Tag: ಸಚಿವರು

  • ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ಕೊಟ್ಟ ರೈತರು!

    ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ಕೊಟ್ಟ ರೈತರು!

    ಬೀದರ್: ನಾನು ಮಣ್ಣಿನ ಮಗ ಎಂದು ರೈತರ ಪರ ಬ್ಯಾಟಿಂಗ್ ಮಾಡುವ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಾರಂಜಾ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

    ವಿಧಾನಸೌದದಲ್ಲಿ ಇಂದು ಜಂಟಿ ಅಧಿವೇಶನ ನಡೆಯುತ್ತಿದ್ದು 10ಕ್ಕೂ ಹೆಚ್ಚು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಕ್ಕೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಎಚ್‍ಡಿಕೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಇದೇ ಬೆನ್ನಲ್ಲಿ ಇಂದು ಕಾರಂಜಾ ಹಿನ್ನೀರಿನಲ್ಲಿ ಭೂಮಿ ಹಾಗೂ ಮನೆ ಕಳೆದುಕೊಂಡ ಕಾರಂಜಾ ಸಂತ್ರಸ್ತರು ಇಂದು ಬೀದರ್ ಟು ಹುಮ್ನಾಬಾದ್ ರಾಜ್ಯ ಹೆದ್ದಾರಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಾ, ಸಿಎಂ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಮೂವರು ಸಚಿವರು ಹಾಗೂ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಸರ್ಪಗಾವಲು ಹಾಕಿದ್ದರು.

    ಚುನಾವಣೆ ವೇಳೆ ಶಾಸಕರು ಹಾಗೂ ಸಚಿವರು ಬೀದರ್‍ಗೆ ಬಂದು ಕಾರಂಜಾ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಹೋಗಿದ್ದೀರಿ. ಒಂದು ವೇಳೆ ಈ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲಾ ಅಂದ್ರೆ ಮೂರು ತಾಲೂಕುಗಳಿಗೆ ಕಾರಂಜಾ ನೀರು ಬಂದ್ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳ ಸರ್ಕಾರದ ‘ಯು ಟರ್ನ್’ – ಶಬರಿಮಲೆಗೆ ದೇಗುಲಕ್ಕೆ ಪ್ರವೇಶಿಸಿದ್ದು ಇಬ್ಬರೇ!

    ಕೇರಳ ಸರ್ಕಾರದ ‘ಯು ಟರ್ನ್’ – ಶಬರಿಮಲೆಗೆ ದೇಗುಲಕ್ಕೆ ಪ್ರವೇಶಿಸಿದ್ದು ಇಬ್ಬರೇ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಗೆ 51 ಮಹಿಳೆಯರು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದ ಕೇರಳ ಸರ್ಕಾರ ಇಂದು ಯು ಟರ್ನ್ ಹೊಡೆದಿದ್ದು, ದೇವಾಲಯಕ್ಕೆ ಇಬ್ಬರು ಮಾತ್ರ ಪ್ರವೇಶ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

    ಕೇರಳ ಸರ್ಕಾರ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳ ವಿಧಾನಸಭೆಗೆ ಇಂದು ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದುವರೆಗೂ ಇಬ್ಬರು ಮಹಿಳೆಯರು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ವರದಿ ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ನೀಡಿದ ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಯ್ಯಪ್ಪ ಸನ್ನಿಧಿಗೆ ಎಷ್ಟು ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಇದೇ ವೇಳೆ ಶ್ರೀಲಂಕಾ ಮಹಿಳೆಯೊಬ್ಬರು ದರ್ಶನ ಪಡೆದಿದ್ದಾರೆ ಎಂಬ ಸುದ್ದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳ ಪೊಲೀಸರು ಅಯ್ಯಪ್ಪ ಸನ್ನಿಧಿ ದರ್ಶನ ಪಡೆಯಲು ಇಷ್ಟಪಟ್ಟ ಮಹಿಳೆಯರಿಗೆ ಬಿಗಿ ಭದ್ರತೆ ನೀಡುವುದಾಗಿ ತಿಳಿಸಿದರು. ಇದರಂತೆ ಜನವರಿಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದರು.

    ಈ ಹಿಂದ ಕೇರಳ ಸರ್ಕಾರದ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿ 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು. ಆದರೆ ಈ ವರದಿಯನ್ನು ಘನ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಮಾಹಿತಿಯಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ದರ್ಶನ ಪಡೆದಿದ್ದಾಗಿ ವಿವರಿಸಲಾಗಿತ್ತು. ಅಲ್ಲದೇ ದೇಗುಲ ಪ್ರವೇಶ ಮಾಡಲು ಸುಮಾರು 16 ಸಾವಿರ ಮಂದಿ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದರು ಹಾಗೂ ಆದರಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಸಂಖ್ಯೆ 7,500 ಇತ್ತು ಎಂದು ಮಾಹಿತಿಯಲ್ಲಿ ನೀಡಲಾಗಿತ್ತು.

    ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡ ಮಹಿಳೆಯಲ್ಲಿ 51 ಮಂದಿ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ದೊರೆಯುವ ದೇವಾಲಯದ ಟಿಕೆಟ್ ಪಡೆದು, ಆಧಾರ್ ಮಾಹಿತಿ ನೀಡಿಯೇ ದರ್ಶನ ಪಡೆದಿದ್ದಾರೆ. ಆದರೆ ಭಕ್ತರ ವಯಸ್ಸಿನ ಬಗ್ಗೆ ನಿಖರ ಮಾಹಿತಿ ಪಡೆಯಲು ನಮಗೆ ಯಾವುದೇ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಟ್ಟರಂಗಶೆಟ್ಟಿ ಪರ ಬ್ಯಾಟ್ ಬೀಸಿ ಭ್ರಷ್ಟಾಚಾರಕ್ಕೂ ಜಾತಿ ಬಣ್ಣ ಬಳಿದ ಡಿ.ಕೆ.ಶಿವಕುಮಾರ್!

    ಪುಟ್ಟರಂಗಶೆಟ್ಟಿ ಪರ ಬ್ಯಾಟ್ ಬೀಸಿ ಭ್ರಷ್ಟಾಚಾರಕ್ಕೂ ಜಾತಿ ಬಣ್ಣ ಬಳಿದ ಡಿ.ಕೆ.ಶಿವಕುಮಾರ್!

    – ನಾನು ಆಟವಾಡೋ ಕಾಲ ಬಂದೆ ಬರುತ್ತೇ
    – ಅಮವಾಸ್ಯೆ, ಗ್ರಹಣ ಎಲ್ಲವೂ ಮುಗಿದ್ಮೇಲೆ ನಿಗಮ ಮಂಡಳಿ ರಚನೆ

    ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಪರ ಬ್ಯಾಟ್ ಬೀಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರಕ್ಕೂ ಜಾತಿ ಬಣ್ಣ ಬಳಿದು ಗೋಜಿಗೆ ಸಿಲುಕಿದ್ದಾರೆ.

    ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಬಳಿ ಲಕ್ಷಾಂತರ ಹಣ ಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಅದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಸುಳ್ಳು ಆರೋಪದ ಒಡ್ಡಿ ಮಂತ್ರಿ ಸ್ಥಾನಕ್ಕೆ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದ ಅವರು, ಬಿಜೆಪಿಯವರಂತೆ ಪುಟ್ಟರಂಗಶೆಟ್ಟಿ ಚೆಕ್‍ನಲ್ಲಿ ಹಣ ಪಡೆದಿಲ್ವಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮೇಲೆ ಬಿಜೆಪಿಯವರು ಆರೋಪ ಮಾಡಬೇಕು ಅಷ್ಟೇ. ಹಣಕ್ಕೂ ಪುಟ್ಟರಂಗಶೆಟ್ಟಿ ಅವರಿಗೂ ಏನು ಸಂಬಂಧ? ಯಾರೋ ಹಣ ತೆಗೆದುಕೊಂಡು ಹೋದರೆ ಅದನ್ನು ಪುಟ್ಟರಂಗಶೆಟ್ಟಿ ಅವರಿಗೆ ಹೋಲಿಸುವುದು ಸರಿಯಲ್ಲ. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಈ ಹಿಂದೆ ಬಿಜೆಪಿಯವರು ಚೆಕ್‍ನಲ್ಲಿ ಹಣ ಪಡೆದಿದ್ದರು. ಈ ಬಗ್ಗೆ ಐಟಿಯವರು ಯಾಕೆ ತನಿಖೆ ಮಾಡುತ್ತಿಲ್ಲ? ಯಾರ ಮೇಲೆ ಹೇಗೆ ಪ್ರಯೋಗ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಮುಂದಿನ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆಗೆ ಬಂದರೆ ನಾವು ಸಿದ್ಧ ಎಂದು ಗುಡುಗಿದರು.

    ಹಿಂದುಳಿದ ವರ್ಗಕ್ಕೆ ಸೇರಿದ ಪುಟ್ಟರಂಗಶೆಟ್ಟಿ ಅವರು ಮಂತ್ರಿಯಾಗಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಹಣ ಪತ್ತೆ ಕುರಿತು ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಸಚಿವರು, ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ನನ್ನ ವಿರುದ್ಧ ಬಿಜೆಪಿಯವರು ಆರೋಪ ಮಾಡಿದ್ದರು. ನಾವು ಚರ್ಚೆ ಮಾಡಲು ಬಹಿರಂಗ ಸಭೆ ಕರೆದಿದ್ದೆವು. ಆದರೆ ಬಿಜೆಪಿಯವರೇ ಚರ್ಚೆಗೆ ಬರದೆ ಹಿಂದೆ ಸರಿದದರು ಎಂದು ವ್ಯಂಗ್ಯವಾಗಡಿದ ಸಚಿವರು, ನಾನು ಆಟ ಆಡುವ ಕಾಲ ಬಂದೆ ಬರುತ್ತದೆ ಎಂದು ಗುಡುಗಿದರು.

    ನಿಗಮ ಮಂಡಳಿ ನೇಮಕ ಆದೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಹಿಂದೂ ಸಂಸ್ಕೃತಿಯವರು. ಅಮವಾಸ್ಯೆ, ಗ್ರಹಣ ಎಲ್ಲವೂ ಆದ್ಮೇಲೆ ನಿಗಮ ಮಂಡಳಿ ರಚನೆ ಮಾಡಲಾಗುತ್ತದೆ. ನಿಗಮ ಮಂಡಳಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಒಮ್ಮತ ಸಿಕ್ಕಿದೆ ಎಂದರು.

    ಲೋಕಸಭಾ ಚುನಾವಣೆ ಕ್ಷೇತ್ರಗಳ ಹಂಚಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಜೆಡಿಎಸ್ 12 ಸೀಟ್ ಕೇಳಿದ್ದು ತಪ್ಪೇನಲ್ಲ. ಅವರಿಗೂ ಆಸೆ ಇರುತ್ತದೆ. ಆಸೆ ಪಡೋದು ತಪ್ಪೇನ್ರಿ? 28 ಕ್ಷೇತ್ರದಲ್ಲೂ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳೇ ಇರುತ್ತಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ಧಾರವಾಡ: ವಿಧಾನ ಸೌಧದ ವೆಸ್ಟ್ ಗೇಟ್ ಬಳಿಯ ರಕ್ಷಣಾ ಸಿಬ್ಬಂದಿಗೆ ತಪಾಸಣೆ ವೇಳೆ ಭಾರೀ ಮೊತ್ತದ ಹಣ ಸಿಕ್ಕಿರುವುದು ಭ್ರಷ್ಟಾಚಾರಿಗೆ ಎಷ್ಟು ಧೈರ್ಯವಿದೆ ಎನ್ನುವುದನ್ನು ತೋರಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸೌಧದ ಬಳಿ ಹಣ ಸಿಕ್ಕಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. ಆದರೆ ಇದು ಭ್ರಷ್ಟಾಚಾರದ ವಿಚಾರವಲ್ಲ. ಭ್ರಷ್ಟಾಚಾರಿಗಳಿಗೆ ಎಷ್ಟು ಧೈರ್ಯವಿದೆ ಎನ್ನುವುದು ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಂತ್ರಿಗಳ ಆಪ್ತ ಸಹಾಯಕರೇ ಘಟನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು. ಇದರಲ್ಲಿ ಮಂತ್ರಿಗಳದ್ದು ಎಷ್ಟಿದೆ ಎಂಬುವುದು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಮಂತ್ರಿಗಳ ಪಿಎ ಗಳಿಗೆ ಅಷ್ಟು ಹಣ ಯಾರು ಕೊಡೋದಿಲ್ಲ. ಇದರಲ್ಲಿ ದೊಡ್ಡವರ ಕೈವಾಡವಿದೆ ಎಂದು ಅನ್ನಿಸುತ್ತದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಯಾರ ಕೈವಾಡವಿದೆ ಎನ್ನುವುದು ತಿಳಿಯಬೇಕಿದೆ ಆಗ್ರಹಿಸಿದರು. ಇದನ್ನು ಓದಿ: ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಈ ಘಟನೆಯ ಮೂಲಕ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಎಂಬುವುದು ತಿಳಿಯುತ್ತದೆ. ವಿಚಾರಣೆ ಮಾಡದೇ ಇದ್ದರೆ, ಅದು ಬೇರೆ ಆರ್ಥ ಪಡೆದುಕೊಳ್ಳುತ್ತೆ ಎಂದರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವುದೇ ಖಾತೆ ನೀಡದೆ ಸಚಿವ ಸ್ಥಾನ ಕೊಟ್ಟರೂ ನನಗೆ ಓಕೆ : ದೇಶಪಾಂಡೆ

    ಯಾವುದೇ ಖಾತೆ ನೀಡದೆ ಸಚಿವ ಸ್ಥಾನ ಕೊಟ್ಟರೂ ನನಗೆ ಓಕೆ : ದೇಶಪಾಂಡೆ

    ಬೆಂಗಳೂರು: ಖಾತೆ ಹಂಚಿಕೆಯ ವಿಚಾರವಾಗಿ ಕಾಂಗ್ರೆಸ್ ನಾಯಕರು ಹಾಗೂ ಸಚಿವರ ನಡುವೆ ಬಿಗ್ ಫೈಟ್ ಆರಂಭವಾಗಿದ್ದು, ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರು ನಯವಾಗಿ ಹಿಂದಕ್ಕೆ ಸರಿದಿದ್ದಾರೆ.

    ವಿಧಾನಸೌಧದಲ್ಲಿ ನಡೆದ ಕಂದಾಯ ಇಲಾಖೆಯ ಸುದ್ದಿಗೋಷ್ಠಿಯ ಬಳಿಕ ಮಾತನಾಡಿದ ಸಚಿವರು, ನನ್ನ ಬಳಿ ಇರುವ ಯಾವುದೇ ಖಾತೆ ಹಿಂಪಡೆದರೂ ನನಗೆ ಬೇಜಾರಿಲ್ಲ. ನನಗೆ ಇಂತಹದ್ದೇ ಖಾತೆ ಕೊಡಿ ಅಂತ ನಾನು ಕೇಳಿರಲಿಲ್ಲ. ಯಾವುದೇ ಖಾತೆ ಕೊಟ್ಟರು ನಾನು ನಿಭಾಯಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

    ಒಂದು ವೇಳೆ ಯಾವುದೇ ಖಾತೆ ನೀಡದೆ ಸಚಿವ ಅಂದ್ರು ನನಗೆ ಯಾವುದೇ ಸಮಸ್ಯೆ ಇಲ್ಲ ಅಂದ್ರು ಎಂದು ನಗೆ ಹರಿಸಿದ ಸಚಿವರು, ನನ್ನ ಬಳಿ ಇರುವ ಯಾವ ಖಾತೆಯನ್ನು ವಾಪಸ್ ಪಡೆಯಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ರಚನೆಯಾಗಿದ್ದರೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಇರುವುದರಿಂದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಬೆಳಗ್ಗೆಯಿಂದ ಸಭೆಯಲ್ಲಿದ್ದೇನೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಇಂದಿನ ಬೆಳವಣಿಗೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

    ದೇಶಪಾಂಡೆಗೆ ಕೈಗಾರಿಕಾ ಖಾತೆಯನ್ನು ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತಾರೆ. ಹೀಗಾಗಿ ಅವರಿಗೆ ಕೈಗಾರಿಕಾ ಖಾತೆ ಕೊಡಬೇಕು ಎಂದು ಜನರು ಹೇಳುತ್ತಾರೆ ಎನ್ನುವ ಮೂಲಕ ಕೆ.ಜೆ. ಜಾರ್ಜ್ ಖಾತೆಯ ಬಗ್ಗೆ ಆಸೆ ವ್ಯಕ್ತಪಡಿಸಿದ ಅವರು, ಎಲ್ಲ ಖಾತೆಗಳು ಉತ್ತಮವಾಗಿದ್ದು, ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಬಹುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಿಎಂಗೂ ಬೇಸರತಂತು ಸಚಿವರ ಕಿತ್ತಾಟ!

    ಮಾಜಿ ಸಿಎಂಗೂ ಬೇಸರತಂತು ಸಚಿವರ ಕಿತ್ತಾಟ!

    -ರಮೇಶ್ ಜಾರಕಿಹೊಳಿ ವಿಚಾರ ಬಿಟ್ಟು ಬಿಡಿ, ಬ್ಯಾರೆ ಏನಾದ್ರು ಕೇಳಿ

    ಬಾಗಲಕೋಟೆ: ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನಡುವಿನ ವೈಮನಸ್ಸು ಇದ್ದದ್ದೆ ಎನ್ನುವ ಮಟ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಬದಾಮಿಗೆ ಭೇಟಿ ನೀಡಿ ಕ್ಷೇತ್ರದ ಜನರ ಸಮಸ್ಯೆ ಆಲಿಸಿದರು. ಈ ವೇಳೆ ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ಬೇರೆ ವಿಚಾರ ಕೇಳ್ರಿ… ರಮೇಶ್ ಜಾರಕಿಹೊಳಿ ವಿಚಾರ ಬಿಟ್ಟು ಬಿಡಿ. ಬೇರೆ ಇನ್ನೇನಾದರು ಕೇಳ್ರಿ ಅಂತ ಅಮಾಧಾನ ಹೊರಹಾಕಿದ್ದಾರೆ.

    ಸಚಿವರ ಮುನಿಸು ಏಕೆ?
    ಬೆಳಗಾವಿ ಜಿಲ್ಲಾ ರಾಜಕೀಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಅಸಮಾಧಾನ ಉಂಟಾಗಿತ್ತು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಪ್ರವೇಶ ಮಾಡಿದ್ದರು. ಇದರಿಂದ ಕೊಪಗೊಂಡ ರಮೇಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ನಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಟಾಂಗ್ ಕೊಟ್ಟಿದ್ದರು.

    ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿಯೂ ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಮುನಿಸು ಮತ್ತಷ್ಟು ಹೆಚ್ಚಾಗಿತ್ತು. ಈ ಇಬ್ಬರ ಸಚಿವರ ವೈಮನಸ್ಸು ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ತಲ್ಲಣಕ್ಕೆ ಒಳಗಾಗಿದ್ದರು.

    ಬೆಳಗಾವಿ ಅಧಿವೇಶದ ವೇಳೆ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ಶಾಸಕರು ಹಾಗೂ ಸಚಿವರಿಗೆ ಪ್ರತಿವರ್ಷ ಔತಣಕೂಟ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಕೈಬಿಟ್ಟಿದ್ದು ಚರ್ಚೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಸಚಿವ ಡಿ.ಕೆ.ಶಿವಕುಮಾರ್ ಔತಣಕೂಟ ಆಯೋಜಿಸಿ ಎಲ್ಲರಿಗೂ ಆಮಂತ್ರಣ ನೀಡಿದ್ದರು. ನಾನು ಮಾತ್ರ ಅಲ್ಲಿಗೆ ಹೋಗಲ್ಲ, ಹೋಗಲ್ಲ, ಹೋಗಲ್ಲ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಪುಟದ ನಾಲ್ವರು ಹಾಲಿ ಸಚಿವರಿಗೆ ಕೈ ನಾಯಕರಿಂದ ಕೋಕ್?

    ಸಂಪುಟದ ನಾಲ್ವರು ಹಾಲಿ ಸಚಿವರಿಗೆ ಕೈ ನಾಯಕರಿಂದ ಕೋಕ್?

    ಬೆಳಗಾವಿ: ಸಂಪುಟ ವಿಸ್ತರಣೆಯಲ್ಲಿ ನಮಗೂ ಸಚಿವ ಸ್ಥಾನ ಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಾಲ್ವರು ಹಾಲಿ ಶಾಸಕರನ್ನು ಕೈ ಬಿಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಮೂಲಕ ಡಿಸೆಂಬರ್ 22ರಂದು ನಡೆಯುವುದು ಸಂಪುಟ ವಿಸ್ತರಣೆಯೋ? ಅಥವಾ ಪುನರಚನೆಯೋ ಎನ್ನುವ ಪ್ರಶ್ನೆ ಶುರುವಾಗಿದೆ. ಸಂಪುಟ ಪುನರ್ ರಚನೆ ಮಾಡುವಂತೆ ಕಾಂಗ್ರೆಸ್‍ನ ಕೆಲವು ಹಿರಿಯ ಶಾಸಕರ ಪಟ್ಟು ಹಿಡಿದಿದ್ದಾರಂತೆ. ಹೀಗಾಗಿ ಅವರ ಒತ್ತಡಕ್ಕೆ ಮಣಿದ ನಾಯಕರು, ನಾಲ್ವರು ಸಚಿವರ ಹೆಸರನ್ನು ಮಂತ್ರಿಗಿರಿಯಿಂದ ಕೈಬಿಡುವ ಪಟ್ಟಿಗೆ ಸೇರಿಸಿದ್ದಾರೆ ಎನ್ನಲಾಗಿದೆ.

    ಯಾರೆಲ್ಲ ಸಂಪುಟದಿಂದ ಔಟ್:
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್, ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಕೈ ನಾಯಕರು ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಮಂತ್ರಿಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಕಳುಹಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿ ಮಾಹಿತಿ ಲಭಿಸಿದೆ.

    ಸಂಪುಟ ಪುನಾರಚನೆಯ ಕುರಿತು ಡಿಸೆಂಬರ್ 21ರಂದು ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಚರ್ಚೆ ನಡೆಸಿ ಯಾರಿಗೆ ಮಂತ್ರಿಗಿರಿ ನೀಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

    ಸಂಪುಟ ವಿಸ್ತರಣೆ ವಿಚಾರ ಹೊರ ಬೀಳುತ್ತಿದ್ದಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿದಂತೆ ಅನೇಕರು ಮಂತ್ರಿಗಿರಿಗಾಗಿ ಲಾಭಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಣದ ನಾಯಕರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಸಚಿವರ ಮೇಲೆ ಅಸಮಾಧಾನ ಹೊರ ಹಾಕಿದ ಬಸವರಾಜ ಹೊರಟ್ಟಿ

    ಕಾಂಗ್ರೆಸ್ ಸಚಿವರ ಮೇಲೆ ಅಸಮಾಧಾನ ಹೊರ ಹಾಕಿದ ಬಸವರಾಜ ಹೊರಟ್ಟಿ

    ಬೆಳಗಾವಿ: ಕಳೆದ ಸರ್ಕಾರದ ಮಂತ್ರಿಗಳು ಕೇವಲ ಜನರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಅದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇಂದು ಬೆಳಗಾವಿಯ ಸುವರ್ಣ ಸೌಧದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸಚಿವೆ ಜಯಮಾಲಾ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ನಿಮ್ಮ ಪರ 4 ಮುಖಂಡರು ಕೂಡ ಮನವಿಯೊಂದಿಗೆ ಬನ್ನಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡೋಣ ಎಂದು ಆಶ್ವಾಸನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರದ ಸಚಿವರು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಬೇಕು. ಆದರೆ ಕಳೆದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಕೇವಲ ಆಶ್ವಾಸನೆ ಕೊಟ್ಟಿದ್ದಾರೆ ಅಷ್ಟೇ. ಮಾಜಿ ಸಚಿವೆ ಉಮಾಶ್ರೀ ಅವರು ಕೂಡ ಆಶ್ವಾಸನೆ ಕೊಟ್ಟು ಹೋದರು ಎಂದು ಪರೋಕ್ಷವಾಗಿ ಈ ಹಿಂದಿನ ಕಾಂಗ್ರೆಸ್ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದರು.

    ಸಚಿವ ಸ್ಥಾನ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ಪಡೆಕೊಳ್ಳಲು ನನ್ನ ಬಳಿ ಏನೂ ಇಲ್ಲಾ ಪಕ್ಷದ ವರಿಷ್ಠರಾದ ದೇವಗೌಡ ಹಾಗೂ ಕುಮಾರಸ್ವಾಮಿ ಅವರ ಬಳಿ ಇದೆ. ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ಅದ್ದರಿಂದ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಈಗಿನ ರಾಜಕೀಯ ವ್ಯವಸ್ಥೆಯೇ ಸರಿಯಾಗಿಲ್ಲ ಎಂದರು. ಬಳಿಕ ಕುಮಾರಸ್ವಾಮಿ ಮಧ್ಯ ಪ್ರದೇಶ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಕೂಡ ಅನೇಕ ಬಾರಿ ಸದನ ತಪ್ಪಿಸಿ ಹೋಗಿದ್ದಾರೆ. ಅದರಂತೆ ಸಿಎಂ ಕುಮಾರಸ್ವಾಮಿ ಸದನ ತಪ್ಪಿಸಿ ಹೋಗಿದ್ದು ತಪ್ಪೇನಿಲ್ಲ. ಆದರೆ ಪದೇ ಪದೇ ಇದು ಪುನರಾವರ್ತನೆ ಆಗಬಾರದು ಅಷ್ಟೇ ಎಂದರು.

    ಬೆಳಗಾವಿಯಲ್ಲಿ ಅಧಿವೇಶನ ಇನ್ನೂ ಎರಡು ದಿನ ನಡೆಯಬೇಕು ಎಂಬ ಆಸೆ ನನಗೂ ಇದೆ. ಸದನ ಆರಂಭದಲ್ಲೇ ನಾನು ಈ ಕುರಿತು ಚರ್ಚೆ ನಡೆಸಿದ್ದೆ. ಆದರೆ ನನ್ನ ಮಾತು ಯಾರು ಕೇಳುತ್ತಿಲ್ಲ ಎಂದು ತಮ್ಮ ಅಸಹಾಯಕತೆ ಹೊರ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    -ಪ್ರತಿಪಕ್ಷದ ಅಸ್ತ್ರವಾಗಲಿದೆ ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ
    -ಶಾಸಕರಿಗೆ ಮಧ್ಯಾಹ್ನದ ಊಟ, ವಸತಿ ವ್ಯವಸ್ಥೆ ಅಷ್ಟೇ

    ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಅಧಿವೇಶನ ಆರಂಭವಾಗಲಿದ್ದು, ಅನೇಕ ವಿಷಯಗಳ ಚರ್ಚೆಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

    ರೈತರ ನೂರೆಂಟು ಸಮಸ್ಯೆಗಳ ನಡುವೆ ಅಧಿವೇಶನ ನಡೆಸುತ್ತಿದ್ದು, ಮೈತ್ರಿ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಅಧಿವೇಶನವು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗೆ ವೇದಿಕೆಯಾಗಲಿದೆ. ರೈತರು ಮತ್ತು ಕಬ್ಬು ಬೆಳೆಗಾರರ ಸಮಸ್ಯೆ, ಸಾಲಮನ್ನಾ ವಿಳಂಬ, ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷ ಬಿಜೆಪಿವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷ ಬಿಜೆಪಿ ಅಸ್ತ್ರಗಳಿಗೆ ತಕ್ಕ ಪ್ರತಿ ಅಸ್ತ್ರ ಹೂಡಲು ಸರ್ಕಾರವೂ ಸಜ್ಜುಗೊಂಡಿದೆ.

    ಸುವರ್ಣಸೌಧದ ಎದುರು ರೈತರು, ಕಬ್ಬು ಬೆಳೆಗಾರರು ಹಾಗೂ ಉತ್ತರ ಕರ್ನಾಟಕದ ವಿವಿಧ ಮಠಾಧೀಶರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಪಕ್ಷ ಬಿಜೆಪಿ ನಾಯಕರೂ ಈ ಪ್ರತಿಭಟನೆ ಬೆಂಬಲಿಸಿದ್ದಾರೆ. ಹೀಗಾಗಿ ಪ್ರತಿಭಟನಾಕಾರರಿಗೆ ಸರ್ಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ಮೈತ್ರಿ ಸರ್ಕಾರವು ಮೊದಲ ದಿನವೇ ಭಾರೀ ಪ್ರತಿಭಟನೆಯ ಶಾಕ್ ಎದುರಿಸಬೇಕಾಗುತ್ತದೆ.

    ಅಧಿವೇಶನ ನಿರ್ವಹಣೆಗೆ ಸೂಕ್ತ ಭದ್ರತೆ ಒದಗಿಸಿದ್ದು, 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಎದುರಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಸುವರ್ಣಸೌಧದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ.

    ವಿಶೇಷಾಧಿಕಾರಿ ನೇಮಕ:
    ಅಧಿವೇಶನ ಪಾರದರ್ಶಕವಾಗಿರಲು ಹಾಗೂ ಸರ್ಕಾರದ ಹಣ ದುರುಪಯೋಗವಾಗದಿರಲು ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಲಾಪ ಹೊರಗಿನ ನಿರ್ವಹಣಾ ಸಮಿತಿಗಳು ಪ್ರತಿಯೊಂದು ಖರ್ಚಿಗೂ ಉಜ್ವಲ್ ಕುಮಾರ್ ಘೋಷ್ ಅವರ ಮೂಲಕವೇ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

    ದುಂದು ವೆಚ್ಚಕ್ಕೆ ಕತ್ತರಿ:
    ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಆಶಯದಂತೆ ಈ ಬಾರಿ ಅಧಿವೇಶನದಲ್ಲಿ ಅನಗತ್ಯ ವೆಚ್ಚ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ವೆಚ್ಚದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಅಧಿವೇಶನದಲ್ಲಿ ಶಾಸಕರ ಊಟದ ಮೆನು ಬದಲಾಯಿಸಲಾಗಿದೆ. ಹಿಂದಿನ ಅಧಿವೇಶನಗಳಂತೆ ಇಲ್ಲಿಯ ಊಟದಿಂದ ಆರೋಗ್ಯದಲ್ಲಿ ಏರುಪೇರು ಆಗದಿರಲು ಆಯಾ ಭಾಗದ ಊಟದ ವ್ಯವಸ್ಥೆ ಮಾಡಲಾಗಿದೆ.

    ಅಧಿವೇಶನದಲ್ಲಿ ಭಾಗವಹಿಸುವ ಶಾಸಕರಿಗೆ ಸರ್ಕಾರ ಈ ಬಾರಿ ಕೇವಲ ಮಧ್ಯಾಹ್ನದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬೆಳಗಿನ ತಿಂಡಿ ಮತ್ತು ರಾತ್ರಿ ಊಟವನ್ನು ಶಾಸಕರು ತಮಗೆ ಸಿಗುವ ಭತ್ಯೆಯಲ್ಲಿಯೇ ಸೇವಿಸಬೇಕು. ತಮ್ಮ ಪಿಎ, ಗನ್ ಮ್ಯಾನ್ ಗಳು, ಡ್ರೈವರ್ ಗಳ ಊಟಕ್ಕೂ ಶಾಸಕರೇ ಭರಿಸಬೇಕು. ಅಷ್ಟೇ ಅಲ್ಲದೆ ಶಾಸಕರಿಗೆ ಮಾತ್ರ ರೂಂ ವ್ಯವಸ್ಥೆ ಮಾಡಲಾಗಿದೆ.

    ಸಚಿವಾಲಯ ಶಿಫ್ಟ್:
    ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ಪರಿಷತ್‍ನ ಎರಡೂ ಸಚಿವಾಲಯ ಸುವರ್ಣಸೌಧಕ್ಕೆ ಶಿಫ್ಟ್ ಆಗಿವೆ. ಸುಮಾರು 300 ಸಿಬ್ಬಂದಿ ಶನಿವಾರದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಕೆಲಸ ಆರಂಭಿಸಿದ್ದಾರೆ. ಅಧಿವೇಶನದಲ್ಲಿ ಸುಮಾರು ಐದು ಸಾವಿರ ಅಧಿಕಾರಿ ವರ್ಗ, ಶಾಸಕರು ಹಾಗೂ ಪತ್ರಕರ್ತರಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ನಿಯೋಜಿತರಾಗುವ ಕನಿಷ್ಠ ಪೊಲೀಸ್ ಸಿಬ್ಬಂದಿಗೂ ಈ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಡೀ ಅಧಿವೇಶನದ ವೆಚ್ಚವನ್ನು 17.57 ಕೋಟಿ ರೂ. ಗೆ ನಿಗದಿಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುದಾನ ವಿಚಾರದಲ್ಲಿ ಸಚಿವ ರೇವಣ್ಣಗೆ ಟಾಂಗ್ ಕೊಟ್ಟ ಜಮೀರ್ ಅಹ್ಮದ್

    ಅನುದಾನ ವಿಚಾರದಲ್ಲಿ ಸಚಿವ ರೇವಣ್ಣಗೆ ಟಾಂಗ್ ಕೊಟ್ಟ ಜಮೀರ್ ಅಹ್ಮದ್

    -ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ್ರೆ ಆಹಾರ ಇಲಾಖೆ ಆಯುಕ್ತರೇ ಸಸ್ಪೆಂಡ್

    ಬೆಂಗಳೂರು: ಲೋಕೋಪಯೋಗಿ ಸಚಿವ ರೇವಣ್ಣ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿ ಹೆಚ್ಚು ಅನುದಾನ ಪಡೆಯುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಸಚಿವರು ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಮೀರ್ ಅಹಮದ್ ಅವರು, ಮೂರು ಜಿಲ್ಲೆಗೆ ಮಾತ್ರ ಅನುದಾನ ಬಿಡುಗಡೆ ಎನ್ನುವುದು ಸರಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲಾ ಜಿಲ್ಲೆಗಳಿಗೂ ಸಮಾನ ಅನುದಾನ ಹಂಚಿಕೆ ಆಗುತ್ತಿದೆ. ಸಚಿವ ರೇವಣ್ಣ ಅವರಿಗೆ ಹಾಸನ ಜಿಲ್ಲೆಯ ಮೇಲೆ ಹೆಚ್ಚು ಪ್ರೀತಿ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನ ಪಡೆಯುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

    ನಾನು ಕೂಡಾ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕು ಅಂತ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಮುಂದಿನ ಕ್ಯಾಬಿನೆಟ್‍ನಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇನೆ. ರೇವಣ್ಣ ಅವರಿಗೆ ಮಾತ್ರ ಹೆಚ್ಚು ಅನುದಾನ ಕೊಡುತ್ತಾರೆ ಎನ್ನುವ ಆರೋಪ ಸುಳ್ಳು ಎಂದು ತಿಳಿಸಿದರು.

    ಎಲ್ಲಾ ಜಿಲ್ಲೆಗಳ ಸಭೆ ಮಾಡಿದ್ದು, ಅನಿಲ ಭಾಗ್ಯ ಯೋಜನೆಗೆ 30 ಲಕ್ಷ ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 1 ಲಕ್ಷ ಜನರಿಗೆ ಯೋಜನೆ ತಲುಪಿಸಲು ಸಿದ್ಧತೆ ನಡೆದಿದೆ. ಪ್ರಧಾನಮಂತ್ರಿ ಉಜ್ವಲ್ ಯೋಜನೆ ಅಡಿ ಬಂದಿದ್ದ 31 ಸಾವಿರ ಅರ್ಜಿಗಳನ್ನು ಕೈಬಿಡಲಾಗಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 15ರೊಳಗಾಗಿ 1 ಲಕ್ಷ ಜನ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

    ನ್ಯಾಯಬೆಲೆ ಅಂಗಡಿ ಬಯೋಮೆಟ್ರಿಕ್ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಲಿಖಿತ ದಾಖಲೆ ಕೊಡುವ ವ್ಯವಸ್ಥೆಯಿಂದ ಅಧಿಕಾರಿಗಳು ಸುಮ್ಮನೆ ಬಿಲ್ ಮಾಡುತ್ತಿದ್ದರು. ಬಯೋಮೆಟ್ರಿಕ್ ಅಳವಡಿಸುವುದರಿಂದ ಇಲಾಖೆಗೆ 580 ಕೋಟಿ ರೂ. ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಬಿಎಸ್‍ಎನ್‍ಎಲ್ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಂದ ಬಯೋಮೆಟ್ರಿಕ್ ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಪ್ರಾಯೋಗಿಕವಾಗಿ ಶಿವಮೊಗ್ಗದ ಖಾಸಗಿ ಕಂಪನಿಗೆ ಬಯೋಮೆಟ್ರಿಕ್ ಅಳವಡಿಕೆ ಮಾಡಲು ಅವಕಾಶ ನೀಡಲಾಗಿದೆ. ಇಲ್ಲಿ ಯಶಸ್ವಿಯಾದರೆ ಹಂತ ಹಂತವಾಗಿ ರಾಜ್ಯದಲ್ಲಿ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಬಿಪಿಎಲ್ ಕಾರ್ಡ್ ಗಾಗಿ 6.26 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸುಮಾರು 1 ಕೋಟಿ ಬಿಪಿಎಲ್ ಕಾರ್ಡ್ ಚಾಲ್ತಿಯಲ್ಲಿವೆ. ನಿತ್ಯವೂ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಪಿಎಲ್ ಹೊಂದಿರುವ ಶೇ. 99 ಜನರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಆಧಾರ್ ಲಿಂಕ್ ಆಗಿರುವ 4.5 ಲಕ್ಷ ಕಾರ್ಡ್ ಗಳು ರದ್ದಾಗಲಿವೆ ಎಂದು ಸಚಿವರು ಹೇಳಿದರು.

    ನ್ಯಾಯಬೆಲೆ ಅಂಗಡಿಯಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಈ ಕುರಿತು ಅಧಿಕಾರಿಗಳಿಗೂ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದರೆ ಆಹಾರ ಇಲಾಖೆ ಅಧಿಕಾರಿಯನ್ನೇ ಅಮಾನತು ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿರುವೆ. ನಾನು ಕೂಡ ಆಗಾಗ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv