Tag: ಸಚಿವ ಆರ್.ಶಂಕರ್

  • ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಸಚಿವರಿಗೆ ಮನವಿ

    ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಸಚಿವರಿಗೆ ಮನವಿ

    ವಿಜಯಪುರ: ಇಂಡಿಯಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು 5 ಕೋಟಿ ಅನುದಾನ ನೀಡಲು ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಶೋಕ್ ಎಸ್ ಅಲ್ಲಾಪೂರ್ ಅವರು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆರ್. ಶಂಕರ ಅವರಿಗೆ ಬುಧವಾರ ಬೆಂಗಳೂರನಲ್ಲಿ ಮನವಿ ಸಲ್ಲಿಸಿದ್ದಾರೆ.

    ಭಾರತವು ಲಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದ್ದು, ಮೊದಲನೇ ಸ್ಥಾನದಲ್ಲಿ ಚೈನಾ ಇದ್ದರೆ, ಎರಡನೇ ಸ್ಥಾನದಲ್ಲಿ ಮೆಕ್ಸಿಕೊ ಇದೆ. ಕರ್ನಾಟಕವು ದೇಶದ ಲಿಂಬೆ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಸುಮಾರು 21,660 ಹೆಕ್ಟೆರ್ ಪ್ರದೇಶದಲ್ಲಿ ಲಿಂಬೆ ಬೆಳೆಯನ್ನು ಬೆಳೆಯುತ್ತಿದ್ದು, ಲಿಂಬೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.

    ಕರ್ನಾಟಕದಲ್ಲಿ ಬೆಳೆಯುವ ಲಿಂಬೆ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ‘ಖಾಗಜಿ’ ತಳಿಯ ಲಿಂಬೆಯು ಉತ್ತರ ಭಾರತ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಲಿಂಬೆ ಬೆಳೆಗಾರರಿಗೆ ಮಾರುಕಟ್ಟೆಯ ಅನಿಶ್ಚಿತ ದರದಿಂದ ಮಧ್ಯವರ್ತಿಗಳ ಹಾವಳಿಯಿಂದ ಹಾಗೂ ನೀರಿನ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೆಲ್ಲ ಮನಗೊಂಡ ಘನತೆಯುಕ್ತ ಕರ್ನಾಟಕ ಸರಕಾರ 2017 ರಲ್ಲಿ ಲಿಂಬೆ ಬೆಳೆಗಾರರಿಗೆ ಅನುಕೂಲವಾಗಲು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯನ್ನು ಇಂಡಿಯಲ್ಲಿ ಸ್ಥಾಪಿಸಿದ್ದು, ಸದರಿ ಮಂಡಳಿಯ ಬೇಡಿಕೆಗಳು ಈ ಕೆಳಗಿನಂತೆ ಮಾನ್ಯ ಸಚಿವರ ಗಮನಕ್ಕೆ ತಂದಿದ್ದಾರೆ.

    * ಲಿಂಬೆ ಹಣ್ಣನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಿ, ಲಿಂಬೆ ಬೆಳೆಗಾರರನ್ನು ಪ್ರೋತ್ಸಾಹಿಸಬೇಕು.
    * ಇಂಡಿ, ಸಿಂಧಗಿ ಮತ್ತು ಬಿಜಾಪುರ ತಾಲ್ಲೂಕಿಗೆ ಒಂದರಂತೆ ಪ್ರತ್ಯೇಕವಾಗಿ ಮೂರು ಶಿಥಲ ಘಟಕಗಳನ್ನು ನಿರ್ಮಿಸುವುದು.
    * ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸುವುದು.
    * ಇಂಡಿಯಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು 5.00 ಕೋಟಿ ಅನುದಾನ ನೀಡುವುದು.
    * ಇಂಡಿ, ಸಿಂಧಗಿ ಮತ್ತು ವಿಜಯಪುರ ತಾಲೂಕಿಗಳಿಗೆ ಪ್ರೋಸೆಸಿಂಗ್ ಘಟಕಗಳನ್ನು ನಿರ್ಮಿಸಲು ತಲಾ 20 ಎಕರೆಯಂತೆ ಸರ್ಕಾರದ ಜಮೀನು ನೀಡುವುದು.
    * ವಿಜಯಪುರ ಜಿಲ್ಲೆಯ ಲಿಂಬೆ ಹಣ್ಣು ವಿಶೇಷ ಗುಣವನ್ನು ಹೊಂದಿದ್ದು, ಕೆಲವೇ ದಿನಗಳಲ್ಲಿ ಜಿ.ಐ. ಟ್ಯಾಗ್ ಹೊಂದಲಿದ್ದು, ವಿಶ್ವವ್ಯಾಪ್ತಿ ಪರಿಚಯಿಸಲಿದೆ. ಇದರ ಉಪ ಉತ್ಪನ್ನಗಳ ಮೌಲವರ್ದಿತ ಬೆಲೆ ಸಿಗಲು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಬಿಸಿಯೂಟ, ಶಾಲಾಕಾಲೇಜುಗಳ ಹಾಸ್ಟೆಲ್ ಹಾಗೂ ರಾಜ್ಯದ ರೇಷನ್ ಪಡಿತರಿದಾರರಾದ ಎ.ಪಿ.ಎಲ್, ಹಾಗೂ ಬಿ.ಪಿ.ಎಲ್. ಕಾರ್ಡ್‍ದಾರರಿಗೆ ಪಿಕಲ್ ಇಂಡಸ್ಟ್ರೀಸ್‍ಗಳನ್ನು ನಿರ್ಮಿಸಿ, ಇಂದಿನ ಕೊರೊನಾಗೆ ಔಷಧಿಯ ಬೂಸ್ಟರ್ ರೀತಿಯಲ್ಲಿ ಬಳಸಿ, ಲಿಂಬೆ ಬೆಳೆಗಾರರಿಗೆ ಲಾಭ ಸಿಗುವಂತೆ ತಕ್ಷಣವೇ ಕ್ರಮಕೈಗೊಳ್ಳುವುದು.
    * ರಬ್ಬರ್, ಕಾಫಿ, ತೆಂಗು, ಮಾವು, ಸಾಂಬರ್ ಅಭಿವೃದ್ಧಿ ಮಂಡಳಿಯಂತೆ ಸಮಾನ ಸ್ಥಾನಮಾನವನ್ನು ನೀಡಿ, ಕಂಪನಿ ಆಕ್ಟ್ ನಲ್ಲಿ ರಿಜಿಸ್ಟರ್ ಮಾಡಿಸಿ, ಪ್ರತ್ಯೇಕ ಕಾಯ್ದೆಯನ್ನು ಪಾಸ್ ಮಾಡಿಸಿ, ವಿಶೇಷ ಸೌಲಭ್ಯಗಳನ್ನು ದೊರಕುವಂತೆ ಆಗಬೇಕು.
    * ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ (ODOP) ಒಂದು ಜಿಲ್ಲೆ ಒಂದು ಬೆಳೆ ಕಿರು ಉದ್ದಿಮೆದಾರರಿಗೆ, ಸಣ್ಣ ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಸರ್ಕಾರದಿಂದಲೂ ಆರ್ಥಿಕ ಸಹಾಯ ನೀಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
    * ಪ್ರಸ್ತುತ ವರ್ಷ 2021-22ನೇ ಸಾಲಿಗೆ 500 ಲಕ್ಷಗಳ ಅನುದಾನ ನೀಡಿದ್ದಲ್ಲಿ, ಲಿಂಬೆ ಬೆಳೆಗಾರರಿಗೆ KSOCA ಸಂಸ್ಥೆ ವತಿಯಿಂದ ಸಾವಯವ ಪ್ರಮಾಣೀಕರಣ ಪತ್ರ, ಸಹಾಯಧನ ರೂಪದಲ್ಲಿ Citrus Special, ಸಣ್ಣ ಪ್ರಮಾಣದ ಸತ್ಯೋತ್ಪಾದನೆ ಘಟಕಗಳು, FPO ಗಳ ರಚನೆ, ಯಾಂತ್ರಿಕರಣ, ಲಿಂಬೆ ಬೆಳೆಯ ಪ್ರಾತ್ಯಕ್ಷತೆ, ಪ್ರಾಥಮಿಕ ಸಂಸ್ಕರಣಾ ಘಟಕ / ಮೌಲ್ಯವರ್ಧನಾ ಘಟಕ ನಿರ್ಮಿಸಿಕೊಳ್ಳುವವರಿಗೆ ಸಹಾಯಧನ, ಲಿಂಬೆ ಖರೀದಿದಾರರ ಮತ್ತು ಮಾರಾಟಗಾರರ ಮೇಳ, ರೈತರಿಗೆ ಒಳ ರಾಜ್ಯ ಮತ್ತು ಹೊರ ರಾಜ್ಯ ಪ್ರವಾಸ ಹಾಗೂ ಲಿಂಬೆ ಬೆಳೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಧನಸಹಾಯ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವುದು ಎಂದು ಅಶೋಕ್.ಎಸ್ ಅಲ್ಲಾಪೂರ್ ಅವರು ಮನವಿ ಮೂಲಕ ಕೋರಿದ್ದಾರೆ.

    ಇಂಡಿ ನಿಂಬೆಹಣ್ಣಿನ ವಿಶೇಷತೆ ಏನು?
    ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣಲ್ಲಿ ರಸ ಹೆಚ್ಚು. ವಾರಗಟ್ಟಲೆ ಇಟ್ಟರೂ ಒಣಗುವುದಿಲ್ಲ ಮತ್ತು ಹಾಳಾಗುವುದಿಲ್ಲ. ಈ ನಿಂಬೆಯನ್ನು ಬೇರೆ ಕಡೆ ಬೆಳೆದರೂ ಇಲ್ಲಿನ ಗುಣಮಟ್ಟ, ವಿಶೇಷತೆ ಇರುವುದಿಲ್ಲ. ಈ ಪರಿಸರದ ಮಣ್ಣು ಮತ್ತು ಹವಾಗುಣದಿಂದ ಗುಣಮಟ್ಟದ ನಿಂಬೆ ಬೆಳೆಯಲಾಗುತ್ತದೆ. ಇದನ್ನೂ ಓದಿ:ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

     

  • ದೋಸ್ತಿಗೆ ಮತ್ತೊಂದು ಶಾಕ್ – ಸಚಿವ ಸ್ಥಾನಕ್ಕೆ ಶಂಕರ್ ರಾಜೀನಾಮೆ

    ದೋಸ್ತಿಗೆ ಮತ್ತೊಂದು ಶಾಕ್ – ಸಚಿವ ಸ್ಥಾನಕ್ಕೆ ಶಂಕರ್ ರಾಜೀನಾಮೆ

    ಬೆಂಗಳೂರು: ಕಾಂಗ್ರೆಸ್ ನಾಯಕರ ಕೈಗೆ ಸಿಗದೆ ನಾಟ್ ರೀಚೆಬಲ್ ಆಗಿದ್ದ ಪೌರಾಡಳಿತ ಸಚಿವ, ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೋಸ್ತಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಅವರು ಫೋನ್ ಮಾಡಿದರೂ ಆರ್.ಶಂಕರ್ ಸಂಪರ್ಕಕ್ಕೆ ಸಿಗಲಿಲ್ಲ. ಆದರೆ ಸ್ವಲ್ಪ ಸಮಯ ಬಳಿಕ ಸಚಿವರು ರಾಜೀನಾಮೆ ಕೊಟ್ಟು, ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.

    ಡಿಸಿಎಂ ಜಿ.ಪರಮೇಶ್ವರ್ ಅವರ ಮನೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಆರ್.ಶಂಕರ್ ಅವರು ಕೂಡ ಇದ್ದರು. ಈ ವೇಳೆ ನಾನು ದೋಸ್ತಿ ಸರ್ಕಾರದ ಜೊತೆಗೆ ಇರುತ್ತೇನೆ ಎಂದು ಆರ್.ಶಂಕರ್ ಮಾತು ಕೊಟ್ಟಿದ್ದರು. ಆದರೆ ಸಭೆಯ ಬಳಿಕ ಹೊರ ಬಂದು ಶಾಸಕ ನಾಗೇಶ್ ಅವರಿಗೆ ಫೋನ್ ಮಾಡಿ, ನಿಮ್ಮನ್ನು ಕರೆತರಲು ಡಿಸಿಎಂ ಜಿ.ಪರಮೇಶ್ವರ್ ಹಾಗೂ ಸಚಿವ ಡಿಕೆ ಶಿವಕುಮಾರ್ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ನಾಗೇಶ್ ಅವರು ಮಧ್ಯಾಹ್ನ 12:40 ಕ್ಕೆ ನಿಗದಿಯಾಗಿದ್ದ ವಿಮಾನವನ್ನು ತಕ್ಷಣವೇ ರೀ ಶೆಡ್ಯೂಲ್ ಮಾಡಿಸಿ ಮುಂಬೈಗೆ ಪ್ರಯಾಣ ಬೆಳೆಸಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ತಮ್ಮ ಸಚಿವ ಸ್ಥಾನವನ್ನು ಹಿಂಪಡೆಯುತ್ತಾರೆ ಎಂದು ಅರಿತ ಆರ್.ಶಂಕರ್ ಅವರು ಬಿಜೆಪಿ ನಾಯಕರು ಕಳುಹಿಸಿದ್ದ ಕಾರಿನಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿ, ಅತೃಪ್ತ ಶಾಸಕರನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • 16 ಶಾಸಕರು ರಾಜೀನಾಮೆ ನೀಡಲು ಸಿದ್ಧರಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರ: ಸಚಿವ ಆರ್.ಶಂಕರ್

    16 ಶಾಸಕರು ರಾಜೀನಾಮೆ ನೀಡಲು ಸಿದ್ಧರಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರ: ಸಚಿವ ಆರ್.ಶಂಕರ್

    ಹಾವೇರಿ: ಮೈತ್ರಿ ಸರ್ಕಾರ ಬಿತ್ತು ಬಿತ್ತು ಎಂದು ಹೇಳುವುದು ಕನಸಿನ ಮಾತಾಗಿದ್ದು, ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ. ಶಾಸಕರು ಯಾರು ರಾಜೀನಾಮೆ ನೀಡಲು ತಯಾರಿಲ್ಲ ಎಂದು ನೂತನ ಸಚಿವ ಆರ್ ಶಂಕರ್ ತಿಳಿಸಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಹಿಂದೆ ನನ್ನನ್ನು ಸಂಪುಟದಿಂದ ಕೈ ಬಿಟ್ಟಾಗ ಸರ್ಕಾರ ರಚನೆಯ ಕಸರತ್ತು ನಡೆಯಿತು. ಆದರೆ ಸದ್ಯ ಯಾರು ರಾಜೀನಾಮೆ ನೀಡಲು ತಯಾರಿ ಇಲ್ಲ. ಅಲ್ಲದೇ ಸರ್ಕಾರ ರಚನೆಗೆ 16 ಶಾಸಕರು ರಾಜೀನಾಮೆ ನೀಡುವುದಂತು ಸಾಧ್ಯವಿಲ್ಲ. ನಾನು ಈ ಹಿಂದೆ ಸರ್ಕಾರದ ರಚನೆ ಯತ್ನಿಸಿದ ಸಂದರ್ಭದಲ್ಲಿ ನಾನು ಇದ್ದೆ. ಆದರೆ ಅದು ಆಗಲು ಸಾಧ್ಯವಿಲ್ಲ. ಪಕ್ಷಗಳಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಮನವೊಲಿಸುವ ಪ್ರಯತ್ನ ಮಾಡುತ್ತೆವೆ ಎಂದರು.

    ಈ ಬಾರಿ ಸಚಿವನಾಗಿದ್ದು, ಯಶಸ್ವಿಯಾಗಿ ನಿಭಾಯಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನನ್ನಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಯಾವುದೇ ತಾರತಮ್ಯ ಮಾಡದೆ ಕ್ಷೇತ್ರದ ಎಲ್ಲಾ ಜನರ ಪರ ಕೆಲಸ ಮಾಡುತ್ತೇನೆ. ಎಲ್ಲರ ವಿಶ್ವಾಸ ತೆಗೆದುಕೊಂಡು ಮುಂದೆ ಹೋಗುತ್ತೇನೆ ಎಂದರು.

    ರಾಜ್ಯದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಸರ್ಕಾರ ಉಳಿಯಬೇಕು ಎಂಬುವುದು ನಮ್ಮ ಉದ್ದೇಶ, ನಾವು ಎಲ್ಲಿ ಬೇಕು ಅಲ್ಲಿಗೆ ಹೋಗುವ ಪರಿಸ್ಥಿತಿ ಇತ್ತು. ಪಕ್ಷೇತರರಾಗಿ ಗೆಲ್ಲುವುದು ಸುಲಭದ ಮಾತಲ್ಲ ಎಂದರು. ಈಗಾಗಲೇ ಐದು ಬಾರಿ ಗೆದ್ದ ಶಾಸಕರಿಗೆ, ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ವೈಯಕ್ತಿಕವಷ್ಟೇ ಎಂದರು.

  • ಪ್ರತಕರ್ತರು ಪ್ರಶ್ನೆ ಕೇಳಿದ ಕೂಡಲೇ ಸಮಸ್ಯೆ ಚೆಕ್ ಮಾಡಲು ಬೈಕ್ ಏರಿದ ಸಚಿವ!

    ಪ್ರತಕರ್ತರು ಪ್ರಶ್ನೆ ಕೇಳಿದ ಕೂಡಲೇ ಸಮಸ್ಯೆ ಚೆಕ್ ಮಾಡಲು ಬೈಕ್ ಏರಿದ ಸಚಿವ!

    ಕೊಪ್ಪಳ: ನಗರದಲ್ಲಿನ ಧೂಳಿನ ಸಮಸ್ಯೆ ಅರಿಯಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರು ಬೈಕ್ ಏರಿ ಪರಿಶೀಲನೆ ಮಾಡಿದ್ದಾರೆ.

    ಹೌದು, ಕೊಪ್ಪಳದ ಪ್ರಮುಖ ರಸ್ತೆಗಳಲ್ಲಿ ದಿನೇ-ದಿನೇ ಧೂಳು ಹೆಚ್ಚಾಗುತ್ತಿದ್ದು, ಸವಾರರು, ಚಾಲಕರು ಸೇರಿದಂತೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ಅಧಿಕಾರಿಗಳು, ಸ್ಥಳೀಯ ಶಾಸಕರ ಜೊತೆಗೆ ಪರಿಶೀಲನೆ ನಡೆಸಿದ್ದಾರೆ.

    ನಗರದಲ್ಲಿ ಸಚಿವ ಆರ್.ಶಂಕರ್ ಅವರು ಇಂದು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ರಸ್ತೆ ಸಮಸ್ಯೆಯ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಅಲ್ಲಿಂದ ಹೊರ ನಡೆದ ಸಚಿವ ಶಂಕರ್, ಅಲ್ಲಿಯೇ ಇದ್ದ ಪತ್ರಕರ್ತರೊಬ್ಬರ ಬೈಕ್ ಏರಿ, ಹೆಲ್ಮೆಟ್ ಹಾಕಿಕೊಳ್ಳದೇ ರೈಡ್ ಮಾಡಿದರು. ಕೊಪ್ಪಳ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೈಕ್ ಚಾಲನೆ ಮಾಡಿ, ಸಮಸ್ಯೆಯನ್ನು ಅರಿತರು.

    ಈ ವೇಳೆ ಸಚಿವ ಆರ್.ಶಂಕರ್ ಅವರಿಗೆ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು. ಜಿಲ್ಲಾಧಿಕಾರಿ ಕಚೇರಿ ತಲುಪಿದ ಸಚಿವರು, ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಗರಂ ಆದರು. ತಕ್ಷಣವೇ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಬಾಂಬೆಗೆ ಹೋಗಿಲ್ಲ ಸಮ್ಮಿಶ್ರ ಸರ್ಕಾರದ ಒಳಗೆ ಇದ್ದೇನೆ- ಸಚಿವ ಆರ್.ಶಂಕರ್

    ನಾನು ಬಾಂಬೆಗೆ ಹೋಗಿಲ್ಲ ಸಮ್ಮಿಶ್ರ ಸರ್ಕಾರದ ಒಳಗೆ ಇದ್ದೇನೆ- ಸಚಿವ ಆರ್.ಶಂಕರ್

    ಉಡುಪಿ: ನಾನು ಬಾಂಬೆಗೂ ಹೋಗಿಲ್ಲ, ಎಲ್ಲೂ ಹೋಗಿಲ್ಲ. ಸರ್ಕಾರದ ಒಳಗೆ ಇದ್ದೇನೆ. ನಾನು ಉಡುಪಿಯಲ್ಲಿಯೇ ಇದ್ದೇನೆ ನೋಡಿ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಾನು ಬಾಂಬೆಗೆ ಹೋಗಿದ್ದೇನೆ ಅಂತ ಸುದ್ದಿಯಾಗಿದೆ. ಬಿಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ಸದ್ಯಕ್ಕೆ ಬಿಜೆಪಿಗೆ ಬೆಂಬಲ ನೀಡುವ ವಿಚಾರವಿಲ್ಲ ಎಂದು ಸ್ಪಷ್ಟನೆ ನೀಡಿದರು.

    ನಾನು ಸ್ವತಂತ್ರ ಮತ್ತು ಪಕ್ಷೇತರ ಶಾಸಕ. ಕಾಂಗ್ರೆಸ್, ಜೆಡಿಎಸ್ ಯಾಕೆ ಸೇರಬೇಕು? ಕೆಪಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವೆ ಹಾಗೂ ಅದೇ ಪಕ್ಷದಿಂದ ಆಯ್ಕೆಯಾಗಿದ್ದೇನೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವೆ. ಪಕ್ಷ ತೊರೆಯುವ ವಿಚಾರವಿಲ್ಲ ಎಂದರು.

    ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಆಪ್ತರ ಮದುವೆಗೆ ಬಂದಿದ್ದೇನೆ. ಸಮ್ಮಿಶ್ರ ಸರ್ಕಾರವು ಐದು ವರ್ಷ ಸುಭದ್ರವಾಗಿರುತ್ತದೆ. ಮೈತ್ರಿ ಸರ್ಕಾರ ಇನ್ನೂ ಎದ್ದೇಳುತ್ತಿಲ್ಲ ಅಂತ ಮಾಧ್ಯಮಗಳು ಹೇಳುತ್ತಿವೆ. ಸರ್ಕಾರ ಎದ್ದಾಗಿದೆ, ಅಭಿವೃದ್ಧಿ ಕಾರ್ಯ ಪ್ರಾರಂಭಿಸಿದೆ. ರಾಜ್ಯದ ಜನರ ಎಲ್ಲಾ ಕೆಲಸಗಳು ಆಗುತ್ತವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv