Tag: ಸಂಸ್ಕøತಿ

  • ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕಬೇಕು: ಚನ್ನಣ್ಣನವರ್

    ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕಬೇಕು: ಚನ್ನಣ್ಣನವರ್

    – ಒಳ್ಳೆಯ ಸಂಸ್ಕಾರ ನಮ್ಮ ಬದುಕನ್ನೇ ಬದಲಿಸುತ್ತೆ
    – ಕಾಯಕಯೋಗಿಗಳಾಗಿ ಕೆಲಸ ಮಾಡಬೇಕು

    ಕೊಪ್ಪಳ: ಇತಿಹಾಸ ಪುಟಗಳಲ್ಲಿ ಕೊಪ್ಪಳವು ಅಂದು ಜೈನರ ಕಾಶಿಯಾಗಿತ್ತು. ಇಂದು ಗವಿಸಿದ್ದೇಶ್ವರನ ಮಹಿಮೆ ಸಂಸ್ಕಾರದಿಂದ ದಕ್ಷಿಣದ ಕಾಶಿ ಎಂದೆನಿಸುತ್ತಿದೆ. ನಿಜಕ್ಕೂ ಅಭಿನವ ಶ್ರೀಗಳು ವೃಕ್ಷೋತ್ಸವ ನೆಡುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂದಿನ ಯುವ ಸಮೂಹ ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯಬೇಕು ಎಂದು ಐಪಿಎಸ್ ಅಧಿಕಾರಿ, ಬೆಂಗಳೂರು ಜಿಲ್ಲೆಯ ಎಸ್‍ಪಿ ರವಿ ಚನ್ನಣ್ಣನವರ್ ಅವರು ಹೇಳಿದರು.

    ಗವಿಮಠದ ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ರವಿ ಚನ್ನಣ್ಣನವರ್, ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಕೊಪ್ಪಳ ಅಂದು ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಜಾತ್ರೆಯಿಂದ ದಕ್ಷಿಣ ಕಾಶಿ ಎಂದೆನಿಸಿದೆ. ಈ ಹಿಂದೆ ಯಾಗಗಳು ನಡೆಯುತ್ತಿದ್ದವಂತೆ, ಅದರ ಮೂಲ ಉದ್ದೇಶ ಜನರ ಹಿತವಾಗಿತ್ತಂತೆ. ಈಗ ಲಕ್ಷ ದೀಪೋತ್ಸವದ ಮೂಲಕ ದೈವದ ಸಾಕ್ಷಾತ್ಕಾರ, ಲಕ್ಷ ವೃಕ್ಷ ನೆಡುವ ಮೂಲಕ ಪ್ರಕೃತಿ ಸಾಕ್ಷಾತ್ಕಾರವಾಗುತ್ತಿದೆ. ಇದರ ಉದ್ದೇಶ ಜನರನ್ನು ಬದುಕಿನಡೆ ನಡೆಯುವಂತೆ ಮಾಡಿದೆ ಎಂದರು.

    ಒಬ್ಬರು ಇನ್ನೊಬ್ಬರ ಮೂಲಕ ಕಲಿತು ಬದುಕನ್ನು ಸುಂದರ ಮಾಡಿಕೊಳ್ಳಬೇಕು. ನಾವು ಕಾಯಕಯೋಗಿಗಳಾಗಿ ಕೆಲಸ ಮಾಡಬೇಕು. ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕನ್ನು ಮುನ್ನಡೆಸಬೇಕು ಎಂದರು. ಇಂದು ಸಮಾಜ ಸರಿಯಿಲ್ಲ. ಆದರೆ ಅದನ್ನು ಸರಿ ಮಾಡದೇ ಬಿಡಬಾರದು. ಎಲ್ಲರೂ ತಿಳಿದು ಮುನ್ನಡೆಯಬೇಕು. ಇಲ್ಲಿನ ಪರಂಪರೆ ನೋಡಿದರೆ ಎಲ್ಲವೂ ಜೀವಂತವಾಗಿದೆ ಎಂದೆನಿಸುತ್ತದೆ. ಶ್ರೀಗಳ ಸಂಕಲ್ಪದೊಂದಿಗೆ ಜಾತ್ರೆ ನಡೆದಿದೆ ಎಂದು ಜಾತ್ರೆಯ ಬಗ್ಗೆ ಮಾತನಾಡಿದರು.

    ಇಲ್ಲಿನ ಭಕ್ತ ಸಮೂಹ ಯುವಕರು ಸಮಾಜದಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಆದರೆ ಇಲ್ಲಿನ ಯುವಕರಲ್ಲಿ ಕೀಳರಿಮೆಯ ಭಾವನೆ ತುಂಬಾ ಇದೆ. ತಾನು ಏನು ಮಾಡಿದೆ ಎನ್ನುವುದಕ್ಕಿಂತ ಇನ್ನೊಬ್ಬರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಸಂಕಲ್ಪದ ಕೊರತೆ ಕಾಡುತ್ತಿದೆ. ಏನಾದರೂ ಮಾಡು, ಖಾಲಿ ಕೂಡಬೇಡ. ಮಾಡುವ ಕೆಲಸ ಶ್ರದ್ಧೆಯಿಂದ ಮಾಡು. ಕೀಳರಿಮೆ ದೂರವಿಡಬೇಕು ಎಂದರು.

    ಪಾಲಕರು ಮಕ್ಕಳಿಗೆ ಸ್ನೇಹಿತರಂತೆ ಕಾಣಬಾರದು. ಅದು ನಿಜಕ್ಕೂ ಕೆಟ್ಟ ಸಂಸ್ಕೃತಿ. ಇದರಿಂದ ಮಕ್ಕಳ ಜೀವನ ಹಾಳಾಗುತ್ತದೆ. ಅವರು ತಪ್ಪು ಮಾಡಿದ ತಕ್ಷಣ ಅದನ್ನು ಅವರಿಗೆ ಮನವರಿಕೆ ಮಾಡಿ ಕೊಡಬೇಕು. ಒಳ್ಳೆಯ ಸಂಸ್ಕಾರ ನಮ್ಮ ಬದುಕನ್ನೇ ಬದಲಿಸಲಿದೆ. ನಾವು ವಯಕ್ತಿಕ ಸಬಲರಾದರೆ ದೇಶವೇ ಅಭಿವೃದ್ಧಿಯಾಗಲಿದೆ ಎಂದು ರವಿ ಚನ್ನಣ್ಣನವರ್ ತಿಳಿಸಿದರು.

  • ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಇಲ್ಲಿನ ಸೂರ್ಯಾಸ್ಥದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.

    ತೋಟಗಾರಿಕೆ ಇಲಾಖೆಯವರು ಪ್ರತಿ ತಿಂಗಳ 2ನೇ ಶನಿವಾರ, ರಾಜ್ಯದ ವಿವಿಧ ಭಾಷೆಯನ್ನು ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಸದ್ಯ ತೋಟಗಾರಿಕೆ ಇಲಾಖೆಯ ವಿನೂತನ ಪ್ರಯತ್ನದಿಂದ ಕೊಡಗು ಹಾಗೂ ರಾಜ್ಯದ ಸಂಸ್ಕೃತಿಗಳನ್ನು ತಿಳಿಯಲು ಪ್ರವಾಸಿಗರಿಗೆ ನೆರವಾಗಿದೆ.

    ಮೊದಲ ಬಾರಿಗೆ ರಾಜಾಸೀಟ್‍ನಲ್ಲಿ ತೋಟಗಾರಿಗೆ ಇಲಾಖೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಾರಿ ಇಲಾಖೆ ಡೋಲು ಕುಣಿತ, ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ. ಕನ್ನಡ ಚಿತ್ರರಂಗ, ಹಿಂದಿ, ಕೊಡವ ಹಾಡು, ವಾದ್ಯ ಸೇರಿದಂತೆ ರಾಜ್ಯದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಾ ಪ್ರವಾಸಿಗರಿಂದ ತುಂಬಿತುಳುಕುವ ರಾಜಾಸೀಟ್‍ಗೆ ಬಂದ ಪ್ರವಾಸಿಗರಿಗೆ ನಾಡಿನ ಸಂಸ್ಕೃತಿ ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಕಾರ್ಯಕ್ರಮ ಮುದ ನೀಡಿದೆ.