ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದ ನಂತರ ಶಕ್ತಿಸೌಧವಾದ ವಿಧಾನಸೌಧದಲ್ಲಿ ಸಚಿವರು ನಾಪತ್ತೆಯಾಗಿದ್ದು, ಅಹವಾಲುಗಳನ್ನು ಸಲ್ಲಿಸಲು ಬರುತ್ತಿರುವ ಸಾರ್ವಜನಿಕರು ಸಚಿವರ ಖಾಲಿ ಕೊಠಡಿಗಳನ್ನು ನೋಡಿ ಪರದಾಟ ನಡೆಸುತ್ತಿದ್ದಾರೆ.
ಹೌದು, ರಾಜ್ಯದಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆಗಳು ಘೋಷಣೆಯಾಗಿದ್ದು, ಪರಿಣಾಮವಾಗಿ ರಾಜ್ಯದ ಶಕ್ತಿಸೌಧದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಯಾವೊಬ್ಬ ಸಚಿವರು ಸಹ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ.
ಸಮ್ಮಿಶ್ರ ಸರ್ಕಾರ ಸಚಿವರ ಉಪ ಚುನಾವಣೆಯ ನೆಪದಲ್ಲಿ ರಾಜ್ಯದ ಜನರನ್ನೇ ಮರೆತಿದ್ದಾರೆ. ರಾಜ್ಯದ ಶಕ್ತಿಸೌಧ ಸಂಪೂರ್ಣ ಖಾಲಿಯಾಗಿದ್ದು, ಸಚಿವರಿಲ್ಲದೇ ಕೊಠಡಿಗಳು ಬಣಗುಟ್ಟುತ್ತಿವೆ. ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲೂ ಸಹ ಯಾವೊಬ್ಬ ಸಚಿವರ ಜನರ ಸಮಸ್ಯೆಗಳನ್ನು ಆಲಿಸಲು ಸಿಗುತ್ತಿಲ್ಲ. ಚುನಾವಣಾ ನೆಪದಲ್ಲಿ ಶಕ್ತಿಸೌಧದಲ್ಲಿ ಯಾವುದೇ ಕೆಲಸಗಳು ಸಹ ಆಗುತ್ತಿಲ್ಲ. ಆದರೆ ಚುನಾವಣಾ ನೆಪ ಹೇಳುತ್ತಿರುವ ಸಚಿವರು ಯಾವುದೇ ಪ್ರಚಾರಕ್ಕೂ ಹೋಗುತ್ತಿಲ್ಲ.
ಸಚಿವರು ಈಗ ಬರ್ತಾರೆ, ಆಗ ಬರ್ತಾರೆ ಅಂತ ಸಾರ್ವಜನಿಕರು ಕಾದು ಕಾದು, ಸಪ್ಪೆ ಮೋರೆಹಾಕಿಕೊಂಡು ಮರಳುತ್ತಿದ್ದಾರೆ. ಗುರುವಾರ ವಿಧಾನಸೌಧಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನು ಬಿಟ್ಟರೇ, ಯಾವೊಬ್ಬ ಸಚಿವರು ವಿಧಾನಸೌಧದಲ್ಲಿ ಜನರಿಗೆ ಸಿಗುತ್ತಿಲ್ಲ. ಉಪ ಚುನಾವಣೆಯ ನೆಪದಿಂದಾಗಿ ಶಕ್ತಿ ಸೌಧದ ಆಡಳಿತ ಯಂತ್ರ ಕುಸಿಯುತ್ತಿದೆ. ಸಚಿವರ ಕೊಠಡಿಗಳು ಕ್ಲೋಸ್ ಆಗಿದ್ದು, ಅವರ ಸಿಬ್ಬಂದಿ ಸಹ ಯಾವೊಬ್ಬ ಸಾರ್ವಜನಿಕರ ಕಣ್ಣಿಗೂ ಸಿಗುತ್ತಿಲ್ಲ.
ಬಳ್ಳಾರಿ: ಕೂಡ್ಲಿಗಿ ಬಹಿರಂಗ ಸಭೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆಸುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಟಕ್ಕರ್ ಕೊಟ್ಟರಾ ಎಂಬ ಪ್ರಶ್ನೆಯೊಂದು ಉಪ ಕದನದಲ್ಲಿ ಸುಳಿದಾಡುತ್ತಿದೆ.
ಉಪಚುನಾವಣೆ ಪ್ರಚಾರಕ್ಕಾಗಿ ಬಳ್ಳಾರಿಗೆ ಡಿ.ಕೆ.ಶಿವಕುಮಾರ್ ಮಂಗಳವಾರ ಆಗಮಿಸುತ್ತಿದ್ದಂತೆ ಸಚಿವ ರಮೇಶ್ ಜಾರಕಿಹೊಳಿ ಕೂಡ್ಲಿಗೆ ಬಹಿರಂಗ ಸಭೆಗೆ ಗೈರು ಆಗಲು ಮುಂದಾಗಿದ್ದರು. ಈ ಬೆಳವಣಿಗೆ ಅರಿತು ಡಿ.ಕೆ.ಶಿವಕುಮಾರ್ ಅವರು ದಿನೇಶ್ ಗುಂಡೂರಾವ್ ಅವರನ್ನೇ ಕ್ಷೇತ್ರಕ್ಕೆ ಕರೆಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಅವರ ದಿಢೀರ್ ಗೈರಿನ ಕುರಿತು ಮಾಧ್ಯಮಗಳು ಪ್ರಶ್ನಿದ್ದಕ್ಕೆ, ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ನೀವು ಅವರನ್ನೇ ಪ್ರಶ್ನೇ ಮಾಡಿ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಸಚಿವರ ಕಿತ್ತಾಟವನ್ನು ಹತ್ತಿಕ್ಕಲು ದಿನೇಶ್ ಗುಂಡೂರಾವ್ ಕ್ಷೇತ್ರಕ್ಕೆ ಆಗಮಿಸಿದ್ದಾರಾ ಎನ್ನುವ ಚರ್ಚೆ ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.
ಕೂಡ್ಲಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಉಸ್ತುವಾರಿಯನ್ನು ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಮುಖಂಡರು ವಹಿಸಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಪ್ರಚಾರದ ಸಿದ್ಧತೆ ಮಾಡಿಕೊಂಡಿದ್ದ ಸಚಿವರು ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಕೂಡ್ಲಗಿ ಸಂತೆ ಮೈದಾನದಲ್ಲಿ ಇಂದು ಬಹಿರಂಗೆ ಸಭೆ ಆಯೋಜಿಸಲಾಗಿತ್ತು. ಆದರೆ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದರು ಅಂತಾ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರು ಆಗಿದ್ದಾರಂತೆ ಎನ್ನಲಾಗುತ್ತಿದೆ.
ಬಹಿರಂಗ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಮುಂದಾದ ಡಿ.ಕೆ.ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿ ರಮೇಶ್ ಜಾರಕಿಹೊಳಿ ಅವರಿಗೆ ಟಕ್ಕರ್ ನೀಡಿದ್ದಾರಂತೆ. ಇತ್ತ ಕೂಡ್ಲಗಿ ಮುಖಂಡರಿಗೆ ಇಂದು ಬೆಳಗ್ಗೆ ಕರೆ ಮಾಡಿದ ಸಚಿವರು, ಎರಡು ದಿನ ಬಿಟ್ಟು ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಇಂದಿನಿಂದ ಕೂಡ್ಲಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿ ಉಸ್ತುವಾರಿ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಬಹಿರಂಗ ಸಭೆ ನಡೆಯುತ್ತಿದೆ.
ಮೈಸೂರು: ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಕೈ ಮಂತ್ರಿಗಳ ಹೆಸರನ್ನು ಪ್ರಸ್ತಾಪ ಮಾಡದಕ್ಕೆ ಸಮ್ಮಿಶ್ರ ಸರ್ಕಾರದ ಮೂವರು ಮಂತ್ರಿಗಳು ವೇದಿಕೆಯಿಂದಲೇ ಹೊರಡನಡೆದ ಪ್ರಸಂಗ ಇಂದು ನಡೆಯಿತು.
ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಹಾಗೂ ಶಿವಶಂಕರ್ ರೆಡ್ಡಿ ಭಾಗವಹಿಸಿದ್ದರು. ಈ ವೇಳೆ ಅಧಿಕಾರಿಗಳು ಸಚಿವ ಶಿವಶಂಕರ್ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಇದರಿಂದ ಸಿಡಿಮಿಡಿಕೊಂಡ ಸಾ.ರಾ.ಮಹೇಶ್ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಅಷ್ಟೇ ಅಲ್ಲದೇ ಉದ್ಘಾಟನೆ ನೆರವೇರುತ್ತಿದ್ದಂತೆ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.
ಉದ್ಘಾಟನೆ ನೆರವೇರಿಸಿ, ನೀವೇ ಈ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಸಾರಾ ಮಹೇಶ್, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಕ್ಷಣವೇ ಕಾರ್ಯಕ್ರಮದಿಂದ ಮೂವರು ಸಚಿವರು ಹೊರ ನಡೆದು. ಸಚಿವರ ದಿಢೀರ್ ನಿರ್ಧಾರದಿಂದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಭಾರೀ ಗೊಂದಲ ಉಂಟಾಯಿತು. ಕ್ಷಣಾರ್ಧದಲ್ಲಿಯೇ ಉದ್ಘಾಟನೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ ಕುರಿತು ಯಾವುದೇ ಹೇಳಿಕೆಗಳನ್ನು ಬಹಿರಂಗವಾಗಿ ಹೇಳುವುದಕ್ಕೆ ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವರ ರಾಜೀನಾಮೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಬಿಎಸ್‍ಪಿ ಪಕ್ಷದ ಏಕೈಕ ಶಾಸಕ ಹಾಗೂ ಸಮ್ಮಿಶ್ರ ಸರ್ಕಾರದ ಸಚಿವರಾಗಿದ್ದ ಎನ್.ಮಹೇಶ್‍ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೇವಲ ಪಕ್ಷದ ಸಂಘಟನೆ ದೃಷ್ಟಿಯಿಂದ ಮಾತ್ರ. ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸೂಚನೆಯಂತೆ ಅವರು ರಾಜೀನಾಮೆ ಕೊಟ್ಟಿರಬಹುದು ಎಂದು ಹೇಳಿದರು. ಇದನ್ನೂ ಓದಿ: ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನ-ಸಚಿವ ಸ್ಥಾನಕ್ಕೆ ಎನ್. ಮಹೇಶ್ ರಾಜೀನಾಮೆ
ಬಿಎಸ್‍ಪಿಯಲ್ಲಿ ನಡೆದ ಆಂತರಿಕ ಘಟನೆ ಬಗ್ಗೆ ಹೇಳೋಕೆ ಆಗಲ್ಲ. ಹೀಗಾಗಿ ನಾನು ಎಲ್ಲಾ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷ ಸಂಘಟನೆಗೆ ಸಾಧ್ಯವಾಗ್ತಿಲ್ಲ ಎಂದು ರಾಜೀನಾಮೆ ನೀಡಿರಬಹುದು. ನನ್ನ ಜತೆಯಲ್ಲಿ ಬಿಎಸ್‍ಪಿ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾವುದೇ ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಚಿವ ಎನ್.ಮಹೇಶ್ ರಾಜೀನಾಮೆ ನೀಡಲು ಕಾರಣ ಏನು?
ಬೆಂಗಳೂರು: ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಚಿವ ಡಿಕೆ ಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಸಚಿವರಿಗೆ ಭರ್ಜರಿ ಉಪಹಾರ ಕೂಟವನ್ನು ಆಯೋಜಿಸಿದ್ದು, ಈ ವೇಳೆ ಕಾಂಗ್ರೆಸ್ ಸಚಿವರು ಪಕ್ಷದ ಮುಖಂಡರಿಗೆ ಸರ್ಕಾರ ವಿರುದ್ಧ ದೂರಿನ ಸರಮಾಲೆಯನ್ನೇ ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಸರ್ಕಾರದ ವರ್ಗಾವಣೆಯದ್ದೇ ಹೈಲೈಟ್ ಆಗಿದ್ದು, ಎಲ್ಲಾ ಸಚಿವರು ತಮ್ಮ ಇಲಾಖೆಗಳಲ್ಲಿ ಉಂಟಾಗುತ್ತಿದ್ದ ಅಧಿಕಾರಿಗಳ ವರ್ಗಾವಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಡಿಸಿಎಂ ಪರಮೇಶ್ವರ್ ಅವರೇ ಅಸಹಾಯಕತೆ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಯಲ್ಲೂ ವರ್ಗಾವಣೆ ನನಗೆ ಗೊತ್ತಾಗದೇ ನಡೆಯುತ್ತವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಡಿಸಿಎಂ ಪರಮೇಶ್ವರ್ ಮಾತಿಗೆ ಹಲವು ಸಚಿವರು ಸಾಥ್ ಕೊಟ್ಟಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ಕೆಲಸ ಮಾಡಬೇಕಾದರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಅದು ಆಗುತ್ತಿಲ್ಲ. ಇಲಾಖೆಗಳಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂದು ಹೇಳಿದ್ದಾರೆ. ಈ ವೇಳೆ ಡಿಸಿಎಂ ಎಲ್ಲವನ್ನು ಸರಿಪಡಿಸೋಣ ಎಂದು ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
Hosted a breakfast meeting of @INCKarnataka ministers at my official residence where we discussed preparations for upcoming by-elections, Lok Sabha election and aspects related to the Government. pic.twitter.com/Enz7dHNVng
ಸಿಎಂ ಪರ ಡಿಕೆಶಿ ಬ್ಯಾಟ್: ರಾಮನಗರ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಬೆಂಬಲ ನೀಡಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾಗಿದ್ದು. ಇದರ ಪ್ರತಿಫಲವಾಗಿ ಜಮಖಂಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಬೆಂಬಲ ಪಡೆಯುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಎರಡು ಕಡೆ ಮೈತ್ರಿ ಪಕ್ಷಗಳು ಗೆಲುವು ಸಾಧಿಸುವುದು ಸಾಧ್ಯ ಎಂದು ಡಿಕೆಶಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕೆಲ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಚುನಾವಣೆ ಮೈತ್ರಿ ಮುಂದುವರಿಸುವ ಕುರಿತು ಕೆಪಿಸಿಸಿ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ಅವರು ಸಭೆ ನಡೆಸಿ ಫೈನಲ್ ಮಾಡುವ ಕುರಿತು ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ವೆಂಕಟರಮಣಪ್ಪ, ಕೃಷ್ಣ ಭೈರೇಗೌಡ, ಶಿವಶಂಕರ್ ರೆಡ್ಡಿ, ಆರ್.ಶಂಕರ್, ಶಿವಾನಂದ ಪಾಟೀಲ್, ಪುಟ್ಟರಂಗಶೆಟ್ಟಿ, ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್, ಆರ್.ವಿ ದೇಶಪಾಂಡೆ, ಜಯಮಾಲಾ, ಪರಮೇಶ್ವರ್, ಯು.ಟಿ ಖಾದರ್, ರಾಜಶೇಖರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗವಹಿಸಿದ್ದರು. ಉಳಿದಂತೆ ರಮೇಶ್ ಜಾರಕಿಹೊಳಿ ಅವರು ಮಾತ್ರ ಸಭೆಗೆ ಗೈರು ಹಾಜರಿ ಆಗಿದ್ದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಸರ್ಕಾರದ ಸಚಿವರ ಯಾವುದೇ ಖಾತೆಯಲ್ಲಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಸಲಹೆಯಂತೆ ಈ ಉಪಾಹಾರ ಕೂಟ ಏರ್ಪಡಿಸಲಾಗಿದೆ. ಮುಂದಿನ ಬಾರಿ ಆರ್ ವಿ ದೇಶಪಾಂಡೆ ಮನೆಯಲ್ಲಿ ಉಪಾಹಾರ ಕೂಟ ಏರ್ಪಡಿಸಲಾಗುತ್ತದೆ. ಬಳಿಕ ಒಬ್ಬೊಬ್ಬರೇ ಸಚಿವರ ಮನೆಯಲ್ಲಿ ಏರ್ಪಡಿಸುತ್ತೇವೆ. ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಭೆಗೆ ಸಿದ್ದರಾಮಯ್ಯ ಆಗಮಿಸದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ಮನೆಯಲ್ಲಿ ಮಾಡಿದ ಸಭೆಯಲ್ಲಿ ಸಲಹೆ ಸೂಚನೆಯಂತೆ ಇಂದು ಸಭೆ ಮಾಡಿದ್ದೇವೆ. ಅವರು ತೀರ್ಮಾನದ ಮೇಲೆಯೇ ಸಭೆ ನಡೆದಿದೆ ಎಂದು ತಿಳಿಸಿದರು.
– ಕಾರವಾರದಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದ ಸಚಿವ ಎನ್.ಮಹೇಶ್
ಚಾಮರಾಜನಗರ/ಕಾರವಾರ: ಶಾಸಕರ ಬಂಡಾಯದ ಬಳಿಕ ಈಗ ಎಚ್‍ಡಿಕೆ ಸಂಪುಟದ ಮಂತ್ರಿಗಳೇ ಪರಸ್ಪರ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.
ಅವನ್ಯಾರು ಕಾಂಗ್ರೆಸ್ಸನ್ನು ಕಿತ್ತು ಹಾಕೋದಕ್ಕೆ. ನಾವು ಮನಸ್ಸು ಮಾಡಿದರೆ ಅವನನ್ನೇ ಕಿತ್ತು ಹಾಕುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ಎನ್.ಮಹೇಶ್ ವಿರುದ್ಧ ಗುಡುಗಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟದ ಸಹೋದ್ಯೋಗಿ ಎನ್.ಮಹೇಶ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರದಲ್ಲಿ 79 ಜನ ಕಾಂಗ್ರೆಸ್ ಹಾಗೂ 36 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಅವರು ಒನ್ ಮ್ಯಾನ್ ಆರ್ಮಿ. ನಾವು ಮನಸ್ಸು ಮಾಡಿದರೆ ಸರ್ಕಾರದಿಂದ ಹೊರಗೆ ಉಳಿಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈಗಷ್ಟೇ ಎನ್.ಮಹೇಶ್ ಸಚಿವರಾಗಿ ನೇಮಕಗೊಂಡಿದ್ದಾರೆ. ಅದನ್ನು ಬಳಸಿಕೊಂಡು ಸಾಧನೆ ಮಾಡಲಿ. ಆದರೆ ಹೀಗೆ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ. ಸಚಿವರ ಈ ಹೇಳಿಕೆಗಾಗಿಯೇ ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಸೂಕ್ತ ಉತ್ತರ ಕೊಡುತ್ತೇನೆ ಎಂದರು.
ಕಾರವಾರದಲ್ಲಿ ಎನ್ ಮಹೇಶ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ತಾನು ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು. ಕಾಂಗ್ರೆಸ್ಸಿಗರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ಅವರು ಕೆಳಗಿಳಿದಾಗ ನಾವು ಅವರ ಜೊತೆ ಕೈಜೋಡಿಸುತ್ತೇವೆ ಎಂದು ಹೇಳಿದರು.
ಛತ್ತಿಸ್‍ಗಢದಲ್ಲಿ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತ ರಾಜ್ಯದಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೊಡಗು, ಮಲೆನಾಡು ಭಾಗದ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ನೀತಿ ಸಂಹಿತೆಯಿಂದಾಗಿ ಮಕ್ಕಳಿಗೆ ಸೈಕಲ್ ವಿತರಣೆ ತಡವಾಗಿದ್ದು, ಶೀಘ್ರದಲ್ಲಿ ವಿತರಿಸಲಾಗುವುದು. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾತೃ ಭಾಷೆ ಜೊತೆಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಲು ಮುಖ್ಯಮಂತ್ರಿಗಳ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲಿಯೇ ಜಾರಿಗೆ ತರುತ್ತೇವೆ ಎಂದರು.
ಎನ್.ಮಹೇಶ್ ಹೇಳಿದ್ದು ಏನು?
ಚಾಮರಾಜನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸವನ್ನು ಮಾಡಿದ್ದೇವೆ ಅಂತ ಕಾಂಗ್ರೆಸ್ ವಿರುದ್ಧ ವಿಡಂಬನಾತ್ಮಕ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಗಿಡ ತುಂಬಾ ಅಪಾಯಕಾರಿ, ಹೀಗಾಗಿ ಅದನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದರು. ಆಗ ಕಾರ್ಯಕರ್ತರು ಸಾರ್ ಅದು ಪಾರ್ಥೆನಿಯಂ ಗಿಡ ಎಂದಿದ್ದಾರೆ. ಆದರೂ ಸಹ ಅದು ಕಾಂಗ್ರೆಸ್ ಗಿಡ ಅದನ್ನು ಕಿತ್ತು ಹಾಕಿದ್ದೀವಿ ಎಂದು ಹೇಳಿಕೆ ನೀಡಿದ್ದರು.
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದಕ್ಕೆ, ಹೊಡೆದರೆ ಹುಲಿಯನ್ನೇ ಹೊಡೆಯಬೇಕು, ಕತ್ತೆಯನ್ನಲ್ಲ ಎನ್ನುವುಂತೆ ಮಾಡಿ ತೋರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶಂಸಿಸಿದ್ದಾರೆ.
ನಗರದಲ್ಲಿ ರೈಲ್ವೆ ನಿಲ್ದಾಣ ಸ್ಥಳ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವ ಹಾಗೂ ನಮ್ಮ ನಿಮ್ಮಲ್ಲೆರ ಅಚ್ಚುಮೆಚ್ಚಿನ ನಾಯಕರು ಜಿ.ಟಿ.ದೇವೇಗೌಡರು. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕ ಮಾತಿನ ಶೈಲಿಯಲ್ಲಿ ಹೇಳಬೇಕಾದರೆ, ಹೊಡೆದರೆ ಹುಲಿಯನ್ನೇ ಹೊಡಿಬೇಕು ಕತ್ತೆಯನ್ನಲ್ಲ ಎನ್ನುವ ಮಾತಿನ ಹಾಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯನವರನ್ನೇ ಸೋಲಿಸಿದ್ದಾರೆ ಎನ್ನುವ ಮೂಲಕ ಜಿಟಿಡಿಯವರ ಗೆಲುವಿನ ಪರಿಯನ್ನು ಹೊಗಳಿದರು.
ಸಂಸದ ಪ್ರತಾಪ್ ಸಿಂಹ ಚುನಾವಣೆ ಮುಗಿದರೂ ಸಹ ಫಲಿತಾಂಶದ ಗುಂಗಲ್ಲಿ ಸಿದ್ದರಾಮಯ್ಯನವರ ಸೋಲಿನ ಬಗೆಯನ್ನು ವ್ಯಂಗ್ಯವಾಡುವ ಮೂಲಕ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ಮಾತಿನ ಶೈಲಿಯಲ್ಲೇ ಅವರನ್ನು ಕಿಚಾಯಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ಸಿನವರಿಗೆ ಏನಾದರೂ ತಾಕತ್ತು ಇದ್ದರೆ ಅವರ ಶಾಸಕರು ಹಾಗೂ ಸಚಿವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ಬಿಎಎಸ್‍ವೈ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟವನ್ನು ಬಿಜೆಪಿ ಮೇಲೆ ಹೇರುವ ಪ್ರಯತ್ನವನ್ನು ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ. ಅವರಿಗೇನಾದರೂ ತಾಕತ್ತು ಇದ್ದರೆ ತಮ್ಮ ತಮ್ಮ ಶಾಸಕರು ಹಾಗೂ ಸಚಿವರನ್ನು ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಪರಸ್ಪರ ಕಿತ್ತಾಡಿಕೊಂಡು, ಬಿಜೆಪಿ ಮೇಲೆ ಹೇರುವ ತಮ್ಮ ಹತಾಶೆ ಭಾವನೆಯನ್ನು ಬಿಡಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಈ ವೇಳೆ ಡಿಕೆ ಶಿವಕುಮಾರ್ ಹೇಳಿದ್ದ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ ಅನ್ನುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಶಿವಕುಮಾರ್ ಹೇಗೆ ಕಿವಿ ಮೇಲೆ ಹೂ ಇಟ್ಕೊಂಡು ಬೆಂಗಳೂರಿಗೆ ಬಂದಿಲ್ವೋ, ಅದೇ ರೀತಿ ಯಾರೂ ಕೂಡ ಹೂ ಇಟ್ಕೊಂಡು ಬೆಂಗಳೂರಿಗೆ ಬಂದಿಲ್ಲ. ಯಡಿಯೂರಪ್ಪನವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿದ್ದುಕೊಂಡೆ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಆಂತರಿಕ ಕಿತ್ತಾಟವನ್ನು ತಪ್ಪಿಸಿಕೊಳ್ಳಲು ಹೀಗೆ ಬೇರೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಮಾಡಿಲ್ಲ, ಕಳ್ಳನಂತೆ ಓಡಿಹೋಗಲ್ಲ-ಸಚಿವ ಡಿಕೆಶಿ
ಪ್ರಧಾನ ಮಂತ್ರಿ ಕಚೇರಿಯು ಆದಾಯ ತೆರಿಗೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಧಾನಿಯೊಂದಿಗೆ ಚರ್ಚಿಸುತ್ತೇವೆ ಎನ್ನುವ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಬೇಕಾದರೂ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿ. ಐಟಿ ಹಾಗೂ ಇಡಿ ಇಲಾಖೆ ಕಾರ್ಯಗಳೊಂದಿಗೆ ಅವರು ಯಾವುದೇ ಸಂಬಂಧ ಹೊಂದಿಲ್ಲವೆಂದು ಉತ್ತರಿಸಿದರು.
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಸಚಿವರು ಕೇವಲ ಟಿಎ ಮತ್ತು ಡಿಎ ಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗುತ್ತಿದ್ದಂತೆ ಜೆಡಿಎಸ್ ಸಚಿವರೆಲ್ಲರು ಫುಲ್ ಆ್ಯಕ್ಟಿವ್ ಆಗಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಆಗಸ್ಟ್ 30ಕ್ಕೆ ಸಮ್ಮಿಶ್ರ ಸರ್ಕಾರಕ್ಕೆ ಶತದಿನೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಂಪುಟದ ಸಚಿವರು ಯಾವ ಕೆಲಸಗಳನ್ನು ಮಾಡಿದ್ದಾರೆ? ಎಷ್ಟು ಸಭೆಗಳನ್ನು ತೆಗೆದುಕೊಂಡಿದ್ದಾರೆ? ಸೇರಿದಂತೆ ಎಲ್ಲ ಜೆಡಿಎಸ್ ಶಾಸಕರ ಕಾರ್ಯವೈಖರಿಯ ವರದಿಯನ್ನು ನೀಡುವಂತೆ ದೇವೇಗೌಡರು ಸೂಚಿಸಿದ್ದಾರೆ ಎನ್ನಲಾಗಿದೆ. ಶತದಿನೋತ್ಸವದ ಬಳಿಕ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಚಿವರ ಮೌಲ್ಯಮಾಪನ ನಡೆಯಲಿದೆ ಎಂದು ಹೇಳಲಾಗ್ತಿದೆ.
ಸಚಿವರ ಕಾರ್ಯವರದಿ ಪಡೆದ ಬಳಿಕ ದೇವೇಗೌಡರು, ನಾಯಕರು ಎಲ್ಲಿ ತಪ್ಪು ಮಾಡಿದ್ದಾರೆ ಎಂದು ಗುರುತಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ತಮ್ಮ ಇಲಾಖೆಗೆ ಬಿಡುಗಡೆ ಆಗಿರುವ ಅನುದಾನ ಸದುಪಯೋಗ ಮಾಡಿಕೊಳ್ಳಬೇಕೆಂಬುದರ ಬಗ್ಗೆ ತಿಳಿ ಹೇಳಲಿದ್ದಾರೆ. ಹಾಗೆಯೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಸಚಿವರಿಗೆ ದೇವೇಗೌಡರು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಲಿವೆ.
ತಿರುವನಂತಪುರ: ಕೇರಳದ ಶಿಕ್ಷಣ ಸಚಿವರಾದ ರವೀಂದ್ರನಾಥ್‍ರವರು ಪರಿಹಾರ ಸಾಮಗ್ರಿಗಳನ್ನು ಸ್ವತಃ ಹೆಗಲ ಮೇಲೆ ಹೊತ್ತುಕೊಂಡು ನಿರಾಶ್ರಿತ ಕೇಂದ್ರಗಳಿಗೆ ಸಾಗಿಸಿದ್ದಾರೆ.
ತುರ್ತು ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿ ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರು ಯಾವ ರೀತಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯ. ಇದೇ ರೀತಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಆಳುವ ಮಂದಿ ಹೇಗೆ ನಡ್ಕೋತಾರೆ ಅನ್ನೋದಕ್ಕೆ ಎರಡು ಉದಾಹರಣೆಗಳು ನಮ್ಮ ಮುಂದಿವೆ.
ಕೇರಳದ ತ್ರಿಶೂರ್ ಜಿಲ್ಲೆಯ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿಗಳು ಸಿಗದೇ ಜನ ನರಕ ಯಾತನೇ ಅನುಭವಿಸುತ್ತಿದ್ದರು. ಇದರ ಮಾಹಿತಿ ಪಡೆದ ರವೀಂದ್ರನಾಥ್‍ರವರು ಖುದ್ದು ಸ್ಥಳಕ್ಕೆ ಪರಿಹಾರ ಸಾಮಗ್ರಿಗಳ ಸಮೇತ ಭೇಟಿ ನೀಡಿದ್ದರು. ಈ ವೇಳೆ ಆಹಾರ ಸಾಮಾಗ್ರಿಗಳನ್ನು ತಮ್ಮ ಹೆಗಲ ಮೇಲೆಯೇ ಇಟ್ಟುಕೊಂಡು ನಿರಾಶ್ರಿತ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಜನರ ಕಷ್ಟಕ್ಕೆ ಸಚಿವರು ಹೆಗಲು ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಚಿವರನ್ನು ಜನ ಬಾಹುಬಲಿಯಂದೇ ಕರೆಯುತ್ತಿದ್ದಾರೆ.
This is Kerala Education Minister C Raveendranath carrying relief material on his shoulders. Happens only in Kerala. #KeralaFloodspic.twitter.com/tlwY9a7uqH
ಆದರೆ ಇದಕ್ಕೆ ಭಿನ್ನವಾದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದ್ದು ದುರಾದೃಷ್ಟವೇ ಸರಿ, ಕಳೆದ ವಾರ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣನವರು ಹಾಸನ ಜಿಲ್ಲೆಯ ರಾಮನಾಥಪುರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ನಿರಾಶ್ರಿತರಿಗೆ ಪ್ರಾಣಿಗಳಿಗೆ ಎಸೆಯುವ ರೀತಿ ಬಿಸ್ಕೆಟ್ ಪ್ಯಾಕ್‍ಗಳನ್ನು ಎಸೆಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎಂತಹುದೇ ಅನಿವಾರ್ಯ ಪರಿಸ್ಥಿತಿಯಲ್ಲಿದ್ದರು, ಆ ರೀತಿ ನಡೆದುಕೊಳ್ಳಬಾರದಿತ್ತೆಂದು ಸಾರ್ವಜನಿಕರು ಸಚಿವರ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ