ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ವಾಂಖೆಡೆ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಷಿವಾರ ಘಟಕದ ಸಹಾಯಕ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ನನ್ನ ಪುತ್ರ ಹಾಗೂ ಕುಟುಂಬದ ಬಗ್ಗೆ ಜಾತಿ ವಿಚಾರವಾಗಿ ಸಚಿವರು ಸುಳ್ಳು ಸುದ್ದಿ ಹರಡಿದ್ದಾರಲ್ಲದೇ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಧ್ಯಾನ್‌ದೇವ್ ವಾಂಖೆಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಗ್ನಿ ಅವಘಡ- ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ಶಿಶುಗಳು ಸಾವು
ನಮ್ಮ ಕುಟುಂಬದ ಜಾತಿ ಬಗ್ಗೆ ಸಚಿವ ನವಾಬ್ ಮಲಿಕ್ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಮಹರ್ ಸಮುದಾಯಕ್ಕೆ ಸೇರಿದವರಾಗಿದ್ದು, ಅದು ಪರಿಶಿಷ್ಟ ಜಾತಿ ವರ್ಗಕ್ಕೆ ಬರುತ್ತದೆ ಎಂದು ವಾಂಖೆಡೆ ತಿಳಿಸಿದ್ದಾರೆ.

ಸಚಿವ ಮಲಿಕ್ ಅವರು ನಮ್ಮ ಮೇಲಿನ ದ್ವೇಷದ ಕಾರಣದಿಂದಾಗಿ ನನ್ನ ಮಗಳು ಯಾಸ್ಮೀನ್ ಅವರನ್ನು ಆನ್‌ಲೈನ್‌ನಲ್ಲಿ ಹಿಂಬಾಲಿಸುವ ಮಟ್ಟಕ್ಕೆ ಇಳಿದಿದ್ದಾರೆ. ಅಲ್ಲದೇ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವೈಯಕ್ತಿಕ ಛಾಯಾಚಿತ್ರಗಳನ್ನು ವೈರಲ್ ಮಾಡಿದ್ದಾರೆ ಎಂದು ವಾಂಖೆಡೆ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಶ್ರೀರಾಮ ಸೇನೆ ಆಗ್ರಹ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಆರ್ಯನ್ ಖಾನ್ ಬಿಡುಗಡೆ ಮಾಡಲು ಲಂಚ ನೀಡುವಂತೆ ಶಾರೂಖ್ ಅವರಿಗೆ ಬೇಡಿಕೆ ಇಟ್ಟಿದ್ದರು ಎಂದು ವಾಂಖೆಡೆ ಅವರ ವಿರುದ್ಧ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಜಾತಿ ಹೆಸರಿನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು.


































