Tag: ಸಚಿವ ಎಂಟಿಬಿ ನಾಗರಾಜ್

  • ಸುಧಾಕರ್ ಜೊತೆಗಿನ ಸಂಧಾನ ಯತ್ನ ವಿಫಲ – ಸಿದ್ದರಾಮಯ್ಯ ಮನೆಗೆ ವಾಪಸ್ ಆದ ಎಂಟಿಬಿ

    ಸುಧಾಕರ್ ಜೊತೆಗಿನ ಸಂಧಾನ ಯತ್ನ ವಿಫಲ – ಸಿದ್ದರಾಮಯ್ಯ ಮನೆಗೆ ವಾಪಸ್ ಆದ ಎಂಟಿಬಿ

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಶಾಸಕ ಸುಧಾಕರ್ ಅವರ ಮನವೊಲಿಕೆ ಯತ್ನ ವಿಫಲವಾಗಿದೆ ಎಂಬ ಮಾಹಿತಿ ಲಭಿಸಿದೆ. ಸಚಿವ ಜಮೀರ್ ಅಹಮದ್ ಅವರೊಂದಿಗೆ ತೆರಳಿದ್ದ ಸಚಿವ ಎಂಟಿಬಿ ನಾಗರಾಜ್ ಮತ್ತೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ವಾಪಸ್ ಆಗಿದ್ದಾರೆ.

    ನಿನ್ನೆ ತಡರಾತ್ರಿಯಿಂದ ಆರಂಭವಾಗಿದ್ದ ರೆಬೆಲ್ ಶಾಸಕರ ಸಂಧಾನ ಯತ್ನ ದಿನ ಪೂರ್ತಿ ವಿವಿಧ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಸುಮಾರು 3 ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಎಂಟಿಬಿ ನಾಗರಾಜ್ ಯಾವುದೇ ದೃಢ ನಿರ್ಧಾರಕ್ಕೆ ಬಂದಿರಲಿಲ್ಲ. ಅಲ್ಲದೇ ತಮ್ಮೊಂದಿಗೆ ರಾಜೀನಾಮೆ ನೀಡಿದ್ದ ಡಾ. ಸುಧಾಕರ್ ಅವರ ಮನವೊಲಿಕೆಗೆ ಎಂಟಿಬಿ ನಾಗರಾಜ್ ತೆರಳಿದ್ದರು. ಈ ವೇಳೆ ಅವರಿಗೆ ಜಮೀರ್ ಅಹಮದ್ ಸಾಥ್ ನೀಡಿದ್ದರು.

    ಇಬ್ಬರು ಶಾಸಕರು ಒಂದೇ ಬಾರಿ ರಾಜೀನಾಮೆ ನೀಡಿದ್ದ ಕಾರಣ ಹಾಗೂ ತಮ್ಮ ತೀರ್ಮಾನಕ್ಕೆ ಡಾ. ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸಲೇ ಬೇಕು ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದರು. ಸಿದ್ದರಾಮಯ್ಯ ಅವರ ನಿವಾಸಕ್ಕೆ ಚರ್ಚೆಗೆ ಆಗಮಿಸಲು ಸುಧಾಕರ್ ನಿರಾಕರಿಸಿದ್ದಾರೆ. ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ಸುಧಾಕರ್ ಅವರ ಸಂಪರ್ಕ ಮಾಡಿದ ಸಂದರ್ಭದಲ್ಲಿ ಸ್ಪಷ್ಟ ಸಂದೇಶ ನೀಡಿರುವ ಅವರು, ಯಾವ ಕಾರಣಕ್ಕೂ ಸಂಧಾನಕ್ಕೆ ನಾನು ಬರಲ್ಲ ಹಾಗೂ ರಾಜೀನಾಮೆ ಹಿಂಪಡೆಯುವುದಿಲ್ಲ. ರಾಜೀನಾಮೆ ನೀಡಿದ್ದ ದಿನ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ. ನನ್ನ ದಾರಿಗೆ ನನಗೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸುಧಾಕರ್ ಮನವೊಲಿಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಎಂಟಿಬಿ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಇತ್ತ ಎಂಟಿಬಿ ನಾಗರಾಜ್ ಅವರಿಗೆ ಸ್ಪಷ್ಟ ಸಂದೇಶ ನೀಡಿರುವ ಸುಧಾಕರ್ ಅವರು ಬಳಿಕ ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಬೆಳಗ್ಗೆಯಿಂದಲೂ ಯಾರ ಸಂಪರ್ಕಕ್ಕೂ ಸಿಗದ ಸುಧಾಕರ್ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ ನೇರ ಮುಂಬೈಗೆ ತೆರಳಿದ್ದಾರೆ. ಮೊದಲೇ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದ ಸುಧಾಕರ್ ಅವರ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿದ್ದು ಕೂಡ ಅವರ ಸ್ಪಷ್ಟ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ರಾಜೀನಾಮೆ ನೀಡುವುದಕ್ಕೂ ಮುನ್ನವೇ ಪಕ್ಷ ತೊರೆಯುವ ಬಗ್ಗೆ ಸುಧಾಕರ್ ಸಾಕಷ್ಟು ಚಿಂತನೆ ನಡೆಸಿದ್ದರು.

    ಈಗಾಗಲೇ ಅಸಮಾಧಾನಿತ ಶಾಸಕರು ಮುಂಬೈನಲ್ಲಿ ಇರುವ ಕಾರಣ ಸುಧಾಕರ್ ಅವರನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಇತ್ತ ಪ್ರತಿಬಾರಿಯೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದ ಎಂಟಿಬಿ ನಾಗರಾಜ್ ಅವರು ಈಗ ಯಾವ ನಿರ್ಧಾರ ಮಾಡುತ್ತಾರೆ. ಸುಧಾಕರ್ ಅವರಂತೆ ರಾಜೀನಾಮ ಹಿಂಪಡೆಯದಿರುವ ನಿರ್ಧಾರ ಮಾಡುತ್ತಾರಾ ಅಥವಾ ವಾಪಸ್ ಪಡೆದು ಕಾಂಗ್ರೆಸ್‍ನೊಂದಿಗೆಯೇ ಇರುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಸಿದ್ದರಾಮಯ್ಯ ಮನೆಯಿಂದ ತೆರಳುವುದಕ್ಕೂ ಮುನ್ನ ಮಾತನಾಡಿದ್ದ ಸಚಿವ ಜಮೀರ್, ಸಂಧಾನ ಯಶಸ್ವಿಯಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಅವರಿಗೂ ಭಾರೀ ಹಿನ್ನಡೆಯಾಗಿದೆ.

  • ಖರ್ಗೆಗೆ ಸಿಎಂ ಎಚ್‍ಡಿಕೆ ತಮ್ಮ ಸ್ಥಾನ ಬಿಟ್ಟು ಕೊಡ್ತಾರಾ – ಸಚಿವ ಎಂಟಿಬಿ ಬಹಿರಂಗ ಸವಾಲು

    ಖರ್ಗೆಗೆ ಸಿಎಂ ಎಚ್‍ಡಿಕೆ ತಮ್ಮ ಸ್ಥಾನ ಬಿಟ್ಟು ಕೊಡ್ತಾರಾ – ಸಚಿವ ಎಂಟಿಬಿ ಬಹಿರಂಗ ಸವಾಲು

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಅರ್ಹತೆ ಇದೆ ಎಂದು ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಚಿವರು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

    ಸಚಿವ ಎಂಬಿಟಿ ನಾಗರಾಜ್ ಪ್ರತಿಕ್ರಿಯಿಸಿ, ಖರ್ಗೆ ಸಿಎಂ ಆಗಬೇಕಿತ್ತು ಎಂದು ಮಾತನಾಡುವ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನ ಬಿಟ್ಟು ಕೊಡ್ತಾರಾ? ಅಷ್ಟು ಕಾಳಜಿ ಇದ್ದರೆ ಖರ್ಗೆಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂದು ಸವಾಲ್ ಎಸೆದರು. ಅಷ್ಟೇ ಅಲ್ಲದೇ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಿಂದೆ ಯಾರೋ ಇದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬ ಹೇಳಿಕೆಯನ್ನ ಸಮರ್ಥಸಿಕೊಂಡ ಅವರು, ನಮ್ಮ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬುವುದಕ್ಕೂ ಸಿಎಂ ಕುಮಾರಸ್ವಾಮಿ ಅವರಿಗೂ ಏನು ಸಂಬಂಧ? ನಾವು ಶಾಸಕರೆಲ್ಲ ಸೇರಿ ತೀರ್ಮಾನಿಸಿದರೆ ಯಾರು ಬೇಕಾದ್ರು ಸಿಎಂ ಆಗಬಹುದು. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಕೈ ಶಾಸಕರು ತೀರ್ಮಾನಿಸಿದರೆ ಅದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಕುಮಾರಸ್ವಾಮಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರಿಗೇನು ಸಂಬಂಧ ಎಂದು ಪ್ರಶ್ನಿಸಿ ನೇರವಾಗಿ ವಾಗ್ದಾಳಿ ನಡೆಸಿದರು.

    ಇತ್ತ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಎಚ್‍ಡಿಕೆ ಅವರು ಹೇಳಿದ್ದು ಸರಿ ಇದೆ. ಖಗೆ ಅವರಿಗೆ ಅದಕ್ಕಿಂತಲೂ ಉನ್ನತ ಸ್ಥಾನದ ಆರ್ಹತೆ ಇದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಅರ್ಹತೆ ಬಹಳ ನಾಯಕರಿಗೆ ಇದೆ. ಅವರಲ್ಲಿ ಎಚ್‍ಡಿ ರೇವಣ್ಣ ಕೂಡಾ ಇಬ್ಬರು.

  • ಸಿಎಂಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಎಂಟಿಬಿ ನಾಗರಾಜ್

    ಸಿಎಂಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಎಂಟಿಬಿ ನಾಗರಾಜ್

    – ಪ್ರಚಾರದ ರಿಲಾಕ್ಸ್ ಮೂಡ್‍ನಲ್ಲಿ ನಾಟಕದ ಡೈಲಾಗ್ ಹೇಳಿದ ಕಾಂಗ್ರೆಸ್ ಮುಖಂಡರು

    ಬೆಂಗಳೂರು: ಜಾತಿ ಇರುವುದು ಮದುವೆ, ಸಂಪ್ರದಾಯ ಪಾಲನೆಗೆ ಅಷ್ಟೇ. ರಾಜಕಾರಣದಲ್ಲಿ ಬೆರಳಣಿಕೆಯಷ್ಟು ಮಂದಿ ಜಾತಿ ರಾಜಕೀಯ ಮಾಡುತ್ತಾರೆ ಎಂದು ಸಚಿವ ಎಂಟಿಬಿ ನಾಗರಾಜ್, ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ವೀರಪ್ಪ ಮೊಯ್ಲಿ ಪರ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಮಂಡ್ಯದಲ್ಲಿ ಜಾತಿಯ ರಾಜಕೀಯ ಮಾಡಿದ್ದಕ್ಕೆ ಅಸಮಾಧಾನ ಹೊರ ಹಾಕಿದರು. ಈ ಮೂಲಕ ಪರೋಕ್ಷವಾಗಿ ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ಬೀಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರದ್ದು ಗೌಡರ ಜಾತಿ ಅಲ್ವಾ? ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಬೇಕಲ್ವಾ? ಹೀಗಾಗಿ ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿರಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಬಚ್ಚೇಗೌಡ ಒಬ್ಬರೇ ಗೌಡರಲ್ಲ, ಕುಮಾರಸ್ವಾಮಿ ಅವರು ಕೂಡ ಗೌಡರೇ. ಚುನಾವಣೆಯಲ್ಲಿ ಜಾತಿ ಕೆಲಸ ಮಾಡಲ್ಲ. ಯಾರದರೂ ಶಾಸಕರು ಅಥವಾ ಸಂಸದರು ಜಾತಿ ಆಧಾರವಾಗಿ ಗೆದ್ದಿದ್ದಾರಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ವೇಳೆಯ ರಿಲಾಕ್ಸ್ ಮೂಡಿನಲ್ಲಿ ವಸತಿ ಸಚಿವ ಎಂ.ಟಿ.ಬಿ ನಾಗರಾಜ್, ಅಭ್ಯರ್ಥಿ ವೀರಪ್ಪ ಮೊಯ್ಲಿ ಹಾಗೂ ನೆಲಮಂಗಲ ಸ್ಥಳೀಯ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ ನಾಟಕದ ಡೈಲಾಗ್ ಹೇಳಿ ರಂಜಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಗಳಕುಪ್ಪೆಯಲ್ಲಿ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕುರುಕ್ಷೇತ್ರ ನಾಟಕದ ಕರ್ಣನ ಕಂದ ಪದ್ಯ ಹಾಡಿ ರಂಜಿಸಿದ್ದಾರೆ. ದುರ್ಯೋಧನನ ಪಾತ್ರದ ಜೊತೆಗೆ ಕರ್ಣ ಹೇಳುವ ಹಾಡನ್ನು ನೆಲಮಂಗಲ ಶಾಸಕ ಹಾಡಿದರು. ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ಒತ್ತಾಯದ ಮೇರೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಸಿಲಿನ ನಡುವೆ ಗಾನಬಜಾನ ಮಾಡಿದ್ದಾರೆ.

    ಈ ವೇಳೆ ಕಾರ್ಯಕರ್ತರು ಹಾಗೂ ಹಲವಾರು ನಾಯಕರು ಹಾಡಗಳನ್ನು ಹಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಾಸಕರ ಧ್ವನಿಗೆ ಧ್ವನಿಗೂಢಿಸಿದ ವೀರಪ್ಪ ಮೊಯ್ಲಿ ನಮ್ಮ ಭಾಗದಲ್ಲಿ ಯಕ್ಷಗಾನ ಬಲು ಜೋರಾಗಿರುತ್ತದೆ ಎಂದು ಮಾತಿನ ಚಟಾಕಿ ಹಾರಿಸಿದರು.

  • ಸಿಎಂ ಎದುರಲ್ಲೇ ಅಸಮಾಧಾನ ಹೊರಹಾಕಿದ ವಸತಿ ಸಚಿವ ಎಂಟಿಬಿ ನಾಗರಾಜ್

    ಸಿಎಂ ಎದುರಲ್ಲೇ ಅಸಮಾಧಾನ ಹೊರಹಾಕಿದ ವಸತಿ ಸಚಿವ ಎಂಟಿಬಿ ನಾಗರಾಜ್

    ರಾಮನಗರ: ಈ ಬಾರಿಯ ಬಜೆಟ್‍ನಲ್ಲಿ ವಸತಿ ಇಲಾಖೆಗೆ ಅನುದಾನ ಕಡಿಮೆ ಮಾಡಿದ್ದಾರೆ. ಆದರೆ ಏಕೆ ಕಡಿಮೆ ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಸಿಎಂ ಕುಮಾರಸ್ವಾಮಿ ಎದುರಲ್ಲೇ ವಸತಿ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ, ಬಜೆಟ್‍ನಲ್ಲಿ ಸಿಕ್ಕಿರುವ ಅನುದಾನ ಕಡಿಮೆಯಾಗಿದೆ. ವಸತಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಸಿಎಂಗೆ ನಿರಂತರವಾಗಿ ಬಡವರ ಆರ್ಶೀವಾದ ಮನೆ ನಿರ್ಮಿಸಿ ಕೊಟ್ಟರೆ ಸಿಗುತ್ತೆ ಎಂದರು.

    ಬಳಿಕ ಮಾತನಾಡಿದ ಸಿಎಂ ಎಚ್‍ಡಿಕೆ, ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಇಲ್ಲೇ ಪ್ರಸ್ತಾಪ ಮಾಡಿಬಿಟ್ಟರು. ನನ್ನ ಕಷ್ಟ ಅವರಿಗೇನೂ ಗೊತ್ತಿದೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಎಲ್ಲ ಗೊತ್ತಿದೆ. ನಾಗರಾಜ್ ಅವರು ಹೊಸದಾಗಿ ಮಂತ್ರಿಗಳಾಗಿದ್ದಾರೆ. ಆದ್ದರಿಂದ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಹಿಂದಿನ ಸರ್ಕಾರದಲ್ಲಿ ನಿಗದಿಯಾಗಿದ್ದ ಮನೆಗಳ ಪೂರ್ಣಗೊಳಿಸಲು ಕೂಡ ಹಣ ಬಿಡುಗಡೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅನುದಾನವನ್ನು ಹೆಚ್ಚಿಸಲಾಗುವುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಇರ್ತಾರೆ- ಎಂಟಿಬಿ ನಾಗರಾಜ್

    ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಇರ್ತಾರೆ- ಎಂಟಿಬಿ ನಾಗರಾಜ್

    – ಸಚಿವ ಎಂಟಿಬಿ ನಾಗರಾಜ್ ಸಂಪತ್ತು ಕುರಿತು ಸಿದ್ದರಾಮಯ್ಯ ಹಾಸ್ಯ
    – ಇನ್ನೊಂದು ಐದು ವರ್ಷ ಸಿಕ್ಕಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ- ಸಿದ್ದರಾಮಯ್ಯ

    ಬೆಂಗಳೂರು: ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ನಡೆದ ನೂತನ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಹನುಮಂತನ ಎದೆ ಬಗೆದರೆ ಹೇಗೆ ರಾಮ ಕಾಣುತ್ತನೋ ಹಾಗೇ ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಜಪ ಕಾಣಿಸುತ್ತದೆ. ನಾನು ಯಾವಾಗಲೂ ಸಿದ್ದರಾಮಯ್ಯ ಅವರ ಜಪ ಮಾಡುತ್ತೇನೆ ಎಂದು ಹೇಳಿದರು.

    ಸಚಿವನಾಗಬೇಕು ಇಲ್ಲವೇ ರಾಜಕೀಯ ನಿವೃತ್ತಿ ತಗೆದುಕೊಳ್ಳಬೇಕು ಅಂತ ತೀರ್ಮಾನಿಸಿದ್ದೆ. ಅಷ್ಟೇ ಅಲ್ಲದೆ ನಾನು ಇನ್ನುಮುಂದೆ ಚುನಾವಣೆಗೆ ನಿಲ್ಲಲ್ಲ ಎನ್ನುವ ನಿರ್ಧಾರ ಕೈಗೊಂಡಿದ್ದೆ. ಹೀಗಾಗಿ ಈ ಬಾರಿಯೇ ಸಚಿವನಾಗಬೇಕು ಎನ್ನುವ ಕನಸು ಕಂಡಿದ್ದೆ. ನನ್ನ ಕನಸನ್ನು ಅವರು ಈಡೇರಿಸಿದರು ಎಂದು ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ಇದನ್ನೂ ಓದಿ: ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ವರ್ಗದವರಿಗೂ ಉತ್ತಮ ಕಾರ್ಯಕ್ರಮ ಕೊಟ್ಟಿದ್ದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಸಿದ್ದರಾಮಯ್ಯ ಹೊರತು ಯಾವುದೇ ಮಣ್ಣಿನ ಮಕ್ಕಳಲ್ಲ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿದ್ದು ಸಿದ್ದರಾಮಯ್ಯ ಹೊರತು ಯಾವುದೇ ಲಿಂಗಾಯತ ಮುಖ್ಯಮಂತ್ರಿ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.

    ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು ಕುರುಬರ ಸಂಘ ಉಳಿಸಿದೆ. ಈ ಹಿಂದೆ ಕುರುಬರ ಸಂಘದಲ್ಲಿ ಇದ್ದವರೇ ಸಂಘವನ್ನು ಮುಳುಗಿಸಲು ಮುಂದಾಗಿದ್ದರು. ಆದರೆ ನನ್ನ ಕಂಡರೆ ಗಡಗಡ ಅಂತ ನಡಗುತ್ತಿದ್ದರು. ಹೀಗಾಗಿ ಅವರ ಕಪಿಮುಷ್ಠಿಯಿಂದ ಸಂಘವನ್ನು ಪಡೆದು ಒಳ್ಳೆಯವರ ಕೈಗೆ ಕೊಟ್ಟೆ. ಅಲ್ಲಿಂದ ಕುರುಬರ ಸಂಘ ಚೆನ್ನಾಗಿ ನಡೆಯುತ್ತಿದೆ ಎಂದು ತಿಳಿಸಿದರು.

    ಕಾಗಿನೆಲೆ ಮಠಕ್ಕಾಗಿ ಹಣ ಸಂಗ್ರಹ ಮಾಡಲು ಶಿವಮೊಗ್ಗಕ್ಕೆ ಹೋಗಿದ್ವಿ. ಈ ವೇಳೆ ಮುಖಂಡರ ಜೊತೆಗೆ ಸಭೆ ನಡೆಸಿ 3 ಲಕ್ಷ ರೂ. ಹಣ ಸಂಗ್ರಹ ಮಾಡಿಕೊಡುವಂತೆ ಕೇಳಿಕೊಂಡಿದ್ದೇವು. ಮೊದಲ ಸಭೆಗೆ ಹಾಜರಾಗಿದ್ದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಹಣ ಕೊಡುವುದಕ್ಕೆ ಹಿಂದೇಟು ಹಾಕಿ ಎರಡನೇ ಸಭೆಗೆ ಪುಣ್ಯಾತ್ಮ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.

    ಸಂಘದಿಂದ ಮೆಡಿಕಲ್ ಕಾಲೇಜು ಅರಂಭಿಸಬೇಕು ಎನ್ನುವ ವಿಚಾರವಿತ್ತು. ಅದಕ್ಕೆ ಬೇಕಾಗಿದ್ದ ಅನುಮತಿಯನ್ನು ಸರ್ಕಾರವೂ ನೀಡಿತ್ತು. ಆದರೆ ಕಾಲೇಜು ನಿರ್ಮಿಸಲು 500 ಕೋಟಿ ರೂ.ಗಿಂತ ಅಧಿಕ ಹಣ ಬೇಕಾಗಿತ್ತು. ನಮ್ಮಲ್ಲಿ ಅಷ್ಟೊಂದು ಹಣ ಇರಲಿಲ್ಲ. ಅಷ್ಟೇ ಅಲ್ಲದೆ ಕುರುಬರಲ್ಲಿ ಹೆಚ್ಚು ಶ್ರೀಮಂತರಿಲ್ಲ ಎಂದ ಸಿದ್ದರಾಮಯ್ಯ ಅವರು, ನಮ್ಮ ಸಮುದಾಯದಲ್ಲಿ ಎಂಟಿಬಿ ಒಬ್ಬನೇ ಶ್ರೀಮಂತ ಎಂದು ಹಾಸ್ಯ ಮಾಡಿದರು.

    ಸಾರ್ವಜನಿಕ ಆಸ್ತಿ ವಿಷವಿದ್ದಂತೆ. ನನ್ನ ರಾಜಕೀಯ ಬದುಕಿನಲ್ಲಿ ಇಂತಹ ಆಸ್ತಿಯನ್ನು ಮುಟ್ಟಿಲ್ಲ. ಕೆಲವರು ಕುರುಬರ ಸಂಘದ ಹೆಸರಲ್ಲಿ ತಾವೇ ಆಸ್ತಿ ಮಾಡಿಕೊಂಡಿದ್ದಾರೆ ಎಂದ ಅವರು ಸಮಾಜದ ಹೆಸರಲ್ಲಿ ಹಣ ನುಂಗುವವರನ್ನು ಬಹಿಷ್ಕರಿಸಿ ಎಂದು ಮುಖಂಡರಿಗೆ ತಿಳಿಸಿದರು.

    ಮೀಸಲಾತಿ ಹಿಂದುಳಿದ ವರ್ಗದವರಿಗೆ ಬೇಕೇಬೇಕು. ಇದರಿಂದ ಸಮಬಲದವರ ಜೊತೆ ಸ್ಪರ್ಧಿಸಬಹುದು. ಜೊತೆಗೆ ಶಾಸಕರು ಹಾಗೂ ಸಂಸದರ ಕ್ಷೇತ್ರಗಳಲ್ಲೂ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ನಾನು ಎಲ್ಲ ಜಾತಿಯ ಬಡವರಿಗೆ ನ್ಯಾಯ ಕೊಡುವ ಪ್ರಯತ್ನ ಮಾಡಿರುವೆ. ಆದರೆ ಅಹಿಂದದವರಿಗೆ ಸ್ವಲ್ಪ ಜಾಸ್ತಿ ಮಾಡಿರಬಹುದು ಎಂದು ಹೇಳಿದರು.

    ಟಿಪ್ಪು ಜಯಂತಿ, ಕೆಂಪೇಗೌಡ ಜಯಂತಿ, ಹಡಪದ ಅಪ್ಪಣ್ಣ ಜಯಂತಿ ಮಾಡಿದ್ದು ನಾನೇ. ಕೆಲವು ನಿಗಮಗಳನ್ನು ರಚನೆ ಮಾಡಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ನಮ್ಮ ಅವಧಿಯಲ್ಲಿ ಉತ್ತೇಜನ ಸಿಕ್ಕಿತ್ತು. ಬೆಂಗಳೂರು ನಗರ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು, ರೈತರ ಅಭಿವೃದ್ಧಿಗೆ ಕಾರ್ಯಕ್ರಮ, ಸಾಲಮನ್ನಾ ಮಾಡಿರುವೆ. ನಾನು ಜನರ ಋಣ ತೀರಿಸಿರುವೆ. ನನಗೆ ನನ್ನ ಕೆಲಸಗಳ ಬಗ್ಗೆ ತೃಪ್ತಿ ಇದೆ ಎಂದರು.

    ಕೆಲವರು ಹೊಟ್ಟೆ ಕಿಚ್ವಿಗೆ ಸಿದ್ದರಾಮಯ್ಯ ಏನ್ ಮಾಡಿದ ಅಂತಾರೆ. ಇದೆಲ್ಲ ಯಾರು ಮಾಡಿದ್ದು? ಇನ್ನೊಂದು ಐದು ವರ್ಷ ಸಿಕ್ಕಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ. ಆದರೆ ಹೊಟ್ಟೆಕಿಚ್ಚು, ಅಪಪ್ರಚಾರದಿಂದ ಸೋಲಿಸಿಬಿಟ್ಟರು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೂತನ ಸಚಿವರ ಮುಂದೆಯೇ ರೈತನಿಂದ ಆತ್ಮಹತ್ಯೆ ಬೆದರಿಕೆ

    ನೂತನ ಸಚಿವರ ಮುಂದೆಯೇ ರೈತನಿಂದ ಆತ್ಮಹತ್ಯೆ ಬೆದರಿಕೆ

    ಬೆಂಗಳೂರು: ರೈತರೊಬ್ಬರು ಸಚಿವರ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ನಗರದ ಕಾವೇರಿ ಭವನದ ಕಚೇರಿಯಲ್ಲಿ ನಡೆಯಿತು.

    ಗೃಹ ಮಂಡಳಿಯಿಂದ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬ್ಯಾಲಾಳುವಿನ ರೈತ ಶ್ರೀನಿವಾಸ್ ಎಂಬವರು ಸಚಿವ ಎಂಟಿಬಿ ನಾಗರಾಜ್ ಮುಂದೆ ಅಳಲು ತೋಡಿಕೊಂಡರು. ಹೈ ಕೋರ್ಟ್ ಹೇಳಿದರು ಅಧಿಕಾರಿಗಳು ಹಣ ಕೊಟ್ಟಿಲ್ಲ. ಸಾಲ ಮಾಡಿಕೊಂಡಿದ್ದೇನೆ. ಹಣ ಕೊಡಿಸಲಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು.

    ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸುವಂತೆ ಸಚಿವ ಎಂಟಿಬಿ ನಾಗರಾಜ್ ಅವರು ತಾಕೀತು ಮಾಡಿದರು. ಇದಕ್ಕೆ ಸ್ಪಷ್ಟನೆ ಕೊಟ್ಟ ಗೃಹ ಮಂಡಳಿ ಆಯುಕ್ತರು, ದಾಖಲೆಗಳು ಸರಿಯಾಗಿ ಇಲ್ಲ. ದಾಖಲೆ ತರುವಂತೆ ಸೂಚನೆ ನೀಡಲಾಗಿದೆ. ಗೋಮಾಳದ ಜಾಗ ಇದಾಗಿದ್ದು, ಸಿವಿಲ್ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಿದ್ದರು ನಾವು ನ್ಯಾಯಾಲಯದಲ್ಲಿ ಹಣ ಡೆಪಾಸಿಟ್ ಮಾಡಿದ್ದೇವೆ. ದಾಖಲೆ ಕೊಟ್ಟು ಅಲ್ಲೇ ಹಣ ಪಡೆಯಬಹುದು ಎಂದು ತಿಳಿಸಿದರು.

    ವಸತಿ ಸಚಿವರಾಗಿ ಅಧಿಕಾರವಹಿಸಿಕೊಂಡ ಎಂಟಿಬಿ ನಾಗರಾಜ್ ಅವರು ಮೊದಲ ಬಾರಿಗೆ ವಸತಿ ಇಲಾಖೆಯ ಪರಿಶೀಲನಾ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇಲಾಖೆಯ ಪ್ರಗತಿ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ನನ್ನ ಅವಧಿಯಲ್ಲಿ ಪಾರದರ್ಶಕವಾಗಿ ಇಲಾಖೆ ನಡೆಸುತ್ತೇನೆ. ಪ್ರಾಮಾಣಿಕವಾಗಿ ಕೊಟ್ಟ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv