Tag: ಸಂಸದೆ ಶೋಭಾ ಕರಂದ್ಲಾಜೆ

  • ಸಂಸದೆ ಶೋಭಾ ಕರಂದ್ಲಾಜೆಗೆ ಪ್ರತಿಭಟನೆಯ ಸ್ವಾಗತ

    ಸಂಸದೆ ಶೋಭಾ ಕರಂದ್ಲಾಜೆಗೆ ಪ್ರತಿಭಟನೆಯ ಸ್ವಾಗತ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳಿಯರು ಪ್ರತಿಭಟನೆ ಸ್ವಾಗತ ಕೋರಿ ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.

    ಕಳಸ ತಾಲೂಕು ಎಂದು ಅಧಿಸೂಚನೆ ಹೊರಡಿಸಿ ವರ್ಷಗಳೇ ಕಳೆದಿವೆ. ಆದರೆ, ಎರಡು ವರ್ಷವಾದರೂ ತಾಲೂಕು ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಎಂದು ಸಂಸದರು, ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಇಂದು ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿ ವಿವಿಧ ಕಾಮಗಾರಿ ಉದ್ಘಾಟನೆಗೆಂದು ಕಳಸಕ್ಕೆ ಬಂದಿದ್ದರು. ಈ ವೇಳೆ ಮನವಿ ಕೊಡಲು ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು. ಆದರೆ ಸಂಸದರು ಗಾಡಿ ನಿಲ್ಲಿಸದೆ ಹೋದರೆಂದು ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    2018ರ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನದ ವೇಳೆ ಕಳಸವನ್ನು ಹೊಸ ತಾಲೂಕು ಕೇಂದ್ರವಾಗಿ ಅಧಿಕೃತ ಘೋಷಣೆ ಮಾಡಿದ್ದರು. ಕಳಸವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ವರ್ಷಗಳು ಕಳೆದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಬಿಜೆಪಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿ, ಕಳಸ ಪಟ್ಟಣವನ್ನ ತಾಲೂಕು ಕ್ಷೇತ್ರವನ್ನಾಗಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮೂಡಿಗೆರೆ ತಾಲೂಕಿಗೆ ಕುದುರೆಮುಖ ತುಂಬಾ ದೂರದಲ್ಲಿದ್ದು, ಪ್ರತಿ ನಿತ್ಯ ಹಲವಾರು ಜನ ಕಚೇರಿ ಕೆಲಸಗಳಿಗಾಗಿ ಕಳಸದಿಂದ ಮೂಡಿಗೆರೆ ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗಬೇಕಾಗುತ್ತದೆ. ಒಂದು ವೇಳೆ ಆ ದಿನ ಕೆಲಸ ಆಗದಿದ್ದರೆ ಮರುದಿನ ಅಲ್ಲಿಯೇ ಉಳಿದು ಮರು ದಿನ ತಮ್ಮ ಕೆಲಸವನ್ನು ಮಾಡಿಕೊಳ್ಳ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಎಲ್ಲರೂ ಹೊಟೇಲ್, ಲಾಡ್ಜ್ ನಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ತಾಲೂಕು ಕಳಸವನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

  • ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ

    ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕ್ವಾರಂಟೈನ್‍ಗೆ ಒಳಪಡಿಸುವವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈ ಸೇರಿದಂತೆ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗಳು ಗ್ರೀನ್‍ಝೋನ್‍ನಲ್ಲಿದ್ದವು. ನಾವು ಯಾವಾಗ ಮುಂಬೈ ಮತ್ತು ದುಬೈನವರನ್ನು ಕರೆಸಿಕೊಂಡೆವೋ ಅಂದಿನಿಂದ ಕೊರೊನಾ ಪಾಸಿಟಿವ್ ಇರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎಂದರೆ ಕ್ವಾರಂಟೈನ್‍ಗೆ ಒಳಪಡಿಸುವುದು.

    ಮೂಡಿಗೆರೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರನ್ನು ಕ್ವಾರಂಟೈನ್‍ಗೆ ಮಾಡಬೇಕಾಗುತ್ತೆ. ವೈದ್ಯರಿಗೂ ಪಾಸಿಟಿವ್ ಬಂದ ಕಾರಣ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 800 ಜನರನ್ನು ನಾವು ಗುರುತಿಸಿದ್ದೀವಿ. ಇವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡೋದು ಕಷ್ಟದ ಕೆಲಸ. ಅಷ್ಟೊಂದು ವ್ಯವಸ್ಥೆಗಳು ಮೂಡಿಗೆರೆ ತಾಲೂಕಿನಲ್ಲಿ ಇಲ್ಲ. ಹೋಟೆಲ್, ಸಿಂಗಲ್ ರೂಂಗಳು ಕೂಡ ಇಲ್ಲ. ಹಾಗಾಗಿ, ಉಡುಪಿ, ಚಿಕ್ಕಮಗಳೂರು, ಕೊಡಗು, ಮಂಗಳೂರು ಹಾಗೂ ಶಿವಮೊಗ್ಗದ ಕೆಲ ಭಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಿಂದ ಅವರಿಗೆ ವಿನಾಯಿತಿ ಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಮಾಡಿದ್ದಾರೆ.

    ಕೈಗೆ ಸೀಲ್ ಹಾಕಿ, ಮನೆಗೆ ಚೀಟಿ ಅಂಟಿಸಿ ಮನೆಯಲ್ಲೇ ಅವರಿಗೆ ಕ್ವಾರಂಟೈನ್ ಮಾಡಬೇಕು. ಸಾಂಸ್ಥಿಕ ಕ್ವಾರಂಟೈನ್ ಮನೆಗಿಂತ ಡೇಂಜರ್ ಆಗಿದೆ. ಒಂದೊಂದು ರೂಮಿನಲ್ಲಿ 10-20 ಜನ ಇರುತ್ತಾರೆ. ಆದ್ದರಿಂದ ಒಬ್ಬರಿಗೆ ಸೋಂಕು ಬಂದರೂ ಉಳಿದವರಿಗೆ ಬರುವ ಸಾಧ್ಯತೆ ಇದೆ. ಮಲೆನಾಡಿನ ಒಂಟಿ ಮನೆ ಹಾಗೂ ಮಲೆನಾಡು ಭಾಗದಲ್ಲಿ ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಇಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ. ಆದ್ದರಿಂದ ವಿನಾಯಿತಿ ನೀಡಬೇಕೆಂದು ಸಂಸದರು ಮನವಿ ಮಾಡಿದ್ದಾರೆ.

    ಸಂಸದರ ಮನವಿಗೆ ಮುಖ್ಯ ಕಾರ್ಯದರ್ಶಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಿಎಂ ಬಳಿಯೂ ಮಾತನಾಡುವುದಾಗಿ ಸಂಸದರು ಹೇಳಿದ್ದಾರೆ. ಇದರಿಂದ ಹೆಚ್ಚಿನ ಜನಕ್ಕೆ ಸಹಾಯವಾಗುತ್ತದೆ. ಅವರು ಮನೆಯಲ್ಲೇ ಇರಬೇಕು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಯಾರೂ ಮನೆಯಿಂದ ಆಚೆ ಬರಬಾರದೆಂದು ಜನಸಾಮಾನ್ಯರಿಗೂ ಮನವಿ ಮಾಡಿಕೊಂಡಿದ್ದಾರೆ.

  • ‘ಕರ್ಕೊಂಡ್ ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ?’- ಹಠಕ್ಕೆ ಬಿದ್ದು ಸಿಎಂ ಜತೆ ಶೋಭಾ ಪ್ರಯಾಣ

    ‘ಕರ್ಕೊಂಡ್ ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ?’- ಹಠಕ್ಕೆ ಬಿದ್ದು ಸಿಎಂ ಜತೆ ಶೋಭಾ ಪ್ರಯಾಣ

    – ಶೋಭಾ ಹಠಕ್ಕೆ ರವಿಕುಮಾರ್‌ರನ್ನು ಬಿಟ್ಟು ಹೋದ ಸಿಎಂ

    ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಹಠಕ್ಕೆ ಬಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪ್ರಯಾಣ ಬೆಳೆಸಿದ ಪ್ರಸಂಗ ಇಂದು ಬೆಳಗಾವಿಯಲ್ಲಿ ನಡೆಯಿತು.

    ಬೆಳಗಾವಿಯ ಉದ್ಯಮ್ ಬಾಗ್‍ನಲ್ಲಿರುವ ಶಗುನ್ ಗಾರ್ಡನ್‍ನಲ್ಲಿ ನಡೆದ ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಮಗಳ ಮದುವೆಗೆ ಸಿಎಂ ಆಗಮಿಸಿದ್ದರು. ಜೊತೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಮದುವೆ ಆಗಮಿಸಿ ನವ ಜೋಡಿಯನ್ನು ಆಶೀರ್ವದಿಸಿದರು. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    ಕವಟಗಿಮಠ ಅವರ ಮದುವೆ ಸಮಾರಂಭ ಮುಗಿಸಿ ಸಿಎಂ ವಾಹನದಲ್ಲೇ ಶೋಭಾ ಕರಂದ್ಲಾಜೆ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆಗ ಶೋಭಾ ಕರಂದ್ಲಾಜೆ ಅವರು, ವಾಹನದಲ್ಲಿ ಕರೆದುಕೊಂಡು ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ ಎಂದು ಸಿಎಂ ಕಾಲೆಳೆದರು. ಈ ವೇಳೆ ಗೃಹ ಸಚಿವ ಬೊಮ್ಮಾಯಿ ಅವರು, ನನ್ನ ಬದಲು ವಿಮಾನದಲ್ಲಿ ನೀವು ಹೋಗಿ ಎಂದು ಶೋಭಾ ಅವರಿಗೆ ಹೇಳಿದರು. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ

    ಶೋಭಾ ಅವರ ಹಠದಿಂದಾಗಿ ಸಿಎಂ ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಬಿಟ್ಟು ಸಂಸದೆಗೆ ಆಹ್ವಾನ ನೀಡಿದರು. ಈ ಮೂಲಕ ವಿಶೇಷ ವಿಮಾನದಲ್ಲಿ ಸಿಎಂ ಜೊತೆ ಬಸವರಾಜ ಬೊಮ್ಮಾಯಿ ಹಾಗೂ ಶೋಭಾ ಕರಂದ್ಲಾಜೆ ಅವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

    ಸಿಎಂ ಬೆಂಗಳೂರಿನಿಂದ ಬರುವಾಗ ವಿಶೇಷ ವಿಮಾನದಲ್ಲಿ ರವಿಕುಮಾರ್ ಅವರನ್ನು ಕರೆದುಕೊಂಡು ಬಂದಿದ್ದರು. ಅಷ್ಟೇ ಅಲ್ಲದೆ ಹುಬ್ಬಳ್ಳಿಗೆ ಹೋಗುವಾಗಲೂ ಅವರನ್ನು ಕರೆದುಕೊಂಡು ಹೋಗಲು ನಿರ್ಧಸಿದ್ದರು. ಆದರೆ ಸಂಸದೆ ಕರಂದ್ಲಾಜೆ ಅವರ ಹಠದಿಂದಾಗಿ ಅವರನ್ನು ಸಿಎಂ ಕೈಬಿಡಬೇಕಾಯಿತು.

  • ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆ ಕೆಲಸ ಮಾಡುತ್ತಿರುವುದು ಸತ್ಯ: ಶೋಭಾ ಕರಂದ್ಲಾಜೆ

    ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆ ಕೆಲಸ ಮಾಡುತ್ತಿರುವುದು ಸತ್ಯ: ಶೋಭಾ ಕರಂದ್ಲಾಜೆ

    ಬೆಳಗಾವಿ: ಕರಾವಳಿಯ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಗಳು ಕೆಲಸ ಮಾಡುತ್ತಿರುವುದು ಸತ್ಯ. ಕೇರಳ ಹಾಗೂ ಬೇರೆ ಬೇರೆ ಭಾಗಗಳಿಂದ ಬಂದವರು ಸಮಾಜ ದ್ರೋಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಾಂಬ್ ಪತ್ತೆಯಾದ ಪ್ರಕರಣ ಸಂಪೂರ್ಣ ತನಿಖೆಯಾದ ಬಳಿಕ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಬಗ್ಗೆ ಯಾರು? ಏಕೆ? ಇಟ್ಟಿದ್ದಾರೆ. ಹೇಗೆ ಅಲ್ಲಿಗೆ ಬಂತು ಎಂಬ ಕುರಿತಾಗಿ ತನಿಖೆ ನಡೆಯಬೇಕಿದೆ. ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದರು.

    ಕರಾವಳಿಯ ಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರೀಯವಾಗಿ ತೊಡಗಿಕೊಂಡಿವೆ. ಅಲ್ಲದೇ ಸ್ಥಳೀಯ ಮಂಗಳೂರಿಗರನ್ನು ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಯಾವ ಸಂಘಟನೆಯ ಜೊತೆ ಯಾರು? ಯಾವುದರಲ್ಲಿ ಶಾಮಿಲಾಗಿದ್ದಾರೆ. ಇಷ್ಟು ದಿನ ಕಾಶ್ಮೀರ, ಸಿರಿಯಾ, ಪಿಓಕೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವಂಥ ಸಂಘಟನೆಯೊಂದಿಗೆ ಶಾಮೀಲಾಗಿದ್ದಾರೆ ಎನ್ನುವುದನ್ನು ತನಿಖೆ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿಕೊಂಡು ತನಿಖೆಯನ್ನು ಚುರುಕುಗೊಳಿಸುತ್ತದೆ. ಭಯೋತ್ಪಾದಕ ಚುಟುವಟಿಕೆಯಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಕೊಡಿಸಿ ತಪ್ಪಿತಸ್ಥರ ಮುಖವಾಡ ಕಳಚುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

    ಪಿಎಫ್‍ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರ ಮಾಹಿತಿಯನ್ನು ಕಲೆ ಹಾಕುತ್ತಿದೆ. ಎಸ್‍ಡಿಪಿಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧ ಮಾಡಬೇಕು. ಕಾರಣ ಈ ಸಂಘಟನೆಯ ಹಲವರು ಸಮಾಜ ದ್ರೋಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಕೊಲೆ ಪ್ರಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ತನ್ವಿರ್ ಸೇಠ್ ಅವರಿಗೂ ಕೂಡ ಚೂರಿ ಹಾಕಿ ಹತ್ಯೆ ಮಾಡುವ ಸಂಚು ರೂಪಿಸಿದ್ದ ಇಂಥ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂದರು.

  • ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು, ಅದಕ್ಕೆ ಕಾಮನ್ ಸೆನ್ಸ್ ಅಂತಾರೆ: ಶೋಭಾ ಕರಂದ್ಲಾಜೆ

    ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು, ಅದಕ್ಕೆ ಕಾಮನ್ ಸೆನ್ಸ್ ಅಂತಾರೆ: ಶೋಭಾ ಕರಂದ್ಲಾಜೆ

    ಬಾಗಲಕೋಟೆ: ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಅದಕ್ಕೆ ಕಾಮನ್ ಸೆನ್ಸ್ ಅಂತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,  ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ  ಕೆಲವು ನಾಯಕರು ಭಾರೀ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಅವರಿಗೆ ಜನರು ಸಂಕಷ್ಟದಲ್ಲಿ ಇರುವಾಗ ಭೋಜನ ಕೂಟದಲ್ಲಿ ಭಾಗವಹಿಸಲು ಹೇಗೆ ಮನಸ್ಸು ಬಂತೋ ನನಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

    ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಸಂದರ್ಭದಲ್ಲಿ ನಾವೆಲ್ಲ ಪಕ್ಷ ರಾಜಕಾರಣದಿಂದ ಮೇಲೆದ್ದು ನಿಲ್ಲಬೇಕು. ಸರ್ಕಾರ ಅವರದ್ದಿದೆ ಅವರೇ ಮಾಡಿಕೊಳ್ಳಲಿ ಎಂದು ಹೇಳುವುದು ಮಾನವೀಯತೆ ಅಲ್ಲ. ನಿಮ್ಮ ಸಲಹೆ, ಅನುಭವದ ಅವಶ್ಯಕತೆ ಇದೆ. ನಿಮ್ಮಿಂದ ಸಿಗುವ ಸಲಹೆ, ಸಹಕಾರವನ್ನು ನಾವು ಸ್ವೀಕರಿಸುತ್ತೇವೆ ಎಂದು ವಿಪಕ್ಷ ನಾಯಕರಿಗೆ ಮನವಿ ಮಾಡಿಕೊಂಡರು.

    ರಾಜ್ಯದ ನದಿಗಳ ಪ್ರವಾಹಕ್ಕೆ 4 ಲಕ್ಷಕ್ಕಿಂತ ಹೆಚ್ಚಿನ ಜನರು ನಿರಾಶ್ರಿತರಾಗಿದ್ದಾರೆ. ಬಿಜೆಪಿ ನಾಯಕರು ವೈಮಾಣಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಎಷ್ಟು ನಷ್ಟವಾಗಿದೆ ಎಂದು ನದಿ ಇಳಿದ ಮೇಲೆ ಹೇಳಬಹುದು. ಹಾಗಾಗಿ ಸಮೀಕ್ಷೆಯನ್ನು ಸ್ವಲ್ಪ ದಿನ ತಡ ಮಾಡಿ ಮಾಡಬೇಕು. ಸದ್ಯಕ್ಕೆ ಸುಮಾರು 40 ರಿಂದ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

    ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಅವರು, ಈ ಕುರಿತು ಚರ್ಚೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಟೈಂ ಫಿಕ್ಸ್ ಮಾಡಿದ್ದರು. ಆದರೆ ಮಾಜಿ ಸಚಿವೆ ಸುಷ್ಮಾ ಸ್ವಾರಾಜ್ ನಿಧನರಾಗಿದ್ದರಿಂದ ಸಂಪುಟ ರಚನೆ ತಡವಾಗಿದೆ. ಆದರೂ ಸಹ ಸಿಎಂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಚರ್ಚೆ ಮಾಡಿ ಸ್ಥಾನ ಹಂಚಿಕೆ ಮಾಡುತ್ತಾರೆ ಎಂದರು.

  • ಭಂಡ ಧೈರ್ಯದಿಂದ ಸಿಎಂ ಬಹುಮತ ಸಾಬೀತು ಮಾಡ್ತೀನಿ ಎಂದಿದ್ದಾರೆ: ಕರಂದ್ಲಾಜೆ

    ಭಂಡ ಧೈರ್ಯದಿಂದ ಸಿಎಂ ಬಹುಮತ ಸಾಬೀತು ಮಾಡ್ತೀನಿ ಎಂದಿದ್ದಾರೆ: ಕರಂದ್ಲಾಜೆ

    ಬೆಂಗಳೂರು: ಭಂಡ ಧೈರ್ಯದಿಂದ ಸಿಎಂ ಬಹುಮತ ಸಾಬೀತು ಮಾಡುತ್ತೇನೆ ಅಂತ ಹೇಳಿದ್ದಾರೆ. ಆದರೆ ಅವರಿಗೆ ಬಹುಮತವೇ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

    ರಮಡ ರೆಸಾರ್ಟಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ಬಳಿಕ ಮಾತನಾಡಿದ ಮಾತನಾಡಿದ ಅವರು, ನಾಳೆಯ ಅಧಿವೇಶನಕ್ಕೆ ನಮ್ಮ ಶಾಸಕರು ತಯಾರಿ ನಡೆಸುತ್ತಿದ್ದಾರೆ. ಸಭಾಧ್ಯಕ್ಷರ ಅಜೆಂಡಾಕ್ಕೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ಸಭೆಯಲ್ಲಿ ನಿರ್ಧಾರವಾಗಿದೆ. ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡಿ ಎಂದು ಸಿಎಂ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಧೈರ್ಯದಿಂದಲೇ ಬಹುಮತ ಸಾಬೀತು ಮಾಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ನಾಳೆಯೇ ಬಹುಮತ ಸಾಬೀತು ಮಾಡುತ್ತೇನೆ ಅಂತ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸಿಎಂ ನಿರ್ಧಾರ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

    ಸಿಎಂ ರಾಜೀನಾಮೆ ನೀಡಲಿ ಅಥವಾ ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡಲಿ. ರಾಜ್ಯದಲ್ಲಿ ಸಮಸ್ಯೆಗಳಿವೆ, ಸ್ಥಿರ ಸರ್ಕಾರ ಬರಲು ಅವರು ಅವಕಾಶ ಮಾಡಿಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕುಟುಕಿದರು.

    ಶಾಸಕರ ರಾಜೀನಾಮೆ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಸುಪ್ರೀಂಕೋರ್ಟ್ ನಲ್ಲಿ ಏನಾಗಬಹುದು ಎಂದು ತಿಳಿದುಕೊಳ್ಳಲು ನಮ್ಮ ಕೆಲ ಮುಖಂಡರು ದೆಹಲಿಗೆ ಹೋಗಿದ್ದರು. ಆರ್.ಅಶೋಕ್ ಅವರು ಬೇರೆ ಕೆಲಸದಲ್ಲಿದಾರೆ. ಹೀಗಾಗಿ ಇಂದಿನ ಸಭೆಗೆ ಹಾಜರಾಗಿಲ್ಲ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಕೂಡ ವೈಯಕ್ತಿಕ ಕೆಲಸದಲ್ಲಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಸಭೆಗೆ ಆಗಮಿಸಿಲ್ಲ ಎಂದು ಹೇಳಿದರು.

  • ನಮ್ಮ ನಾಯಕರು ಬಳೆ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ: ಕರಂದ್ಲಾಜೆಗೆ ಉಮಾಶ್ರೀ ಪ್ರಶ್ನೆ

    ನಮ್ಮ ನಾಯಕರು ಬಳೆ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ: ಕರಂದ್ಲಾಜೆಗೆ ಉಮಾಶ್ರೀ ಪ್ರಶ್ನೆ

    – ಟಗರಿನ ವಿಷಯಕ್ಕೆ ಬಂದ್ರೆ ಗುದ್ದಲಿದೆ

    ಹುಬ್ಬಳ್ಳಿ: ನಮ್ಮ ನಾಯಕರು ಬಳೆ ಹಾಕಿಕೊಂಡರೆ, ನಿಮ್ಮ ನಾಯಕರು ಸೀರೆ ಉಡುತ್ತಾರಾ ಎಂದು ಮಾಜಿ ಸಚಿವೆ ಉಮಾಶ್ರೀ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದ್ದಾರೆ.

    ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವೆ, ಶೋಭಾ ಕರಂದ್ಲಾಜೆ ಅವರನ್ನು ಏನು ಮಾಡಬೇಕು? ಅಂತವರಿಗೆ ಮತ ಹಾಕಬೇಕಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದ ಅವರು, ಅವಳಿಗೆ ನಾಚಿಕೆ ಆಗಬೇಕು. ಒಂದು ಹೆಣ್ಣು ಮಗಳು ಹೇಗೆ ಇರಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

    ನಮ್ಮ ಸಾಧನೆ, ಯೋಜನೆಗಳನ್ನು ನಿಮ್ಮ ಮುಂದಿಟ್ಟು ಮತ ಕೇಳುತ್ತೇವೆ. ಇದು ಸರಿಯಾದ ದಾರಿ. ಆದರೆ ಧರ್ಮದಲ್ಲಿ ಬೆಂಕಿ ಹಚ್ಚಿ ನಾವು ಮತ ಕೇಳಿಲ್ಲ. ಸರ್ವಾಧಿಕಾರಿ ಧೋರಣೆ ಮೂಲಕ ಮತ ಕೇಳಿ ಪಡೆಯುವುದು ಬಿಜೆಪಿಯವರ ಕೆಲಸ. ಸೈನಿಕರ ಸಾವಿನ ಮೇಲೆ ಮತ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ, ಮುಂದೆ ಕೂಡ ಮಾಡುವುದಿಲ್ಲ. ಅವರ ಬಾಯಿಂದ ಹೊಲಸು ಪದಗಳೇ ಬರುತ್ತವೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರ ಬಾಯಲ್ಲಿ ಹೂಗಳೇ ಉದುರುತ್ತವೆ. ಆನೆ ಹೋಗುತ್ತಾ ಇರುತ್ತೆ, ಶ್ವಾನ ಬೋಗಳುತ್ತಾ ಇರುತ್ತೆ ಎಂದು ಉಮಾಶ್ರೀ ಅವರು ಬಿಜೆಪಿಯವರನ್ನು ನಾಯಿಗೆ ಹೋಲಿಸಿದರು.

    ಇದಕ್ಕೂ ಮುನ್ನ ಕುಂದಗೋಳ ತಾಲೂಕಿನ ಹೀರೆಗುಂಜಳ ಗ್ರಾಮದಲ್ಲಿ ಮಾತನಾಡಿದ ಉಮಾಶ್ರೀ ಅವರು, ಟಗರಿನ ವಿಷಯಕ್ಕೆ ಬಂದರೆ ಟಗರು ಗುದ್ದಲಿದೆ. ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಕೈಗೆ ಬಂಗಾರದ ಬಳೆ ತೊಡಿಸಬೇಕು. ಕಬ್ಬಿಣದ ಬಳೆ ಹಾಕಿಕೊಂಡು ಹೋಗುವುದು ಜೈಲಿಗೆ ಎಂದು ಹೇಳಿದರು.

    ಶೋಭಾ ಕರಂದ್ಲಾಜೆ ಹೇಳಿದ್ದೇನು?:
    ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಹೇಳಿದ್ದರು.

    ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನು ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನು ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಕೈಲಾಗದವರು ಮೈ ಪರಚಿಕೊಂಡರು ಎನ್ನುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಅವರ ಪಕ್ಷದ ಸಾಧನೆ ಬಗ್ಗೆ ಹೇಳಲಿ, ಅದನ್ನು ಬಿಟ್ಟು ಬಾಯಿ ಬಿಟ್ಟರೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಾರೆ ಎಂದು ಹರಿಹಾಯ್ದಿದ್ದರು.

  • ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    – ಸಚಿವರ ಕಚ್ಚಾಟದಿಂದಲೇ ಸಿಎಂ ರೆಸಾರ್ಟಿಗೆ ಹೋಗಿದ್ದಾರೆ

    ಯಾದಗಿರಿ: ಸಚಿವ ಜಮೀರ್ ಅಹ್ಮದ್ ಅವರ ತಲೆಕೆಟ್ಟಿದೆ. ಹೀಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಚಿಂಚೋಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ತಲೆ ಕಡಿದುಕೊಳ್ಳುತ್ತೇನೆ ಅಂತ ಈ ಹಿಂದೆ ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೇ ಸಚಿವರಾಗಿದ್ದಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಮನೆ ಕಾಯುತ್ತೇನೆ ಎನ್ನುತ್ತಿದ್ದಾರೆ. ಅವರ ತಲೆ ಆಗಾಗ ಕೆಡುತ್ತಿರುತ್ತದೆ. ಸಚಿವರ ಮಾತಿಗೆ ಬೆಲೆ ಇಲ್ಲ. ಜಮೀರ್ ಅಹ್ಮದ್ ಅವರು ಒಮ್ಮೆ ತಲೆ ಬೋಳಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ತಲೆ ಕಡಿದು ಟೇಬಲ್ ಮೇಲೆ ಇಡುತ್ತೇನೆ ಅಂತ ಹೇಳಿದ್ದರು ಎಂದು ತಿರುಗೇಟು ನೀಡಿದರು.

    ಮೈತ್ರಿಯ ಆಂತರಿಕ ಜಗಳ, ಕಚ್ಚಾಟದಿಂದಲೇ ಸಿಎಂ ಕುಮಾರಸ್ವಾಮಿ ಅವರು ರೆಸಾರ್ಟಿಗೆ ಹೋಗಿದ್ದಾರೆ. ಅವರ ಪಾಪಕ್ಕೆ ಜನರು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

    ಕಳೆದ ಒಂದು ವರ್ಷದಿಂದ ಯಾವ ಸಚಿವರು ಇತ್ತ ಕಡೆ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಐತಿಹಾಸಿಕ ವಿಧಾನಸೌಧ ಬಿಟ್ಟು ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ವೇದಿಕೆಯಲ್ಲಿ ಯಾರು, ಏನು ಮಾತನಾಡುತ್ತಾರೆಂದು ಸಿಎಂಗೆ ತಿಳಿಸಲು ಪೊಲೀಸ್ ಮತ್ತು ಗುಪ್ತಚರ ಇಲಾಖೆಯವರು ಇಲ್ಲಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ರೆಸಾರ್ಟಿನಲ್ಲಿ ಮಲಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದರು.

    ಹಿಂದುಳಿದ ವರ್ಗಗಳ ನಾಯಕ ನಾನೇ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ತಮ್ಮ ಕುರುಬ ಸಮಾಜಕ್ಕೆ ಏನು ಮಾಡಿದ್ದಾರೆ? ಅನ್ನ ಭಾಗ್ಯ ಯೋಜನೆಗಾಗಿ ಕೇಂದ್ರ ಬಿಜೆಪಿ ಸರ್ಕಾರ ಸಹಾಯ ಮಾಡುತ್ತಿದೆ. ಇದನ್ನು ಯಾವ ಕಾಂಗ್ರೆಸ್ ನಾಯಕರೂ ಹೇಳುವುದಿಲ್ಲ. ಕಾಂಗ್ರೆಸ್ ಚೆಲಾಗಳು, ಪುಡಾರಿಗಳು ಅನ್ನಭಾಗ್ಯ ಅಕ್ಕಿಗಳನ್ನು ಪಕ್ಕದ ರಾಜ್ಯದ ಅಮ್ಮನ ಇಡ್ಲಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

  • ರಾಜ್ಯ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆ: ಶೋಭಾ ಕರಂದ್ಲಾಜೆ

    ರಾಜ್ಯ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆ: ಶೋಭಾ ಕರಂದ್ಲಾಜೆ

    – ಕರಾವಳಿ ಜನರ ತಿಳುವಳಿಕೆ ಬಗ್ಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಅಗತ್ಯವಿಲ್ಲ

    ಉಡುಪಿ: ಕರಾವಳಿ ಜನರ ತಿಳುವಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ಇಲ್ಲಿನ ಜನ ದೇಶಕ್ಕಾಗಿ ಕೆಲಸ ಮಾಡುವವರಿಗೆ ಮತ ಹಾಕುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಉಡುಪಿ- ಚಿಕ್ಕಮಗಳೂರು ಜನ ದೇಶ ಭಕ್ತರು. ದೇಶಕ್ಕಾಗಿ ಕೆಲಸ ಮಾಡುವವರಿಗೆ ವೋಟ್ ಹಾಕುತ್ತಾರೆ. ಕುಟುಂಬ ರಾಜಕಾರಣ ಮಾಡುವವರಿಗೆ ಇಲ್ಲಿನ ಜನ ಓಟು ಹಾಕಲ್ಲ. ವಂಶಪಾರಂಪರ್ಯ ರಾಜಕಾರಣ ಬೆಳೆಸುವವರಿಗೆ ದೇಶಭಕ್ತಿ ಭಾಷೆ ಅರ್ಥವಾಗುವುದಿಲ್ಲ. ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಾಗಿಲ್ಲ. ಮೋದಿ ಪ್ರಪಂಚ ಕಂಡ ಅದ್ಭುತ ನಾಯಕ. ಮೋದಿ ಆನೆಯ ರೀತಿಯಲ್ಲಿ ಚಲಿಸುವ ವ್ಯಕ್ತಿ. ಯಾರು ಏನೇ ಬಡ್ಕೊಂಡ್ರೂ ಮೋದಿ ಮೇಲೆ ಪರಿಣಾಮ ಬೀರಲ್ಲ ಎಂದರು.

    ಮೋದಿಯ ಐದು ವರ್ಷದ ಸಾಧನೆ ಜನ ನೋಡಿದ್ದಾರೆ. ಅಭಿವೃದ್ಧಿ, ದೇಶ ರಕ್ಷಣೆ ನೋಡಿ, ಹೊಸ ಯೋಜನೆಗಳನ್ನು ಕಂಡು ಕರಾವಳಿ ಮಲೆನಾಡಿನ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಹಾಕುವ ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

    ನಕಲಿ ಸರ್ಕಾರ:
    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಬಿಡುಗಡೆ ಮಾಡಿರುವ ಬೆದರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಬಂದಾಗ ಕಾಂಗ್ರೆಸ್ ಅವರಿಗೆ ಸಿಡಿ ನೆನಪಾಗುತ್ತೆ. ಅಭಿವೃದ್ಧಿಯಲ್ಲಿ ಗೆಲ್ಲಲಾಗದವರು ಸಿಡಿ ರಾಜಕಾರಣ ಮಾಡುತ್ತಾರೆ. ಸಿಡಿ ಮತ್ತು ಡೈರಿ ಇವೆಲ್ಲಾ ಸುಳ್ಳು, ಎಲ್ಲವೂ ನಕಲಿ. ರಾಜ್ಯದಲ್ಲಿರುವ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆಯಾಗಬಹುದು ಅಷ್ಟೇ. ಚುನಾವಣೆ ಎದುರಿಸಲಾಗದೇ ಪುಕ್ಕಲು ರಾಜಕಾರಣಿಗಳು ತಾವೇ ಡೈರಿ, ಸಿಡಿ ಸೃಷ್ಟಿ ಮಾಡಿ ತೇಜೋವಧೆ ಮಾಡುತ್ತಾರೆ. ಅಭಿವೃದ್ಧಿ ತೋರಿಸಿ ಮತ ಕೇಳುವ ನೈತಿಕತೆ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

     

    ನಾಮಪತ್ರ ಸಲ್ಲಿಕೆ:
    ಇದಕ್ಕೂ ಮುನ್ನ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಗೆ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಕರಂದ್ಲಾಜೆ ಜ್ಯೋತಿಷ್ಯರ ಸಲಹೆ ಪಡೆದುಕೊಂಡಿದ್ದರು. ಉಡುಪಿ- ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಬಿಜೆಪಿ ಜಿಲ್ಲಾಧ್ಯಕ್ಷರು, ಬಿಜೆಪಿ ನಾಯಕಿ ಭಾರತಿ ಶೆಟ್ಟಿ ಜೊತೆ ತೆರಳಿ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಶುಭ ಶುಕ್ರವಾರ ಅಂತ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಶುಕ್ರವಾರ ಮಹಾಕಾಳಿ ದುರ್ಗೆಯ ದಿನ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಸಿದ್ದು, ಸಾರ್ವಜನಿಕವಾಗಿ 26ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಾರ್ಚ್ 26 ಕೂಡಾ ಮಂಗಳವಾರ. ಮಂಗಳವಾರ ಕೂಡ ದೇವಿಯ ಪವಿತ್ರ ದಿನ ಎಂದರು.

  • ಬಿಎಸ್‍ವೈಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ: ಶೋಭಾ ಕರಂದ್ಲಾಜೆ

    ಬಿಎಸ್‍ವೈಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ: ಶೋಭಾ ಕರಂದ್ಲಾಜೆ

    – ನಕಲಿ ಕಾಂಗ್ರೆಸ್‍ನಿಂದ ನಕಲಿ ಡೈರಿ ಆರೋಪ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ. ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರ ಆರೋಪದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದೆ, ಡೈರಿಯನ್ನು ಕಾಂಗ್ರೆಸ್‍ನವರೇ ಬರೆದಿದ್ದಾರೆ. ಅವರೇ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಿ.ಎಸ್.ಯಡಿಯೂರಪ್ಪ ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ದೂರಿದರು. ಇದನ್ನು ಓದಿ : 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮುಗಿದು 6-7 ವರ್ಷಗಳೇ ಕಳೆದಿವೆ. ಆದರೆ ಈಗ ಡೈರಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇಷ್ಟು ದಿನದ ಇಲ್ಲದ ಆರೋಪ ಈಗ ಮಾಡಿದ್ದು ಯಾಕೆ? ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

    ದಿವಂಗತ ಕೇಂದ್ರ ಸಚಿವ ಅನಂತ್‍ಕುಮಾರ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯೆ ಮಾತುಕತೆಯಾಗಿದ್ದು ಸುಳ್ಳು. ಅವರ ಮಾತುಕತೆಗೂ ಈ ಡೈರಿಗೂ ಯಾವುದೇ ಸಂಬಂಧವಿಲ್ಲ. ಅನವಶ್ಯಕವಾಗಿ ಆರೋಪ ಮಾಡುವ ಮೂಲಕ ದೇಶದ ಹಾಗೂ ರಾಜ್ಯದ ಜನತೆಯ ದಾರಿ ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಸಾಧನೆ, ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಪ್ರಚಾರಕ್ಕೆ ಹೋಗುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ. ಹೀಗಾಗಿ ಇಂತಹ ಆರೋಪವನ್ನು ಮಾಡುತ್ತಿದ್ದಾರೆ ಎಂದರು.

    ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿ ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ನಾವು ಆರೋಪ ಮಾಡಿದ್ದೇವು. ಆದರೆ ಈಗ ಕಾಂಗ್ರೆಸ್ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಡೈರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದು ಸುಳ್ಳು ಆರೋಪ ಎಂದು ಹೇಳಿದರು.