Tag: ಸಚಿವ ಕೃಷ್ಣಭೈರೇಗೌಡ

  • ಅ.9 ರಿಂದ 23ರವರೆಗೆ ಹಾಸನಾಂಬೆ ಜಾತ್ರೆ – ಈ ಬಾರಿ ವಿಐಪಿ, ವಿವಿಐಪಿ ಪಾಸ್ ಇರಲ್ಲ

    ಅ.9 ರಿಂದ 23ರವರೆಗೆ ಹಾಸನಾಂಬೆ ಜಾತ್ರೆ – ಈ ಬಾರಿ ವಿಐಪಿ, ವಿವಿಐಪಿ ಪಾಸ್ ಇರಲ್ಲ

    – ಹೊಸದಾಗಿ ಗೋಲ್ಡ್ ಪಾಸ್ ವಿತರಣೆ
    – ಕೊನೆಯ ಐದು ದಿನ ಎಲ್ಲಾ ಶಿಷ್ಟಾಚಾರ ರದ್ದು

    ಹಾಸನ: ಈ ಬಾರಿಯ ಹಾಸನಾಂಬೆ ಜಾತ್ರೆ (Hasanambe Jatra) ಅ.9 ರಿಂದ 23ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆ ಮಂಗಳವಾರ (ಆ.26) ಹಾಸನ ಜಿ.ಪಂ ಹೊಯ್ಸಳ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಿತು. ಈ ವೇಳೆ ದರ್ಶನದ ಪಾಸ್ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.

    ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ (Krishna Byregowda) ಅವರ ನೇತೃತ್ವದಲ್ಲಿ ಶ್ರೀ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆದಿದ್ದು, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಎಚ್.ಪಿ.ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜೇತಾ, ಮೇಯರ್ ಹೇಮಲತಾ ಹಾಗೂ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.ಇದನ್ನೂ ಓದಿ: ಆಪ್ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ

    2025ರ ಹಾಸನಾಂಬೆ ಜಾತ್ರಾ ಮಹೋತ್ಸವ ಅ.9 ರಿಂದ ಅ.23ರವರೆಗೆ ನಡೆಯಲಿದ್ದು, ಅ.9ರಂದು ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲಿದೆ. ಬಳಿಕ ಅ.23ರಂದು ಗರ್ಭಗುಡಿ ಬಾಗಿಲು ಮುಚ್ಚಲಿದೆ. ಅ.10ರಿಂದ ಅ.22ರವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳು ಸಂಪೂರ್ಣ ರದ್ದುಗೊಳಿಸಿ, ಹೊಸದಾಗಿ ಗೋಲ್ಡ್ ಪಾಸ್ ವಿತರಣೆ ಮಾಡಲಾಗುವುದು. ಈ ಗೋಲ್ಡ್ ಪಾಸ್ ಪಡೆದರೆ ಮುಂಜಾನೆ 5 ರಿಂದ 11 ಗಂಟೆಯವರೆಗೆ ದರ್ಶನ ಪಡೆಯಬಹುದಾಗಿದೆ. ಒಂದು ಗೋಲ್ಡ್ ಪಾಸ್‌ಗೆ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿ ಅವರು ಹೇಳಿದ್ದಾರೆ.

    ಇನ್ನೂ ಕೊನೆಯ ಐದು ದಿನ ಎಲ್ಲಾ ಶಿಷ್ಟಾಚಾರ ರದ್ದುಗೊಳಿಸಲಾಗುವುದು, ಸಿಎಂ, ಡಿಸಿಎಂ, ಸಿಜೆ ಮಾತ್ರ ಶಿಷ್ಟಾಚಾರದ ವಾಹನ ಬಳಸಬಹುದು. ಉಳಿದವರು ಪ್ರವಾಸಿ ಮಂದಿರದಲ್ಲಿ ವಾಹನ ನಿಲ್ಲಿಸಿ, ಜಿಲ್ಲಾಡಳಿತ ಆಯೋಜಿಸಿರುವ ವಾಹನದಲ್ಲಿ ಬಂದು ದೇವಿ ದರ್ಶನ ಪಡೆಯಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    ಈ ವೇಳೆ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ರಾಜ್ಯದ ಎಲ್ಲೆಲ್ಲಿಂದಲೊ ಜನರು ಹಾಸನಾಂಬೆ ದರ್ಶನಕ್ಕೆ ಬರುತ್ತಾರೆ. ಆದರೆ ವಿವಿಐಪಿ, ವಿಐಪಿ ಭಕ್ತರ ಕಾರಣದಿಂದ ಜನರಿಗೆ ದರ್ಶನಕ್ಕೆ ಸಮಸ್ಯೆ ಆಗುತ್ತದೆ. ಹಾಗಾಗಿ ಅವರನ್ನು ಗಂಟೆಗಟ್ಟಲೆ ನಿಲ್ಲಿಸಿ ಜನರಿಗೆ ತೊಂದರೆ ಕೊಡೋದು ಸರಿಯಲ್ಲ. ಹಾಗಾಗಿ ಈ ಗಣ್ಯ ಸಂಸ್ಕೃತಿ ತಡೆಯಲು ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನಾನು ಈ ವಿಐಪಿ ಹಾಗೂ ಶಿಷ್ಟಾಚಾರ ಭಕ್ತರಿಗೆ ಸಮಯ ನಿಗದಿ ಮಾಡಿ ಎಂದು ಹೇಳಿದ್ದೇನೆ. ಗೋಲ್ಡ್ ಕಾರ್ಡ್ಗೆ ಎರಡು ಗಂಟೆ, ಶಿಷ್ಟಾಚಾರಕ್ಕೆ ಎರಡು ಗಂಟೆ ಮಾತ್ರ ಸಮಯ ನಿಗದಿ ಮಾಡಿ ಎಂದು ಸಲಹೆ ನೀಡಿದ್ದೇನೆ. ಇದೆಲ್ಲ ಮಾಡಿದರೆ ಜನರಿಗೆ ಅನುಕೂಲ ಆಗುತ್ತದೆ ಎನ್ನುವುದಾದರೆ ಈ ಎಲ್ಲಾ ರೀತಿಯ ಬದಲಾವಣೆ ಮಾಡೋಣ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ

  • ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ – ಕೃಷ್ಣ ಬೈರೇಗೌಡ ಸವಾಲು

    ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ – ಕೃಷ್ಣ ಬೈರೇಗೌಡ ಸವಾಲು

    ಬೆಂಗಳೂರು: ಪ್ರತಿಪಕ್ಷ ಬಿಜೆಪಿಗೆ ವಿಶ್ವಾಸ ಇದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ ಎಂದು ಕೃಷ್ಣ ಬೈರೇಗೌಡ ಅವರು ಸವಾಲು ಎಸೆದಿದ್ದಾರೆ.

    ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದುವರೆಗೆ ಮೈತ್ರಿ ಸರ್ಕಾರ ಮೇಲೆ ಬಿಜೆಪಿ ನಡೆಸುತ್ತಿರುವ 7ನೇ ದಾಳಿ ಇದಾಗಿದೆ. ಇದುವರೆಗೂ ಎಲ್ಲಾ ದಾಳಿಗಳನ್ನು ಮೆಟ್ಟಿ ನಿಂತಿದ್ದೇವೆ. ಈ ಬಾರಿ ಹೆಚ್ಚಿನ ಮಟ್ಟದಲ್ಲಿ ದಾಳಿ ಆಗಿದೆ. ಒಗ್ಗಟ್ಟಿನಿಂದ ಏನೆಲ್ಲಾ ಅವಕಾಶಗಳಿದೆ ಅವುಗಳನ್ನು ಬಳಕೆ ಮಾಡಿಕೊಂಡು ಸರ್ಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಲಾಯಿತು ಎಂದರು.

    ಬಿಜೆಪಿ ಅವರು ಸಂಖ್ಯಾಬಲ ಇಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಅವರಿಗೆ ಅಷ್ಟು ವಿಶ್ವಾಸ ಇದ್ದರೆ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲಿ ಎಂದರು. ಅಲ್ಲದೇ ರಾಜ್ಯ ಸರ್ಕಾರ ರಾಜ್ಯಪಾಲರ ಎಲ್ಲ ಸಲಹೆ, ಸೂಚನೆಗಳನ್ನು ಪಾಲಿಸುತ್ತದೆ. ನಾಳೆಯಿಂದ ಸದನ ಆರಂಭ ಆಗಲಿದ್ದು, ಸರ್ಕಾರ ಹಣಕಾಸು ವಿಧೇಯಕವನ್ನು ಮತಕ್ಕೆ ಹಾಕಲಿದೆ. ಆಗ ನಮಗೆ ಬಹುಮತ ಇದೆಯೋ ಇಲ್ವೋ ಗೊತ್ತಾಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಪುಟ ಸಭೆಯಲ್ಲಿ ಬಿಬಿಎಂಪಿ ವಿಭಜನೆ ಮಸೂದೆ ಹಿಂಪಡೆಯುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಬಿ.ಎಸ್ ಪಾಟೀಲ್ ಕಮಿಟಿ ವರದಿ ತಿರಸ್ಕಾರ ಮಾಡಿಲ್ಲ, ಬೇರೆ ರೀತಿ ಅನುಷ್ಠಾನ ಗೊಳಿಸುವ ಕುರಿತು ಚಿಂತನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆಯನ್ನು ನೀಡಿದರು.

    ನಗರಾಭಿವೃದ್ಧಿ ಇಲಾಖೆ ವತಿಯಿಂದ ಕುಷ್ಟಗಿ ತಾಲ್ಲೂಕಿನ ತಾವರಗೆಡ ಗ್ರಾಮಕ್ಕೆ ನೀರಾವರಿಗೆ 88 ಕೋಟಿ ರೂ. ಮೇಲುಕೋಟೆಯ ಎಲ್ಲಾ ಕಲ್ಯಾಣಿಗಳ ಅಭಿವೃದ್ಧಿಗೆ 32 ಕೋಟಿ, ಮಂಡ್ಯದಲ್ಲಿ ಲೋಕ ಪಾವನ ನದಿಯಿಂದ ಕೆರೆ ತುಂಬಲು 30 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.

  • ಫಸ್ಟ್ ಟೈಂ, ಯುವಕ- ಯುವತಿಯರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು

    ಫಸ್ಟ್ ಟೈಂ, ಯುವಕ- ಯುವತಿಯರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು

    – ಜುಲೈ 12ರಿಂದ ಅಧಿವೇಶನ ಆರಂಭ
    – ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ
    – ಜುಲೈ ಎರಡನೇ ವಾರ ಮೋಡ ಬಿತ್ತನೆಗೆ ಸಿದ್ಧತೆ

    ಬೆಂಗಳೂರು: ಮಳೆಗಾಲದ ಅಧಿವೇಶನ ಜುಲೈ 12 ರಿಂದ 26 ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.

    ಅಧಿವೇಶನ ಅಷ್ಟೇ ಅಲ್ಲದೆ ಹಲವು ಮಹತ್ವದ ವಿಚಾರಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕಳೆದ ಎರಡು ವರ್ಷಗಳಿಂದ ನಡೆಸಲಾಗುತ್ತಿದ್ದ ಬೆಳೆ ಸಮೀಕ್ಷೆಯನ್ನು ಈ ಬಾರಿ ಅತ್ಯಾಧುನಿಕವಾಗಿ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ 2 ಕೋಟಿ 20 ತಾಕುಗಳಿವೆ. ಈ ತಾಕುಗಳಲ್ಲಿ ಯಾವ ಬೆಳೆ ಬೆಳೆಯಲಾಗಿದೆ ನೆನ್ನುವ ಸಮೀಕ್ಷೆ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

    ಈ ಬಾರಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆಗೆ ನಿರ್ಧಾರವನ್ನು ಸರ್ಕಾರ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲದೆ ಮುಂಗಾರು, ಹಿಂಗಾರು ಬೆಳೆಗಳ ಸಮೀಕ್ಷೆ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಖಾಸಗಿಯವರಿಂದ ಬೆಳೆ ಸಮೀಕ್ಷೆ ಮಾಡಿಸಲಾಗುತ್ತದೆ. ಗ್ರಾಮದ ಯುವಕ-ಯುವತಿಯರು ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ಪ್ರತಿ ಬೆಳೆಗೆ 10 ರೂ. ಸಂಭಾವನೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಸಮೀಕ್ಷೆ ಮಾಡಲು ಇಚ್ಚಿಸುವವರು ಗ್ರಾಮ ಲೆಕ್ಕಿಗರ ಬಳಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಸುಮಾರು 90 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸುತ್ತಿದ್ದು, ದೇಶದಲ್ಲಿ ಇಂತಹ ಸಮೀಕ್ಷೆ ಇದೇ ಮೊದಲಾಗಿದೆ ಎಂದರು.

    ಕರ್ನಾಟಕ ರೈತ ಸುರಕ್ಷಾ ಯೋಜನೆಯನ್ನು ಈ ವರ್ಷವೂ ಅಳವಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. 10 ಕ್ಲಸ್ಟರ್ ಮಾಡಿ ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗುತ್ತಿದ್ದು, ರಾಜ್ಯ ಸರ್ಕಾರ 546 ಕೋಟಿ ರೂ. ಯೋಜನೆಗೆ ಭರಿಸಲಿದೆ. ರಾಜ್ಯದ 10 ತಾಲೂಕು ಆಸ್ಪತ್ರೆಯಲ್ಲಿ ಡಿಎನ್ಬಿ ಕೋರ್ಸ್ ಪ್ರಾರಂಭಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋರ್ಸ್ ಮಾಡಿದವರು 3 ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಿಯಮ ಅಳವಡಿಕೆ ಮಾಡಿದ್ದು, ನೀಟ್ ಮೂಲಕ ಕೋರ್ಸ್ ದಾಖಲಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಹೇಳಿದರು.

    ಹೇಮಾವತಿ ಬಲದಂಡೆ ನಾಲೆ ನವೀಕರಣ ಸಂಪುಟ ಒಪ್ಪಿಗೆ ನೀಡಿದೆ. 72 ಕಿಲೋಮೀಟರ್ ನಾಲೆ ನವೀಕರಣಕ್ಕೆ ಒಪ್ಪಿಗೆ ನೀಡಿದ್ದು, ಸುಮಾರು 422 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ ಎಂದರು.

    ಮೋಡ ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಕೆಲವು ಅನುಮತಿ ನೀಡಬೇಕಾಗಿದೆ. ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಮೋಡ ಬಿತ್ತನೆ ಪ್ರಾರಂಭ ಮಾಡುತ್ತೇವೆ. ಜುಲೈ ಎರಡನೇ ವಾರದಲ್ಲಿ ಮೋಡ ಬಿತ್ತನೆ ಮಾಡುವ ಗುರಿ ಇದೆ ಎಂದು ಮಾಹಿತಿ ನೀಡಿದರು.

    ಬೆಂಗಳೂರು-ಹುಬ್ಬಳ್ಳಿ ಬದಲಾಗಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ವಾಯು ನೆಲೆ ಕೇಂದ್ರ ಇರುವುದರಿಂದ ಅನುಮತಿಯ ಸಮಸ್ಯೆ ಇದೆ. ಹೀಗಾಗಿ ಬೆಂಗಳೂರು ಬಿಟ್ಟು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

    ಮೀಸಲಾತಿ ಹೆಚ್ಚಿಸುವ ಕುರಿತು ಸಂಪುಟದಲ್ಲಿ ಚರ್ಚೆ ಆಯಿತು. ಮೀಸಲಾತಿ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗಿರುವ ಮೀಸಲಾತಿ ಹೇಗೆ ಬದಲಾವಣೆ ಮಾಡಬಹುದು ಎನ್ನುವ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿಗಳು ವರದಿ ನೀಡಿದ ಬಳಿಕ ಕಮಿಟಿ ಮಾಡುವ ಕುರಿತು ತೀರ್ಮಾನ ಮಾಡಲಾಗುತ್ತದೆ. ಮುಂದಿನ ಕ್ಯಾಬಿನೆಟ್ ಕಮಿಟಿನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

  • ಮುಂಗಾರು ಕೈಕೊಡುವ ಮುನ್ಸೂಚನೆ – 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

    ಮುಂಗಾರು ಕೈಕೊಡುವ ಮುನ್ಸೂಚನೆ – 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

    ಬೆಂಗಳೂರು: ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ದೊರೆತಿರುವ ಹಿನ್ನಲೆಯಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮೋಡ ಬಿತ್ತನೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಾರಿ ಎರಡು ವರ್ಷದ ಅವಧಿಗೆ ಟೆಂಡರ್ ಕರೆಯಲು ತೀರ್ಮಾನ ಮಾಡಿದ್ದು, ಜೂನ್ ಕೊನೆ ವಾರದಲ್ಲಿ ಈ ಬಾರಿ ಮೋಡ ಬಿತ್ತನೆ ನಡೆಯಲಿದ್ದು, ಸುಮಾರು 88 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ನಿರ್ಧಾರ ಮಾಡಿದ್ದೇವೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ ತಿಳಿಸಿದರು.

    ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲಿದ್ದು, ಹುಬ್ಬಳಿ ಮತ್ತು ಬೆಂಗಳೂರಿನಲ್ಲಿ ಎರಡು ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಎರಡು ವಿಮಾನದಲ್ಲಿ ಈ ಬಾರಿ ಮೋಡ ಬಿತ್ತನೆ ಮಾಡಲಾಗುತ್ತದೆ. ತಜ್ಞರ ಸಮಿತಿ ಕೂಡಾ ಮೋಡ ಬಿತ್ತನೆ ಅವಶ್ಯಕತೆ ಇದೆ ಎಂದು ತಿಳಿಸಿದೆ. ಹೀಗಾಗಿ ಮೋಡ ಬಿತ್ತನೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಬರ ಪರಿಹಾರ ಕ್ರಮವಾಗಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಇಷ್ಟು ದಿನ ಚುನಾವಣಾ ನೀತಿ ಸಂಹಿತೆ ಜಾರಿದ್ದ ಪರಿಣಾಮ ಸಭೆಗೆ ಅನುಮತಿ ಇರಲಿಲ್ಲ. ಇಂದು ಆಯೋಗದಿಂದ ಅನುಮತಿ ಪಡೆದು ಸಭೆ ನಡೆಸುತ್ತಿದ್ದೆವೆ. ಈಗಾಗಲೇ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ಎಲ್ಲಾ ತಾಲೂಕು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಸಂದಾಯ ಮಾಡಿದ್ದು, ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ನಲ್ಲಿ ನೀರು ಕೊಡಿ ಎಂದು ಹೇಳಿದ್ದೇವೆ. ಈಗಾಗಲೇ ಬಾಡಿಗೆಗೆ ಬೋರ್ ವೇಲ್‍ಗಳ ನೀಡು ಪಡೆದು ಪೂರೈಕೆ ಮಾಡುತ್ತಿದ್ದೇವೆ. ಜಾನುವಾರುಗಳ ಮೇವಿನ ಬಗ್ಗೆ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದ್ದೇವೆ ಎಂದರು.

    ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 200 ಕೋಟಿ ರೂ.ಗಳನ್ನು ಟಾಸ್ಕ್ ಫೋರ್ಸ್ ಗೆ ಬಿಡುಗಡೆ ಮಾಡಿದ್ದೇವೆ. ಹಣ ಖರ್ಚಾದರೆ ಎಷ್ಟು ಹಣ ಬೇಕಾದರೂ ಕೊಡಲು ಸರ್ಕಾರ ಸಿದ್ಧವಾಗಿದೆ. 24 ಗಂಟೆಯೊಳಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಇಲಾಖೆ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಬಹುದು ಎಂದರು.

  • ವಿಧಿಯಾಟದಂತೆ ಕೃಷ್ಣಭೈರೇಗೌಡ ಸ್ಪರ್ಧೆ ಮಾಡಬೇಕಾಯ್ತು: ಜಿ.ಪರಮೇಶ್ವರ್

    ವಿಧಿಯಾಟದಂತೆ ಕೃಷ್ಣಭೈರೇಗೌಡ ಸ್ಪರ್ಧೆ ಮಾಡಬೇಕಾಯ್ತು: ಜಿ.ಪರಮೇಶ್ವರ್

    – ಪ್ರಧಾನಿ ಮೋದಿ ಮುಸ್ಲಿಮರಿಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ
    – ಈ ಲೋಕಸಭೆ ಚುನಾವಣೆಗೆ ಮಾತ್ರ ಮೈತ್ರಿ: ಜವರಾಯೇಗೌಡ

    ಬೆಂಗಳೂರು: ಸಚಿವ ಕೃಷ್ಣಭೈರೇಗೌಡ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಡುವ ಆಸೆ ಇರಲಿಲ್ಲ. ವಿಧಿಯಾಟದಂತೆ ಅವರು ಸ್ಪರ್ಧೆ ಮಾಡಬೇಕಾಯಿತು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ನಗರದ ಹೇರೋಹಳ್ಳಿಯಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ಸ್ಪರ್ಧೆ ಮಾಡಬೇಕು ಅಂತ ಎಲ್ಲರೂ ಬಯಸಿದ್ದರು. ಆದರೆ ಅವರು ತುಮಕೂರಿಗೆ ಹೋಗಲು ಮನಸ್ಸು ಮಾಡಿದರು. ನಾನು ಮತ್ತು ಸಂಸದ ಮುದ್ದಹನುಮೇಗೌಡ ನೀವು ತುಮಕೂರಿನಲ್ಲಿ ಸ್ಪರ್ಧೆ ಮಾಡಿ. ಇಲ್ಲ ಅಂದ್ರೆ ನಮಗೆ ಬಿಟ್ಟುಕೊಡಿ ಅಂತ ಕೇಳಿದ್ದೇವು. ಇದರಿಂದಾಗಿ ಎಚ್.ಡಿ.ದೇವೇಗೌಡರು ತುಮಕೂರು ಆಯ್ಕೆ ಮಾಡಿಕೊಂಡು ಬೆಂಗಳೂರು ನಮಗೆ ಬಿಟ್ಟುಕೊಟ್ಟರು. ನಾವೇ ಅವರನ್ನ ತುಮಕೂರಿಗೆ ಕರೆದುಕೊಂಡು ಹೋದೆವು ಎಂದು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಅನೇಕ ಅಭಿವೃದ್ಧಿ ಕೆಲಸ ಮಾಡಿತ್ತು. ಆದರೆ ಚುನಾವಣೆಯಲ್ಲಿ ನಮ್ಮ ಕೆಲಸ ಜನರಿಗೆ ತಲುಪಿಲ್ಲ. ಹೀಗಾಗಿ ಮತದಾರರು ಯಾವ ಪಕ್ಷಕ್ಕೂ ಬಹುಮತ ಜನ ನೀಡಿಲ್ಲ. ಬಿಜೆಪಿಗೆ ಅಧಿಕಾರ ಕೊಡಬಾರದು ಅಂತ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ವಿ. ಜೆಡಿಎಸ್-ಕಾಂಗ್ರೆಸ್ ಸಿದ್ಧಾಂತ, ಬದ್ಧತೆಯಲ್ಲಿ ಒಂದೇ ಆಗಿವೆ. ಹೀಗಾಗಿ ನಾವು ಒಂದಾಗಿದ್ದೇವೆ. ನಾವು ಒಟ್ಟಿಗೆ ಹೋಗುವುದನ್ನು ಕಂಡು ಅನೇಕರು ಟೀಕೆ ಮಾಡಿದರು ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ದೇಶದ ಪರಿಸ್ಥಿತಿ ಹೇಗಿದೆ ಅಂತ ಜನರಿಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಭರವಸೆ ಕೊಟ್ಟಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಅಂತ ಪ್ರಧಾನಿ ಮೋದಿ ಹೇಳಿದ್ದರು. ಕೋಟ್ಯಂತರ ಯುವಕರು ಮೋದಿ ಅವರನ್ನು ನಂಬಿ ಮತ ಹಾಕಿದರು. ದೇಶದ ಜನರ ಮುಂದೆ ಮೋದಿ ಅವರ ರಿಪೋರ್ಟ್ ಕಾರ್ಡ್ ಇದೆ. ಈ ಬಾರಿ ಮತದಾರರು ಸೂಕ್ತ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

    ರೈತರ ಸಾಲಮನ್ನಾ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಕೇಳಿಕೊಂಡಿದ್ದೇವು. ಆದರೆ ಅವರು ಒಪ್ಪಲಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಈಗಾಗಲೇ 11 ಲಕ್ಷ ರೈತರಿಗೆ ಋಣಮುಕ್ತ ಪತ್ರ ನಾವು ನೀಡಿದ್ದೇವೆ. ನೀವು ಯಾಕೆ ಸಾಲಮನ್ನಾ ಮಾಡಿಲ್ಲ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದರು.

    ಪ್ರಧಾನಿ ಮೋದಿ ಅವರು ಜಿಎಸ್‍ಟಿ ಮೂಲಕ ಮಜ್ಜಿಗೆಗೂ ಟ್ಯಾಕ್ಸ್ ಹಾಕಿದ್ದಾರೆ. ಅನೇಕ ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕಡಿಮೆ ಆಗಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ಇದರಿಂದ ಸಿಕ್ಕ ಉಳಿತಾಯದ ಹಣ ಎಲ್ಲಿ ಹೋಯಿತು ಅಂತ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

    ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ. ಅವರೇ ರಫೇಲ್‍ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಅವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಅವರು ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಮುಸ್ಲಿಮರನ್ನು ಕೊಲೆ ಮಾಡಿದರು. ಪ್ರಧಾನಿಯಾದ ಮೇಲೆ ಮುಸ್ಲಿಮರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರು ಸಂವಿಧಾನ ಬದಲಾವಣೆ ಮಾಡಬೇಕು ಅಂತ ಹೇಳುತ್ತಾರೆ. ಇದರ ಬಗ್ಗೆ ಬಿಜೆಪಿಯವರು ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿಯವರು ದೇಶವನ್ನು ಶಾಂತಿಯುತವಾಗಿರಲು ಬಿಡುವುದಿಲ್ಲ ಎಂದು ದೂರಿದರು.

    ಈಗ ಮತ ಹಾಕಿದರೆ ಮುಂದೆ ಹೇಗೆ ಎನ್ನುವ ಭಯ ಬೇಡ. ಈ ಲೋಕಸಭೆ ಚುನಾವಣೆಗೆ ಮಾತ್ರ ಜೆಡಿಎಸ್ ಜೊತಗೆ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಆತಂಕ ಇಲ್ಲದೆ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಅವರಿಗೆ ಮತ ಹಾಕಿ. ಕಾರ್ಪೋರೇಷನ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹೇಗೆ ಎನ್ನುವ ಅನುಮಾನ ಬೇಡ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಜವರಾಯೇಗೌಡ ಹೇಳಿದರು.