಲು ಇದು ಪೂರಕವಾಗಲಿದೆ ಎಂದರು.

    ಇತ್ತ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಕಲ್ಲುವಡ್ಡು ಏತನೀರಾವರಿ ಯೋಜನೆಯಿಂದಾಗಿ ಶಿಕಾರಿಪುರ ಹಾಗೂ ಸೊರಬ ತಾಲೂಕುಗಳ 3,430 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸಾಧ್ಯವಾಗಲಿದೆ. ಯೋಜನೆಯಿಂದ 41 ಕೆರೆಗಳಿಗೆ ಸಹ ನೀರು ತುಂಬಿಸಲಾಗುತ್ತಿದೆ. ತಾಳಗುಂದ ಹೊಸೂರು ಏತ ನೀರಾವರಿ ಯೋಜನೆ ಈಗಾಗಲೇ ಅನುಷ್ಠಾನಗೊಳ್ಳುತ್ತಿದ್ದು, ಇದರಿಂದ 230 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಲಿದೆ. ಮುಂದಿನ ವರ್ಷ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

    ಉತ್ತರ ಕರ್ನಾಟಕದ ಅತಿವೃಷ್ಟಿ ತಾಲೂಕುಗಳ ವೈಮಾನಿಕ ಸಮೀಕ್ಷೆಯನ್ನು ಅ.21ರಂದು ನಡೆಸಲಿದ್ದೇನೆ. ಪ್ರಧಾನಮಂತ್ರಿ ಅವರು ನೆರೆಪೀಡಿತ ಪ್ರದೇಶಗಳಿಗೆ ಎಲ್ಲಾ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ. ಅಕ್ಕಮಹಾದೇವಿ ಅವರ ಜನ್ಮಸ್ಥಳವಾದ ಉಡುತಡಿಯನ್ನು ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ನಾವು ಬದ್ಧರಾಗಿದ್ದು ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ‘ಮನೆಮನೆಗೆ ಗಂಗೆ’ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

    ಮುಖ್ಯಮಂತ್ರಿ ಅವರು 125 ಕೋಟಿ ರೂ. ವೆಚ್ಚದ ಕಸಬಾ ಏತ ನೀರಾವರಿ ಯೋಜನೆ, 17.80 ಕೋಟಿ ರೂ. ವೆಚ್ಚದಲ್ಲಿ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳದ ಸಮಗ್ರ ಅಭಿವೃದ್ಧಿ ಕಾಮಗಾರಿ, 16ಕೋಟಿ ರೂ. ವೆಚ್ಚದ ಸನ್ಯಾಸಿಕೊಪ್ಪ ಏತ ನೀರಾವರಿ ಕಾಮಗಾರಿ ಹಾಗೂ 8.33 ಕೋಟಿ ರೂ. ವೆಚ್ಚದ ಭಕ್ತನಕೊಪ್ಪ ವಿದ್ಯುತ್ ಉಪಕೇಂದ್ರ, 9 ಕೋಟಿ ರೂ. ವೆಚ್ಚದ ಅಂಬಾರಕೊಪ್ಪ ವಿದ್ಯುತ್ ಉಪಕೇಂದ್ರ ಸೇರಿದಂತೆ ನೂರಾರು ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

    ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ತೊಗರ್ಸಿ ಹಾಗೂ ಬಿಳಕಿಯಲ್ಲಿ ನಿರ್ಮಿಸಿರುವ ಪಶು ಚಿಕಿತ್ಸಾ ಕೇಂದ್ರ, ಶಿಕಾರಿಪುರ ಹಾಗೂ ಶಿರಾಳಕೊಪ್ಪದಲ್ಲಿ ನಿರ್ಮಿಸಿರುವ ಮೆಟ್ರಿಕ್ ಪೂರ್ವ ಹಾಗೂ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ, ಪೌರಾಡಳಿತ ಸಚಿವ ನಾರಾಯಣಗೌಡ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

  • ಶಿವಮೊಗ್ಗದಲ್ಲಿ ವಿಧಿಸಿದ್ದ ಹಾಫ್ ಲಾಕ್‍ಡೌನ್ ರದ್ದು: ಸಚಿವ ಈಶ್ವರಪ್ಪ

    ಶಿವಮೊಗ್ಗದಲ್ಲಿ ವಿಧಿಸಿದ್ದ ಹಾಫ್ ಲಾಕ್‍ಡೌನ್ ರದ್ದು: ಸಚಿವ ಈಶ್ವರಪ್ಪ

    ‘ನಾನು, ನನ್ನ ಕುಟುಂಬ, ಸಮಾಜ ಚೆನ್ನಾಗಿರಬೇಕು ಅಂದ್ರೆ ಮನೆಯಲ್ಲಿ ಬಿದ್ದಿರಬೇಕು’

    ಶಿವಮೊಗ್ಗ: ಜಿಲ್ಲೆಯಲ್ಲಿ ಜಾರಿ ಮಾಡಲಾಗಿದ್ದ ಹಾಫ್ ಲಾಕ್‍ಡೌನನ್ನು ಇಂದಿನಿಂದ ರದ್ದುಗೊಳಿಸಲಾಗಿದೆ. ಆದರೆ ನಗರದ 7 ವಾರ್ಡ್‍ಗಳನ್ನು ಸೀಲ್‍ಡೌನ್ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಹಾಫ್ ಲಾಕ್‍ಡೌನ್ ಜಾರಿಗೊಳಿಸಿದ್ದೆವು. ಆದರೆ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಹಾಫ್ ಲಾಕ್‍ಡೌನನ್ನು ಹಿಂಪಡೆದುಕೊಂಡಿದ್ದು, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದ್ದ ವಾರ್ಡ್ ನಂಬರ್ 22, 23, 29, 30 ಸಂಪೂರ್ಣ ಸೀಲ್‍ಡೌನ್ ಹಾಗೂ ವಾರ್ಡ್ ನಂಬರ್ 12, 13 ಹಾಗೂ 33 ರಲ್ಲಿ ಭಾಗಶಃ ಸೀಲ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ನಾಲಿಗೆ ಹರಿಬಿಟ್ಟ ಈಶ್ವರಪ್ಪ

    ಸೀಲ್‍ಡೌನ್ ಪ್ರದೇಶಗಳಲ್ಲಿ ಮುಂಜಾನೆ 5 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಳ್ಳಲಾಗಿದೆ. ಅಲ್ಲದೇ 10 ಗಂಟೆಯ ನಂತರ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಆ್ಯಂಟಿಜೆನ್ ಕಿಟ್‍ನಿಂದ ರ್ಯಾಪಿಡ್ ಟೆಸ್ಟ್ ನಡೆಸಿ ಸ್ಥಳದಲ್ಲಿಯೇ ವರದಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

    ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಜನರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಜನರ ಪ್ರಾಣದ ಜೊತೆ ಚೆಲ್ಲಾಟವಾಡಬೇಡಿ. ನೀವು ಬದುಕಿ ಜನರನ್ನು ಬದುಕಲು ಬಿಡಿ. ಸುಖಾಸುಮ್ಮನೆ ಸಂಚರಿಸಿ ಕೊರೊನಾ ಹಬ್ಬಿಸಬೇಡಿ. ನನ್ನ ಜೀವ ಉಳಿಸಿಕೊಳ್ಳಬೇಕು. ನನ್ನ ಕುಟುಂಬ, ಸಮಾಜ ಚೆನ್ನಾಗಿರಬೇಕು ಅಂದರೆ ಮನೆಯಲ್ಲಿಯೇ ಬಿದ್ದಿರಬೇಕು ಎಂದು ಸಚಿವ ಈಶ್ವರಪ್ಪ ಖಾರವಾಗಿ ಎಚ್ಚರಿಕೆ ನೀಡಿದರು.

  • ಪೊಲೀಸರನ್ನು ಕಂಡರೆ ಜನರಿಗೆ ಭಯವೇ ಇಲ್ಲ: ಸಚಿವ ಈಶ್ವರಪ್ಪ

    ಪೊಲೀಸರನ್ನು ಕಂಡರೆ ಜನರಿಗೆ ಭಯವೇ ಇಲ್ಲ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಮೊದಲು ಪೊಲೀಸರು ಅಂದ್ರೆ ಜನರಿಗೆ ಭಯ ಇರುತಿತ್ತು. ಆದರೆ ಇತ್ತೀಚೆಗೆ ಜನರಿಗೆ ಪೊಲೀಸರ ಕಂಡರೆ ಭಯವೇ ಇಲ್ಲದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿಯವರೆಗೆ ಹಾಫ್ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಇಂದು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸಿಪಿಐ ಹಾಗೂ ಸಿಪಿಐ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು ಕೊರೊನಾ ತಡೆಗಟ್ಟುವಲ್ಲಿ ವಾರಿಯರ್ ರೀತಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು. ಆದರೆ ಇದೀಗ ಕೊರೊನಾ ಸೋಂಕು ಹೆಚ್ಚುತ್ತಿರುವ ಪರಿಣಾಮ ಪೊಲೀಸರು ಮತ್ತಷ್ಟು ಶ್ರಮ ಹಾಕಬೇಕಿದೆ ಎಂದರು.

    ಇನ್ನು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಜಿಲ್ಲಾಡಳಿತ ಇಂದಿನಿಂದ ಜಿಲ್ಲೆಯಾದ್ಯಂತ ಹಾಫ್ ಲಾಕ್ ಡೌನ್ ಜಾರಿಗೊಳಿಸಿದೆ. ಮುಂಜಾನೆ 5 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2 ರ ನಂತರ ಹಾಗೂ ಮುಂಜಾನೆ 5 ರವರೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ. ಜನರು ಗುಂಪು ಗುಂಪಾಗಿ ಸೇರದೇ, ಲಾಕ್ ಡೌನ್ ವೇಳೆ ಜನರು ವಿನಃ ಕಾರಣ ಮನೆಯಿಂದ ಹೊರಗೆ ಬರದಂತೆ ಪೊಲೀಸರು ಜಾಗೃತಿ ಮೂಡಿಸುವ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚನೆ ನೀಡಿದ್ದಾರೆ.

  • ಗ್ರಾಮೀಣ ಪ್ರದೇಶಕ್ಕೂ ಸೋಂಕು!- ಮತ್ತಷ್ಟು ಮುಂಜಾಗ್ರತಾ ಕ್ರಮ

    ಗ್ರಾಮೀಣ ಪ್ರದೇಶಕ್ಕೂ ಸೋಂಕು!- ಮತ್ತಷ್ಟು ಮುಂಜಾಗ್ರತಾ ಕ್ರಮ

    -ಬಲವಂತವಾಗಿ ಲಾಕ್‍ಡೌನ್ ವಿಧಿಸುವುದಿಲ್ಲ ಎಂದ ಸಚಿವ ಈಶ್ವರಪ್ಪ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಧಾನವಾಗಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾಳೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಕಳೆದ ಒಂದು ವಾರದಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸ್ವಯಂ ನಿಯಂತ್ರಣ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು.

    ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳ ಸೇರಿದಂತೆ ಸುಮಾರು 30 ಸಂಘ ಸಂಸ್ಥೆಗಳ 60 ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಭಾಗಶಃ ಲಾಕ್‍ಡೌನ್ ವಿಧಿಸುವುದು ಸೇರಿದಂತೆ ಎಲ್ಲಾ ಸಾಧ್ಯತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಅವಧಿಯನ್ನು ಸೀಮಿತಗೊಳಿಸುವುದು, ದಿನ ಬಿಟ್ಟು ದಿನ ಅಂಗಡಿ ತೆರೆಯುವುದು, ಸಂಪೂರ್ಣ ಲಾಕ್‍ಡೌನ್ ಸೇರಿದಂತೆ ಎಲ್ಲಾ ಸಾಧ್ಯತೆಗಳನ್ನು ಸಭೆಯ ಮುಂದಿರಿಸಿ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಜಿಲ್ಲಾಡಳಿತ ಬದ್ಧವಾಗಿರುತ್ತದೆ. ಜೊತೆಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಲಾಕ್‍ಡೌನ್ ಬಲವಂತವಾಗಿ ಹೇರುವುದಿಲ್ಲ. ನಾಳೆಯ ಸಭೆಯಲ್ಲಿ ಸಂಘ ಸಂಸ್ಥೆಗಳ ಮುಖಂಡರು ನೀಡುವ ಅಭಿಪ್ರಾಯಕ್ಕೆ ಜಿಲ್ಲಾಡಳಿತ ಬದ್ಧವಾಗಿರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

  • ಸಚಿವ ಸುಧಾಕರ್, ಸಿಎಂ ಬಿಎಸ್‍ವೈ ರಾಜ್ಯದ ನರೇಂದ್ರ ಮೋದಿಗಳಿದ್ದಂತೆ: ಈಶ್ವರಪ್ಪ

    ಸಚಿವ ಸುಧಾಕರ್, ಸಿಎಂ ಬಿಎಸ್‍ವೈ ರಾಜ್ಯದ ನರೇಂದ್ರ ಮೋದಿಗಳಿದ್ದಂತೆ: ಈಶ್ವರಪ್ಪ

    -ಎಚ್‍ಡಿಕೆ ಟೀಕೆ ಮಾಡೋದು ವಿರೋಧ ಪಕ್ಷದವರಾಗಿ ಅವರ ಕರ್ತವ್ಯ

    ಚಿಕ್ಕಬಳ್ಳಾಪುರ: ಕೊರೊನಾದಿಂದ ನಲುಗಿರುವ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ಅವರು ಎಚ್‍ಡಿಕೆ ವಿರೋಧ ಪಕ್ಷದವರಾಗಿ ಟೀಕೆ ಮಾಡುವುದು ಅವರ ಕರ್ತವ್ಯ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಚ್‍ಡಿ ಕುಮಾರಸ್ವಾಮಿ ಅವರು ಪ್ರಧಾನಿಗಳನ್ನು ಟೀಕೆ ಮಾಡಿ ತೃಪ್ತಿ ಪಡುತ್ತಿದ್ದಾರೆ. ಪಡೆಯಲಿ. ಆದರೆ ನಾವು ಎಚ್‍ಡಿ ಕುಮಾರಸ್ವಾಮಿ ಅವರ ಟೀಕೆಗಳನ್ನು ಮಾರ್ಗದರ್ಶನ ಎಂದು ಭಾವಿಸುತ್ತೇವೆ. ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಪ್ರಧಾನ ಮಂತ್ರಿಗಳ ಪ್ಯಾಕೇಜನ್ನು ಇಡೀ ದೇಶದ ಜನ ಮೆಚ್ಚಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಟೀಕೆ ಮಾಡುವುದು ಸರಿನೋ, ತಪ್ಪೋ ಅನ್ನೋದನ್ನು ರಾಜ್ಯದ ಜನರಿಗೆ ಬಿಡುತ್ತೇನೆ ಎಂದರು.

    ಇದೇ ವೇಳೆ ವಿಶ್ವದಲ್ಲೇ ಕೊರೊನಾವನ್ನು ದೂರ ಓಡಿಸುವಲ್ಲಿ, ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಬೆಸ್ಟ್ ಎನಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಸಹ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಯಶಸ್ವಿಯಾಗಿ ಕೊರೊನಾ ಸಂಕಷ್ಟ ನಿಭಾಯಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಸಹ ನರೇಂದ್ರ ಮೋದಿಗಳಿದ್ದಂತೆ ಎಂದು ಈಶ್ವರಪ್ಪ ಹೇಳಿದರು.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಪುನಶ್ಚೇತನ ಯೋಜನೆಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಸುಧಾಕರ್ ಹಾಗೂ ಸಂಸದ ಬಚ್ಚೇಗೌಡ ಚಾಲನೆ ನೀಡಿದರು.

  • ಕೊರೊನಾದಿಂದ ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಿದೆ: ಸಚಿವ ಈಶ್ವರಪ್ಪ

    ಕೊರೊನಾದಿಂದ ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಿದೆ: ಸಚಿವ ಈಶ್ವರಪ್ಪ

    ಚಿಕ್ಕಬಳ್ಳಾಪುರ: ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಳ ನೀಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಬಗ್ಗೆ ಸಭೆ ನಡೆಸಿ ಮಾತನಾಡುತ್ತಿದ್ದ ಸಚಿವವರು, ಸಭೆ ನಡುವೆ ಕೊರೊನಾದಿಂದ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಕಡೆ ನಾವು ಜನರನ್ನು ಮನೆಯಲ್ಲಿರುವಂತೆ ಮನವಿ ಮಾಡುತ್ತೇವೆ. ಅಧಿಕಾರಿಗಳನ್ನು ಮನೆಯಲ್ಲೇ ಇರುವಂತೆ ಹೇಳುತ್ತೇವೆ. ಮತ್ತೊದೆಡೆ ಹಣಕಾಸಿನ ಸಮಸ್ಯೆ ಇದೆ. ಯಾವುದೇ ಹಳ್ಳಿಗಳಿಗೂ ಹೋದರೂ ದಾನ ಧರ್ಮ ಮಾಡುವವರ ಸಂಖ್ಯೆ ಬಹಳ ಇದೆ. ನಮ್ಮ ಸಂಸ್ಕೃತಿಯೇ ನಮ್ಮನ್ನ ಉಳಿಸುತ್ತಿದೆ. ಅಕ್ಕಿಯನ್ನು ಇಲ್ಲ ಅಂತಿದ್ದವರು ಈಗ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಬಡವರಿಗೆಲ್ಲರಿಗೂ ಸರ್ಕಾರ ಸ್ಪಂದಿಸುತ್ತಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ಕುಡಿಯುವ ನೀರು ಪೂರೈಕೆಯ ಟ್ಯಾಂಕರ್ ಗಳ ಹಣ ಸೇರಿದಂತೆ ಕೆಲ ಯೋಜನೆಗಳ ಹಣ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ. ಹಲವು ಯೋಜನೆಗಳಿಗೆ ಸಕಾಲಕ್ಕೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲಿ ಹಣ ಇದ್ದಿದ್ದರೇ ಒಂದು ವಾರದೊಳಗೆ ಹಣ ಬಿಡುಗಡೆ ಮಾಡಿಕೊಡಿಸುತ್ತಿದೆ. ಆದರೆ ಈಗ ಆ ರೀತಿ ಮಾಡಲು ಆಗುತ್ತಿಲ್ಲ. ಆದರೂ ಕೇಂದ್ರ ಸರ್ಕಾರದಿಂದ ಈ ಬಾರಿ ಒಂದೇ ಕಂತಿನಲ್ಲಿ ಮೊದಲ ಬಾರಿಗೆ 1,861 ಕೋಟಿ ನರೇಗಾ ಹಣ ಬಿಡುಗಡೆಯಾಗಿದೆ. ಹೀಗಾಗಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಇನ್ನೂ ಇಲ್ಲ ಅಂದಾಗಲೂ ನಿಮಗೆ ಹೇಳಬೇಕಲ್ವಾ ಎಂದು ಹೇಳುತ್ತಿರುವುದಾಗಿ ತಿಳಿಸಿದರು. ನಂತರ ಇದೇ ಮಾತಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆ ಇರೋದು ನಿಜವಾದ್ರೂ, ಸರ್ಕಾರ ಈ ಸಮಸ್ಯೆಯನ್ನ ಬಗೆಹರಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.