Tag: ಸಚಿವ ಈಶ್ವರಪ್ಪ

  • ಬಿಜೆಪಿ ಆಂತರಿಕ ಬೆಳವಣಿಗೆಗೆ ಬೇಸರ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ

    ಬಿಜೆಪಿ ಆಂತರಿಕ ಬೆಳವಣಿಗೆಗೆ ಬೇಸರ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ

    ಶಿವಮೊಗ್ಗ: ಕೋವಿಡ್ ಮೂರನೇ ಅಲೆ ಬರುತ್ತದೋ, ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾಗ್ತಾರೋ, ಇರ್ತಾರೋ ಗೊತ್ತಿಲ್ಲ. ಆದರೆ ಕಾರ್ಯಕರ್ತರು, ತಮ್ಮ ನಿಷ್ಠೆ, ಸಿದ್ದಾಂತವನ್ನ ಸಂಘಟನೆಗೆ ತೋರಿಸಿ ಬೆಳೆಸಬೇಕಿದೆ ಎಂದು ಸಚಿವ ಈಶ್ವರಪ್ಪ ಕರೆ ನೀಡಿದ್ದಾರೆ.

    ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಪಕ್ಷದ ಒಳಗೂ ಟೀಕೆ ಮಾಡುವ ಬೆಳವಣಿಗೆ ನಮ್ಮ ಪಕ್ಷದಲ್ಲೂ ಬಂದು ಬಿಟ್ಟಿದೆ. ಪಕ್ಷದ ಒಳಗಿರುವವರು ಟೀಕೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಎಂದೂ ಇರಲಿಲ್ಲ. ಇದನ್ನು ನಾನು ನೊಂದು ಹೇಳುತ್ತಿದ್ದೇನೆ ಎಂದರು.

    ಸಂಘಟನೆ ಶಕ್ತಿ ಬೆಳೆಸಿಕೊಂಡು ಹೋಗುತ್ತಿದ್ದರೆ, ಎಂದಿಗೂ ನಮ್ಮ ಪಕ್ಷಕ್ಕೆ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ನ ಬಡಿದಾಟ ಇರಬಹುದು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇರಬಹುದು. ಯಾರೂ ಏನೇ ಮಾತನಾಡಿದರೂ ಪರವಾಗಿಲ್ಲ. ಕಾರ್ಯಕರ್ತರು ಸಂಘಟನೆ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ಮಾತ್ರ ಯೋಚಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ: ಸಚಿವ ಮಾಧುಸ್ವಾಮಿ

    ಯಾರಾದರೂ ಟೀಕೆ ಮಾಡಲಿ, ಏನಾದರೂ ಮಾತನಾಡಿಕೊಂಡು ಹೋಗಲಿ. ಪಕ್ಷದ ಒಳಗೆ ಇರಲಿ, ಹೊರಗೆ ಆರೋಪ ಮಾಡಲಿ. ವಿರೋಧಿಗಳ ಟೀಕೆಗೆ ಸಂಘಟನೆ ಮೂಲಕವೇ ಉತ್ತರ ನೀಡಬೇಕು. ಸಂಘಟನೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕರ್ತರು ಗಮನ ಕೇಂದ್ರಿಕರಿಸಬೇಕು. ಕೋವಿಡ್ ನಂತಹ ಸಂಕಷ್ಟವನ್ನು ನಾವು ಸಂಘಟನೆ ಮುಖಾಂತರ ಜಾಗೃತಿ ಮೂಡಿಸಿ ಎದುರಿಸಿದ್ದೇವೆ ಎಂದು ತಿಳಿಸಿದರು.

  • ಅರ್ಹತೆ ಇರೋ ಎಲ್ಲಾ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲ: ಸಚಿವ ಈಶ್ವರಪ್ಪ

    ಅರ್ಹತೆ ಇರೋ ಎಲ್ಲಾ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲ: ಸಚಿವ ಈಶ್ವರಪ್ಪ

    ಶಿವಮೊಗ್ಗ: ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳನ್ನು ಎಸ್‍ಟಿ ವರ್ಗಕ್ಕೆ ಸೇರಿಸಬೇಕು ಎಂದು ಅನೇಕ ಸಮಾಜದವರು ಬೇಡಿಕೆ ಇಟ್ಟಿದ್ದಾರೆ. ಅನೇಕ ಸಮಾಜಗಳಿಗೆ ಎಸ್‍ಟಿಗೆ ಸೇರುವ ಅರ್ಹತೆ ಸಹ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು ಎಲ್ಲಾ ಹಿಂದುಳಿದ ವರ್ಗ ಯಾರು, ಯಾರಿಗೆ ಎಸ್‍ಟಿಗೆ ಸೇರಲು ಅರ್ಹತೆ ಇದೆಯೋ, ಆ ಎಲ್ಲಾ ಅರ್ಹತೆ ಇರುವ ಸಮಾಜವನ್ನು ಎಸ್‍ಟಿಗೆ ಸೇರಿಸಲು ನನ್ನ ಬೆಂಬಲವಿದೆ ಎಂದರು.

    ಈಗಾಗಲೇ ಕುರುಬ ಸಮುದಾಯದ ಜೊತೆ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೋಳಿ ಸಮಾಜ, ಸವಿತಾ ಸಮಾಜ ಹಾಗೂ ಕಾಡುಗೊಲ್ಲರ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಚರ್ಚಿಸಲು ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರ ಜೊತೆ ಸಭೆ ನಡೆದಿದೆ. ಅಲ್ಲದೇ ಈ ಬಗ್ಗೆ ಮತ್ತೆ ಚರ್ಚಿಸಲು ನಮ್ಮ ಮನೆಯಲ್ಲಿ ಇದೇ ಭಾನುವಾರ ಎಲ್ಲಾ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯವರು ಸಭೆ ನಡೆಯಲಿದೆ. ಅಲ್ಲದೇ ಕುರುಬ ಸಮಾಜದ ಸ್ವಾಮೀಜಿಯವರು ನನ್ನ ಮನೆಗೆ ಭೇಟಿ ನೀಡಿ ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸುವ ಹೋರಾಟದ ನೇತೃತ್ವವನ್ನು ನೀವೆ ವಹಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎಂದರು.

    ಎಸ್‍ಟಿಗೆ ಕುರುಬ ಸಮಾಜ ಸೇರಿಸಬೇಕು ಎಂಬ ಹೋರಾಟ ಮುಂದುವರಿಯುತ್ತದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಸಹ ಇದೆ. ಸದ್ಯದ ಮೀಸಲಾತಿ ಪ್ರಕಾರ ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ಮಾಡಲು ಬರುವುದಿಲ್ಲ. ಸದ್ಯ ವಾಲ್ಮೀಕಿ ಸಮಾಜಕ್ಕೆ 3% ಮೀಸಲಾತಿ ಇದೆ. ಈ 3% ಮೀಸಲಾತಿಯನ್ನು 7% ಗೆ ಹೆಚ್ಚಿಸಬೇಕು ಎಂಬ ಅವರ ನ್ಯಾಯಬದ್ಧವಾದ ಬೇಡಿಕೆ ಇದೆ. ಈಗಾಗಿಯೇ ಸರ್ಕಾರ ನಾಗಮೋಹನ್ ದಾಸ್ ವರದಿಯ ನಿರೀಕ್ಷೆಯಲ್ಲಿದೆ. ಆ ವರದಿ ಬಂದ ನಂತರ ಅದರ ಪ್ರಕಾರ ಎಷ್ಟು ಮೀಸಲಾತಿ ಹೆಚ್ಚಳ ಮಾಡಬೇಕೋ ಅಷ್ಟನ್ನು ಖಂಡಿತಾ ಮಾಡುತ್ತೇವೆ ಎಂದರು.

    ಕುರುಬ ಸಮಾಜ, ಕೋಳಿ ಸಮಾಜ, ಸವಿತಾ ಸಮಾಜ ಹಾಗೂ ಕಾಡುಗೊಲ್ಲ ಸಮಾಜ ಯಾವುದೇ ಸಮಾಜ ಆಗಲಿ ಎಸ್‍ಟಿ ಗೆ ಸೇರಿಸಲು ಅವರು ಒಬಿಸಿಯಲ್ಲಿ ಎಷ್ಟು ಮೀಸಲಾತಿ ಪಡೆದಿದ್ದಾರೋ ಅದರ ಸಮೇತ ಅವರು ಎಸ್‍ಟಿಗೆ ಬರಬೇಕು. ಈಗ ಇರುವಂತಹ ಎಸ್‍ಟಿ ಸಮಾಜಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ. ಜೊತೆಗೆ ಈ ಎಲ್ಲಾ ಸಮಾಜಗಳು ಎಸ್‍ಟಿ ಸೇರ್ಪಡೆಯಿಂದ ಯಾವುದೇ ರೀತಿ ತೊಂದರೆಯೂ ಆಗುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • ಡ್ರಗ್ಸ್ ದಂಧೆಯನ್ನು ಮಟ್ಟ ಹಾಕದಿದ್ದರೆ ನಮ್ಮ ಮನೆ ಒಳಗೂ ಬರೋ ಅಪಾಯವಿದೆ: ಈಶ್ವರಪ್ಪ

    ಡ್ರಗ್ಸ್ ದಂಧೆಯನ್ನು ಮಟ್ಟ ಹಾಕದಿದ್ದರೆ ನಮ್ಮ ಮನೆ ಒಳಗೂ ಬರೋ ಅಪಾಯವಿದೆ: ಈಶ್ವರಪ್ಪ

    – ಗಾಂಜಾ, ಡ್ರಗ್ಸ್ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ

    ಶಿವಮೊಗ್ಗ: ಮುಂದಿನ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಡ್ರಗ್ಸ್ ನಿಯಂತ್ರಣಕ್ಕೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಮಾದಕ ವಸ್ತುಗಳ ಬಳಕೆ ಗಂಭೀರ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದನ್ನು ಸಂಪೂರ್ಣವಾಗಿ ಮಟ್ಟ ಹಾಕದಿದ್ದರೆ ನಮ್ಮ ಮನೆಯ ಒಳಗೆ ಬಂದು ಬಿಡುವ ಅಪಾಯವಿದೆ. ಜಿಲ್ಲೆಯಲ್ಲಿ ಪೊಲೀಸರು ಮಾದಕ ವಸ್ತುಗಳ ನಿಯಂತ್ರಣಕ್ಕೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಪೊಲೀಸರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮಾದಕ ವಸ್ತು ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಕರ್ತವ್ಯ ಲೋಪ ಎಸಗುವ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಚಿವರು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಿರಂತರ ದಾಳಿಗಳನ್ನು ನಡೆಸುವ ಮೂಲಕ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಶಾಲಾ ಕಾಲೇಜು ಪ್ರಾಂಶುಪಾಲರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. ಶಾಲಾ ಕಾಲೇಜು ಆವರಣದ ಸುತ್ತಮುತ್ತಲಿನ ಅಂಗಡಿಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದರು.

    ಕಳೆದ ಎಂಟು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಗಾಂಜಾ ನಿಯಂತ್ರಿಸಲು ನಿರಂತರ ದಾಳಿಗಳನ್ನು ನಡೆಸಲಾಗಿದೆ. ಈ ಅವಧಿಯಲ್ಲಿ ಒಟ್ಟು 58 ಪ್ರಕರಣಗಳಲ್ಲಿ 137 ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಒಟ್ಟು 120 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ನಿಯಂತ್ರಿಸುವ ಕುರಿತು ಸಲಹೆ ನೀಡಿದರು. ಶಾಲೆಗಳಲ್ಲಿ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯ ಆಗಬೇಕಿದ್ದು, ಮಾದಕ ವಸ್ತುಗಳ ಬಳಕೆ ಬಗ್ಗೆ ನಿರಂತರ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲೆಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು. ನಗರದ ಉದ್ಯಾನವನಗಳು ಮಾದಕ ವ್ಯಸನಿಗಳ ಅಡ್ಡೆಯಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲೂ ವ್ಯಸನ ಹೆಚ್ಚಾಗುತ್ತಿದ್ದು, ಈ ಕುರಿತು ಗಮನ ಹರಿಸಬೇಕು ಎಂದು ಸಲಹೆಗಳನ್ನು ನೀಡಿದರು.

    ಸಭೆಯಲ್ಲಿ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಉಪಸ್ಥಿತರಿದ್ದರು.

  • ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಇನ್ನಷ್ಟು ಹೆಚ್ಚಾಗಲಿದೆ: ಸಚಿವ ಈಶ್ವರಪ್ಪ

    ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಇನ್ನಷ್ಟು ಹೆಚ್ಚಾಗಲಿದೆ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಹೆಚ್ವಾಗುತ್ತಿರುವುದರಿಂದ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿ ಕ್ರಮೇಣ ಕಡಿಮೆಯಾಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿನಿತ್ಯ 2 ಸಾವಿರದ ತನಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಸಭೆ ನಡೆಸಿದರು. ಸಭೆ ನಂತರ ಮಾತನಾಡಿದ ಅವರು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಅನುಕೂಲಗಳು ಬೇಕು ಎನ್ನುವ ಬಗ್ಗೆ ಸಿಮ್ಸ್ ನಿರ್ದೇಶಕರು, ಜಿಲ್ಲಾಧಿಕಾರಿ, ಡಿಹೆಚ್ ಓ ಜೊತೆ ಚರ್ಚೆ ನಡೆಸಲಾಗಿದೆ. 50 ಮಂದಿ ಡಿ ಗ್ರೂಪ್ ನೌಕರರು, 50 ಜನ ನರ್ಸ್ ಗಳು ಹಾಗೂ 25 ಮಂದಿ ವೈದ್ಯರು ಬೇಕು ಎಂದು ಕೇಳಿದ್ದಾರೆ. ವೈದ್ಯಕೀಯ ಕೋರ್ಸ್ ಮುಗಿಸಿರುವ ವೈದ್ಯರು 1 ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಅಪೇಕ್ಷೆ ಇರುವ ವೈದ್ಯರನ್ನು ಆಹ್ಚಾನಿಸಲಾಗುವುದು ಎಂದರು.

    ಬೇರೆ ರಾಜ್ಯಗಳಲ್ಲಿ ಖಾಸಗಿ ವೈದ್ಯರು ಸಹ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂಬ ಆದೇಶವಿದೆ. ಆದರೆ ನಮ್ಮಲ್ಲಿ ಅದನ್ನು ಇನ್ನೂ ಜಾರಿ ಮಾಡಿಲ್ಲ. ಖಾಸಗಿ ವೈದ್ಯರು ಸಮಾಜ ಸೇವೆ ಎಂದು ಭಾವಿಸಿ ಚಿಕಿತ್ಸೆ ನೀಡಲು ಮುಂದೆ ಬರಬೇಕು ಎಂದು ಪ್ರಾರ್ಥಿಸುತ್ತೇನೆ. ಕೆಲಸಕ್ಕೆ ಆಗಮಿಸಿದರೆ ಅವರಿಗೆ ಏನು ಹಣ ನೀಡಬೇಕೋ ಅದನ್ನು ನೀಡಲು ತಯಾರಿದ್ದೇವೆ ಎಂದರು.

    ಭದ್ರಾವತಿ, ಶಿಕಾರಿಪುರ ಹಾಗೂ ತೀರ್ಥಹಳ್ಳಿಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಹೆಚ್ಚಾದರೂ ನಾವು ತಯಾರಿದ್ದೇವೆ. ಎಲ್ಲ ಕಡೆ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯವರು ಸೋಂಕಿತರಿಗೆ ಇನ್ನು ಚಿಕಿತ್ಸೆ ಸಾಧ್ಯವಿಲ್ಲ ಎನ್ನುವ ಸಂದರ್ಭ ಎದುರಾದಾಗ ಕೊನೇ ವೇಳೆಯಲ್ಲಿ ರೋಗಿಯ ವೆಂಟಿಲೇಟರ್ ತೆಗೆದು ಮೆಗ್ಗಾನ್ ಗೆ ಕಳುಹಿಸುತ್ತಿದ್ದಾರೆ. ಇದು ಅಪರಾಧ ಅಂತಹವರಿಗೆ ನೋಟಿಸ್ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಕಾಶಿ, ಮಥುರಾ ವಿಷಯದಲ್ಲಿ ನನ್ನ ಬಂಧಿಸಿದ್ರೆ ನೂರು ಬಾರಿ ಜೈಲಿಗೆ ಹೋಗಲು ಸಿದ್ಧ: ಸಚಿವ ಈಶ್ವರಪ್ಪ

    ಕಾಶಿ, ಮಥುರಾ ವಿಷಯದಲ್ಲಿ ನನ್ನ ಬಂಧಿಸಿದ್ರೆ ನೂರು ಬಾರಿ ಜೈಲಿಗೆ ಹೋಗಲು ಸಿದ್ಧ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಿಸುವ ವಿಷಯದಲ್ಲಿ ಬಂಧಿಸುವುದಾದರೆ ನಾನು ನೂರು ಬಾರಿ ಜೈಲಿಗೆ ಹೋಗಲು ಸಿದ್ಧವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಭೂಮಿ ಪೂಜೆ ನೆರವೇರಿಸಿದ್ದು, ಈಡಿ ವಿಶ್ವವೇ ಸಂತಸ ಪಡುವ ದಿನ. ಈ ವೇಳೆ ನಾನು ಕಾಶಿ ಮತ್ತು ಮಥುರಾದಲ್ಲಿ ಮಸೀದಿ ತೆರವುಗೊಳಿಸಿ ದೇಗುಲ ನಿರ್ಮಿಸಬೇಕೆಂಬ ಎಂಬ ಹೇಳಿಕೆ ನೀಡಿದ್ದು, ಅದು ನನ್ನ ಮನಸ್ಸಿನ ಭಾವನೆ. ಆದರೆ ನನ್ನ ಹೇಳಿಕೆಯನ್ನು ಹೈದರಾಬಾದ್‍ನ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧಿಸುವ ಮೂಲಕ ರಾಜಕಾರಣ ಮಾಡಲು ಹೊರಟ್ಟಿದ್ದಾರೆ ಎಂದರು.

    ನಾನು ಅಂದು ಅನೇಕ ಹಿಂದೂಗಳ ಭಾವನೆಯ ಪ್ರತಿನಿಧಿಯಾಗಿ ಹಾಗೂ ನನ್ನ ಸ್ವಂತ ಅನಿಸಿಕೆಯನ್ನು ಮಾಧ್ಯಮದ ಮೂಲಕ ನಾಡಿನ ಜನತೆಗೆ ವ್ಯಕ್ತಪಡಿಸಿದ್ದೇನೆ. ಡಿಕೆಶಿಯವರು ರಾಜಕೀಯ ಮಾಡುವ ಮೂಲಕ ನನ್ನನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಹೇಳಿದ್ದಾರೆ. ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಿಸುವ ವಿಷಯದಲ್ಲಿ ಬಂಧಿಸುವುದಾದರೆ ನಾನು ನೂರು ಬಾರಿ ಜೈಲಿಗೆ ಹೋಗಲು ಸಿದ್ಧವೆಂದು ಹೇಳಿದರು.

    ನಾನು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ನಾನು ನನ್ನ ಮನಸ್ಸಿನ ಭಾವನೆಯನ್ನ ತಿಳಿಸಿದ್ದೇನೆ. ಆದರೆ ಸಂಸದ ಓವೈಸಿಯವರು, ಈಶ್ವರಪ್ಪನವರ ಹೇಳಿಕೆ ಹಿಂದೆ ಆರ್‌ಎಸ್‌ಎಸ್‌ ಇದೆ. ಆರ್‌ಎಸ್‌ಎಸ್‌ ನಾಳೆ ಇದನ್ನು ಆಂದೋಲನದ ರೀತಿ ಧರ್ಮ ಸಂಸತ್ ನಡೆಸಿ ಕಾನೂನು ಬದಲಾವಣೆ ತಂದು, ದೇಗುಲ ನಿರ್ಮಿಸಿ ಜನರ ಭಾವನೆಯೊಂದಿಗೆ ಆಟವಾಡುತ್ತಾರೆ ಎಂದು ಹೇಳಿದ್ದಾರೆ. ನನ್ನ ದೇಹದಲ್ಲಿ ಆಆರ್‌ಎಸ್‌ಎಸ್‌ ರಕ್ತ ಇದೆ ನಿಜ. ನಾನು ಇನ್ನೊಬ್ಬರ ಮಾತು ಕೇಳಿ ಮಾತನಾಡುವವನಲ್ಲ. ಆದರೆ ಆ ದಿನ ನಾನು ನನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದರು.

    ಧಾರ್ಮಿಕ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದನ್ನು ಬಿಡಬೇಕು. ಮುಸಲ್ಮಾನರ ಓಲೈಕೆಗೆ ಡಿಕೆಶಿಯವರು ನನ್ನ ಹೇಳಿಕೆ ವಿರೋಧಿಸಿದ್ದಾರೆ. ನನ್ನ ಹೇಳಿಕೆಯಿಂದ ಮುಸಲ್ಮಾನ್‍ರ ಮತ ಬ್ಯಾಂಕ್ ಹೋಗುವುದಾದರೆ ಹೋಗಲಿ ಎಂದು ಸಚಿವ ಈಶ್ವರಪ್ಪ ಹೇಳಿದರು.

  • ಸೋಂಕಿತರ ಸಾವು ಹೆಚ್ಚಾಗಲು ಕಾರಣವೇನು?- ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಸಿಡಿಮಿಡಿ

    ಸೋಂಕಿತರ ಸಾವು ಹೆಚ್ಚಾಗಲು ಕಾರಣವೇನು?- ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಸಿಡಿಮಿಡಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆಗೆ ಕಳೆದೊಂದು ವಾರಗಳಿಂದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವೇನು ಎಂದು ಸಚಿವ ಈಶ್ವರಪ್ಪ ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಮತ್ತು ವೈದ್ಯರು ಹಾಗೂ ನಿರ್ದೇಶಕರ ಜೊತೆ ಸಭೆ ನಡೆಸಿದ ಸಚಿವರು, ಸೋಂಕಿತ ಚಿಕಿತ್ಸೆ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವೈದ್ಯರು ಸಲಹೆ, ಸೂಚನೆ ನೀಡಿ, ಸಿಬ್ಬಂದಿ ಕೊರತೆ ನೀಗಿಸಿ. ಡಿ ಗ್ರೂಪ್ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ ಗಳು, ವೆಂಟಿಲೇಟರ್ ಗಳ ಕೊರತೆ, ಆಕ್ಸಿಜನ್, ಬೆಡ್‍ಗಳ ಕೊರತೆ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಈಶ್ವರಪ್ಪ ಸೂಚನೆ ನೀಡಿದರು.

    ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೂಲಭೂತ ಸೌಲಭ್ಯದ ಕೊರತೆ ಮತ್ತು ವೈದ್ಯರಿಂದ ನಿರ್ಲಕ್ಷ್ಯ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಯಾವ ರೀತಿ ಕ್ರಮಕೈಗೊಳ್ಳಬೇಕೆಂಬ ಬಗ್ಗೆ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲು ಸೂಚಿಸಲಾಯಿತು.

    ಕೊರೊನಾ ವಾರಿಯರ್ಸ್ ಗಳಾದ ವೈದ್ಯರು ಮತ್ತು ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಗೆ ಪಾಸಿಟಿವ್ ಬಂದಾಗ ಚಿಕಿತ್ಸೆ ಪಡೆಯಲು ಪ್ರತ್ಯೇಕ ವಾರ್ಡ್ ಅವಶ್ಯಕತೆ ಇದೆ. ಈ ಬಗ್ಗೆ ಸಭೆಯಲ್ಲಿ ಸಿಮ್ಸ್ ಸಿಬ್ಬಂದಿ ಸಚಿವರ ಗಮನಕ್ಕೆ ತಂದರು. ಲೋಪದೋಷಗಳು ಸೇರಿದಂತೆ, ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಮ್ಸ್ ಆಡಳಿತ ಮಂಡಳಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.

    ಕೋವಿಡ್ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರು ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿ ದೂರನ್ನು ಶಾಸಕರೇ ಬಗೆಹರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರು ತಮ್ಮ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

    ಈಗಾಗಲೇ 450 ಬೆಡ್ ಗಳ ವ್ಯವಸ್ಥೆ ಕೋವಿಡ್ ಮತ್ತು ನಾನ್ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಹೆಚ್ಚಿನ ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಸಚಿವರಿಗೆ ಮಾಹಿತಿ ನೀಡಿದರು.

  • ಈಶ್ವರಪ್ಪ ಆಡಳಿತ ನಡೆಸಲು ವಿಫಲ- ಅಧಿಕಾರಿಗಳ ವಿರುದ್ಧ ಮಾತನಾಡಿ ಆತ್ಮಸ್ಥೈರ್ಯ ಕುಗ್ಗಿಸುತ್ತಿದ್ದಾರೆ

    ಈಶ್ವರಪ್ಪ ಆಡಳಿತ ನಡೆಸಲು ವಿಫಲ- ಅಧಿಕಾರಿಗಳ ವಿರುದ್ಧ ಮಾತನಾಡಿ ಆತ್ಮಸ್ಥೈರ್ಯ ಕುಗ್ಗಿಸುತ್ತಿದ್ದಾರೆ

    – ಮಾಜಿ ಶಾಸಕ ಪ್ರಸನ್ನಕುಮಾರ್ ವಾಗ್ದಾಳಿ

    ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಚಿವರಾಗಿ, ಶಾಸಕರಾಗಿ ಆಡಳಿತ ನಡೆಸಲು ವಿಫಲರಾಗಿದ್ದಾರೆ. ಕೂಡಲೇ ಅವರು ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡುತ್ತಿದ್ದಾರೆ. ಶುಕ್ರವಾರ ಎಸ್‍ಪಿ ವಿರುದ್ಧ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದಿದ್ದಾರೆ. ನಿಜಕ್ಕೂ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದಾಗ ಅಧಿಕಾರಿಗಳ ವಿರುದ್ಧ ಹರಿಹಾಯುವುದು ಸಚಿವರ ಖಯಾಲಿಯಾಗಿದೆ. ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರನ್ನು ವರ್ಗಾವಣೆ ಮಾಡಿಸುವ ಸಲುವಾಗಿ ಇದೇ ರೀತಿ ಮಾಡಿದ್ದರು. ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದ್ದ ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಅವರನ್ನು ವರ್ಗಾವಣೆ ಮಾಡಿಸಿದರು. ಇನ್ನು ಮೆಗ್ಗಾನ್ ಭೋಧನಾ ಆಸ್ಪತ್ರೆ ಡೀನ್ ಬದಲಾಯಿಸುವ ಸಲುವಾಗಿ ಅವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ಬಳಿಕ ಅವರನ್ನು ವರ್ಗಾವಣೆ ಮಾಡಿಸಿ ತಮಗೆ ಬೇಕಾದವರನ್ನು ಹಾಕಿಸಿಕೊಂಡರು. ಇದೀಗ ಎಸ್‍ಪಿ ವಿರುದ್ಧ ಹರಿಹಾಯುತ್ತಿದ್ದಾರೆ ಎಂದರು.

    ಸಚಿವರು ಸರಿಯಾಗಿ ಕೆಲಸ ನಿರ್ವಹಿಸದೇ ಅವರ ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ಸಮರ್ಥ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸಚಿವರು ಆಡಳಿತ ನಡೆಸಲು ಸಂಪೂರ್ಣ ನಿಷ್ಕ್ರಿಯರಾಗಿದ್ದು, ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.

  • ಈಶ್ವರಪ್ಪ ಸಂಬಂಧಿಗೆ ಕೊರೊನಾ- ಸಚಿವರ ಕುಟುಂಬದವರಿಗೆ ಕೋವಿಡ್-19 ಪರೀಕ್ಷೆ

    ಈಶ್ವರಪ್ಪ ಸಂಬಂಧಿಗೆ ಕೊರೊನಾ- ಸಚಿವರ ಕುಟುಂಬದವರಿಗೆ ಕೋವಿಡ್-19 ಪರೀಕ್ಷೆ

    ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹತ್ತಿರದ ಸಂಬಂಧಿಯೊಬ್ಬರಿಗೆ ಸೋಮವಾರ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇವರು ಸಚಿವರ ಮನೆಯಲ್ಲೇ ಹೆಚ್ಚು ಇರುತ್ತಿದ್ದರಿಂದ ಕುಟುಂಬಸ್ಥರಿಗೆ ಆತಂಕ ಎದುರಾಗಿದ್ದರಿಂದ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಎಲ್ಲರ ವರದಿ ನೆಗೆಟಿವ್ ಬಂದಿದೆ.

    ಸಚಿವರ ಹತ್ತಿರದ ಸಂಬಂಧಿ ಆಗಿದ್ದರಿಂದ ಸೋಂಕಿತ ವ್ಯಕ್ತಿ ಹೆಚ್ಚಾಗಿ ಸಚಿವರ ಮನೆಯಲ್ಲಿಯೇ ಇರುತ್ತಿದ್ದರು. ತಮ್ಮ ಹತ್ತಿರದ ಸಂಬಂಧಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸಚಿವ ಈಶ್ವರಪ್ಪ ಕುಟುಂಬಸ್ಥರಿಗೆ ಶಾಕ್ ಆಗಿತ್ತು. ಹೀಗಾಗಿ ಸಚಿವ ಈಶ್ವರಪ್ಪ, ಸಚಿವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಸಚಿವರ ಆಪ್ತ ಸಹಾಯಕರು ಹಾಗೂ ಮನೆ ಕೆಲಸದವರು ಸೇರಿ ಒಟ್ಟು 21 ಮಂದಿ ಕೊರೊನಾ ತಪಾಸಣೆಗೆ ಒಳಗಾಗಿದ್ದರು.

    ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಸಚಿವರ ಕುಟುಂಬ ಇದೀಗ ನಿಟ್ಟುಸಿರು ಬಿಟ್ಟಿದೆ. ಕೊರೊನಾ ವರದಿಯಲ್ಲಿ ನನ್ನದೂ ಸೇರಿದಂತೆ ನಮ್ಮ ಕುಟುಂಬಸ್ಥರು ಹಾಗೂ ಕೆಲಸದವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಯಾವುದೇ ಆತಂಕ ಇಲ್ಲ. ಜೊತೆಗೆ ಕ್ವಾರಂಟೈನ್‍ಗೆ ಒಳಗಾಗುವ ಅವಶ್ಯಕತೆ ಸಹ ಇಲ್ಲ. ನಾಳೆಯಿಂದಲೇ ಮತ್ತೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿಯನ್ನು ಕೂಡಲೇ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಅಂತರ್ಜಲ ಹೆಚ್ಚಿಸುವ ‘ಚೇತನ ಯೋಜನೆ’ಗೆ ಸಚಿವ ಈಶ್ವರಪ್ಪ ಚಾಲನೆ

    ಅಂತರ್ಜಲ ಹೆಚ್ಚಿಸುವ ‘ಚೇತನ ಯೋಜನೆ’ಗೆ ಸಚಿವ ಈಶ್ವರಪ್ಪ ಚಾಲನೆ

    -ದುಡಿಯುವ ಕೈಗಳಿಗೆ ಕೆಲಸ ನೀಡಿದ ಎನ್‌ಆರ್‌ಇಜಿ

    ಶಿವಮೊಗ್ಗ: ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆನ್ನುವ ಗುರಿ ಒಂದು ಕಡೆಯಾದರೆ, ಲಾಕ್‍ಡೌನ್ ಕಾರಣದಿಂದ ಮತ್ತೊಂದು ಕಡೆ ಕೆಲಸವಿಲ್ಲದೇ ಜನರು ಕಂಗಾಲಾಗಿರುವುದು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಯೋಜನೆಗಳಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗಿದೆ. ಈಗಾಗಲೇ ಎನ್.ಆರ್.ಇ.ಜಿ. ಯೋಜನೆ ಅಡಿಯಲ್ಲಿ ಸಾವಿರಾರು ಜನರಿಗೆ ಕೆಲಸ ನೀಡಿರುವ ಇಲಾಖೆ ಇದೀಗ ಅಂತರ್ಜಲ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ.

    ರಾಜ್ಯ ಸರ್ಕಾರ ಕೊರೊನಾ ಮಹಾಮಾರಿ ಅಟ್ಟಹಾಸದ ನಡುವೆಯೂ ಯೋಜನೆಗಳನ್ನು ಜಾರಿಗೊಳಿಸಿಸುವ ಮೂಲಕ ಶ್ಲಾಘನೆಗೆ ಕಾರಣವಾಗಿದೆ. ಇದೀಗ ಎನ್.ಆರ್.ಇ.ಜಿ. ಯೋಜನೆಯಡಿಯಲ್ಲಿಯೇ, ಮಹತ್ವಾಕಾಂಕ್ಷೆಯ ಯೋಜನೆಗೂ ಚಾಲನೆ ನೀಡಲಾಗಿದೆ. ಸುಮಾರು 252 ಕೋಟಿ ರೂ. ವೆಚ್ಚದಲ್ಲಿ, ಅಂತರ್ಜಲ ಚೇತನ ಯೋಜನೆಗೆ ಚಾಲನೆ ದೊರೆತ್ತಿದ್ದು, ಕೊರೊನಾ ಸಂಕಷ್ಟದ ನಡುವೆಯೂ ಮಂದಹಾಸ ಮೂಡುವಂತೆ ಮಾಡಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಅಂತರ್ಜಲ ಚೇತನ ಯೋಜನೆಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

    ಪ್ರಥಮ ಹಂತದಲ್ಲಿ ಒಟ್ಟು 9 ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಟಾನಕ್ಕೆ ತರಲಾಗಿದೆ. ರಾಜ್ಯದಲ್ಲಿ ಸುಮಾರು 23 ಸಾವಿರ ಕೆರೆಗಳಿದ್ದು, ಅವುಗಳ ಪೈಕಿ 5,300 ಕೆರೆಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇವೆ. ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆಯ ಸಹಯೋಗದಲ್ಲಿ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ಸಂಸ್ಥೆಯು ತಾಂತ್ರಿಕ ನೆರವು ಹಾಗೂ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದು ಈ ಮಹತ್ವದ ಯೋಜನೆಗೆ ಚಾಲನೆ ನೀಡಲಾಯಿತು.

    ಮುಂದಿನ ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯಡಿಯಲ್ಲಿ ಜಿಲ್ಲೆಯ 1,650 ಗ್ರಾಮಗಳ ವ್ಯಾಪ್ತಿಯಲ್ಲಿ 345 ಕಿರು ಜಲಾನಯನಗಳ ಸುಮಾರು 5 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿಯಲ್ಲಿ 16,255 ಬೋಲ್ಡರ್ ಚೆಕ್ ನಿರ್ಮಾಣ, 15948 ಇಂಗುಬಾವಿ, 307 ಇಂಗು ಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳು ನಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಯೋಜನೆಯಿಂದ ಸುಮಾರು 8.82 ಲಕ್ಷ ಜನರಿಗೆ ಸದುಪಯೋಗವಾಗಲಿದ್ದು, ಗ್ರಾಮೀಣ ಭಾಗದ ಜನರಿಗೆ ಸಂಕಷ್ಟದ ಸಮಯದಲ್ಲಿ ಯೋಜನೆಗೆ ಜಾರಿಗೆ ತಂದಿರುವುದರಿಂದ ಈಶ್ವರಪ್ಪರಿಗೆ ಇದೀಗ ಆಧುನಿಕ ಕಾಲದ ಭಗೀರಥ ಎಂದು ಹಾಡಿ ಹೊಗಳಿದ್ದಾರೆ.

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದಕ್ಕೆ ಶಿವಮೊಗ್ಗದಲ್ಲಿ ಹಸಿರು ನಿಶಾನೆ ತೋರಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಕೊರೊನಾ ಭಯವಿಲ್ಲದೇ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳಿದ್ದರೂ ಕೂಡ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಮಾಜಿಕ ಅಂತರ ಕಾಣದೇ ಇರುವುದು ವಿಪರ್ಯಾಸವಾಗಿತ್ತು.

  • ಮೆಗ್ಗಾನ್ ಆಸ್ಪತ್ರೆಗೆ ಸಚಿವ ಈಶ್ವರಪ್ಪ ಭೇಟಿ, ಕೊರೊನಾ ವಾರ್ಡ್ ವೀಕ್ಷಣೆ

    ಮೆಗ್ಗಾನ್ ಆಸ್ಪತ್ರೆಗೆ ಸಚಿವ ಈಶ್ವರಪ್ಪ ಭೇಟಿ, ಕೊರೊನಾ ವಾರ್ಡ್ ವೀಕ್ಷಣೆ

    – ಕೊರೊನಾ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಭೆ ನಡೆಸಿದರು. ಬಳಿಕ ಮೆಗ್ಗಾನ್ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೊರೊನಾ ವಾರ್ಡ್ ವೀಕ್ಷಿಸಿ, ಕೊರೊನಾ ವೈರಸ್ ಪ್ರಕರಣಗಳ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಜನ ಗಾಬರಿಯಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಮೂರು ಶಂಕಿತ ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿವೆ. ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಮ್ಸ್ ನಲ್ಲಿ 30 ಹಾಸಿಗೆಯ ಪ್ರತ್ಯೇಕ ವಾರ್ಡ್ ಸಜ್ಜುಗೊಳಿಸಲಾಗಿದೆ. ವೈದ್ಯಾಧಿಕಾರಿಗಳ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಕೊರೊನಾ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವ ಎಲ್ಲ ಕಾರ್ಯಕ್ರಮಗಳನ್ನು ಕೈಬಿಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 15 ದಿನಗಳ ಕಾಲ ಯಾವುದೇ ಜಾತ್ರೆಗಳನ್ನು ನಡೆಸದಂತೆ ತಿಳಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ದೊಡ್ಡ ಪ್ರಮಾಣದ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹಾಗೂ ಇತರರು ಇದ್ದರು.