Tag: ಸಕ್ಸಸ್ ಸ್ಟೋರಿ

  • ವಯಸ್ಸು 22, ಮೂರು ಸ್ಟಾರ್ಟ್ ಅಪ್, ವರ್ಷದ ಟರ್ನ್ ಓವರ್ 22 ಕೋಟಿ

    ವಯಸ್ಸು 22, ಮೂರು ಸ್ಟಾರ್ಟ್ ಅಪ್, ವರ್ಷದ ಟರ್ನ್ ಓವರ್ 22 ಕೋಟಿ

    – ಮ್ಯಾಗಿ ತಿಂದು ದಿನದೂಡುತ್ತಿದ್ದ ಯುವಕನ ಯಶಸ್ವಿ ಕಥೆ
    – 5 ಸಾವಿರದಿಂದ ಆರಂಭವಾಗಿತ್ತು ಸ್ಟಾರ್ಟ್ ಅಪ್

    ಪ್ರತಿದಿನ ಮ್ಯಾಗಿ ತಿಂದು ಜೀವನ ನಡೆಸುತ್ತಿದ್ದ 22 ವರ್ಷದ ಯುವಕ ಸೌರಭ್ ಮೌರ್ಯ ಮೂರು ಸ್ಟಾರ್ಟ್ ಅಪ್ ಗಳಿಂದ ವಾರ್ಷಿಕ 22 ಕೋಟಿಗೂ ಅಧಿಕ ಟರ್ನ್ ಓವರ್ ಗಳಿಸುತ್ತಿದ್ದಾರೆ. ಐಐಟಿ ಬಿಹೆಚ್‍ಯುನ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಸೌರಭ್, ಬನಾರಸ ಜಿಲ್ಲೆಯ ಪುಟ್ಟ ಗ್ರಾಮದ ನಿವಾಸಿ. ಸೌರಭ್ ಪೋಷಕರು ಆರ್ಥಿಕ ಪರಿಸ್ಥಿತಿಯೇನು ಉತ್ತಮವಾಗಿರಲಿಲ್ಲ. ಆದ್ರೆ ಬಡತನದಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಅನ್ನೋ ಕನಸುಗಳಿಗೆ ಬಡತನ ಇರಲಿಲ್ಲ. ತಂದೆ-ತಾಯಿಯ ಕನಸುಗಳನ್ನು ಸೌರಭ್ ಇಂದು ನನಸು ಮಾಡಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಸ್ವಾವಲಂಬಿಯಾಗಿದ್ದಾರೆ.

    ಚಿಕ್ಕವನಿದ್ದಾಗ ಪೋಷಕರ ಜೊತೆ ಸಂತೆಗೆ ಹೋದಾಗ ಒಂದು ಕಂಪ್ಯೂಟರ್ ಶಾಪ್ ಓಪನ್ ಮಾಡಬೇಕು. ಅಂಗಡಿಗೆ ಬರೋ ಗ್ರಾಹಕರ ಮೊಬೈಲ್ ಗಳಿಗೆ ಹಾಡು ಹಾಕೋದು ನನ್ನದು ಪುಟ್ಟ ಕನಸು ಆಗಿತ್ತು. ಎಂದಿಗೂ ದೊಡ್ಡ ಕನಸು ಕಂಡವನಲ್ಲ. ಆದ್ರೆ ಪೋಷಕರು ಮಾತ್ರ ನಮ್ಮ ಜೀವನದ ಬಗ್ಗೆ ಬಣ್ಣ ಬಣ್ಣದ ಕನಸಿನ ಗೋಪುರ ನಿರ್ಮಿಸಿಕೊಂಡಿದ್ದರು ಎಂದು ಸೌರಭ್ ಹೇಳುತ್ತಾರೆ.

    ಐಐಟಿ ಪ್ರವೇಶ: ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪೋಷಕರು ಸೌರಭ್ ಸೇರಿದಂತೆ ಇನ್ನಿಬ್ಬರು ಸೋದರರನ್ನು ಬನಾರಸಗೆ ಕಳುಹಿಸುತ್ತಾರೆ. ಸೌರಭ್ 11ನೇ ತರಗತಿಯಲ್ಲಿದ್ದಾಗ ಇಬ್ಬರು ಅಣ್ಣಂದಿರು ಐಐಟಿ ಎಕ್ಸಾಂ ಕ್ಲಿಯರ್ ಮಾಡಿಕೊಂಡರು. ಸೌರಭ್ ಸಹ ಐಐಟಿ ಕ್ಲೀಯರ್ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬುವುದು ಪೋಷಕರು ಕನಸಾಗಿತ್ತು. ಆದ್ರೆ 11ನೇ ಕ್ಲಾಸ್ ಓದುತ್ತಿದ್ದಾಗಲೂ ಸೌರಭ್ ಗೆ ಕಂಪ್ಯೂಟರ್ ಶಾಪ್ ಓಪನ್ ಮಾಡಬೇಕೆಂಬ ಆಸೆ ಗಟ್ಟಿಯಾಗಿತ್ತು. 12ನೇ ತರಗತಿಯಲ್ಲಿ ಸೌರಭ್ ಜೆಇಇ ಕ್ಲಿಯರ್ ಮಾಡಿಕೊಳ್ಳಲು ವಿಫಲರಾದಾಗ ಅಂದು ದಿನವಿಡೀ ಕಣ್ಣೀರು ಹಾಕಿದ್ದರು. ಆದ್ರೆ ಪೋಷಕರ ಬೆಂಬಲದೊಂದಿಗೆ ಒಂದು ವರ್ಷ ಡ್ರಾಪ್ ಔಟ್ ಮಾಡಿಕೊಂಡು ಮದುವೆ, ಕಾರ್ಯಕ್ರಮ, ಹಬ್ಬ, ಮೊಬೈಲ್ ಎಲ್ಲವನ್ನೂ ತೊರೆದು ಆಸಕ್ತಿಯಿಂದ ಓದಿ ಮುಂದಿನ ವರ್ಷ ಐಐಟಿಯ ಪ್ರವೇಶ ಪಡೆದುಕೊಂಡರು.

    ಕೆಲಸ ನೀಡದ ತರಬೇತಿ ಕೇಂದ್ರಗಳು: ಐಐಟಿ ಬಂದಿದ್ದ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯ ಜೊತೆ ಬಂದಿದ್ದರು. ಆದ್ರೆ ಕಂಪ್ಯೂಟರ್ ಶಾಪ್ ತೆರೆಯಬೇಕೆಂದು ಆಸೆ ಹೊಂದಿದ್ದ ಸೌರಭ್ ಗೆ ಐಐಟಿ ಹೊಸ ಅನುಭವಗಳನ್ನು ನೀಡಿತು. ಗ್ರಾಮದಲ್ಲಿ ಮಕ್ಕಳಿಗೆ ಸೌರಭ್ ಪಾಠ ಮಾಡುತ್ತಿದ್ದರು. ಕಾಲೇಜಿನ ಅವಧಿ ಮುಗಿದ ಬಳಿಕ ಕೋಚಿಂಗ್ ಕ್ಲಾಸ್ ಗಳಲ್ಲಿ ಕೆಲಸ ಮಾಡಿದ್ರೆ ಒಂದಿಷ್ಟು ಹಣ ಸಂಪಾದಿಸಬಹುದು ಅರ್ಜಿ ಸಲ್ಲಿಸಿದ್ದರು. ಆದರೆ ಅನುಭವ ಇಲ್ಲದ ಕಾರಣ ಸೌರಭ್ ಯಾವ ತರಬೇತಿ ಕೇಂದ್ರ ಕೆಲಸ ನೀಡಿರಲಿಲ್ಲ.

    ಅಮ್ಮ ನೀಡಿದ 5 ಸಾವಿರದಿಂದ ಆರಂಭ: ಒಮ್ಮೆ ಸೌರಭ್ ಗೆ ಅವರ ತಾಯಿ ತಂದೆಗೆ ತಿಳಿಯದಂತೆ ತಾವು ಉಳಿಸಿದ್ದ 5 ಸಾವಿರ ರೂ. ನೀಡಿದ್ದರು. ಅದೇ ಹಣದಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಸೌರಭ್ ತಮ್ಮ ಸ್ಟಾರ್ಟ್ ಅಪ್ ಆರಂಭಿಸಿದರು. ಯುಟ್ಯೂಬ್ ಚಾನೆಲ್ ಆರಂಭಿಸಿದ ಸೌರಭ್, ಮಕ್ಕಳಿಗೆ ಪಾಠ ಹೇಳುವ ವೀಡಿಯೋಗಳನ್ನ ಅಪ್ಲೋಡ್ ಮಾಡಲಾರಂಭಿಸಿದ್ರು. ಆರಂಭದಲ್ಲಿ ಸೌರಭ್ ಬಳಿ ವೈಟ್ ಬೋರ್ಡ್ ಸಹ ಇರಲಿಲ್ಲ. ಸೌರಭ್ ಪೇಪರ್ ಮೇಲೆ ಸಮಸ್ಯೆಗಳನ್ನ ಪರಿಹರಿಸುತ್ತಿದ್ರೆ ಮತ್ತೋರ್ವ ಗೆಳೆಯ ವೀಡಿಯೋ ಮಾಡುತ್ತಿದ್ದರು. ಬಹು ದಿನಗಳ ಬಳಿಕ 1,300 ರೂ. ನೀಡಿ ವೈಟ್ ಬೋರ್ಡ್ ಖರೀದಿಸಿದ್ದರು.

    ಕಮೆಂಟ್ ನಿಂದ ಆರಂಭವಾಯ್ತು ಸ್ಟಾರ್ಟ್ ಅಪ್: ತಮ್ಮದೇ ಯು ಟ್ಯೂಬ್ ಚಾನೆಲ್ ನಲ್ಲಿ ವೀಡಿಯೋಗಳನ್ನ ಅಪ್ಲೋಡ ಮಾಡುತ್ತಿದ್ದರು. ಒಂದು ದಿನ ತಮ್ಮ ಐಐಟಿ ಜರ್ನಿಯ ಬಗ್ಗೆ ಮಾತನಾಡಿ ವೀಡಿಯೋ ಹಂಚಿಕೊಂಡಿದ್ದರು. ಓರ್ವ ವಿದ್ಯಾರ್ಥಿ ನಮಗೆ ಐಐಟಿಗೆ ಪ್ರವೇಶ ಪಡೆಯಲು ತರಬೇತಿ ನೀಡ್ತೀರಾ ಅಂತ ಕೇಳಿದ್ದರು. ಈ ಒಂದು ಕಮೆಂಟ್ ಸೌರಬ್ ಗೆ ತಮ್ಮದೇ ಸ್ಟಾರ್ಟ್ ಅಪ್ ಆರಂಭಿಸಲು ಹುರಿದುಂಬಿಸಿತು. ಅಂದೇ ಐಐಟಿ ತಯಾರಿ ನಡೆಸುತ್ತಿರೋ 11 ಮತ್ತು 12ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವೀಡಿಯೋ ಮಾಡಲು ಆರಂಭಿಸಿದರು.

    ಈ ವೀಡಿಯೋ ನೋಡಲು 99 ರೂಪಾಯಿ ಪ್ಯಾಕ್ ಲಾಂಚ್ ಮಾಡಿದ್ರು. ಹೀಗೆ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಾಗ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋದು ಸೌರಭ್‍ಗೆ ಕಷ್ಟವಾದಾಗ ತಮ್ಮ ಗೆಳೆಯರ ಸಹಾಯ ಪಡೆದರು. ಇದರಿಂದ ಬಂದ ಹಣದಿಂದ ಎಲ್ಲರಿಗೂ ಗೌರವ ಧನವಾಗಿ ನೀಡಿದರು. ಮುಂದೆ ವಾಟ್ಸಪ್ ಮೂಲಕವೂ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಹಿತಿ ನೀಡಲಾರಂಭಿಸಿದರು.

    ಐಐಟಿ ಹಾಸ್ಟೆಲ್ ನಲ್ಲಿದ್ದರೂ ಕಾಲೇಜಿನ ಸಮೀಪವೇ ಸೌರಭ್ ರೂಮ್ ಬಾಡಿಗೆಗೆ ಪಡೆದುಕೊಂಡು ಹಗಲು ರಾತ್ರಿ ಎನ್ನದೇ ಅಭ್ಯಾಸ ಆರಂಭಿಸಿದರು. ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದ ಕಾರಣ ಬರೋಬ್ಬರಿ 8 ತಿಂಗಳು ಮ್ಯಾಗಿ ತಿಂದು ಓದುತ್ತಿದ್ದರು ಸೌರಭ.

    ಮೊದಲ ವರ್ಷವೇ 11 ಕೋಟಿ: ಮಾರ್ಗದರ್ಶನದ ಜೊತೆ ವಿದ್ಯಾರ್ಥಿಗಳಿಗೆ ಕೋರ್ಸ್ ಅವಶ್ಯಕತೆ ಇರೋದು ನನ್ನ ಗಮನಕ್ಕೆ ಬಂತು. ಆದರೆ ಕೋಚಿಂಗ್ ಸೆಂಟರ್ ಆರಂಭಿಸುವ ಸಂಪನ್ಮೂಲ ನನ್ನ ಬಳಿ ಇರಲಿಲ್ಲ. ತದನಂತರ ಎರಡು ಸಾವಿರ ರೂಪಾಯಿಯಲ್ಲಿ ಇಯರ್ ಲಾಂಗ್ ಮತ್ತು ಕ್ರೈಶ್ ಕೋರ್ಸ್ ನೀಡಿದ್ದು ಬಹಳ ವಿದ್ಯಾರ್ಥಿಗಳಿಗೆ ಅನಕೂಲವಾಯ್ತು. 2019 ಜನವರಿಯಲ್ಲಿ ಎಸ್‍ಎಸ್‍ಟಿ ಅ್ಯಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಆರಂಭಿಸಿ ಗೆಳೆಯರೊಂದಿಗೆ ಕೆಲಸ ಆರಂಭಿಸಿದೆ. ಈ ಕಂಪನಿಯಲ್ಲಿ ಎರಡು ಸ್ಟಾರ್ಟ್ ಅಪ್ ಆರಂಭಿಸಲಾಯ್ತು. ಒಂದು ಕೋರ್ಸ್ ಮತ್ತೊಂದು ಮೇಂಟರಿಂಗ್. ಇದಕ್ಕಾಗಿ ತಿಂಗಳಿಗೆ 1,500 ರೂ. ಶುಲ್ಕ ನಿಗದಿ ಮಾಡಲಾಯ್ತು. ಮೊದಲ ವರ್ಷದಲ್ಲಿಯೇ 11 ಕೋಟಿ ಟರ್ನ್ ಓವರ್ ಆಯ್ತು. ನಂತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಪಿಜಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನ ನಮ್ಮ ಕಂಪನಿಯಿಂದ ನೀಡಲಾರಂಭಿಸಿದೇವು. ಇದಕ್ಕಾಗಿ ರ‍್ಯಾಂಕರ್ಸ್ ಕನ್ಸಲಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿ ಹುಟ್ಟಿಕೊಂಡಿತು ಎಂದು ಸೌರಭ್ ಹೇಳ್ತಾರೆ.

    200 ಐಐಟಿ ವಿದ್ಯಾರ್ಥಿಗಳ ತಂಡ: ಇಂದು ಸೌರಭ್ ಬನಾರಸನಲ್ಲಿ ಮೂರು ಮತ್ತು ಗಾಜಿಯಾಬಾದ್ ನಲ್ಲೊಂದು ಬ್ರ್ಯಾಂಚ್ ಹೊಂದಿದ್ದಾರೆ. ನಾಲ್ಕು ಬ್ರ್ಯಾಂಚ್ ಗಳಲ್ಲಿ 200 ವಿದ್ಯಾರ್ಥಿಗಳಿದ್ದಾರೆ. 30ಕ್ಕೂ ಅಧಿಕ ಡೌಟ್ ಸಾಲ್ವ್ ಮಾಡೋ ಪರಿಣಿತರಿದ್ದಾರೆ. 13 ಜನರ ಉಪನ್ಯಾಸಕರ ತಂಡವಿದೆ. ಪ್ರತಿ ತಿಂಗಳು ಸುಮಾರು 45 ಲಕ್ಷ ರೂ. ಮೌಲ್ಯದ ಕೋರ್ಸ್ ಸೇಲ್ ಮಾಡುತ್ತೇವೆ. ಇಂದು 2,700 ಅಧಿಕ ವಿದ್ಯಾರ್ಥಿಗಳು ನಮ್ಮ ಬಳಿಯಲ್ಲಿದ್ದು, ಕೋವಿಡ್ ವೇಳೆ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕೋವಿಡ್ ನಿಂದಾಗಿ ಬಹುತೇಕ ಎಲ್ಲ ವಲಯಗಳು ನಷ್ಟ ಅನುಭವಿಸಿವೆ. ಆದ್ರೆ ಆನ್‍ಲೈನ್ ನಿಂದಾಗಿ ಶಿಕ್ಷಣ ಕ್ಷೇತ್ರ ಮತ್ತಷ್ಟು ಬೆಳವಣಿಗೆಯಾಗಿದೆ ಎಂದು ಸೌರಭ್ ತಮ್ಮ ಕಥೆಯನ್ನ ಹಂಚಿಕೊಂಡರು.

  • 18ನೇ ವಯಸ್ಸಿನಲ್ಲಿ ಸ್ಟಾರ್ಟ್ ಅಪ್ – ಮೂರೇ ವರ್ಷದಲ್ಲಿ 20 ಕೋಟಿ ಟರ್ನ್ ಓವರ್

    18ನೇ ವಯಸ್ಸಿನಲ್ಲಿ ಸ್ಟಾರ್ಟ್ ಅಪ್ – ಮೂರೇ ವರ್ಷದಲ್ಲಿ 20 ಕೋಟಿ ಟರ್ನ್ ಓವರ್

    ದೆಹಲಿಯ 23 ವರ್ಷದ ಸನಿ ಗರ್ಗ್ ತಮ್ಮ ಪದವಿ ಎರಡನೇ ವರ್ಷದಲ್ಲಿ ಆರಂಭಿಸಿದ ಸ್ಟಾರ್ಟ್ ಅಪ್ ಇಂದು 23 ಕೋಟಿ ಟರ್ನ್ ಓವರ್ ಹೊಂದಿದೆ. 2018ರಲ್ಲಿ 18 ವರ್ಷದ ಸನಿ ‘ಯೊವರ್ಸ್ ಶೆಲ್’ ಎಂಬ ಸ್ಟಾರ್ಟ್ ಅಪ್ ಆರಂಭಿಸಿದ ಕಂಪನಿಯ ಟರ್ನ್ ಓವರ್ 20 ಕೋಟಿಗೆ ತಲುಪಿದೆ. ಯುವರ್ ಶೆಲ್ ವಿದ್ಯಾರ್ಥಿಗಳಿಗೆ ಸೂಕ್ತ ಪಿಜಿ(ಪೇಯಿಂಗ್ ಗೆಸ್ಟ್)ಗಳ ಮಾಹಿತಿಯನ್ನ ನೀಡುತ್ತದೆ.

    ಕೊರೊನಾಗೂ ಮುನ್ನ 2019 ನವೆಂಬರ್ ನಲ್ಲಿ ಇವರ ಸ್ಟಾರ್ಟ್ ಅಪ್ ವ್ಯವಹಾರವನ್ನ ಸ್ಟೌಂಜಾ ಲಿವಿಂಗ್ ದೊಡ್ಡ ಮೊತ್ತಕ್ಕೆ ಖರೀದಿಸಿತ್ತು. ಇದೇ ಹಣದಿಂದ ಲಾಕ್‍ಡೌನ್ ವೇಳೆ ಗೆಳತಿ ಶೆಫಾಲಿ ಜೈನ್ ಜೊತೆಯಲ್ಲಿ ‘ಎಇ ಸರ್ಕಲ್’ ಹೆಸರಿನ ಹೊಸ ಸ್ಟಾರ್ಟ್ ಅಪ್ ಆರಂಭಿಸಿದರು. ಇದರ ಮೂಲಕ ಹೊಸ ಸ್ಟಾರ್ಟ್ ಅಪ್ ಆರಂಭಿಸುವ ಉತ್ಸಾಹಿಗಳಿಗೆ ಮಾರ್ಗದರ್ಶನದ ಜೊತೆಯಲ್ಲಿ ಸಹಾಯ ಸಹ ನೀಡಲಾಗುತ್ತದೆ.

    ಸ್ಟಾರ್ಟ್ ಅಪ್ ಆರಂಭವಾಗಿದ್ದೇಗೆ?: ಒಂದು ಸಮಸ್ಯೆಯನ್ನ ಗುರುತಿಸಿ ಪರಿಹಾರ ಒದಗಿಸೋದು ಸ್ಟಾರ್ಟ್ ಅಪ್. ನಾನು ಕಾಲೇಜಿನಲ್ಲಿ ಹಲವರ ಜೊತೆ ಮಾತನಾಡಿದಾಗ ಒಂದು ಕಾಮನ್ ಪ್ರಾಬ್ಲಂ ಎಲ್ಲರೂ ಹೇಳಿಕೊಂಡರು. ಅದು ಸರಿಯಾದ ಪಿಜಿ ಸಮಸ್ಯೆ. ದೆಹಲಿಗೆ ಓದಲು ಬರುವ ಹೆಚ್ಚಿನ ವಿದ್ಯಾರ್ಥಿಗಳು ಮೊದಲಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದ್ರೆ ಅಷ್ಟು ಸುಲಭವಾಗಿ ದೆಹಲಿಯಲ್ಲಿ ಉತ್ತಮ ಪಿಜಿ ಸಿಗೋದು ಸುಲಭದ ಮಾತಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹೊರಟಾಗ ಸ್ಟಾರ್ಟ್ ಆಪ್ ಆರಂಭವಾಯ್ತು. ಕಾಲೇಜಿನ ಅಡ್ಮಿಶನ್ ಗೆ ಕೇವಲ 15 ದಿನ ಮಾತ್ರ ಇತ್ತು. ನನ್ನದೇ ಆ್ಯಪ್, ವೆಬ್‍ಸೈಟ್ ಸಿದ್ಧಪಡಿಸಲು ಮುಂದಾಗಿದ್ರೆ ಈ ಅವಕಾಶ ನನ್ನಿಂದ ತಪ್ಪುತ್ತಿತ್ತು ಎಂದು ಸನಿ ಹೇಳುತ್ತಾರೆ.

    20 ದಿನದಲ್ಲಿ 7.5 ಲಕ್ಷ ಲಾಭ: ಈ ವೇಳೆ ಸನಿ ಗೆಳೆಯರ ಸಹಾಯ ಪಡೆದು ಕೆಲವರನ್ನ ಕೆಲಸಕ್ಕೆ ನೇಮಿಸಿಕೊಂಡು, ನಗರದ ಪಿಜಿ ಮಾಲೀಕರ ಜೊತೆ ಮಾತುಕತೆ ನಡೆಸಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯ್ತು. ಕಾಲೇಜಿನ ಅಡ್ಮಿಶನ್ ಆರಂಭವಾದಾಗ ಪೋಸ್ಟರ್ ಪ್ರಿಂಟ್ ಮಾಡಿ ಬರೋ ವಿದ್ಯಾರ್ಥಿಗಳಿಗೆ ವಿತರಿಸಲಾಯ್ತು. ಇದೇ ರೀತಿ ಸನಿ ತಮ್ಮ ಗೆಳೆಯರೊಂದಿಗೆ 15 ದಿನದಲ್ಲಿ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಪಿಜಿ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾದರು. ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಸನಿ ನಿರ್ದೇಶನದ ಮೇರೆಗೆ ಪಿಜಿಯಲ್ಲಿ ದಾಖಲಾದರು. ಅಂದು 20 ದಿನದಲ್ಲಿ ಸನಿ 7.5 ಲಕ್ಷಕ್ಕೂ ಅಧಿಕ ಲಾಭವನ್ನ ತಮ್ಮದಾಗಿಸಿಕೊಂಡು ಉದ್ಯಮದ ಮೊದಲ ಹೆಜ್ಜೆಯಲ್ಲಿಯೇ ಯಶಸ್ಸು ಕಂಡರು.

    ಯುವರ್ಸ್ ಶೆಲ್ ಆರಂಭ: ಜುಲೈ 2017ರಲ್ಲಿ ಸನಿಗೆ ಪಿಜಿ ಪಡೆದ ವಿದ್ಯಾರ್ಥಿಗಳು ಕರೆ ಮಾಡಿ ನಿಂದಿಸಲಾರಂಭಿಸಿದರು. ನೀವು ಹೇಳಿದ ಪಿಜಿ ಚೆನ್ನಾಗಿಲ್ಲ. ಊಟ, ಮೂಲಸೌಲಭ್ಯ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಸನಿ ಹೇಳಿ ಮನಸ್ಸಿಗೆ ಬಂದಂತೆ ನಿಂದಿಸಿದ್ದರು. ಆಗ ಸನಿಗೆ ಪಿಜಿ ಹುಡುಕೋದು ಕಷ್ಟವಲ್ಲ, ಆದ್ರೆ ಇರೋದರಲ್ಲಿ ಬೆಸ್ಟ್ ಆಯ್ಕೆ ಮಾಡಿಕೊಳ್ಳುವ ವಿಚಾರ ಬಂದಿದೆ. ಈ ವೇಳೆ ಯುವರ್ ಶೆಲ್ ಆರಂಭಿಸುವ ಐಡಿಯಾ ಸನಿಗೆ ಬಂದಿದೆ. ಸ್ಟ್ಯಾಂಡಪ್ ಇಂಡಿಯಾ- ಸ್ಟಾರ್ಟ್ ಅಪ್ ಇಂಡಿಯಾ ಸ್ಕೀಂನಡಿ ಸನಿ 35 ಲಕ್ಷ ರೂ. ಸಾಲ ಪಡೆದುಕೊಂಡರು. ಹೊರಗಿನಿಂದ ಒಂದಿಷ್ಟು ಸಾಲ ಪಡೆದ ಸನಿ, 150 ಬೆಡ್ ಗಳ ಯುವರ್ಸ್ ಶೆಲ್ ಆರಂಭಿಸಿದರು. ಕೇವಲ 15 ದಿನಗಳಲ್ಲಿ ಎಲ್ಲ ಬೆಡ್ ಗಳು ಭರ್ತಿಯಾದವು.

    ಯುವರ್ಸ್ ಶೆಲ್ ಆಗಿ ಲೀಸ್ ಮತ್ತು ಬಾಡಿಗೆಯಲ್ಲಿ ಫ್ಲ್ಯಾಟ್ ಪಡೆದಿದ್ದ ಸನಿ, ಪಿಜಿಗಾಗಿ ಕೋಣೆಯನ್ನ ವಿನ್ಯಾಸಗೊಳಿಸಿದ್ದರು. ಈ ಕೆಲಸಕ್ಕೆ ಸನಿಗೆ ಗೆಳೆಯರಾದ ಶೆಫಾಲಿ, ವಿಶೇಷ್ ಕುಂಗರ್ ಮತ್ತು ಗೌರವ್ ವರ್ಮಾ ಸಾಥ್ ನೀಡಿದ್ದರು. ಸ್ಟಾರ್ಟ್ ಅಪ್ ಆರಂಭವಾದ ಕೆಲ ದಿನಗಳಲ್ಲಿ ಸನಿ ಅವರಿಗೆ ಹೈದರಾಬಾದ್ ಐಐಎಂನಲ್ಲಿ ಪ್ರವೇಶಾತಿ ಸಿಕ್ಕಿತ್ತು. ಆದ್ರೆ ಬ್ಯುಸಿನೆಸ್ ನಿಂದಾಗಿ ಸನಿ ಹೈದರಾಬಾದ್ ಗೆ ಹೋಗದ ಕಾರಣ ಕುಟುಂಬಸ್ಥರ ಕೋಪಕ್ಕೆ ಗುರಿಯಾಗಿದ್ದರು.

    2019 ನವೆಂಬರ್ ನಲ್ಲಿ ನಮ್ಮ ಬ್ಯುಸಿನೆಸ್ ಗಮನಿಸಿದ ಸ್ಟೈಂಜಾ ಲಿವಿಂಗ್ ನಮ್ಮ ಕಂಪನಿಯ ಖರೀದಿಗೆ ಮುಂದಾಯ್ತು. ಆ ವೇಳೆ ನಮ್ಮ ಬಳಿ ಯಾವುದೇ ಕೆಲಸ ಇರಲಿಲ್ಲ. ನಮ್ಮೆಲ್ಲರ ಮುಂದಿನ ಭವಿಷ್ಯಕ್ಕಾಗಿ ಯುವರ್ಸ್ ಶೆಲ್ ಮಾರಲಾಯ್ತು. ಮಾರಾಟ ವೇಳೆ ಕಂಪನಿಯ ಯಾವ ಸದಸ್ಯರು ಸಂತೋಷದಿಂದ ಇರಲಿಲ್ಲ. ಲಾಕ್‍ಡೌನ್ ಮುನ್ನ ಕಂಪನಿ ಪೂರ್ಣ ಪ್ರಮಾಣದಲ್ಲಿ ಸೇಲ್ ಆಗಿದ್ದರಿಂದ ದೊಡ್ಡ ಆರ್ಥಿಕ ಹೊಡೆತದಿಂದ ನಾವೆಲ್ಲರೂ ಬದುಕುಳಿದೆವು. ಇಲ್ಲವಾದಲ್ಲಿ 2020 ನಮಗೆ ದೊಡ್ಡ ಹೊಡೆತ ನೀಡುತ್ತಿತ್ತು ಎಂದು ಸನಿ ಹೇಳುತ್ತಾರೆ.

    ಎನಿಥಿಂಗ್ ಆ್ಯಂಡ್ ಎವಿರಿಥಿಂಗ್: ಯುವರ್ ಶೆಲ್ ಮಾರಾಟದ ಬಳಿಕ ಸನಿ ಹೊಸ ಎಇ ಸರ್ಕಲ್ ಆರಂಭಿಸಿದ್ದಾರೆ. ಎಇ ಅಂದ್ರೆ ಎನಿಥಿಂಗ್ ಆ್ಯಂಡ್ ಎವಿರಿಥಿಂಗ್ ಎಂದರ್ಥ. ಇಲ್ಲಿ ಸನಿ ಮತ್ತು ಅವರ ತಂಡ ಆರ್ಥಿಕ, ಕಾನೂನುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತದೆ. ಇದರ ಜೊತೆ ಸನಿ ಮಾರ್ಕೆಟಿಂಗ್, ಪ್ರೊಡಕ್ಷನ್ ಮತ್ತು ಪ್ರಿಂಟಿಂಗ್ ಬ್ಯುಸಿನೆಸ್ ನಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ವರ್ಷಕ್ಕೆ 20 ಕೋಟಿಗೂ ಅಧಿಕ ಟರ್ನ್ ಓವರ್ ಹೊಂದಿದೆ.

  • ಗೆಳತಿಯರ ಜೊತೆ ಸೇರಿ ಸ್ಟಾರ್ಟ್ ಅಪ್- ತಿಂಗಳಿಗೆ ಲಕ್ಷಕ್ಕೂ ಅಧಿಕ ವ್ಯವಹಾರ

    ಗೆಳತಿಯರ ಜೊತೆ ಸೇರಿ ಸ್ಟಾರ್ಟ್ ಅಪ್- ತಿಂಗಳಿಗೆ ಲಕ್ಷಕ್ಕೂ ಅಧಿಕ ವ್ಯವಹಾರ

    – ನಾಲ್ವರಿಂದ ಆರಂಭವಾದ ವ್ಯವಹಾರದಲ್ಲಿಂದು 200 ಮಹಿಳೆಯರು

    ದೆಹಲಿಯ ನಿವಾಸಿ 40 ವರ್ಷದ ದಿವ್ಯಾ ರಜಪೂತ್ ಗೆಳತಿಯರ ಜೊತೆಗೂಡಿ ಆರಂಭಿಸಿದ ಸ್ಟಾರ್ಟ್ ಅಪ್ ಯಶಸ್ವಿಯಾಗಿದ್ದು, ತಿಂಗಳಿಗೂ ಲಕ್ಷಕ್ಕೂ ಅಧಿಕ ವ್ಯವಹಾರ ನಡೆಸುತ್ತಿದ್ದಾರೆ. ಇದರ ಜೊತೆಗೆ 200ಕ್ಕೂ ಅಧಿಕ ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಜನರಿಗೆ ಪ್ರತಿನಿತ್ಯ ಬಳಕೆಯ ವಸ್ತುಗಳನ್ನ ಆನ್‍ಲೈನ್ ಮೂಲಕ ದಿವ್ಯಾ ಮಾರಾಟ ಮಾಡುತ್ತಾರೆ. ತಿಂಗಳಿಗೆ 200ಕ್ಕೂ ಅಧಿಕ ಆರ್ಡರ್ ಪೂರೈಸುತ್ತಾರೆ. 20 ವರ್ಷಕ್ಕೂ ಅಧಿಕ ಕಾಲ ಶಿಕ್ಷಣ ಇಲಾಖೆಯಲ್ಲಿ ದಿವ್ಯಾ ಕೆಲಸ ಮಾಡಿದ್ದು, ದಿಢೀರ್ ಅಂತ ಗೆಳತಿಯರ ಸಹಾಯದಿಂದ ತಮ್ಮದೇ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.

    ನನ್ನ ಗೆಳತಿ ಕಾಕುಲ್ ರಿಜ್ವಿ ಮಾರ್ಕೆಟಿಂಗ್ ಕೆಲಸ ಮಾಡಿಕೊಂಡಿದ್ದರು. ಆದ್ರೆ ಕಾಕುಲ್ ಕ್ಯಾನ್ಸರ್ ಗೆ ತುತ್ತಾಗಿದ್ದರಿಂದ, ವೈದ್ಯರು ಆರ್ಗೆನಿಕ್ ಪ್ರೊಡೆಕ್ಟ್ ಬಳಸುವಂತೆ ಸಲಗೆ ನೀಡಿದ್ದರು. ಈ ಸಮಯದಲ್ಲಿ ಕಾಕುಲ್ ಮತ್ತು ನನಗೆ ಈ ರೀತಿಯ ಉತ್ಪನ್ನಗಳನ್ನ ಮಾರಾಟ ಏಕೆ ಮಾಡಬಾರದು ಅನ್ನೋ ಪ್ಲಾನ್ ಹೊಳೆಯಿತು. ನಾನು ಸಹ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ಗೆನಿಕ್ ಪ್ರೊಡೆಕ್ಟ್ ಮಾರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆ ಎಂದು ದಿವ್ಯಾ ಹೇಳುತ್ತಾರೆ.

    ಆರಂಭದಲ್ಲಿ ದೊಡ್ಡ ಆಘಾತ: ಆರ್ಗೆನಿಕ್ ಪ್ರೊಡಕ್ಟ್ ಮಾರಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ಕಾಕುಲ್ ರಿಜ್ವಿ ಸಾವನ್ನಪ್ಪುತ್ತಾರೆ. ಮಾರ್ಕೆಟಿಂಗ್ ಬಗ್ಗೆ ಹೆಚ್ಚಾಗಿ ತಿಳಿಯದ ದಿವ್ಯಾ ಅವರಿಗೆ ದೊಡ್ಡ ಆಘಾತ ಎದುರಾಗಿತ್ತು. ಆದ್ರೆ ಛಲ ಬಿಡದ ದಿವ್ಯಾ ಮತ್ತೆ ಬ್ಯುಸಿನೆಸ್ ಆರಂಭಿಸಿದ್ರು. ಈ ಕಠಿಣ ಸಮಯದಲ್ಲಿ ದಿವ್ಯಾ ಅವರ ಕೆಲಸಕ್ಕೆ ಪೂಜಾ ಅರೋರ, ಸುರಭಿ ಸಿನ್ಹಾ, ಆಸ್ಥಾ ಮತ್ತು ಕ್ರಿಸ್ಟಿನಾ ಗ್ರೋವರ್ ಸಾಥ್ ನೀಡಿ ಉದ್ಯಮ ಬೆಳವಣಿಗೆಗೆ ಸಹಾಯಕರಾದರು.

    ಆರಂಭದಲ್ಲಿ ದಿವ್ಯಾ ಅವರು ಜನನಿಬಿಡ ಪ್ರದೇಶದಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸುತ್ತಿದ್ದರು. ಈ ಮೂಲಕ ಆರ್ಗೆನಿಕ್ ಪ್ರೊಡಕ್ಟ್ ಮಾರುತ್ತಿದ್ದರು. ಲಾಕ್‍ಡೌನ್ ಘೋಷಣೆಯಾದಾಗ ಮನೆಯಿಂದ ಹೊರ ಹೋಗುವ ಹಾಗಿರಲಿಲ್ಲ. ಮತ್ತೆ ದಿವ್ಯಾ ಅವರಿಗೆ ದೊಡ್ಡ ಸವಾಲು ಎದುರಾಯ್ತು. ಗೆಳತಿಯರ ಸಲಹೆ ಮೇರೆಗೆ ದಿವ್ಯಾ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ತಮ್ಮದೇ ವೆಬ್‍ಸೈಟ್ ಲಾಂಚ್ ಮಾಡಿದರು. ವೆಬ್‍ಸೈಟ್ ನಲ್ಲಿ ಪ್ರತಿ ಉತ್ಪನ್ನಗಳ ಮಾಹಿತಿ, ಬಳಕೆ, ಲಾಭಗಳನ್ನ ವಿವರಿಸಲಾಗಿದೆ. ಅಂದಿನಿಂದ ದಿವ್ಯಾ ಅವರ ಬ್ಯುಸಿನೆಸ್ ಸಂಪೂರ್ಣ ಆನ್‍ಲೈನ್ ರೂಪಕ್ಕೆ ಬದಲಾಯ್ತು.

    ಉತ್ಪನ್ನಗಳ ತಯಾರಿಕೆ ಹೇಗೆ?: ಉತ್ಪನ್ನಗಳ ತಯಾರಿಕೆಗೂ ಮುನ್ನ ಅದು ಇಕೋ ಪ್ರೆಂಡ್ಲಿ ಅನ್ನೋದನ್ನ ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ 20 ರಿಂದ 25 ಮಹಿಳೆಯರ ತಂಡ ವಿವಿಧ ಉತ್ಪನ್ನಗಳನ್ನ ತಯಾರಿಸಲು ಮುಂದಾಗುತ್ತಾರೆ. ಕೆಲ ಆರ್ಗನಿಕ್ ವಸ್ತುಗಳನ್ನ ದಿವ್ಯಾ ಅವರು ಬೇರೆ ರೈತರಿಂದ ನೇರವಾಗಿ ಖರೀದಿಸುತ್ತಾರೆ. ಅಸ್ಸಾಂ, ಹಿಮಾಚಲ, ಮೇಘಾಲಯ ಸೇರಿದಂತೆ ಹಲವು ರಾಜ್ಯಗಳ ರೈತರೊಂದಿಗೆ ದಿವ್ಯಾ ಅವರ ಒಡೆತನದ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಮೇಘಾಲಯದಿಂದ ಅರಿಶಿನ, ನಾಗಾಲ್ಯಾಂಡ್ ನಿಂದ ಗಿಡ ಮೂಲಿಕೆಗಳನ್ನ ಖರೀದಿಸುತ್ತಾರೆ.

    ಏನೆಲ್ಲ ಸಿಗುತ್ತೆ?: ದಿವ್ಯಾ ಅವರ ತಂಡ 100ಕ್ಕೂ ಉತ್ಪನ್ನಗಳನ್ನ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಸ್ಟೆಶನರಿ ವಸ್ತುಗಳಾದ ಅಗ್ರಿ ವೆಸ್ಟ್ ಮಗ್, ಕ್ಯಾನ್‍ವಾಸ್ ಬ್ಯಾಗ್, ಹರ್ಬಲ್ ಪ್ರೊಡಕ್ಸ್, ಇಮ್ಯುನಿಟಿ ಬೂಸ್ಟರ್, ಕರಕುಶಲ ಸಾಮಾಗ್ರಿಗಳು, ವೆಲನೆಸ್ ಪ್ರೊಡಕ್ಟ್ ಸಹ ಮಾರಲಾಗುತ್ತದೆ. ಇನ್ನು ಹಬ್ಬ ಸೇರಿದಂತೆ ವಿಶೇಷ ದಿನಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನ ಸಹ ದಿವ್ಯಾ ಮಾರಾಟ ಮಾಡುತ್ತಾರೆ.

    ಮುಂದಿನ ದಿನಗಳಲ್ಲಿ ಇದೇ ಪ್ಲಾಟ್‍ಫಾರಂನಲ್ಲಿ ಇನ್ನು ಅಧಿಕ ಬಗೆ ಬಗೆಯ ಉತ್ಪನ್ನಗಳ ಮಾರುವ ಗುರಿಯನ್ನ ಹೊಂದಿದ್ದೇವೆ. ನಮ್ಮ ಉತ್ಪನ್ನಗಳನ್ನ ಗ್ರಾಮೀಣ ಭಾಗದ ಜನ ಉಪಯೋಗಿಸುವಂತಾಗಬೇಕು. ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಸಿಗುತ್ತಿಲ್ಲ. ಹಾಗಾಗಿ ಇವುಗಳ ಮಾರಾಟ ಹೆಚ್ಚಿಸುವ ಮಾರ್ಗದಲ್ಲಿ ನಮ್ಮ ಚಿಂತನೆ ನಡೆದಿದೆ ಎಂದು ದಿವ್ಯಾ ಹೇಳಿದ್ದಾರೆ.

  • ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

    ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

    – ಬರಡು ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದ ಯುವತಿ
    – ಪ್ರಧಾನಿ ಮೋದಿಯಿಂದ ಮೆಚ್ಚುಗೆ

    ತ್ತರ ಪ್ರದೇಶದ ಕಾನೂನು ಪದವೀಧರೆ ಲಾಕ್‍ಡೌನ್ ಸಮಯವನ್ನ ಸದುಪಯೋಗ ಮಾಡಿಕೊಂಡಿದ್ದು, ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಬರಡು ಭೂಮಿಯಿಂದಲೇ ಲಕ್ಷ ಲಕ್ಷ ಹಣವನ್ನ ಯುವತಿ ಸಂಪಾದನೆ ಮಾಡುತ್ತಿದ್ದಾರೆ.

    ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್: ಝಾನ್ಸಿ ನಿವಾಸಿ 23 ವರ್ಷದ ಗುರ್ಲಿನ್ ಚಾವ್ಲಾ ಕೃಷಿಯನ್ನ ಕಂಡ ಯುವತಿ. ಇದೀಗ ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಕಳೆದ ಭಾನುವಾರ ಮನ್ ಕೀ ಬಾತ್ ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸಹ ಗುರ್ಲಿನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಮಹಾರಾಷ್ಟ್ರದ ಪುಣೆಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ. ನಾನು ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆಂದು ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಊರಿಗೆ ಬಂದು ಮನೆಯಲ್ಲಿ ಖಾಲಿ ಕುಳಿತುಕೊಂಡಿದ್ದೆ. ಗಾಡರ್ನಿಂಗ್ ನಲ್ಲಿ ಈ ಸಮಯ ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಮನೆಯಲ್ಲಿಯೆ ಕೆಲ ಸ್ಟ್ರಾಬೆರಿ ಪ್ಲಾಂಟಿಂಗ್ ಮಾಡಿದೆ. ಕೆಲವೇ ದಿನಗಳಲ್ಲಿ ಹಣ್ಣುಗಳ ಮೂಲಕ ಪ್ರತಿಫಲ ನನ್ನದಾಯ್ತು ಎಂದು ಗುರ್ಲಿನ್ ಹೇಳುತ್ತಾರೆ.

    ಆನ್‍ಲೈನ್ ನಲ್ಲಿ ಸ್ಟ್ರಾಬೆರ್ರಿ ಪ್ಲಾಂಟ್ ಹೇಗೆ ಬೆಳೆಯಬೇಕೆಂದು ಗುರ್ಲಿನ್ ಕಲಿತುಕೊಂಡಿದ್ದರು. ಇನ್ನು ಗುರ್ಲಿನ್ ಸಾಧನೆಗೆ ಅವರ ತಂದೆ ಬೆನ್ನಲುಬಾಗಿ ನಿಂತಿದ್ದರು. ಗುರ್ಲಿನ್ ಆಸೆಯಂತೆ ನಾಲ್ಕು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆ ಭೂಮಿಯಲ್ಲಿ 20 ಸಾವಿರ ಸ್ಟ್ರಾಬೆರ್ರಿ ಪ್ಲಾಂಟ್ ತಂದು ನೆಟ್ಟಿದ್ದರು. ಅಂದಿನಿಂದ ಗುರ್ಲಿನ್ ರೈತ ಮಹಿಳೆಯಾಗಿ ಪ್ಲಾಂಟ್ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರೆಲ್ಲರ ಪರಿಣಾಮ ಡಿಸೆಂಬರ್ ವೇಳೆಗೆ ಸ್ಟ್ರಾಬೆರ್ರಿ ಹಣ್ಣುಗಳ ಗುರ್ಲಿನ್ ಕೈ ಸೇರಿದ್ದವು.

    ದಿನಕ್ಕೆ 250ಕ್ಕೂ ಹೆಚ್ಚು ಆರ್ಡರ್, 30 ಸಾವಿರ ವ್ಯಾಪಾರ:
    ಹಣ್ಣುಗಳು ಬಿಡಲು ಆರಂಭಿಸುತ್ತಿದ್ದಂತೆ ಸ್ಟ್ರಾಬೆರ್ರಿ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆಯ ಸಂಪರ್ಕ ಮಾಡಿದ್ದರು. ವ್ಯಾಪಾರಸ್ಥರು ಹಣ್ಣುಗಳ ಗುಣಮಟ್ಟಕ್ಕೆ ಮೆಚ್ಚುಗೆ ಸೂಚಿಸಿ ಆರ್ಡರ್ ನೀಡಲಾರಂಭಿಸಿದರು. ಇದೀಗ ಹಲವು ಸೂಪರ್ ಮಾರ್ಕೆಟ್ ಗಳು ಗುರ್ಲಿನ್ ಅವರಿಂದ ಹಣ್ಣುಗಳನ್ನ ಖರೀದಿಸುತ್ತಿವೆ. ಇದೀಗ ತಮ್ಮದೇ ವೆಬ್‍ಸೈಟ್ ಆರಂಭಿಸಿರುವ ಗುರ್ಲಿನ್ ಆನ್‍ಲೈನ್ ಮೂಲಕ ಸಹ ಆರ್ಡರ್ ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರ್ರಿ ಸಿಗುತ್ತೆ. 250ಕ್ಕೂ ಹೆಚ್ಚು ಆರ್ಡರ್ ಪಡೆಯುವ ಗುರ್ಲಿನ್ ಪ್ರತಿನಿತ್ಯ 30 ಸಾವಿರ ರೂ.ನಷ್ಟು ವ್ಯಾಪಾರ ಮಾಡುತ್ತಾರೆ. ಮಿಶ್ರ ಬೇಸಾಯ ಪದ್ಧತಿಯನ್ನ ಅಳವಡಿಸಿಕೊಂಡಿರುವ ಗುರ್ಲಿನ್ ತರಕಾರಿಯನ್ನ ಸಹ ಬೆಳೆಯುತ್ತಾರೆ.

    ಕುಣಿದು ಕುಪ್ಪಳಿಸಿದ ಗುರ್ಲಿನ್ ತಂದೆ:
    ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಐದು ತಿಂಗಳು ಕಳೆಯುವಷ್ಟರಲ್ಲಿಯೇ ಝಾನ್ಸಿಯಲ್ಲಿ ಆಯೋಜಿಸಿದ ಸ್ಟ್ರಾಬೆರ್ರಿ ಫೆಸ್ಟಿವಲ್ ಗೆ ರಾಯಭಾರಿಯನ್ನಾಗಿ ಸಿಎಂ ಯೋಗಿ ಆದಿತ್ಯನಾಥ್ ನೇಮಕ ಮಾಡಿದ್ರು. ಗುರ್ಲಿನ್ ತಂದೆ ಹರ್ಜಿತ್ ಸಿಂಗ್ ಸಾರಿಗೆ ಉದ್ಯಮಿಯಾಗಿದ್ದಾರೆ. ಪ್ರಧಾನಿಗಳು ಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕಚೇರಿಗೆ ಗುರ್ಲಿನ್ ಹಾಗೂ ಅವರ ಕುಟುಂಬವನ್ನ ಕರೆಸಿಕೊಂಡಿದ್ದರು. ಈ ವೇಳೆ ಗುರ್ಲಿನ್ ತಾವು ಬೆಳೆದ ಸ್ಟ್ರಾಬೆರ್ರಿಗಳನ್ನ ಉಡುಗೊರೆಯಾಗಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.

    ಸ್ಟ್ರಾಬೆರ್ರಿ ಬೆಳೆಯೋದು ಹೇಗೆ?:
    ಸ್ಟ್ರಾಬೆರ್ರಿಯನ್ನು ಲೋಮಿ ಮಣ್ಣಿನಲ್ಲಿ ಬೆಳೆಯೋದು ಸೂಕ್ತ. ಈ ಮಣ್ಣು ಸರಿಯಾದ ಆಮ್ಲಿಯತೆ ಕಾಪಾಡುವ ಖನಿಜ ಅಂಶಗಳನ್ನ ಹೊಂದಿರುತ್ತೆ. ಈ ಮಣ್ಣಿನ ಸ್ಥಿತಿಯನ್ನ ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳನ್ನ ವಾರ್ಷಿಕವಾಗಿ ಬಳಕೆ ಮಾಡಿಕೊಂಡಿರಬೇಕು. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಸ್ಟ್ರಾಬೆರ್ರಿಗಳನ್ನ ಪ್ಲಾಂಟ್ ಮಾಡಬೇಕು. ಸಸಿಗಳ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶಾಖ ಹೆಚ್ಚಾದ್ರೆ ಪ್ಲಾಂಟ್ ಒಣಗಿ, ಹಣ್ಣುಗಳ ಕೆಡುತ್ತವೆ. ಆದ್ರೆ ಬುಂದೇಲಖಂಡ್ ನಲ್ಲಿ ಸಾಮಾನ್ಯ ವಾಗಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತೆ. ಅದ್ರೂ ಛಲ ಬಿಡದ ಗುರ್ಲಿನ್ ವೈಜ್ಞಾನಿಕ ನಿಯಮಗಳನ್ನು ಪಾಲಿಸಿ ಸ್ಟ್ರಾಬೆರ್ರಿ ಬೆಳೆದಿದ್ದಾರೆ.

  • ಲಾಕ್‍ಡೌನ್‍ನಿಂದ ಕೆಲಸ ಹೋಯ್ತು, ಕುರುಕಲು ತಿಂಡಿ ಮಾರಿ ತಿಂಗಳಿಗೆ 45 ಸಾವಿರ ಸಂಪಾದನೆ

    ಲಾಕ್‍ಡೌನ್‍ನಿಂದ ಕೆಲಸ ಹೋಯ್ತು, ಕುರುಕಲು ತಿಂಡಿ ಮಾರಿ ತಿಂಗಳಿಗೆ 45 ಸಾವಿರ ಸಂಪಾದನೆ

    – ಮಾದರಿ ಮಂಗಳಮುಖಿಯ ನೈಜ ಕಥೆ

    ಮಂಗಳಮುಖಿಯರನ್ನ ನೋಡುವ ದೃಷ್ಟಿಕೋನ ಸಮಾಜದಲ್ಲಿ ಬದಲಾಗಬೇಕಿದೆ. ಕೇವಲ ಭಿಕ್ಷಾಟನೆಗೆ ಮಾಡದೇ ಹಲವು ಮಂಗಳಮುಖಿಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಎಷ್ಟೋ ಜನರ ಉದ್ಯೋಗವನ್ನ ಲಾಕ್‍ಡೌನ್ ನುಂಗಿ ಸ್ವಾಹಃ ಮಾಡಿತ್ತು. ಆದ್ರೆ ಗುಜರಾತಿನ ಸ್ವಾವಲಂಬಿ ಮಂಗಳಮುಖಿ ದೃತಿಗೆಡದೇ ತಮ್ಮದೇ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ ಸುಮಾರು 45 ಸಾವಿರ ಸಂಪಾದಿಸಿ, ಕೆಲಸ ಇಲ್ಲ ಅಂತ ಕೈಕಟ್ಟಿ ಕುಳಿತುಕೊಳ್ಳುವ ಸೋಮಾರಿಗಳಿಗೆ ಮಾದರಿಯಾಗಿದ್ದಾರೆ.

    ಗುಜರಾತ್ ರಾಜ್ಯದ ಸೂರತ್ ನಗರದ ನಿವಾಸಿ ರಾಜವಿ ಜಾನ್ ಬದುಕು ಕಟ್ಟಿಕೊಂಡ ಕಥೆ ಇಲ್ಲಿದೆ. ಸಮಾಜದಲ್ಲಿ ಮಂಗಳಮುಖಿ ಬದುಕು ಕಟ್ಟಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ ತಮಗೆದುರಾದ ಎಲ್ಲ ಕಷ್ಟಗಳನ್ನ ಫೇಸ್ ಮಾಡಿರುವ ರಾಜವಿ ಕುರುಕಲ ತಿಂಡಿ ಅಂಗಡಿ ನಡೆಸುತ್ತಿದ್ದು, ಪ್ರತಿನಿತ್ಯ 1,500 ರೂ.ಯಿಂದ 2,000 ರೂ.ವರೆಗೂ ವ್ಯಾಪರ ಮಾಡುತ್ತಾರೆ.

    ಐದು ವರ್ಷಗಳಿಂದ ರಾಜವಿ ಪೆಟ್ಸ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು. ಒಳ್ಳೆಯ ಸಂಬಳದ ಜೊತೆಗೆ ಗೌರವ ಎಲ್ಲವೂ ರಾಜವಿ ಅವರಿಗೆ ಸಿಕ್ಕಿತ್ತು. ಆದರೆ ದೇಶಕ್ಕೆ ಒಕ್ಕರಿಸಿದ ಕೊರೊನಾದಿಂದ ಎಲ್ಲ ವ್ಯಾಪಾರ ನಿಂತ ಪರಿಣಾಮ ರಾಜವಿ ಕೆಲಸ ಕಳೆದುಕೊಂಡರು. ಲಾಕ್‍ಡೌನ್ ನಿಂದಾಗಿ ಮಾಡಿಕೊಂಡು ಸಾಲ ಹಿಂದಿರುಗಿಸಲಾಗದೇ ರಾಜವೀ ಸಂಕಷ್ಟದಲ್ಲಿ ಸಿಲುಕಿಕೊಂಡರು. ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ ಅಂತ ಸ್ವತಃ ರಾಜವಿ ಹೇಳ್ತಾರೆ. ಆದ್ರೆ ಆತ್ಮಸ್ಥೈರ್ಯ ಕಳೆದುಕೊಳ್ಳದ ರಾಜವಿ ಕಷ್ಟಗಳ ನಡುವೆಯೇ ಪುಟ್ಟದಾದ ಕುರುಕಲು ತಿಂಡಿ (ರೆಡಿಮೇಡ್ ಸ್ನಾಕ್ಸ್) ಅಂಗಡಿ ತೆರೆದರು. ಈಗ ಅಂಗಡಿಯಲ್ಲಿ ಪ್ರತಿನಿತ್ಯ 1,500 ರೂ.ಯಿಂದ 2 ಸಾವಿರ ರೂ.ವರೆಗೆ ವ್ಯಾಪಾರ ನಡೆಯುತ್ತಿದೆ.

    ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದ ರಾಜವಿ: ಠಾಕೂರ್ ಕುಟುಂಬದಲ್ಲಿ ನನ್ನ ಜನ್ಮವಾಯ್ತು. ತಂದೆ-ತಾಯಿ ಚಿತೆಯೂ ಠಾಕೂರ್ ಅಂತ ಹೆಸರಿಟ್ಟಿದ್ದರು. ಮೂರನೇ ಲಿಂಗದಲ್ಲಿ ನಾನು ಹುಟ್ಟಿದ್ದರೂ ಕುಟುಂಬಸ್ಥರಿಂದ ಸಿಗುವ ಪ್ರೀತಿಯಲ್ಲಿ ಯಾವುದೇ ಕಡಿಮೆಯಾಗಲಿಲ್ಲ. ಅಮ್ಮನ ಪ್ರೀತಿಯ ಮಗುವಾಗಿ ಬೆಳೆದ ನನಗೆ ಎಲ್ಲದಕ್ಕೂ ಬೆನ್ನಲುಬಾಗಿ ನಿಂತರು. ಸಾಮಾನ್ಯವಾಗಿ ನನ್ನಂತಹ ಮಕ್ಕಳನ್ನ ಮಂಗಳಮುಖಿಯರಿಗೆ ನೀಡುತ್ತಾರೆ. ಆದ್ರೆ ನನ್ನ ಅಮ್ಮ ಹಾಗೆ ಮಾಡಲಿಲ್ಲ. ನನ್ನನ್ನು ಓರ್ವ ಹುಡುಗನ ರೀತಿಯಲ್ಲಿ ಬೆಳೆಸಿದ ಅಪ್ಪ-ಅಮ್ಮ ಸಮಾಜದಲ್ಲಿ ಮಾದರಿ ಪೋಷಕರು ಆಗಿದ್ದರು, ಇಂತಹ ಮಕ್ಕಳನ್ನ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಿದ್ದರು. ತೃತೀಯ ಲಿಂಗಿಯಾದ್ರೂ ನನ್ನ ಮೇಲೆ ಅಪ್ಪ-ಅಮ್ಮನ ಪ್ರೀತಿ ಎಂದೂ ಕಡಿಮೆಯಾಗಿಲ್ಲ ಎಂದು ರಾಜವಿ ಸಂತೋಷ ವ್ಯಕ್ತಪಡಿಸುತ್ತಾರೆ.

    12ನೇ ವಯಸ್ಸಿನಲ್ಲಿ ಮಂಗಳಮುಖಿಯರ ಜೊತೆ ಸೇರ್ಪಡೆ: ಗುಜರಾತಿನಲ್ಲಿ ಹೆಚ್ಚು ಮಂಗಳಮುಖಿಯರನ್ನ ಕಾಣಬಹುದು. ಪೋಷಕರ ಜೊತೆಯಲ್ಲಿದ್ದರೂ ರಾಜವಿ ಮಂಗಳಮುಖಿ ಸಮುದಾಯವನ್ನ ಸೇರಿಕೊಂಡರು. ಅಲ್ಲಿಯೂ ರಾಜವಿ ಅವರಿಗೆ ಒಳ್ಳೆಯ ಸ್ನೇಹ, ಪ್ರೀತಿ ಸಿಕ್ತು. ಗುಜರಾತಿನ ಶೇ.95 ರಷ್ಟು ಮಂಗಳಮುಖಿಯರು ರಾಜವಿ ಅವರನ್ನ ಗುರುತಿಸುತ್ತಾರೆ. 18ನೇ ವಯಸ್ಸಿನಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳುವ ಕೆಲಸವನ್ನ ರಾಜವಿ ಮೊದಲಿಗೆ ಆರಂಭಿಸುತ್ತಾರೆ. ಸುಮಾರು 11 ವರ್ಷ ಈ ಕೆಲಸ ಮಾಡಿದ್ರೂ ಎಂದೂ ಮಕ್ಕಳಲ್ಲಿ ಬೇದಭಾವ ಮಾಡಿಲ್ಲ. ಹಾಗಾಗಿ ಮಕ್ಕಳಿಗೆ ರಾಜವಿ ಅಚ್ಚುಮೆಚ್ಚಿನ ಟೀಚರ್. ಇಂದಿಗೂ ಬಹುತೇಕರು ರಾಜವಿ ಅವರ ಸಂಪರ್ಕದಲ್ಲಿದ್ದಾರೆ.

    32ನೇ ವಯಸ್ಸಿನಲ್ಲಿ ಮಹಿಳೆಯಾಗಿ ಬದಲು: ಕುಟುಂಬಸ್ಥರು ನನ್ನನ್ನ ಹುಡುಗನಾಗಿಯೇ ಬೆಳೆಸಿದರು. ಆದ್ರೆ ಶಾರೀರಿಕ ರಚನೆ, ಆಲೋಚನೆಗಳೂ ಬೇರೆ ಇತ್ತು. ಹಾಗಾಗಿ 32ನೇ ವಯಸ್ಸಿಗೆ ಪುರುಷರ ರೀತಿಯಲ್ಲಿ ಬಟ್ಟೆ ತೊಡುವುದನ್ನ ನಿಲ್ಲಿಸಿ, ಸೀರೆ ತೊಟ್ಟು, ಕುಂಕುಮ ಹಚ್ಚಿ, ಕೈತುಂಬ ಬಳೆ ಹಾಕಿಕೊಂಡು ನಿಜವಾದ ಮಂಗಳಮುಖಿಯಂತೆ ಜೀವನ ಆರಂಭಿಸಿದೆ. ಚಿತೆಯೂನಿಂದ ರಾಜವಿ ಜಾನ್ ಆಗಿ ಬದಲಾದೆ. ಕುಟುಂಬಸ್ಥರು ನನ್ನ ನಿರ್ಧಾರಕ್ಕೆ ಬೆಂಬಲ ನೀಡಿದರು ಎಂದು ರಾಜವಿ ಹೇಳುತ್ತಾರೆ.

    ಆರಂಭದಲ್ಲಿ ನನ್ನ ಅಂಗಡಿಗೆ ಬರಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಈಗ ಸಮಯ ಬದಲಾಗಿದ್ದು, ಗ್ರಾಹಕರು ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾರೆ. ದಿನದಿಂದ ದಿನಕ್ಕೆ ನಗರದಲ್ಲಿ ಅಂಗಡಿ ಚಿರಪರಿಚಿತವಾಗುತ್ತಿದ್ದು, ವ್ಯಾಪಾರವೂ ವೃದ್ಧಿ ಆಗ್ತಿದೆ. ಮುಂದಿನ ದಿನಗಳಲ್ಲಿ ನನ್ನ ಸಮಾಜದವರಿಗೆ ಗೌರವ ಸಿಗುವಂತಾಗಲಿ ಎಂದು ರಾಜವಿ ತಮ್ಮ ಆಸೆಯನ್ನ ಹೊರ ಹಾಕಿದರು.

  • 2 ಸಾವಿರ ಸಂಬಳ ಪಡೆಯುತ್ತಿದ್ದ ವ್ಯಕ್ತಿಯ ಟರ್ನ್ ಓವರ್ ಒಂದು ಕೋಟಿಗೂ ಅಧಿಕ

    2 ಸಾವಿರ ಸಂಬಳ ಪಡೆಯುತ್ತಿದ್ದ ವ್ಯಕ್ತಿಯ ಟರ್ನ್ ಓವರ್ ಒಂದು ಕೋಟಿಗೂ ಅಧಿಕ

    ಭೂಮಿ ತಾಯಿಯನ್ನ ನಂಬಿ ಕೆಟ್ಟವರಿಲ್ಲ. ತನ್ನನ್ನು ನಂಬಿ ಬಂದ ಎಲ್ಲರಿಗೂ ಭೂ ತಾಯಿ ಆಶ್ರಯ ನೀಡಿ ಸಾಕಿ ಸಲಹುತ್ತಾಳೆ ಅನ್ನೋ ಮಾತಿದೆ. ಭೂ ತಾಯಿ ನಂಬಿ ಬದುಕು ಕಟ್ಟಿಕೊಂಡ ಯಶಸ್ವಿ ರೈತನ ಜೀವನ ಕಥೆ ಇಲ್ಲಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ನಿವಾಸಿ ರಾಜಶೇಖರ್ ಪಾಟೀಲ್ ಕೃಷಿಯಿಂದಲೇ ಕೋಟಿ ಕೋಟಿ ಅದಾಯವನ್ನ ತಮ್ಮದಾಗಿಸಿಕೊಂಡಿದ್ದಾರೆ.

    ರಾಜಶೇಖರ್ ಪಾಟೀಲ್ ಕೃಷಿ ಕುಟುಂಬದವರು. 30 ಎಕರೆ ಜಮೀನು ಹೊಂದಿದ್ದರೂ ಮಳೆಯ ಕೊರತೆಯಿಂದಾಗಿ ಉತ್ತಮ ಇಳುವರಿ ಇರಲಿಲ್ಲ. ಹಾಗಾಗಿ ಪದವಿ ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ ರಾಜಶೇಖರ್ ಪ್ರಯತ್ನಿಸಿದ್ದರು. ಆದ್ರೆ ಸರ್ಕಾರಿ ಉದ್ಯೋಗ ಸಿಗದ ಹಿನ್ನೆಲೆ ರಾಜಶೇಖರ್ ಖಾಸಗಿ ಕಂಪನಿಯತ್ತ ಮುಖ ಮಾಡಿದ್ದರು. ಆದರೂ ಉತ್ತಮ ಸಂಬಳ ಸಿಗದಿದ್ದಾಗ ರಾಜಶೇಖರ್ ಅವರಿಗೆ ಹೊಳೆದಿದ್ದು ಬಿದಿರು ಕೃಷಿ ಐಡಿಯಾ. ಇದೇ ಐಡಿಯಾ ರಾಜಶೇಖರ್ ಅವರನ್ನ ಕೋಟ್ಯಧಿಪತಿಯನ್ನಾಗಿ ಮಾಡಿದ್ದು, ಸದ್ಯ 54 ಎಕರೆ ಜಮೀನಿನಲ್ಲಿ ಬಂಬೂ ಬೆಳೆಯುತ್ತಿದ್ದಾರೆ.

    ಆರಂಭದಲ್ಲಿ ಇಲ್ಲಿ ವಿದ್ಯುತ್ ಸಂಪರ್ಕ ಮತ್ತು ಜಲ ಮೂಲವೇ ಇರಲಿಲ್ಲ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ್ರೂ ನೌಕರಿ ಸಿಗಲಿಲ್ಲ. ಕೊನೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ರಾಲೇಗನ್‍ಗೆ ತೆರಳಿದೆ. ಅವರಿಗೆ ಗ್ರಾಮದ ಕೆಲಸಕ್ಕಾಗಿ ಕೆಲ ಯುವಕರ ಅಗತ್ಯವಿತ್ತು. ಆದ್ರೆ ಅಲ್ಲಿಯೂ ನನ್ನ ಸೆಲೆಕ್ಷನ್ ಆಗಲಿಲ್ಲ. ನನ್ನ ಮನವಿ ಬಳಿಕ ಅಣ್ಣಾ ಹಜಾರೆ ಅವರು ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಕೆಲಸ ನೀಡಿದ್ದರು. ಈ ಕೆಲಸಕ್ಕೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಿಗುತ್ತಿತ್ತು. ನಾಲ್ಕೈದು ವರ್ಷ ಅವರ ಬಳಿ ಕೆಲಸ ಮಾಡಿದ್ದರಿಂದ ಕೃಷಿಯಲ್ಲಿ ಮಿತ ಜಲ ಬಳಕೆ ಸೇರಿದಂತೆ ತೋಟಗಾರಿಕೆಯ ಮಾಹಿತಿ ಸಿಕ್ತು ಎಂದು 52 ವರ್ಷದ ರಾಜಶೇಖರ್ ಪಾಟೀಲ್ ಹೇಳುತ್ತಾರೆ.

    ಮೊದಲ ವರ್ಷದಲ್ಲೇ 20 ಲಕ್ಷ ಟರ್ನ್ ಓವರ್:
    ರಾಜಶೇಖರ್ ಅವರ ತಂದೆ ಪಾರ್ಶ್ವವಾಯುಗೆ ತುತ್ತಾಗುತ್ತಾರೆ. ಹಾಗಾಗಿ ಕೆಲ ವರ್ಷಗಳ ಹಿಂದೆ ವೃತ್ತಿ ಜೀವನ ಆರಂಭಿಸಿದ್ದ ರಾಜಶೇಖರ್ ಗ್ರಾಮಕ್ಕೆ ಹಿಂದಿರುಗಿದ್ದರಿಂದ ತಮ್ಮ ಜಮೀನಿನಲ್ಲಿಯೇ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಈ ವೇಳೆ ಪಕ್ಕದೂರಿನ ಓರ್ವ ರೈತ ನಷ್ಟದ ಹಿನ್ನೆಲೆ ತನ್ನ ಹೊಲದಲ್ಲಿಯ ಬಿದಿರು ನಾಶಗೊಳಿಸಲು ಮುಂದಾದ ವಿಷಯ ರಾಜಶೇಖರ್ ಅವರಿಗೆ ಗೊತ್ತಾಗುತ್ತೆ. ರಾಜಶೇಖರ್ ಸುಮಾರು 10 ಸಾವಿರ ರೂ. ನೀಡಿ ಅಲ್ಲಿಯ ಬಿದಿರು ಸಸಿಗಳನ್ನ ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡ್ತಾರೆ. ಮೂರು ವರ್ಷದ ಬಳಿಕ ಬಿದಿರು ಮಾರಿದಾಗ ಮೊದಲ ವರ್ಷದ ಆದಾಯವೇ 20 ಲಕ್ಷ ರೂ. ಆಗಿರುತ್ತೆ.

    ಸಾಂದರ್ಭಿಕ ಚಿತ್ರ

    ವಿದೇಶಿ ತಳಿ ಸೇರಿದಂತೆ 50 ಬಗೆಯ ಬಿದಿರು: ಮೊದಲ ವರ್ಷವೇ ಅತ್ಯಧಿಕ ಲಾಭ ಪಡೆದ ರಾಜಶೇಖರ್ ಅವರ ಆತ್ಮವಿಶ್ವಾಸ ಹೆಚ್ಚಾಗಿತ್ತು. ಮತ್ತೆ ಬಿದಿರು ನಾಟಿ ಮಾಡಿ, 10 ಕಿಲೋ ಮೀಟರ್ ಉದ್ದದ ಕಾಲುವೆಯನ್ನ ಸ್ವಚ್ಛಗೊಳಿಸಿ, ಮಳೆಯ ನೀರು ಒಂದೆಡೆ ಸಂಗ್ರಹವಾಗುವಂತೆ ಮಾಡಿಕೊಂಡರು. ಇದರಿಂದಲೇ ಗ್ರಾಮಸ್ಥರ ದಾಹ ತಣಿಸಿದ್ದಾರೆ. ಇಂದು ರಾಜಶೇಖರ್ ಅವರ ತೋಟದ ಬಿದಿರು ಖರೀದಿಗಾಗಿ ಗ್ರಾಹಕರ ದೂರ ದೂರ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಸದ್ಯ ರಾಜಶೇಖರ್ ತೋಟದಲ್ಲಿ ವಿದೇಶಿ ತಳಿ ಸೇರಿದಂತೆ 50 ಬಗೆಯ ಬಿದಿರು ಬೆಳೆಯಲಾಗುತ್ತದೆ. ಇಷ್ಟು ಮಾತ್ರವಲ್ಲದೇ ರಾಜಶೇಖರ್ ಜಮೀನಿನಲ್ಲಿಯೇ ನರ್ಸರಿ ಆರಂಭಿಸಿದ್ದು, ಬಿದಿರು ಸಸಿಗಳನ್ನ ಬೆಳೆಯಲಾಗುತ್ತದೆ.

    ಸಾಂದರ್ಭಿಕ ಚಿತ್ರ

    ಕೃಷಿ ಜೊತೆಗೆ ತಮ್ಮ ತೋಟಕ್ಕೆ ಆಗಮಿಸುವ ವಿದ್ಯಾರ್ಥಿಗಳು, ರೈತರಿಗೆ ರಾಜಶೇಖರ್ ತರಬೇತಿ ನೀಡುವ ಕೆಲಸ ಮಾಡುತ್ತಾರೆ. ನಾಗ್ಪುರದಲ್ಲಿ ನಡೆದ ಆಗ್ರೋ ವಿಸನ್ ಕಾನ್ಫೆರನ್ಸ್ ನಲ್ಲಿ ಮುಖ್ಯ ಅತಿಥಿಯನ್ನಾಗಿ ರಾಜಶೇಖರ್ ಅವರನ್ನ ಆಹ್ವಾನಿಸಲಾಗಿತ್ತು. ಇಂಡಿಯನ್ ಬಂಬೂ ಮಿಶನ್ ನಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ 100ಕ್ಕೂ ಹೆಚ್ಚು ಜನ ರಾಜಶೇಖರ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಸಾಂದರ್ಭಿಕ ಚಿತ್ರ

    ಬಿದಿರು ಕೃಷಿ ಹೇಗೆ?:
    ಬಿದಿರು ಬೆಳೆಯಲು ನಿರ್ದಿಷ್ಟ ಫಲವತ್ತತೆಯ ಜಮೀನು ಬೇಕಿಲ್ಲ. ಅತಿ ಹೆಚ್ಚು ನೀರು, ಆರೈಕೆಯ ಬಿದಿರು ಕೇಳಲ್ಲ. ಸಾಮಾನ್ಯವಾಗಿ ಜುಲೈನಲ್ಲಿ ಬಿದಿರು ನೆಡಲಾಗುತ್ತದೆ. ಮೂರು ವರ್ಷದ ಬಳಿಕ ಇಳುವರಿ ನಿಮ್ಮ ಕೈ ಸೇರುತ್ತದೆ. ಮಾರುಕಟ್ಟೆಯಲ್ಲಿ ಬೆಲೆ ಸಹ ನೀವು ಬೆಳೆದ ಬಿದಿರಿನ ಜಾತಿಯ ಮೇಲೆ ನಿರ್ಧರವಾಗುತ್ತದೆ. ಹಾಗಾಗಿ ಆರಂಭದಲ್ಲಿ ಯಾವ ವಿಧದ ಬಿದಿರು ಬೆಳೆಯಲಾಗ್ತಿದೆ ಎಂಬುದನ್ನ ತಿಳಿದುಕೊಳ್ಳಬೇಕು. ಬಿದಿರುಗಳ ನಡುವೆ ಮೂರರಿಂದ ನಾಲ್ಕು ಮೀಟರ್ ಅಂತರವಿರುವಂತೆ ನೋಡಿಕೊಳ್ಳಬೇಕು. ಈ ಜಾಗದಲ್ಲಿ ಬೇರೆ ಬೆಳೆಗಳನ್ನ ಬೆಳೆದುಕೊಳ್ಳಬಹುದು. ಬಿದಿರು ಬೆಳೆಯಲು ಇಚ್ಛಿಸುವ ರೈತರು ರಾಷ್ಟ್ರೀಯ ಬಂಬೂ ಮಿಶನ್ ಸಹಾಯ ಪಡೆದುಕೊಳ್ಳಬಹುದು ಎಂದು ರಾಜಶೇಖರ್ ಹೇಳುತ್ತಾರೆ.

    ಸಾಂದರ್ಭಿಕ ಚಿತ್ರ

    ಇಂದು ಮಾರುಕಟ್ಟೆಯಲ್ಲಿ ಬಿದಿರು ಉತ್ಪನ್ನಗಳು ಬೇಡಿಕೆಯನ್ನ ಹೊಂದಿದೆ. ಕೇವಲ ಗೋವಾ ಅಲ್ಲದೇ ದೇಶದ ಪ್ರತಿ ಭಾಗದಲ್ಲಿ ಮನೆಯ ಅಲಂಕಾರಿಕ ವಸ್ತುಗಳಿಗಾಗಿ ಬಿದಿರು ಬಳಸುತ್ತಾರೆ. ಏಣಿ, ಚಾಪೆ, ಪೀಠೋಪಕರಣ, ಆಟಿಕೆ ಸೇರಿದಂತೆ ಹಲವು ವಸ್ತುಗಳ ಉತ್ಪಾದನೆಯಲ್ಲಿ ಬಿದಿರು ಬಳೆಕೆಯಾಗುತ್ತದೆ. ರಾಜಶೇಖರ್ ಅವರು ಹೇಳುವಂತೆ, ದೇಶದಲ್ಲಿ ಬಿದಿರು ಉತ್ಪಾದನೆ ಕಡಿಮೆ. ಆದ್ರೆ ಬೇಡಿಕೆ ಹೆಚ್ಚು. ಒಂದು ಎಕರೆ ಬಿದಿರು ಹಚ್ಚಲು ಸುಮಾರು 10 ಸಾವಿರ ರೂ. ವ್ಯಯವಾಗುತ್ತೆ. ಅದೇ ಮೂರು ವರ್ಷಗಳ ನಂತ್ರ ಲಕ್ಷ ಲಕ್ಷ ನಿಮ್ಮ ಹಣ ಜೇಬು ಸೇರುತ್ತೆ. ಒಮ್ಮೆ ಬಿದಿರು ಹಚ್ಚಿದ್ರೆ ಮುಂದಿನ 30 ರಿಂದ 40 ವರ್ಷ ಇರುತ್ತೆ. ಗುಣಮಟ್ಟದ ಆಧಾರದ ಮೇಲೆ ಒಂದು ಬಿದಿರು ಬೆಲೆ 20 ರೂ.ಯಿಂದ 100 ರೂ.ವರೆಗೆ ಲಭ್ಯವಾಗುತ್ತದೆ.