Tag: ಸಚಿವ ಆನಂದ್ ಸಿಂಗ್

  • ಪುನೀತ್ ಪಾರ್ಕ್ ಹಾಗೂ ಕಲಾಮಂದಿರ ನಿರ್ಮಾಣ: ಸಚಿವ ಆನಂದ್ ಸಿಂಗ್

    ಪುನೀತ್ ಪಾರ್ಕ್ ಹಾಗೂ ಕಲಾಮಂದಿರ ನಿರ್ಮಾಣ: ಸಚಿವ ಆನಂದ್ ಸಿಂಗ್

    ವಿಜಯನಗರ: ಜಿಲ್ಲಾ ಕೇಂದ್ರ ಸ್ಥಾನವಾದ ಹೊಸಪೇಟೆಯ ಒಂದು ಸರ್ಕಲ್‍ಗೆ ನಟ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.

    ಹೊಸಪೇಟೆಯ ಶಾಸಕರ ಕಚೇರಿ ಬಳಿ ಪುನೀತ್ ಅಭಿಮಾನಿಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವೃತ್ತವೊಂದಕ್ಕೆ ಜನವರಿ ವೇಳೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗುವುದು. ಜೊತೆಗೆ ಹೊಸಪೇಟೆ ನಗರದಲ್ಲಿ ಅವರ ಹೆಸರಿನಲ್ಲಿ ಕಲಾಮಂದಿರ ಹಾಗೂ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಪುನೀತ್ ರಾಜಕುಮಾರ್ ಅವರಿಗೆ ಹೊಸಪೇಟೆಯ ಜೊತೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಅವರ ಹೆಸರಿನಲ್ಲಿ ಹೊಸಪೇಟೆಯಲ್ಲಿ ಸರ್ಕಲ್, ಜಿಲ್ಲಾ ಕ್ರೀಡಾಂಗಣ, ಉದ್ಯಾನ, ಕಲಾಮಂದಿರ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಜನವರಿ ವೇಳೆಗೆ ಒಂದು ಸರ್ಕಲ್‍ಗೆ ಅವರ ಹೆಸರು ನಾಮಕರಣ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    ಇದಕ್ಕೂ ಮೊದಲು ಪುನೀತ್ ಅವರ ಅಭಿಮಾನಿಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಸಿ ಬೇಡಿಕೆಗಳ ಕುರಿತು ಚರ್ಚಿಸಿದರು. ನಂತರ ನಗರದ ರಾಣಿಪೇಟೆಯಲ್ಲಿರುವ ಶಾಸಕರ ಕಚೇರಿಗೆ ತೆರಳಿ ಸಚಿವರಿಗೆ ಮನವಿ ಸಲ್ಲಿಸಿದರು.

  • ನನ್ನ ಹೇಳಿಕೆ ತಿರುಚಲಾಗಿದೆ- ಉಲ್ಟಾ ಹೊಡೆದ ಸಚಿವ ಆನಂದ್ ಸಿಂಗ್

    ನನ್ನ ಹೇಳಿಕೆ ತಿರುಚಲಾಗಿದೆ- ಉಲ್ಟಾ ಹೊಡೆದ ಸಚಿವ ಆನಂದ್ ಸಿಂಗ್

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವದ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಅರಣ್ಯ ಸಚಿವ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್, ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಕ್ಷೇತ್ರದಲ್ಲಿ ಆಯೋಜನೆಯಾದ ನನ್ನ ಇಲಾಖೆಯ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ನನ್ನ ಭಾಷಣದಲ್ಲಿ ಈ ಸರ್ಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಎಂದು ಹೇಳಿಲ್ಲ. ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂಬ ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.

    ನಾನು ಹೇಳಿಕೆ ನೀಡಿದ್ದು, ನಾನು ಈ ಇಲಾಖೆಯಲ್ಲಿ ಎಷ್ಟು ದಿವಸ ಇರುತ್ತೇನೋ, ಇಲ್ಲವೋ? ಎಂಬುದು ನನಗೆ ತಿಳಿದಿಲ್ಲ, ಕ್ಷೇತ್ರದಲ್ಲಿ ಆಯೋಜನೆಯಾದ ಇಲಾಖೆಯ ಮೊದಲ ಕಾರ್ಯಕ್ರಮವಾಗಿದ್ದರಿಂದ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇಲ್ಲಿ ತಪ್ಪದೇ ಭಾಗವಹಿಸಿದ್ದೇನೆ ಎಂದು ಹೇಳಿದ್ದೆ.

    ಸರ್ಕಾರಗಳು ಬರುತ್ತವೆ, ಹೋಗುತ್ತವೆ ಆದರೆ ಇಲಾಖೆಯ ಅಭಿವೃದ್ಧಿಯ ಜೊತೆಗೆ ಕ್ಷೇತ್ರ ಹಾಗೂ ಕ್ಷೇತ್ರದ ಜನರ ಹಿತಾಸಕ್ತಿಗಳನ್ನು ಯಾವಾಗಲೂ ಜನಪ್ರತಿನಿಧಿಗಳಾದ ನಾವು ಕಾಪಾಡಬೇಕು ಎಂಬರ್ಥದಲ್ಲಿ ಹೇಳಿದ್ದು, ನಮ್ಮ ಸರ್ಕಾರ ಪೂರ್ಣ ಅವಧಿ ಮುಗಿಸಿ, ಮುಂದಿನ ಬಾರಿಯೂ ಸಹ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ನಾನು ಮಾಧ್ಯಮ ಮಿತ್ರರಿಗೆ ಹಾಗೂ ರಾಜ್ಯದ ಜನತೆಗೆ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

    ಸಚಿವರು ಏನು ಹೇಳಿದ್ದರು?

    ಸಚಿವನಾಗಿ ನಾನು ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂಬ ಸಲಹೆ ಕೊಟ್ಟಾಗ ನಾನು ಇಲ್ಲೇ ಮಾಡಬೇಕು ಎಂದು ಹೇಳಿದ್ದೆ. ಕಾರ್ಯಕ್ರಮ ಸಣ್ಣದಾಗಿರಲಿ, ದೊಡ್ಡದಾಗಿರಲಿ ನಮ್ಮ ಕ್ಷೇತ್ರದಲ್ಲಿ ನಡೆಯಬೇಕು ಎಂದಿದ್ದೆ. ಏಕೆಂದರೆ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಾಗುವುದಿಲ್ಲ. ಈ ಒಂದು ಅವಕಾಶ ಇಲ್ಲೇ ಮಾಡೋಣ. ನನಗೆ ಸಿಕ್ಕಿರುವ ಅಧಿಕಾರ ಮೊದಲ ಅವಕಾಶವಾಗಿದ್ದು, ನಮ್ಮ ಕ್ಷೇತ್ರದಲ್ಲೇ ಕಾರ್ಯಕ್ರಮ ಆಗಲಿ ಎಂಬ ಉದ್ದೇಶದಿಂದ ಇಲ್ಲಿ ಆಯ್ಕೆ ಮಾಡಿಕೊಂಡೇ ಎಂದು ಹೇಳಿದ್ದರು.

    ಡಿಕೆಶಿ ವ್ಯಂಗ್ಯ?
    ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸರ್ಕಾರದ ಒಂದೊಂದೇ ಹುಳುಕುಗಳು ಈಗ ಹೊರಬರುತ್ತಿವೆ. ಸರ್ಕಾರ ಇರುತ್ತೋ, ಇಲ್ಲವೋ ಅಂತಾ ಅವರ ಸಚಿವರೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಹುಳುಕು ಹೊರ ಬರುತ್ತಿದ್ದಂತೆಯೇ ಏನಾಗುತ್ತದೆಯೋ ಕಾದು ನೋಡಬೇಕು ಎಂದಿದ್ದರು.

  • ಸರ್ಕಾರದ ಆಂತರಿಕ ಹುಳುಕುಗಳು ಈಗ ಹೊರಗೆ ಬರುತ್ತಿದೆ: ಡಿಕೆಶಿ

    ಸರ್ಕಾರದ ಆಂತರಿಕ ಹುಳುಕುಗಳು ಈಗ ಹೊರಗೆ ಬರುತ್ತಿದೆ: ಡಿಕೆಶಿ

    ಹುಬ್ಬಳ್ಳಿ: ಸರ್ಕಾರದ ಆಂತರಿಕ ಹುಳುಕುಗಳು ಈಗ ಹೊರಗೆ ಬರುತ್ತಿವೆ. ಸರ್ಕಾರ ಇರುತ್ತೋ, ಇಲ್ಲವೋ ಅಂತಾ ಅವರ ಸಚಿವರೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಮುಂದೆ ಕಾದು ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸದಸ್ಯತ್ವ ಅಭಿಯಾನ ಸಮಾರಂಭ ಉದ್ಘಾಟಿಸಿದ ಬಳಿಕ ಮಾತನಾಡಿದ ಡಿಕೆಶಿ, ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸರ್ಕಾರದ ಒಂದೊಂದೇ ಹುಳುಕುಗಳು ಈಗ ಹೊರಬರುತ್ತಿವೆ. ಹುಳುಕು ಹೊರ ಬರುತ್ತಿದ್ದಂತೆಯೇ ಏನಾಗುತ್ತದೆಯೋ ಕಾದು ನೋಡಬೇಕು ಎಂದರು.

    ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕಮಿಟಿ ಮಾಡಿದ್ದೇವೆ. ಅವರ ವರದಿ ಮೇಲೆ ನಾಳೆ ಫೈನಲ್ ಮಾಡುತ್ತೇವೆ. ಈಗಾಗಲೇ ಬಹಳಷ್ಟು ಜನ ಆರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಹೇಳಿದರು.

    ಡ್ರಗ್ಸ್ ಪ್ರಕರಣದಲ್ಲಿ ಸರ್ಕಾರಕ್ಕೆ ಒತ್ತಡ ಇದೆ ಅಂತ ಈಗಾಗಲೇ ಗೊತ್ತಾಗಿದೆ. ಆದ್ದರಿಂದಲೇ ಅಧಿಕಾರಿಗಳ ಎತ್ತಂಗಡಿ ಮಾಡಿದ್ದಾರೆ. ಆದರೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದರು.

  • ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು

    ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು

    ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಚಾಲಕನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಹೊಸಪೇಟೆ ನಗರದ ರಾಣಿಪೇಟೆಯ ಕಚೇರಿಯನ್ನು ಇಂದು ಸೀಲ್‍ಡೌನ್ ಮಾಡಲಾಗಿದೆ. ಸಚಿವ ಆನಂದ್ ಸಿಂಗ್ ಅವರ ಕಾರು ಚಾಲಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಸ್ವಯಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಸೋಂಕು ತಗುಲಿದ ವಾಹನ ಚಾಲಕನನ್ನು ಹೊಸಪೇಟೆ ನಗರದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರು ಚಾಲಕನ ಕುಟುಂಬ ಸದಸ್ಯರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕರು, ಸಚಿವರ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಅಲ್ಲದೆ ಸಚಿವರ ಕಚೇರಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.