Tag: ಸಚಿವರು

  • ಕ್ಯಾಬಿನೆಟ್ ಸಚಿವರ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ

    ಕ್ಯಾಬಿನೆಟ್ ಸಚಿವರ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ

    ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪಕ್ಷದ ಎಲ್ಲಾ ಕಾರ್ಯಕರ್ತರ ಶ್ರಮವಿದೆ. ಆದರೆ ಇದೀಗ ಕೆಲ ಕ್ಯಾಬಿನೆಟ್ ಸಚಿವರು ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮದೇ ಪಕ್ಷದ ಸಚಿವರ ವಿರುದ್ಧ ವಾಗ್ದಳಿ ನಡೆಸಿದ್ದಾರೆ.

    ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಆದರೆ ಕ್ಯಾಬಿನೆಟ್‍ನಲ್ಲಿರುವ ಕೆಲವು ಸಚಿವರ ವರ್ತನೆ ಸರಿಯಿಲ್ಲ. ಸಚಿವ ಸಂಪುಟದಲ್ಲಿರುವ ಕೆಲ ಸಚಿವರ ದುರಹಂಕಾದಿಂದ ವರ್ತಿಸುತ್ತಿದ್ದು, ಅವರ ವರ್ತನೆಗಳು ಸರ್ವಾಧಿಕಾರಿಯಂತೆ ಕಂಡುಬರುತ್ತಿದೆ. ಬೇರೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರಿಗೆ ಕಳಕಳಿ ಇಲ್ಲ. ಅವರು ಅವರ ಕ್ಷೇತ್ರಕ್ಕೆ ಮತ್ತು ವಿಧಾನಸೌಧದ ಮೂರನೇ ಕೊಠಡಿಗೆ ಸೀಮಿತವಾಗಿದ್ದಾರೆ. ಜನರು ಅಧಿಕಾರ ಕೊಟ್ಟದ್ದು ಜನರ ಸೇವೆಗೆ, ಲಾಭದಾಯಕ ಹುದ್ದೆ ಪಡೆಯೋದಕ್ಕೆ ಅಲ್ಲ ಎಂದು ಗುಡುಗಿದ್ದಾರೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ರೆಸಾರ್ಟ್ ನಲ್ಲಿ ಕೆಲ ಶಾಸಕರೊಂದಿಗೆ ಮಾತುಕತೆ ಮಾಡಿದ್ದೇನೆ. ಆದರೆ ಇದೀಗ ಕೆಲವು ಸಚಿವರ ದುರಹಂಕಾರ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಮಾತನಾಡ್ತೇನೆ. ಬಿಜೆಪಿ ಒಳ್ಳೆಯ ಆಡಳಿತ ನೀಡಲಿ ಎನ್ನವುದು ಜನರ ಬಯಕೆ ಆಗಿದೆ. ಅದರಂತೆ ರಾಜ್ಯದಲ್ಲಿ ಸಿಎಂ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ ಕ್ಯಾಬಿನೆಟ್ ನಲ್ಲಿ ಕೆಲವು ಸಚಿವರಿಂದ ಸರ್ಕಾರಕ್ಕೆ ಕೇಡು ಬರುತ್ತಿದೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಬೇಕಿತ್ತು ಕಾರಣಾಂತರಗಳಿಂದ ಆಗಿಲ್ಲ ಎಂದರು.

    ಕೆಲ ಕ್ಯಾಬಿನೆಟ್ ಸಚಿವರಿಗೆ ಬಿಜೆಪಿ ಶಾಸಕರು ಯಾರು ಅಂತ ಸರಿಯಾಗಿ ಹೆಸರು ಗೊತ್ತಿಲ್ಲ. ಕೆಲದಿನಗಳ ಹಿಂದೆ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಸಚಿವರ ವರ್ತನೆ ಬಗ್ಗೆ ಮಾತನಾಡಿದ್ದೆ. ಅವರು ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವ ಭರವಸೆ ಇದೆ. ದುರಹಂಕಾರಿ ಸಚಿವರಿಗೆ ನಾನು ವಿನಂತಿ ಮಾಡಲ್ಲ, ಅವರು ತಿಳಿದುಕೊಳ್ಳಬೇಕು ಈ ಸರ್ಕಾರ ಬರುವುದಕ್ಕೆ ಒಬ್ಬಿಬ್ಬರ ಪಾತ್ರ ಅಲ್ಲ, ಪ್ರತಿಯೊಬ್ಬರ ಶ್ರಮ ಇದೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಲಿ. ಯಡಿಯೂರಪ್ಪ ಅವರ ವರ್ಚಸ್ಸು, ಮೋದಿ ಅವರ ವರ್ಚಸ್ಸು ಮತ್ತು ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.

  • ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟ ಕಾಸಿಲ್ಲ ಎಂದು ಹೇಳುವ ಸರ್ಕಾರ ಸಚಿವರು ಮತ್ತು ಸಂಸದರಿಗೆ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಟೀಕೆಗೆ ಗುರಿಯಾಗಿದೆ.

    ಸಚಿವರು, ಸಂಸದರಿಗೆ ಹೊಸ ಕಾರು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಶೋರೂಂ ದರ 22 ಲಕ್ಷಕ್ಕೆ ಖರೀದಿ ಮಿತಿ ನಿಗದಿ ಮಾಡಲಾಗಿತ್ತು. ಈಗ ಶೋರೂಮ್ ದರ 23 ಲಕ್ಷಕ್ಕೆ ಖರೀದಿ ಮಿತಿ ಏರಿಕೆ ನಿಗದಿ ಪರಿಷ್ಕರಿಸಿ ಆದೇಶಿಸಲಾಗಿದೆ. 60 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.

    ಕೊರೊನಾ ಕಾಲದಲ್ಲೇ ಇದು ಎರಡನೇ ಬಾರಿ ಖರೀದಿ ದರ ಮಿತಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರೋಬ್ಬರಿ 32ಸಚಿವರು, 28 ಸಂಸದರು ಹೊಸ ಕಾರು ಖರೀದಿ ಮಾಡ್ತಾರಾ ಎನ್ನಲಾಗುತ್ತಿದೆ. 60 ಕಾರು ಖರೀದಿ ಮಾಡಿದ್ರೆ ರಾಜ್ಯದಕ್ಕೆ ಬೊಕ್ಕಸಕ್ಕೆ ಬರೋಬ್ಬರಿ 13.80 ಕೋಟಿ ರೂ. ಹೊರೆ ಬೀಳಲಿದೆ.

    ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿ ಎಂದರೆ ಕೊರೊನಾ ಕಾರಣವನ್ನು ಹೇಳುತ್ತಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲು ದುಡ್ಡಿಲ್ಲ ಎಂದು ಹೇಳುತ್ತಾರೆ. ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಯಾಗತ್ತಿಲ್ಲ. ತೆರಿಗೆ ಕಡಿಮೆ ಮಾಡಿ ತೈಲ ಬೆಲೆ ಇಳಿಸಿ ಎಂದರೂ ಕೇಳದ ಸರ್ಕಾರ ಈಗ ನಮ್ಮ ತೆರಿಗೆ ಹಣದಿಂದಲೇ ಕಾರು ಖರೀದಿಗೆ ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.


    ಸಚಿವರಿಗೆ ವಾಹನ ಬೇಕು ನಿಜ. ಆದರೆ ಸುಸಜ್ಜಿತವಾಗಿರಬೇಕು. ಆದರೆ ಐಶಾರಾಮಿಯಾಗಿರಬೇಕು ಎಂಬ ನಿಯಮವಿಲ್ಲ. ಕೋವಿಡ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕಾದ ಸರ್ಕಾರವೇ ಖರ್ಚು ಮಾಡಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

  • ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ- ಸಚಿವರ ವಿರುದ್ಧ ವಿಶ್ವನಾಥ್ ವಾಗ್ದಾಳಿ

    ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ- ಸಚಿವರ ವಿರುದ್ಧ ವಿಶ್ವನಾಥ್ ವಾಗ್ದಾಳಿ

    ಮೈಸೂರು: ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ. ಒಂದು ಸಣ್ಣ ಸಹಿಗಾಗಿ ಫೈಲ್‍ಗಳು ತಿಂಗಳುಗಟ್ಟಲೇ ಸಚಿವರ ಮುಂದೆ ಬಿದ್ದಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಿ.ಟಿ.ರವಿ ಬಳಿ ಕೆಲ ಬಿಜೆಪಿ ಶಾಸಕರು ಹೇಳಿರುವುದು ಸತ್ಯ. ಸರ್ಕಾರದಲ್ಲಿ ಫೈಲ್ ಮೂವ್ಮೆಂಟ್ ವಿಳಂಬ ಆಗುತ್ತಿದೆ. ಅದು ಸ್ವಪಕ್ಷ, ಪರಪಕ್ಷ ಅಂತೇನಿಲ್ಲ. ನನ್ನವೇ ಎಷ್ಟೋ ಫೈಲ್‍ಗಳು ಇನ್ನೂ ಕಾಯುತ್ತ ಕುಳಿತಿವೆ. ಫೈಲ್‍ಗಳು ಮುಂದಕ್ಕೆ ಹೋಗದೆ ಇರೋದರ ಅರ್ಥವೇನು? ವಾಟ್ ಈಸ್ ಇಟ್ ಮೀನ್ಸ್? ಇದರ ಉದ್ದೇಶ ಕಾಂಚಾಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಕೆಲವು ಸಚಿವರಿಂದ ಇದು ನನಗು ಅನುಭವ ಆಗಿದೆ. ತಿಂಗಳಾನುಗಟ್ಟಲೇ ಮಂತ್ರಿಗಳು ಫೈಲ್‍ಗಳನ್ನ ಕೊಳೆಸೋದು ಸರಿಯಲ್ಲ. ಮಂತ್ರಿಗಳು ಇದರಿಂದ ಎಚ್ಚೆತ್ತುಕೊಳ್ಳಬೇಕು. ನಾವೂ ಮಂತ್ರಿಗಿರಿ ಮಾಡಿದ್ದೇವೆ. ಯಾವ ಫೈಲ್, ಎಷ್ಟು ದಿನ, ಯಾರ ಬಳಿ ಇರಬೇಕು ಎಂದು ನಮಗೂ ಗೊತ್ತಿದೆ. ಇದೆಲ್ಲವೂ ಯಡಿಯೂರಪ್ಪನವರಿಗೆ ಗೊತ್ತಿದೆ. ಅವರ ಕೈಯಲ್ಲೂ ಇದನ್ನು ಸರಿ ಮಾಡಲು ಆಗುತ್ತಿಲ್ಲ. ಸಿ.ಟಿ.ರವಿ ಇದನ್ನು ಹೈಕಮಾಂಡ್ ಗಮನಕ್ಕೆ ತರುತ್ತಾರೆ ಎಂದರು.

    ಫೈಲ್ ಮೂವ್ಮೆಂಟ್ ವಿಚಾರ ಸಿದ್ದರಾಮಯ್ಯ ಕಾಲದಿಂದಲೂ ಕೈ ಮಿರಿದೆ. ಸಿದ್ದರಾಮಯ್ಯ ಯಾವ ಮಂತ್ರಿಗೂ ಲಗಾಮು ಹಾಕಿರಲಿಲ್ಲ. ಅದರ ಮುಂದುವರಿದ ಭಾಗವೇ ಇದು ಎಂದು ಸಿದ್ದರಾಮಯ್ಯ ವಿರುದ್ಧ ಸಹ ಎಚ್.ವಿಶ್ವನಾಥ್ ಹರಿಹಾಯ್ದಿದ್ದಾರೆ.

  • ಚಿಕ್ಕಮಗಳೂರು ರೆಸಾರ್ಟ್‍ನಲ್ಲಿ ಬಿಜೆಪಿಯ ನಾಲ್ವರು ಸಚಿವರು ವಾಸ್ತವ್ಯ!

    ಚಿಕ್ಕಮಗಳೂರು ರೆಸಾರ್ಟ್‍ನಲ್ಲಿ ಬಿಜೆಪಿಯ ನಾಲ್ವರು ಸಚಿವರು ವಾಸ್ತವ್ಯ!

    – ಸರ್ಕಾರ ಕೆಡವಲು ನಡೀತಿದ್ಯಾ ಪ್ಲಾನ್

    ಚಿಕ್ಕಮಗಳೂರು: ಖಾತೆ ಕಗ್ಗಂಟು ಮುಗಿಯುತ್ತಿದ್ದಂತೆ ಇದೀಗ ಬಿಜೆಪಿಯ ಮತ್ತೊಂದು ಸ್ಫೋಟಕ ಸುದ್ದಿ ಹೊರ ಬಿದ್ದಿದೆ. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆ ನೋವು ಶುರುವಾಗಿದೆ.

    ಹೌದು. ಖಾತೆ ಅಸಮಾಧಾನದ ಮಧ್ಯೆ ಇದೀಗ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯಸಭೆ ನಡೆಯುತ್ತಿದೆ. ನಿನ್ನೆ ರಾತ್ರಿಯೇ ನಾಲ್ವರು ಸಚಿವರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಅತೃಪ್ತರ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸಿ.ಪಿ ಯೋಗೇಶ್ವರ್, ಗೋಪಾಲಯ್ಯ, ಶಾಸಕ ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸದ್ಯ ಗೌಪ್ಯ ಸಭೆಯಿಂದಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯಿಂದಲೇ ಇದೀಗ ಸರ್ಕಾರ ಕೆಡವಲು ಪ್ರಯತ್ನ ನಡೀತಿದೆಯಾ ಎಂಬ ಅನುಮಾನ ಎದ್ದಿದೆ.

  • 7 ಜನರ ಖಾತೆ ಬದಲಾವಣೆ – ಹಠ ಬಿಡದೆ ಖಾತೆ ಬದಲಿಸಿಕೊಂಡ ಸಚಿವರು

    7 ಜನರ ಖಾತೆ ಬದಲಾವಣೆ – ಹಠ ಬಿಡದೆ ಖಾತೆ ಬದಲಿಸಿಕೊಂಡ ಸಚಿವರು

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಸರತ್ತು ಮಾಡಿ ಹಂಚಿಕೆಯನ್ನು ಸಹ ಮಾಡಿದ್ದರು. ಆದರೆ ಬಳಿಕ ಕೆಲ ಸಚಿವರು ಅಸಮಾಧಾನ ಹೊರ ಹಾಕಿ ಸಚಿವ ಸಂಪುಟ ಸಭೆಯನ್ನೇ ಬಹಿಷ್ಕರಿಸಿದ್ದರು. ಹೀಗಾಗಿ ಇದೀಗ 7 ಜನರ ಖಾತೆ ಬದಲಾವಣೆ ಮಾಡಲಾಗಿದೆ.

    ಪರಿಷ್ಕೃತ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ. ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣದ ಜೊತೆ ಹಜ್ ಮತ್ತು ವಕ್ಫ್ ನೀಡಲಾಗಿದೆ. ಅರವಿಂದ ಲಿಂಬಾವಳಿಯವರಿಗೆ ಅರಣ್ಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ, ಸಕ್ಕರೆ, ಆರ್.ಶಂಕರ್‍ಗೆ ತೋಟಗಾರಿಕೆ, ರೇಷ್ಮೆ, ಗೋಪಾಲಯ್ಯನವರಿಗೆ ಅಬಕಾರಿ ಹಾಗೂ ನಾರಾಯಣಗೌಡ ಅವರಿಗೆ ಯುವಜನ ಸೇವೆ ಮತ್ತು ಕ್ರೀಡೆ, ಯೋಜನೆ ಮತ್ತು ಸಾಂಖಿಕ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

    ಸಚಿವರ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ. ಆದರೆ ಡಾ.ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಸಿಕ್ಕೇ ಇಲ್ಲ. ಅರವಿಂದ ಲಿಂಬಾವಳಿಯವರಿಗೆ ಸಹ ಪರಿಸರ ಸಿಗಲಿಲ್ಲ. ಅಲ್ಲದೆ ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣವನ್ನೇ ಉಳಿಸಲಾಗಿದೆ.

    ಹಿಂದೆ ಯಾವ ಖಾತೆ ನೀಡಲಾಗಿತ್ತು?
    ಬಸವರಾಜ ಬೊಮ್ಮಾಯಿಯವರಿಗೆ ಗೃಹ ಜೊತೆಗೆ ಕಾನೂನು ಸಂಸದೀಯ, ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಮುರುಗೇಶ ನಿರಾಣಿಗೆ ಗಣಿಗಾರಿಕೆ, ಉಮೇಶ್ ಕತ್ತಿಗೆ ಆಹಾರ ಖಾತೆ, ಡಾ.ಕೆ ಸುಧಾಕರ್‍ಗೆ ಆರೋಗ್ಯ ಇಲಾಖೆ, ಎಂಟಿಬಿ ನಾಗರಾಜ್‍ಗೆ ಅಬಕಾರಿ, ಗೋಪಾಲಯ್ಯಗೆ ತೋಟಗಾರಿಕೆ ಮತ್ತು ಸಕ್ಕರೆ, ನಾರಾಯಣ ಗೌಡಗೆ ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್, ಸಿ.ಪಿ.ಯೋಗೇಶ್ವರ್‍ಗೆ ಸಣ್ಣ ನೀರಾವರಿ, ಅರವಿಂದ ಲಿಂಬಾವಳಿಗೆ ಅರಣ್ಯ, ಆನಂದ್ ಸಿಂಗ್‍ಗೆ ಪ್ರವಾಸೋದ್ಯಮ, ಪರಿಸರ, ಸಿ.ಸಿ.ಪಾಟೀಲ್‍ಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ ಜೊತೆಗೆ ಹಿಂದುಳಿದ ವರ್ಗ, ಎಸ್.ಅಂಗಾರಗೆ ಮೀನುಗಾರಿಕೆ, ಬಂದರು, ಆರ್.ಶಂಕರ್‍ಗೆ ಪೌರಾಡಳಿತ, ರೇಷ್ಮೆ, ಪ್ರಭು ಚೌಹಾಣ್‍ಗೆ ಪಶುಸಂಗೋಪನೆ ಖಾತೆಯನ್ನು ನೀಡಲಾಗಿತ್ತು.

  • ಸಚಿವರ ಹೆಸರಿನಲ್ಲಿ ನಕಲಿ ಖಾತೆ ತೆರೆದ ಆರೋಪಿ ಅರೆಸ್ಟ್!

    ಸಚಿವರ ಹೆಸರಿನಲ್ಲಿ ನಕಲಿ ಖಾತೆ ತೆರೆದ ಆರೋಪಿ ಅರೆಸ್ಟ್!

    ಮುಂಬೈ: ಸಚಿವರೊಬ್ಬರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

    ಸಚಿವರ ಹೆಸರಿನಲ್ಲಿ ನಕಲಿ ಜಾತೆ ತೆರೆದು ಬಂಧಿತನಾಗಿರವ 28 ವರ್ಷದ ಆರೋಪಿಯನ್ನು ಔರಾಂಗಬಾದ್ ಜಿಲ್ಲೆಯಲ್ಲಿ ವಾಲುಜ್‍ನಲ್ಲಿ ಬಂಧಿಸಲಾಗಿದೆ. ಈತ ಗುತ್ತಿಯ ಮೇಲ್ವೀಚಾರಕನಾಗಿ ಕೆಲಸ ಮಾಡುತ್ತಿದ್ದನು.

    ನಕಲಿ ಫೇಸ್‍ಬುಕ್ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದೇವೆ. ನಕಲಿ ಫೇಸ್‍ಬುಕ್ ಖಾತೆ ಸೃಷ್ಟಿಸಲು ಬಳಸಲಾಗಿದ್ದ ಫೋನ್ ವಶಪಡಿಸಿಕೊಂಡಿದ್ದೇವೆ. ತನಿಖೆಯನ್ನು ನಡೆಸುತ್ತೇವೆ ಎಂದು ಸೈಬರ್ ವಿಭಾಗದ ಇನ್‍ಸ್ಪೆಕ್ಟರ್ ಬಾಲಕೃಷ್ಣ ವಾಘ್ ತಿಳಿಸಿದ್ದಾರೆ.

    ಮಹರಾಷ್ಟ್ರದ ಸಚಿವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ರಚಿಸಿ, ಅದರಿಂದ ಕೆಲವು ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಏಪ್ರಿಲ್ 8ರಂದು ಪ್ರಕರಣ ದಾಖಲಿಸಿದ್ದರು.

  • ಸಾರ್ವಜನಿಕರಿಗೆ ನಿರ್ಬಂಧ, ಸಚಿವರಿಗೆ ರೆಡ್ ಕಾರ್ಪೆಟ್ – ಜಿಲ್ಲಾಡಳಿತದ ನಡೆಗೆ ಆಕ್ರೋಶ

    ಸಾರ್ವಜನಿಕರಿಗೆ ನಿರ್ಬಂಧ, ಸಚಿವರಿಗೆ ರೆಡ್ ಕಾರ್ಪೆಟ್ – ಜಿಲ್ಲಾಡಳಿತದ ನಡೆಗೆ ಆಕ್ರೋಶ

    ಚಾಮರಾಜನಗರ: ಅಮಾವಾಸ್ಯೆ ಪೂಜೆಗೆ ಹೆಚ್ಚಿನ ಜನ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ನಿನ್ನೆ ಮತ್ತು ಇಂದು ಮಲೆ ಮಹದೇಶ್ವರಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ.

    ಆದರೆ ಸರ್ಕಾರಿ ಕೆಲಸಕ್ಕೆ ತೆರಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಎಂದು ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ನಿನ್ನೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮಹದೇಶ್ವರಬೆಟ್ಟಕ್ಜೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಚಿವರು ಕುಟುಂಬ ಸಮೇತ ಹುಲಿವಾಹನ ಸೇವೆ ಸಲ್ಲಿಸಿದರು. ಸಚಿವರಿಗೋಸ್ಕರ ಹುಲಿ ವಾಹನ ಉತ್ಸವಕ್ಕೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿತ್ತು.

    ಕೃಷಿ ಸಚಿವರಿಗೆ ಮಹದೇಶ್ವರ ಬೆಟ್ಟದಲ್ಲಿ ಯಾವ ಸರ್ಕಾರಿ ಕೆಲಸವು ಇರಲಿಲ್ಲ. ಆದರೆ ಸರ್ಕಾರಿ ಕೆಲಸ ನೆಪದಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಮಾವಾಸ್ಯೆ ಪೂಜೆಗಾಗಿಯೇ ಸಚಿವ ಬಿ.ಸಿ. ಪಾಟೀಲ್ ಬಂದು ನಿನ್ನೆ ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಿದ್ದರು. ಸಚಿವರೊಡನೆ ಹಲವು ಹಿಂಬಾಲಕರು ಬಂದಿದ್ದರು. ಹಾಗಾದರೆ ಸಚಿವರಿಗೊಂದು ಸಾರ್ವಜನಿಕರಿಗೊಂದು ಕಾನೂನೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

    ಅಮಾವಾಸ್ಯೆ ಪೂಜೆಗಾಗಿ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕು ತೆರಳಲಿರುವ ಸಚಿವರು ನಂತರ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನಕ್ಕೂ ಹೋಗಲಿದ್ದಾರೆ.

  • ಶಾಸಕರು, ಸಚಿವರಿಗೆ ಪತ್ರ- ಸುರೇಶ್ ಕುಮಾರ್ ವಿರುದ್ಧ ಶೆಟ್ಟರ್ ಗರಂ

    ಶಾಸಕರು, ಸಚಿವರಿಗೆ ಪತ್ರ- ಸುರೇಶ್ ಕುಮಾರ್ ವಿರುದ್ಧ ಶೆಟ್ಟರ್ ಗರಂ

    ಹುಬ್ಬಳ್ಳಿ: ಕೊರೊನಾ ನಂತರ ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭದ ವಿಚಾರವಾಗಿ ಶಿಕ್ಷಣ ಸಚಿವರು ಎಲ್ಲ ಶಾಸಕರು, ಸಚಿವರಿಗೆ ಪತ್ರ ಬರೆದು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ವಿಚಾರಕ್ಕೆ ಕೈಗಾರಿಕಾ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗರಂ ಆಗಿದ್ದಾರೆ. ಅಲ್ಲದೆ ಶಾಲೆಗಳ ಆರಂಭ ಮಾಡೋ ವಿಚಾರದಲ್ಲಿ ಪೋಷಕರ ಅಭಿಪ್ರಾಯ ಮುಖ್ಯವಾಗಿದೆ. ನಮ್ಮದಲ್ಲವೆಂದು ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.

    ಹುಬ್ಬಳ್ಳಿಯ ನಿವಾಸದಲ್ಲಿಂದು ಮಾತನಾಡಿದ ಶೆಟ್ಟರ್, ಶಾಲೆಗಳ ಆರಂಭದ ಬಗ್ಗೆ ಪಾಲಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಪೋಷಕರಿಗೆ ನಮ್ಮ ಮಕ್ಕಳು ಸುರಕ್ಷಿತ ಎಂಬ ಭಾವನೆ ಬರುವ ತನಕ ಶಾಲೆಗಳನ್ನು ಆರಂಭಿಸೋದು ಬೇಡ. ಶಾಲೆಗಳನ್ನ ತೆರೆಯುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡವಿದೆ. ಬೇಕಿದ್ದರೆ ಕೆಲವು ಶಾಲೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಿ. ಸಾಧಕ-ಬಾಧಕ ನೋಡಿಕೊಂಡು ನಂತರ ಶಾಲೆಗಳನ್ನು ಪ್ರಾರಂಭಿಸಬಹುದು ಎಂದರು. ಇದನ್ನು ಓದಿ: ಶಾಲಾ, ಕಾಲೇಜುಗಳ ಆರಂಭ – ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಸುರೇಶ್‌ ಕುಮಾರ್‌

    ಶಾಲೆಗಳ ಆರಂಭ ಮಾಡೋ ವಿಚಾರದಲ್ಲಿ ಪಾಲಕರಲ್ಲಿ ಸದ್ಯಕ್ಕೆ ಭಯದ ವಾತಾವರಣವಿದೆ. ತಕ್ಷಣವೇ ಎಲ್ಲಾ ಶಾಲೆಗಳನ್ನು ಪ್ರಾರಂಭಿಸುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಶಾಲೆಗಳ ಆರಂಭದ ಕುರಿತು ಶಿಕ್ಷಣ ಸಚಿವರು ಬರೆದಿರುವ ಪತ್ರ ನನಗಿನ್ನೂ ತಲುಪಿಲ್ಲ. ಇಷ್ಟು ದಿನ ಶಾಸಕರು, ಸಚಿವರು ಎಲ್ಲರೂ ಅಧಿವೇಶನದಲ್ಲಿ ಇದ್ವಿ, ಅಲ್ಲಿಯೆ ಚರ್ಚಿಸಬಹುದಿತ್ತು. ಅದು ಬಿಟ್ಟು ಪತ್ರ ಬರೆದರೆ ಏನ್ ಹೇಳೋದು..? ಅಂತ ಶಿಕ್ಷಣ ಸಚಿವರ ವಿರುದ್ಧ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಕ್ಯಾಂಟೀನ್‍ನಲ್ಲಿ ಸಚಿವರು, ಶಾಸಕರ ಗಲಾಟೆ – ಹೊಡೆದಾಟದ ಹಂತಕ್ಕೆ ಹೋದ ಜಗಳ

    ಕ್ಯಾಂಟೀನ್‍ನಲ್ಲಿ ಸಚಿವರು, ಶಾಸಕರ ಗಲಾಟೆ – ಹೊಡೆದಾಟದ ಹಂತಕ್ಕೆ ಹೋದ ಜಗಳ

    ಬೆಂಗಳೂರು: ಒಂದೆಡೆ ಕೊರೊನಾ ನಡುವೆಯೂ ಇಂದಿನಿಂದ ಅಧಿವೇಶನ ಶುರುವಾಗಿದೆ. ಮತ್ತೊಂದೆಡೆ ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಮಧ್ಯೆ ಕ್ಯಾಂಟೀನ್‍ನಲ್ಲಿ ಸಚಿವರು ಮತ್ತು ಶಾಸಕರ ಗಲಾಟೆ ನಡೆದಿದೆ.

    ವಿಧಾನಸೌಧದ ಲಾಂಜ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಜಗಳ ನಡೆದಿದೆ. ಈ ಗಲಾಟೆ ಹೊಡೆದಾಟದ ಹಂತಕ್ಕೂ ಹೋಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

     

    ಕಡೂರು ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ನೀಡಬೇಕಿದ್ದ ಅನುದಾನ ತಾರತಮ್ಯವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಅವರಿಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಈ ಗಲಾಟೆ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ, ಸೋಮಣ್ಣ, ಸಿ.ಡಿ.ರವಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ.

     

    ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧನಾಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್‍ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

     

    ಶಾಸಕ-ಸಚಿವರ ಮಾತಿನ ಜಗಳ:
    ಬೆಳ್ಳಿ ಪ್ರಕಾಶ್: ನನ್ನ ಕ್ಷೇತ್ರದ ಕೆಲಸ ಮಾಡಿಕೊಡದವ ನೀನು ಎಂಥಾ ಸಚಿವ.
    ಸಚಿವ ನಾರಾಯಣ ಗೌಡ: ಆಫೀಸ್‍ಗೆ ಬಂದು ಮಾತಾಡು. ಇಲ್ಲಿ ಹೀಗೆ ಮಾತಾಡೊದಲ್ಲ. ಮೊದಲು ಮಾಸ್ಕ್ ಹಾಕ್ಕೊಂಡು ಮಾತಾಡು.
    ಬೆಳ್ಳಿ ಪ್ರಕಾಶ್: ಮಾಸ್ಕ್ ಹಾಕಿಕೊಳ್ಳುವುದು ನನಗೆ ಗೊತ್ತು. ನಿನ್ನ ಆಫೀಸ್‍ಗೆ ಏನ್ ಬರೋದು!
    ಸಚಿವ ನಾರಾಯಣ ಗೌಡ: ಸರಿಯಾಗಿ ಮಾತಾಡು. ಇಲ್ಲಿ ಹೀಗೆಲ್ಲ ಮಾತಾಡ್ತಿಯಾ, ನಾನು ಒಬ್ಬ ಸಚಿವ. ನನಗೂ ಮಾತಾಡೊಕೆ ಬರುತ್ತೆ.

     

    ಈ ಗಲಾಟೆಯಲ್ಲಿ ಸಚಿವ ನಾರಾಯಣ ಗೌಡರಿಗೆ ಏಟು ಬಿದ್ದಿದ್ದು, ಶಾಸಕ ಬೆಳ್ಳಿ ಪ್ರಕಾಶ್ ಅವರ ಹೊಟ್ಟೆಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಶಾಸಕ ಅನ್ನದಾನಿ ಬಂದು ಹೊಡೆದಾಟ ಬಿಡಿಸಿದ್ದಾರೆ. ಸಿದ್ದರಾಮಯ್ಯ ಕಣ್ಣ ಮುಂದೆಯೇ ಶಾಸಕ ಬೆಳ್ಳಿ ಪ್ರಕಾಶ್ ಮುಷ್ಟಿ ಬಿಗಿಹಿಡಿದು ನಾರಾಯಣ ಗೌಡರ ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

    ಶಾಸಕರು ಕೇಳಿದರೂ ಕ್ಷೇತ್ರಕ್ಕೆ ಅನುದಾನ ನೀಡದೆ ಸಚಿವರು ಸತಾಯಿಸುತ್ತಿರುವುದರಿಂದ ಇನ್ನೂ ಸಾಮಾನ್ಯ ಜನರು ಮನವಿ ಮಾಡಿದರೆ ಕೆಲಸ ಮಾಡಿಕೊಡುತ್ತಾರ ಎಂಬ ಪ್ರಶ್ನೆ ಎದ್ದಿದೆ.

  • ಕೊನೆಗೂ ಸಿಎಂ ದೆಹಲಿ ಯಾತ್ರೆಗೆ ಮುಹೂರ್ತ ನಿಗದಿ- ಸಚಿವಾಕಾಂಕ್ಷಿಗಳ ಎದೆ ಢವ ಢವ

    ಕೊನೆಗೂ ಸಿಎಂ ದೆಹಲಿ ಯಾತ್ರೆಗೆ ಮುಹೂರ್ತ ನಿಗದಿ- ಸಚಿವಾಕಾಂಕ್ಷಿಗಳ ಎದೆ ಢವ ಢವ

    ಬೆಂಗಳೂರು: ಕೊನೆಗೂ ಸಿಎಂ ಯಡಿಯೂರಪ್ಪನವರ ದೆಹಲಿ ಪ್ರವಾಸಕ್ಕೆ ಮುಹೂರ್ತ ನಿಗದಿಯಾಗಿದ್ದು, ಇತ್ತ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗೆಳು ಗರಿಗದರಿವೆ. ಅಲ್ಲದೆ ಸಚಿವಾಕಾಂಕ್ಷಿಗಳ ಎದೆ ಬಡಿತವನ್ನು ಹೆಚ್ಚಿಸಿದೆ.

    ಸೆಪ್ಟೆಂಬರ್ 17ರ ಗುರುವಾರದಂದು ಸಿಎಂ ಯಡಿಯೂರಪ್ಪ ದೆಹಲಿ ಭೇಟಿಗೆ ಸಮಯ ನಿಗದಿಯಾಗಿದೆ. ಎರಡರಿಂದ ಮೂರು ದಿನಗಳ ಕಾಲ ಸಿಎಂ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ವರಿಷ್ಠರನ್ನು ಹಾಗೂ ವಿವಿಧ ಸಚಿವಾಲಯಗಳ ಸಚಿವರನ್ನು ಸಿಎಂ ಭೇಟಿ ಮಾಡಲಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ ವರಿಷ್ಠರ ಜೊತೆ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ತಮ್ಮೊಂದಿಗೆ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯನ್ನು ಕೊಂಡೊಯ್ಯಲಿರುವ ಸಿಎಂ, ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಲಿದ್ದಾರೆ ಎನ್ನಲಾಗಿದೆ.

    ಸಿಎಂ ಪಟ್ಟಿಯಲ್ಲಿ ವಲಸಿಗ ಮೂವರು ಎಂಎಲ್‍ಸಿ ಗಳ ಹೆಸರಿನ ಜೊತೆಗೆ ಇಬ್ಬರು ಪಕ್ಷದ ಮೂಲ ಆಕಾಂಕ್ಷಿ ಶಾಸಕರ ಹೆಸರುಗಳಿವೆ ಎನ್ನಲಾಗಿದೆ. ಸಂಪುಟ ವಿಸ್ತರಣೆಗೆ ಸಿಎಂ ಒಲವು ತೋರಿದ್ದಾರೆ. ಆದರೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ. ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತದೆ. ವಿಸ್ತರಣೆಯೋ, ಪುನಾರಚನೆಯೋ ಎನ್ನುವುದು ವರಿಷ್ಠರ ಭೇಟಿ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಇದರೊಂದಿಗೆ 8,000 ಕೋಟಿ ರೂ. ನೆರೆ ಹಾನಿ ನಷ್ಟ ಪರಿಹಾರವನ್ನೂ ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ. ಅಲ್ಲದೆ ಬಾಕಿ ಇರುವ ವಿವಿಧ ಅನುದಾನಗಳು, ಕಾಮಗಾರಿಗಳಿಗೂ ವಿವಿಧ ಸಚಿವರ ಭೇಟಿ ಮಾಡಿ ಸಿಎಂ ಒಪ್ಪಿಗೆ ಪಡೆಯಲಿದ್ದಾರೆ. ಸಿಎಂ ಜೊತೆ ಪುತ್ರ ಬಿ.ವೈ.ವಿಜಯೇಂದ್ರ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ದೆಹಲಿ ಭೇಟಿ ಸಚಿವಾಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ. ರಾಜಕೀಯ ವಲಯದಲ್ಲೂ ಕುತೂಹಲ ಕೆರಳಿಸಿದೆ.