Tag: ಸಚಿನ್ ತೆಂಡಲ್ಕೂರ್

  • ಹೋಂ ಕ್ವಾರಂಟೈನ್‍ನಲ್ಲಿದ್ದ ಸಚಿನ್ ಆಸ್ಪತ್ರೆಗೆ ಶಿಫ್ಟ್

    ಹೋಂ ಕ್ವಾರಂಟೈನ್‍ನಲ್ಲಿದ್ದ ಸಚಿನ್ ಆಸ್ಪತ್ರೆಗೆ ಶಿಫ್ಟ್

    ಮುಂಬೈ: ಕೊರೊನಾ ಸೋಂಕಿಗೆ ತುತ್ತಾಗಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಚಿನ್ ಅವರಿಗೆ ಕಳೆದ ವಾರ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ನಿಮಗೆಲ್ಲರಿಗೂ ಧನ್ಯವಾದಗಳು, ನಾನು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಬೇಗ ಮರಳಿ ಮನೆಗೆ ಬರುವ ನಿರೀಕ್ಷೆ ಇದೆ. ದೇಶದ ಜನತೆ ದಯವಿಟ್ಟು ಕೊರೊನಾ ನಿಯಮಗಳನ್ನ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಅದೇ ರೀತಿ ಇಂದಿಗೆ ವಿಶ್ವಕಪ್ ಗೆದ್ದು 10 ವರ್ಷಗಳು ಸಂದಿದೆ. ಹಾಗಾಗಿ ದೇಶದ ಜನತೆಗೆ ಮತ್ತು ನನ್ನ ತಂಡದ ಸಹ ಆಟಗಾರರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದು ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ದೃಢವಾದ ದಿನದಿಂದ ಸಚಿನ್ ಅವರಿಗೆ, ಅಭಿಷೇಕ್ ಬಚ್ಚನ್ ಸೇರಿದಂತೆ ಅಪಾರ ಸೆಲೆಬ್ರಿಟಿಗಳು ಗುಣಮುಖವಾಗಿ ಬನ್ನಿ ಎಂದು ಹಾರೈಸಿದ್ದಾರೆ. ಅಭಿಮಾನಿಗಳು ಸಹ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಸಚಿನ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

    ಸಚಿನ್ ಕೆಲದಿನಗಳ ಹಿಂದೆ ತವರಿನಲ್ಲಿ ನಡೆದ ರಸ್ತೆ ಸುರಕ್ಷತಾ ಕ್ರಿಕೆಟ್ ಲೀಗ್‍ನಲ್ಲಿ ಭಾರತ ತಂಡದ ಪರವಾಗಿ ಆಡಿದ್ದರು. ಭಾರತ ಫೈನಲ್‍ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಗೆದ್ದು ಪ್ರಶಸ್ತಿ ಜಯಿಸಿತ್ತು.

  • ಸಚಿನ್ ತೆಂಡಲ್ಕೂರ್ ಗೆ ಕೊರೊನಾ ಪಾಸಿಟಿವ್

    ಸಚಿನ್ ತೆಂಡಲ್ಕೂರ್ ಗೆ ಕೊರೊನಾ ಪಾಸಿಟಿವ್

    ಮುಂಬೈ: ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸೋಂಕು ತಗುಲಿರುವ ವಿಚಾರವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದು, ಕೊರೊನಾ ನಿಯಮಗಳನ್ನ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸಣ್ಣ ಪ್ರಮಾಣದ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ಇಂದು ವರದಿಯಲ್ಲಿ ಸೋಂಕು ತಗುಲಿರೋದು ದೃಢವಾಗಿದ್ದು, ಮನೆಯ ಇತರೆ ಸದಸ್ಯರ ವರದಿ ನೆಗೆಟಿವ್ ಬಂದಿದೆ. ಕೋವಿಡ್ ನಿಯಮಗಳನ್ನ ಪಾಲಿಸಿ, ವೈದ್ಯರ ಸಲಹೆ ಪಡೆದು ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ಸೇರಿದಂತೆ ಅಪಾರ ಸೆಲೆಬ್ರಿಟಿಗಳು ಗುಣಮುಖವಾಗಿ ಬನ್ನಿ ಎಂದು ಹಾರೈಸಿದ್ದಾರೆ. ಅಭಿಮಾನಿಗಳು ಸಹ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

    ಕಳೆದ 24 ಗಂಟೆಯಲ್ಲಿ 62,258 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 291 ಜನರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 4,52,647 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಸಂಖ್ಯೆ 1,19,08,910 ಏರಿಕೆಯಾಗಿದೆ.

  • 2011ರ ವಿಶ್ವಕಪ್ ಫೈನಲ್ -ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?

    2011ರ ವಿಶ್ವಕಪ್ ಫೈನಲ್ -ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕೂಲ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕೂಲ್ ನಾಯಕ ಧೋನಿಯನ್ನು ಹಿಂಬಾಲಿಸುವ ಮೂಲಕ ಸುರೇಶ್ ರೈನಾ ಅಭಿಮಾನಿಗಳಿಗೆ ಶಾಕ್ ನೀಡಿದ್ರು. 2011ರ ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಯಾಕೆ ಎಂಬುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡಲ್ಕೂರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸುವ ಮೂಲಕ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್, ಅದರಲ್ಲೂ ವಿಶೇಷವಾಗಿ ಫಿನಿಶಿಂಗ್ ಶಾಟ್ ಸಿಕ್ಸರ್ ಅನ್ನು ಸಿಡಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಉತ್ತಮ ಆಲ್‍ರೌಂಡರ್ ಪ್ರದರ್ಶನ ನೀಡುತ್ತಲೇ ಬಂದಿದ್ದರೂ ಧೋನಿ ಯುವರಾಜ್ ಸಿಂಗ್ ಅವರಿಗಿಂತ ಹೆಚ್ಚು ಕೀರ್ತಿಯನ್ನು ಪಡೆದಿದ್ದು ಯಾಕೆ ಎಂಬುದರ ಬಗ್ಗೆ ಈ ಹಿಂದೆ ಹಲವು ಬಾರಿ ಚರ್ಚೆಗಳು ನಡೆದಿವೆ.

    ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮಾಧ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಸಚಿನ್, ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ವಾರ್ಟರ್ ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರು 5ನೇ ಕ್ರಮಾಂಕ, ನಾಯಕ ಧೋನಿ 6ನೇ ಕ್ರಮಾಂಕ ಮತ್ತು ಸುರೇಶ್ ರೈನಾ 7ನೇ ಕ್ರಮಾಂಕದಲ್ಲಿ ಬ್ಯಾಂಟಿಗ್ ಮಾಡಿದ್ದರು ಎಂದು ತಿಳಿಸಿದ್ದರು.

    ಟೀಂ ಇಂಡಿಯಾ ವೇಗದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವಿರೇಂದ್ರ ಸೆಹ್ವಾಗ್ ಉಪುಲ್ ತರಂಗ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಈ ಮೂಲಕ ನಾವು ಶ್ರೀಲಂಕಾವನ್ನು 274 ರನ್‍ಗಳಿಗೆ ಕಟ್ಟಿ ಹಾಕಿದ್ದೆವು. ಆದರೆ ಏಕಾಂಗಿ ಹೋರಾಟ ನಡೆಸಿದ್ದ ಮಹೇಲಾ ಜಯವರ್ಧನೆ 103 ರನ್ ಚಚ್ಚಿದ್ದರು ಎಂದು ನೆನಪು ಮಾಡಿಕೊಂಡಿದ್ದರು.

    ಕ್ವಾರ್ಟರ್-ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮತ್ತು ವೀರು ಜೊತೆಯಾಟದ ನಂತರ ನಾನು ಡ್ರೆಸ್ಸಿಂಗ್ ಕೋಣೆಗೆ ಮರಳಿದೆ. ಆಗ ಫಿಸಿಯೋ ಟೇಬಲ್‍ನಲ್ಲಿ ಮಲಗಿದೆ. ವೀರು ನನ್ನ ಪಕ್ಕದಲ್ಲಿದ್ದರು. ಆಸೀಸ್ ವಿರುದ್ಧ ಗೆಲವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಾಗ ಸಂತೋಷ ಇಮ್ಮಡಿಯಾಗಿತ್ತು. ಆಗ ನೀವು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ ಎಲ್ಲೂ ಹೋಗಬೇಡಿ ಅಂತ ಸೆಹ್ವಾಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿನ್ ನೆನಪನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೌತಮ್ ಮತ್ತು ವಿರಾಟ್ ಉತ್ತಮ ಜೊತೆಯಾಟ ನಡೆದಿತ್ತು. ಎದುರಾಳಿ ತಂಡಕ್ಕಿಂತ ಕೆಲವು ಹೆಜ್ಜೆ ಮುಂದಿಡಲು ನಾವು ಬಯಸಿದ್ದೇವೆ. ಈ ವೇಳೆ ನಾನು ವೀರೂಗೆ, `ಎಡಗೈ ಬ್ಯಾಟ್ಸ್‍ಮನ್ ಗೌತಮ್ ವಿಕೆಟ್ ಒಪ್ಪಿಸಿ ಹೊರ ಬಂದರೆ ಎಡಗೈ ಬ್ಯಾಟ್ಸ್‍ಮನ್ ಯುವಿ ಒಳಗೆ ಹೋಗಬೇಕು. ಒಂದು ವೇಳೆ ಬಲಗೈ ಬ್ಯಾಟ್ಸ್‍ಮನ್ ವಿರಾಟ್ ಹೊರಬಂದರೆ ಬಲಗೈ ಬ್ಯಾಟ್ಸ್‍ಮನ್ ಧೋನಿ ಬ್ಯಾಟಿಂಗ್‍ಗೆ ಇಳಿಯಬೇಕು’ ಎಂದು ಸಲಹೆ ನೀಡಿದ್ದೆ. ಹೀಗಾಗಿ ವಿರಾಟ್ ವಿಕೆಟ್ ಒಪ್ಪಿಸಿ ಹೊರ ಬಂದಿದ್ದರಿಂದ ಯುವಿಯನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡ್ರಾಫ್ಟ್ ಮಾಡಲಾಯಿತು. ಏಕೆಂದರೆ ಬಲಗೈ, ಎಡಗೈ ಬ್ಯಾಟಿಂಗ್ ಸಂಯೋಜನೆ ಇರುವುದು ಮುಖ್ಯವಾಗಿತ್ತು. ಯುವಿ ಪ್ರಚಂಡ ರೂಪದಲ್ಲಿದ್ದರು. ಆದರೆ ಶ್ರೀಲಂಕಾದಲ್ಲಿ ಇಬ್ಬರು ಆಫ್ ಸ್ಪಿನ್ನರ್‍ಗಳು ಇದ್ದರು. ಆದ್ದರಿಂದ ಕಾರ್ಯತಂತ್ರದಲ್ಲಿ ಬದಲಾವಣೆ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದು ಸಚಿನ್ ತಂತ್ರಗಾರಿಕೆ ರಿವೀಲ್ ಮಾಡಿದ್ದರು.

    ಈ ತಂತ್ರವನ್ನು ಅನುಸರಿಸುವಂತೆ ಸಲಹೆ ನೀಡಲು ಗ್ಯಾಲರಿ ಹೊರಗೆ ಕುಳಿತಿದ್ದ ಎಂ.ಎಸ್.ಧೋನಿ ಕಡೆಗೆ ತಿರುಗಿ ನೋಡಿದೆ. ಆಗ ಧೋನಿ ನನ್ನ ಬಳಿಗೆ ಬಂದಾಗ ವೀರು, ಕೋಚ್ ಗ್ಯಾರಿ ಕಸ್ಟರ್ನ್ ಹಾಗೂ ನಾನು ಅದರ ಬಗ್ಗೆ ಮಾತನಾಡಿದ್ದೆವು. ಗ್ಯಾರಿ ಸಹ ಒಪ್ಪಿದ್ದರು. ಆಗ ಮೈದಾನಕ್ಕಿಳಿಯಲು ಧೋನಿ ಸಿದ್ಧರಾದರು ಎಂದು ತಿಳಿಸಿದ್ದರು.

  • ವಿಡಿಯೋ ಪೋಸ್ಟ್ ಮಾಡಿ ತೀರ್ಪು ಕೇಳಿದ ಸಚಿನ್

    ವಿಡಿಯೋ ಪೋಸ್ಟ್ ಮಾಡಿ ತೀರ್ಪು ಕೇಳಿದ ಸಚಿನ್

    ನವದೆಹಲಿ: ಮಾಸ್ಟರ್ ಬ್ಲಾಸ್ಟರ್, ದಾಖಲೆಗಳ ವೀರ ಸಚಿನ್ ತೆಂಡೂಲ್ಕರ್ ಇಂದು ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಅಭಿಮಾನಿಗಳಲ್ಲಿ ತೀರ್ಪು ಕೇಳಿದ್ದಾರೆ.

    ಇಂದು ಮಧ್ಯಾಹ್ನ ಟ್ವಿಟ್ಟರ್ ನಲ್ಲಿ ಕೆಲವರು ಕ್ರಿಕೆಟ್ ಆಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಸಚಿನ್, ನನ್ನ ಗೆಳೆಯ ಈ ವಿಡಿಯೋ ಶೇರ್ ಮಾಡಿದರು. ಇದೊಂದು ಅಸಾಧಾರಣ ವಿಡಿಯೋ ಇದಾಗಿದ್ದು, ನೀವೇ ಅಂಪೈರ್ ಸ್ಥಾನದಲ್ಲಿ ನಿಂತು ತೀರ್ಪು ನೀಡಿ ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    31 ಸೆಕೆಂಡ್ ನ ವಿಡಿಯೋದಲ್ಲಿ ಕೆಲವರು ಕ್ರಿಕೆಟ್ ಆಡುತ್ತಿರುತ್ತಾರೆ. ಎಡಗೈ ಬ್ಯಾಟ್ಸ್ ಮನ್ ಬೌಲ್ಡ್ ಆಗುತ್ತಾನೆ. ಆದ್ರೆ ಸ್ಟಂಪ್ ಮೇಲಿರಿಸಿರುವ ಬೇಲ್ಸ್ ಬೀಳಲ್ಲ. ಬೌಲರ್ ಔಟ್ ಎಂದು ಮನವಿ ಸಲ್ಲಿಸುತ್ತಾನೆ. ಬಾಲ್ ವಿಕೆಟ್ ಸ್ಟಂಪ್ ಗೆ ಕೂದಲೆಳೆಯಲ್ಲಿ ತಾಗಿದ್ದರಿಂದ ಬೇಲ್ಸ್ ಬೀಳದೇ ವಿಕೆಟಿನ ಮೇಲೆ ನಿಂತುಕೊಳ್ಳುತ್ತದೆ. ಬ್ಯಾಟ್ಸ್ ಮನ್ ಬಳಿ ಬಂದ ಅಂಪೈರ್ ಬೇಲ್ಸ್ ಸರಿಪಡಿಸಿ ನಾಟೌಟ್ ಎಂದು ತೀರ್ಪು ನೀಡುತ್ತಾರೆ. ಮತ್ತೆ ಕ್ರಿಕೆಟ್ ಆರಂಭಗೊಳ್ಳುತ್ತದೆ.

    ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದು, ನೆಟ್ಟಿಗರು ಭಿನ್ನ ಭಿನ್ನ ಉತ್ತರಗಳನ್ನು ನೀಡುತ್ತಿದ್ದಾರೆ. ಕೆಲವರು ಸ್ಟಂಪ್ ಗೆ ಬಾಲ್ ತಾಗಿಲ್ಲ, ಕೇವಲ ಚೆಂಡು ಬಂದ ವೇಗದ ಗಾಳಿಗೆ ಬೇಲ್ಸ್ ಅಲುಗಾಡಿದೆ ಎಂದು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಬಾಲ್ ತಾಗಿದ್ದು ಅಂಪೈರ್ ಔಟ್ ಎಂದು ತೀರ್ಪು ಕೊಡಬೇಕು. ಬೇಲ್ಸ್ ಮಧ್ಯದ ವಿಕೆಟ್ ಮೇಲೆ ನಿಂತಿಲ್ಲದ ಪರಿಣಾಮ ಔಟ್ ನೀಡಬೇಕೆಂದು ವಾದಿಸಿದ್ದಾರೆ.

    https://twitter.com/bhishmanew/status/1153968592418852864

  • ಕೆಟಿಆರ್ ಚಾಲೆಂಜ್ ಸ್ವೀಕರಿಸಿದ ಸಚಿನ್, ಲಕ್ಷ್ಮಣ್

    ಕೆಟಿಆರ್ ಚಾಲೆಂಜ್ ಸ್ವೀಕರಿಸಿದ ಸಚಿನ್, ಲಕ್ಷ್ಮಣ್

    ಮುಂಬೈ: ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡಲ್ಕೂರ್ ಮತ್ತು ವಿ.ವಿ.ಎಸ್.ಲಕ್ಮಣ್ ಇಬ್ಬರು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ನೀಡಿದ್ದ #HarithaHaram ಚಾಲೆಂಜ್ ಸ್ವೀಕರಿಸಿದ್ದಾರೆ. ಸಚಿನ್ ಮತ್ತು ಲಕ್ಷ್ಮಣ್ ತಮ್ಮ ಮನೆ ಅಂಗಳದಲ್ಲಿ ಮೂರು ಸಸಿಗಳನ್ನು ಹಚ್ಚುವ ಮೂಲಕ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಈ ಚಾಲೆಂಜ್ ಮೂಲಕ ನಮ್ಮ ರಾಜ್ಯವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡೋಣ ಎಂಬ ಸಂದೇಶವನ್ನು ನೀಡಿದ್ದಾರೆ.

    ಕೆಟಿ ರಾಮಾರಾವ್ ಚಾಲೆಂಜ್ ನೀಡಿದ 24 ಗಂಟೆಯಲ್ಲಿ ಸಚಿನ್ ಪೂರ್ಣ ಮಾಡಿ, ಟ್ವಿಟ್ಟರ್ ನಲ್ಲಿ ಮೂರು ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇತ್ತ ಲಕ್ಷ್ಮಣ್ ಸಹ ತಮ್ಮ ಟ್ವಿಟ್ಟರ್ ನಲ್ಲಿ ಮೂರು ಫೋಟೋಗಳನ್ನು ಹಾಕಿಕೊಂಡು, ನಾನು ಕೆಟಿಆರ್ ಚಾಲೆಂಜ್ ಪೂರ್ಣ ಮಾಡಿದ್ದೇನೆ. ನನ್ನ ಮನೆಯಂಗಳದ ತೋಟದಲ್ಲಿ ದಾಳಿಂಬೆ, ನೀರ್ ಸೇಬು ಮತ್ತು ಲಕ್ಷ್ಮಣ ಹಣ್ಣಿನ ಸಸಿಗಳನ್ನು ಹಚ್ಚಿದ್ದೇನೆ. ಈ ಚಾಲೆಂಜ್ ನ್ನು ನಾನು ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್, ಪಿ.ವಿ.ಸಿಂಧು ಅವರಿಗೆ ವರ್ಗಾವಣೆ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ಕೆ.ಟಿ.ರಾಮರಾವ್ ಅವರಿಗೆ ಈ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಚಾಲೆಂಜ್ ನೀಡಿದ್ದರು. ಚಾಲೆಂಜ್ ಸ್ವೀಕರಿಸಿದ್ದ ಕೆಟಿಆರ್ ಸಹ ಮೂರು ಸಸಿಗಳನ್ನು ನಾಟಿ ಮಾಡಿದ್ದರು. ರಾಜಮೌಳಿ ಅವರಿಗೆ ನಿಜಾಮಾಬಾದ್ ಸಂಸದೆಯಾಗಿರುವ ಕವಿತಾ ರಾವ್ #ಹರಿತಾಹರಮ್ ಚಾಲೆಂಜ್ ನೀಡಿದ್ದರು. ಈ ಚಾಲೆಂಜ್ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡುವ ಮೂಲಕ ನಮ್ಮ ಪರಿಸರವನ್ನು ಹಸಿರಾಗಿಸೋಣ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ.

    ಈ ಹಿಂದೆ ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22 ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಟ್ವೀಟ್ ಮಾಡಿದ್ದರು. ಈ ಚಾಲೆಂಜ್ ಎರಡು ತಿಂಗಳ ಹಿಂದೆ ಟ್ರೆಂಡ್ ಆಗಿತ್ತು. ಎಲ್ಲ ಸೆಲೆಬ್ರಟಿಗಳು ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಆಪ್ತರಿಗೆ ಟ್ಯಾಗ್ ಮಾಡುತ್ತಿದ್ದರು.