Tag: ಸಚಿವ ಕೃಷ್ಣಬೈರೇಗೌಡ

  • ರಾಜ್ಯಪಾಲರಿಗೆ ಆದೇಶ ನೀಡೋ ಅಧಿಕಾರ ಇದೆಯೋ – ಕೃಷ್ಣಬೈರೇಗೌಡ Vs ಮಾಧುಸ್ವಾಮಿ

    ರಾಜ್ಯಪಾಲರಿಗೆ ಆದೇಶ ನೀಡೋ ಅಧಿಕಾರ ಇದೆಯೋ – ಕೃಷ್ಣಬೈರೇಗೌಡ Vs ಮಾಧುಸ್ವಾಮಿ

    ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ಬಹುಮತ ಸಾಬೀತು ಪಡಿಸಬೇಕೆಂದು ಸಿಎಂಗೆ ರಾಜ್ಯಪಾಲ ವಿ.ಆರ್.ವಾಲಾ ನೀಡಿರುವ ಆದೇಶದ ಬಗ್ಗೆ ವಿಧಾನ ಸಭೆಯಲ್ಲಿ ಬಹಳ ಗಂಭೀರ ಚರ್ಚೆ ನಡೆಯಿತು.

    ಸಚಿವ ಕೃಷ್ಣಬೈರೇಗೌಡರು ವಿಶ್ವಾಸ ಮತಯಾಚನೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಸಿಎಂ ಅವರಿಗೆ ರಾಜ್ಯಪಾಲರು ಆದೇಶ ನೀಡಲು ಬರುವುದಿಲ್ಲ ಎಂದು ವಾದಿಸಿದರೆ ಬಿಜೆಪಿಯ ಮಾಧುಸ್ವಾಮಿಯವರು ರಾಜ್ಯಪಾಲರಿಗೆ ಆದೇಶ ನೀಡಲು ಬರುತ್ತದೆ ಎಂದು ಹೇಳಿದರು.

    ಆರಂಭದಲ್ಲಿ ಕೃಷ್ಣಬೈರೇಗೌಡರು ಈ ವಿಚಾರವನ್ನು ಪ್ರಸ್ತಾಪಿಸಿ, ಎಸ್.ಆರ್.ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ವಜಾಗೊಳಿಸುವ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ರಾಜ್ಯಪಾಲರು ಆಡಳಿತ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸೂಚನೆ ನೀಡಬಹುದು. ಜೊತಗೆ ಅದಕ್ಕೆ ಒಂದು ವಾರ ಕಾಲ ನಿಗದಿ ಮಾಡಬಹುದು ಎಂದು ಆದೇಶ ನೀಡಲಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಬೇರೆ ಇದೆ ಎಂದು ತಿಳಿಸಿದರು.

    ವಿಶ್ವಾಸಮತ ನಿರ್ಣಯವನ್ನು ಸ್ವತಃ ಸಭಾ ನಾಯಕ (ಸಿಎಂ) ಮಂಡಿಸುವುದಾಗಿ ಸದನಕ್ಕೆ ತಿಳಿಸಿದ್ದಾರೆ. ಸಿಎಂ ಅವರೇ ಹೇಳಿರುವಾಗ ಆದೇಶವನ್ನು ಹೇಗೆ ನೀಡುತ್ತಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಲಾಗುತ್ತಿದೆ. ಅದನ್ನು ನಡೆಸುವವರು ಸ್ಪೀಕರ್ ಸ್ಥಾನದಲ್ಲಿರುವ ನೀವು ಎಂದು ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡರು.

    ನಮ್ಮ ಸಂವಿಧಾನದಲ್ಲಿ ಯಾರಿಗೂ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ಅಧಿಕಾರವನ್ನು ಕೊಟ್ಟಿಲ್ಲ. ಸಿಎಂ, ಸ್ಪೀಕರ್, ರಾಜ್ಯಪಾಲರು, ನ್ಯಾಯಾಧೀಶರು ಯಾರಿಗೂ ಸರ್ವಾಧಿಕಾರವಿಲ್ಲ. ವಿಶ್ವಾಸಮತ ನಿರ್ಣಯ ಸದನದ ಸ್ವತ್ತು ಹಾಗೂ ನೀವು ಇದನ್ನು ನಡೆಸುತ್ತಿರುವಾಗ ರಾಜ್ಯಪಾಲ ಪ್ರವೇಶ ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಅಧಿಕಾರ ಹಪಹಪಿಗಾಗಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಪಾಲ ವ್ಯಾಪ್ತಿಯನ್ನು ಸಂವಿಧಾನಿಕ ಪೀಠ ತಿಳಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಓದಿ ಹೇಳಬೇಕೇ? ಇಂದಿನ ಪರಿಸ್ಥಿತಿ ನೋಡಿದರೆ ಇದು ಪ್ರಜಾಪ್ರಭುತ್ವವೇ ಎನ್ನುವ ಅನುಮಾನ ಜನರಲ್ಲಿ ಮೂಡುತ್ತಿದೆ ಎಂದು ಕಿಡಿಕಾರಿದರು. ಈ ವೇಳೆ ನಾಗಲ್ಯಾಂಡ್ ಸರ್ಕಾರಕ್ಕೆ ರಾಜ್ಯಪಾಲರು ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಓದಿ ತಮ್ಮ ವಾದವನ್ನು ಸಮರ್ಥಿಸಿಕೊಂಡರು.

    2018ರಲ್ಲಿ ಯಡಿಯೂರಪ್ಪನವರಿಗೆ 15 ದಿನಗಳ ಕಾಲ ಬಹುಮತ ಸಾಬೀತು ಪಡಿಸಲು ಅವಕಾಶವನ್ನು ರಾಜ್ಯಪಾಲರು ನೀಡುತ್ತಾರೆ. ಆದರೆ ಇಲ್ಲಿ ಈಗ 15 ಗಂಟೆಗಳ ಕಾಲ ಅವಕಾಶವನ್ನು ನೀಡುತ್ತಾರೆ. ಇದರಲ್ಲೇ ರಾಜ್ಯಪಾಲರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಈ ವೇಳೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧವೇ ಘೋಷಣೆ ಕೂಗಿದರು.

    ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ಮಧ್ಯಪ್ರವೇಶ ಮಾಡುತ್ತಿದ್ದಂತೆ ಗುಡುಗಿದ ಸಚಿವರು, ನೀವು 3 ಕೋಟಿ ರೂ. ನೀಡಿ ಶಾಸಕರನ್ನು ಖರೀದಿ ಮಾಡುತ್ತೀರಿ. ಇರುವ ವಿಚಾರವನ್ನು ಹೇಳಲು ನಾನೇಕೆ ಹಿಂಜರಿಯಬೇಕು. ನಾನು ಅಂತಹ ಅನ್ಯಾಯದ ಕೆಲಸ ಮಾಡಿಲ್ಲ. ನೀವು ನನಗೆ ಪಾಠ ಹೇಳಬೇಡಿ ಎಂದು ಹೇಳಿದರು.

    ನಮಗೆ ಮಾತಾನಾಡಲು ಅನುಮತಿಯ ಜೊತೆಗೆ ರಕ್ಷಣೆಯೂ ಕೊಡಿ. ರಾಜ್ಯಪಾಲರು ಬಹುಮತ ಸಾಬೀತು ಮಾಡಿ ಅಂತ ಹೇಳುವುದು ಹೇಗೆ ತಪ್ಪಾಗುತ್ತೆ ಎಂದು ಮಾಧುಸ್ವಾಮಿ ಮಾತನಾಡುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಗದ್ದಲ ಎಬ್ಬಿಸಿದರು. ಈ ವೇಳೆ ಸ್ಪೀಕರ್ ಮಧ್ಯಪ್ರವೇಶಿಸಿ ಸಿಎಂ ಮತ್ತು ಕೃಷ್ಣಬೈರೇಗೌಡರು ಮಾತನಾಡುವಾಗ ವಿರೋಧ ಪಕ್ಷದ ಸದಸ್ಯರು ಅಡ್ಡಿ ಪಡಿಸಲಿಲ್ಲ. ಹೀಗಾಗಿ ನೀವು ಅಡ್ಡಿಪಡಿಸುವುದು ಸರಿಯಲ್ಲ ಎಂದು ಮನವಿ ಮಾಡಿಕೊಂಡರು.

    ಮಾತು ಮುಂದುವರಿಸಿದ ಮಾಧುಸ್ವಾಮಿ ಅವರು, ಸರ್ಕಾರದ ಮೇಲೆ ಅನುಮಾನ ಬಂದರೆ ಬಹುಮತ ಸಾಬೀತು ಪಡೆಸುವಂತೆ ಕೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇದು ಸಂವಿಧಾನಾತ್ಮಕ ಹಕ್ಕು. ಸರ್ಕಾರವನ್ನು ರಾಜ್ಯಪಾಲರು ಬಹುಮತ ಸಾಬೀತು ಮಾಡುವಂತೆ ಕೇಳುವುದು ತಪ್ಪು ಅಂತ ಎಲ್ಲಿಯೂ ವ್ಯಾಖ್ಯಾನ ಮಾಡಿಲ್ಲ ಎಂದರು.

    ನಾವು ಯಾರೂ ನಿಮಗೆ ಅಡಚಣೆ ಮಾಡಿಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಪತ್ರದ ಬರೆದು, ನನಗೆ ಇಂತಹ ಕಾರಣಗಳಿಂದ ಬಹುಮತದ ಮೇಲೆ ಅನುಮಾನ ಬಂದಿದೆ. ನೀವು ಬಹುಮತ ಸಾಬೀತು ಮಾಡಿ ಎಂದು ಆದೇಶ ನೀಡಿದ್ದಾರೆ. ಸಂವಿಧಾನದತ್ತವಾಗಿ ಅವರಿಗೆ ಆದೇಶ ನೀಡುವ ಅಧಿಕಾರವಿದೆ. ಈಗ ಅಧಿವೇಶ ನಡೆಯುತ್ತಿರುವ ಕಾರಣದಿಂದಾಗಿ ರಾಜ್ಯಪಾಲರು ಹೀಗೆ ನಿರ್ದೇಶನ ನೀಡಿದ್ದಾರೆ. ಗುರುವಾರ ನಡೆದ ಅಧಿವೇಶನವನನು ರಾಜ್ಯಪಾಲರು ನೋಡಿದ್ದಾರೆ ಎಂದು ತಿಳಿಸಿದರು.

    ರಾಜ್ಯಪಾಲರ ಆದೇಶವನ್ನು ಪಾಲಿಸುವವರೆಗೂ ನಾವು ಇಲ್ಲಿಯೇ ಇರುತ್ತೇವೆ. ಬಿಜೆಪಿ ಎಲ್ಲ ಸದಸ್ಯರು ಇದಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು.

  • ನನ್ನ ಮಾತಿನಿಂದ ಕೃಷ್ಣಬೈರೇಗೌಡ ಸ್ಪರ್ಧೆಗೆ ಒಪ್ಪಿದ್ರು: ಜಮೀರ್ ಅಹ್ಮದ್

    ನನ್ನ ಮಾತಿನಿಂದ ಕೃಷ್ಣಬೈರೇಗೌಡ ಸ್ಪರ್ಧೆಗೆ ಒಪ್ಪಿದ್ರು: ಜಮೀರ್ ಅಹ್ಮದ್

    – ಯಾರು ಏನೇ ಹೇಳಲಿ, ಸಿದ್ದರಾಮಯ್ಯನವರೇ ನಮ್ಮ ಸಿಎಂ: ಶ್ರೀನಿವಾಸಮೂರ್ತಿ

    ಬೆಂಗಳೂರು: ನನ್ನ ಮಾತಿನಿಂದಾಗಿ ಸಚಿವ ಕೃಷ್ಣಬೈರೇಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತರು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಮೈತ್ರಿ ನಾಯಕರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕೃಷ್ಣಬೈರೇಗೌಡರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಇಷ್ಟ ಇರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಕೃಷ್ಣಬೈರೇಗೌಡರ ಮೇಲೆ ಒತ್ತಡ ಹಾಕಿದರು. ಆಗ ಅವರು ನೇರವಾಗಿ ನನ್ನ ಬಳಿ ಬಂದು, ಸಿದ್ದರಾಮಯ್ಯ ಅವರು ಒತ್ತಡ ಹಾಕುತ್ತಿದ್ದಾರೆ ಏನ್ ಮಾಡಲಿ ಅಂತ ನನ್ನ ಕೇಳಿದರು. ಸ್ಪರ್ಧೆ ಮಾಡಿ, ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಅಂತ ಅವರಿಗೆ ಧೈರ್ಯ ತುಂಬಿದೆ. ನನ್ನ ಮಾತಿನಿಂದ ಕೃಷ್ಣಬೈರೇಗೌಡರು ಸ್ಪರ್ಧೆಗೆ ಒಪ್ಪಿದರು ಎಂದು ತಿಳಿಸಿದರು.

    ಪಕ್ಷದ ನಾಯಕರಿಂದ ಒತ್ತಡ ಬಂದಾಗ ಕೃಷ್ಣಬೈರೇಗೌಡರು ಮನೆಗೆ ಹೋಗಿ, ಸ್ಪರ್ಧೆಯ ಬಗ್ಗೆ ಮನೆಯವರ ಅಭಿಪ್ರಾಯ ಕೇಳಲಿಲ್ಲ. ನೇರವಾಗಿ ನನ್ನ ಬಳಿ ಬಂದು ಕೇಳಿದ್ದರು. ಹೀಗಾಗಿ ನಾವೆಲ್ಲರೂ ಸೇರಿ ಕೃಷ್ಣಬೈರೇಗೌಡ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.

    ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಲ್ಲಿಯವರಲ್ಲ. ಅವರು ಮಂಗಳೂರಿನವರು. ಕೇಂದ್ರ ಸಚಿವರು ಮುಸ್ಲಿಮರಿಗೂ ಕೆಲಸ ಮಾಡಿದ್ದೇನೆ ಅಂತ ಹೇಳುತ್ತಾರೆ. ಆದರೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮುಸ್ಲಿಮರಿಗೆ ನಾವು ಟಿಕೆಟ್ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇದು ಬಿಜೆಪಿಯವರ ಧೋರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ ಅಚ್ಛೇ ದಿನ್ ಬರಲಿಲ್ಲ. ನಮಗೆ ಕಾಮ್ ಕಿ ಬಾತ್ ಬೇಕು, ಮನ್ ಕಿ ಬಾತ್ ಬೇಡ. ದೇಶದಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ಒಡಕು ತರುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಬಿಜೆಪಿಯವರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ನಾನು ಸಚಿವನಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ನಾಯಕರು ನನಗೆ ಸಚಿವನಾಗುವ ಅವಕಾಶ ಕೊಟ್ಟರು. ಇದು ಕಾಂಗ್ರೆಸ್ ನಿಲುವು. ಎಲ್ಲರ ಏಳಿಗೆಗಾಗಿ ಕಾಂಗ್ರೆಸ್ ದುಡಿಯುತ್ತಿದೆ ಎಂದರು.

    ಸಮಾವೇಶದ ಸ್ವಾಗತ ಭಾಷಣ ವೇಳೆ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು, ಯಾರು ಏನೇ ಹೇಳಲಿ, ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂದು ಹೇಳಿದರು. ಸಮಾವೇಶದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕೃಷ್ಣಬೈರೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಬೈರತಿ ಬಸವರಾಜು, ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಭಾಗವಹಿಸಿದ್ದರು.

  • ಸಚಿವ ಕೃಷ್ಣ ಬೈರೇಗೌಡ ವಿರುದ್ಧ ನಗರಸಭಾ ಅಧ್ಯಕ್ಷ ಗರಂ!

    ಸಚಿವ ಕೃಷ್ಣ ಬೈರೇಗೌಡ ವಿರುದ್ಧ ನಗರಸಭಾ ಅಧ್ಯಕ್ಷ ಗರಂ!

    -ನಾನ್ ನಿಮ್ಮಪ್ಪನ ಕಾಲದಿಂದಲೂ ಕೆಲಸ ಮಾಡಿರೋದು – ನರಗಸಭೆ ಅಧ್ಯಕ್ಷ ಕಿಡಿ

    ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಮುಖಂಡ, ನಗರಭೆ ಅಧ್ಯಕ್ಷ ಪ್ರಭುದೇವ್ ಹಾಗೂ ಸಚಿವ ಕೃಷ್ಣಬೈರೇಗೌಡ ನಡುವೆ ಜಟಾಪಟಿ ನಡೆಯಿತು.

    ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರು ಮರಳುತ್ತಿದ್ದಾಗ ಗದ್ದಲವಾಗಿದೆ. ಈ ವೇಳೆ ಸಚಿವರನ್ನು ಫ್ರಭುದೇವ್ ಅವರು ತಳ್ಳಿದ್ದಾರೆ. ಇದರಿಂದ ಕೋಪಕೊಂಡ ಸಚಿವರು ಕಣ್ಣು ಮಿಟುಕಿಸದೇ ಸಿಟ್ಟಿನಿಂದ ನೋಡಿದ್ದಾರೆ.

    ಸಚಿವರ ನಡೆಯಿಂದ ಬೇಸಗೊಂಡ ಪ್ರಭುವರು ಹಿಂದಿನಿಂದ ಯಾರೋ ದೂಡಿದರು, ಹೀಗಾಗಿ ನಿಮ್ಮನ್ನ ತಳ್ಳಿದೆ ಎಂದು ತಿಳಿಸಿದ್ದಾರೆ. ಏಯ್ ನಡೆಯಯ್ಯ ಎಂದು ಸಚಿವರು ಏಕವಚನದಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ನಗರಸಭೆ ಅಧ್ಯಕ್ಷ, ನಾನ್ ನಿಮ್ಮಪ್ಪನ ಕಾಲದಿಂದಲೂ ಕೆಲಸ ಮಾಡಿರೋದು ಎಂದು ಕಿಡಿಕಾರಿದರು.

    ಇಬ್ಬರು ನಾಯಕರು ಸಮಾಧಾನ ಪಡಿಸಲು ಪೊಲೀಸರು ಹಾಗೂ ಸ್ಥಳದಲ್ಲಿ ಸೇರಿದ್ದ ಅನೇಕರು ಹರಸಾಹಸ ಪಡಬೇಕಾಯಿತು. ಸಚಿವರ ತೆರಳಿದ ಮೇಲೂ ಪ್ರಭುದೇವ್ ಅಸಮಾಧಾನ ಹೊರಹಾಕಿದರು. ಪ್ರಭುದೇವ್ ಅವರು ನಗರ ಸಭೆ ಅಧ್ಯಕ್ಷರಷ್ಟೇ ಅಲ್ಲದೆ ಕನ್ನಡ ಪರ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಸಿ ವ್ಯಾಲಿ ಯೋಜನೆಯ 2ನೇ ಹಂತಕ್ಕೆ ಚಾಲನೆ – ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ಮಾತು

    ಕೆಸಿ ವ್ಯಾಲಿ ಯೋಜನೆಯ 2ನೇ ಹಂತಕ್ಕೆ ಚಾಲನೆ – ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ಮಾತು

    ಕೋಲಾರ: ಬಯಲು ಸೀಮೆ ಜಿಲ್ಲೆಯಾದ ಕೋಲಾರದ 126 ಕೆರೆಗಳಿಗೆ ಕೋರಮಂಗಲ – ಚಲ್ಲಘಟ್ಟ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯ 2ನೇ ಹಂತಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಈ ವೇಳೆ ಯೋಜನೆ ವಿರೋಧಿಸಿ ಕಣ್ಣೀರು ತರಿಸಿ, ನಮ್ಮ ಬದುಕಿಗೆ ಬೆಂಕಿ ಹಾಕಿ ಗೋಳಾಡಿಸಿದವರಿಗೆ ದೇವರ ಒಳ್ಳೆಯದರು ಮಾಡಲಿ ಎಂದು ವಿಧಾನ ಸಭಾ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸುಮಾರು 1,400 ಕೋಟಿ ರೂಪಾಯಿ ವೆಚ್ಚದ ಕೋಲಾರ ಜಿಲ್ಲೆಯ 136 ಕೆರೆಗಳನ್ನು ತುಂಬಿಸುವ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಸಂಸ್ಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಸದ್ಯ ಹಲವು ಅಡೆತಡೆಗಳ ಮಧ್ಯೆ 2ನೇ ಹಂತಕ್ಕೆ ಚಾಲನೆ ನೀಡುವ ಮೂಲಕ ಜಿಲ್ಲೆಯ ಕೆರೆಗಳಿಗೆ ಹರಿಸಿದೆ.

    ಬೆಳ್ಳಂದೂರು ಕೆರೆಯಿಂದ ಪೈಪ್ ಲೈನ್ ಮೂಲಕ ಲಕ್ಷ್ಮೀಸಾಗರ, ನರಸಾಪುರ ಕೆರೆಗೆ ಸದ್ಯ 140 ಎಂಎಲ್‍ಡಿ ನೀರು ಹರಿಸಲಾಗುತಿದೆ. ಕೆರೆಗೆ ಹರಿದು ಬಂದಿರುವ ಕೆ.ಸಿ.ವ್ಯಾಲಿ ನೀರನ್ನು ಇಲ್ಲಿಂದ ಜಿಲ್ಲೆಯ ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಮುಳಬಾಗಲು ತಾಲೂಕಿನ ಕೆರೆಗಳಿಗೆ ಪಂಪ್ ಮಾಡುವ ಮಾಡುವ 2ನೇ ಹಂತದ ಯೋಜನೆಗೆ ಇಂದು ಚಾಲನೆ ನೀಡಲಾಯಿತು.

    ಗೊಂದಲ ಗೂಡದ ಕಾರ್ಯಕ್ರಮ: ಯೋಜನೆಗೆ ಮೊದಲಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಕಂಟಕಗಳು ಎದುರಾಗುತ್ತಿದ್ದವು. ಇಂದಿನ ಕಾರ್ಯಕ್ರಮವೂ ಕಾಂಗ್ರೆಸ್ ಪಕ್ಷದ ಒಳಗಿನ ಗುಂಪುಗಾರಿಕೆಯಿಂದ ನಗೆ ಪಾಟಲಿಗೀಡಾಗಿತ್ತು. ಮೊದಲಿಗೆ ಯೋಜನೆಗೆ ಸಹಕರಿಸಿದ ಸಚಿವರು, ಸ್ಪೀಕರ್ ಹೆಸರಿನ ಸ್ವಾಗತ ಬ್ಯಾನರ್ ಅಳವಡಿಸಲಾಗಿತ್ತು. ಗಮನಿಸಿದ ಕೋಲಾರ ಸಂಸದ ಮುನಿಯಪ್ಪ ಬೆಂಬಲಿಗರು ಸಂಸದರ ಹೆಸರು ಕೈ ಬಿಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಆದರೆ ಈ ವೇಳೆ ಬ್ಯಾನರ್ ತೆರವು ಮಾಡಿ ಅಸಮಾಧಾನಕ್ಕೆ ತೆರೆ ಎಳೆಯಲಾಯಿತು. ಆದರೆ ಕಾರ್ಯಕ್ರಮಕ್ಕೆ ಆಹ್ವಾನವೇ ನೀಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಸ್ಥಳದಲ್ಲಿ ಹೈಡ್ರಾಮಾ ಸೃಷ್ಠಿ ಮಾಡಿದರು.

    ಕಾರ್ಯಕ್ರಮದ ವೇದಿಕೆ ಸ್ಥಳದಲ್ಲೇ ಜಿಲ್ಲಾಡಳಿತದ ವಿರುದ್ಧ ಸದಸ್ಯರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವರು, ಸಂಸದ ಸದಸ್ಯರ ಮನವೊಲಿಸಿ ವೇದಿಕೆಗೆ ಕರೆತಂದರು. ಬಳಿಕ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಪ್ರತಿಭಟನಾಕಾರರು, ಯೋಜನೆಗೆ ವಿರೋಧಿಸಿದವರನ್ನ ಒಳಗೊಂಡಂತೆ ಯೋಜನೆಗೆ ಯಾರೆಲ್ಲ ಅಡಚಣೆ, ತೊಂದರೆಗಳನ್ನು ನೀಡಿದರೋ ಅವರ ಪಾದಗಳಿಗೆ ನಮಸ್ಕಾರ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿ.ಕೆ.ಶಿವಕುಮಾರ್ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ: ಸಚಿವ ಕೃಷ್ಣಬೈರೇಗೌಡ

    ಡಿ.ಕೆ.ಶಿವಕುಮಾರ್ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ: ಸಚಿವ ಕೃಷ್ಣಬೈರೇಗೌಡ

    ಬಾಗಲಕೋಟೆ: ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಚರ್ಚಿಸಲು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

    ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಇಂದು ನಗರಕ್ಕೆ ಆಗಮಿಸಿ ಮಾತನಾಡಿದ ಸಚಿವರು, ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದ ಜಿಲ್ಲೆಯ ಜನಪ್ರತಿನಿಧಿ. ಹೀಗಾಗಿ ನೀರಾವರಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಮಾಡಲಾಗು ಡಿ.ಕೆ.ಶಿವಕುಮಾರ್ ಅವರನ್ನು ಭೇಡಿ ಮಾಡಿದ್ದಾರೆ. ಏನೋ ಆಗೋದಿದ್ದರೆ ಆಗುತ್ತದೆ. ಅಂತಹ ವಿಶೇಷತೆ ಏನು ನಡೆದಿಲ್ಲ ಎಂದು ನಗುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ಆಪರೇಷನ್ ಕಮಲದ ವಿಚಾರವಾಗಿ ಮಾತನಾಡಿ ಸಚಿವರು, ಬಿಜೆಪಿ-ಮಾಧ್ಯಮಗಳು ಆಪರೇಷನ್ ಕಮಲವನ್ನು ಆಕಾಶದ ಮಟ್ಟಕ್ಕೆ ಬೆಳಿಸಿದ್ದೀರಿ. ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಕ್ಷಣಗಣನೆ ನಡೆಯುತ್ತಲಿದೆ. ಬಿಜೆಪಿ ಗಂಟೆ, ಈ ದಿನಾಂಕ, ಈ ಘಳಿಗೆ ಸಹಿತ ಗಡುವು ಕೊಡುತ್ತಾ ಬಂದಿವೆ. ಸರ್ಕಾರ ಆರು ತಿಂಗಳು ಪೂರೈಸಿದೆ. ಅದೇ ರೀತಿ ನಮ್ಮ ಕೆಲಸವನ್ನು ಐದು ವರ್ಷ ಮಾಡುತ್ತೇವೆ ಎಂದು ಹೇಳಿದರು.

    ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಪ್ರಯತ್ನ ಮಾಡಬೇಕಿದೆ. ಆಡಳಿತ ಸಹ ಚುರುಕು ಗೊಳಿಸಬೇಕಾಗಿದೆ. ಬರಗಾಲ ಎದುರಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದ ಸಚಿವರು, ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡುವ ಪ್ರಯತ್ನ ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಿದರು.

    ನನ್ನ ಪದ ಬಳಕೆಗೆ ಬೇರೆ ಅರ್ಥವನ್ನು ಮಾಧ್ಯಮಗಳು ಕಲ್ಪಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಸಿಎಂ ಕುಮಾರಸ್ವಾಮಿ ಎರಡು ದಿನಗಳ ಹಿಂದೆ ಎಲ್ಲ ಸಿಇಓ, ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ಜನಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಸೂಚನೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾನು ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಪ್ರವಾಸ ಮಾಡುತ್ತಿರುವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv