Tag: ಸಂಸದ ಸಾಕ್ಷಿ ಮಹಾರಾಜ್

  • ಮೋದಿ ಸುನಾಮಿಯಿಂದಾಗಿ 2019ರ ಬಳಿಕ ಚುನಾವಣೆ ಅಗತ್ಯವಿಲ್ಲ: ಸಾಕ್ಷಿ ಮಹಾರಾಜ್

    ಮೋದಿ ಸುನಾಮಿಯಿಂದಾಗಿ 2019ರ ಬಳಿಕ ಚುನಾವಣೆ ಅಗತ್ಯವಿಲ್ಲ: ಸಾಕ್ಷಿ ಮಹಾರಾಜ್

    ಲಕ್ನೋ: ವಿವಾದಾತ್ಮಕ ಹೇಳಿಕೆ ಮೂಲಕ ಭಾರೀ ಸದ್ದು ಮಾಡುತ್ತಿರುವ ಉತ್ತರ ಪ್ರದೇಶ ಉನ್ನಾವೋ ಕ್ಷೇತ್ರದ ಬಿಜೆಪಿ ಹಾಲಿ ಸಂಸದ ಸಾಕ್ಷಿ ಮಹಾರಾಜ್ ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ.

    ಉನ್ನಾವೋದ ಲೋಕಸಭಾ ಚುನಾವಣಾ ಸಭೆಯಲ್ಲಿ ಮಾತನಾಡಿದ ಸಂಸದರು, ದೇಶದಲ್ಲಿ ನರೇಂದ್ರ ಮೋದಿ ಸುನಾಮಿ ಎದ್ದಿದೆ. ಹೀಗಾಗಿ 2019ರ ಬಳಿಕ ಲೋಕಸಭಾ ಚುನಾವಣೆಯ ಅಗತ್ಯವೇ ಇರುವುದಿಲ್ಲ ಎಂದು ಹೇಳಿದ್ದಾರೆ.

    ಮೋದಿ ಹೆಸರಿನಲ್ಲಿ ಸುನಾಮಿ ಎದ್ದಿದೆ. ದೇಶದಲ್ಲಿ ಹೊಸ ಜಾಗೃತಿ ಮೂಡಿದೆ. ಈ ಬಾರಿಯ ಚುನಾವಣೆ ಬಳಿಕ 2024ರಲ್ಲಿ ಮತ್ತೆ ಚುನಾವಣೆಯ ನಡೆಯುವ ಅವಶ್ಯಕತೆ ಇರುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ಇದರಿಂದಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವು ಶ್ರಮಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

    ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ವಿಪಕ್ಷಗಳ ವಿರುದ್ಧ ರಣತಂತ್ರ ರೂಪಿಸುತ್ತಿದೆ. ಇತ್ತ ಕೇಂದ್ರ ಚುನಾವಣಾ ಆಯೋಗ ಮಾರ್ಚ್ 10ರಂದು ಸುದ್ದಿಗೋಷ್ಠಿ ನಡೆಸಿ, ಈ ಬಾರಿ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಇದರ ಜೊತೆಗೆ ಅರುಣಾಚಲಪ್ರದೇಶ, ಆಂಧ್ರ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗಳ ಚುನಾವಣೆಯೂ ನಡೆಯಲಿದೆ ಎಂದು ತಿಳಿಸಿತ್ತು.

    ಕೇಂದ್ರ ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 11ರಿಂದ ಮತದಾನ ಆರಂಭವಾಗಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv