Tag: ಸಂಸದ ನಳಿನ್ ಕುಮಾರ್ ಕಟೀಲ್

  • ನಳಿನ್ ಅಹಂಕಾರ ಬಿಡಲಿ: ಬಿಜೆಪಿ ಕಾರ್ಯಕರ್ತರಿಂದ ಅಸಮಾಧಾನ

    ನಳಿನ್ ಅಹಂಕಾರ ಬಿಡಲಿ: ಬಿಜೆಪಿ ಕಾರ್ಯಕರ್ತರಿಂದ ಅಸಮಾಧಾನ

    – ನೀವು ಗೆಲ್ಲುತ್ತೀರಿ, ಆದ್ರೆ ನಾವು ವಿಜಯೋತ್ಸವ ಆಚರಿಸಲ್ಲ

    ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಮುಗಿದು ಹೋಗಿದೆ. ಆದರೆ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಪಕ್ಷದ ಕಾರ್ಯಕರ್ತರ ಅಸಮಾಧಾನ ಮಾತ್ರ ನಿಂತಿಲ್ಲ.

    ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ನಳಿನ್ ಕುಮಾರ್ ಗೆಲ್ಲುತ್ತಾರೆ, ಗೆಲ್ಲಿಸುತ್ತೇವೆ. ಅವರು ಅಹಂಕಾರ ಬಿಡಲಿ. ತಮ್ಮನ್ನು ಬೆಳೆಸಿದ ಕಾರ್ಯಕರ್ತರ ಜೊತೆ ಅಹಂ ತೋರಿಸುವುದು ಬೇಡ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಮೋದಿಗಾಗಿ ವೋಟ್, ನಿಮ್ಮ ಮೇಲಿನ ಪ್ರೀತಿಯಿಂದಲ್ಲ. ಕೇಂದ್ರದಲ್ಲಿ ಮೋದಿ ಮತ್ತೆ ಬರಬೇಕೆಂಬ ನೆಲೆಯಲ್ಲಿ ಬಿಜೆಪಿಗೆ ವೋಟ್ ಹಾಕುತ್ತೇವೆ. ನಳಿನ್ ಕುಮಾರ್ ಅವರಿಗೆ ಅಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಗೂ ಮುನ್ನವೇ ನಳಿನ್ ಕುಮಾರ್ ಬದಲಾವಣೆಗಾಗಿ ಒತ್ತಡ ಕೇಳಿಬಂದಿತ್ತು. ಹೀಗಾಗಿ ಸಂಘ ಪರಿವಾರದಲ್ಲೂ ಕೆಲವು ಪ್ರಮುಖರು ಕೂಡ ಇದಕ್ಕೆ ಪಟ್ಟು ಹಿಡಿದಿದ್ದರು. ಆದರೆ ಕೊನೆ ಕ್ಷಣದಲ್ಲಿ ನಳಿನ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಳಿಕ ಅಸಮಾಧಾನಗೊಂಡಿದ್ದ ಕಾರ್ಯಕರ್ತರು ಮೋದಿಗಾಗಿ ನಮ್ಮ ವೋಟ್ ಅನ್ನುತ್ತಾ ಭಿನ್ನರಾಗದಲ್ಲೇ ಪ್ರಚಾರದಲ್ಲಿ ತೊಡಗಿದ್ದರು.

    ಚುನಾವಣೆ ಮುಗಿದರೂ, ಕಾರ್ಯಕರ್ತರ ಆಕ್ರೋಶ ನಿಂತಿಲ್ಲ. ನಳಿನ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು, ನೀವು ಗೆಲ್ಲುತ್ತೀರಿ. ಹಾಗಂತ ನಾಡಿದ್ದು ಮತ ಎಣಿಕಾ ಕೇಂದ್ರಕ್ಕೆ ಬಂದು ವಿಜಯೋತ್ಸವ ಆಚರಿಸಲ್ಲ ಎಂಬುದಾಗಿ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?:
    ಚುನಾವಣೆ ಮಗಿದಿದೆ. ನಾಡಿದ್ದು ನೀವು ಗೆದ್ದೇ ಗೆಲ್ಲುತ್ತೀರ. ಗೆಲ್ಲಲೇ ಬೇಕು ಕೂಡ. ಗೆಲುವಿಗಾಗಿ ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ದುಡಿದಿದ್ದೇವೆ. ಮೊನ್ನೆ ತಾನೆ ಮತಾದಾನ ಗುರುತಿನ ಕಾರ್ಡ್ ಮಾಡಿಸಿದ ಯುವ ಮತದಾರನಿಂದ ಹಿಡಿದು ಅಜ್ಜ- ಅಜ್ಜಿಯರನ್ನು ಕೂಡ ಮತಗಟ್ಟೆಗೆ ಕರೆತಂದು ಮತ ಹಾಕಿಸಿದ್ದೇವೆ. ಅದರರ್ಥ ನಿಮ್ಮ ಮೇಲಿನ ಪ್ರೀತಿಯಿಂದ ನಾವು ಮತ ಹಾಕಿದ್ದಲ್ಲ. ಮೋದಿ ಎನ್ನುವ ಮಹಾನ್ ವ್ಯಕ್ತಿ ನಮ್ಮಂತಹ ಸಾಮಾನ್ಯ ಕಾರ್ಯಕರ್ತನ ಹೃದಯ ಮಂದಿರದಲ್ಲಿ ಶಕ್ತಿಯಾಗಿ ರೂಪುಗೊಂಡಿದ್ದಾರೆ. ಅವರ ಗೆಲುವು ನಮಗೆ ಮುಖ್ಯ. ಮೋದಿ ಭಾರತದ ಅನಿವಾರ್ಯತೆ ಮತ್ತು ಅವಶ್ಯಕತೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾವಾಗ ನಿಮ್ಮನ್ನು ಬೆಳೆಸಿದ ಸಂಘದ ಹಿರಿಯರನ್ನು ಕಡೆಗಣಿಸುವ ಮಟ್ಟಕ್ಕೆ ಬಂದುಬಿಟ್ಟಿರೋ, ಯಾವಾಗ ಸಂಘಟನೆಗಾಗಿ ಬದುಕನ್ನೇ ಮುಡುಪಾಗಿಟ್ಟವರನ್ನು ಬದಿಗಿರಿಸುವ ಪ್ರಯತ್ನ ಮಾಡಿದಿರೋ ಅವಾಗಲೇ ನಮ್ಮೆಲ್ಲರಿಂದ ದೂರವಾಗಿದ್ದೀರಿ ನಳಿನ್ ಜೀ.

    ಒಂದು ನೆನಪಿಡಿ… ನಾಡಿದ್ದು ಮತ ಎಣಿಕೆಯಂದು ನೀವು ಗೆದ್ದಾಗ ನಮ್ಮ ಮನೆಯಲ್ಲಿ ಸಿಹಿ ಹಂಚುತ್ತೇವೆ. ಮನೆ ಪಕ್ಕ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ. ಆದರೆ ಮತ ಎಣಿಕೆ ಕೇಂದ್ರದೆಡೆಗೆ ಬಂದು ಸಂಭ್ರಮಿಸಲಾರೆವು. ನಿಮ್ಮನ್ನು ಹೆಗಲ ಮೇಲೆ ಹೊತ್ತೊಯ್ದು ಸಂಭ್ರಮಿಸಲಾರೆವು, ನಮ್ಮೂರಿಗೆ ಕರೆದು ವಿಜಯೋತ್ಸವವನ್ನೂ ಮಾಡಲಾರೆವು.. ಕಾರಣ ನಿಮ್ಮ ಮೇಲೆ ಹೇಳಲಾರದಷ್ಟು ನೋವಿದೆ ನಳಿನ್ ಜೀ. ಈಗಲೂ ನೀವು ನಿಮ್ಮ ದುರಹಂಕಾರದ ವರ್ತನೆಯಿಂದ ಬದಲಾದರೆ ಮಾತ್ರ ನಿಮಗೆ ಶ್ರೇಯಸ್ಕರ. ಮತ್ತೊಮ್ಮೆ ಹೇಳುತ್ತೇವೆ. ನೀವು ಗೆಲ್ಲುತ್ತೀರ. ಖಂಡಿತಾ ಗೆಲ್ಲಿಸಿದ್ದೇವೆ ಕೂಡ. ಆದರೆ ನಿಮ್ಮ ಮೇಲಿನ ಪ್ರೀತಿಯಿಂದಲ್ಲ. ನವ ಭಾರತ ನಿರ್ಮಾಣದ ಕನಸು ಹೊತ್ತ ಮೋದಿಗಾಗಿ ನಿಮ್ಮನ್ನು ಗೆಲ್ಲಿಸುತ್ತಿದ್ದೇವೆ ಅಷ್ಟೆ. ನೀವು ಬದಲಾಗುವಿರಿ ಎನ್ನುವ ನಿರೀಕ್ಷೆಯೊಂದಿಗೆ.

  • ಕುಮಾರಸ್ವಾಮಿಗೆ ಏನೂ ಆಗಲ್ಲ, ಸರ್ಕಾರವೇ ಸಾಯುತ್ತೆ- ಸಂಸದ ನಳಿನ್ ಕುಮಾರ್

    ಕುಮಾರಸ್ವಾಮಿಗೆ ಏನೂ ಆಗಲ್ಲ, ಸರ್ಕಾರವೇ ಸಾಯುತ್ತೆ- ಸಂಸದ ನಳಿನ್ ಕುಮಾರ್

    ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಏನೂ ಆಗಲ್ಲ. ಆದರೆ ಸರ್ಕಾರ ಮಾತ್ರ ಉಳಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾನು ಸಾಯುತ್ತೇನೆ ಅಂತ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು. ಸಾಯುತ್ತೇನೆ ಅಂದರೆ ಸರ್ಕಾರ ಸಾಯುತ್ತೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತೇನೆ ಅಂಥ ಅರ್ಥ. ಜನರಲ್ಲಿ ಸಿಂಪಥಿ ಕ್ರಿಯೇಟ್ ಮಾಡಿಯಾದ್ರೂ ಸರ್ಕಾರ ಉಳಿಸುವ ಪ್ರಯತ್ನ ಅವರದ್ದು ಎಂದು ವ್ಯಂಗ್ಯವಾಡಿದರು.

    ಎಚ್.ಡಿ.ಕುಮಾರಸ್ವಾಮಿ ಅವರು ಏನೇ ಮಾಡಿದರೂ ರಾಜ್ಯ ಸರ್ಕಾರ ಬೇಗ ಸಾಯುತ್ತದೆ. ಮತ್ತೆ ಮುಂದೇನಾಗುತ್ತೋ ಆಮೇಲೆ ನೋಡೋಣ ಎಂದ ಸಂಸದರು, ರಾಜ್ಯದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾದವರು ಈತರ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ ಎಂದೆಂದಿಗೂ ಜನರ ಜೊತೆ ಇರುತ್ತದೆ ಎಂದು ಹೇಳಿದರು.

    ಈ ಬಾರಿಯ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರವೇ ಎಚ್.ಡಿ.ಕುಮಾರಸ್ವಾಮಿ ಅವರ ಗಂಟಲಲ್ಲಿ ಸಿಕ್ಕಿಕೊಳ್ಳುತ್ತಿದೆ. ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ಕರಾವಳಿ ಜಿಲ್ಲೆಯಲ್ಲಿ ಬಂದ ಫಲಿತಾಂಶವೇ ಈ ಉಪಚುನಾವಣೆಯಲ್ಲಿ ಬರುತ್ತದೆ ಎಂದ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಟೆಂಟ್ ಹಾಕಿದಷ್ಟು ಬಿಜೆಪಿಗೆ ಲಾಭವಾಗಲಿದೆ ಎಂದು ಲೇವಡಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv