Tag: ಸಂಸದ ಶಿವರಾಮೇಗೌಡ

  • ಎಚ್‍ಡಿಡಿ ಪಾದದ ಧೂಳಿಗೆ ಸಿಕ್ಕಿ ಸಂಸದನಾದೆ: ಶಿವರಾಮೇಗೌಡ

    ಎಚ್‍ಡಿಡಿ ಪಾದದ ಧೂಳಿಗೆ ಸಿಕ್ಕಿ ಸಂಸದನಾದೆ: ಶಿವರಾಮೇಗೌಡ

    – ಚುನಾವಣೆ ಬಳಿಕ ಮಂಡ್ಯದಲ್ಲಿ ಟೂರಿಂಗ್ ಟಾಕೀಸ್ ಮುಚ್ಚಿ ಹೋಗುತ್ತೆ

    ತುಮಕೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ವಿರುದ್ಧ ‘ಮಾಯಾಂಗನೆ’ ಎಂಬ ಪದ ಬಳಕೆ ಮಾಡಿದ್ದ ಸಂಸದ ಶಿವರಾಮೇಗೌಡ ಅವರು ಎದುರಾಳಿಗಳ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದು, ಚುನಾವಣೆ ಬಳಿಕ ಮಂಡ್ಯದಲ್ಲಿ ಟೂರಿಂಗ್ ಟಾಕೀಸ್ ಮುಚ್ಚಿಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ.

    ತುಮಕೂರು ಕ್ಷೇತ್ರದ ತುರುವೆಕೆರೆಯಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಾನು ಈ ತಾಲೂಕಿನ ಅಳಿಯ. ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ನನಗೆ ಯಾವುದೇ ಸ್ಥಾನಮಾನ ಸಿಗಲಿಲ್ಲ. ಹೀಗಾಗಿ ಪಕ್ಷ ತೊರೆದು ಜೆಡಿಎಸ್‍ಗೆ ಬಂದೆ. ಈಗ ದೇವೇಗೌಡರ ಪಾದದ ಧೂಳಿಗೆ ಹೋದ ಮೇಲೆ ಅಧಿಕಾರ ಸಿಕ್ಕಿ ಸಂಸದನಾಗಿದ್ದೇನೆ. 6 ತಿಂಗಳ ಕಾಲ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ ಎಂದರು.

    ದೇವೇಗೌಡರು ಸಂಸತ್ತಿನಲ್ಲಿ ಇದೇ ಕೊನೆಯ ಭಾಷಣ ಎಂದು ಹೇಳಿದ್ದರು. ಆಗ ಪ್ರಧಾನಿ ಮೋದಿ, ಸೇರಿ ಹಲವರು ನೀವು ಸ್ಪರ್ಧೆ ಮಾಡಬೇಕು ಎಂದು ಹೇಳಿದರು. ನಾವು ಕೂಡ ಮಂಡ್ಯದಿಂದಲೇ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇವು. ಆದರೆ ತುಮಕೂರು ಹಿಂದುಳಿದಿದೆ ಎಂದು ಈ ಕ್ಷೇತ್ರಕ್ಕೆ ದೇವೇಗೌಡ ಅವರು ಬಂದರು ಎಂದು ವಿವರಿಸಿದರು.

    ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ಬಿಜೆಪಿ ಪಕ್ಷಕ್ಕೂ ರೈತರಿಗೂ ಸಂಬಂಧವೇ ಇಲ್ಲ. ಅವರನ್ನ ತಿರಸ್ಕಾರ ಮಾಡಬೇಕು ಎಂದರು. ಸಿಎಂ ಕುಮಾರಸ್ವಾಮಿ ಅವರ ಗುಣಗಾನ ಮಾಡಿ, ರಾಜ್ಯದ 17 ಜನ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಧಮ್ಮಿಲ್ಲ. ಬಾಯಿ ಬಿಟ್ಟು ಮಾತನಾಡಿದರೆ ಎಲ್ಲಿ ಮೋದಿ ನೋಡುತ್ತಾರೆ ಎಂದು ಉಸಿರು ಬಿಗಿದಿಟ್ಟುಕೊಂಡು ಕುಳಿತಿರುತ್ತಾರೆ ಎಂದು ಬಿಜೆಪಿ ಸಂಸದರನ್ನ ಕುಟುಕಿದರು.

    ಇತ್ತ ಸುಮಲತಾ ಅವರ ವಿರುದ್ಧ ಶಿವರಾಮೇಗೌಡ ಅವರು ಮಾಯಾಂಗನೆ ಎಂಬ ಪದ ಬಳಕೆ ಮಾಡಿದ ಸಂಬಂಧ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. ಕ್ಯಾಂಡಲ್ ಹಿಡಿದು ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಿವರಾಮೇಗೌಡರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

  • ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

    ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

    – ವಿರೋಧ ಪಕ್ಷದವರು ಟೂರಿಂಗ್ ಟಾಕೀಸ್
    – ಎಂಪಿ ಗಿರಿ ಇಲ್ಲ ಅಂದ್ರೆ ನಾನು ಬೀದಿಗೆ ಬರಲ್ಲ

    ಮಂಡ್ಯ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಂಸದ ಶಿವರಾಮೇಗೌಡ, ಸುಮಲತಾ ಅಂಬರೀಶ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.

    ನಾಗಮಂಗಲ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದರು, ಟೂರಿಂಗ್ ಟಾಕೀಸ್‍ಗೆ ಮಾರು ಹೋಗಬೇಡಿ. ಎಲ್ಲರ ಮೇಲೆ ಆರೋಪ ಮಾಡುವ ನೀಚ ಬುದ್ಧಿ ಇರುವವರಿಗೆ ಅಧಿಕಾರ ಕೊಡಬೇಡಿ. ನಿಮ್ಮ ಸಾವಿಗೆ ಬರುವವರು ನಾವು. ನಿಮ್ಮ ಪಲ್ಲಕ್ಕಿ ಹೊರುವವರು ನಾವು. ವಿರೋಧ ಪಕ್ಷದವರು ಟೂರಿಂಗ್ ಟಾಕೀಸ್, ಅವರ ಸಿನಿಮಾವನ್ನು ದುಡ್ಡು ಕೊಟ್ಟು ನೋಡುತ್ತೇವೆ. ಅವರನ್ನು ನೋಡಲು ಹೋದವರೆಲ್ಲ ವೋಟ್ ಹಾಕಲ್ಲ. ಅವರ ಹಿಂದೆ ಓಡಾಡುವವರಿಗೆ ಯಾವ ಪಕ್ಷಕ್ಕೆ ಹೋಗಬೇಕು ಅಂತ ತೀರ್ಮಾನಿಸುವಂತೆ ಈಗಲೂ ಹೇಳುತ್ತೇನೆ ಎಂದು ಹೇಳಿದರು.

    ಎಂಪಿ ಗಿರಿ ಇಲ್ಲ ಅಂದ್ರೆ ನಾನು ಬೀದಿಗೆ ಬರಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಯಲ್ಲೇ ಇರುತ್ತೇನೆ. ಇದು ನನ್ನ ಮರ್ಯಾದೆ ಪ್ರಶ್ನೆ. ನನ್ನ ಅಭಿಮಾನಿಗಳು ನನ್ನ ಮಾತು ಕೇಳದಿದ್ದರೆ ಅವರು ಅಭಿಮಾನಿಗಳೇ ಅಲ್ಲ ಎಂದರು.

    ದಿಗ್ಗಜರು ಒಂದೇ ವೇದಿಕೆಯಲ್ಲಿ ಕುಳಿತು ಒಟ್ಟಿಗೆ ಹೋಗುವ ತೀರ್ಮಾನ ಕೈಗೊಂಡಿದ್ದಾರೆ. ಎಚ್.ಡಿ.ದೇವೇಗೌಡರ ಗರಡಿಯಲ್ಲೇ ಪಳಗಿ, ಯಾವುದೇ ಕೆಲಸ ಮಾಡಬಲ್ಲೇ ಎಂದು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜೊತೆಯಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಅವರನ್ನು ಗೆಲ್ಲಿಸಲು ಮುಂದಾದ ಸಚಿವ ಪುಟ್ಟರಾಜು ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

    ಭಾರತದಲ್ಲಿ ಎಲ್ಲ ಕಡೆಯೂ ಚುನಾವಣೆ ನಡೆಯುತ್ತಿದೆ. ಆದರೆ ಮಾಧ್ಯಮ ಮಿತ್ರರು ಮಂಡ್ಯವನ್ನು ಹೈವೋಲ್ಟೇಜ್ ಕ್ಷೇತ್ರ ಮಾಡಿದ್ದಾರೆ. ಇದು ಬೇಕೇ? ಮಂಡ್ಯ ಜಿಲ್ಲೆಯನ್ನು ಮಾಧ್ಯಮದವರು ಪೆಡಂಭೂತ ಎಂಬ ರೀತಿ ಎಂಬಂತೆ ತೋರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸಿದ ರೀತಿ ಇನ್ಯಾರನ್ನೂ ತೋರಿಸಿಲ್ಲ. ಬಿಜೆಪಿಗೆ ಮಂಡ್ಯದಲ್ಲಿ ಅಭ್ಯರ್ಥಿ ಹಾಕಲು ಯೋಗ್ಯತೆಯಿಲ್ಲ. ಹಿಂಬಾಗಿಲ ಮೂಲಕ ಸಪೋರ್ಟ್ ಮಾಡಿದ್ದಾರೆ. ಕುಟುಂಬ ರಾಜಕಾರಣ ಅಂತಾರೆ, ಎಚ್.ಡಿ.ದೇವೇಗೌಡರ ಮೊಮ್ಮಕ್ಕಳು ರಾಜಕೀಯಕ್ಕೆ ಬರಬಾರದೇ ಎಂದು ಸಭೆಯಲ್ಲಿ ಸೇರಿದ್ದ ಜನರಿಗೆ ಪ್ರಶ್ನಿಸಿದರು.

    ಸಭೆ ಆರಂಭವಾಗುವುದಕ್ಕೂ ಮುನ್ನ ವೇದಿಕೆ ಮೇಲಿದ್ದ ಬ್ಯಾನರ್‍ನಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿ ಭಾವಚಿತ್ರವೇ ಇರಲಿಲ್ಲ. ಇದರಿಂದಾಗಿ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯ ಕೆಲ ಮುಖಂಡರು ಬ್ಯಾನರ್ ಅನ್ನು ತೆರವುಗೊಳಿಸಿದರು. ಸಭೆಯಲ್ಲಿ ಸೇರಿದ್ದ ಜನರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಜವಾದ ಜೋಡೆತ್ತುಗಳು. ಬಣ್ಣ ಹಚ್ಚಿಕೊಳ್ಳುವವರಲ್ಲ ಜೋಡೆತ್ತುಗಳಲ್ಲ ಎಂದು ಘೋಷಣೆ ಕೂಗಿದರು.

  • ಜಾತಿ ಬಿಟ್ಟು ಜಾತಿಯವರನ್ನ ಮದ್ವೆ ಆದ್ಮೇಲೆ ಹೇಗೆ ಗೌಡ್ತಿ ಆಗ್ತಾರೆ- ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡ

    ಜಾತಿ ಬಿಟ್ಟು ಜಾತಿಯವರನ್ನ ಮದ್ವೆ ಆದ್ಮೇಲೆ ಹೇಗೆ ಗೌಡ್ತಿ ಆಗ್ತಾರೆ- ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡ

    ಮಂಡ್ಯ: ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಸಂಸದ ಶಿವರಾಮೇಗೌಡ ಪ್ರಶ್ನೆ ಮಾಡಿದ್ದಾರೆ.

    ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ದರೂ ಕೂಡ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಕೈ ಕಟ್ಟಿ ಕುಳಿತು ಕೊಳ್ಳಲು ಆಗುತ್ತಾ? ನಾನು ಗೌಡ್ತಿ ಗೌಡ್ತಿ ಅಂದರೆ, ಯಾವ್ ರೀತಿ ಗೌಡ್ತಿ ಹೇಳಬೇಕಲ್ಲ ಎಂದು ಹೇಳಿದ್ರು.

    ಇವರೆಲ್ಲಾ ನಾಯ್ಡುಗಳು ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ. ದರ್ಶನ್ ಅವರು ಸುದೀಪ್, ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್‍ಗಿಂತ ದೊಡ್ಡ ನಟನೇನಲ್ಲ. ಅವರು ಯಾವುದೇ ಪಕ್ಷದ ಅಭ್ಯರ್ಥಿ ಪರ ಚುನಾವಣೆಗೆ ಹೋಗಲ್ಲ ಎಂದು ಹೇಳಿದ್ದಾರೆ. ಇವರು ಬಂದು ಏನು ಮಾಡಲು ಮಾಡಲು ಸಾಧ್ಯ. ದರ್ಶನ್ ಒಳ್ಳೆ ಸಿನಿಮಾ ತೆಗೆಯುತ್ತಾರೆ ಅಷ್ಟೇ ಎಂದರು.

    ಒಕ್ಕಲಿಗ, ರೈತ ಸಮುದಾಯದ ವಿರುದ್ಧ ತೊಡೆ ತಟ್ಟಿರುವ ವಿರುದ್ಧ ಸುಮ್ಮನೆ ಇರಲು ಸಾಧ್ಯವೇ? ನಾವು ಚುನಾವಣೆಯನ್ನು ಎದುರಿಸುತ್ತೇವೆ. ಆದರೆ ನಾನು ಈ ಸಮಯದಲ್ಲಿ ಅವರ ಕೊಡುಗೆ ಏನು ಎಂದು ಕೇಳಲು ಇಚ್ಛಿಸುತ್ತೇನೆ ಎಂದರು. ಅಲ್ಲದೇ ಅಂಬರೀಶ್ ಅವರು ಇಲ್ಲದ ವೇಳೆ ಬಾರದ ಜಾತಿ ಪ್ರಶ್ನೆ ಈಗ ಏಕೆ ಬಂತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 15 ವರ್ಷಗಳಿಂದ ರಾಜಕೀಯಕ್ಕೆ ಬಾರದ ಅವರು ಈಗ ಏಕೆ ಬಂದಿದ್ದಾರೆ. ಅದ್ದರಿಂದಲೇ ಈಗ ಪ್ರಶ್ನೆ ಮಾಡುತ್ತಿದ್ದೇವೆ. ಅವರು ಅಂತರ್‍ಜಾತಿ ವಿವಾಹ ಎಂದು ಹೇಳಲಿ ಎಂದರು.

    ಶಿವರಾಮೇಗೌಡರ ಟೀಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಈ ಬಗ್ಗೆ ಜನತೆ ತೀರ್ಮಾನ ಮಾಡುತ್ತಾರೆ. ಚುನಾವಣೆ ಬಳಿಕ ಯಾರು ಇರುತ್ತಾರೆ ಇರಲ್ಲ ಎಂಬುದು ತಿಳಿಯಲಿದೆ. ನಾಲ್ಕು ತಿಂಗಳ ಹಿಂದೆ ಸಂಸದರಾಗಿ ಆಯ್ಕೆ ಆಗಿದ್ದ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಇದರಲ್ಲೇ ಪಕ್ಷದಲ್ಲಿ ಅವರ ಸ್ಥಾನ ಏನು ಎಂಬುವುದು ತಿಳಿಯಲಿದೆ ಎಂದು ತಿಳಿಸಿದರು.

    ಈ ಹಿಂದೆ ಶಿವರಾಮೇಗೌಡ ಹೇಳಿದ್ದೇನು?:
    ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.

     

  • ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ: ಶಿವರಾಮೇಗೌಡ

    ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ: ಶಿವರಾಮೇಗೌಡ

    – ದೇವೇಗೌಡರ ಶಕ್ತಿ ರಾಹುಲ್ ಗಾಂಧಿಗೆ ಗೊತ್ತಿದೆ ಆದರೆ ರಾಜ್ಯದವರಿಗೆ ಗೊತ್ತಿಲ್ಲ
    – ಎಚ್‍ಡಿಡಿ ನಂಬಿದವರು ಯಾರೂ ಬದುಕಿಲ್ಲ

    ಮಂಡ್ಯ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಶಕ್ತಿ ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗೊತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ಸಿಗರಿಗೆ ದೇವೇಗೌಡರ ಶಕ್ತಿ ಅರ್ಥವಾಗುತ್ತಿಲ್ಲ ಎಂದು ಹಾಲಿ ಸಂಸದ ಶಿವರಾಮೇಗೌಡ ವಾಗ್ದಾಳಿ ನಡೆಸಿದರು.

    ನಗರದ ಸಿಲ್ವರ್ ಜ್ಯುಬಲಿ ಪಾರ್ಕಿನಲ್ಲಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ನಡೆದಿದ್ದ ಜೆಡಿಎಸ್ ಸಮಾವೇಶದಲ್ಲಿ ಸಂಸದರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್‍ಗೆ ಕಾಂಗ್ರೆಸ್ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್ ಅನಿವಾರ್ಯ ಎಂದರು.

    ನಾವೆಲ್ಲರೂ ಒಪ್ಪಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಎಚ್.ಡಿ.ದೇವೇಗೌಡ ಅವರು ನನ್ನನ್ನು ಕರೆದು ಲೋಕಸಭಾ ಉಪಚುನಾವಣೆಯ ಟಿಕೆಟ್ ನೀಡಿದರು. ಅವರ ಆಶೀರ್ವಾದದಿಂದ ಸಂಸದನಾದೆ. ಕೆಲವು ವಿಚಾರ ಹೇಳದಿದ್ದರೆ ತಪ್ಪಾಗುತ್ತೆ. ಬೇರೆ ಬೇರೆ ಕಾರಣದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ನನ್ನನ್ನು ಗೆಲ್ಲಿಸಿದಕ್ಕಿಂತ ಹೆಚ್ಚು ಮತಗಳಿಂದ ನಿಖಿಲ್ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿಕೊಂಡರು.

    ದೇವೇಗೌಡ ಅವರದ್ದು ಕುಟುಂಬ ರಾಜಕಾರಣ ಎಂಬ ರೀತಿ ಬಿಂಬಿಸಲಾಗಿದೆ. ಇದು ಕುಟುಂಬ ರಾಜಕಾರಣವಲ್ಲ. ಎಚ್.ಡಿ.ದೇವೇಗೌಡ ಅವರು ಸ್ವಂತ ಆಸ್ತಿ ಮಾಡಿಕೊಳ್ಳಲಿಲ್ಲ ಎಂದು ಸಂಸದರು ಹೊಗಳಿದರು. ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ನನಗೆ ಕಿಂಚಿತ್ತು ನೋವಿಲ್ಲ. ಐದು ಲಕ್ಷ ಬಹುಮತದಿಂದ ನಿಖಿಲ್ ಅವರನ್ನು ಗೆಲ್ಲಿಸುತ್ತೇವೆ ಎಂದರು.

    ಎಚ್.ಡಿ.ದೇವೇಗೌಡ ಅವರನ್ನು ನಂಬಿದವರು ಯಾರೂ ಬದುಕಿಲ್ಲ ಎಂದು ಸಂಸದರು ಹೇಳಿ ಎಡವಟ್ಟು ಮಾಡಿಕೊಂಡರು. ಆದರೆ ತಮ್ಮ ಹೇಳಿಕೆ ಮೇಲೆ ಗಮನ ಹರಿಸದೇ ಮಾತು ಮುಂದುವರಿಸಿದರು. ಬಳಿಕ ಎಚ್.ಡಿ.ದೇವೇಗೌಡ ಅವರ ಗರಡಿಯಲ್ಲಿ ಪಳಗಿ ಬಳಿಕ ಪಕ್ಷ ತ್ಯಜಿಸಿ ಅಧಿಕಾರ ಹಿಡಿದವರ ಹೆಸರನ್ನು ಶಿವರಾಮೇಗೌಡ ಪ್ರಸ್ತಾಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv