Tag: ಸಚಿವ ಆರ್.ಅಶೋಕ್

  • ಮಳೆ ಹಾನಿ ಪ್ರದೇಶಗಳಿಗೆ ಅಶೋಕ್ ಭೇಟಿ- ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ

    ಮಳೆ ಹಾನಿ ಪ್ರದೇಶಗಳಿಗೆ ಅಶೋಕ್ ಭೇಟಿ- ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ

    – ಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ

    ಬೆಂಗಳೂರು: ನಿನ್ನೆ ಒಂದೇ ದಿನ ಮಳೆಗೆ ಬೆಂಗಳೂರು ಮುಳುಗಿದೆ. ಮಳೆಯಿಂದ ಹಾನಿಗೊಳಗಾದ ಹೊಸಕೆರೆ ಹಳ್ಳಿ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳು ಸಚಿವರಿಂದ ದೂರ ಉಳಿದು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

    ಸಚಿವರ ಭೇಟಿ ವೇಳೆ ಸ್ಥಳಕ್ಕೆ ಆಗಮಿಸಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಬೇಜಾವಾಬ್ದಾರಿ ವರ್ತನೆ ತೋರಿದ ಅಧಿಕಾರಿಗಳಾಗಿದ್ದು, ದೂರದಲ್ಲಿ ನಿಂತ ಇಬ್ಬರೂ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಮೊಬೈಲ್‍ನಲ್ಲಿ ಬ್ಯುಸಿಯಾಗಿದ್ದರು. ಆ ಮೂಲಕ ಮಳೆ ಹಾನಿ ವೀಕ್ಷಣೆಯಿಂದ ದೂರವೇ ಉಳಿದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಧಿಕಾರಿಗಳು, ಬೆಳಗ್ಗೆಯಿಂದಲೂ ನಾವು ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.

    ಇತ್ತ ಇದೇ ಸಂದರ್ಭದಲ್ಲಿ ಮಳೆಯಿಂದ ಸಮಸ್ಯೆ ಎದುರಿಸಿದ್ದ ಸಾರ್ವಜನಿಕರು ಆರ್.ಅಶೋಕ್ ಅವರನ್ನ ತರಾಟೆ ತೆಗೆದುಕೊಂಡರು. ಸ್ಥಳೀಯರ ವಿರೋಧ ಹೆಚ್ಚಾದ ಹಿನ್ನೆಲೆ ಸಚಿವರು ಬೇರೆ ಸ್ಥಳದ ಕಡೆ ಮುಖ ಮಾಡಿದರು.

    ಮಳೆ ಹಾನಿಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಚಿವ ಅಶೋಕ್ ಅವರು, ಮುಂದಿನ ಮೂರು ದಿನಗಳಲ್ಲಿ ಮಳೆ ಹಾನಿ ಪ್ರದೇಶದಲ್ಲಿ ಆಗಿರುವ ಒತ್ತುವರಿ ತೆರವು ಕೆಲಸ ಶುರುವಾಗುತ್ತೆ. ಉತ್ತರಹಳ್ಳಿಯಲ್ಲಿ ಇಂದಿನಿಂದ ತೆರವು ಕೆಲಸ ಶುರು ಮಾಡಲು ಹೇಳಿದ್ದೇನೆ. ಒತ್ತವರಿದಾರರು ಎಷ್ಟೇ ಪ್ರಭಾವಿಗಳಾದರೂ ಬಿಡಲ್ಲ. ಅಲ್ಲದೇ ಹಾನಿಯಾದ ಮನೆಗಳಿಗೆ 25 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

    ಸಚಿವರ ಭೇಟಿಗೂ ಮುನ್ನ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ಮಳೆ ಹಾನಿಯಾಗಿದ್ದ ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರಕ್ಕೆ ಭೇಟಿ ನೀಡಿ ಪ್ರತಿಯೊಂದು ಮನೆಗೂ ತೆರಳಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಮಳೆಯಿಂದ ನಷ್ಟ ಎದುರಿಸಿದ ಕುಟುಂಬಗಳಿಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು. ಇಂದು ಸಂಜೆಯೇ ಹಾನಿಗೊಳಗಾಗಿರುವ 700 ಕುಟುಂಬಗಳಿಗೆ ಚೆಕ್ ಮೂಲಕ ವಿತರಣೆ ಆಗಲಿದೆ ಎಂದು ಸಿಎಂ ಬಿಎಸ್‍ವೈ ಘೋಷಿಸಿದ್ದಾರೆ.

    ನಿನ್ನೆ ಒಂದು ದಿನ ಸುರಿದ ಮಳೆಗೆ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದಲ್ಲಿ ಮನೆಗಳು ಮುಳುಗಿದ್ದವು. ದಸರಾ ಹಬ್ಬದ ಖುಷಿಯಲ್ಲಿದ್ದ ಮನೆಗಳಲ್ಲಿ ಈಗ ಮಂದಿ ಹಠಾತ್ ಪರಿಣಾಮದಿಂದ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿದ್ದ ದವಸಧಾನ್ಯ, ಬಟ್ಟೆಬರೆ ಎಲ್ಲವೂ ಮಳೆ ನೀರಿನಿಂದ ಹಾಳಾಗಿವೆ. ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಳಾಗಿವೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಎಲ್ಲವೂ ನೀರು ಪಾಲಾಗಿದ್ದು, ಮತ್ತೆ ಸಂಪಾದಿಸೋದು ಹೇಗೆ ಎಂದು ಕೆಲ ಸ್ಥಳೀಯರು ಆಕ್ರೋಶ ಹೊರಹಾಕಿದರು. ಕೆಲ ಪ್ರದೇಶದ ಪ್ರಿಟಿಂಗ್‍ಪ್ರೆಸ್, ಗಿರಣಿಗಳಿಗೆ ನೀರು ನುಗ್ಗಿದ್ದು, ಸಂಗ್ರಹಿಸಿಟ್ಟಿದ್ದ ಮೂಟೆಗಟ್ಟಲೇ ಧಾನ್ಯಗಳು, ಹಿಟ್ಟು ಹಾಳಾಗಿದೆ.

  • ಸಿಎಂ ಸೀಟ್ ಖಾಲಿ ಇದ್ರೆ ಟವೆಲ್ ಹಾಕಬಹುದು: ಆರ್.ಅಶೋಕ್

    ಸಿಎಂ ಸೀಟ್ ಖಾಲಿ ಇದ್ರೆ ಟವೆಲ್ ಹಾಕಬಹುದು: ಆರ್.ಅಶೋಕ್

    ಬೆಂಗಳೂರು: ಮುಂದಿನ ಮೂರು ವರ್ಷ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಸೀಟ್ ಖಾಲಿ ಇದ್ರೆ ಟವೆಲ್ ಹಾಕಬಹುದು ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪರೋಕ್ಷವಾಗಿ ಕಂದಾಯ ಸಚಿವ ಆರ್.ಆಶೋಕ್ ತಿರುಗೇಟು ನೀಡಿದ್ದಾರೆ.

    ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ. ಖಾಲಿ ಇಲ್ಲ ಅಂದ್ಮೇಲೆ ಟವೆಲ್ ಎಲ್ಲಿ ಹಾಕ್ತಾರೆ ಅವರು? ಖಾಲಿ ಇಲ್ಲದ ಸೀಟ್‍ಗೆ ಟವೆಲ್ ಹಾಕಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ. ಅವರ ನೇತೃತ್ವದಲ್ಲೇ ಸರ್ಕಾರ ಮೂರು ವರ್ಷ ಕೆಲಸ ಮಾಡುತ್ತೆ. ಆದ್ದರಿಂದ ಖಾಲಿ ಇಲ್ಲದ ಸೀಟ್‍ಗೆ ಟವೆಲ್ ಹಾಕೋದನ್ನು ಎಲ್ಲರೂ ನಿಲ್ಲಿಸಿದರೇ ಎಲ್ಲರಿಗೂ ಒಳ್ಳೆಯದು ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಬಿಎಸ್‍ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ: ಯತ್ನಾಳ್ ಹೊಸ ಬಾಂಬ್

    ಆರ್.ಆರ್ ನಗರ ಕ್ಷೇತ್ರಕ್ಕೆ ಉಪಚುನಾವಣೆ ವಿಚಾರವಾಗಿ ಎಲ್ಲಾ ಉಸ್ತುವಾರಿ ಸಚಿವರಿಗೆ ನಮ್ಮ ನಿವಾಸದಲ್ಲಿ ಇಂದು ಸಭೆ ಕರೆದಿದ್ದೇವೆ. ಪ್ರತಿ ವಾರ್ಡಿಗೆ ಒಬ್ಬ ಸಚಿವರು, ಶಾಸಕರನ್ನು ನೇಮಕ ಮಾಡುತ್ತಿದ್ದೇವೆ. ಈಗಾಗಲೇ ಕಾಂಗ್ರೆಸ್ ಕಾರ್ಪೊರೇಟರ್ ಗಳು ನಮ್ಮೊಂದಿಗೆ ಸೇರಿದ್ದಾರೆ. ಜೆಡಿಎಸ್ ಕಾರ್ಪೊರೇಟರ್ ಗಳು ನಾಳೆ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷ ಸೇರುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರೇ ಇಲ್ಲದಂತೆ ಆಗಿದೆ. ಉತ್ತರ ಹಳ್ಳಿಯ ನಾಡಿ ಮಿಡಿತ ನನಗೆ ಗೊತ್ತಾಗಿದೆ. ಇಲ್ಲಿ ಕಾಂಗ್ರೆಸ್‍ನ ಯಾವ ಗಾಳಿ ಪ್ರಚಾರವಿಲ್ಲ, ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದರು.

    ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಮುಗಿಸಿದ್ದೇ ಡಿಕೆ ಶಿವಕುಮಾರ್ ಅವರು. ಈ ಚುನಾವಣಾ ಪ್ರಚಾರ ನೋಡಿದರೆ ಜೆಡಿಎಸ್ ಮಾತ್ರ ಬಿಜೆಪಿಗೆ ಸ್ಪರ್ಧೆ ಇದೆ ಅನ್ನಿಸುತ್ತಿದೆ ಎಂದರು.

  • ಪ್ರವಾಹದ ಅನುದಾನ ಕೇಳಲು ನಾಳೆ ಸಿಎಂ ದೆಹಲಿಗೆ: ಆರ್ ಅಶೋಕ್

    ಪ್ರವಾಹದ ಅನುದಾನ ಕೇಳಲು ನಾಳೆ ಸಿಎಂ ದೆಹಲಿಗೆ: ಆರ್ ಅಶೋಕ್

    – ಪರಿಹಾರ ನೀಡಲು ಹಣದ ಕೊರತೆಯಿಲ್ಲ

    ರಾಯಚೂರು: ಮುಂದಿನ ಅಧಿವೇಶನದಲ್ಲಿ ಕಂದಾಯ ಇಲಾಖೆಯ ಹೊಸ ಕಾಯ್ದೆಗಳನ್ನ ಜಾರಿ ಮಾಡುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈ ಬಾರಿ ಪ್ರವಾಹದಿಂದ 8,071 ಕೋಟಿ ಹಾನಿಯಾಗಿದೆ. ಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ 628 ಕೋಟಿ ಹಣ ಬೇಕಾಗಿದೆ. ಕೇಂದ್ರ ಸರ್ಕಾರ ಈಗಾಗಲೇ 325 ಕೋಟಿ ರೂಪಾಯಿ ನೀಡಿದೆ. ಪರಿಹಾರ ನೀಡಲು ಹಣದ ಕೊರತೆ ಇಲ್ಲ ಎಂದರು.

    ನಾಳೆ ಮುಖ್ಯಮಂತ್ರಿಗಳು ಪ್ರವಾಹ ಅನುದಾನಕ್ಕಾಗಿ ದೆಹಲಿಗೆ ಹೋಗಲಿದ್ದಾರೆ. ಎರಡನೆಯ ಹಂತದ ಮಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಜನರು ಹಾಗೂ ಜನಪ್ರತಿನಿಧಿಗಳ ಒತ್ತಾಯದ ಹಿನ್ನಲೆಯಲ್ಲಿ ಅರಕೇರಾ ನೂತನ ತಾಲೂಕು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುದಗಲ್ ಹಾಗು ಗಬ್ಬೂರು ತಾಲೂಕು ಕೇಂದ್ರದ ಬಗ್ಗೆ ಪರಿಶೀಲಿಸಲಾಗುವುದು ಅಂತ ಹೇಳಿದರು.

    ನಿರ್ಮಾಣ ಹಂತದಲ್ಲಿರುವ ರಾಯಚೂರು ಜಿಲ್ಲಾಡಳಿತ ಭವನ ನಗರದಿಂದ ದೂರವಾಗುತ್ತದೆ ಎಂಬ ಕಾರಣಕ್ಕೆ ಸ್ಥಳ ಬದಲಾವಣೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

  • ಪ್ರವಾಹದ ನೀರು ಉಕ್ಕಿ ಹರಿಯುವಾಗ ಸೆಲ್ಫಿ ತೆಗೆದ್ರೆ 6 ತಿಂಗಳು ಜೈಲು: ಸಚಿವ ಆರ್.ಅಶೋಕ್

    ಪ್ರವಾಹದ ನೀರು ಉಕ್ಕಿ ಹರಿಯುವಾಗ ಸೆಲ್ಫಿ ತೆಗೆದ್ರೆ 6 ತಿಂಗಳು ಜೈಲು: ಸಚಿವ ಆರ್.ಅಶೋಕ್

    ಹಾಸನ: ಪ್ರವಾಹದಿಂದ ನೀರು ಉಕ್ಕಿಹರಿಯುತ್ತಿರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಎಚ್ಚರಿಕೆ ಮೀರಿ ನೀರಿನ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ ಆರು ತಿಂಗಳು ಜೈಲು ಶಿಕ್ಷೆ ಎಂದು ಸೂಚನಾ ಫಲಕ ಹಾಕುವಂತೆ ಸಚಿವ ಆರ್.ಅಶೋಕ್ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಅವರಿಗೆ ಸೂಚಿಸಿದ್ದಾರೆ.

    ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪ್ರತಿ ವರ್ಷ ಭಾರಿ ಮಳೆಯಾಗುತ್ತಿದ್ದು, ಜನರು ಮನೆ ಕಳೆದುಕೊಂಡು ತೊಂದರೆಗೊಳಗಾಗುತ್ತಿದ್ದಾರೆ. ಹೀಗಾಗಿ ಸಕಲೇಶಪುರದಲ್ಲಿ ಶಾಶ್ವತ ಪರಿಹಾರ ಕೇಂದ್ರ ನಿರ್ಮಿಸಲಾಗುವುದು. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ವಾಸಕ್ಕೆ ಕೊಠಡಿಗಳು, ಪ್ರತ್ಯೇಕ ಶೌಚಾಲಯ, ಗ್ರಂಥಾಲಯ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಅನುಮೋದನೆ ನೀಡಲಾಗುವುದು ಎಂದರು.

    ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಪರಿಹಾರ ಕೇಂದ್ರ ನಿರ್ಮಾಣ ಮಾಡಲಾಗುವುದು. ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಈಗಾಗಲೇ 340 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಪ್ರಧಾನಿ ಮೋದಿಯವರ ಜೊತೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ನಾನು, ಬಸವರಾಜ ಬೊಮ್ಮಾಯಿ ಮಾತನಾಡಲಿದ್ದೇವೆ. ರಾಜ್ಯಕ್ಕೆ ಹೆಚ್ಚಿನ ಮುಂಗಡ ಹಣ ನೀಡುವಂತೆ ಮನವಿ ಮಾಡಲಿದ್ದೇವೆ. ಇದರಿಂದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

  • ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮ: ಸಚಿವ ಆರ್.ಅಶೋಕ್

    ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮ: ಸಚಿವ ಆರ್.ಅಶೋಕ್

    – ಪರಿಹಾರ ಕಾರ್ಯಕ್ಕೆ ಹಣ ಕೊರತೆ ಇಲ್ಲ
    – ನನ್ನ ವರದಿ ನೆಗೆಟಿವ್ ಬಂದಿದೆ

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು, ಪ್ರವಾಹದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಿಎಂ ನಿರ್ದೇಶನ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ನಿನ್ನೆಯೇ 8 ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಕ್ರಮಕ್ಕೆ ನಿರ್ದೇಶನ ಕೊಡಲಾಗಿದೆ. ಗೃಹ ಇಲಾಖೆ ಜೊತೆಗೂ ಸಭೆ ಮಾಡಿದ್ದೇ. ಇಂದಿನ ಸಭೆಗೆ ಸಚಿವರಾದ ಸೋಮಣ್ಣ, ಸಿಟಿ ರವಿ ಅವರು ಭಾಗಿಯಾಗಿದ್ದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸೋಮಣ್ಣ ಅವರು ಜಿಲ್ಲೆಗೆ ಭೇಟಿ ನೀಡುತ್ತಾರೆ. ನಾನು ರಾಜ್ಯದ ಹಲವು ಭಾಗಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

    ಹಣ ಕೊರತೆ ಇಲ್ಲ: ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕೊರೊನಾ ನಿಯಂತ್ರಣ ಸೇರಿದಂತೆ ಪ್ರವಾಹ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಹಣವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಸಿಎಂ ಕೂಡ ಸೂಚನೆ ನೀಡಿದ್ದಾರೆ. ಕೊರೊನಾ ಮತ್ತು ಪ್ರವಾಹ ನಿರ್ವಹಣೆಗೆ ಪ್ರತ್ಯೇಕ ಹಣ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಮೈಸೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಆಗಿದೆ. ಕೊಡಗಿನಲ್ಲಿ ಗುಡ್ಡ ಕುಸಿದು ಐವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.

    ಮಳೆಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣದ 10 ಸಾವಿರ ರೂ. ನೀಡಲು ತಿಳಿಸಿದ್ದೇವೆ. ದನ, ಕರು, ಕುರಿ ಸತ್ತಿದ್ದರೆ ಕೂಡಲೇ ಪರಿಹಾರ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. 30 ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 1,268 ಕೋಟಿ ರೂ. ಹಣವಿದೆ. ಅಗತ್ಯ ಮುಂಜಾಗ್ರತಾ ಸಾಮಗ್ರಿ ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಸೂಚನಡ ನೀಡಿದ್ದೇವೆ. ಕಳೆದ ಬಾರಿಯಂತೆ ಯಾವುದೇ ಅನಾಹುತ ಆಗಲು ಬಿಡುವುದಿಲ್ಲ. ಜಲಾಶಯಗಳಲ್ಲಿ ಅಗತ್ಯ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಉಳಿಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

    ನೆಗೆಟಿವ್ ರಿಪೋರ್ಟ್: ಸಿಎಂ ಅವರಿಗೆ ಪಾಸಿಟಿವ್ ಬಂದ ಬಳಿಕ 8 ದಿನ ಕ್ವಾರಂಟೈನ್ ಆಗಿದ್ದೆ. ಮೆಟ್ರೋ ಕಾಮಗಾರಿ ಚಾಲನೆ ವೇಳೆ ಅವರೊಂದಿಗಿದ್ದೆ. ಇಂದು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಆದ್ದರಿಂದ ಪ್ರವಾಹ ನಿರ್ವಹಣೆ ಹಾಗೂ ಕೊರೊನಾ ಕೆಲಸದಲ್ಲಿ ತೊಡಗಿಸಿಕೊಳುತ್ತಿದ್ದೇನೆ ಎಂದು ಅವರು ತಿಳಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿ, ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಆಯುಕ್ತರು ಮಾತ್ರ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಅಂಜುಂ ಪರ್ವೇಜ್ ಅವರನ್ನು ಕಳೆದ 10 ದಿನಗಳ ಹಿಂದೆಯೇ ನೇಮಕ ಮಾಡಲಾಗಿದೆ. ಅವರು ಈ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಮಾತ್ರ ನೋಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಗೊಂದಲ ಬೇಡ ಎಂದರು.

  • ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದಿದ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿಗಣನೆ: ಆರ್.ಅಶೋಕ್

    ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದಿದ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿಗಣನೆ: ಆರ್.ಅಶೋಕ್

    – ಮತ್ತೆ ಲಾಕ್‍ಡೌನ್ ವಿಸ್ತರಣೆಯ ಬಗ್ಗೆ ಸ್ಪಷ್ಟನೆ

    ಬೆಂಗಳೂರು: ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದಿದ್ದರೆ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿಗಣಿಸುತ್ತೇವೆ ಎಂದು ಬೆಂಗಳೂರು ದಕ್ಷಿಣ ವಲಯ ಉಸ್ತುವಾರಿ ಸಚಿವ ಆರ್.ಅಶೋಕ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ದಕ್ಷಿಣ ವಲಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಈ ಹಿಂದೆ ಬಿಬಿಎಂಪಿಯೇ ಎಲ್ಲವನ್ನು ನಿರ್ವಹಿಸುತ್ತಿತ್ತು. ಉಸ್ತುವಾರಿ ಹಂಚಿಕೆ ಬಳಿಕ ಕಾರ್ಪೊರೇಟರ್‌ಗಳಿಗೆ ಹೊಣೆಗಾರಿಕೆ ಕೊಟ್ಟಿದ್ದೇವೆ. ನಮ್ಮ ವಲಯದಲ್ಲಿ ಖಾಸಗಿ ಆಸ್ಪತ್ರೆಗಳನ್ನು ದಾರಿಗೆ ತಂದಿದ್ದೇವೆ. ಪ್ರತಿ ಖಾಸಗಿ ಆಸ್ಪತ್ರೆಗಳ ಎದುರು ಇನ್ಮುಂದೆ ಸಬ್ ಇನ್ಸ್‌ಪೆಕ್ಟರ್ ನೇಮಕ ಮಾಡಿದ್ದೇವೆ ಎಂದರು.

    ಖಾಸಗಿ ಆಸ್ಪತ್ರೆಗಳಲ್ಲಿ ಯಾರೇ ಬಂದರೂ ಚಿಕಿತ್ಸೆ ಕೊಡಬೇಕು. ಒಂದು ವೇಳೆ ಅವರು ಚಿಕಿತ್ಸೆ ಕೊಡಲು ನಿರಾಕರಿಸಿದರೆ ತಕ್ಷಣ ಡಿಸಿಪಿಗೆ ಅಲ್ಲಿಂದ ಮೆಸೇಜ್ ಬರಬೇಕು. ನಂತರ ಡಿಸಿಪಿ ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದಿದ್ದರೆ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿಗಣಿಸುತ್ತೇವೆ ಎಂದು ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.

    ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಚಿವರು, ಲಾಕ್‍ಡೌನ್ ವಿಸ್ತರಣೆ ಇಲ್ಲ. ಇವತ್ತಿನ ಸಿಎಂ ಸಭೆಯಲ್ಲೂ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಆಗಲ್ಲ. ಲಾಕ್‍ಡೌನ್ ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ. ಸದ್ಯಕ್ಕೆ ಕೊರೊನಾದಿಂದ ಸಾಯುತ್ತಿರುವ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹೀಗಾಗಿ ಲಾಕ್‍ಡೌನ್ ವಿಸ್ತರಣೆ ಮಾಡುವ ಪ್ರಮೇಯ ಇಲ್ಲ ಅಂತ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

    ವಲಯವಾರು ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಿಎಂಗೆ ಅತೃಪ್ತಿ ಇಲ್ಲ. ಬೆಂಗಳೂರು ಸೇರಿ ಎಲ್ಲ ಕಡೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾ ಗರಿಷ್ಠ ಮಟ್ಟಗೆ ಹೋಗಿ ಕಡಿಮೆ ಆಗಬೇಕು. ಸೋಂಕು ಪ್ರಮಾಣವನ್ನು ತಡೆಯುವುದಕ್ಕೆ ಆಗದಿದ್ದರೂ ಸಾವಿನ ಪ್ರಮಾಣ ಕಮ್ಮಿ ಮಾಡುವುದು ನಮ್ಮ ಆದ್ಯತೆ. ವಿಶ್ವದಲ್ಲೆಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಗರಿಷ್ಠ ಮಟ್ಟಕ್ಕೆ ಹೋಗಿ ಕಮ್ಮಿಯಾಗುತ್ತೆ ಎಂದರು.

    ಇವತ್ತಿನ ಸಿಎಂ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ವಿಫಲವಾಗಿಲ್ಲ. ಈ ಬಗ್ಗೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಬೆಂಗಳೂರಿನಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ ಅನ್ನೋದು ಸುಳ್ಳು ಎಂದರು.

    ಇನ್ನೂ ಕಲಬುರಗಿಯಲ್ಲಿ ಲಾಕ್‍ಡೌನ್ ವಿಸ್ತರಣೆಯ ಬಗ್ಗೆ ಮಾತನಾಡಿ, ಕಲಬುರಗಿಯಲ್ಲಿ ಡಿಸಿಗೆ ಸಿಎಂ ಅಧಿಕಾರ ಕೊಟ್ಟಿದ್ದರು. ಅದರಂತೆಯೇ ಅವರು ಲಾಕ್‍ಡೌನ್ ವಿಸ್ತರಿಸಿದ್ದಾರೆ. ಎಲ್ಲಾ ಜಿಲ್ಲೆಗಳ ಡಿಸಿಗಳಿಗೂ ನಿರ್ಧಾರ ಕೈತೆಗೆದುಕೊಳ್ಳುವ ಅಧಿಕಾರ ಇದೆ. ಆದರೆ ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡಲ್ಲ. ಅಂತಹ ಸಂದರ್ಭವೂ ಇಲ್ಲ ಎಂದು ಆರ್.ಅಶೋಕ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.

  • ಕಂದಾಯ ಸಚಿವ ಆರ್.ಅಶೋಕ್‍ಗೆ ಕೊರೊನಾ ಕಂಟಕ!

    ಕಂದಾಯ ಸಚಿವ ಆರ್.ಅಶೋಕ್‍ಗೆ ಕೊರೊನಾ ಕಂಟಕ!

    – ಸಚಿವರಿಗೆ ವಿಕ್ಟೋರಿಯಾದಲ್ಲಿ ವಿವರಣೆ ನೀಡಿದ್ದ ವೈದ್ಯೆಗೆ ಪಾಸಿಟಿವ್

    ಬೆಂಗಳೂರು: ಬೆಂಗಳೂರು ಕೋವಿಡ್ 19 ನಿರ್ವಹಣೆ ಉಸ್ತುವಾರಿಯನ್ನು ವಹಿಸಿಕೊಂಡಿರುವ, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕೊರೊನಾ ಕಂಟಕ ಎದುರಾಗಿದೆ. ಸಚಿವರಿಗೆ ವಿಕ್ಟೋರಿಯಾ ಕೋವಿಡ್-19 ಕೇಂದ್ರದಲ್ಲಿ ವಿವರಣೆ ನೀಡಿದ್ದ ವೈದ್ಯೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ವಿಕ್ಟೋರಿಯಾ ಬಿಎಂಸಿ ಕೋರ್ ಕಮಿಟಿಯಲ್ಲಿ ಸದಸ್ಯರಾಗಿರುವ ವೈದ್ಯೆ, ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸ್ಥಿತಿಗತಿ ಕುರಿತು ವಿವರಣೆ ನೀಡಿದ್ದರು. ಕೋವಿಡ್ ಕೇಂದ್ರದ ಸಮಸ್ಯೆಗಳು, ಆಹಾರ ಗುಣಮಟ್ಟ ಸೇರಿದಂತೆ ಹಲವು ವಿಚಾರಗಳ ಕುರಿತು ಸಚಿವರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದರು.

    ವಿಕ್ಟೋರಿಯಾದಲ್ಲಿ ಇಂದು ವೈದ್ಯೆ, ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು 11 ಜನರಿಗೆ ಪಾಸಿಟಿವ್ ದೃಢವಾಗಿದೆ. ಸದ್ಯ ವೈದ್ಯೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಣಾಮ ಸಚಿವ ಆರ್. ಅಶೋಕ್‍ಗೆ ಅವರು ಕೂಡ ಕ್ವಾರಂಟೈನ್ ಆಗುತ್ತಾರಾ ಎಂಬ ಅನುಮಾನ ಎದುರಾಗಿದೆ. ಅಲ್ಲದೇ ಸಚಿವರಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಾ ಎಂದು ಕಾದು ನೋಡಬೇಕಿದೆ.

    ಇತ್ತೀಚೆಗಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ತಮ್ಮ ಹೋಂ ಕ್ವಾರಂಟೈನ್ ಅವಧಿ ಮುಗಿಸಿ ಮತ್ತೆ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಿದ್ದರು. ಸದ್ಯ ಆರ್.ಅಶೋಕ್ ಅವರು ಕ್ವಾರಂಟೈನ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ವಿಕ್ಟೋರಿಯಾದಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಎಂಬ ಬಗ್ಗೆ ಕೇಳಿ ಬರುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಮಧ್ಯಾಹ್ನದ ಊಟವನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದರುಗಳ ಜೊತೆಗೆ ಸೇವಿಸಿದ್ದರು. ಸಭೆಯಲ್ಲಿ ಸ್ಥಳೀಯ ಶಾಸಕರು, ಸಂಸದರು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿಗಳು ಹಾಜರಾಗಿದ್ದರು.

  • ಎರಡು ಆದೇಶಗಳಲ್ಲಿ ಕೇಂದ್ರ ಪರಿಹಾರ ಹಣ ಕೊಡುತ್ತಿದೆ- ಆರ್.ಅಶೋಕ್

    ಎರಡು ಆದೇಶಗಳಲ್ಲಿ ಕೇಂದ್ರ ಪರಿಹಾರ ಹಣ ಕೊಡುತ್ತಿದೆ- ಆರ್.ಅಶೋಕ್

    – ನೀರು ನುಗ್ಗಿದ ಮನೆಗೆ 10,000 ರೂ. ಕೊಡಬೇಡಿ ಎಂದ ಕೇಂದ್ರ

    ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದ ಆಗಿರುವ ಒಟ್ಟು ಅಂದಾಜು ಹಾನಿ 38,000 ಕೋಟಿ ರೂ. ಆದರೆ ಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ ರಾಜ್ಯಕ್ಕೆ 3,810.80 ಕೋಟಿ ರೂ. ಬರಬೇಕು. ಅದರಲ್ಲಿ ಮೊದಲ ಕಂತು 1,200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಎರಡು ಪ್ರತ್ಯೇಕ ಆದೇಶಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಳುಹಿಸಿದ ಅಂದಾಜು ನಷ್ಟದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿಲ್ಲ, ಕೇವಲ ಸ್ಪಷ್ಟೀಕರಣ ಕೇಳಿದೆ. ಮನೆ ಕುಸಿತ ಪ್ರಕರಣಗಳಿಗೆ ಹತ್ತು ಸಾವಿರ ರೂ. ತಕ್ಷಣ ಪರಿಹಾರ ನೀಡಲಾಗುತ್ತಿದೆ. ಮನೆಗೆ ನೀರು ನುಗ್ಗಿರುವ ಪ್ರಕರಣಗಳಿಗೂ ತಕ್ಷಣ 10,000 ರೂ. ಪರಿಹಾರ ನೀಡಿರುವುದಕ್ಕೆ ಕೇಂದ್ರ ಸರ್ಕಾರ ಆಕ್ಷೇಪಿಸಿದೆ. ಆದರೆ ಮನೆಗೆ ನೀರು ನುಗ್ಗಿದಾಗಲೂ ಪರಿಹಾರ ನೀಡಬೇಕು ಎಂದು ಎನ್‍ಡಿಆರ್‍ಎಫ್ ನಿಯಾವಳಿಯಲ್ಲಿ ಸ್ಪಷ್ಟವಾಗಿದೆ ಎಂದು ವಿವರಿಸಿದರು.

    ಇದನ್ನು ಮತ್ತೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಜತೆಗೆ ಮನೆ ದುರಸ್ಥಿಗೆ 25,000 ರೂ. ಗಳಿಂದ ಒಂದು ಲಕ್ಷ ರೂ. ವರೆಗೆ ಪರಿಹಾರ ಹಣ ಬಿಡುಗಡೆ ಮಾಡಿದ್ದೇವೆ. ನೆರೆ ಸಂತ್ರಸ್ತರಿಗೆ ಮೂಲ ಸೌಕರ್ಯ ಕಲ್ಪಿಸಲು 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರಸಕ್ತ 7 ನಿರಾಶ್ರಿತರ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಮೊದಲು 12 ಕೇಂದ್ರಗಳಿದ್ದವು ಎಂದು ಮಾಹಿತಿ ನೀಡಿದರು.

    ರಾಜ್ಯದ 103 ತಾಲೂಕುಗಳು ನೆರೆ ಪೀಡಿತ ಎಂದು ಘೋಷಿಸಲಾಗಿದೆ. ಇದುವರೆಗೆ ರಾಜ್ಯ ಸರ್ಕಾರ 2,577.73 ಕೋಟಿ ರೂ. ಗಳನ್ನು ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನೆರೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಮನೆ ನಿರ್ಮಿಸಲು 30-30 ಅಥವಾ 30-50 ಅಳತೆಯ ನಿವೇಶನಗಳನ್ನು ಸಂತ್ರಸ್ತರಿಗೆ ನೀಡುವಂತೆ ಆದೇಶಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ನಿವೇಶನ ಭೂಮಿ ಗುರುತಿಸಲಾಗಿದೆ. ಈಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಮನೆ ನಿರ್ಮಾಣ ಹಾಗೂ ಭೂ ಕುಸಿತಕ್ಕೆ ಪರ್ಯಾಯ ಭೂಮಿ ಒದಗಿಸಲು ಬಳಕೆ ಮಾಡಲಾಗುತ್ತದೆ. ಬೆಳೆ ಪರಿಹಾರಕ್ಕೂ ಕೇಂದ್ರದ ಹಣ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಹೊಳೆನರಸಿಪುರದ ಐಬಿಯಲ್ಲಿ ನಿನ್ನೆ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿದ್ದ ತಹಶೀಲ್ದಾರ್‍ಗಳಿಗೆ ನೋಟಿಸ್ ನೀಡಲಾಗಿದೆ. 24 ಗಂಟೆಗಳ ಒಳಗಾಗಿ ಜಿಲ್ಲಾಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಎಚ್ಚರಿಸಿದರು.